ಅಪೂರ್ವ ಸಂಗತಿಗಳ 

 ಜಿ ಎಸ್ ಶಿವರುದ್ರಪ್ಪ



ಜಿ. ಎಸ್. ಶಿವರುದ್ರಪ್ಪ ಭಾವಗೀತೆ ಕವಿ, ಸಮನ್ವಯ ಕವಿ ಎಂದು ವಿದ್ವಾಂಸರಿಂದ ಪ್ರಶಂಸೆಗೊಳಗಾದವರು. ಯಾವುದೇ ಪಂಥಕ್ಕೆ ಸೇರದವರು. ಕನ್ನಡದ ಶ್ರೇಷ್ಠ ಕಾವ್ಯ ಮೀಮಾಂಸಕರು. ದೇಶೀಯ ಸಾಹಿತ್ಯ ಸೊಗಡನ್ನು ಕವನಗಳ ಮೂಲಕ ಬಿಂಬಿಸಿದವರು. ತಮ್ಮ ಕಾವ್ಯ ಕಟ್ಟುವ ಕ್ರಿಯೆಯಲ್ಲಿ ಸ್ನೇಹ, ತ್ಯಾಗ, ಪ್ರೀತಿ, ಬಡತನದ ಆಕ್ರಂದನ, ಭ್ರಷ್ಟಾಚಾರ, ವೈಚಾರಿಕ ದೃಷ್ಟಿಕೋನ ಮುಂತಾದ ಮಾನವೀಯ ಮೌಲ್ಯಗಳನ್ನು  ಅಳವಡಿಸಿದವರು.

 ನಾಡಿನ ಬಹು ದೊಡ್ಡ ಚಿಂತಕರಾದ ಜಿಎಸ್‌ಎಸ್ ಅವರ  ಜೀವನದಲ್ಲಿ ನಡೆದ ಕೆಲವು ಮಹತ್ವದ ಘಟನೆಗಳನ್ನು ಪ್ರಸ್ತುತ ಕೃತಿಯಲ್ಲಿ ಶಿವಮೊಗ್ಗದ ಪ್ರಾಧ್ಯಾಪಕ ಅಶೋಕ ಜಿ ಎಸ್. ಕಟ್ಟಿಕೊಟ್ಟಿದ್ದಾರೆ. ಅವರ ಬಾಲ್ಯದಿಂದ ನಿವೃತ್ತಿ ಜೀವನ ಸಾಗಿಸುವವರೆಗೆ ಜೀವನದ ವಿವಿಧ ಹಂತದಲ್ಲಿ ನಡೆದ ಅತ್ಯಂತ ಮಹತ್ವದ ಘಟನೆಗಳು ಇಲ್ಲಿವೆ. ಇವು ಓದುಗರಿಗೆ ಅಪರೂಪದ ಘಟನೆಗಳಾಗಿವೆ. ಇದರಲ್ಲಿ ಎಷ್ಟೋ ಘಟನೆಗಳು ಬಹುತೇಕ ಓದುಗರಿಗೆ ತಿಳಿದಿಲ್ಲ. ಜೊತೆಗೆ ಅವರ ಪ್ರಮುಖ ಕವನಗಳೆಲ್ಲ ಯಾವ ಸಂದರ್ಭಗಳಲ್ಲಿ ರಚಿತವಾದವು ಎನ್ನುವುದನ್ನೂ ಇಲ್ಲಿ ಲೇಖಕರು ಬರೆದಿದ್ದಾರೆ.  ಇಲ್ಲಿರುವ ಒಟ್ಟು ೧೩ ಪ್ರಮುಖ ಕಿರುಬರೆಹಗಳು ಅವರ ಜೀವನದ ಒಂದೊಂದು ಘಟನೆಗೆ ಸಂಬಂಧಿಸಿದವಾಗಿವೆ. ಅವುಗಳಲ್ಲಿ ಸಂಬಂಧಿಸಿದ ಕೆಲವು ಮಹತ್ವದ ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

 ಮೊದಲ ಘಟನೆ:

