ಹೆಣ್ಣಿನ, ಸಮಾಜದ, ಶ್ರೀಸಾಮಾನ್ಯನ ಧ್ವನಿಯ 

‘ಭೀಷ್ಮನಿಗೊಂದು  ಪ್ರಶ್ನೆ’

..................................


‘ಭೀಷ್ಮನಿಗೊಂದು  ಪ್ರಶ್ನೆ’  ನಿಟ್ಟೆಯಲ್ಲ್ಲಿ ಪಪೂ ಕಾಲೇಜಿನ ಉಪನ್ಯಾಸಕಿಯಾಗಿರುವ ಶ್ರೀ ಮುದ್ರಾಡಿ ಅವರ ಎರಡನೆಯ ಕವನ ಸಂಕಲನ.  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ವಾಂಸರಾಗಿ, ಯಕ್ಷಗಾನ , ಸಾಹಿತ್ಯ, ಶಿಕ್ಷಣ ಕ್ಷೇತ್ರ, ಹರಿಕೀರ್ತನೆಗಳಲ್ಲಿ  ಹೆಸರು ಮಾಡಿರುವ ದಿ. ಅಂಬಾತನಯ ಮುದ್ರಾಡಿಯವರ ಪುತ್ರಿ ಇವರು. ನಮ್ಮ ಸುತ್ತಲಿನ ಜಗತ್ತನ್ನು, ಅಲ್ಲಿನ ಆಗುಹೋಗುಗಳನ್ನು ೪೬ ಕವನಗಳ  ಈ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದಾರೆ.  ನೋವಲ್ಲೂ ಬಾಳಸಾರ್ಥಕತೆಯನ್ನು ಕಾಣುವ ಪರಿ,  ಸೋಲಿನಲ್ಲೂ ಗೆಲುವಿನ ಹಾದಿಯನ್ನು ಹುಡುಕುವ ಹಟವನ್ನು ಕಾಣಬಹುದು. ಕವಯತ್ರಿ  ಮಾನವೀಯತೆಯ ಅನುಕಂಪವನ್ನು, ಇಂದಿನ ಸಮಾಜಕ್ಕೆ ಪ್ರಶ್ನೆ ಹಾಕುವ ದೈರ್ಯವನ್ನು, ಹೆಣ್ಣಿನ ಧ್ವನಿಯನ್ನು, ಜನಸಮಾನ್ಯರ ನೋವನ್ನು, ಭವಿಷ್ಯದಲ್ಲಿರಿಸಬೇಕಾದ ಭರವಸೆಯನ್ನು ಇಲ್ಲಿ  ನಮ್ಮ ಮುಂದಿಟ್ಟಿದ್ದಾರೆ.  ಇದು ಕೇವಲ ಕವಯತ್ರಿಯ ಎದೆಯಾಲಾಪ ಆಗಿರದೆ ನಮ್ಮೆಲ್ಲರದ್ದೂ ಆಗಿರುವುನ್ನು ಗಮನಿಸಬಹುದು. ಜೊತೆಗೆ ಇವು ನಮ್ಮ ಹೃದಯಕ್ಕೆ ಹತ್ತಿರವಾದ ಕವನಗಳು. ಮನಸ್ಸು ಮತ್ತು ಹೃದಯವನ್ನು ತಟ್ಟುವಂತಹವು.

ಕವನಗಳ ಕುರಿತು:   

