ಊರಿಗೆ ಬೆಳಕು, ಉಸಿರಾಗುವ

ಲಾಂದ್ರ


 ನಿಗೂಢ ಕಥೆ ಮತ್ತು ಪ್ರೀತಿ-ಪ್ರೇಮದ ಕಥಾ ವಸ್ತುವುಳ್ಳ ಕಾದಂಬರಿ ಲಾಂದ್ರ.  ಇದರ ಲೇಖಕರು  ಅಪರ್ಣಾ ಲಹರಿ. ಲಾಂದ್ರ ಎಂದರೆ ದೀಪವನ್ನು ಬೆಳಗುವ ಒಂದು ಬಗೆಯ ಸಾಧನ. ಗ್ರ್ರಾಮೀಣ ಭಾಷೆಯಲ್ಲಿ ಇದಕ್ಕೆ ಲಾಟೀನು ಎಂದು ಹೇಳುತ್ತಾರೆ. ಪ್ರಸ್ತುತ ಕಾದಂಬರಿಯಲ್ಲಿ ಲಾಂದ್ರದ ಪಾತ್ರವೇ ಪ್ರಮುಖವಾಗಿದೆ. ಲಾಂದ್ರ  ಇಲ್ಲಿ ಗ್ರಾಮದ ಜನರಿಗೆ ರಕ್ಷಣೆ ಕೊಡುವ ಬೆಳಕಾಗಿದೆ. ಜನರ ಉಸಿರಾಗಿದೆ. ರಾತ್ರಿಯಿಡಿ ಲಾಂದ್ರ ಹಿಡಿದು ಓಡಾಡಿ ನರಭಕ್ಷಕರಿಂದ ಜನರನ್ನು ಕಾಪಾಡುವುದೇ ಈ ಕಾದಂಬರಿಯ ಒಬ್ಬ ನಾಯಕಿಯ ಕೆಲಸವಾಗಿದೆ. ಲಾಂದ್ರಕ್ಕೂ ಈ ನಾಯಕಿಗೂ ಎಡೆಬಿಡದ ನಂಟಿದೆ. ಆದ್ದರಿಂದ ಲಾಂದ್ರ ಹೆಸರು ಕಾದಂಬರಿಗೆ ಸೂಕ್ತವಾದುದು ಎನ್ನುವುದು ಓದಿದ ನಂತರ ನಮ್ಮ ಅರಿವಿಗೆ ಬರುತ್ತದೆ.  
 ನಿಗೂಢತೆಯನ್ನು ಸಂಶೋಧಿಸುವುದು, ಇದಕ್ಕೆ  ಪಾತ್ರಗಳ ಜೋಡಣೆ, ಭಯಾನಕ ಮತ್ತು ಪ್ರೇಮದ ಎರಡೂ ಕಥೆಗಳನ್ನು ಸಂದರ್ಭಾನುಸಾರ ಹೆಣೆದಿರುವುದು ಕಾದಂಬರಿಕಾರರ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ. ಬೆಟ್ಟದ ಮೇಲಿನ ಅಮಾನುಷ ವ್ಯಕ್ತಿಗಳ ಚಿತ್ರಣ ಓದುವರನ್ನು ಭಯಭೀತಿ ಮತ್ತು ದಿಗ್ಭ್ರಮೆಗೊಳಿಸುತ್ತದೆ. ರಾತ್ರಿಯಿಡಿ ಲಾಂದ್ರ ಹಿಡಿದು ತನ್ನನ್ನೇ ತಾನು ಸುಟ್ಟುಕೊಳ್ಳುತ್ತಾಳೆ ನಾಯಕಿ. ಊರಿಗೆ ಬೆಳಕನ್ನು ಕೊಡುವ ಉಸಿರೇ ಈ ಸುಂದರ ಯುವತಿ ಪಾರಿಜಾತ ಇಲ್ಲಿನ ಕಥೆಯಾಗುತ್ತಾಳೆ.
