ಹೋರಾಟದ ‘ಅಭಿಮನ್ಯು’ಗಳ
‘ಮೆಮೊರೆಬಲ್ ಟ್ರಯಲ್ಸ್’
ನಮ್ಮ ದೇಶದ ನಾಯಕರು ಸೇರಿದಂತೆ ವಿಶ್ವದ ಇತರೆ ದೇಶದ ಕ್ರಾಂತಿಕಾರಿ ನಾಯಕರು ಸಮಾಜ ಸುಧಾರಣೆಗಾಗಿ, ಸ್ವಾತಂತ್ರಕ್ಕಾಗಿ, ಜನಪರ ಹೋರಾಟಗಳಲ್ಲಿ ತೊಡಗಿದಾಗ ಪ್ರಭುತ್ವಗಳು ಪೊಲೀಸ್ ಮುಖಾಂತರ ಅವರ ಹೋರಾಟಗಳನ್ನು ಹೇಗೆ ಹತ್ತಿಕ್ಕಿ, ಜೈಲಿಗೆ ಹಾಕಿ, ಕಾನೂನನ್ನು ಬದಿಗೊತ್ತಿ ಗಲ್ಲಿಗೇರಿಸಿವೆ ಎಂಬುದನ್ನು ಈ ಕೃತಿ ಬಿಚ್ಚಿಟ್ಟಿದೆ. ಆಡಳಿತಗಾರರ ಅವಕೃಪೆಗೆ ತುತ್ತಾದವರು ಅವರ ವಿರೋಧ ಕಟ್ಟಿಕೊಂಡು, ಅನ್ಯಾಯವಾಗಿ ಶಿಕ್ಷೆಗೆ ತುತ್ತ್ತಾದದ್ದು. ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದು ಇತಿಹಾಸ ಕಾಲದಿಂದಲೂ ನಡೆದುಕೊಂಡೇ ಬಂದಿದೆ. ತತ್ವಜ್ಞಾನಿಗಳು, ಚಳವಳಿಗಾರರು, ಸ್ವಾತಂತ್ರ್ಯ ಹೋರಾಟಗಾರರು, ರೈತರು, ಕಾರ್ಮಿಕರು ಇಂತಹವರಲ್ಲಿ ಸೇರಿದ್ದಾರೆ. ಅಂತಹ ಕೆಲವು ಸಂದರ್ಭಗಳನ್ನು, ಮಹತ್ವದ ಘಟನೆಗಳನ್ನು ‘ಮೆಮೊರೆಬಲ್ ಟ್ರಯಲ್ಸ್’ (ಸ್ಮರಣೀಯ ಪ್ರಕರಣಗಳು) ಮೂಲಕ ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಜನರೆದುರು ತೆರೆದಿಟ್ಟಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಕೃತಿ ಇದು.
ಜನಪರವಾಗಿ ಹೋರಾಡುವ ಕ್ರಾಂತಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವ ಸಂದರ್ಭಗಳಲ್ಲಿ ವಿಚಾರಣೆಗಳು ಯಾವ ನೆಲೆಯಲ್ಲಿ ನಡೆದಿವೆ, ಅಂತಹ ಸಂದರ್ಭದಲ್ಲಿ ಕ್ರಾಂತಿಕಾರಿಗಳ ನಿಲುವುಗಳು ಹೇಗಿದ್ದವು ಎಂಬುದನ್ನು ಯುವ ಪೀಳಿಗೆ ತಿಳಿಯಬೇಕು ಎನ್ನುವ ಉದ್ದೇಶ ಕೃತಿಯದ್ದಾಗಿದೆ. ಇದರಲ್ಲಿ ಮೂರು ವಿಧದ ಲೇಖನಗಳಿವೆ. ಮೊದಲನೆಯದು ವಿದೇಶಿ ಚಿಂತಕರು, ಹೋರಾಟಗಾರರು, ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಿದವರು, ಸರ್ಕಾರದ ನೀತಿಯನ್ನು ವಿರೋಧಿಸಿದವರು ಹೇಗೆ ಶಿಕ್ಷೆಗೆ ಒಳಗಾದರು, ಅವರಲ್ಲಿ ಹಲವರು ಮರಣದಂಡನೆ ಮೂಲಕ ಸಾವನ್ನಪ್ಪಿದವರು ಎನ್ನುವುದು ಇದೆ. (ಇದರಲ್ಲಿ ಸಾಕ್ರೆಟಿಸ್, ಏಸು, ಗೆಲಿಲಿಯೋ, ಜಾರ್ಜ ಸ್ಟೈನಿ, ನ್ಯೂರೆಂಬರ್ಗ್ ಟ್ರಯಲ್ಸ್, ಫೀಡೆಲ್ ಕ್ಯಾಸ್ಟ್ರೊ, ನೆಲ್ಸನ್ ಮಂಡೆಲಾ, ಮಾರ್ಟಿನ್ ಲೂಥರ್ ಕಿಂಗ್ ಮತ್ತು ಜುಲ್ಫಿಕರ್ ಅಲಿ ಭುಟ್ಟೋ ಸೇರಿದ್ದಾರೆ). ಎರಡನೆಯ ಭಾಗದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕೆಲವು ಪ್ರಮುಖ ಘಟನೆಗಳು, ಇದರಲ್ಲಿಯೂ ಬ್ರಿಟಿಷರಿಂದ ದೌರ್ಜನ್ಯಕ್ಕೊಳಗಾಗಿ ಜೈಲುವಾಸ ಅನುಭವಿಸಿ ಶಿಕ್ಷೆಗೆ ಮತ್ತು ಸಾವಿಗೆ ಗುರಿಯಾದವರು, ಮೂರನೆಯ ಭಾಗದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರು( ಅರಬಿಂದೋ ಘೋಷ್, ಮಹಾತ್ಮಾ ಗಾಂಧಿ, ನೆಹರು, ಭಗತ್ ಸಿಂಗ್ ಮತ್ತು ಉದಾಮ್ ಸಿಂಗ್) ಜೈಲಿಗೆ ಹೋದ ಸಂದರ್ಭ ಮತ್ತು ಬಲಿದಾನವಾದ ಘಟನೆಗಳನ್ನು ವಿವರಿಸಿದ್ದಾರೆ. ಒಟ್ಟು ೨೨ ಲೇಖನಗಳ ಗುಚ್ಛ ಇದಾಗಿದೆ
ಸಾಕ್ರೆಟಿಸ್
ಮನುಷ್ಯರನ್ನು ಗುಲಾಮರಾಗಿ ಯಾಕೆ ಭಾವಿಸಲಾಗುತ್ತದೆ ಎಂದು ಸರ್ಕಾರಕ್ಕೆ ಸವಾಲೆಸೆದವನು ತತ್ವ್ತಶಾಸ್ತ್ರಜ್ಞ ಸಾಕ್ರೆಟಿಸ್. ಧಾರ್ಮಿಕ ಸಂಪ್ರದಾಯವಾದಿ ಎಂದು ಸಂಶಯದಿಂದ ಈತನನ್ನು ಕಂಡು, ದೇವತೆಗಳನ್ನು ಮಾನ್ಯ ಮಾಡುವುದಿಲ್ಲ, ಯುವಕರನ್ನು ದುರ್ಮಾರ್ಗಕ್ಕೆ ಎಳೆಯುತ್ತಿದ್ದಾನೆ. ಪ್ರಜಾಪ್ರಭುತ್ವದ ಶತ್ರು ಎಂದು ಆರೋಪಿಸಿ ಅಥೆನ್ಸ್ನ ಪ್ರಜಾಪ್ರಭುತ್ವ ಈತನನ್ನು ತಪ್ಪಿತಸ್ಥನೆಂದು ಘೋಷಿಸಿ ಮರಣದಂಡನೆ ವಿಧಿಸುತ್ತದೆ. ಆದರೆ ಸಾಕ್ರೆಟಿಸ್ಗೆ ವಿಷ ಕುಡಿಸಿ ಸಾಯಿಸಲಾಗುತ್ತದೆ.