‘ಯಾರು ಸರಿ’ ಎಂಬ ಕವನದಲ್ಲಿ ಕಿರಿಯರು ಮಾಡುವ ತಪ್ಪುಗಳನ್ನು ತಿದ್ದುವ ಮೂಲಕ ಮಾನವೀಯ ನಡೆ-ನುಡಿಯನ್ನು ಕಲಿಸಬೇಕೇ ವಿನಃ ತಪ್ಪು ಮಾಡಿದ್ದಾರೆ ಎಂದು ಹೊಡೆಯುವುದು, ಬಡಿಯುವುದು ಯಾವ ನೀತಿ, ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಾರೆ. ದೇವಸ್ಥಾನದಲ್ಲಿ ಅರ್ಚಕರು ಒಬ್ಬರು ಹುಡುಗಿ ಒಬ್ಬಳು ಆರತಿ, ಪ್ರಸಾದದ  ಬಟ್ಟಲಿಗೆ  ಕೈ ಹಾಕಿದ್ದರಿಂದ ಅವಳಿಗೆ ಥಳಿಸುವ ಮೂಲಕ ಅರ್ಚಕರು ಪ್ರತಾಪ ತೋರಿದ ೧೨ ವರ್ಷದ ಹಿಂದಿನ ಘಟನೆಯನ್ನು ಕಣ್ಣಾರೆ ಕಂಡಿದ್ದನ್ನು ಪ್ರಸ್ತಾಪಿಸಿ, ಆ ಮುಗ್ಧೆಗಾದ ನೋವು ತನಗೆ ಅಯ್ಯೋ ಪಾಪ ಎಂದೆನಿಸಿದ್ದು, ಈ  ಘಟನೆ ಎಂದಿಗೂ ತನ್ನ ಮನವನ್ನು ಕಲಕುತ್ತಿದೆ ಎನ್ನುವುದನ್ನು ಹೇಳುತ್ತಾರೆ.

ಇಲ್ಲಿ ಯಾರು ಸರಿ? ಯಾರು ತಪ್ಪು

ಕಿರಿಯರ ನಡೆ ನುಡಿ ತಿದ್ದಿ ತೀಡಿ

ಕಟ್ಟಲಾರೆವೆ ನಾವು ಮಾನವತೆಯ ಗುಡಿ?

 ಎಂದು ಪ್ರಶ್ನಿಸುತ್ತಾರೆ. 

‘ ನನ್ನೊಳಗಿನ ಹಾಡು’ ತುಂಬಾ ಅರ್ಥಪೂರ್ಣವಾದ ಕವನ.  ಜೀವನದಲ್ಲಿ ಏನೇ ಬಂದರೂ ಧೈರ್ಯದಿಂದ ಎದುರಿಸುವ ಮನೋಭಾವ, ತಾಳ್ಮೆ ಬೇಕು. ಏಕಾಂತಕ್ಕೆ ಸಿಲುಕಿದವರು ಅನುಭವಿಸುತ್ತಿರುವ ಸಂಕಟ, ನೋವು, ಯಾತನೆಯನ್ನು ವಿವರಿಸುತ್ತಾ, ಕೆಲವರು ಹೇಡಿತನವನ್ನು ಈ ಮೂಲಕ ತೋರಿಸುತ್ತಾರೆ. ಇದನ್ನೆಲ್ಲ ಮೆಟ್ಟಿನಿಂತು ಮೌನದಿಂದಲೇ ಉತ್ತರಿಸಬೇಕು. ಅಂತರಂಗದಲ್ಲಿ ನಾವಿರುವುದನ್ನು ಅರ್ಥ ಮಾಡಿಕೊಳ್ಳಬೇಕು. ಇಂಥವುಗಳನ್ನೆಲ್ಲ ಎದುರಿಸಬೇಕು. ಹಲವರು ನಮ್ಮ ಬದುಕು ಏಕಾಂಗಿ ಎಂದುಕೊಂಡಿರಬಹುದು, ಆದರೆ ಅವರಿಗೆ ಪ್ರತ್ಯುತ್ತರವನ್ನು ಕೊಡದೆ ನಮ್ಮ ಭಾವನೆಗಳನ್ನು ನಾವು ಸಹಿಸಿಕೊಂಡು ನಿರುಮ್ಮಳವಾಗಿರಬೇಕು ಎನ್ನುತ್ತಾರೆ.