ಜಿ. ಎಸ್. ಶಿವರುದ್ರಪ್ಪನವರ ತಂದೆ ಗುಗ್ಗರಿ ಶಾಂತವೀರಪ್ಪ ಮತ್ತು ಅವರ ಪತ್ನಿ ತುಂಗಾ ನದಿಯ ದಂಡೆಯ ಮೇಲೆ ಸಂಜೆಯ ಹೊತ್ತು ಕುಳಿತು ಜೋಳದ ರೊಟ್ಟಿ ಮತ್ತು ಶೇಂಗಾ ಚಟ್ನಿಯ ಗಂಟನ್ನು ಬಿಚ್ಚಿ ಉಪಾಹಾರ ಸೇವಿಸಲು ಅಣಿಯಾಗುತ್ತಿದ್ದರು. ಈ ವೇಳೆ ತಮ್ಮ ಬೆನ್ನ ಹಿಂದೆ ಮಗುವಾಗಿದ್ದ ಜಿ ಎಸ್ ಶಿವರುದ್ರಪ್ಪ ಅವರನ್ನು ಬಿಟ್ಟಿದ್ದರು. ತಂದೆ ತಾಯಿ ರೊಟ್ಟಿ ತಿಂದು ಮಾತನಾಡುತ್ತಿರುವಾಗ ಮಗು ತುಂಗಾ ನದಿಯ ಜುಳು ಜುಳು ನೀನಾದದ ನೀರು ಮತ್ತು ಅದರ ಮೇಲೆ ಕುಣಿಯುತ್ತಿದ್ದ ಬಿಸಿಲನ್ನು ಕಂಡು ಅದನ್ನು ಹಿಡಿಯಲು ನದಿಯತ್ತ ತೆರಳುತ್ತಿತ್ತು. ನದಿಯ ನೀರಿನಲ್ಲಿ ಮಗು ಇನ್ನೇನು ಮಗುಚಿಕೊಳ್ಳುವ ವೇಳೆ ಬರುತ್ತಿದ್ದ ಕೆಲವರು ‘ಅಯ್ಯೋ, ಅಲ್ಲಿ ನೋಡಿ, ಆ ಮಗು’ ಎಂದು ಕೂಗಿದಾಗ ಅವರ ತಾಯಿ ರೊಟ್ಟಿ ತುಂಡನ್ನು ಕೆಳಗೆ ಬಿಸಾಕಿ ಓಡಿ ಹೋಗಿ ಬಿದ್ದ ಮಗುವಿನ ತೋಳನ್ನು ಹಿಡಿದೆತ್ತಿ  ಆತಂಕ ತುಂಬಿದ ಮುಖದಿಂದ ಹಿಂದಕ್ಕೆ ಕರೆತರುತ್ತಾರೆ. ಆ ಮಗುವೇ ಜಿ ಎಸ್ ಶಿವರುದ್ರಪ್ಪ.

ಎರಡನೆಯ ಘಟನೆ

 ಜಿ ಎಸ್ ಶಿವರುದ್ರಪ್ಪ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದವರು. ಈಸೂರಿನ ಮನೆಯಲ್ಲಿ ತಾಯಿ  ಮಗುವನ್ನು ಮಲಗಿಸಿ, ಬಾಗಿಲನ್ನು ಓರೆ ಮಾಡಿ ಸ್ವಲ್ಪ ದೂರದಲ್ಲಿರುವ ಬಾವಿಗೆ ನೀರನ್ನು ತರಲು ಹೋಗುತ್ತಾಳೆ. ಅದೇ ವೇಳೆ ಅವರ ಪಕ್ಕದ ಹುಲ್ಲಿನ ಮನೆಗೆ ಬೆಂಕಿ ಬಿದ್ದು ಅದು ಇವರ ಮನೆಗೂ ವ್ಯಾಪಿಸುತ್ತದೆ. ಇದನ್ನು ಗಮನಿಸಿ ಓಡಿ ಬಂದ ತಾಯಿಗೆ ಮನೆ ಒಳಗೆ ಹೋಗಲು ಸಾಧ್ಯವಾಗುವುದಿಲ್ಲ. ಆದರೂ ಹೆದರದೆ ಓಡಿ ಹೋಗಿ ಮಗುವನ್ನು ಎತ್ತಿ ಹೊರಗೋಡಿ ಬರುತ್ತಾಳೆ. ನಂತರ ಊರವರು  ಸ್ವಲ್ಪ ದೂರದಲ್ಲಿರುವ ಕಟ್ಟೆಯ ಮೇಲೆ ಅವರನ್ನು ಕುಳ್ಳಿರಿಸುತ್ತಾರೆ. ಸುದ್ದಿ ತಿಳಿದ ತಂದೆ (ಶಿಕ್ಷಕ) ಶಾಂತವೀರಪ್ಪ ಶಾಲೆಯಿದಮ ಓಡಿ ಬರುತ್ತಾರೆ. ಆಗ ಊರವರು ಅವರನ್ನು ಸಮಾಧಾನಿಸಿ ‘ನಿಮ್ಮ ಹೆಂಡತಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಊರ ಹೊರಗಿನ ಕಟ್ಟೆಯ ಮೇಲೆ ಕುಳಿತಿದ್ದಾರೆ’ ಎಂದು ಹೇಳುತ್ತಾರೆ.