ಏಸುಕ್ರಿಸ್ತ :
ಗುಲಾಮ ಪದ್ಧತಿಯ ವಿರುದ್ಧ ಧ್ವನಿಯೆತ್ತಿ ಉಪನ್ಯಾಸಗಳ ಮೂಲಕ ಜನರನ್ನು ಆಕರ್ಷಿಸುತ್ತಿದ್ದ. ಇದೇ ರೀತಿ ಮುಂದುವರೆದರೆ ತಮ್ಮ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಂದಿನ ಅರಸರು, ಧರ್ಮಗುರುಗಳು ರೋಮ್ ಸಾಮಾಜ್ಯದ ಜೊತೆ ಶಾಮೀಲಾಗಿ ಆತನನ್ನು ಬಂಧಿಸಿ ವಿಚಾರಣೆಗೊಳ ಪಡಿಸುತ್ತಾರೆ. ದೇವನಿಂದನೆ ಆರೋಪ ಹೊರಿಸಿ ವಿಶ್ವಾಸಘಾತ ಮತ್ತು ರಾಜದ್ರೋಹಿ ಎಂದು ಸಾರಲಾಗುತ್ತದೆ. ಅಂತಿಮವಾಗಿ ಯೇಸು ಅಪರಾಧಿ ಎಂದು ಶಿಲುಬೆಗೇರಿಸಿ, ಚಿತ್ರಹಿಂಸೆಯನ್ನು ನೀಡಿ, ಮರಣದಂಡನೆಯನ್ನು ವಿಧಿಸಲಾಯಿತು.
ಗೆಲಿಲಿಯೋ
ಇಟಲಿಯ ೧೬ನೇ ಶತಮಾನದ ಭೌತಶಾಸ್ತ್ರ ಖಗೋಳಶಾಸ್ತ್ರದ ವಿಜ್ಞಾನಿ ಗೆಲಿಲಿಯೋ ಸಹ ತನ್ನ ಸಂಶೋಧನೆ ಮತ್ತು ಉಪನ್ಯಾಸಗಳಿಂದ ಜನಪ್ರಿಯನಾಗಿ ಜನರನ್ನು ಜಾಗೃತಿಗೊಳಿಸಿದ್ದಕ್ಕಾಗಿ ಆತನನ್ನು ವಿಚಾರಣೆಗೆ ಒಳಪಡಿಸಿ ನಾಸ್ತಿಕನೆಂದು ಆಜೀವ ಪರ್ಯಂತ ಗೃಹಬಂಧನದಲ್ಲಿ ಒಳಪಡಿಸಿ ಮರಣದಂಡನೆಯನ್ನು ಘೋಷಿಸಲಾಯಿತು.
ನೆಲ್ಸನ್ ಮಂಡೆಲಾ
ಬಿಳಿಯರ ವಿರುದ್ಧ ಹೋರಾಟಕ್ಕಿಳಿದವರು. ಆಫ್ರಿಕಾದಲ್ಲಿದ್ದ ಶೋಷಣೆ, ಗುಲಾಮರಂತೆ ನಡೆಸಿಕೊಳ್ಳುವ ಮತ್ತು ವರ್ಣಭೇದ ನೀತಿಯನ್ನು ಕೊನೆಗೊಳಿಸಲು ಸಶಸ್ತ್ರ ಹೋರಾಟವೊಂದೇ ದಾರಿ ಎಂದು ತಿಳಿದು ಗೆರಿಲ್ಲಾ ಮಾದರಿಯ ಹೋರಾಟದ ತರಬೇತಿಯನ್ನು ಬೇರೆ ದೇಶದಲ್ಲಿ ಪಡೆದು ವಾಪಸ್ ಮರಳಿದಾಗ ಬಂಧಿಸಲಾಗುತ್ತದೆ. ಸಮಾನ ರಾಜಕೀಯ ಹಕ್ಕನ್ನು ಕೇಳುತ್ತಾರೆ. ನ್ಯಾಯಾಲಯದಲ್ಲಿ ಇವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ದ. ಆಫ್ರಿಕಾ ಸರಕಾರ ವರ್ಣಭೇದ ನೀತಿಯನ್ನು ಕೊನೆಗೊಳಿಸುವ ಭರವಸೆ ನೀಡುತ್ತದೆ. ಮತ್ತು ಮಂಡೇಲಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ೨೭ ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದ ನಂತರ ೧೯೯೧ರಲ್ಲಿ ವರ್ಣಭೇದ ನೀತಿಯನ್ನು ರದ್ದುಪಡಿಸಲಾಗುತ್ತದೆ. ೯೪ ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಮಂಡೇಲಾ ಆಫ್ರಿಕಾದ ಅಧ್ಯಕ್ಷರಾಗುತ್ತಾರೆ. ನೊಬೆಲ್ ಶಾಂತಿ ಪ್ರಶಸ್ತಿ, ಭಾರತರತ್ನ ಪ್ರಶಸ್ತಿಯನ್ನು ಗಳಿಸುತ್ತಾರೆ. ಜಗತ್ತಿನ ವಿಮೋಚನಾ ಹೋರಾಟಗಳಿಗೆ ಇನ್ನೊಂದು ಹೆಸರೇ ನೆಲ್ಸನ್ ಮಂಡೇಲಾ.
