ಧುಮಿಕ್ಕಿ ಹರಿಯುವ ಪ್ರೇಮಿಗಳ ಭಾವನೆಗಳ
‘ಗಾಮಿನಿ’
ವಿಜಯನಗರದ ಅರಸರ ಕಾಲದಲ್ಲಿ ಕೂಡ್ಲಿಗಿ ತಾಲೂಕು ತಿಮಲಾಪುರದ ಸೇನಾನಿ ಮತ್ತು ಅಲ್ಲಿನ ಶ್ರೀಮಂತ ಕುಟುಂಬದ ಯುವತಿಯ ಪ್ರೇಮದ ಕಥೆಯ ಕಾದಂಬರಿ ಇದು. ಐತಿಹಾಸಿಕವಾಗಿ ಇದು ಆರಂಭವಾಗುವುದಾದರೂ ನಂತರ ಇನ್ನೊಂದು ಜನ್ಮದಲ್ಲಿ ಅವರು ಕಾಲೇಜು ಯುವಕ-ಯುವತಿಯರಾಗಿ, ಪ್ರೇಮಿಗಳಾಗಿ, ಪ್ರೇಮವೇ ಅಂತಿಮ ಎನ್ನುತ್ತಾ ಒಬ್ಬರಿಗೊಬ್ಬರು ಜೀವ ಕೊಡಲು ಸಿದ್ಧರಿರುತ್ತಾರೆ. ಹೀಗೆ ಇದು ಸಾಮಾಜಿಕ ಕಾದಂಬರಿಯಾಗಿ ಪರಿವರ್ತನೆಯಾಗುತ್ತದೆ.
ಜಿ ಎಲ್ ಶಿವರಾಜ್ ಯಾದವ್ ಅವರ ಕಾದಂಬರಿ. ಇದು. ಜಾತೀಯತೆ, ಧನದಾಹದಿಂದ ಹೇಗೆ ಪ್ರೇಮಕ್ಕೆ ಕಂಟಕ ಎದುರಾಗುತ್ತದೆ. ಆದರೂ ಇದನ್ನು ಧಿಕ್ಕರಿಸಿ ನಿಂತ ಯುವ ಪ್ರೇಮಿಗಳಿಗೆ ಕುಟುಂಬದವರು ಹೇಗೆ ಅಡ್ಡಗಾಲಾಗುತ್ತಾರೆ, ಅಸಹಾಯಕತೆ ಮತ್ತು ಪ್ರೀತಿಯ ಅನಿರ್ವಾರ್ಯತೆ ಇಲ್ಲಿ ಮಿಳಿತವಾಗಿ ಕಥಾ ವಸ್ತು ಮಾನವೀಯವಾಗಿ ರೂಪಾಂತರವಾಗಿದೆ. ನಿಸ್ವಾರ್ಥ ತ್ಯಾಗದ, ಪ್ರೇಮೋತ್ಸವದಲ್ಲಿ ಧುಮಿಕ್ಕಿ ಹರಿಯುವ ಭಾವನೆಗಳಿವೆ. ಪ್ರೀತಿ- ಪ್ರೇಮದ ಬಗ್ಗೆ ಅನೇಕ ಡೈಲಾಗ್ಗಳಿವೆ. ಪ್ರೇಮದ ಕನಸನ್ನು ಬೆನ್ನತ್ತುವುದು, ಹಲವರು ಅದನ್ನು ತಡೆಯಲು ಪ್ರಯತ್ನಿಸುವುದು, ಪ್ರೇಮಕ್ಕಾಗಿ ಯುವಕ - ಯುವತಿ ತಮ್ಮನ್ನೇ ಅರ್ಪಿಸಿಕೊಳ್ಳಲು ಸಿದ್ಧರಾಗುವುದು ಕಾದಂಬರಿಯ ತಿರುಳು.
