ಪ್ರಮುಖ ಸಂಪಾದಕೀಯ ಬರೆಹಗಳ ಮಾಹಿತಿಯ 

‘ಹಲೋ’ 




‘ಹಲೋ’ ಇದು ಪತ್ರಕರ್ತ, ಬರೆಹಗಾರ ರವಿ ಬೆಳಗೆರೆ ಅವರ ಅಂಕಣಗಳ ಬರಹದ ಸಂಕಲನ. ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕರಾಗಿದ್ದ ರವಿ ಬೆಳಗೆರೆ ಪ್ರತಿವಾರ ಬರೆಯುತ್ತಿದ್ದ  ಅಂಕಣವೇ ‘ಹಲೋ’. ಹೆಸರುವಾಸಿಯಾಗಿದ್ದ ಈ ಅಂಕಣದ ಹೆಸರಲ್ಲೇ ಈಗ ಅವರ ಪುತ್ರಿ ಭಾವನಾ ಬೆಳಗೆರೆ ಸಂಕಲನ ಪ್ರಕಟಿಸಿದ್ದಾರೆ. ಇದರಲ್ಲಿ ಸುಮಾರು ೩೪ ಪ್ರಮುಖ ಅಂಕಣಗಳಿವೆ.

 ಇದರಲ್ಲಿ ಪಕ್ಷ ಸಂಬಂಧಗಳು ಮತ್ತು ಅವರ ಆಸಕ್ತಿಯ ವಿಷಯಗಳೇ ಪ್ರಧಾನವಾಗಿವೆ. ಬೆಂಗಳೂರು ನಗರ, ದೇಶ, ಇತಿಹಾಸ, ಯುದ್ಧಗಳ, ರಾಜಕಾರಣಿಗಳ  ಕುರಿತಾಗಿದೆ. ರಾಜಕಾರಣಿಗಳಿಗೆ ಬದುಕಿನ ಪಾಠವನ್ನು ಮಾಡಿದ್ದನ್ನು ಇಲ್ಲಿ ಕಾಣಬಹುದು. ಹಲವು ಮನೆಯ ಸಮಸ್ಯೆಗಳನ್ನು ಮನೆಯ ಹೆಂಗಸರು ಅಥವಾ ಮಕ್ಕಳು ತಮ್ಮೆದುರು ತಂದಿದ್ದು, ಒಬ್ಬ  ಸಂಪಾದಕ ಅದನ್ನು ಬಗೆಹರಿಸಿದ್ದರಿಂದ ಮತ್ತಷು ಮಹಿಳೆಯರು ಗಂಡನ ಕಿರುಕುಳ, ಗಂಡನ ಚಟ ಮುಂತಾದವುಗಳ ಬಗ್ಗೆ ಪತ್ರಿಕೆಗೆ ಪತ್ರ ಬರೆಯುವ ಮೂಲಕ ಸಂಕಷ್ಟವನ್ನು ತೋಡಿಕೊಂಡಿದ್ದನ್ನು ಇದರಲ್ಲಿ ತೋರಿಸಿದ್ದಾರೆ.  ರಾಜಕಾರಣಿಗಳಾದ ಜೆ. ಹೆಚ್. ಪಟೇಲ್, ದೇವೇಗೌಡ, ರಾಮಕೃಷ್ಣ ಹೆಗಡೆ,  ವಾಜಪೇಯಿ, ಎನ್ ಟಿ ರಾಮರಾವ್ ಮುಂತಾದವರ ಕುರಿತಾಗಿಯೂ ಇದೆ. ಹತ್ತು ಹಲವು ವಿಷಯಗಳ ಬಗ್ಗೆ ಈ ಸಂಕಲನ  ಮಾಹಿತಿ ಬಿಚ್ಚಿಟ್ಟಿದೆ. 

ಕೆಲವು ಪ್ರಮುಖ ಸಂಪಾದಕೀಯ ಬರಹಗಳ ಮಾಹಿತಿ ಇದರಲ್ಲಿದೆ. ‘ಬೆಂಗಳೂರಿನಲ್ಲಿ ಕೆಂಟುಕಿ ಫ್ರೆಂಡ್ಶಿಪ್’ ಎಂಬ ಸಂಪಾದಕೀಯದಲ್ಲಿ, ಹುರಿದ ಕೋಳಿ ಮಾಂದ ತುಂಡುಗಳ ಅಂಗಡಿ ತಲೆ ಎತ್ತಿದಾಗ ಅದರ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಆಗ ಮಂತ್ರಿಯಾಗಿದ್ದ ದೇವೇಗೌಡರು ತಾನು ಮಣ್ಣಿನ ಮಗ ಎನ್ನುವುದನ್ನು ಮರೆತು ರೈತರಿಗೆ ಪೊಲೀಸರಿಂದ ಹೊಡೆಸಿದ್ದನ್ನು ಬರೆಯುತ್ತಾ, ರಾಮಕೃಷ್ಣ ಹೆಗಡೆ ಚಳವಳಿಗಳನ್ನು ಕರ್ನಾಟಕದಲ್ಲಿ ಮುರಿದ ವ್ಯಕ್ತಿ. ಅದೇ ರೀತಿ ದೇವೇಗೌಡರು ಸಹ ರೈತ ಸಂಘಟನೆಗಳನ್ನು ಮುರಿಯಲು ಪ್ರಯತ್ನ ನಡೆಸಿದರು ಎಂದು ಬರೆಯುತ್ತಾರೆ. 

