ನೆನಪು, ಹಳ್ಳಿಯ ಸೊಗಡಿನ
‘ಡಾಕ್ಟರ್ ಹೆಂಡತಿ’



ಗ್ರಾಮೀಣ ಭಾರತದಲ್ಲಿ ಕೆಲಸ ಮಾಡುವ ವೈದ್ಯರು, ಅವರ ಪತ್ನಿ ಮತ್ತು ಕುಟುಂಬದವರು ಕಂಡುಂಡ ಅನುಭವದ ಚಿತ್ರಣವೇ ಡಾಕ್ಟರ್ ಹೆಂಡತಿ. ಸರೋಜಿನಿ ಪಡಸಲಗಿ ಅವರು ಈ ಕೃತಿ ರಚಿಸಿದ್ದ್ದಾರೆ. 

ಈ ಕೃತಿಯಲ್ಲಿ ಸರೋಜಿನಿ ಅವರು ಒಬ್ಬ ವೈದ್ಯರ ಪತ್ನಿಯಾಗಿ ಪತಿ ವರ್ಗಾವಣೆಗೊಂಡಲ್ಲೆಲ್ಲ ಅವರ ಹಿಂದೆ ಕುಟುಂಬ ಸಮೇತ ಹೋಗಿ ಅಲ್ಲಿ ಮನೆ ಮಾಡಿ, ಅನುಭವಿಸಿದ ಕಷ್ಟ- ನಷ್ಟ, ಪಡೆದ ಪ್ರೀತಿ-ವಾತ್ಸಲ್ಯ, ಅಕ್ಕಪಕ್ಕದವರೊಂದಿಗಿನ ಕಳೆದ ಕಾಲ, ಆರೋಗ್ಯ ಕೇಂದ್ರಗಳ ನರ್ಸ್‌ಗಳ ಒಡನಾಟ, ವೈದ್ಯರ  ಜೊತೆ ಬರುವ ಅಧಿಕಾರಿಗಳ, ಸಿಬ್ಬಂದಿಗಳ ನೆನಪನ್ನೆಲ್ಲ ಬಿಚ್ಚಿಟ್ಟಿದ್ದ್ದಾರೆ. ಇದನ್ನು ಓದಿದಾಗ ಗ್ರಾಮೀಣ ಭಾರತದ ಕಥನ  ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಹಳ್ಳಿಯ ಸೊಗಡಿನಲ್ಲೇ ಬರಹಗಳಿವೆ.  ಇದು ಓದಿಸಿಕೊಂಡು ಹೋಗುವಲ್ಲಿ ಸಫಲವಾಗಿದೆ.  ಜೀವನ ಪ್ರೀತಿ ಮತ್ತು ಜೀವನ ದೃಷ್ಟಿ ಇದರಲ್ಲಿ ಮಿಳಿತವಾಗಿದೆ.  

ಹಳ್ಳಿಯ ಮುಗ್ಧರ  ಕಣ್ಣಲ್ಲಿ ಕಾಣುವ ಪ್ರೀತಿ, ಅನುಭವಗಳ ನಡುವೆ ಏನನ್ನೂ ಕೊಡಲಾರದವರು ಹರಸಿ, ಹಾರೈಸುವ ಚಿತ್ರಣ ಇಲ್ಲಿದೆ. 

ಈಗಿನ ಹಾವೇರಿ ಜಿಲ್ಲೆಯ ಬಂಕಾಪುರದಿಂದ, ತಿಳುವಳ್ಳಿ, ಗರಗ ಮೊದಲಾದ ಗ್ರಾಮಗಳಿಗೆ ವೈದ್ಯರು ವರ್ಗಾವಣೆಗೊಳ್ಳುತ್ತ್ತಾರೆ. ಈ ಗ್ರಾಮಗಳಲ್ಲಿನ ವೈಶಿಷ್ಟ್ಯವನ್ನು ಸರೋಜಿನಿಯವರು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಬಂಕಾಪುರ ಸಂಪೂರ್ಣ ಬಯಲುಸೀಮೆಯಲ್ಲಿದೆ. ತಿಳವಳ್ಳಿ ಮಲೆನಾಡಿನ ಸೆರಗಿನಲ್ಲಿದೆ. ಅಲ್ಲಿನ ಮತ್ತು ಇಲ್ಲಿನ ಚಿತ್ರಣವೇ ಬೇರೆ. ಜನರೇ ಬೇರೆ. ಮೂವರು ಮಕ್ಕಳೊಂದಿಗೆ ಈ ಭಾಗದಲ್ಲಿ ಕಳೆದ ಕಾಲದ ಬಗ್ಗೆ ಅನುsವದ ಭಂಡಾರವನ್ನೇ ತೆರೆದಿಟ್ಟಿದ್ದಾರೆ. 

ಅವರೇ ಹೇಳಿಕೊಂಡಂತೆ ಜೀವನ ಒಂದು ಅನುಭವದ ರಂಗಸಾಲೆ. ವೈದ್ಯನ ಪತ್ನಿಯಾಗಿ ಜೀವನದುದ್ದಕ್ಕ್ಕೂ ಕಂಡುಂಡ ಅನುಭವ ವಿಭಿನ್ನ, ವಿಶಿಷ್ಟ. ಹೆಜ್ಜೆಹೆಜ್ಜೆಗೂ  ಒಂದು ಕಲಿಕೆ, ತಿಳಿವಳಿಕೆ, ವಿಚಿತ್ರ ಅನುಭೂತಿ. ಒಟ್ಟಿನಲ್ಲಿ ಎಲ್ಲವೂ ಸೇರಿ ಆಗಿದ್ದು ರಾಗದ ಸಂಗೀತ. 

