ದುಕಬೇಕೆಂಬ ತುಡಿತದ 

‘ವಿಕ್ಷೇಪ

 


 

ವಿಕ್ಷೇಪ ಇದು  ವಿಭಿನ್ನ ಕಥಾವಸ್ತುವಳ್ಳ  ನವ್ಯ ಸಾಹಿತಿ ಶಾಂತಿನಾಥ ದೇಸಾಯಿ ಅವರ ಕಾದಂಬರಿ. ಆಧುನಿಕ ಯುವಕನ ಮೂಲಭೂತ ಸಮಸ್ಯೆಗಳು ಇದರಲ್ಲಿವೆ. ಆದರೆ ಅಂತಹ ಸಮಸ್ಯೆಯನ್ನು ಅಭಿವ್ಯಕ್ತಗೊಳಿಸುವ ವಿಧಾನ ಸಹ ಸಂಪೂರ್ಣ ಭಿನ್ನವಾಗಿದೆ.  

ನನ್ನನ್ನು ನಾನೆಂದೇ ನೋಡಬೇಕು; ಜೀವನವೆಂದೇ ಕಾಣಬೇಕು; ಜೀವನದ ನಗ್ನತೆಯನ್ನು ದರ್ಶಿಸಿ ತಳದಲ್ಲೇನಿದೆ ಎಂದು ಆಳಕ್ಕೆ ಇಳಿದು ತಿಳಿಯಬೇಕು” ಎಂಬ ಸಂವೇದನೆಯನ್ನು ‘ವಿಕ್ಷೇಪ’ ಚಿತ್ರಿಸುತ್ತದೆ.

“ವಿಕ್ಷೇಪ’ ಎಂದರೆ ತಿರಸ್ಕರಿಸುವುದು, ಬಿಡುವುದು ಎಂಬರ್ಥವಿದೆ. ಈ ಅರ್ಥಕ್ಕೆ ದೇಸಾಯಿಯವರು ನೀಡಿದ ಹೆಸರು ’ರಾಹುಲ್’, ಈತ ಈ ಕಾದಂಬರಿಯ ಕೇಂದ್ರ ಪಾತ್ರ. ಬುದ್ಧಿವಂತ, ಅನುಕೂಲವಂತನಾಗಿರುವ ರಾಹುಲನಿಗೆ ತನ್ನ ಕೈಯಳತೆಯಲ್ಲಿ ಸಿಗುವ  ಯಾವ ಬದುಕಿನ ಬಗೆಗೂ ಆಸಕ್ತಿ ಇರುವುದಿಲ್ಲ. ಹಾಗಿದ್ದೂ ಕೂಡ, ತನ್ನ  ಸುತ್ತಲಿನ ಮಾನವೀಯ ಸಂವೇದನೆಗಳ ಜೀವಂತ ಕ್ಷಣಗಳಿಗೆ ತನ್ನ ತಾನು ತೆರೆದುಕೊಳ್ಳುವಲ್ಲಿಯೇ ಇವನ  ವಿಕ್ಷಿಪ್ತ ವರ್ತನೆಗಳಿಗೆ ಅರ್ಥಬರುತ್ತದೆ.

ಬೇಕಾದಾಗ ನಿರ್ಲಿಪ್ತತೆಯಿಂದ, ಆಸಕ್ತಿಯಿಂದ  ಒಳಗೆ, ಹೊರಗೆ ಒಟ್ಟಿನಲ್ಲಿ ಸ್ವಚ್ಛಂದವಾಗಿ ಇರಲು ಸಾಧ್ಯವಾಗುವ ಪರಿಸರ ಅವನಿಗೆ ಬೇಕಾಗಿದೆ. ರಾಹುಲ್ ಯಾವ ಸಂಬಂಧಗಳ ಜವಾಬ್ದಾರಿಯನ್ನೂ ಹೊರಲು ಸಿದ್ಧನಿಲ್ಲದವನು. ಹಾಗಾಗಿಯೇ ತಾನು ಪ್ರೀತಿಸುತ್ತಿದ್ದ ಸಿಂಧಿ ಸಮುದಾಯದ  ತರುಣಿ ಮಾಧವಿಯನ್ನು ತನ್ನ ಜೀವನದ ಪರೀಧಿಯಿಂದ ಹೊರಗಿಡಲು ಪ್ರಯತ್ನಿಸಿ. ಯಶಸ್ವಿಯಾಗುತ್ತಾನೆ.

