ಸಮಾಜವಾದಿಯ ನಿಸ್ಪೃಹ ಜೀವಿಗಳ ಕಥನ
‘ಗಾಳಿ ಬೆಳಕಿನ ಪಯಣಿಗರು’
‘ಗಾಳಿ ಬೆಳಕಿನ ಪಯಣಿಗರು’ ಎಂಬ ಕೃತಿಯು ತನ್ನ ಒಳಿತು ಎಲ್ಲರ ಒಳಿತಿನಲ್ಲಿದೆ ಎಂಬ ಸಮಾಜವಾದಿ ತತ್ವವನ್ನು ಹೃದಯಪೂರ್ವಕವಾಗಿ ಒಪ್ಪಿಕೊಂಡು ತಮ್ಮ ಜೀವನವನ್ನೇ ಅದಕ್ಕಾಗಿ ಮುಡಿಪಿಟ್ಟ ನಿಸ್ಕೃಹ ಜೀವಿಗಳ ಪರಿಚಯದ್ದು. ತೀರ್ಥಹಳ್ಳಿಯ ಜೊತೆಗೆ ರಾಜ್ಯದಲ್ಲಿ ಸಮಾಜವಾದಿಗಳ ದೃಢವಾದ ಹೆಜ್ಜೆಗಳ ಚರಿತ್ರೆಯನ್ನು ಇಲ್ಲಿ ಮೂಡಿಸಿದವರು ಅದೇ ಊರಿನ ನಿವೃತ್ತ ಪ್ರಾಧ್ಯಾಪಕ ಜೆ. ಕೆ. ರಮೇಶ್. ಪತ್ರಿಕೆಯೊಂದಕ್ಕೆ ಬರೆದ ಸುಮಾರು ೨೦ ಸಮಾಜವಾದಿಗಳ ಕುರಿತಾದ ಲೇಖನಗಳ ಗುಚ್ಚವಿದು.
ನಾವು ನಿಂತ ನೆಲದ ಇತಿಹಾಸವನ್ನು ತಿಳಿಯುವುದು ಬಹು ಮುಖ್ಯ. ಪ್ರಸ್ತುತ ಸಂದರ್ಭದಲ್ಲಿ ಮತ್ತೆ ಸಮಾಜವಾದದ ಮತ್ತು ಸಮಾಜವಾದಿಗಳನ್ನು ನೆನೆಯುವುದು ಅವಶ್ಯಕವಾಗಿದೆ. ಸಮಾಜವಾದದ ಮೂಲಕ ಕೆಳಸ್ಥರದ ಮತ್ತು ಜನಸಾಮಾನ್ಯರ ಧ್ವನಿಯಾಗಿ ಅವರ ಮೂಲಭೂತ ಹಕ್ಕುಗಳಿಗಾಗಿ ವಿಶ್ವಾಸವಾಗಿ ಹೋರಾಡಿದ ಹೋರಾಟಗಾರರು ನಿಜವಾಗಿಯೂ ಆ ಸಮುದಾಯಕ್ಕೆ ಗಾಳಿ ಬೆಳಕಿನ ಪಯಣಿಗರಾಗಿದ್ದಾರೆ ಎನ್ನುವುದನ್ನು ಈ ಕೃತಿ ಬಿಂಬಿಸುತ್ತದೆ.
ಕೃತಿಯಲ್ಲಿ ಉನ್ನತ ಮೌಲ್ಯಗಳಿಗಾಗಿ ಹಂಬಲಿಸಿದ ಹಲವಾರು ಆದರ್ಶ ಜೀವಿಗಳನ್ನು ಸೂಕ್ಷ್ಮವಾಗಿ ಪರಿಚಯಿಸಲಾಗಿದೆ. ಇವರೆಲ್ಲ ಶ್ರಮಜೀವಿಗಳು. ಡೆದ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಮತ್ತು ಸ್ವಾತಂತ್ರ್ಯ ಚಳವಳಿಯ ನಂತರ ನಡೆದ ಸಾಮಾಜಿಕ ಕ್ರಾಂತಿಯಾದ ಕಾಗೋಡು ಚಳವಳಿಯಲ್ಲಿ ಈ ಸಮಾಜವಾದಿ ನಾಯಕರು ತೊಡಗಿಸಿಕೊಂಡು ಜೈಲನ್ನು ಅನುಭವಿಸಿ ಬಂದವರು. ಹಾಗಾಗಿ ಬಹುತೇಕ ಎಲ್ಲರ ರಾಜಕೀಯ ಹೋರಾಟ ಮತ್ತು ಪರಿಣಾಮಗಳು ಒಂದೇ ಬಗೆಯಲ್ಲಿ ಸಾಗುತ್ತವೆ.