ಕೃತಿಯಲ್ಲಿ ಒಟ್ಟು ೨೨ ಅಧ್ಯಾಯಗಳಿವೆ.  ಇದರಲ್ಲಿ ಕಾಡು, ಮಳೆಗಾಲ, ಹಾವು, ಮಂಗ,  ದವಾಖಾನೆ,  ರೋಗಿಗಳ ಜೀವನ, ಬಸ್ ಚಾರ್ಜಿಗೂ ದುಡ್ಡಿಲ್ಲದ ರೋಗಿಗಳು, ಬಸ್ ಚಾರ್ಜ್ ಕೊಟ್ಟಾಗ ಅವರ ಕಣ್ಣಲ್ಲಿ ಸುಳಿವ ಕೃತಜ್ಞತಾ ಭಾವಗಳೆಲ್ಲ ಮನದಲ್ಲಿ ಉಳಿಯುವಂತೆ ಬರೆದಿದ್ದಾರೆ. ‘ಅತಿಥಿ ದೇವೋ ಭವ’ ಎಂಬ ಅಧ್ಯಾಯದಲ್ಲಿ ಲೇಖಕಿ  “ನಾನು ಎದುರಿಸಿದ ಪ್ರತಿ ಘಟನೆಯೂ ಕಹಿಯೋ, ಸಿಹಿಯೋ, ನನ್ನ ಬಾಳ ಹಾದಿಯಲ್ಲಿ ಮಾತ್ರ ಅಚ್ಚಳಿಯದೆ  ಛಾಪು ಮೂಡಿಸಿ ಮುಂದೆ ನೂರು ಬಾಗಿಲು ತೆರೆದು ದಾರಿ ತೋರುವ ಹರಿಕಾರ ಆಯ್ತು” ಎಂದು ಹೇಳಿಕೊಂಡಿದ್ದಾರೆ. ತಿಳವಳ್ಳಿ ಮನೆಯ ಅನಾಹ್ವಾನಿತ ಅತಿಥಿಗಳು, ಮಳೆಯೂರಿನ ಸಮಾಚಾರ, ಮಲೆನಾಡಿನ ಸೆರಗಿಗೆ,  ಇದು ವೈದ್ಯಾಧಿಕಾರಿಗಳ ಕ್ವಾರ್ಟ್ರಸ್ ಮೊದಲಾದವು ಮನಸೆಳೆಯುವಂತಹವು. 

ಮಲೆನಾಡಿನ ಸೆರಗಿಗೆ ಅಧ್ಯಾಯದಲ್ಲಿ  “ಇಲ್ಯಾವ ಜಾತಿ, ಮತ, ಅಂತಸ್ತು ಲೆಕ್ಕಕ್ಕೇ ಇಲ್ಲ. ನಾ ಅದೊಂದು ದೊಡ್ಡ ವರ ಅನಕೋತಿನಿ. ಇಲ್ಲಿನ ಮಕ್ಕಳೆಲ್ಲ ಮುಗ್ಧರು” ಎಂಬ ಸಾಲು ಬರುತ್ತದೆ.  ಎಲ್ಲ ಜಾತಿ ಬಾಂಧವ್ಯದ ವೈಶಿಷ್ಟ್ಯತೆ ಅದರಲ್ಲೂ ಗ್ರಾಮದಲ್ಲಿ ಹೇಗಿರುತ್ತದೆ ಎನ್ನುವುದನ್ನು ಮನೋಜ್ಞವಾಗಿ ಹಾಗೂ ಗಫಾರ್ ಮತ್ತು ಮುಕ್ತುಂ ನೆರವಾಗುತ್ತಿದ್ದ ಬಗೆಯನ್ನು ವಿವರಿಸಿದ್ದಾರೆ.

ಒಟ್ಟಿನಲ್ಲಿ, ಗಂಭೀರ ಶೈಲಿಯ  ಬರವಣಿಗೆಯ ಮೋಹಕ್ಕೆ ಬಲಿಯಾಗದೆ, ಸಿದ್ಧ ಮಾರ್ಗ ಬದಿಗಿರಿಸಿ, ಸ್ವತಂತ್ರ ಶೈಲಿಯಲ್ಲಿ ಬರೆದಿದ್ದಾರೆ. ಭಾಷೆಗಿಂತ ಅನುಭವಕ್ಕೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. 

ಈ ಕೃತಿ ಇಷ್ಟವಾಗಲು ಕಾರಣ ಇಲ್ಲಿನ ಸರಳ ನಿರೂಪಣೆ ಮತ್ತು  ಕಣ್ಣಿಗೆ ಕಟ್ಟುವಂತೆ ಅವುಗಳನ್ನು ವಿವರಿಸಿರುವುದು. ಇದು ಬಹುತೇಕ ಸರಕಾರಿ ನೌಕರರ, ಅಧಿಕಾರಿಗಳ ಕಥೆಯೂ ಹೌದು. ಆದರೆ ಗ್ರಾಮೀಣರಿಗೆ ಇದು ಒಂಥರಾ ಸವಿನೆನಪಿನ ಕಟ್ಟನ್ನು ಬಿಚ್ಚಿಕೊಡುತ್ತದೆ. ವಿಶಿಷ್ಟ ಕಥಾನಕವಾಗಿ ಮನಸೆಳೆಯುತ್ತದೆ.

,,,,,,,,,,,,,,,,,,,,,,,,,,,,,,


Comments

Popular posts from this blog