ಮೂರನೆಯ ಘಟನೆ:

 ಜಿಎಸ್‌ಎಸ್ ಅವರು ಪುಟ್ಟಪರ್ತಿಗೆ ಒಮ್ಮೆ ಭೇಟಿ ಕೊಟ್ಟಾಗ ಸಾಯಿಬಾಬಾರವರನ್ನು ಕಾಣುತ್ತಾರೆ. ಸಾಯಿಬಾಬಾ ಅವರ ಜೊತೆ ಏನು ಚರ್ಚಿಸಬೇಕು ಎನ್ನುವ ವಿಷಯವೇ ಅವರಿಗೆ ಗೊತ್ತಾಗುವುದಿಲ್ಲ. ಎದುರು ಹೋದಾಗ ಕೂತುಕೋ ಎಂದರಂತೆ. ಎದುರಿದ್ದ ಮಣೆಯ ಮೇಲೆ ಜಿಎಸ್‌ಎಸ್ ಕೂತರು. ಆದರೆ ಏನು ಕೇಳಬೇಕೆಂಬುದು ಗೊತ್ತಾಗದೆ ಸುಮ್ಮನಿದ್ದರು. ‘ನನಗೆಲ್ಲಾ ಗೊತ್ತು, ನೀನು ಹೇಳದಿದ್ದರೆ ಏನಂತೆ, ನೀನು ಚಿಕ್ಕಂದಿನಿಂದ ತುಂಬಾ ಕಷ್ಟಪಟ್ಟಿದ್ದೀಯ’ ಎಂದು ಸಾಯಿಬಾಬಾ ಹೇಳಿದಾಗ ‘ಹೌದು’ ಎಂದು ಉತ್ತರ ಹೇಳುತ್ತಾರೆ. ನಂತರ ‘ಈ ಕಷ್ಟಗಳಿಂದ ಪಾರು ಮಾಡಿ’ ಎಂದಷ್ಟೇ ಕೇಳುತ್ತಾರೆಂದು ಬಹುಶಃ ಸಾಯಿಬಾಬಾ ನಿರೀಕ್ಷಿಸಿದ್ದರು. ಆದರೆ ಆಗಲೂ ಜಿಎಸ್‌ಎಸ್ ಸುಮ್ಮನಿದ್ದರು. ‘ಚಿಂತೆ ಇಲ್ಲ, ನಿನ್ನ ಕಷ್ಟಗಳನ್ನು ನಾನು ನೋಡಿಕೊಳ್ಳುತ್ತೇನೆ. ಎಲ್ಲವೂ ಸರಿ ಹೋಗುತ್ತದೆ’ ಎಂದು ಸಾಯಿಬಾಬಾ ಹೇಳಿದಾಗ, ‘ಸ್ವಾಮಿ, ನನ್ನ ಕಷ್ಟಗಳನ್ನು ನೀವು ನೋಡಿಕೊಳ್ಳುವುದು ಅಂದರೆ ಏನು? ಕಷ್ಟಗಳು ಹಿಂದೆಯೂ ಬಂದಿವೆ, ಮುಂದೆಯೂ ಬರುತ್ತವೆ. ಪ್ರತಿ ಸಲ ಕಷ್ಟಗಳು ಬಂದಾಗ ನಾನು ನಿಮ್ಮ ಹತ್ತಿರ ಬರಬೇಕೇ? ಇದು ಸರಿಯೇ?’ ಎಂದು ಸಾಯಿಬಾಬಾರರಲ್ಲಿ ಪ್ರಶ್ನಿಸುತ್ತಾರ. ಆಗ ಸಾಯಿಬಾಬಾ ‘ನಾನಿರುವುದೇ ಅದಕ್ಕೆ’ ಎಂದಾಗ ಜಿ ಎಸ್ ಎಸ್, ‘ನನ್ನ ಕಷ್ಟಗಳನ್ನು ನೀವು ನೋಡಿಕೊಳ್ಳುವುದು ಬೇಡ, ಬರುವ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಕೊಡುವುದಾದರೆ ಕೊಡಿ, ಬೇರೇನೂ ಬೇಡ’ ಎಂದರಂತೆ. ಮತ್ತೆ ಮುಂದುವರೆದು ‘ನೀವು ಪವಾಡ ಇತ್ಯಾದಿಗಳನ್ನೆಲ್ಲ ಮಾಡುತ್ತೀರಲ್ಲ ಯಾಕೆ’ ಎಂದು ಜಿಎಸ್‌ಎಸ್ ಪ್ರಶ್ನಿಸಿದಾಗ, ‘ನೋಡಪ್ಪ ಜನರನ್ನು ಸನ್ಮಾರ್ಗದಲ್ಲಿ ನಡೆಸುವುದಕ್ಕೆ ಈ ಪವಾಡಗಳು ಬೇಕಾಗುತ್ತವೆ. ಭಕ್ತಿ ಶ್ರದ್ಧೆ ಕಡೆಗೆ ತೆರಳಲು ಇದು ಒಂದೇ ದಾರಿ’ ಎಂದು ಸಾಯಿಬಾಬಾ ಉತ್ತರಿಸಿದರಂತೆ.

