ಮಕ್ಕಳಿಗೆ ವಸಂತಸ್ಪರ್ಶ ಕೊಡುವ 

ಬಾರೋ ಬಾರೋ ಮಳೆರಾಯ’




‘ಬಾರೋ ಬಾರೋ ಮಳೆರಾಯ’ ಇದು ದಿವಂಗತ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರ ಮಕ್ಕಳ ಕವನ ಸಂಕಲನ. ಮಕ್ಕಳ ಮನಸ್ಸಿನ ಹಸಿ ಮಣ್ಣನ್ನು ಹೊಕ್ಕ ಬೀಜಗಳು ಮುಂದೆ ಫಲ ಕೊಡುತ್ತವೆ. ನಮ್ಮ ಬಾಲ್ಯದಲ್ಲಿನ ಅನೇಕ ಘಟನೆಗಳು ಈಗ ನಮ್ಮನ್ನು ಕಾಡುವಂತೆ ಮಕ್ಕಳಿಗೂ ಸಹ ಮಕ್ಕಳ ಕವನಗಳು ಮುಂದೆ ಕಾಡುತ್ತವೆ. ಕಾಲ ಯಂತ್ರದಂತೆ ಯಾವುದೇ ಪದ್ಯವೂ ನಮ್ಮನ್ನು ಬಾಲ್ಯಕ್ಕೆ ಒಮ್ಮೆಗೆ ದಾಟಿಸಬಲ್ಲದು. ನಾವು ಆಡಿದ, ಬೆಳೆದ ಮನೆಯಂಗಳ, ಶಾಲೆಯ ಬಯಲು, ತೋಪು, ಕೆರೆ, ಮೈದಾನಗಳು, ಬಾಲ್ಯದ ಗೆಳೆಯ - ಗೆಳತಿಯರು, ನಾವು ಪಡೆದ ಅನುಭವಗಳು, ನೋಟ, ಸ್ಪರ್ಶ ಮೊದಲಾದವುಗಳು ಇನ್ನೂ ಹಸಿರಾಗಿರುತ್ತದೆ ಈ ಅದ್ಭುತವಾದ ಮತ್ತು ಮರೆತು ಹೋದ ಸಾಮ್ರಾಜ್ಯವನ್ನು ಕವಿ ಎಚ್ ಎಸ್ ವೆಂ ವೆಂಕಟೇಶಮೂರ್ತಿ ಈ ಕೃತಿಯ ಮೂಲಕ ಮತ್ತೆ ಕಟ್ಟಿಕೊಟ್ಟಿದ್ದಾರೆ.

 ಈ ಪದ್ಯಗಳು ನಮ್ಮ ಪರಂಪರೆಗೆ ಹಾಕಿದ ಪಾತಾಳ ಗರಡಿಗಳಂತೆ ಇವೆ. ಓಯಸಿಸ್‌ನಂತಿವೆ. ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಇವು ಮಹತ್ವದ ಪಾತ್ರವನ್ನು ಒದಗಿಸಲಿವೆ. ಮಕ್ಕಳ ಕವಿತೆಗೊಂದು ವಸಂತ ಸ್ಪರ್ಶವನ್ನು ಈ ಕೃತಿಯ ಮೂಲಕ ನೀಡಿದ್ದಾರೆ ಎಂದರೆ ತಪ್ಪೇನಿಲ್ಲ.

ಇಲ್ಲಿನ ಪದ್ಯಗಳು ಮನಸ್ಸಿಗೆ ಮುದ ಕೊಡುತ್ತದೆ. ಗೀತೆಗಳು ನಮ್ಮನ್ನು ಕುಣಿತಕ್ಕೊಪಡಿಸುತ್ತವೆ, ತಾಳ ಹಾಕಿಸುತ್ತವೆ, ಕುತೂಹಲಗಳ ಪರಿಸರವಿದೆ, ಮಕ್ಕಳ ಮೆಚ್ಚಿನ  ಚಿಟ್ಟೆ, ಕಾಗೆ, ಕೋಗಿಲೆ, ಬೆಕ್ಕು, ಗುಬ್ಬಿ, ಚಂದಮಾಮ, ನವಿಲುಮುಂತಾದ ವಿಷಯ ವಸ್ತುಗಳಿವೆ. ಪದ್ಯಗಳ ಕಂಪು ಮಕ್ಕಳ ಮನಸ್ಸನ್ನು ತಟ್ಟುವಂತಿದೆ. ಅವರಿಗೆ ಪ್ರೇರಣೆಯಾಗುವಂತಿದೆ. ವಿಶೇಷವಾಗಿ, ಅಂತ್ಯ ಪ್ರಾಸ  ಮತ್ತು  ಲಘು ವಿನ್ಯಾಸ ಇಲ್ಲಿ ವಿಶೇಷವೂ ಗಮನಾರ್ಹವೂ ಆಗಿದೆ. ಮಕ್ಕಳು ತಮ್ಮ ಸುತ್ತಲಿನ ಜಗತ್ತನ್ನು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಈ ಕವನ ಸಂಕಲನದಲ್ಲಿ ಸುಲಭವಾಗಿ ಕವಿ ಚಿತ್ರಿಸಿದ್ದಾರೆ.