ಮಾರ್ಟಿನ್ ಲೂಥರ್ ಕಿಂಗ್, ಜುಲ್ಫಿಕರ್ ಅಲಿ ಭುಟ್ಟೋ, ಫೀಡೆಲ್ ಕಾಸ್ಟ್ರೋ, ಮಾರ್ಟಿನ್ ಲೂಥರ್ ಕಿಂಗ್ ಮೊದಲಾದವರನ್ನೂ ಸಾಯಿಸಿದ ವಿವರ ಇದರಲ್ಲಿದೆ.
ಎರಡನೆಯ ಭಾಗದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೇಳೆ ದೇಶದ ವಿವಿಧೆಡೆ ನಡೆದ ಜನರ, ರೈತರ, ಕಾರ್ಮಿಕರ, ಸ್ವಾತಂತ್ರ್ಯ ಹೋರಾಟಗಾರರ ಚಳವಳಿ, ಬೆಂಕಿ ಹಚ್ಚಿದ್ದು, ಕಲ್ಲು ತೂರಿದ್ದು, ಬ್ರಿಟಿಷರು ಗುಂಡು ಹಾರಿಸಿ ಕೆಲವರನ್ನು ಸಾಯಿಸಿದ್ದು, ಬಂಧಿಸಿದ್ದು, ಜೈಲಿಗಟ್ಟಿದ್ದು, ಗಡೀಪಾರು ಮಾಡಿದ್ದು, ಶಿಕ್ಷೆ ಕೊಟ್ಟಿದ್ದರ ವಿರ ಇದೆ. ೮ ಪ್ರಮುಖ ಸ್ಥಳಗಳಲ್ಲಿ ನಡದ ಹಿಂಸಾಚಾರ ಇದರಲ್ಲಿದೆ.
ಗೋರಖ್ಪುರ ಜಿಲ್ಲೆಯ ಚೌರಿಚೌರ ಗ್ರಾಮದಲ್ಲಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆರಂಭವಾದ ರೈತರ ಪ್ರತಿಭಟನೆ, ಪೊಲೀಸ್ ಠಾಣೆಯ ಮೇಲೆ ಬೆಂಕಿ ಹಾಕಿ ೨೨ ಜನರನ್ನು ಸಾಯಿಸಿದ್ದರ ಹಿನ್ನೆಲೆಯಲ್ಲಿ ಕೆರಳಿದ ಸರ್ಕಾರ ಪ್ರತಿಭಟನಾಕಾರರನ್ನು ಬಂಧಿಸಿ, ಅವರ ಮನೆಗಳ ಮೇಲೆ ದಾಳಿ ನಡೆಸುತ್ತದೆ. ಈ ಪ್ರಕರಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಗಡಿಪಾರು, ಜೈಲು ಶಿಕ್ಷೆ, ಮರಣದಂಡನೆ ವಿಧಿಸಲಾಗುತ್ತದೆ ಕಾಕೋರಿ ಪಿತೂರಿ ಘಟನೆಯಲ್ಲಿ ೧೯೨೫ ರಲ್ಲಿ ರೈಲಿನಲ್ಲಿ ಸರಕಾರಿ ಹಣವನ್ನು ಸಾಗಿಸುತ್ತಿದ್ದುದನ್ನು ಅರಿತು ಲೂಟಿ ಮಾಡಲಾಗುತ್ತದೆ. ಅಂತಿಮವಾಗಿ ೨೧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾದಾಗ ಅವರಲ್ಲಿ ಹಲವರಿಗೆ ಮರಣದಂಡನೆ, ಗಡಿಪಾರು, ಜೈಲುವಾಸವನ್ನು ವಿಧಿಸಲಾಗುತ್ತದೆ.