ಮಲೆನಾಡಿನ ಸಮಾಜವಾದಿ ಚಳವಳಿಯನ್ನು ಅಂದಿನ ಚುನಾವಣಾ ರಾಜಕೀಯದಲ್ಲಿಯೂ ಕಾಣಬಹುದು. ತೇಜಸ್ವಿ, ಅನಂತಮೂರ್ತಿ, ಕುವೆಂಪು ಮೊದಲಾದ ಸಾಹಿತಿಗಳು ಸಹ ಸಮಾಜವಾದಿಗಳೆಂದೇ ಈ ನೆಲದಲ್ಲಿ ಗುರುತಿಸಲ್ಪಡುತ್ತಾರೆ. ಈ ಚಳವಳಿಗೆ ಇವರ ಕೊಡುಗೆ ಅಪಾರವಾದುದು. ಇವರೊಂದಿಗೆ ಶಾಂತವೇರಿ ಗೋಪಾಲಗೌಡರು, ಕೋಣಂದೂರು ಲಿಂಗಪ್ಪ, ಡಾ|| ವಿಷ್ಣುಮೂರ್ತಿ, ನಾಗಾನಂದ, ಗುಬ್ಬಿಗ ಸದಾಶಿವರಾಯರು, ಬೆಟ್ಟಮಕ್ಕಿ ಗುರುಮೂರ್ತಿ ಭಟ್ಟರು, ಕಿಟ್ಟಪ್ಪ ಗೌಡ, ಮಿಣುಕಮ್ಮ, ಕಡಿದಾಳು ಶಾಮಣ್ಣ ಸಹಿತ ಸುಮಾರು ೧೫ ರಷ್ಟು ಸಮಾಜವಾದಿ ಹೋರಾಟಗಾರರ ಚಿತ್ರಣವನ್ನು ಇಲ್ಲಿ ಲೇಖರು ಕಟ್ಟಿಕೊಟ್ಟಿದ್ದಾರೆ.
ಕುವೆಂಪು ಮತ್ತು ಸಮಾಜವಾದ:
ರಾಷ್ಟ್ರಕವಿ ಕುವೆಂಪು ದಾರ್ಶನಿಕರಾದರೂ ರಾಜಕಾರಣದೊಂದಿಗೆ ನಿರ್ಲಿಪ್ತರಾಗಿರಲು ಅವರಿಗೆ ಸಾಧ್ಯವಾಗಿರಲಿಲ್ಲ. ಸಮಕಾಲೀನ ಸಾಮಾಜಿಕ ವಿದ್ಯಮಾನಗಳಿಗೆ ಅವರ ಮನಸ್ಸು ತುಡಿಯುತ್ತಲೇ ಇತ್ತು. ಅವರ ಸಾಹಿತ್ಯದಲ್ಲ್ಲಿ ರಾಜಕೀಯ ಸಿದ್ಧಾಂತಗಳ ಒಲವು ನಿಲುವುಗಳು ಕೆಲವೊಮ್ಮೆ ಪ್ರಕಟವಾಗಿವೆ. ‘ಕೋಗಿಲೆ ಮತ್ತು ಸೋವಿಯತ್ ರಷ್ಯಾ’ ಎಂಬ ಕವನ ಸಂಕಲನ ಕಮ್ಯುನಿಸಂ ಬಗೆಗಿನ ಅವರ ನಿಲುವುಗಳಿಗೆ ಕೈಗನ್ನಡಿಯಾಗಿದೆ. ಸಮಾಜವಾದಿ ಸಿದ್ಧಾಂತಗಳು ಅವರಿಗೆ ಬಹಳ ಪ್ರಿಯವಾಗಿದ್ದವು. ಸಮಾಜವಾದದ ಪರೋಕ್ಷ ಪ್ರಚಾರಕರಾಗಿದ್ದರು. ಅವರ ಸಮಸ್ತ ಕಾವ್ಯಗಳಲ್ಲಿಯೂ ಸಮಾಜವಾದದ ಆಶಯಗಳ ರಕ್ಷಣಾ ಅರಿವು ಇದ್ದೇ ಇದೆ. ‘ಜಲಗಾರ’ ನಾಟಕ ಇದಕ್ಕೊಂದು ಉದಾಹರಣೆ. ಅವರ ವಿಶ್ವಮಾನವ ತತ್ವವು ಸಮಾಜವಾದವನ್ನು ಆಕ್ರಮಿಸಿಕೊಂಡಿದೆ. ಅವರು ಪ್ರಜ್ಞಾವಂತ ನಾಗರಿಕರನ್ನು, ರಾಜಕಾರಣಿಗಳನ್ನು, ಸಮಾಜ ಸುಧಾರಕರನ್ನು ಪ್ರಭಾವಿಸಿದ ಪ್ರಮುಖ ಸಮಾಜವಾದಿ ಚಿಂತಕರು.