 ಈ ಕೃತಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಮಕ್ಕಳ ಕವಿತೆಗಳಿವೆ. ಕೆಲವು ಚುಟುಕುಗಳಂತಿದ್ದರೆ ಇನ್ನೂ ಕೆಲವು ದೊಡ್ಡದಾಗಿವೆ. ಮಕ್ಕಳನ್ನು ಆಕರ್ಷಿಸುವ ಕೇಂದ್ರ ಬಿಂದುಗಳಾದ ಈ ಕವಿತೆಗಳಿಗೆ ಪ್ರೀತಿಯ ವಸ್ತುಗಳೇ ವಿಷಯವಾಗಿವೆ.  ಇಲ್ಲಿನ ಕವಿತೆಗಳು ತೀರಾ ಸರಳವಾಗಿವೆ. ಒತ್ತಕ್ಷರಗಳೇ ತೀರ ಕಡಿಮೆ. ಸುಲಭ ಭಾಷೆಯಲ್ಲಿ ಎಂತಹ ಮಕ್ಕಳಿಗೂ ನಿಲುಕಬಲ್ಲ ಸಾಮರ್ಥ್ಯವನ್ನು ಈ ಕವಿತೆಗಳು ಪಡೆದಿವೆ. ಕೆಲವು ಒಗಟಿನ ರೂಪದಲ್ಲಿದ್ದು ಮಕ್ಕಳನ್ನು ಆಕರ್ಷಿಸುವ ಹೊಸ ವಿಧಾನವನ್ನು ಕವಿ ಇಲ್ಲಿ ಕಂಡುಕೊಂಡಿದ್ದಾರೆ

ಮೊದಲನೇ ಕವಿತೆ ‘ಅಜ್ಜಿ ಕಥೆ ಹೇಳು’ ಇದರಲ್ಲಿ ನಾಲ್ಕಾರು ದಶಕಗಳ ಹಿಂದೆ ಮನೆಯಲ್ಲಿ ರಾತ್ರಿ ದೀಪ ಆರಿಸುವ ಮುನ್ನ ಮನೆಯ ಪುಟಾಣಿಗಳಿಗೆ ಅಜ್ಜಿ ಕಥೆ ಹೇಳಿ ಅಥವಾ ಜೋಗುಳ ಹಾಡಿ ಮಲಗಿಸುತ್ತಿದ್ದ ಪದ್ಧತಿ ಇತ್ತು. ಈ ವಿಷಯದಲ್ಲಿ  ‘ಅಜ್ಜಿ ಕಥೆ ಹೇಳು’ ಕವನ ರಚಿತವಾಗಿದೆ. ಇಲ್ಲಿ ಮಗುವೊಂದು ಜೋಗುಳ ಹಾಡುವ ಬದಲು ಭೀಮ, ರಾಮ, ಶಾಮ, ಸೂರ್ಯ, ಕಿನ್ನರಿ ಮೊದಲಾದವರ ಬಗ್ಗೆ ಕಥೆ ಹೇಳು ಎಂದು ಅಜ್ಜಿಯನ್ನು ಪೀಡಿಸುತ್ತಾಳೆ. ಇನ್ನೊಂದು ಕವನದಲ್ಲಿ

ಬೇಕಾದ್ದೇನು ಬದುಕೋಕೆ?

