ತಮ್ಮದಲ್ಲದ ತಪ್ಪಿಗೆ ನೋವುಂಡ ದಿನಗಳ ಕಥೆಯ

‘ಎಲ್ ಟಿ ಟಿ ಇ ಮೂರ್ತಿ ಕಾಲಿಂಗ್ ’

  

ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಸಂದರ್ಭದಲ್ಲಿ ನಡೆದ ಅಕಸ್ಮಾತ್ ಘಟನೆ ಮತ್ತು ಅದರಲ್ಲಿ ಸಿಲುಕಿಕೊಂಡ ಸಾಮಾನ್ಯ ಕುಟುಂಬ ಎದುರಿಸುವ ತಲ್ಲಣಗಳು, ಆತಂಕ, ದಿಗಿಲು ಮತ್ತು ಅಸಹಾಯಕತೆಯನ್ನು ಇಲ್ಲಿ ಚಿತ್ರಿಸಲಾಗಿದೆ. ಅದರಿಂದ ಅವರು ಹೊರಬಂದ ಬಗೆ ಇವುಗಳನ್ನು ಒಳಗೊಂಡ ಕಾದಂಬರಿ ಎಲ್‌ಟಿಟಿ ಮೂರ್ತಿ ಕಾಲಿಂಗ್. ಇದು ನೈಜ ಘಟನೆಯಾಧಾರಿತ ಕಾದಂಬರಿಯಾಗಿದೆ. ಒಂದು ಜಿಪ್ಸಿ ವಾಹನ  ಎಷ್ಟೆಲ್ಲ ಕಷ್ಟ ತಂದೊಡ್ಡುತ್ತದೆ. ಈ ಸಂಕಷ್ಟ ಅನುಭವಿಸಿದ ಎ. ವೆಂಕಟೇಶ್ ಮೂರ್ತಿ ಅವರಿಂದ ಹೇಳಲ್ಪಟ್ಟ ಕಥೆಯನ್ನು ಕಾದಂಬರಿ ಮೂಲಕ   ನಿರೂಪಿಸಿದವರು ಬರಹಗಾರ ಶಿವಕುಮಾರ ಮಾವಲಿ ಅವರು. 

ಸುಸೂತ್ರವಾಗಿ ನಡೆಯುತ್ತಿದ್ದ ಜೀವನದಲ್ಲಿ ಏಕಾಏಕಿ  ಎದುರಾಗುವ ಅನಿರಿಕ್ಷಿತ ಘಟನೆಯಿಂದ ಇಡಿ ಕುಟುಂಬ ಹೇಗೆ ಕಂಗಾಲಾಗುತ್ತದೆ. ಅಪರಾಧಿ ಭಾವವನ್ನು ಎದೆಯಲ್ಲೇ ಹೊತ್ತು ಇರಬೇಕಾಗುತ್ತದೆ. ಆದರೆ ಅದನ್ನು ೩೧ ವರ್ಷದವರೆಗೆ ಮೂರ್ತಿ ಯಾರಲ್ಲೂ ತೋಡಿಕೊಳ್ಳದೆ ಹೇಗೆ ಸಹಿಸಿಕೊಂಡಿರಬಹುದು. ಕೊನೆಗೂ ಅದನ್ನು ಹೇಳಿಕೊಳ್ಳಬೇಕೆಂಬ ಮನಸ್ಸು ಬಂದಾಗ ಲೇಖಕ ಮಾವಲಿ ಸಿಗುತ್ತಾರೆ.  ಅದರ ಪರಿಣಾಮವೇ ಈ ಕಾದಂಬರಿ ರಚನೆ.  

