ಮಕ್ಕಳ ಹೃದಯಕ್ಕೆ ನಾಟುವ
‘ಹಿತೋಪದೇಶ’
ಇದು ಮಕ್ಕಳ ಕಥಾ ಮಾಲಿಕೆ. ನಾ. ಡಿಸೋಜಾ ಇದರ ಲೇಖಕರು. ಪಂಚತಂತ್ರ, ಅಕ್ಬರ- ಬೀರಬಲ್ಲರ ಕಥೆಗಳು, ತೆನಾಲಿ ರಾಮನ ಕಥೆಗಳು ಮತ್ತು ಹಿತೋಪದೇಶ ಅದೆಷ್ಟು ಸಲ ಪ್ರಕಟವಾಗಿದೆಯೋ ಗೊತ್ತಿಲ್ಲ. ಓದುಗರು ಹೆಚ್ಚುತ್ತಿರುವಂತೆ ಮತ್ತೆ ಇವು ಕಾಣಿಸಿಕೊಳ್ಳುತ್ತವೆ. ನಾ. ಡಿಸೋಜಾ ಮಕ್ಕಳ ಕಥಾ ಪ್ರಪಂಚದಲ್ಲೂ ಕೈಯಾಡಿಸಿದವರು. ಅವರು ಮಕ್ಕಳ ಕಥಾಮಾಲೆಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲೊಂದು ಹಿತೋಪದೇಶ. ನಾರಾಯಣ ಪಂಡಿತ ಎನ್ನುವವನು ಹಿತೋಪದೇಶ ಕೃತಿಯನ್ನು ಸಂಸ್ಕೃತದಲ್ಲಿ ಬರೆದವನು. ಕನ್ನಡದಲ್ಲಿ ಬೇರೆ ಬೇರೆ ಲೇಖಕರು ಆಯಾಯ ಕಾಲಕ್ಕೆ ತಕ್ಕಂತೆ ಅನುವಾದಿಸಿದ್ದಾರೆ.
ಪ್ರಸ್ತುತ ನಾ. ಡಿಸೋಜಾ ಅವರು, ಮಕ್ಕಳ ಜ್ಞಾನ, ಕಲ್ಪನಾ ಶಕ್ತಿ, ಮನರಂಜನೆ, ನೀತಿ ಬೋಧನೆ ಹೀಗೆ ಹತ್ತಾರು ಆಯಾಮದಿಂದ ಮಕ್ಕಳ ಕಥೆಯನ್ನು ಆಯ್ದು ಪ್ರಕಟಿಸಿದ್ದಾರೆ. ಇದರಲ್ಲಿ ಸಿದ್ಧಹಸ್ತರಾಗಿರುವ ಲೇಖಕರು, ಮಕ್ಕಳಿಗೆ ಸಹಜವಾಗಿ ಇಷ್ಟವಾಗುವ ಸಾಹಸ, ಸ್ನೇಹ, ರಂಜನೆ, ಬಾಂಧವ್ಯ ಎಲ್ಲವನ್ನೂ ಸಮಪ್ರಮಾಣದಲ್ಲಿ ಹೊಂದಿರುವ ವಿಷಯವನ್ನಿಟ್ಟುಕೊಂಡು ಕಥೆ ರಚಿಸಿದ್ದಾರೆ. ಈ ಕೃತಿ ಓದಿಸಿಕೊಂಡು ಮಧುರ ಅನುಭವದಲ್ಲಿ ಮುಳುಗಿಸಿ ಬಿಡುತ್ತದೆ. ಇಲ್ಲಿನ ಕಥೆಗಳು ಮಕ್ಕಳಿಗೆ ಹೃದಯಂಗಮವಾಗಿವೆ, ಹೃದಯ ಸಾಮೀಪ್ಯವೂ ಆಗಿವೆ. ಪ್ರೀತಿ, ಕರುಣೆ, ವಾತ್ಸಲ್ಯ, ಕಾಳಜಿ, ಬುದ್ಧಿವಂತಿಕೆ ಎಲ್ಲಕ್ಕೂ ಮಿಗಿಲಾಗಿ ಸ್ನೇಹ ಮಕ್ಕಳಲ್ಲಿ ಅಗತ್ಯ. ಈ ಎಲ್ಲಾ ಮುತ್ತುಗಳನ್ನು ಸೇರಿಸಿದ ಮಾಲೆ ಈ ಕೃತಿಯಾಗಿದೆ. ಪ್ರಾಣಿ- ಪಕ್ಷಿಗಳೇ ಇಲ್ಲಿನ ಪ್ರತಿ ಕಥೆಯ ವಸ್ತು. ಆದರೆ ಪ್ರತಿ ಕಥೆಯು ಒಂದು ನೀತಿಯನ್ನು ಪ್ರತಿಪಾದಿಸುವುದು ಇದರ ವಿಶೇಷ.