 ‘ಪರೀಕ್ಷೆ’ ಕವನ ಇಂದಿನ ಮಕ್ಕಳ ಮನಃಸ್ಥಿತಿಯನ್ನು ಬಿಂಬಿಸುತ್ತದೆ. ಪರೀಕ್ಷೆ ಬಂತು ಬಂದೊಡನೆ ನಮ್ಮ ಸಂತಸವನ್ನೆಲ್ಲ ಕಳೆದುಕೊಂಡು, ಹಗಲು- ರಾತ್ರಿ ಎನ್ನದೆ ಉರು ಹೊಡೆದು ಮೂರೇ ಗಂಟೆಯಲ್ಲಿ ಅದನ್ನೆಲ್ಲ ಖಾಲಿ ಮಾಡಿ ಬರುತ್ತೇವೆ. ಪರೀಕ್ಷೆ ಮುಗಿದೊಡನೆ ಅಷ್ಟೇ ಸಂತೋಷದಿಂದ ಕುಣಿದಾಡುತ್ತೇವೆ. ನಂತರ, ಬರುವ ಅಥವಾ ಕಳೆದುಹೋಗುವ ಅಂಕಗಳ ನಿರೀಕ್ಷೆಯಲ್ಲಿ ಇರುತ್ತೇವೆ. ಆದರೆ ಜೀವನವೆಂಬ ಪರೀಕ್ಷೆಯಲ್ಲಿ ಏಳು- ಬೀಳುಗಳು ಸಹಜ. ಅದಕ್ಕೆ ಅಂಜಬಾರದು. ಧೈರ್ಯ ಮತ್ತು ವಿಶ್ವಾಸದಿಂದ ಬಾಳಿ, ಬದುಕಬೇಕು. ಶ್ರಮವಹಿಸಿ ಕೆಲಸ ಮಾಡಿ ಜೀವನವನ್ನು ಜೋಪಾನವಾಗಿ ಸುಭದ್ರವಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳುತ್ತಾರೆ.

ನಮ್ಮೆಲ್ಲರ ಕಣ್ತೆರೆಸುವ ಕವನ  ‘ಹಕ್ಕಿ ಗೂಡು’. ಹಿರಿಯರು ಕಷ್ಟದಿಂದ ನಮ್ಮನ್ನು ಸಾಕಿ- ಸಲುಹಿ, ಬದುಕಿಗೆ ಆಧಾರ ಕಲ್ಪಿಸುತ್ತಾರೆ. ಆದರೆ ದೊಡ್ಡವರಾದ ಬಳಿಕ ನಾವು ಅವರನ್ನು ಮರೆತು, ಊರು ಬಿಟ್ಟು ಹೋಗಿ ಸ್ವಾರ್ಥ ತೋರುತ್ತೇವೆ. ತಂದೆ- ತಾಯ ಮಡಿಲನ್ನೇ ಮರೆಯುತ್ತೇವೆ. ಇದರಿಂದ ಅವರು ಅನುಭವಿಸುವ ನೋವು  ನಮಗರಿವಾಗದು. ಅವರು ಗತಿಸಿದ ಬಳಿಕ ನಮ್ಮ ಬಾಳು ಗೋಳಾಗುತ್ತದೆ. ‘ಹಿರಿಯರಿಗೆ ಕಿರಿಯರೇ ಬಾಳತುತು’ ಎನ್ನುವ ಮಾತನ್ನು ಮರೆಯಬಾರದು ಎನ್ನುವುದನ್ನು ಹಕ್ಕಿ ಮತ್ತು ಮರಿಗಳ ಉದಾಹರಣೆಯೊಂದಿಗೆ ಚಿತ್ರಿಸಿದ್ದಾರೆ.    