ಇಲ್ಲಿನ ಬರವಣಿಗೆಯ ಶೈಲಿ, ಕಥೆಯ ನಿರೂಪಣೆ ತುಂಬಾ ಚೆನ್ನಾಗಿದೆ. ಕ್ಷಣ ಕ್ಷಣಕ್ಕ್ಕೂ ರೋಮಾಂಚನ ಮತ್ತು ಕುತೂಹಲ ಹುಟ್ಟಿಸುವ ಕಥೆ ಇದಾಗಿದೆ. ನಿಗೂಢ ರೋಗಗಳಿಂದ ಬಳಲುವ ಜನ, ಅಗೋಚರ ಜೀವಿಗಳು, ಊರಿನವರ ಮನಸ್ಥಿತಿ ಇದೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಅತಿ ಸರಳವಾಗಿ ಲೇಖಕಿ ಇಲ್ಲಿ ನಿರೂಪಿಸಿದ್ದಾರೆ. ಈ ಕಾದಂಬರಿ ಎಷ್ಟು ಕುತೂಹಲಕಾರಿಯಾಗಿದೆ ಎಂದರೆ ಆರಂಭದಿಂದ ಕೊನೆಯವರೆಗೂ ನಮ್ಮನ್ನು ಸತತವಾಗಿ ಓದಿಸಿಕೊಂಡು ಹೋಗುತ್ತದೆ. ಒಮ್ಮೊಮ್ಮೆ ಭಯಾನಕ ಎನಿಸಿದರೂ ಮುಂದೆ ಮತ್ತೆ ಪ್ರೀತಿ -ಪ್ರೇಮದ ಕಥೆಯ ಮೂಲಕ ಸೆರೆಹಿಡಿಯುತ್ತದೆ.
 ಈ ಕಥೆಯಲ್ಲಿ ಬಂದೂರು ಎಂಬ  ಊರಿನ ಐತಿಹಾಸಿಕ ವಿಷಯವಿದ್ದರೂ ಪ್ರಮುಖವಾಗಿ ಆದಿತ್ಯ (ಆದಿ)- ಅರುಂಧತಿ(ಅರು)  ಮತ್ತು ಸಿದ್ಧಾಂತ (ಸಿದ್ದು)- ಪಾರಿಜಾತ (ಪಾರು) ಈ ನಾಲ್ಕು ಪಾತ್ರಗಳು ಪ್ರಮುಖವಾಗಿ ಕಂಡುಬರುತ್ತವೆ, ಇವರ ಜೊತೆ ಊರವರು ಸೇರುತ್ತಾರೆ.
ಶಾಪಗ್ರಸ್ತ ಬಂದೂರು ಗ್ರಾಮದ ನಿವಾಸಿಗಳು ಹಗಲಿನಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾ ರಾತ್ರಿ ಎಂದರೆ ಬೆಚ್ಚಿ ಬೀಳುತ್ತಾರೆ. ಏಕೆಂದರೆ ನರಭಕ್ಷಕ, ಅಸಹ್ಯಕರ ಆಕೃತಿಯವರು ಊರೊಳಗೆ ನುಗ್ಗಿ ಮನುಷ್ಯರನ್ನು ತಿಂದು, ರಕ್ತ ಕುಡಿದು, ದೇಹ ಬಿಟ್ಟು ಹೋಗುತ್ತಾರೆ ಎಂದು. ಇದರಿಂದ ಭಯಭೀತಿಗೊಂಡು ರಾತ್ರಿ ಮನೆಯಿಂದ ಹೊರಬರದೆ ಮನೆಯ ಸುತ್ತ ದೊಂದಿ ಹೊತ್ತಿಸಿ ಕಾಲ ಕಳೆಯುತ್ತಾರೆ. ಅಪೂರ್ವ ಸುಂದರಿ ಒಬ್ಬಳು (ಪಾರಿಜಾತಾ) ಆ ಊರಿನವರನ್ನು ಈ ನರಭಕ್ಷಕರಿಂದ ರಕ್ಷಿಸುತ್ತಾಳೆ. ಆದರೆ ಊರಿನವರಿಗೆ ಇವಳೇ ನರಭಕ್ಷಕಿ ಎಂಬ ಅನುಮಾನ ಮೂಡುತ್ತದೆ. ಈ ಮಧ್ಯೆ ಗ್ರಾಮದ ಹಬ್ಬಕ್ಕೆ ಸಂಬಂಧಿ ಯುವಕರಿಬ್ಬರು (ಆದಿತ್ಯ ಮತ್ತು ಸಿದ್ದಾಂತ್) ಬರುತ್ತಾರೆ. ಅವರಲ್ಲಿ ಸಿದ್ಧಾಂತ್ ಆ ಸುಂದರಿಯ ಪರಿಚಯ ಮಾಡಿಕೊಂಡು, ಸ್ನೇಹ, ವಿಶ್ವಾಸ ಗಳಿಸಿ ಆ ಮೂಲಕ ಇಡೀ ಊರನ್ನು ಕಾಪಾಡುತ್ತಾನೆ ಮತ್ತು ಅವಳನ್ನೇ ಮದುವೆಯಾಗುತ್ತಾನೆ.