ಇಲ್ಲಿನ ಕಥೆಗಳು ತುಂಬಾ ಸುಲಭವಾಗಿ ಮಕ್ಕಳಿಗೆ ಅರ್ಥವಾಗುವಂತೆ ಅಷ್ಟೇ ರಂಜನೀಯವಾಗುವಂತೆಯೂ ಇವೆ. ಹೃದಯದಲ್ಲಿ ತಮ್ಮ ಛಾಪನ್ನು ಸುಂದರವಾಗಿ ಒತ್ತಿ ಅರಳಿಸುತ್ತವೆ. ಗುಲಾಬಿ ಹೂವಿನಂತೆ ಮುದ ಕೊಡುತ್ತವೆ. ಮನಸ್ಸಿಗೆ ನಾಟುವ ರೀತಿಯಲ್ಲಿ, ಸುಲಭವಾಗಿ ಅರ್ಥವಾಗುವಂತೆ, ಜೊತೆಗೆ ಅಷ್ಟೇ ಕುತೂಹಲವನ್ನು ಉಂಟುಮಾಡುವಂತಿವೆ. ರಜೆಯ ದಿನಗಳನ್ನು ಕಳೆಯಲು ಮಕ್ಕಳಿಗೆ ಇಂತಹ ಅತ್ಯುತ್ತಮ ಕಥಾ ಪುಸ್ತಕಗಳನ್ನು ಕೊಡಬೇಕು. ಆಗ ಮಾತ್ರ ಕೃತಿಯ ಉದ್ದೇಶ ಈಡೇರುತ್ತದೆ.
ಕೃತಿಯಲ್ಲಿ ೧೫ ಕಿರುಕಥೆಗಳಿವೆ. ಮೊಂಡುತನ, ಹಿಂಸೆ, ಜಂಭ, ಸೇಡಿನ ಮನೋಭಾವ ಹೊಂದಿದವರು, ಇತರರಿಗೆ ಸದಾ ಕಾಟ ಕೊಡುತ್ತಾ ಪೀಡಿಸುವವರು ಇನ್ನೊಬ್ಬರು ನೇಯ್ದ ಬಲೆಗೆ ಹೇಗೆ ಸುಲಭದಲ್ಲಿ ಬಿದ್ದು ಪಶ್ಚ್ಚಾತ್ತಾಪ ಪಡುತ್ತಾರೆ ಎನ್ನುವುದನ್ನು ಆನೆಯ ಮೂಲಕ ಮೊದಲ ಕಥೆಯಲ್ಲಿ, ದುಷ್ಟರ ಸಹವಾಸ ಮಾಡಿದರೆ ಕೆಟ್ಟದ್ದು ಸಂಭವಿಸುತ್ತದೆ. ಎದುರಿನಲ್ಲಿ ಮಾತ್ರ ಮಿತ್ರರಂತೆ ನಟಿಸುವವರು ಒಳಗಿಂದೊಳಗೆ ನಮ್ಮ ವಿರುದ್ಧವೇ ಕತ್ತಿ ಮಸೆಯುತ್ತಾರೆ ಎನ್ನುವುದಕ್ಕೆ ಬಡಪಾಯಿ ಒಂಟೆ ಉದಾಹರಣೆಯಾಗಿದ್ದನ್ನು ಎರಡನೆಯ ಕಥೆಯಲ್ಲಿ, ಅತಿಯಾಸೆ ಗತಿಗೆಡಿಸಿತು ಎನ್ನುವ ಗಾದೆಮಾತನ್ನು ಸಾಬೀತುಪಡಿಸುವಂತೆ ನರಿಯೊಂದು ತನ್ನ ಸಾವನ್ನು ತಾನೇ ತಂದುಕೊಂಡ ಕಥೆ ಇದರಲ್ಲಿದೆ.