  ಲೇಖಕರಿಗೆ ‘ಎಲ್‌ಟಿಟಿಇ ಮೂರ್ತಿ ಕಾಲಿಂಗ್’ ಎಂಬ ಹೆಸರಿನಲ್ಲಿ ಮೊಬೈಲ್ ಕರೆ ಬರುತ್ತದೆ. ಇದರಿಂದ ಅವರು ಬೆಚ್ಚಿಬೀಳುತ್ತಾರೆ. ನಾಲ್ಕನೆಯ  ಬಾರಿ ಕಾಲ್ ಬಂದಾಗ ರಿಸೀವ್ ಮಾಡುತ್ತಾರೆ. ಆಗ ಕರೆ ಮಾಡಿದವರು  ತಮ್ಮ ಪರಿಚಯ ಹೇಳಿಕೊಂಡು ಆಗಬೇಕಾದ ಕೆಲಸದ ಬಗ್ಗೆ ಮಾತನಾಡುತ್ತಾರೆ.  ಜೀವನದಲ್ಲಿ ಆಕಸ್ಮಿಕವಾಗಿ ಎದುರಾಗುವ ಅನಿರೀಕ್ಷಿತ ಘಟನೆಯು ಜೀವನಪರ್ಯಂತ ಅಪರಾಧಿಭಾವವನ್ನು ಉಳಿಸಿ ಬಿಡುವ ಸಾಧ್ಯತೆ ಇರುತ್ತದೆ. ಅಂತಹ ನೋವನ್ನು, ಆ ದಿನಗಳನ್ನು ಮತ್ತು ಅದರ ನೆನಪುಗಳನ್ನು ಮೂವತ್ತೊಂದು ವರ್ಷಗಳ ಕಾಲ ಯಾರಿಗೂ ತಿಳಿಸದೆ ಇಟ್ಟುಕೊಳ್ಳುವುದು ನಂತರ ಅದನ್ನು ಎಲ್ಲರ ಮುಂದೆ ಹೇಳಿಕೊಳ್ಳಬೇಕೆಂದು ನಿರ್ಧರಿಸಿ ವೆಂಕಟೇಶ್‌ಮೂರ್ತಿ ಲೇಖಕ ಶಿವಕುಮಾರ್ ಮಾವಲಿ ಅವರಿಗೆ ಕರೆ ಮಾಡಿ ತನ್ನದೊಂದು ಜೀವನ ಕಥೆಯನ್ನು ಕಾದಂಬರಿ ಮಾಡಿಕೊಡಿ  ಎಂದಾಗ ಇಡೀ ಕತೆಯನ್ನು ಕೇಳಿ ಈ ಕಾದಂಬರಿಯನ್ನು ರಚಿಸಲು ತೀರ್ಮಾನಿಸುತ್ತಾರೆ.  

ಕಥಾ ಸಾರಂಶ: 

ಇಡೀ ಕಾದಂಬರಿಯ ಕಥಾನಾಯಕ  ‘ಜಿಪ್ಸಿ ೯೦೦೯’ ಎನ್ನುವ ವಾಹನ. ಮೂರ್ತಿ ಕಾರ್ ಡೀಲಿಂಗ್ ಬಿಜಿನೆಸ್ ಹಾಗೂ ಚಿಪ್ಸ್, ಗಾರ್ಮೆಂಟ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಅವರಿಗೆ ವಾಹನಗಳ ಕ್ರೇಜ್ ಜಾಸ್ತಿ ಇತ್ತು. ಅದಕ್ಕಾಗಿ ಸೆಕೆಂಡ್ ಹ್ಯಾಂಡ್ ಜಿಪ್ಸಿ ೯೦೦೯ ಅನ್ನು ಖರೀದಿಸಿದ್ದರು. ಒಂದು ತಿಂಗಳ ನಂತರ ಒಬ್ಬ ಕಾಲೇಜು ವಿದ್ಯಾರ್ಥಿಗೆ ಅದನ್ನು ಮಾರಾಟ ಮಾಡುತ್ತಾರೆ. ಇದನ್ನು ಡೀಲ್ ಮಾಡಿಕೊಟ್ಟವನು ಗೆಳೆಯ ಇರ್ಫಾನ್. ಆತನು ಕೂಡ ಕಾರ್ ಡೀಲರ್ ಆಗಿದ್ದನು. ಜಿಪ್ಸಿ ಮಾರಿದ ಒಂದೇ ತಿಂಗಳಲ್ಲಿ  ಈ ವಾಹನವು ಎಲ್‌ಟಿಟಿಇಯ ಉಗ್ರನಾದ, ರಾಜೀವ್ ಗಾಂಧಿ ಹಂತಕನಾದ ಶಿವರಾಸನ್ ಮತ್ತು ಶುಭಾ ಅವರು ಮುತ್ತತ್ತಿಯಲ್ಲಿದ್ದಾಗ ಅವರಿಗೆ  ಆಹಾರ ಪೂರೈಸಲು ಹೋಗಿ ಬಂದುದು ಪೊಲೀಸರಿಗೆ ಗೊತ್ತಾಗುತ್ತದೆ. ಅವರು ಈ ವಾಹನದ ಬೆನ್ನು ಬಿದ್ದು, ಪತ್ರಿಕಾ ಪ್ರಕಟಣೆ ಕೊಡುತ್ತಾರೆ. ಇದನ್ನು ಓದಿವರೊಬ್ಬರು ಬ್ರೋಕರ್ ಮನೆ ಮುಂದೆ ಇದೆ ಎಂದು ಪೊಲೀಸರಿಗೆ ಮಾಹಿತಿ ಕೊಡುತ್ತಾರೆ. 