ಇದೇ ರೀತಿ ಯು. ಆರ್. ಅನಂತಮೂರ್ತಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದವರಾದರೂ ರಾಜಕಾರಣದೊಂದಿಗೆ ಹೆಚ್ಚು ಬೆರತವರಾಗಿದ್ದರು. ಲೋಹಿಯಾ ಸಿದ್ಧಾಂತವನ್ನು ಮೆಚ್ಚಿಕೊಂಡಿದ್ದರು. ಅವರ ಶಿವಮೊಗ್ಗದ ಮನೆ ಮತ್ತು ಮುದ್ರಣಾಲಯ ಅವರ ಚಳವಳಿಯ ಬೌದ್ಧಿಕ ಕೇಂದ್ರಗಳಾಗಿದ್ದವು. ಅಲ್ಲಿ ವಿಚಾರ ವಿನಿಮಯ ನಡೆಯುತ್ತಿತ್ತು. ಕಾಗೋಡು ಸತ್ಯಾಗ್ರಹದಲ್ಲಿ ಅನಂತಮೂರ್ತಿ ಭಾಗಿಯಾಗಿದ್ದರು. ಸಮಾಜವಾದದ ಗಟ್ಟಿ ಪರಿಕಲ್ಪನೆಯಾದ ಸಮಾನತೆ ಬೆಂಬಲಿಸಿ, ಜಾತಿ ವ್ಯವಸ್ಥೆಯನ್ನು ವಿರೋಧಿಸಿದವರು. ಬಂಡಾಯ ಮನೋಭಾವದವರು. ಜಡ್ಡುಗಟ್ಟಿದ ಸಂಪ್ರದಾಯ, ಕಂದಾಚಾರ, ಮೌಢ್ಯದ ವಿರೋಧಿ. ಅವರ ಎಲ್ಲ ಕೃತಿಗಳು ಸಮಾಜವಾದವನ್ನೇ ಪ್ರತಿಧ್ವನಿಸುತ್ತವೆ. ತುಂಗಾ ಮೂಲ ಚಳವಳಿ, ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಸಮಾಜವಾದಿ ಸಾಹಿತಿಯಾಗಿ ಅವರು ಕಂಡುಬರುತ್ತಾರೆ.
ಪೂರ್ಣಚಂದ್ರ ತೇಜಸ್ವಿ ೧೯೬೮ರಲ್ಲಿ ಸಮಾಜವಾದಿ ಯುವಜನ ಸಭಾದ ಮೂಲಕ ಸಮಾಜವಾದಿಯಾಗಿ ಗುರುತಿಸಲ್ಪಟ್ಟವರು. ಸೋಶಿಯಲಿಸ್ಟ್ ಸಿದ್ಧಾಂತಗಳ ಬಗ್ಗೆ ವಿಶೇಷ ಆಸಕ್ತಿ. ಆದರೆ ರಾಜಕಾರಣದೊಂದಿಗೆ ಅಂತರವನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದರು. ಸಮಾಜವಾದದ ಬೇರುಗಳಿಗೆ ನೀರು ಹೊಯ್ದು ಗಟ್ಟಿಗೊಳಿಸಿದರು. ಇವರ ಕೃತಿಗಳು ಸಹ ಸಮಾಜವಾದಿ ತತ್ವ ಚಿಂತನೆಗಳನ್ನೇ ದ್ವನಿಸುತ್ತವೆ.