 ಇದು ಒಂದು ಕಥೆಯಾದರೆ, ಇನ್ನೊಬ್ಬ  ಹುಡುಗ (ಆದಿತ್ಯ) ತನ್ನ ಮಾವನ ಮಗಳು ಮುಗ್ಧೆ ಅರುಂಧತಿಯನ್ನು ಪ್ರೀತಿಸುವುದು, ಆಕೆಗೆ ಮೊದಲೇ ಮನಸ್ಸಿದ್ದರೂ  ಅತ್ತೆ ಇನ್ನೊಬ್ಬನ ಜೊತೆ ವಿವಾಹಕ್ಕೆ ನಿರ್ಧರಿಸುವುದು, ನಂತರ ಅದು ತಪ್ಪಿ ಮೊದಲ ಹುಡುಗ ಆದಿತ್ಯನೊಡನೆ ಮದುವೆಯಾಗುವುದು... ಇದು ಎರಡನೆಯ ಕಥೆ.
ವಿವರ ನೋಡುವುದಾದರೆ, ಬಂದೂರಿನ ವೆಂಕಟಪ್ಪ  ತಮ್ಮ ಮೊಮ್ಮಕ್ಕಳಿಗೆ  ಊರಿನ ದೇವತೆ ಹೊನ್ನೂರಮ್ಮನ ಕಥೆ ಹೇಳುವಾಗ ಮಕ್ಕಳು ಕನಸಲ್ಲೂ ಈ ಕಥೆ ನೆನೆದು ಗೋಳಾಡುತ್ತವೆ ಎನ್ನುತ್ತಾ ಸೊಸೆ ಮಕಳಿಗೆ ಮಲಗಲು ಹೇಳುತ್ತಾಳೆ,. ವೆಂಕಟಪ್ಪನಿಗೆ ಕಥೆ ಹೇಳಲು ಬಿಡದ ಸೊಸೆ ಶೈಲಾ ಮೇಲೆ ಕೋಪ. ಈ ಮಧ್ಯೆ ಕೀರ್ತಿ (ಅರುಂಧತಿಯ ಗೆಳತಿ) ಎನ್ನುವವಳು ವೆಂಕಟಪ್ಪನ ಮೊಮ್ಮಗಳು ಅರುಂಧತಿಗೆ ಯಾವಾಗ ನಿನ್ನ ಗಂಡ ಬರುತ್ತ್ತಾನೆ ಎಂದು ಕಿಚಾಯಿಸುತ್ತಿರುತ್ತಾಳೆ. ಅರು ಆದಿತ್ಯ ಎನ್ನುವ ಈ ಹುಡುಗನ್ನು ೫ ವರ್ಷದ ಹಿಂದೆಯೇ ನೋಡಿರುತ್ತಾಳೆ. ಅಂದಿನಿಂದ ಮನಸಲ್ಲೇ ಆತ ಕುಳಿತಿರುತ್ತಾನೆ. ಆದರೆ ಎಲ್ಲಿಯೂ ಆಕೆ ತೋರಗೊಡುವುದಿಲ್ಲ. ಊರಿನ ಹಬ್ಬಕ್ಕೆ ಆದಿತ್ಯನ ತಾಯಿ ಮಾಲತಿ (ವೆಂಕಟಪ್ಪನ ಮಗಳು)ಗೆ ಆಹ್ವಾನ ಬರುತ್ತದೆ. ಅದಕ್ಕೆ ಹೊರಡಲು ಆದಿತ್ಯನ್ನು ಸಿದ್ಧಗೊಳಿಸುತ್ತಾಳೆ. ಮನಸ್ಸಿಲ್ಲದ ಮನಸ್ಸಿನಿಂದ ಹೊರಡುವ ಆತ ತನ್ನೊಡನೆ ಸಿದ್ಧಾಂತ್ ಎನ್ನುವ ಮಿತ್ರನನ್ನು ಕರೆದುಕೊಂಡು ಹೊರಡುತ್ತಾನೆ. ಆದರೆ ಅಲ್ಲಿ ತನ್ನ  ಜೀವನವೇ ಬದಲಾಗುತ್ತದೆ ಎಂದು ಆದಿಗೆ ಅನಿಸಿರಲಿಲ್ಲ. ತನಗಾಗಿ ಒಂದು ಜೀವ ಅಲ್ಲಿ ಕಾಯುತ್ತಿದೆ ಎನ್ನುವುದರ ಕಲ್ಪನೆಯೂ ಅವನಿಗಿರಲಿಲ್ಲ.    