‘ಭೀಷ್ಮನಿಗೊಂದು ಪ್ರಶ್ನೆ’  ಕವನದಲ್ಲಿ ಮಹಾಭಾರತದ ಮೌನದ ಪ್ರತೀಕ ಭೀಷ್ಮನನ್ನು ಮುಂದಿಟ್ಟುಕೊಂಡು ಇಂದಿನ ಸಮಾಜಕ್ಕೆ ಪ್ರಶ್ನೆ ಹಾಕುವ ಧೈರ್ಯವನ್ನು ಇಲ್ಲಿ ಮಾಡಿದ್ದಾರೆ. ಅನ್ಯಾಯದ ಮುಂದೆ ತಟಸ್ಥ ನೀತಿ ಸಲ್ಲದು ಎನ್ನುವುದು ಈ ಕವನದ ಸಾರಾಂಶ. ಮಹಾಭಾರತದ ಪ್ರಸಂಗದಲ್ಲಿ ಕುರುಕುಲ ಪಿತಾಮಹನಾಗಿಯೂ ಮೌನ ಸಾಮ್ರಾಜ್ಯದ ಅಧಿಪತಿಯಾಗಿ ಭೀಷ್ಮ ಅಲ್ಲಿ ಹೆಂಗಳೆಯರ ಮೇಲೆ ನಡೆದ ದೌರ್ಜ್ಯನವನ್ನು ಪ್ರಶ್ನಿಸದೆ ಮೂಕನಾಗಿರುತ್ತಾನೆ. ಈ ಮೌನವನ್ನು ಪ್ರಶ್ನಿಸುವ ಮೂಲಕ ನಮ್ಮಂತರಂಗವನ್ನು ಕವಯತ್ರಿ ಜಾಲಾಡಿದ್ದಾರೆ. ಕುರುಡ, ಕಿವುಡನಾಗಿ, ಕಲ್ಲಾಗಿ ಕುಳಿತರೆ ಹೇಗೆ ಎನ್ನುವ ಮೂಲಕ ಸಮಾಜಕ್ಕೆ ಪ್ರಶ್ನೆ ಇಟ್ಟಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ಏಳು- ಬೀಳುಗಳನ್ನು, ಬೇಕು- ಬೇಡಗಳನ್ನು, ನೊಂದವರ ಧ್ವನಿಯನ್ನು ಕೇಳುವವರಿಲ್ಲವಾದರೆ ಅವುಗಳಿಗೆ ಪರಿಹಾರ ಸಿಗುವುದು ಹೇಗೆ ಎನ್ನುತ್ತಾರೆ. ಇಲ್ಲಿ ಭೀಷ್ಮ ಕೇವಲ ಪ್ರತಿಮೆ ಅಷ್ಟೇ. ಪ್ರಸ್ತುತ ದಿನಮಾನಗಳಲ್ಲಿ ಆಳ್ವಿಕೆಯ ಜನವಿರೋಧಿ ನೀತಿಯನ್ನು  ಪ್ರಶ್ನಿಸುತ್ತ, ನಡೆಯುತ್ತಿರುವ ಹೋರಾಟವನ್ನು ಈ ಕವನ ನೆನೆಪಿಸುತ್ತದೆ.

ಹೇಳು ಭೀಷ್ಮ ಹೇಳು?

ನಿನಗೊಂದು ಪ್ರಶ್ನೆ ಕೇಳುತಿಹೆ

ಹೆಣ್ಣಾಗಿ ಹೆಣ್ಣುಗಳೆಲ್ಲರ ದನಿಯಾಗಿ

 ಮತ್ತೆ ನನಗುತ್ತರಿಸಬಲ್ಲೆಯಾ? ಎಂದು ಕೇಳುತ್ತಾರೆ.

ನಿಸ್ವಾರ್ಥ ತ್ಯಾಗವೀರನಾದ ಬಾಹುಬಲಿಯೇ, ಈ ಜಗದಲ್ಲಿ ನರಮೇಧ, ಜೀವಬಲಿ ನೋಡಲಾಗುತ್ತಿಲ್ಲ, ಮತ್ತೊಮ್ಮೆ ಧರೆಗಿಳಿದು ಬಾ ಎನ್ನುವ ಮೂಲಕ ‘ಬಾಹುಬಲಿಗೆ’ ಎಂಬ ಕವನದಲ್ಲಿ ನಿನ್ನಿಂದಾಗಿ ಮತ್ತೆ ಭಾತೃಪ್ರೇಮ ನೆಲೆಸಲಿ, ತ್ಯಾಗಧಾರೆ ಹರಿಯಲಿ, ದ್ವೇಷಾಗ್ನಿ ಆರಲಿ, ಜೀವಸಂಕುಲ ನೆಮ್ಮದಿ ಕಾಣಲಿ ಎಂದು ಆಶಿಸುತ್ತಾರೆ. ‘ಒಬ್ಬಂಟಿ’ಯಲ್ಲಿ  ಆಸೆ, ಆಕಾಂಕ್ಷೆಗಳಿಲ್ಲದೆ  ಒಂಟಿಯಾಗಿರುತ್ತೇನೆ. ಜಡತ್ವವನ್ನು ಮರೆಯುತ್ತೇನೆ. ಏಕಾಗ್ರತೆ, ಏಕಾಂತದಿಂದ ಓದು ಬರೆಹ ಆರಂಭಿಸಿದಾಗ ಸುಂದರ ಕವಿತೆ ಒಡಮೂಡುತ್ತದೆ. ಗುರಿ ಸಾಧಿಸಲು ಇಂತಹ ಒಂಟಿತನ ಅವಶ ಎನ್ನುವುದನ್ನು ವಿವರಿಸುತ್ತಾರೆ.