 ಮಾಧವಿಯನ್ನು ತಾನು ಮನಸಾರೆ ಪ್ರೀತಿಸುತ್ತಿದ್ದರೂ ಅವಳ ತಾಯಿ ಮತ್ತು ಕಕ್ಕನ ಅನೈತಿಕ ಸಂಬಂಧದ ವಾಸನೆ ಅವನನ್ನು ಮಾಧವಿಯಿಂದ ದೂರಮಾಡುತ್ತದೆ. ಮಾಧವಿಯ ಪ್ರೇಮದ ಬಗೆಗೆ ಅವನಿಗೆ ಸಂಶಯವಿಲ್ಲ. ಆದರೆ ಅವಳು ಬಯಸುವುದು ’ಪಿತೃಮೂರ್ತಿ’ಯಾದ ರಾಹುಲನನ್ನೋ ಅಥವಾ ವಿದೇಶಕ್ಕೆ ಹೋಗುವ ಅವಕಾಶವಿರುವ ಉನ್ನತ ಅಧಿಕಾರಿಯಾಗಿ ಶ್ರೀಮಂತ ಜೀವನವನ್ನು ಭೋಗಿಸುವ ರಾಹುಲನನ್ನೋ ಎಂಬ ಬಗೆಗೆ ಅವನಿಗೆ ಗೊಂದಲಗಳಿವೆ. ಮಾಧವಿ ಶ್ರೀಮಂತ ಮನೆತನದ ಹೆಣ್ಣುಮಗಳು. ಅವಳನ್ನು ಮದುವೆಯಾಗುವುದರಿಂದ ಜೀವನದಲ್ಲಿ ನೆಲೆನಿಂತಂತೆ ಆಗುವುದು ಎಂದು ಭಾವಿಸುವ ರಾಹುಲ್,  ಅದೇ ಸಮಯದಲ್ಲಿ ತಾನು ಅವಳನ್ನು ಮದುವೆಯಾಗುವುದರಿಂದ ತನ್ನನ್ನು ಭವಿಷ್ಯದಲ್ಲಿ ಇಲ್ಲವಾಗಿಸಬಹುದೆಂಬ ಆತಂಕವೂ ಆತನಿಗೆ ಕಾಡುತ್ತದೆ.

ಈ ಅಂಶವನ್ನು ರಾಹುಲ್ ತನ್ನ ಸ್ನೇಹಿತನಾದ ಅರವಿಂದ ದೇಶಮುಖ್ ಬಳಿ ಹೀಗೆ ಹೇಳುತ್ತಾನೆ.-“ ನಾನವಳನ್ನು ಲಗ್ನವಾದರೆ ನನ್ನನ್ನರಗಿಸಿ ಕುಡಿದುಬಿಡುವಳು. ಗೊತ್ತೇನು? ನನ್ನ ಅಂತಃಸತ್ವವನ್ನೇ  ನಾಶಮಾಡಿಬಿಡುವಳು. ಆಲೋಚಿಸುತ್ತಾನೆ ಎಂದು. ಈ ರೀತಿಯ ಆಲೋಚನೆಗೆ ಮುಖ್ಯ ಕಾರಣ ರಾಹುಲನ ವಿಕ್ಷಿಪ್ತ ಮನಸ್ಸು.

 ಮಾಧವಿಯನ್ನು ನಿರಾಕರಿಸಲು ತಾರ್ಕಿಕ ಕಾರಣವೊಂದನ್ನು ಪ್ರೊ. ವಿಲಿಯಮ್ಸ್  ಅವರೊಡನೆ ನಡೆಸುವ ಚರ್ಚೆಯಲ್ಲಿ ಕಂಡುಕೊಳ್ಳುತ್ತಾನೆ. ಆ ಮೂಲಕ ಲಗ್ನವಾದರೆ   ನನ್ನ ಉದ್ಧಾರವಾಗುವುದೇ’ ಎಂಬ ಅವನ ಪ್ರಶ್ನೆಗೆ ವಿಲಿಯಮ್ಸ್‌ರಿಂದ ಉತ್ತರ- ಲಗ್ನಕ್ಕೂ , ಉದ್ಧಾರಕ್ಕೂ ಸಂಬಂಧ ಏಕೆ ಹಚ್ಚಬೇಕು? ನಿನ್ನ ಉದ್ಧಾರ ನಿನ್ನ ಕೈಯಲ್ಲಿದೆ. ಲಗ್ನ ಅದಕ್ಕೆ ಸಹಾಯ ನೀಡಬಹುದು. ಒಮ್ಮೊಮ್ಮೆ  ಸಹಾಯದ ಬದಲಾಗಿ ಆತಂಕವನ್ನು ತಂದಿಡಬಹುದು. ಆದರೆ, ನಿನ್ನ ಉದ್ಧಾರ ನಿನ್ನ ಕೈಯ್ಯಲ್ಲಿದೆ. ಎನ್ನುತ್ತಾರೆ. ಈ ಎಲ್ಲಾ ಅಂಶಗಳನ್ನು ಅಳೆದು ತೂಗಿ ರಾಹುಲ್ ಲಗ್ನ ಬಂಧನ ಬೇಡವೆಂದು ರ್ತಿರ್ಮಾನಿಸುತ್ತಾನೆ.