ತೀರ್ಥಹಳ್ಳಿಯ ಸಮಾಜವಾದಿಗಳು:
ಗುಬ್ಬಿಗ ಸದಾಶಿವರಾಯರು:
ಶಾಂತವೇರಿ ಗೋಪಾಲಗೌಡರ ಶಿಷ್ಯ. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್‌ನಿಂದ ಹೊರಬಂದು ಸಮಾಜವಾದಿ ಪಕ್ಷ ಕಟ್ಟಿದವರು. ದಂಗೆ ಹೇಳುವ ಜಾಯಮಾನ ಅವgದು. ತೀರ್ಥಹಳ್ಳಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ನಿರಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿಸಿದವರು. ಬಹುಮುಖ್ಯವಾದ ಕಾಗೋಡು ಹೋರಾಟದಲ್ಲಿ, ರೈತ ಚಳವಳಿಯಲ್ಲಿ ಇವರು ಮುಂದಿದ್ದರು.
ಸಮಾಜವಾದಿ ಶಿಕ್ಷಕ ಕಿಟ್ಟಪ್ಪ ಗೌಡರು:
ಗೋಪಾಲಗೌಡರ ಸ್ನೇಹಿತರಲ್ಲೊಬ್ಬರು. ಇವರು ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚನ್ನು ಬಿತ್ತಿದವರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಶಿಕ್ಷೆ ಅನುಭವಿಸಿದವರು. ಕ್ರಾಂತಿಕಾರಿ ವೀರರು. ಪೊಲೀಸರ ಕೈಗೆ ಸಿಗದೆ ಭೂಗತವಾಗಿ ಇದ್ದುಕೊಂಡೇ ಹೋರಾಟ ಮಾಡಿದವರು. ಮುಳುಗಡೆ ರೈತರ ಪರವಾಗಿ ಹೋರಾಡಿದರು. ಕನ್ನಡ ಚಳವಳಿಗಳಲ್ಲೂ ಭಾಗವಹಿಸಿದ್ದರು
ಕೋಣಂದೂರು ಲಿಂಗಪ್ಪ :
೭೦ರ ದಶಕದಲ್ಲಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ಧುರೀಣರಾಗಿ ಸರ್ಕಾರಕ್ಕೆ ಸಿಂಹಸ್ವಪ್ನರಾಗಿದ್ದ ಮಲೆನಾಡಿನ ಆರು ಸಮಾಜವದಿಗಳಲ್ಲಿ ಇವರೂ ಒಬ್ಬರು. ಗೋಪಾಲಗೌಡ ಎಂಬ ಸಮಾಜವಾದಿ ಆಲದ ಮರದ ಬಿಳಿಲುಗಳಲ್ಲಿ ಮುಖ್ಯವಾದವರು. ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣ ಹೊಂದಿದ್ದರಿಂದ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಸಾಹಸ ಅವರಲ್ಲಿತ್ತು. ಗಡಿ ಸಮಸ್ಯೆ, ಕರ್ನಾಟಕ ಏಕೀಕರಣ, ರೈತರ ಸಮಸ್ಯೆ ಮೊದಲಾದವುಗಳಲ್ಲಿ ತೊಡಗಿಸಿಕೊಂಡವರು. ಇಂದಿಗೂ ಪ್ರಖರ ಕನ್ನಡ ಅಭಿಮಾನಿ. ಬರಹಗಾರರೂ ಹೌದು. ಗೋಪಾಲಗೌಡರು, ಅನಂತಮೂರ್ತಿ ಮೊದಲಾದವರು ಲಿಂಗಪ್ಪನವರ ಬೆನ್ನಿಗೆ ನಿಂತಿದ್ದರು. ರಾಜಕಾರಣದಲ್ಲಿ ಎಲ್ಲಿಯೂ ಹೆಸರು ಕೆಡಿಸಿಕೊಂಡವರಲ್ಲ. ಆಸ್ತಿ ಹಣ ಮಾಡಲಿಲ್ಲ. ಈಗಲೂ ಕೆಚ್ಚುಳ್ಳ ಸಮಾಜವಾದಿ ಹೋರಾಟಗಾರರಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ಮಿಣುಕಮ್ಮ:
ಈ ದಲಿತ ಮಹಿಳೆ ಗೋಪಾಲಗೌಡರ ಬೆಂಬಲಿಗರಾಗಿ ಓಡಾಡಿಕೊಂಡು ನಾಯಕಿ ಎನಿಸಿದ್ದರು. ಇವರ ನಿಜವಾದ ಹೆಸರು ಮೇನಕಾ. ಇವರು ಸಮಾಜವಾದಿ ಚಳವಳಿಯಲ್ಲಿ ಎದೆಗುಂದದೆ ಹೋರಾಡಿದವರು. ಸಮಾಜವಾದಿ ತತ್ವ ಸಿದ್ಧಾಂತಗಳೇ ವ್ಯಕ್ತಿ ರೂಪ ತಾಳಿದಂತಿದ್ದರು.