೧೯೨೮ -೨೯ರ ಸಾಲಿನಲ್ಲಿ ಕಾರ್ಮಿಕ ಮತ್ತು ರೈತ ಸಂಘಟನೆಗಳು ನಡೆಸಿದ ಚಳವಳಿಯಲ್ಲಿ ಇವರನ್ನೆಲ್ಲ ಬಂಧಿಸಿ ಅವರಲ್ಲಿ ಕೆಲವರನ್ನು ಗಡಿಪಾರು ಮಾಡಲಾಗುತ್ತದೆ. ಬಿಡುಗಡೆಯಾದ ಆಪಾದಿತರು ದೇಶದ ಉದ್ದಕ್ಕೂ ಕಾರ್ಮಿಕ ಚಳುವಳಿಯನ್ನು ಇನ್ನಷ್ಟು ಕ್ರಿಯಾಶೀಲವಾಗುವಂತೆ ಮಾಡುತ್ತಾರೆ. ೧೯೩೭ ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಕಂದಾಯ ಹೆಚ್ಚಿಸಿದ ಹಿನ್ನೆಲೆಯಲ್ಲಿ ನಡೆದ ಬಂಡಾಯದಲ್ಲಿ ಜೈಲು ವಾಸ, ದಂಡವನ್ನು ವಿಧಿಸಲಾಗುತ್ತದೆ ಕಾಸರಗೋಡು ಜಿಲ್ಲೆ ಕಯ್ಯೂರಿನಲ್ಲಿ ಜಮೀನ್ದಾರರ ಮತ್ತು ರೈತರ ಮಧ್ಯೆ ನಡೆದ ಹೋರಾಟ ಮೆರವಣಿಗೆಯ ಸಂದರ್ಭದಲ್ಲಿ ಸುಬ್ಬಯ್ಯ ಎಂಬ ಪೊಲೀಸನಿಗೆ ಏಟು ಬೀಳುತ್ತದೆ. ಆತ ತಪ್ಪಿಸಿಕೊಳ್ಳುವ ಯತ್ನದಲ್ಲಿ ನೀರಿಗೆ ಧುಮುಕಿ ಸಾವಿಗೀಡಾಗುತ್ತಾನೆ. ಊರಿನ ರೈತ ಸಂಘದವರ ವಿರುದ್ಧ ತಿರುಗಿ ಬಿದ್ದ ಪೊಲೀಸರು ಹಲವರನ್ನು ಜೈಲಿಗೆ ಹಾಕುತ್ತಾರೆ. ಕೆಲವರಿಗೆ ಕಠಿಣ ಕಾರಾಗೃಹವಾಸ, ೪ ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.
೩ನೆಯ ಭಾಗದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಬ್ರಿಟೀಷರ ವಿರುದ್ಧ ತೊಡೆತಟ್ಟಿ ನಿಂತ ಧೀರರನ್ನು ಹೇಗೆ ಶಿಕ್ಷಿಸಲಾಯಿತು, ಜೈಲಿಗಟ್ಟಲಾಯಿತು ಅಥವಾ ಕೊಲ್ಲಲಾಯಿತೆನ್ನುವುದರ ವಿವರವಿದೆ. ಇದರಲ್ಲಿ ಪ್ರಮುಖವಾಗಿ ಅರಬಿಂದೋ ಘೋಷ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಭಗತ್ ಸಿಂಗ್,ಉದಾಮ್ ಸಿಂಗ್ ಅವರ ಕುರಿತು ವಿವರವಿದೆ.
ಅರಬಿಂದೋ ಘೋಷ್ -‘ವಂದೇ ಮಾತರಂ’ ಎಂಬ ಆಂಗ್ಲ ಪ್ರತಿಕೆಯಲ್ಲಿ ಬ್ರಿಟಿಷ್ ವಿರುದ್ಧ ‘ಮುಯ್ಯಿಗೆ ಮುಯ್ಯಿ’ ಎಂಬ ಲೇಖನ ಬರೆದಿದ್ದಕ್ಕಾಗಿ ಅವರ ವಿರುದ್ಧ ಕೇಸು ದಾಖಲಾಗಿ ಬಂಧಿಸಲಾಗುತ್ತದೆ. ಈ ಲೇಖನದ ಬಗ್ಗೆ ಅಧಿಕಾರಿಗಳು ರುಜುವಾತುಪಡಿಸಲು ವಿಫಲರಾಗಿದ್ದಾರೆಂದು ಬಿಡುಗಡೆ ಮಾಡಲಾಗುತ್ತದೆ. ಬ್ರಿಟಿಷ್ ಅಧಿಕಾರಿಯ ಮೇಲೆ ಬಾಂಬ್ ಎಸೆದಿದ್ದಾರೆ ಎಂಬ ಇನ್ನೊಂದು ಘಟನೆಯಲ್ಲಿ ೩೭ ಘೋಷ್ ಸಹಿತ ಜನರನ್ನು ಬಂಧಿಸಲಾಗುತ್ತದೆ. ಅಂತಿಮವಾಗಿ ಘೋಷ್ ಅವರನ್ನು ಬಿಡುಗಡೆ ಮಾಡಿದಾಗ ಅವರು ರಾಜಕೀಯದಿಂದ ದೂರವಾಗಿ ಪಾಂಡಿಚೆರಿಯಲ್ಲಿ ನೆಲೆಸಿ ಆಧ್ಯಾತ್ಮಿಕ ಮೋಕ್ಷ ಪಡೆಯಲು ಆಶ್ರಮ ಸ್ಥಾಪಿಸುತ್ತಾರೆ.
ಮಹಾತ್ಮ ಗಾಂಧೀಜಿ- ಹಲವಾರು ಬಾರಿ ಜೈಲುವಾಸ ಅನುಭವಿಸಿದವರು. ರಾಜದ್ರೋಹದ ಆರೋಪದ ಮೇಲೆ ಗಾಂಧಿಯವರನ್ನು ಬಂಧಿಸಿ ಅತಿ ಹೆಚ್ಚು ದಿನ ಶಿಕ್ಷೆ ವಿಧಿಸಲಾಗಿತ್ತು. ತನ್ನ ಆರೋಪಗಳು ಸತ್ಯವಾಗಿವೆ ಎಂದು ಸ್ವತಃ ಗಾಂಧಿಯವರೇ ಒಪ್ಪಿಕೊಂಡಿದ್ದರು. ಅವರು ಅತಿ ಹೆಚ್ಚು ಹೋರಾಟ ಮಾಡಿದ್ದು ಸ್ವಾತಂತ್ರ್ಯ ಚಳವಳಿಗಾಗಿ. ಜವಾಹರ್ಲಾಲ್ ನೆಹರು -೯ ಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿದರು. ಇದರಲ್ಲಿ ಒಟ್ಟು ೧೦೪೦ ದಿವಸಗಳು ಸೇರಿವೆ. ವಿವಿಧ ಸತ್ಯಾಗ್ರಹಗಳು ಇದಕ್ಕೆ ಕಾರಣವಾಗಿದ್ದವು.
ಭಗತ್ ಸಿಂಗ್- ಸ್ವಾತಂತ್ರ್ಯ ಚಳವಳಿಯ ವೇಳೆ ಲಾಲಾ ಲಜಪತ್ ರಾಯ್ಯವರನ್ನು ಮಾರಣಾಂತಿಕ ಹಲ್ಲೆಯಿಂದ ಬ್ರಿಟಿಷ್ ಅಧಿಕಾರಿ ಸಾಯಿಸಿದಾಗ ಭಗತ್ ಸಿಂಗ್ ಮತ್ತು ಅವರ ಸಹಚರರು ಪ್ರತೀಕಾರಕ್ಕೆ ನಿರ್ಧರಿಸುತ್ತಾರೆ. ಆದರೆ ತಪ್ಪು ಗ್ರಹಿಕೆಯಿಂದ ಮತ್ತೊಬ್ಬ ಅಧಿಕಾರಿ ಇವರ ಗುಂಡೇಟಿಗಿ ಬಲಿಯಾಗುತ್ತಾನೆ. ಅಲ್ಲಿಂದ ಭೂಗತರಾಗಿ ತಮ್ಮ ಕ್ರಾಂತಿಕಾರಿ ಚಟುವಟಿಕೆ ಆರಂಭಿಸುತ್ತಾರೆ. ಕೆಲವು ತಿಂಗಳ ನಂತರ ಕೇಂದ್ರ ಶಾಸನಸಭೆಗೆ ಪ್ರವೇಶಿಸಿ ಬಾಂಬುಗಳನ್ನು ಎಸೆದು ಕರಪತ್ರ ತೂರಿದಾಗ ಬಂಧನವಾಗುತ್ತದೆ. ನ್ಯಾಯಾಲಯವು ವಿಚಾರಣೆ ನಡೆಸಿ ತೀರ್ಪು ನೀಡಿದಾಗ ಜೀವಾವಧಿ ಶಿಕ್ಷೆಯಾಗುತ್ತದೆ. ತಮ್ಮ ಕೃತ್ಯವನ್ನು ಸಿಂಗ್ ಸಮರ್ಥಿಸಿಕೊಳ್ಳುತ್ತಾರೆ. ಆದರ್ಶ ಮತ್ತು ನಂಬಿಕೆಗೆ ವಿಧಿಸಬಹುದಾದ ಶಿಕ್ಷೆಯನ್ನು ಸ್ವಾಗತಿಸುವುದಾಗಿ ಅವರು ಹೇಳುತ್ತಾರೆ.