ಯಾವತ್ತಿದ್ದರೂ ಹುಲಿ ಹುಲಿಯೇ, ಅದು ತನ್ನ ಸ್ವಭಾವ ಬದಲಿಸುವುದಿಲ್ಲ. ಆದರೂ ಪ್ರವಾಸಿಯೊಬ್ಬ ಹುಲಿಯ ಮರುಳು ಮಾತಿಗೆ ಮನಸೋತು, ಬಂಗಾರದ ಆಸೆಗಾಗಿ ತನ್ನ ಜೀವವನ್ನು ಕಳಕೊಂಡ ಕಥೆ ಇದರಲ್ಲಿದೆ. ಸಮಸ್ಯೆಗೆ ನೈಜ ಕಾರಣ ಅರಿಯದೆ ಮನಬಂದಂತೆ ಮಾತನಾಡಬಾರದು, ಸಮಸ್ಯೆ ಏನೆನ್ನುವುದನ್ನು ಅರಿತರೆ ಸುಲಭದಲ್ಲಿ ಅದನ್ನು ಪರಿಹರಿಸಬಹುದೆನ್ನುವುದನ್ನು ಮತ್ತೊಂದು ಕಥೆ ವಿವರಿಸುತ್ತದೆ. ಎದುರಾದ ಅಪಾಯವನ್ನು ಆ ಕ್ಷಣದಲ್ಲಿ ಎದುರಿಸಬೇಕು, ಅಥವಾ ಅದರಿಂದ ಪಾರಾಗುವ ಜಾಣತನ ತೋರಬೇಕು, ವಿಚಾರ ಮಾಡದೆ ಹೆಜ್ಜೆ ಇಡಬಾರದು ಎನ್ನುವುದನ್ನು ಮೊಲದ ಕಥೆಯ ಮೂಲಕ, ನಮ್ಮ ಕೆಲಸ ಯಾವುದೋ ಅದನ್ನಷ್ಟೇ ಮಾಡಬೇಕು. ಇನ್ನೊಬ್ಬರನ್ನು ಮೆಚ್ಚಿಸಲು ನಮ್ಮದಲ್ಲದ ಕೆಲಸ ಮಾಡಿದರೆ ಪೆಟ್ಟು, ನೋವು ತಿನ್ನಬೇಕಾಗುತ್ತದೆ ಎನ್ನುವುದನ್ನು ನಾಯಿ ಮತ್ತು ಕತ್ತೆಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಉಪಾಯದಿಂದ ಸಾಧ್ಯವಾದದ್ದು, ಶಕ್ತಿಯಿಂದ ಸಾಧ್ಯವಾಗದು, ಅಪಾಯ ಎರಗುವ ಮುನ್ನವೇ ಅದರಿಂದ ಪಾರಾಗಬೇಕೆಂಬ ನೀತಿಯನ್ನು ಮೊಲ ಮತ್ತು ಸಿಂಹದ ಮೂಲಕ, ಮೋಸ ಮಾಡಿದರೆ ಅದರ ಫಲವನ್ನು ಉಣ್ಣಬೇಕಾಗುತ್ತದೆ ಎನ್ನುವುದಕ್ಕೆ ಮೀನು- ಏಡಿಯ ಕಥೆ, ಅಯೋಗ್ಯರಿಗೆ ಉಪದೇಶ ಮಾಡಬಾರದು ಎನ್ನುವುದನ್ನು ಹಕ್ಕಿಗಳು ಮತ್ತು ಕೋತಿಗಳ ಕಥೆಯ ಮೂಲಕ, ಪ್ರಯೋಜನವಿದ್ದರಷ್ಟೇ ಜನರು ನಮ್ಮ ಹತ್ತಿರ ಬರುತ್ತಾರೆ, ಬಳಸಿಕೊಳ್ಳುತ್ತಾರೆ. ನಮ್ಮಿಂದ ಪ್ರಯೋಜನವಿಲ್ಲ ಎಂದಾದರೆ ದೂರಮಾಡುತ್ತಾರೆ ಎನ್ನುವುದನ್ನು ಸಿಂಹ- ಇಲಿ, ಬೆಕ್ಕಿನ ಕಥೆಯ ಮೂಲಕ ನಿರೂಪಿಸಿದ್ದಾರೆ.
ಹೀಗೆ ಕೃತಿಯಲ್ಲಿನ ಎಲ್ಲಾ ಕಥೆಗಳು ಅತ್ಯತ್ತಮ ಸಂದೇಶ ಸಾರುವ ಮೂಲಕ ಬೆಳೆಯುವ ಮಕ್ಕಳ ಮನದಲ್ಲಿ ಸದ್ವಿಚಾರ, ಸತ್ಕರ್ಮ, ಸದುದ್ದೇಶದ ಬೀಜವನ್ನು ಬಿತ್ತುತ್ತವೆ. ಇಂತಹ ಕಥೆಗಳು ಇಂದಿನ ಮಕ್ಕಳಿಗೆ ಅವಶ್ಯ. ಇದರ ಮೂಲಕ ನೀತಿ, ಸಂಸ್ಕಾರಯುತ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸುಸಂಸ್ಕೃತ ವ್ಯಕ್ತಿಯಾಗಲು ಇದು ಸಹಾಯಕವಾಗಬಲ್ಲದು.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೧೦. ೧೦. ೨೦೨೬
.............................

Comments
Post a Comment