ಗ್ರಾಮಕ್ಕೆ ಬರುವಾಗ ಮಧ್ಯ ರಾತ್ರಿ. ಎಲ್ಲರ ಮನೆ ಎದುರು ದೊಂದಿ ಉರಿಯುತ್ತಿರುತ್ತದೆ. ಊರಿನ ಬಾಗಿಲಲ್ಲಿ ಸುಂದರ ಯುವತಿ (ಪಾರು)ಯೊಬ್ಬಳು ಲಾಂದ್ರ ಹಿಡಿದು  ನಡೆದು ಹೋಗುತ್ತಿರುತ್ತಾಳೆ. ಇವರಿದ್ದ  ಕಾರನ್ನು ತೀಕ್ಷ್ಣವಾಗಿ ನೋಡುತ್ತಾಳೆ. ಅವಳ ಮುಖ ನೋಡುತ್ತಾ ಕಾರು ಚಲಾಯಿಸಿದರೂ ಅವಳ ಅಪರಿಮಿತ ಸೌಂದರ್ಯಕ್ಕೆ ಸಿದ್ದು ಮಾರಹೋಗುತ್ತಾನೆ. ಕಾರು ನಿಲ್ಲಿಸಿ ಬಾಗಿಲು ತೆರೆಯಲೆತ್ನಿಸುತ್ತಿರುವಾಗ ಆಕೆಯ ಆದೇಶ -‘ಇಲ್ಲಿಂದ ಬೇಗ ನಡೆಯಿರಿ’ ಕೇಳಿ ಮುಂದೆ ಸಾಗುತ್ತ್ತಾರೆ.
ಇಲ್ಲಿಂದ ಕಾದಂಬರಿ ತಿರುವು ಪಡೆಯುತ್ತದೆ.
ಸಿದ್ಧಾಂತ್ ಯುವತಿ ಸೌಂದರ್ಯಕ್ಕೆ ಮಾರು ಹೋಗಿದ್ದರಿಂದ ರಾತ್ರಿಯಿಡಿ ನಿದ್ದೆ ಬಾರದೆ ಹೊರಳಾಡುತ್ತಾನೆ. ಮಾರನೆಯ ದಿನ ಅವಳನ್ನು ಭೇಟಿ ಮಾಡಿ ಮಾತಿಗೆ ಎಳೆಯುತ್ತಾನೆ. ತನ್ನ ಹೆಸರು ಪರಿಜಾತಾ ಎಂದು ಪರಿಚಯಿಸಿಕೊಂಡರೂ ಮೊದಮೊದಲು ಕಠಿಣ ರೀತಿಯಲ್ಲಿ ವರ್ತಿಸುತ್ತಾಳೆ. ದಿನ ಕಳೆದಂತೆ ಆತನ ಸ್ನೇಹ, ಪ್ರೀತಿಗೆ ಮನಸೋಲುತ್ತಾಳೆ.  ತಾನು ಯಾರು, ರಾತ್ರಿ ಯಾಕೆ ಲಾಂದ್ರ ಹಿಡಿದು ಓಡಾಡುತ್ತಿದ್ದೇನೆ. ತನ್ನವರ್‍ಯಾರು, ಬೆಟ್ಟದಲ್ಲಿ ನಡೆಯುತ್ತಿರುವುದೇನು ಎನ್ನುತ್ತಾ ಕುಟುಂಬದ ಕಥೆಯನ್ನು ವಿವರಿಸುತ್ತಾಳೆ.