ಉದಾಮ್ ಸಿಂಗ್- ಅಮೃತಸರದಲ್ಲಿ ಅನಾಥಾಶ್ರಮದಲ್ಲಿ ಬೆಳೆದ ಉದಾಮ್ ಸಿಂಗ್ ಮತ್ತು ಸಹಚರರು ಜಲಿಯನ್ ವಾಲಾಬಾಗ್ನ ನರಮೇಧವನ್ನು ಕಣ್ಣಾರೆ ಕಂಡಿದ್ದರು. ಇದರ ಪ್ರತೀಕಾರಕ್ಕೆ ಸನ್ನದ್ಧರಾಗುತ್ತಾರೆ. ಕ್ರ್ರಾಂತಿಕಾರಕ ಚಟುವಟಿಕೆಗಳಲ್ಲಿ ತೊಡಗುವರು. ವಿದೇಶಕ್ಕೆ ಹೋಗಿ ಬರುವಾಗ ಶಸ್ತ್ರಾಸ್ತ್ರ ಮತ್ತು ನಿಷೇಧಿತ ಸಾಹಿತ್ಯ ತಂದ ಆರೋಪದ ಮೇಲೆ ಇವರನ್ನು ಬಂಧಿಸಲಾಗುತ್ತದೆ. ೫ ವರ್ಷ ಜೈಲು ಶಿಕ್ಷೆಯಾಗಿ ಬಿಡುಗಡೆಯಾಗುತ್ತಾರೆ. ಈ ವೇಳೆ ಪಂಜಾಬ್ ಪ್ರಾಂತ್ಯದ ಗವರ್ನರ್ ಆಗಿದ್ದ ಡ್ವಯರ್ ಲಂಡನ್ಗೆ ಉಪನ್ಯಾಸಕ್ಕೆ ಹೋದ ವೇಳೆ ಅಲ್ಲಿಯೇ ಆತನನ್ನು ಉದಾಮ್ ಗುಂಡಿಕ್ಕಿ ಕೊಲ್ಲುತ್ತಾರೆ. ಬಂಧನವಾಗುತ್ತದೆ. ವಿಚಾರಣೆಯಲ್ಲಿ ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ. ‘ಸಾವಿಗೆ ಹೆದರುವುದಿಲ್ಲ ಮಾತೃಭೂಮಿಗಾಗಿ ಮಾಡಿದ ಸೇವೆ’ ಎನ್ನುವರು. ೧೯೪೦ರಲ್ಲಿ ಉದಾಮ್ನನ್ನು ಅಲ್ಲಿಯೇ ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತದೆ.
ಕೊನೆಯದಾಗಿ,
ಸ್ವಾತಂತ್ರ್ಯ ಚಳವಳಿಗಳೊಂದಿಗೆ ಕ್ರಾಂತಿಕಾರಿಗಳ ರಕ್ತದ ಹೊಳೆ ಹರಿದಿದೆ. ಅದು ತರುಣ ಕ್ರಾಂತಿಕಾರಿಗಳ ಬಿಸಿ ನೆತ್ತರು. ಇವರು ಹೋರಾಟದ ಅಭಿಮನ್ಯುಗಳು. ಸೋಲು- ಸಾವು ನಿಶ್ಚಿತವಾಗಿದ್ದರೂ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ತ್ಯಾಗಿಗಳು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇಂತಹ ಸೇನಾನಿಗಳ, ಕ್ರಾಂತಿಕಾರಿಗಳ ಪಾತ್ರ ಅವಿಸ್ಮರಣೀಯ.
ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೧೨.೧೦.೨೦೨೦೬

Comments
Post a Comment