ಕಾದಂಬರಿಯ ಹೆಸರು ‘ಗಾಮಿನಿ’ ಇಲ್ಲಿ ಪ್ರೀತಿ-ಪ್ರೇಮದ ರೂಪದಲ್ಲಿ ಹರಿಯುವುದನ್ನು ಕಾಣಬಹುದು. ಗ್ರಾಮದಲ್ಲಿ ಬಡ ದಂಪತಿಗಳಾದ ಲಕ್ಷ್ಮಣ ಮತ್ತು ಎನ್ನುವವರು ಮಕ್ಕಳಿಲ್ಲದೆ ಪರಿತಪಿಸುತ್ತಿರುವಾಗ ನವಜಾತ ಶಿಶು ಒಂದನ್ನು ಹಿಡಿದು ಬಂದು ಆತನಿಗೆ ಕೊಡುತ್ತಾನೆ. ಭಾರ್ಗವರಾಮ ಎಂದು ಹೆಸರಿಡಲಾಗುತ್ತದೆ. ಈತ ಪ್ರಾಯಕ್ಕೆ ಬರುವ ಹೊತ್ತಿಗೆ ಯುದ್ಧ ತರಬೇತಿ ಮುಗಿಸಿ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿರುತ್ತಾನೆ. ಕೂಡ್ಲಿಗಿ ಸಮೀಪದ ನಾಗರದುರ್ಗ ಗ್ರಾಮದ ಶ್ರೀಮಂತ ಕುಟುಂಬದ ನರಸಿಂಹಯ್ಯನ ಮಗಳೇ ಕನವಕವತಿ.
ಅರಸರು ತಮ್ಮ ಸಂಪತ್ತನ್ನು ಕಾಪಾಡಲು ಅದನ್ನು ಗೌಪ್ಯ ರೂಪದಲ್ಲಿ ಭೂಗರ್ಭದ ಆಳಕ್ಕೆ ಇಳಿಸುತ್ತಿದ್ದರು. ಅದರ ಭದ್ರತೆಗಾಗಿ ತ್ರಿಶಕ್ತಿ ಕೂಟ ನಿರ್ಮಾಣ ಮಾಡುತ್ತಿದ್ದರು. (ಭಾಗರ್ವರಾಮ ಇಲ್ಲಿನ ಕಥಾನಾಯಕ ಹೇಮಂತನ ಪೂರ್ವ ಜನ್ಮದ ಹೆಸರು) ಸೇನಾಧಿಪತಿಯಾಗಿರುತ್ತಾನೆ. ಹೇಗಾದರೂ ಮಾಡಿ ಈ ನಿಧಿ ಪಡೆಯುವ ಆಸೆ ಆತನಿಗೆ. ಕನಕವತಿ (ಇಲ್ಲಿನ ನಾಯಕಿ ಪ್ರಣವಿಯ ಗತ ಜನ್ಮದ ಹೆಸರು) ಭಾರ್ಗವರಾಮನ ಕಣ್ಣಿಗೆ ಬಿದ್ದಾಗಿನಿಂದ ಇಬ್ಬರೂ ಮನಸೋತು ಪ್ರೇಮಿಗಳಾಗುತ್ತಾರೆ. ಬಿಟ್ಟಿರದವರಾಗುತ್ತಾರೆ. ಕೆಲವು ದಿನದ ನಂತರ ಮತ್ತೆ ಭೇಟಿಯಾದಾಗ ಊರು ಬಿಟ್ಟು ದೂರ ಹೋಗಿ ನೆಲೆಸಲು ನಿರ್ಧರಿಸುತ್ತಾರೆ. ಆ ಪ್ರಕಾರ ಊರು ಬಿಡಲು ನಿರ್ಧರಿಸುತ್ತಾರೆ ಅದೇ ವೇಳೆ ಆತನ ಹಣೆಗೆ ಚುಂಬಿಸಿ ಅಲ್ಲಿಂದ ಹೊರಡುವಾಗ ಆಕೆಯ ಮನೆ ಕೆಲಸದವರು ಇದನ್ನು ನೋಡಿ ಆಕೆಯ ತಂದೆಗೆ ಮಾಹಿತಿ ನೀಡುತ್ತಾರೆ. ಮನೆಯಲ್ಲಿ ಕೂಡಿ ಹಾಕಿ ಚರ್ಮ ಕಿತ್ತು ಬರುವಂತೆ ತಂದೆ ಬಾರಿಸುತ್ತಾನೆ. ಬೇರೆ ವರನೊಂದಿಗೆ ಮದುವೆ ಮಾಡಲು ನಿಶ್ಚ್ಚಯಿಸುತ್ತಾನೆ
ಧನದಾಹಿಯಾಗಿದ್ದ ನರಸಿಂಹಯ್ಯ ನಿಧಿಗಾಗಿ ತನ್ನ ಸಹಚರರೊಂದಿಗೆ ಬಲಿ ಕೊಡುವುದು, ವಿವಿಧ ಪೂಜೆ ಮಾಡಿಸುವುದನ್ನು ಮಾಂತ್ರಿಕರು ಹೇಳಿದಂತೆ ನಡೆಸುತ್ತಾನೆ. ಕರಾಳ ಅಮಾವಾಸ್ಯೆಯಂದು ಮೈ ನೆರೆದು ಒಂದು ವರ್ಷ ತುಂಬುವುದರಲ್ಲಿರುವ ಕನ್ಯೆಯನ್ನು ಕರೆತಂದು, ಹೋಮದ ಕುಂಡದ ಮೇಲೆ ಬೆತ್ತಲೆ ಮಲಗಿಸಿ, ಅವಳ ಉದರಲ್ಲಿನ ಗರ್ಭಚೀಲವನ್ನು ತೆಗೆದು ಭೂತಮಂತ್ರದೊಂದಿಗೆ ಬಲಿಕೊಟ್ಟರೆ ನಿಧಿ ಸಿಗುತ್ತದೆ ಎಂದು ಹೇಳಿದ್ದರಿಂದ ಈ ಕೆಲಸಕ್ಕಿಳಿಯುತ್ತಾನೆ. ದುರಂತವೆಂದರೆ, ಮನೆಯಲ್ಲಿ ಬಂಧಿತಳಾಗಿದ್ದ ಕನವಕವತಿಯನ್ನೇ ಆಯ್ಕೆಮಾಡಲಾಗುತ್ತದೆ.
ಈ ವಿಷಯವರಿತ ಆಕೆಯ ತಾಯಿ ಆಕೆಯನ್ನು ಬಿಡುಗಡೆ ಮಾಡಿ, “ಮನೆ ಬಿಟ್ಟು ಹೋಗಿಬಿಡು ಮಗಳೆ, ಎಲ್ಲೋ ಒಂದು ಕಡೆ ನೀನು ಇಷ್ಟಪಟ್ಟ ಆ ಭಾರ್ಗವನ ಜೊತೆ ಸುಖವಾಗಿರು” ಎನ್ನುತ್ತಾಳೆ.
ಮುಂದೆ ಆಕೆ ಎಲ್ಲಿಗೆ ಹೋದಳು, ಆಕೆಗೆ ಭಾರ್ಗವರಾಮ ಸಿಕ್ಕಿದನೇ, ಬಲಿಯಿಂದ ಹೇಗೆ ಪಾರಾದಳು, ಪಾರು ಮಾಡಿದವರಾರು? ಇಬ್ಬರೂ ಒಂದಾದರೇ ಎನ್ನುವುದರ ಕುತೂಹಲಕರ ಅಂತ್ಯ ಕಾದಂಬರಿಯಲ್ಲಿದೆ.