ತನ್ನ ಅಜ್ಜಿ ಹೊನ್ನೂರಮ್ಮ, ಊರಿನ ಗುಡಿ ಅವಳದ್ದೇ. ತನ್ನ  ತಂದೆ ಗಿರಿದೇವ್ ಬೆಟ್ಟದಲ್ಲಿರುವ ನರಭಕ್ಷಕರ ಪಾಲಾಗಿದ್ದಾನೆ. ಅಲ್ಲಿ ಅವರಿಗೆ ತಿನ್ನಲು ಏನೂ ಇಲ್ಲ. ಮನುಷ್ಯರನ್ನೇ ತಿನ್ನುವ ಅವರು ಆಹಾರ ಸಿಗದಿದ್ದಾಗ ರಾತ್ರಿ ವೇಳೆ ಊರಿಗೆ ನುಗ್ಗುತ್ತಾರೆ.  ಇದನ್ನೆಲ್ಲ ತಡೆಯಲು ತಾನು ರಾತ್ರಿ ಲಾಂದ್ರ ಹಿಡಿದು ಓಡಾಡುತ್ತ ಗಾಮಸ್ಥರನ್ನು ರಕ್ಷಿಸುತ್ತಿದ್ದೇನೆ. ಹೊನ್ನೂರಮ್ಮನ ಸಿಂಹಾಸನ, ಅಲ್ಲಿರುವ ಪೆಟ್ಟಿಗೆ ಎಲ್ಲವನ್ನೂ ಮರಳಿ ಅವರಿಂದ ಪಡೆಯಬೇಕೆನ್ನುವುದು ತನ್ನ ಗುರಿ ಎಂದು ವಿವರಿಸುತ್ತಾಳೆ. ಸಿದ್ಧ್ದಾಂತ್‌ಗೆ  ಹಸಿವು, ನಿದ್ದೆಗಿಂತ ಪಾರಿಜಾತಾ ಮತ್ತು ಹೊನ್ನಮ್ಮಳ ಕಥೆ ಮುಖ್ಯವಾಗುತ್ತದೆ. ತಾನು ಈ ಕಾರ್ಯದಲ್ಲಿ ಕೈ ಜೋಡಿಸಿ ಅವರನ್ನು ಸದೆ ಬಡಿದು ಗ್ರಾಮವನ್ನು ರಕ್ಷಿಸುವುದಾಗಿ ಭರವಸೆ ಕೊಡುತ್ತಾನೆ. ಅಲ್ಲಿಂದ ಶುರುವಾದ ಇಬ್ಬರ ಕಾರ್ಯಾಚರಣೆ ಯಶಸ್ವಿಯಾಗುತ್ತಾ ಹೋಗುತ್ತದೆ. ಈ ಮಧ್ಯೆ ಪರಸ್ಪರರಲ್ಲಿ ವಿವಾಹವಾಗುತ್ತದೆ.
  ಸಿದ್ಧಾಂತ್ ಪ್ರತಿದಿನ ರಾತ್ರಿ  ಬೆಟ್ಟಕ್ಕೆ ತೆರಳುವ ಬಗ್ಗೆ ವೆಂಕಟಪ್ಪನ ಮನೆಯವರಿಗೆ ಸಂಶಯ ಎದುರಾಗಿತ್ತು. ಮೊದಮೊದಲು ವಿಷಯ ಮುಚ್ಚಿಟ್ಟರೂ ಈ ಕಾರ್ಯಕ್ಕೆ ಊರವರ ನೆರವಿದ್ದರೆ ಉತ್ತಮ ಎಂದರಿತು  ನೈಜ ವಿಷಯವನ್ನು ಅವರಿಗೆ ವಿವರಿಸುತ್ತಾನೆ. ಊರಿನ ಮುಖಂಡ ಗೋವಿಂದನಲ್ಲಿ ವಿಷಯ ತಿಳಿಸಲು ಹೋದಾಗ ಆತ ಎಗರಾಡಿ ಸಿದ್ದು ಮತ್ತು ಆದಿತ್ಯನನ್ನು ನಿರಾಸೆಗೊಳಿಸಿ ‘ಈ ಊರಿಗೂ ನಿಮಗೂ ಏನು ಸಂಬಂಧ, ಬಂದ ಕೆಲಸ ನೋಡಿಕೊಳ್ಳಿ’ ಎಂದು ಎಚ್ಚರಿಸುತ್ತಾನೆ. ಆದರೆ ವೆಂಕಟಪ್ಪನ ಮನೆಗೆ ಬರುವ ಸಿಂಗಾಪುರದಲ್ಲಿರುವ ಆತನ ಮಗ  ಗಂಗಾಧರ ಈ ವಿಷಯ  ಅರಿತು ಗಿರಿದೇವ್ ತಾನು ಸ್ನೇಹಿತರು ಎನ್ನುತ್ತಾ ಬಾಲ್ಯದ ನೆನಪನ್ನು ಬಿಚ್ಚಿಡುತ್ತಾನೆ. ನಂತರ ಆತನೂ ನರಭಕ್ಷಕರ ಕಾರ್ಯಾಚರಣೆಗೆ ಬರುತ್ತಾನೆ. ವಿಷಯವರಿತು  ಊರವರೂ ಕೈಜೋಡಿಸುತ್ತಾರೆ.     