ಮಳೆ ಗಾಳಿ ಬಿರುಬಿಸಿಲಿಗಂಜದೆ

ಅಚಲವಾಗಿಹ ಹಿರಿಬಂಡೆಯಂತೆ

ಭವಸಾಗರದಿ ಈಜಿ ಮೇಲೇಳುವುದಕೆ

ಮತ್ತದೇ ಕದಲದೇ ಇರುವ ಕಲ್ಲಾಗಬೇಕು

 ಎನ್ನುವ ಮೂಲಕ  ಸಮಾಜದಲ್ಲಿ ಸದಾ ಕೊಂಕು ನುಡಿಯುವವರಿರುತ್ತಾರೆ. ಇದರತ್ತ ಗಮನ ಹರಿಸದೆ ಕಲ್ಲಾಗಿರಬೇಕು. ಈ ಕಲ್ಲು ಹೇಗಿರಬೇಕೆಂದರೆ ಮನೆಯ ತಳಪಾಯ ಹಾಕಿದಂತೆ ಭದ್ರವಿರಬೇಕು, ಅರಿಷಡ್ವರ್ಗಗಳನ್ನೆಲ್ಲ ರುಬ್ಬಿ ಹಾಕುವ ಕಲ್ಲಾಗಬೇಕು. ನಡುದಾರಿಯಲಿ ನಾರಿಯರನ್ನು ಕೆಣಕುವವರನ್ನು ದಂಡಿಸುವ ಮೊನಚಾದನದ ಕಲ್ಲಾಗಬೇಕು. ಹೀಗೆ ಸಮಾಜದಲ್ಲಿ ಕಲ್ಲಾದರೆ ಮಾತ್ರ  ಈಜಿ ಮೇಲೇಳಲು ಸಾಧ್ಯ ಎಂದು ‘ಕಲ್ಲಾಗಬೇಕು’ ಎಂಬ ಕವನದಲ್ಲಿ ಹೇಳುತ್ತಾರೆ.

ಉಳಿದಂತೆ, ಅಪ್ಪ, ಅಮ್ಮ, ಶಾಲೆ, ತುಳುನಾಡು, ಪ್ರವಾಸ, ಸಂಬಂಧ, ಗೆಳತಿಯರ ಬಗ್ಗೆ ಉತ್ತಮವಾದ ಕವನಗಳಿವೆ. 

ಸರಳ ಭಾಷೆಯ ಪ್ರಯೋಗ ಇಲ್ಲಿದೆಯಾದರೂ ಪ್ರತಿಸಾಲಿನ ಒಳಗೆ ಆಳವಾದ ಅರ್ಥವಿದೆ. ಸ್ಪಷ್ಟತೆ ಇದೆ, ಕವಿತೆ ಓದುಗನ ಮನದಾಳದಲ್ಲಿಳಿದು ಉಳಿಯಬೇಕೆಂಬ ಚಿ

ಂತನೆಯಿಂದ ಬರೆದ ಕವಿತೆಗಳು ಇವು. ಒಟ್ಟಿನಲ್ಲಿ, ಹೃದಯಕ್ಕೆ ನೇರವಾದ ಇಲ್ಲಿನ ಕವಿತೆಗಳು ಎಲ್ಲ ವಯೋಮಾನದವರನ್ನು ಆಕರ್ಷಿಸುವಂತಹವು. ಇಲ್ಲಿ ಹೆಣ್ಣಿನ ಧ್ವನಿಯಿದೆ, ಸಮಾಜದ ಧ್ವನಿಯಿದೆ, ಶ್ರೀಸಾಮಾನ್ಯನ ಧ್ವನಿ ಇದೆ. ಅವರೆಲ್ಲರ ನೋವು ಕೂಡ ಇದೆ. ಜೊತೆಗೆ ಕವನಗಳಲ್ಲಿ ಹೊಳಹು ಇದೆ. ಈ ಎಲ್ಲ ವಿಶಿಷ್ಟತೆಗಳಿಂದ ಕವನ ಸಂಕಲನ ನಮ್ಮನ್ನು ಸೆಳೆಯುತ್ತದೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೬.೧೦. ೨೦೨೬


Comments

Popular posts from this blog