 ಈ ಸುದ್ದಿ ಪತ್ರಿಕೆಯಲ್ಲಿ ಬಂದ ದಿನ ಬೆಳಗ್ಗೆ ಮೂರ್ತಿ ಆ ಪತ್ರಿಕೆ ಖರೀದಿಸಿ ನೋಡಿ  ಇದರ ಬಗ್ಗೆ ಮನೆಯವರಿಗೆ ಮಾಹಿತಿ ಕೊಡದೆ ಬೆಳಗ್ಗೆಯೇ ಮನೆ ಬಿಟ್ಟು ಈ ವಾಹನ ಖರೀದಿಸಿದ್ದ ಮಿತ್ರರಲ್ಲಿ ಹೋಗುತ್ತಾರೆ. ದಾರಿಮಧ್ಯೆ ದಲ್ಲಾಳಿ ಇರ್ಫಾನ್ ಆ ವಾಹನವನ್ನು ಮೂರ್ತಿ ಮನೆಯತ್ತ ಮರಳಿ ತರತ್ತಿರುವುದು ಕಂಡುಬರುತ್ತದೆ. ಇತ್ತ ಪೊಲೀಸರು ಮನೆಯತ್ತ ಆಗಮಿಸಿ ವಿಚಾರಣೆ ನಡೆಸುತ್ತಾರೆ. ಆದರೆ ಮೂರ್ತಿ ಎಲ್ಲಿಗೆ ಹೋದ ಎನ್ನುವುದು ಮನೆಯವರಿಗೂ ಗೊತ್ತಾಗದೆ, ಪೊಲೀಸರ ಆಗಮನದಿಂದ ಹೆದರುತ್ತಾರೆ. ಎಲ್‌ಟಿಟಿಯವರಿಗೆ ಫುಡ್ ಸಪ್ಲೈ ಮಾಡಿದ ವಾಹನ ಇದು ಎಂದು ಪೊಲೀಸರು ಹೇಳುತ್ತಾರೆ. ಸುತ್ತಮುತ್ತಲಿನ ಜನರು ಸೇರುತ್ತಾರೆ. ಮೂರ್ತಿಯವರ ಮನೆಯ ಪಕ್ಕದ ಖಾಲಿ ಜಾಗದಲ್ಲಿ ವಾಹನ ನಿಂತಿರುತ್ತದೆ. 

ಇದನ್ನು ಅರಿತು ತಮ್ಮ ಪರಿಚಿತ ಪೊಲೀಸ್ ಅಧಿಕಾರಿ ಬಳಿ ತೆರಳಿ ವಿವರಿಸಿದಾಗ ಅವರು ಹೆದರಬೇಡ, ನಿಜ ಘಟನೆಯನ್ನು ವಿವರಿಸಿ ಎಂದು ಹೇಳಿ ಕಳುಹಿಸುತ್ತಾರೆ. ಇತ್ತ ಠಾಣೆಗೆ ಕಾರು ಖರೀದಿಸಿದ ಮಹೇಶ್, ಶಿವರಾಜ್, ಖಲೀಲ್ ಮತ್ತು ಮೂರ್ತಿಯನ್ನು ಠಾಣೆಗೆ ಕರೆಯುತ್ತಾರೆ. ಜೊತೆಗೆ ಪೊಲೀಸರು  ರಾಜೀವ್ ಗಾಂಧಿ ಹಂತಕರ ಗ್ಯಾಂಗಿನ ನಾಲ್ವರನ್ನು ಹಿಡಿದು ಸ್ಟೇಷನ್‌ನಲ್ಲಿ ಇರಿಸಿರುವುದಾಗಿ ಹೇಳಿಕೆ ಕೊಡುತ್ತಾರೆ. ಇದೇ ವೇಳೆ ಕೋಣನಕುಂಟೆಯ ಮನೆಯೊಂದರಲ್ಲಿ ರಾಜೀವ್ ಗಾಂಧಿ ಹಂತಕರು ಅಡಗಿ ಕುಳಿತಿರುವುದು ಸುದ್ದಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ನಾಲ್ವರ ತೀವ್ರ ವಿಚಾರಣೆ ನಡೆಸುತ್ತಾರೆ. ಈ ನಾಲ್ವರು ‘ತಾವು  ಖರೀದಿಸಿ ನಂತರ ಡ್ರೈವಿಂಗ್ ಕ್ರೇಜ್ ಹಿನ್ನೆಲೆಯಲ್ಲಿ ಆಗಸ್ಟ್ ೧೨, ೧೯೯೧ರಂದು ಜಿಪ್ಸಿಯನ್ನು ಮುತ್ತತ್ತಿಗೆ ಪ್ರವಾಸಕ್ಕಾಗಿ ತೆಗೆದುಕೊಂಡು ಹೋಗಿದ್ದೆವು. ಚೆಕ್ ಪೋಸ್ಟ್ ನಲ್ಲಿ ವಾಹನ ಮತ್ತು ಅದರ ನಂಬರ್ ಪ್ರವಾಸಿಗರ ಹೆಸರು ದಾಖಲಾಗಿತ್ತು. ಮಳವಳ್ಳಿಯಿಂದ ಊಟ, ತಿಂಡಿಯನ್ನು ಕಟ್ಟಿಸಿಕೊಂಡಿದ್ದೆವು. ಮುತ್ತತ್ತಿಯಲ್ಲಿ ವಾಹನ ನಿಲ್ಲಿಸಿ ಈಜಾಡಲು ಹೋದಾಗ ಮಂಗಗಳು ಕಾರಿನಲ್ಲಿದ್ದ ತಿಂಡಿ- ಊಟದ ಬ್ಯಾಗುಗಳನ್ನು ಎಳೆದಾಡಿ ಚೆಲ್ಲಾಪಿಲ್ಲಿ ಮಾಡಿ, ಅರ್ಧಮರ್ಧ ತಿಂದು ಹಾಕಿದ್ದವು. ಇದರಿಂದಾಗಿ ಮತ್ತೆ ಊಟ- ತಿಂಡಿ ತರಲು ಹೊರಹೋಗಿದ್ದು ನಿಜ’ ಎಂದು ಹೇಳಿಕೆ ಕೊಡುತ್ತಾರೆ. ಎರಡು ಸಲ ವಾಹನ ಹೋಗಿರುವುದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿರುತ್ತದೆ.