ಬೆಳಕಿನೊಂದಿಗೆ ಬೆಟ್ಟಕ್ಕೆ ತೆರಳಿ ಅಲ್ಲಿರುವ ನರಭಕ್ಷಕರನ್ನು ಸದೆಬಡಿಯುವುದು, ಗಿರಿದೇವನನ್ನು ಅಲ್ಲಿನ ಗುಹೆಯ ಬಾವಿಯಿಂದ  ರಕ್ಷಿಸಿ ತರಲಾಗುತ್ತದೆ. ಗುಹೆಯಲ್ಲಿದ್ದ ಜನರನ್ನೆಲ್ಲ ಕರೆತಂದು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಮತ್ತು ಆಯುರ್ವೇದ ಚಿಕಿತ್ಸೆಯ ಮೂಲಕ ಮನುಷ್ಯರಂತೆ ಮಾಡುವ ಮೂಲಕ ಕಥೆ ಮುಕ್ತಾಯವಾಗುತ್ತದೆ
ನಂತರ, ಚಿಕಿತೆ ಮೂಲಕ ಗಿರಿದೇವ ನಿಧನವಾಗಿ ಗುಣಮುಖನಾಗುತ್ತಾನೆ. ಪಾರು ತಂದೆಯನ್ನು ತನ್ನೊಟ್ಟಿಗೆ ಮನೆಯಲ್ಲಿಟ್ಟುಕೊಳ್ಳುವುದು ಈ ಮಧ್ಯೆ ಊರವರು ಶಿಥಿಲವಾಗಿದ್ದ ಹೊನ್ನೂರಮ್ಮನ ಗುಡಿಯನ್ನು ನವೀಕರಿಸುವುದು, ಸಿದ್ಧಾಂತ್, ಪಾರಿಜಾತಾ ಊರವರ ಸಮ್ಮುಖದಲ್ಲಿ ಮತ್ತೆ ಮದುವೆಯಾಗುತ್ತಾರೆ. ಮೂವರೂ ಒಂದಾಗುತ್ತಾರೆ. ಊರಲ್ಲಿ ನೆಮ್ಮದಿ ನೆಲೆಸುತ್ತದೆ.    
ಇದರೊಟ್ಟಿಗೆ ಆದಿತ್ಯನ ಪ್ರೇಮ ಸಹ ಚಿತ್ರವಾಗಿದೆ. ಅರುಂಧತಿ ಏಕಮುಖವಾಗಿ ಆತನನ್ನು ಪ್ರೀತಿಸುತ್ತಾಳೆ. ಅಜ್ಜನ ಮನೆಗೆ ಬಂದ ನಂತರ ಇಬ್ಬರ ಪ್ರೀತಿ ಮತ್ತೆ ಬೆಳೆದು ಊರಿನ ಹಬ್ಬವಾದ ನಂತರ ಅವರ ಮದುವೆ ನೆರವೇರುತ್ತದೆ  
ಪ್ರಸ್ತುತ ಕಾದಂಬರಿಯಲ್ಲಿ ಲಾಂದ್ರ ಎನ್ನುವುದು ವಿಶಿಷ್ಟವಾಗಿ ಬಳಕೆಯಾಗಿದೆ. ರಾತ್ರಿ ಇಡೀ ಒಂದೇ ಒಂದು ಲಾಂದ್ರವನ್ನು ಹಿಡಿದು ಊರವರನ್ನು ಕಾಪಾಡುವ ಪಾರಿಜಾತ ಈ ಕಥೆಯ ನಾಯಕಿಯಾಗಿ ಕಂಡುಬರುತ್ತಾಳೆ. ಊರಿಗೆ ಬೆಳಕು ಮತ್ತು ಉಸಿರಾಗುತ್ತಾಳೆ ಪಾರಿಜಾತ.

published by Dattatreya hegde on 26.4.25
..........................

    
 

Comments

Popular posts from this blog