  ಜಿಎಸ್‌ಎಸ್ ದೇವರು, ಧರ್ಮ, ವಿಧಿ, ಕರ್ಮ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಾಸ್ತವವನ್ನು ಯಥಾವತ್ತಾಗಿ ಒಪ್ಪಿಕೊಳ್ಳುವವರು. ಇದೇ ಅವರ ಜೀವನದ ಮೌಲ್ಯವಾಗಿತ್ತು. ನಾಳೆ ಏನಾಗಬೇಕು ಎಂಬ ಬಗ್ಗೆ ಅವರು ಯಾವತ್ತೂ ತಲೆಕೆಡಿಸಿಕೊಂಡಿರಲಿಲ್ಲ. ಏನು ಬರುತ್ತದೆಯೋ ಅದನ್ನು ಎದುರಿಸುತ್ತಾ ಒಪ್ಪಿಕೊಳ್ಳುವುದು ಅವರಿಗೆ ಅಭ್ಯಾಸವಾಗಿ ಬಿಟ್ಟಿತ್ತು. ಈ ವಿಷಯವನ್ನು ತಮ್ಮ ಆತ್ಮಕಥನ ‘ಚತುರಂಗ’ದಲ್ಲಿ ಅವರು ವಿವರಿಸಿದ್ದಾರೆ.

ನಾಲ್ಕನೆಯ ಘಟನೆ: 

 ಜಿಎಸ್‌ಎಸ್ ಮತ್ತು ಪ್ರೊ. ಪ್ರಭುಶಂಕರ ತುಂಬಾ ಆಪ್ತರಾಗಿದ್ದರು. ಒಂದು ದಿನ ಮೈಸೂರಿನಲ್ಲಿ ಇಬ್ಬರು ಸಂಜೆ ವೇಳೆ ತಿರುಗಾಟಕ್ಕೆ ಹೋದಾಗ ಹೈದ್ರಾಬಾದಿನ ಉಸ್ಮಾನಿಯಾ  ವಿಶ್ವವಿದ್ಯಾಲಯದಲ್ಲಿ ಕನ್ನಡ ರೀಡರ್ ಹುದ್ದೆಗೆ ಅರ್ಜಿ ಕರೆದುದ್ದನ್ನು ಪ್ರಭುಶಂಕರ ಪ್ರಸ್ತಾಪಿಸುತ್ತಾ, ತಾನು ಹೈದರಾಬಾದಿಗೆ ಹೋದಾಗ ಈ ಹುದ್ದೆಗೆ ಅರ್ಜಿ ಹಾಕಿದ್ದನ್ನು ವಿವರಿಸುತ್ತಾರೆ. ಆಗ ಜಿ ಎಸ್ ಎಸ್, ‘ನಾನು ಏನೋ ಸುಮ್ಮನೆ ಅರ್ಜಿ ಹಾಕಿದ್ದೇನೆ’ ಎಂದರು. ಆಗ ಪ್ರಭುಶಂಕರ್ ‘ನೀವು ಅರ್ಜಿ ಹಾಕಿರುವುದಾಗಿ ಹೇಳುತ್ತಿದ್ದೀರಿ. ನಾನು ಏನೋ ಸುಮ್ಮನೆ ಅರ್ಜಿ ಹಾಕಿದ್ದೇನೆ, ಎಂದಾಗ ಜಿಎಸ್‌ಎಸ್, ‘ಆ ಪೋಸ್ಟ್ ನಿಮಗೆ ಸಿಗುವುದಾದರೆ ನಾನು ಅಡ್ಡಿ ಬರುವುದಿಲ್ಲ. ಇಂಟರ್ವ್ಯೂಗೆ ಹೋಗದೆ ಇದ್ದರೆ ಆಯಿತಲ್ಲ’ ಎಂದು ಹೇಳಿದರಂತೆ. ಜಿಎಸ್‌ಎಸ್ ಮತ್ತು ಪ್ರಭುಶಂಕರ್ ಇಬ್ಬರಿಗೂ ಇಂಟರ್ವ್ಯೂಗೆ ಕರೆ ಬಂದಿತ್ತು.  ಆದರೆ ಪ್ರಭುಶಂಕರ್‌ಗೆ ಕೊಟ್ಟ ಮಾತಿನಂತೆ ಸಂದರ್ಶನಕ್ಕೆ ಜಿ ಎಸ್ ಎಸ್ ಹೋಗಲೇ ಇಲ್ಲ. ಪ್ರಭುಶಂಕರ್ ಹೈದ್ರಾಬಾದ್‌ಗೆ ರೈಲಿನಲ್ಲಿ ಹೊರಟಾಗ ಅವರನ್ನು ಬೀಳ್ಕೊಟ್ಟು ಬಂದರಂತೆ. ಈ ಸಂದರ್ಶನದಲ್ಲಿ ಪ್ರಭುಶಂಕರ್ ಆಯ್ಕೆಯಾಗಿದ್ದರು. ಇದೇ ಅಲ್ಲವೇ? ಸ್ನೇಹವೇ ತ್ಯಾಗ, ತ್ಯಾಗವೇ ಸ್ನೇಹ ಎನ್ನುವುದು. 