ಪೊಲೀಸರು ವಶಪಡಿಸಿಕೊಂಡಿದ್ದ  ಜಿಪ್ಸಿ ನಂತರ ಏನಾಯಿತು, ಈ ಘಟನೆ ನಂತರ ಮೂರ್ತಿಯವರ ನಿವಾಸದ ಸುತ್ತಮುತ್ತಲಿನವರು ಇವರನ್ನು ಏನೆಂದು ಕರೆಯಲಾರಂಭಿಸಿದರು. ಮೂರ್ತಿಗೆ ಕರೆ ಮಾಡಿದಾಗ ಅದು  ‘ಎಲ್ ಟಿ ಟಿ ಮೂರ್ತಿ  ಕಾಲಿಂಗ್’ ಎಂದು  ಏಕೆ ತೋರಿಸುತ್ತದೆ ಎನ್ನುವುದನ್ನು ಇಲ್ಲಿ ಚಿತ್ರಿಸಿದ್ದಾರೆ.

ಈವರೆಗೆ ಈ ವಿಷಯವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಸಾಕಾಗಿದೆ. ನಾಲ್ಕು ಜನಕ್ಕೆ ತಿಳಿಸಲು ನಿರ್ಧರಿಸಿ ಕರೆ ಮಾಡಿದ್ದಾಗಿ ಮೂರ್ತಿ ನಿರೂಪಕರಿಗೆ ವಿವರಿಸಿ, ಕಾದಂಬರಿ ಬರೆಯುವಂತೆ ಮನವಿ ಮಾಡುತ್ತಾರೆ. ಜೊತೆಗೆ ಪುಸ್ತಕವನ್ನು ಬರೆದುಕೊಡುವುದಾಗಿ ಅವರು ಹೇಳುತ್ತಾರೆ.

ಹೀಗೆ ಕಾದಂಬರಿಯಲ್ಲಿ ಇಡಿ ಘಟನೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕತೆಯು ಸಹ ಓದುಗರ ಮನಸೆಳೆಯುತ್ತದೆ. ಕೈಗೆತ್ತಿಕೊಂಡರೆ  ಈ ಕಾದಂಬರಿ ಕೆಲವೇ ತಾಸುಗಳಲ್ಲಿ ಓದಿ ಮುಗಿದಿರುತ್ತದೆ. ಆದರೆ ಇಲ್ಲಿನ ಘಟನೆಗಳು ಸದಾ ನಮ್ಮಲ್ಲಿರುತ್ತವೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೩.೧೦.೨೦೨೬

......................... 

 


Comments

Popular posts from this blog