ಕಡಿದಾಳು ಶಾಮಣ್ಣ :
ಸಮಾಜವಾದಿ ಸಿದ್ದಾಂತವೇ ವ್ಯಕ್ತಿ ರೂಪ ತಾಳಿದಂತಿರುವವರು ಶಾಮಣ್ಣನವರು. ಅಂದಿನಿಂದ ಇಂದಿಗೂ ಅನುಸರಿಸಿಕೊಂಡು ಬಂದವರಾಗಿದ್ದಾರೆ. ಅಧ್ಯಾಪಕ ಹುದ್ದೆಯ ಆಸೆಯನ್ನು ಬಿಟ್ಟು ರೈತಾಪಿ ಕಸುಬಿಗೆ ಅಂಟಿಕೊಂಡವರು. ಸರಳತೆ, ಪ್ರಾಮಾಣಿಕತೆಯ ಪ್ರತಿರೂಪ. ದೇವಸ್ಥಾನ ಕಟ್ಟುವ ಬದಲು ಶೌಚಾಲಯ ಕಟ್ಟಬೇಕೆಂಬ ಯೋಜನೆಯನ್ನು ಸರಕಾರದ ಮಟ್ಟದಲ್ಲಿ ಜಾರಿಗೊಳಿಸಲು ಯತ್ನಿಸಿದರು. ಸ್ವತಃ ರೈತ ನಾಯಕನಾಗಿದ್ದು, ಇಂದಿಗೂ ಮುಂದುವರೆದಿದ್ದಾರೆ. ಪದವಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವಾಗ ಮೈಸೂರಿನಲ್ಲಿ ಸಮಾಜವಾದಿ ಯುವಜನ ಸಭಾದ ಯುವ ಘಟಕ ಆರಂಭಿಸಿದ್ದರು. ಶ್ರೀಮಂತಿಕೆ ಪ್ರದರ್ಶನ, ವೈಭವದ ಮದುವೆ, ಮೌಢ್ಯ ಮತ್ತು ಶೋಷಣೆ ವಿರುದ್ದ ಹೋರಾಟ ನಡೆಸಿದವರು. ಶಾಮಣ್ಣ ಸಮಾಜವಾದಿ ನಾಯಕ ಎನ್ನುವುದಕ್ಕಿಂತ ಸಾಂಸ್ಕೃತಿಕ ನಾಯಕ, ಸಮಾಜವಾದದ ಪ್ರೇರಕ ಶಕ್ತಿ. ಸಂಗೀತ ಮತ್ತು ಪರಿಸರ ಪ್ರೇಮಿ, ಹಾಡುಗಾರ, ವೀಣಾ ವಾದಕ. ನಾಯಕತ್ವದಿಂದಲ್ಲ ತನ್ನ ನಡೆಯಿಂದ ಸಮಾಜವಾದದ ಪ್ರೇರಕ ಶಕ್ತಿಯಾಗಿದ್ದಾರೆ. ಇಂಥವರಿಂದಾಗಿ ಸಮಾಜವಾದ ಇನ್ನೂ ಜೀವಂತವಾಗಿದೆ.