ಐದನೆಯ ಘಟನೆ:

ಜಿಎಸ್‌ಎಸ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ರೀಡರ್ ಹುದ್ದೆಯ ಸಂದರ್ಶನಕ್ಕಾಗಿ ತೆರಳಿದ್ದರು. ಸಂದರ್ಶನ ಸಮಿತಿಯಲ್ಲಿದ್ದ ಪ್ರೊ. ಸ. ಸ. ಮಾಳವಾಡ ಜಿಎಸ್‌ಎಸ್ ಅವರಿಗೆ ಷಡಕ್ಷರಕವಿಯ ‘ಶಬರಶಂಕರ ವಿಲಾಸ’ದ  ಒಂದು ಪದ್ಯವನ್ನು ತೋರಿಸಿ ಅದರ ಅರ್ಥವನ್ನು ಹೇಳಿ ಎಂದರಂತೆ. ಆಗ ಜಿ ಎಸ್ ಎಸ್ ‘ನೋಡಿ, ನಾನು ಒಬ್ಬ ಅಧ್ಯಾಪಕ. ೧೫ ವರ್ಷದಿಂದ ಪಾಠ ಹೇಳುತ್ತಿದ್ದೇನೆ. ತರಗತಿಗೆ ಹೋಗುವ ಮುನ್ನ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡೇ ಪಾಠ ಹೇಳುವುದು ನನ್ನ ಪದ್ಧತಿ. ಹೀಗಿರುವಾಗ ಯಾವುದೋ ಒಂದು ಪದ್ಯವನ್ನು ತಾವು ತೋರಿಸಿ ಅದಕ್ಕೆ ಅರ್ಥ ಹೇಳಿ ಎನ್ನುತ್ತಿದ್ದೀರಿ. ಯಾವುದೋ ಪದ್ಯ ಒಂದರ ಅರ್ಥವನ್ನು ನಾನು ಹೇಳಬಲ್ಲೆನೋ ಇಲ್ಲವೋ ಎಂಬ ಶಂಕೆ ನಿಮ್ಮಲ್ಲಿದೆ. ಈ ಕಾರಣದಿಂದ ನಾನು ಆ ಪದ್ಯಕ್ಕೆ ಅರ್ಥ ಹೇಳುವುದಿಲ್ಲ ಎಂದು ನೇರವಾಗಿ ನುಡಿದರಂತೆ. ಸಂದರ್ಶನ ಕಮಿಟಿಯಲ್ಲಿದ್ದ ಇನ್ನೊಬ್ಬರು ‘ಯಾವುದಾದರೂ ಒಂದು ನಿಮ್ಮದೊಂದು ಪದ್ಯ ಓದಿ’ ಎಂದರಂತೆ. ಅದಕ್ಕೆ ಜಿಎಸ್‌ಎಸ್ ತಮ್ಮ ಪದ್ಯ ಓದಿದಾಗ, ಇನ್ನೂ ಒಂದು ಪದ್ಯ ಓದಿ ಎಂದರಂತೆ. ಜಿಎಸ್‌ಎಸ್ ಮತ್ತೊಂದು ಕವನವನ್ನು ಓದಿದರು. ಹೀಗೆ ಸಂದರ್ಶನವು ಕಾವ್ಯವಾಚನ ಗೋಷ್ಠಿಯಾಗಿ ಮುಕ್ತಾಯವಾಗುತ್ತದೆ.