ಅಮ್ಮನ ಪ್ರೀತಿಯ ತೆಕ್ಕೆ

ಅಷ್ಟೇ ಸಾಕೇ ಬೇಡವೇ ಹೇಳು

ನಿನ್ನದೆ ಸ್ವಂತ ಬಾಳು.

ಸ್ವಂತ ಬದುಕನ್ನು ಕಟ್ಟಿಕೊಳ್ಳಬೇಕೆಂಬ  ಸುಂದರ ಸಂದೇಶವಿದೆ.  

 ಇಲ್ಲಿ  ಗುಬ್ಬಿ ಮರಿ ಕುರಿತಾಗಿ ಹತ್ತಾರು ಕವನಗಳು ಈ ಸಂಕಲನದಲ್ಲಿದೆ. ಮರಿಗುಬ್ಬಿಯು ತಾಯಿಗೆ ಮೀನು ನೀರಿನಲ್ಲಿ ಓಡುತ್ತದೆ. ದೇವರ ಪಟ ತೂಗಾಡುತ್ತಿದೆ ಎಂದೆಲ್ಲ  ಹೇಳುತ್ತಾಳೆ. ಆಗ ತಾಯಿ ಗುಬ್ಬಿ, ‘ಜೀವನ ಮಾಡಲಿಕ್ಕೆ ನೋಡಿಕೊಂಡಿದ್ದರೆ ಸಾಲದು. ನೀನು ರೆಕ್ಕೆ ಬಿಚ್ಚಿ ಹಾರು. ಆಗ ಜೀವನ ಗೊತ್ತಾಗುತ್ತದೆ’ ಎಂದು ಬುದ್ಧಿ ಮಾತು ಹೇಳುತ್ತದೆ. ಉತ್ತಮ ಸಂದೇಶ ಕಟ್ಟಿಕೊಡುವ ಕವನವಿದು.

 ಇನ್ನೊಂದು ಕವನದಲ್ಲಿ ಕಾಗೆ ಜೊತೆ ತಾನು ಆಡಲಿಕ್ಕೆ ಹೋಗುತ್ತೇನೆ ಎಂದು ಗುಬ್ಬಿ ಮರಿಯು ತಾಯಿ ಗುಬ್ಬಿಯಲ್ಲಿ ಹೇಳಿದಾಗ ತಾಯಿ ಗುಬ್ಬಿ, ಗುಬ್ಬಿ ಮರಿ ಗುಬ್ಬಿ ಮರಿ ಜೊತೆ ಮಾತ್ರ ಆಡಬೇಕು. ಕಾಗೆ ಮರಿ ಜೊತೆ ಆಡಬಾರದು. ಕಾಗೆ ಮರಿ ಕಪ್ಪಗಿದ್ದು ಅದರ ಜೊತೆ ನೀನು ಆಡುತ್ತಾ ಕುಳಿತರೆ ನೀನು ಕಪ್ಪಗೆ ಆಗಿಬಿಡುತ್ತೀಯಾ ಎಂದು ಹೇಳುತ್ತಾಳೆ. ‘ಹಾಗೇನಿಲ್ಲ, ಕಾಗೆ ಮರಿ ನನ್ನಲ್ಲಿಗೆ ಬಂದರೆ ನನ್ನ ಹಾಗೆ ಬೆಳ್ಳಗಾಗುತ್ತಾಳೆ ನೋಡು’ ಎಂದು ಅದ್ಭುತವಾದ ಮಾತನ್ನು ಮರಿ ಹೇಳುವ ಕವಿತೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