ರಾಹುಲನ ಸ್ನೇಹಿತ ದೇಶಮುಖ್ ವಿಧವೆ ವೈದೇಹಿಯನ್ನು ಇಷ್ಟಪಡುತ್ತಾನೆ.  ಆದರೆ ವೈದೇಹಿಯ ವ್ಯಕ್ತಿತ್ವ್ವ ರಾಹುಲನ್ನು ಆಕರ್ಷಿಸುತ್ತದೆ. ಕುಂದಾಳಿಗಿಂತ ಇವಳು ವಿಭಿನ್ನವಾಗಿರುತ್ತದೆ. ರಾಹುಲನದು ಚಂಚಲ ಮನಸ್ಸು ಎಂದುಕೊಂಡರೂ  ಅವನ ಆಲೋಚನೆಗಳಲ್ಲಿ ಗಂಭೀರತೆ ಇದೆ. ಜೀವನ, ಅಸ್ತಿತ್ವ ಇವುಗಳ ಬಗ್ಗೆ ಸೂಕ್ಷ್ಮ ನೋಟವಿದೆ.  ಜೀವನ ಎಂದರೆ ಅರ್ಥಹೀನವಾದ ಮರ ಎಂದು ರಾಹುಲ್ ತೀರ್ಮಾನಿಸಿಬಿಡುತ್ತಾನೆ.  ಇಷ್ಟಾದರೂ ಕುಂದಾಳನ್ನು ಮದುವೆಯಾಗುವ ರಾಹುಲ್ ಕಾದಂಬರಿಯ ಅಂತ್ಯದಲ್ಲಿ, ಹೆಂಡತಿಯನ್ನು ಬಿಟ್ಟು ದೇಶ ಬಿಟ್ಟು, ವಿದೇಶಕ್ಕೆ  ಜಿಗಿಯುವ ಮನಃಸ್ಥಿತಿಯಲ್ಲಿರುತ್ತಾನೆ.

ಅವನ ಮಿತ್ರ ಅರವಿಂದನ “ಇಷ್ಟೆಲ್ಲ ವಿಕ್ಷೇಪ ಏಕೆ” ಎಂಬ ಪ್ರಶ್ನೆಗೆ ‘ನನಗೆ ನಾನಾಗಿ ಜೀವಿಸಬೇಕಾಗಿದೆ.  ಹಾಗೆ ಜೀವಿಸಲು ಇಲ್ಲಿ ಅಸಾಧ್ಯ’  ಎನ್ನುತ್ತಾನೆ.  

 ಕಾದಂಬರಿಯಲ್ಲಿ  ಬರುವ ಎಲ್ಲಾ ಪಾತ್ರಗಳು ತಮ್ಮತನವನ್ನು ಉಳಿಸಿಕೊಂಡೇ ಸಾಗುತ್ತವೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡು ಮಾಂಸಿಯ ಆರೈಕೆಯಲ್ಲಿ ಬೆಳೆದ ರಾಹುಲನ ಮನಸ್ಥಿತಿ ಒಂದು ಬಗೆಯದ್ದಾದರೆ, ತಂದೆ ತಾಯಿ ಯಾರೆಂದು ತಿಳಿಯದೆ ದತ್ತಕಪುತ್ರನಾಗಿ ಮಾತೃವಾತ್ಸಲ್ಯದ ಸವಿಯನ್ನುಂಡ ಪಾಲ್‌ನ ಮಾನಸಿಕ ಸಂವೇದನೆಗಳು ಮತ್ತೊಂದು ಬಗೆಯವು. ಇವರಿಬ್ಬರಿಗಿಂತ ಭಿನ್ನವಾದ ರಣಜಿತ್, ತನ್ನ ಗತವೈಭವದ ಜೀವನದ ಕನಸಿನಲ್ಲಿ ಇಂದು ಭಿಕಾರಿಯಾಗಿ ಯಾರ ಪ್ರೀತಿ, ವಾತ್ಸಲ್ಯವೂ ಇಲ್ಲದೆ ಅನಾಥವಾಗಿ ಉಳಿಯುತ್ತಾನೆ. ಇದು ಜೀವನದ ವಿಕ್ಷಿಪ್ತತೆ ಮತ್ತೊಂದು ಬಗೆಯದು.