ಇನ್ನೊಂದು ಜನ್ಮದಲ್ಲಿ, ಇಬ್ಬರೂ ಕಾಲೇಜಿನಲ್ಲಿ ಕ್ಲಾಸ್ಮೇಟ್ ಆಗಿ ಪ್ರೇಮದಲ್ಲಿ ಸಿಲುಕುತ್ತಾರೆ. ಹೇಮಂತ ಮತ್ತು ಪ್ರಣವಿಯ ಪ್ರೀತಿಗೆ ಯುವತಿಯ ತಾಯಿ ಮತ್ತು ಅಣ್ಣ ಅಡ್ಡಿಪಡಿಸುವುದು, ಆಕೆಯನ್ನು ಬಂಧಿಸಿಟ್ಟು ಥಳಿಸುವುದು, ತನ್ನ ಜೀವನ ಏನಿದ್ದರೂ ಹೇಮಂತನಿಗೆ ಮೀಸಲು, ತಾನು ಅವನ ಹೃದಯದಲ್ಲಿ ನೆಲೆಸಿದ್ದೇನೆ ಎಂದರೂ ಇದ್ಯಾವುದಕ್ಕೂ ಕಿವಿಗೊಡದೆ ನಾಯಕನಿಗೆ ಗೊತ್ತಿಲ್ಲದಂತೆ ವಿದೇಶದಲ್ಲಿರುವವನಿಗೆ ಮದುವೆ ಮಾಡಿಕೊಡುವುದು, ಮದ್ವೆಯಾಗಿ ವಿದೇಶಕ್ಕೆ ಮರಳಿದ ವರ್ಷದಲ್ಲೇ ಆ ಯುವಕನಿಗೆ ಪಾರ್ಶ್ವವಾಯು ಸಂಭವಿಸಿ ಜೀವನ ಅಲ್ಲೋಲಕಲ್ಲೋಲವಾಗುವುದು, ಈ ಮಧ್ಯೆ ಪ್ರಣವಿಯ ಗರ್ಭದಲ್ಲ್ಲಿ ಮಗು ಬೆಳೆಯುವುದು, ನಾಯಕ ಹೇಮಂತ್ ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಟೆಕ್ನಿಷಿಯನ್ ಆಗಿ ಉತ್ತಮ ಕೆಲಸಕ್ಕೆ ಸೇರುವುದು, ಗಂಡನ ಜೀವನ ಚಿಕಿತ್ಸೆಯ ವೇಳೆ ಆಸ್ಪತ್ರೆಯಲ್ಲಿದ್ದ ಪ್ರಣವಿ ರಾತ್ರೋರಾತ್ರಿ ಅಲ್ಲಿಂದ ನಾಪತ್ತೆ ಆಗುವುದು, ಈ ಬಗ್ಗೆ ದೂರು ನೀಡದಿರುವುದು, ಕರಾಳ ಸೂರ್ಯಗ್ರಹಣದ ದಿನದಂದು ನಿಗೂಢವಾಗಿ ಕಾಣೆಯಾಗುವುದು... ಹೀಗೆ ಕಥೆ ಸಾಗುತ್ತದೆ.
ಸೂರ್ಯಗ್ರಹಣಕ್ಕೂ ಆಕೆ ನಾಪತ್ತ್ತೆಯಾಗುವುದಕ್ಕೂ ಸಂಬಂಧವೇನು? ಪ್ರಣವಿ ಎಲ್ಲಿಗೆ ಹೋದಳು ಎನ್ನುವ ರೋಚಕ ವಿಚಾರ ಇದರಲ್ಲಿದೆ. ಕಾದಂಬರಿಯಲ್ಲಿ ಮಂಗಳಮುಖಿ ಮಂಜಮ್ಮ, ಹೇಮಂತನ ಗೆಳೆಯರು ಸಹ ಗಮನಸೆಳೆಯುತ್ತಾರೆ. ಯುವಪ್ರೇಮಿಗಳ ಮನಸೆರೆಹಿಡಿಯುವ ಕಥಾನಕ ಇದು. ಪ್ರೀತಿ- ಪ್ರೇಮದಲ್ಲಿ ಬರುವ ಅನಿಶ್ಚಿತತೆ, ಅದರ ಪರಿಣಾಮ, ಅದನ್ನೆದುರಿಸಲು ಕಷ್ಟವಾಗುವುದು, ಗೆಳೆಯರ ಸಹಕಾರ ಮೊದಲಾದವು ಚೆನ್ನಾಗಿ ನಿರೂಪಿತವಾಗಿದೆ.
ಆದರೆ, ಕಾದಂಬರಿಯಲ್ಲಿ ಸಾಕಷ್ಟು ಅಕ್ಷರ ದೋಷಗಳಿವೆ. ಸರಾಗ ಓದಿಗೆ ಇದು ಅಡ್ಡಿಯಾಗಿದೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೭. ೧೦. ೨೦೧೬
,,,,,,,,,,,,,,,,,,,,,,,,,,,,

Comments
Post a Comment