 ‘ನಾವು ಕನಸು ಕಾಣಬಾರದು. ನಾವು ನಮ್ಮ ಹಾಗೆಯೇ ಇರಬೇಕು. ಕನ್ನಡಿಯಲ್ಲಿ ನೋಡಿಕೊಂಡಾಗ ನಮ್ಮ ಮುಖಾನೇ ಕಾಣಬೇಕು’ ಎನ್ನುವ ಮೂಲಕ ನ್ನೊಬ್ಬರ ಅನುಕರಣೆ ಮಾಡಬಾರದು ಎನ್ನುವ ಸಂದೇಶವನ್ನು ಇನ್ನೊಂದು ಕವನದಲ್ಲಿ ವಿವರಿಸಿದ್ದಾರೆ.  ಈ ಕವನ ಸಂಕಲನದಲ್ಲಿ ವಿವಿಧ ಹಕ್ಕಿಗಳ ಆಕಾರ, ಅವುಗಳ ಅಂದ - ಚಂದ, ಕೊಕ್ಕು, ರೆಕ್ಕೆ, ಪುಕ್ಕ ಮುಂತಾದವುಗಳನ್ನು ಕುರಿತು ಹಲವಾರು ಕವಿತೆಗಳಿವೆ. ಅಂಕಿಗಳ ಆಟ ಸಹ ಇಲ್ಲಿ ಕಂಡುಬರುತ್ತದೆ. ಕನ್ನಡದ ಕುರಿತು ಕವಿ ಮಕ್ಕಳಿಗೆ ಉತ್ತಮ ಸಂದೇಶದ ಕವನವನ್ನು ಇಲ್ಲಿ ರಚಿಸಿದ್ದಾರೆ. ‘ಕನ್ನಡದ ಮಕ್ಕಳಿಗೆ’ ಕವನದಲ್ಲಿ  ‘ಕನ್ನಡದ ಮಕ್ಕಳು ಎಲ್ಲಿ ಹೋದರೂ ಕನ್ನಡದಲ್ಲಿ ಮಾತನಾಡಬೇಕು. ತಾಯಿಯ ಬಾವುಟವನ್ನು ಏರಿಸಬೇಕು. ಮಕ್ಕಳ ಕವಿತೆಯನ್ನು ಹಾಡಬೇಕು ಎಂದರೆ, ಇನ್ನೊಂದು ಭಾವೈಕ್ಯದ ಕವನ ‘ಎಲೆಗಳು ನೂರಾರು’ ಇದರಲ್ಲಿ  ಎಲೆಗಳು ನೂರಾರು ಇರಲಿ,  ಜಾತಿ ಭಾಷೆ ಪಂಥ ನೂರಾರು ಇದ್ದರೂ ಎಲೆಗಳ ಬಣ್ಣ ಒಂದೇ ಹಸಿರು. ಹಾಗೆಯೇ ನಾವೆಲ್ಲರೂ ಎಲೆಯಂತೆ ಒಟ್ಟಿಗೆ ಸಾಗಬೇಕು, ಭಿನ್ನತೆ ನೀಗೋಣ. ಒಟ್ಟಿಗೆ ಬಾಳಬೇಕು. ಭಾರತ ಮಾತೆಗೆ ನಮ್ಮ ಪ್ರೀತಿಯನ್ನು ತೋರಬೇಕು ಎನ್ನುತ್ತಾ ಕಟ್ಟೋಣ ನಾಡನ್ನು ಕಟ್ಟೋಣ

ನಾವು ನೀವು ಸೇರಿ ಒಂದಾಗಿ

ಮುಟ್ಟೋಣ ಮಾಡನು ಮುಟ್ಟೋಣ,

ತಾರೆಗಳೇ ಈ ನಾಡಿನ ಸೂರಾಗಿ

ಎಂದು ಹೇಳುತ್ತಾರೆ.

 ಕೋಗಿಲೆ ಕಾಗೆ ಗೂಡಿನಲ್ಲಿ ಮೊಟ್ಟೆ ಇಟ್ಟು ಅದನ್ನು ಬೆಳೆಸುವ ಬಗ್ಗೆ ಅತ್ಯಂತ ಸುಂದರವಾದ ಕವಿತೆಯನ್ನು ಇಲ್ಲಿ ಕವಿ ಕಟ್ಟಿದ್ದಾರೆ. ಕಾಗೆ ದಂಪತಿಗಳಿಗೆ  ತಮ್ಮ ಮರಿ ಕಾಕಾ ಎನ್ನದೆ ಕುಹು ಕುಹು ಎನ್ನುವ ಬಗ್ಗೆ ಚಿಂತೆಗಳು  ಎದುರಾಗುತ್ತವೆ. ಅದಕ್ಕೆ ಹುಣಸೆಹಣ್ಣು ತಿನ್ನಿಸಿ ಸರಿ ಮಾಡಲು ಯತ್ನಿಸುತ್ತವೆ. ಆದರೂ ಸರಿಯಾಗುವುದಿಲ್ಲ. ಕಾಗೆ ದಂಪತಿಗಳಿಗೆ ಕಸಿವಿಸಿ ಉಂಟಾಗುತ್ತದೆ ಮರುದಿನ ದೂರದ ಊರಿನ ಕೋಗಿಲೆ ಬಂದು ಈ ಕಾಗೆ ದಂಪತಿಗಳ ಬಳಿ ‘ತನಗೆ ಮರಿ ಇಲ್ಲ. ಒಂದು ಮರಿಯನ್ನು ಕೊಡಿ’ ಎಂದು ಕೇಳುತ್ತಾಳೆ. ಆಗ ಕಾಗೆ ದಂಪತಿಗಳು ಕುಹೂ ಎನ್ನುವ ಮರಿಯನ್ನು ಕೋಗಿಲೆಗೆ ಕೊಡುತ್ತವೆ. ಇಂತಹ ಆಕರ್ಷಕ ಕವಿತೆಗಳು ಮಕ್ಕಳನ್ನು ಸರಿ ಹಿಡಿಯುವುದರಲ್ಲಿ ಯಶಸ್ವಿಯಾಗುತ್ತವೆ.