 ಈ ಮುಂತಾದವರ ’ವಿಕ್ಷಿಪ್ತ’ ಮನಸ್ಸಿನ ದಾಖಲೆಯಾಗಿದೆ ವಿಕ್ಷೇಪ. ಇಂದು ತ್ರಿಕರಣಗಳ ಪ್ರಭಾವದಿಂದ ಎಲ್ಲಿಯೂ ಸಲ್ಲದವರಾಗಿ ಒಂದುಕಡೆ ನೆಲೆ ನಿಲ್ಲಲು ಸೋಲುತ್ತಿರುವ ನಮ್ಮ ಯುವಜನತೆಯ ಪ್ರತಿನಿಧಿಗಳಂತಿದ್ದಾರೆ ರಾಹುಲ್, ಪಾಲ್, ರಣಜಿತ್. ಹಾಗೆ ನೋಡಿದರೆ ಈ ಕಾದಂಬರಿಯಲ್ಲಿ ಬರುವ ಮಹಿಳಾ ಪಾತ್ರಗಳು ಪುರುಷಪಾತ್ರಗಳಿಗಿಂತ ಹೆಚ್ಚು ಚಿಂತನೆಗೆ ಹಚ್ಚುವ ಮತ್ತು ಹೆಚ್ಚು ಸ್ಪಷ್ಟವಾಗಿ ಯೋಚಿಸುವ ಗುಣವುಳ್ಳವುಗಳಾಗಿವೆ. ಮಾಧವಿ, ಕುಂದಾ, ವೈದೇಹಿ, ಶಿರೀನ್, ರೋಜಿ ಇವರೆಲ್ಲರೂ ತಮ್ಮ ಗಟ್ಟಿಮನಸ್ಸಿನ ಆಲೋಚನೆಯಿಂದಲೇ ಓದುಗರ ಮನದಲ್ಲಿ ಉಳಿಯುತ್ತಾರೆ.

ಅತೀವ ಆಧುನಿಕ ವಸ್ತುವೊಂದರ ಜತೆ ಯಶಸ್ವಿಯಾಗಿ ಹೆಣಗಾಡುವ ಸಾಹಿತ್ಯ ಪ್ರಯತ್ನ ’ವಿಕ್ಷೇಪ’ದಲ್ಲಿದೆ. ’ಅರ್ಥವಿಲ್ಲದೆಯೂ ಜೀವನ ಇರಲಾರದೆ’ ಎಂದು ಯೋಚಿಸುತ್ತಾ ಕೂರುವುದಲ್ಲ, ಬದಲಾಗಿ ಅವರವರ ಜೀವನದ ಅರ್ಥಗಳನ್ನು ಅವರವರೇ ಶೋಧಿಸಬೇಕು, ಶೋಧಿಸಿ ಜೀವನದ ಅರ್ಥಕಂಡುಕೊಳ್ಳಬೇಕು ಎಂಬ ಸಾಚಾಜೀವನದ ತಿಳಿವಿನಿಂದ ವಿಶ್ಲೇಷಣೆಗೆ ತೊಡಗುವ ’ವಿಕ್ಷೇಪ’ದ ಹುಡುಕಾಟಗಳನ್ನು ವಸ್ತುನಿಷ್ಠವಾಗಿ ತಿಳಿಗಣ್ಣಿನಿಂದ ನೋಡಿ ದಾಖಲಿಸುವ ಲೇಖಕರು ಆ ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದಾರೆ.

Dattareya Hegdee 7-7-2025

 .......................


Comments

Popular posts from this blog