ಕವನಗಳನ್ನು ರಚಿಸಿದ್ದು: 


 ಜಿ ಎಸ್ ಶಿವರುದ್ರಪ್ಪ ಆರು ವರ್ಷದವರಿರುವಾಗಲೇ  ಅವರ ತಾಯಿ ತೀರಿಹೋಗಿರುತ್ತಾರೆ. ಮಮತೆ ತುಂಬಿದ ಒಂದು ಮುಖ, ಹೊಳೆಯುವ ಎರಡು ಕಣ್ಣು, ತಲೆಯ ತುಂಬಾ ಹೊದ್ದ ಹಸಿರು ಸೆರಗು ಇವಿಷ್ಟೇ ನನಗೆ ನನ್ನ ತಾಯಿಯ ಬಗ್ಗೆ ನೆನಪಿದೆ. ತುಂಬಾ ಮಧುರವಾಗಿ ಹಾಡುತ್ತಿದ್ದಳು ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆಗ ಏನೂ ಅರಿಯದ ಈ ಬಾಲಕನಲ್ಲಿ ಅಕ್ಕ ಪಕ್ಕದವರು ‘ನಿಮ್ಮ ತಾಯಿ ದೇವರ ಹತ್ತಿರ ಹೋಗಿದ್ದಾರೆ. ಸ್ವಲ್ಪ ದಿನದಲ್ಲಿ  ಬರುತ್ತಾಳೆ’ ಎಂದು ನಂಬಿಸಿದ್ದರು. ಆದರೆ ಬರಬರುತ್ತಾ ಜಿಎಸ್‌ಎಸ್ ಅವರಿಗೆ ಇದು ಸತ್ಯ ಎನಿಸಲಿಲ್ಲ. ಅಳು ಒತ್ತರಿಸಿಕೊಳ್ಳುತ್ತದೆ. ಇದೇ ವಿಷಯವನ್ನಿಟ್ಟುಕೊಂಡು ಹಲವು ವರ್ಷಗಳ ನಂತರ ತಮ್ಮ ತಾಯಿಯ ಬಗ್ಗೆ ಬರೆದ ಕವನ ‘ಅನ್ವೇಷಣೆ’.  

ಕಂಡ ಕಂಡ ಹೆಣ್ಣ ಮೊಗದಿ

 ನಿನ್ನ ಮುಖವನರಸಿದೆ 

ಏನಾದರೂ ಕಾಣಲಿಲ್ಲ

 ನಿಡುಸುಯ್ಲೊಳು ಮುಳುಗಿದೆ 

 ಎಳೆಯತನದಿ ಕಂಡ ನೆನಪು

 ಮಸುಕು ಮಸುಕು ಮನದಲಿ

 ಕರುಣೆಯಿಂದ ಕಂಡ ಕಣ್ಣು

 ಮುತ್ತನಿಟ್ಟ ತುಟಿಯ ಚಿತ್ರ

 ಇಷ್ಟು ಮಾತ್ರ ಉಳಿದಿರುವುದು

 ಸವಿ ನೆನಪಿನ ಪುಟದಲ್ಲಿ    (ದೇವಶಿಲ್ಪ ಕೃತಿ)

 ಜಿಎಸ್‌ಎಸ್ ಮೈಸೂರಿಗೆ ಬಂದು ಕನ್ನಡ ಬಿಎ ಆನರ್‍ಸ್‌ಗೆ ಸೇರಿಕೊಂಡಾಗ ತ ಸು ಶಾಮರಾಯರು ಕಾವ್ಯ ರಚನೆಗೆ ಪ್ರೇರಕವಾಗುತ್ತಾರೆ, ಪೋಷಕ ಗುರುಗಳಾಗುತ್ತಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇಬ್ಬರೂ ಕುಳಿತುಕೊಂಡಾಗ  ಜಿಎಸ್‌ಎಸ್ ಅವರಿಗೆ ಕವನ ಹೇಳುವಂತೆ ಸೂಚಿಸುತ್ತಾರೆ. ಆ ಕವನಗಳನ್ನು ತಲ್ಲೀನತೆಯಿಂದ ಅವರು ಆಲಿಸುತ್ತಿದ್ದರು. ಆಗ ರಚನೆಯಾದ ಕವನವೇ ‘ತೃಪ್ತಿ’ 