 ‘ಒದ್ದೆ ನೆನಪು’ ಎಂಬ ಕವನದಲ್ಲಿ ಕವಿಯು ಶಾಲೆಗೆ ಹೋಗುವಾಗ ಮಕ್ಕಳು ನೀರಿನಲ್ಲಿ ಮತ್ತು ಕೆಸರಿನಲ್ಲಿ ಆಡುವುದು, ಅವರನ್ನು ಕರೆದುಕೊಂಡು ಹೋಗಲು ಪಾಲಕರು ಬರುವುದು. ಕೆಸರಲ್ಲಿ ಜಾರಿ ಬೀಳುವುದು, ಮೊಣಕಾಲಿನವರಿಗೆ ತಾಯಿ ಸೀರೆಯನ್ನು ಎತ್ತಿಕೊಂಡು ಮಗುವನ್ನು ಕರಕೊಂಡು ಹೋಗುವುದು, ಮಗು ನೀರು ನೋಡಿ ಕುಣಿದಾಡುವುದು, ಮನೆಗೆ ಹೋಗಿ ತನ್ನ ಸೆರಗಿನಲ್ಲಿ ಮಗುವಿನ ತಲೆಯ ನೀರನ್ನು ಒರೆಸಿ ಬೆಚ್ಚಗೆ ಮಾಡುವುದನ್ನು ಚಿತ್ರಿಸುವುದರ ಮೂಲಕ ನಮ್ಮ ಬಾಲ್ಯ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಹೀಗೆ ‘ಹೊರಗೆ ಜೋರು ಮಳೆ, ಒಳಗಡೆ ಬೆಂಕಿ’ ಎನ್ನುತ್ತಾರೆ ಕವಿ.

 ಬಾಲ್ಯದಲ್ಲಿ ತಮ್ಮ ಊರಾದ ಹೊದಿಗೆರೆಯಲ್ಲಿ ಊರಿನ ಮಕ್ಕಳೊಂದಿಗೆ ಸೇರಿ ಸಂಜೆ ಆಟವಾಡುವುದು, ಅಡುಗೆ ಆಟ, ಹಣ್ಣು ಕೊಯ್ಯುವುದು, ಅಜ್ಜಿಯ ಸೀರೆಯನ್ನು ಮರೆಯಾಗಿ ಬಿಟ್ಟುಕೊಂಡು ಕರ್ಣಾಜುನ ಕಾಳಗ ಆಡುವುದು, ಸಂಜೆ  ಆಯ್ತು ಮನೆಗೆ ಬನ್ನಿ ಎಂದು ಅಜ್ಜಿ ಕೂಗುವುದು... ಹೀಗೆ ಸುಂದರ ಬಾಲ್ಯವನ್ನು ‘ಹೊದಿಗೆರೆಯ ಹಿತ್ತಲು’ ಎಂಬ ಕವನದಲ್ಲಿ ನೆನಪಿಸಿಕೊಂಡಿದ್ದಾರೆ

ಕವಿಯ ಒಂದು ಚುಟುಕು ಹೀಗಿದೆ:

ಮಲ್ಲಿ ಮಲ್ಲಿ ಎಲ್ಲಿಗೇ?

 ಮಲ್ಲಿಪಟ್ಣದ ಗಲ್ಲಿಗೆ

ಯಾತಕ್ಕಮ್ಮ ಅಲ್ಲಿಗೆ?