ಶಾಂತವೇರಿ ಗೋಪಾಲಗೌಡರು:
ರಾಜಕಾರಣಿಗಳಲ್ಲಿ ಪ್ರಾಮಾಣಿಕ, ಜನರ ಕುರಿತ ಕಾಳಜಿ, ಕೆಡುಕಿನ ವಿರುದ್ಧದ ಹೋರಾಟ ಈ ಎಲ್ಲ ಮೌಲ್ಯಗಳ ಸಂಕೇತ ಸ್ವರೂಪದ ಆದರ್ಶ ವ್ಯಕ್ತಿ ಗೋಪಾಲಗೌಡರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಕಾಂಗ್ರೆಸ್‌ನಿಂದ ಹೊರಸಿಡಿದು ಸಮಾಜವಾದಿ ಪಕ್ಷದಲ್ಲಿ ೧೯೪೮ ರಲ್ಲಿ ಗುರುತಿಸಿಕೊಂಡರು. ಕಾಗೋಡು ಸತ್ಯಾಗ್ರಹದ ಮೂಲಕ ಜನಪ್ರಿಯತೆಯನ್ನು ಪಡೆದ ಇವರು ಕೆಳವರ್ಗದ ಜನರ ದೊರೆಯಾದರು. ೧೯೫೨ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ, ೬೨ ರಲ್ಲಿ ಮತ್ತು ೬೭ರಲ್ಲಿ ತೀರ್ಥಹಳ್ಳಿ ಜನತೆಯಿಂದ ಆಯ್ಕೆಯಾದರು. ಮೂರು ಬಾರಿ ಶಾಸಕರಾದರೂ ಅತ್ಯಂತ ಸರಳ ಜೀವಿ. ಸದನದಲ್ಲಿ ಮಾತಿಗೆ ನಿಂತರೆ ಉಳಿದವರೆಲ್ಲ ಕಿವಿಗಳಾಗುತ್ತಿದ್ದರು. ಸ್ವಂತ ಮನೆ, ಆಸ್ತಿ ಇರಲಿಲ್ಲ. ೨೯ನೇ ವಯಸ್ಸಿನಲ್ಲಿ ವಿಧಾನಸೌಧ ಪ್ರವೇಶಿಸಿದ ಅವರು ಉತ್ಕಟ ಕನ್ನಡ ಪ್ರೇಮಿ, ಸಾಹಿತ್ಯಾಭಿಮಾನಿ. ತತ್ವನಿಷ್ಠ ಮತ್ತು ಪ್ರಾಮಾಣಿಕ. ಉಗ್ರಕೋಪಿ, ಸಸ್ಯಾಹಾರಿ. ಕುಡಿತ ಮತ್ತು ಸಿಗರೇಟು ಅವರಲ್ಲಿದ್ದ ಎರಡು ವ್ಯಸನಗಳು. ಅನ್ಯಾಯ ಅಪಚಾರವನ್ನು ಸಹಿಸದವರು. ತಮ್ಮ ೪೯ರ ಹರಯದಲ್ಲೇ ಇಹಲೋಕ ತ್ಯಜಿಸಿದರು. ಇಂದಿಗೂ ಅವರ ನಿಸ್ಪೃಹತೆ, ಉಜ್ವಲ ವ್ಯಕ್ತಿತ್ವ ಜಗತ್ತಿಗೆ ಒಂದು ಶ್ರೇಷ್ಠ ಮಾದರಿಯಾಗಿ ಉಳಿದಿದೆ.
ಹೀಗೆ ಮಲೆನಾಡಿನಲ್ಲಿ ಸಮಾಜವಾದಕ್ಕೆ ಒಲಿದು, ತಮ್ಮ ಬದ್ಧತೆ ಮೆರೆದು, ಸಮಾಜವಾದಿ ದೀಪವನ್ನು ಬೆಳಗಿದ್ದಲ್ಲದೆ, ಗಾಂಧಿವಾದವನ್ನೂ ಹಿಗ್ಗಿಸಿದ ಹಲವು ಸಜ್ಜನರ ಚಿತ್ರಣ ಅಥವಾ ಜೀವನಗಾಥೆಯನ್ನು ವಿವರಣಾತ್ಮಕವಾಗಿ ಲೇಖಕರು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವುದು ಪುಸ್ತಕವನ್ನು ಓದಿದಾಗ ಕಂಡುಬರುತ್ತದೆ.
ದತ್ತಾತ್ರೇಯ ಹೆಗಡೆ -೯೪೮೧೦೯೧೦೩೧
26/4/2025
...........................

Comments
Post a Comment