ಎದೆ ತುಂಬಿ ಹಾಡಿದೆನು ಅಂದು ನಾನು

 ಮನವಿಟ್ಟು ಕೇಳಿದಿರಿ ಅಲ್ಲಿ ನೀವು

 ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು

 ಕೇಳುವಿರಿ ಸಾಕೆನಗೆ ಅದುವೇ ಬಹುಮಾನ

 ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? (ಸಾಮಗಾನ ಕೃತಿ) 

 ಬಿಎಸ್‌ಎಸ್ ಅವರ ತಂದೆ ಶಾಂತವೀರಪ್ಪ ತುಂಗಭದ್ರಾ ನದಿಯ ಹೊನ್ನಾಳಿ ತಾಲೂಕಿನ ಗ್ರಾಮ ಒಂದರಲ್ಲಿ ಶಿಕ್ಷಕರಾಗಿದ್ದರು. ಬಾಲಕ ಜಿಎಸ್‌ಎಸ್ ಪ್ರತಿದಿನ ಸ್ಕೂಲ್ ಮುಗಿದ ನಂತರ ಸಂಜೆ ವೇಳೆ ಹೊಳೆಯ ಕಡೆಗೆ ಓಡಾಡುತ್ತಿದ್ದರು. ಅಲ್ಲಿ ನೀರಿನ ಹರವು ಇವರನ್ನು ಆಕರ್ಷಿಸುತ್ತಿತು. ಊರಿನ ಗುಡಿಸಲುಗಳ ಚಾವಣಿ, ಸತ್ತು ಬಿದ್ದ ಪ್ರಾಣಿಗಳು ತೇಲಿ ಹೋಗುವುದು, ಬಟ್ಟೆ ಒಗೆಯುವರು, ಸ್ನಾನ ಮಾಡುವವರು, ರಭಸದಿಂದ ನೀರು ಹರಿಯುತ್ತಿರುವುದು, ನಾಲೆಯ ಪಕ್ಕಲ್ಲಿ ಕುಳಿತಿ ಊಟ ಮಾಡುವವರು,  ದಡದಲ್ಲಿ ನಿಂತ ಮರಗಳೆಲ್ಲ ತಲೆಯನ್ನು ಕೆದರಿಕೊಂಡು ಹೊಯ್ದಾಡುವುದು, ಬಡವರ ಮನೆಯವರು ಮಡಿಕೆ- ಕುಡಿಕೆಗಳನ್ನು ಹಿಡಿದುಕೊಂಡು ನೀರು ತುಂಬಲು ಹೊರಗೆ ಬರುತ್ತಿದ್ದು ಮುಂತಾದ ವಿಸ್ಮಯ ಹಾಗೂ ಭಯದ ದೃಶ್ಯಗಳನ್ನು ನೋಡುತ್ತಾ ನಿಲ್ಲುತ್ತಿದ್ದರು. ಆಗ ಜಿ ಎಸ್ ಎಸ್ ಬರೆದ ಕವನ ಪ್ರಕೃತಿ  ಕವಿ.

ವ್ಯೋಮಕೇಶನಿಂದ ಗಂಗೆ 

ಭಗೀರಥನ ಹತ್ತಿರ 

ಇಳಿದು ಬಂದ ಹಾಗೆ 

ಪ್ರಕೃತಿ ಬಂತು ಕವಿಯ ಹತ್ತಿರ

 ಅದುವರೆಗೂ ಪಡೆಯದಿದ್ದ 

ತೃಪ್ತಿಯನ್ನು ಪಡೆಯಿತು

 ಕವಿಯ ಕೊರಳಿನಲ್ಲಿ ತಾನೇ

 ಲಹರಿ ಲಹರಿ ಹೊಮ್ಮಿತು (ಚೆಲವು- ಒಲವು ಸಂಕಲನ) 