 ಗೋಲಿಮಾಡೋ ಕಲ್ಲಿಗೆ...

ಉಳಿದಂತೆ, ಒಂದು ಒಂದು ಒಂದು ಎಂಬ ಅಂಕೆಯ ಆಟದ ಕವನ, ಪುಟ್ಟ ಎಷ್ಟು ಕುಳ್ಳ ಅಂದರೆ, ಮಳೆಯ ಹುಡುಗಿಯ ಕೆಸರ ಆಟ, ಬಡವಿಯ ಹಾಡು, ಆನೆ- ಮರಿಯಾನೆ,  ತೋಟದಲ್ಲಿ ಪುಟ್ಟು ನೋಡಿದ್ದು, ಚಿಲಿ- ಮಿಲಿ, ದೀಪವು ಆರಿದ ಬಳಿಕ, ನಾನೇನಲ್ಲ ಕಂಕುಳ ಕೂಸು.. ಎಲ್ಲವೂ ಒಂದರ ಹಿಂದೆ ಒಂದರಂತೆ ನಮ್ಮನ್ನು ಒಂದೇ  ಸಮನೆ ಓದಿಸಿಕೊಂಡು ಹೋಗುವಂತಹವು.

ಚುಟುಕಿನ ರೂಪದ ರಾಣಿ ಬೆಕ್ಕು- ರಾಜ ಬೆಕ್ಕು , ಪುಟ್ಟನ ಸ್ಪೇಸ್ ಟ್ರಿಪ್, ಹಕ್ಕಿ, ನಮ್ಮ ಚೋಟು ನಾಯಿ, ಚಿಕ್ಕೆರೆಗೊಂದು, ಮಣ್ಣಲ್ಲಿ  ಬೀಜ ಊರಿ, ಏ ಬೆಕ್ಕೆ, ಗಿಲಿ ಗಿಲಿ ಗಿಲ್ ಮುಂತಾದುವು ನಾಲ್ಕೇ ಸಾಲಿನಲ್ಲಿ ಮಹತ್ತರ ಅರ್ಥವನ್ನು ಬಿಂಬಿಸುತ್ತವೆ.

 ಇಲ್ಲಿನ ಕವನಗೆಳಲ್ಲ ಅರ್ಥಗರ್ಭಿತವಾಗಿರುವುದರ ಜೊತೆಗೆ ಮಕ್ಕಳ ಮನಸೆಳೆಯುವಂತವು ಎನ್ನುವುದು ಕೃತಿಯ ವಿಶೇಷ.

ಮಕ್ಕಳ ಕವನಗಳಲ್ಲಿ ಇಲ್ಲಿ ಕವಿಯು ಶಬ್ದಭಂಡಾರದ ಜೊತೆ ಕಲ್ಪನಾಲೋಕವೂ ಇಮ್ಮಡಿಸುವಂತೆ ಮಾಡಿದ್ದಾರೆ. ಸರಳ ಭಾಷೆಯ ಕವನ ಪ್ರತಿ ಮಗುವಿಗೂ ಇಷ್ಟವಾಗುತ್ತದೆ.  ಕಥೆ, ಲೇಖನಗಳಿಗಿಂತ ಕವಿತೆ ಮಗುವಿನ ನೆನಪಿನಂಗಳದಲ್ಲಿ ಸದಾ ಉಳಿಯುತ್ತದೆ ಎನ್ನುವ ಮಾತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆಸ್ವಿಯರ ಈ ಸಂಕಲನ ಮಕ್ಕಳ ಮಾನಸಿಕ ಬೆಳವಣಿಗೆಗೆ ದೊಡ್ಡ ಕೊಡುಗೆಯನ್ನು ನೀಡಿದೆ. ವಿನೋದ, ನೀತಿ, ತಿಳುವಳಿಕೆಗಳು ಹದವಾಗಿ ಬೆರೆತ ಈ ಕವನ ಸಂಕಲನ  ಗಾಂಭೀರ್ಯವಿಲ್ಲದೆ ಮುಖ್ಯವಾಗಿ ಹೇಳಬಲ್ಲ ಕಲೆಗಾರಿಕೆಯನ್ನು ಹೊಂದಿದೆ.


-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೯.೬.೨೦೨೫

.......................  

Comments

Popular posts from this blog