 ಹೊನ್ನಾಳಿಯಿಂದ ಹೊಸದುರ್ಗ ತಾಲೂಕಿನ ಬಯಲು ಸೀಮೆಯಹಳ್ಳಿ ಬೆಲಗೂರಿಗೆ ಜಿಎಸ್‌ಎಸ್ ತಂದೆಗೆ ವರ್ಗವಾಗುತ್ತದೆ ಅದು ತೆಂಗಿನ ಸೀಮೆ. ಇನ್ನೊಂದೆಡೆ ಬಯಲು ಸೀಮೆ. ಎಲ್ಲಿ ನೋಡಿದರೂ ತೋಟದ ಹರವು, ನೇಕಾರಿಕೆ ಆಕರ್ಷಕವಾಗಿತ್ತು. ಊರ ಮಕ್ಕಳೊಂದಿಗೆ ಆಡುತ್ತಲೇ ಅವರ ಪಾಲಿಗೆ ದೊಡ್ಡ ಪವಾಡವಾಗಿ ಇದು ತೋರುತ್ತದೆ. ಮಧ್ಯೆ ಬಯಲು ಸೀಮೆಯ ಆದಕಾರಣ ನೀರಿನ ಸಮಸ್ಯೆ ಅಲ್ಲಿ ಕಾಣುತ್ತಿತ್ತು. ಜೊತೆಗೆ ಮಳೆಯೂ ಬಾರದಂತಿತ್ತು. ಆಗ ಜಿ ಎಸ್ ಎಸ್ ಬರೆದ ಕವನ ‘ನೆಲದ ಕರೆ’

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ 

ನಾಲ್ಕು ಹನಿಯ ಚೆಲ್ಲಿ 

ದಿನವೂ ಕಾದು ಬಾಯಾರಿ ಬೆಂದೆ 

ಬೆಂಗದಿರ ತಾಪದಲ್ಲಿ (ಸಾಮಗಾನ ಕೃತಿ) 

 ಮೈಸೂರಿನಲ್ಲಿ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಒಂದು ದಿನ ಕಾಲೇಜಿನಿಂದ ಮನೆಗೆ ಮರಳುತ್ತಿದ್ದರು. ಅವರ ಮುಂದೆ ನೀಳ ಜಡೆಯ ಹುಡುಗಿಯೊಬ್ಬಳು ಹೋಗುತ್ತಿದ್ದಳು. ಅವಳ ಜಡೆ ಬೆನ್ನ ಹಿಂದೆ ಅತ್ತ ಇತ್ತ ಓಡಾಡುತ್ತ, ಆಕರ್ಷಿಸುತ್ತಿತ್ತು. ಮನೆಗೆ ಹೋದವರು ಇದನ್ನೇ ಇಟ್ಟುಕೊಂಡು ಬರೆದ ಕವನ ‘ಜಡೆ’ 

ಲಲನೆಯರ ಬೆನ್ನಿನೆಡೆ 

ಹಾವಿನೊಲು ಜೋಲ್ವ ಜಡೆ 

ಕಾಳಿಂದಿಯಂತಿಳಿದು ಕೊರಳೆಡೆಗೆ ಕವಲೊಡೆದು

 ಅತ್ತಿತ್ತ ಹರಿದ ಜಡೆ

 ಚೇಳ್ ಕೊಂಡಿಯಂಥ ಜಡೆ 

ಮೋಟು ಜಡೆ ಛೋಟು ಜಡೆ 

ಚಿಕ್ಕವರ ಚಿನ್ನ ಜಡೆ  (ಚೆಲವು- ಒಲವು ಸಂಕಲನ)

ಹಿಗೆ ಈ ಕೃತಿಯಲ್ಲಿ ಜಿ ಎಸ್ ಎಸ್ ಅವರ ಕುರಿತಾದ ಅನೇಕ ಮಹತ್ವದ ವಿಚಾರಧಾರೆಗಳು ಅಡಗಿವೆ. ಸಾಹಿತ್ಯಾಭ್ಯಾಸಿಗಳಿಗೆ ಇವು ಮಹತ್ವದ್ದಾಗಿವೆ. ಇಂತಹ ಅಪೂರ್ವ ಸಂಗತಿಗಳನ್ನು ಅರಿತುಕೊಳ್ಳುವ ಮೂಲಕ ಒಬ್ಬ ಕವಿ, ಸಾಹಿತಿಯನ್ನು ಇನ್ನಷ್ಟು ನಾವು ಆಳವಾಗಿ ಅರ್ಥಮಾಡಿಕೊಳ್ಳಬಹುದು.  


-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

........................




Comments

Popular posts from this blog