‘ಸೌಂದರ್ಯ ಎಂಬುದು ಸ್ಪರ್ಧೆಯ ವಿಷಯವಾಗಬೇಕೆ’ ಇದರಲ್ಲಿ ಬೆಂಗಳೂರಿನಲ್ಲಿ ಸೌಂದರ್ಯ ಸ್ಪರ್ಧೆ ನಡೆದಾಗ ಅದು ಬಹುದೊಡ್ಡ ವಿವಾದಕ್ಕೆ ತುತ್ತಾಗಿತ್ತು. ಸುಂದರವಾದದನ್ನು ಸುಂದರವಾಗಿರುವವರನ್ನು ಪ್ರೀತಿಸುತ್ತೇವೆ ಎಂಬುದು ನಿಜ. ಸುಂದರವಾಗಿರಬೇಕೆಂದು ಬಯಸುವುದು ಸಹಜ. ಆದರೆ ಇದನ್ನು ಸ್ಪಧೆಗೆ ಹಚ್ಚಿ ಈ ವರ್ಷ ನೀನೇ ಜಗತ್ತಿನ ಸುಂದರಿ ಎಂದು ಘೋಷಿಸುವುದು ಯಾವ ಸಮರ್ಥನೀಯ ಹುಚ್ಚಾಟ ಎಂದು ಪ್ರಶ್ನಿಸುತ್ತಾ, ಪುಟ್ಟ ಸುಂದರಿಯರು, ಸುಂದರ ತಾಯಿಯ ಮಕ್ಕಳು ಚೆನ್ನಾಗಿ ತಿಂದು ಬೆಳೆದಿರುತ್ತಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಇವರೆಲ್ಲ ಭಾಗವಹಿಸಲು ಒಂದಷ್ಟು ಓದಿಕೊಂಡಿರುತ್ತಾರೆ. ಇಂತಹವರಲ್ಲಿ  ಯಾರೋ ಒಬ್ಬರನ್ನು ಜಗದೇಕ ಸುಂದರಿ ಎಂದು ಘೋಷಿಸುತ್ತಾರೆ. ಸೌಂದರ್ಯವೆನ್ನುವುದು ಸ್ಪರ್ಧೆಗೆ ಈಡಾಗಬೇಕೇ? ಅದಕ್ಕೆ ಇಷ್ಟೆಲ್ಲ ಸಡಗರ ಬೇಕೆ? ಈ ರೀತಿಯ ಖರ್ಚು ನ್ಯಾಯ ಸಮ್ಮತವೇ? ಇದನ್ನು ನಾವು ಸೌಂದರ್ಯ ಎನ್ನಬೇಕೇ ಎಂದು ಪ್ರಶ್ನಿಸುತ್ತಾರೆ.

 ‘ನೀವು ಅರಿಯದ ಹಿಜಡಾಗಳ ಮನೋಲೈಂಗಿಕ ಸಾಮಾಜಿಕ ಬದುಕು’ ಇದರಲ್ಲಿ ಹಿಜಡಾಗಳಲ್ಲಿ ಯಾವುದೇ ತರಹದ ಲೈಂಗಿಕ ವಾಂಛೆಗಳು ಇರುವುದಿಲ್ಲ. ಅದು ಯಾವ ರೀತಿಯಲ್ಲೂ ಉದ್ದೀಪನಗೊಳ್ಳುವುದಿಲ್ಲ. ಆದರೆ ಕಾಮವಿಕೃತಿಯುಳ್ಳ ಗಂಡಸರು ಅವರನ್ನು ಲೈಂಗಿಕ ಚಟುವಟಿಕೆಗಳಿಗೆ ಬಯಸುತ್ತಾರೆ. ಅವರು ಗಂಡೂ ಅಲ್ಲದ ಹೆಣ್ಣೂ ಅಲ್ಲದ ಒಳ್ಳೆಯ ಜನರು. ನಮ್ಮೊಂದಿಗೆ ಬದುಕನ್ನು ಬದುಕುತ್ತಿದ್ದಾರೆ. ಹಿಜಡಾಗಳು ಅಂಗಡಿಗಳಿಗೆ ತೆರಳಿ ಭಿಕ್ಷೆ ಬೇಡಿ ಜೀವಿಸುತ್ತಾರೆ. ಕೆಲವರು ಸಾರ್ವಜನಿಕ ಸಮಾರಂಭಗಳಿಗೆ ಮದುವೆ, ಮುಂಜಿ ಮುಂತಾದವುಗಳಿಗೆ ತೆರಳಿ ಡಾನ್ಸ್ ಮಾಡಿ ಹಣ ಪಡೆದರೆ ಪೊಲೀಸರು ಇಂಥವರಿಂದಲೂ ಸಹ ಹಣವನ್ನು ಪೀಕುತ್ತಾರೆ ಎಂದು ಬರೆಯುತ್ತಾರೆ.

‘ಬಂಧನದ ಬಿಸಿ ಗೊತ್ತಿಲ್ಲದವರಿಗೆ ಸ್ವಾತಂತ್ರ್ಯವೇಕೆ’ ಎನ್ನುವ ಬರಹದಲ್ಲಿ ಲೇಖಕರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಸಾರ್ವಜನಿಕರೊಬ್ಬರು ಅವರ ಕಚೇರಿಗೆ ಬಂದು ಇಂಗ್ಲೆಂಡಿನ ಪ್ರಧಾನ ಮಂತ್ರಿ ಜಾನ್ ಮೇಜರ್ ಭಾರತಕ್ಕೆ ಬರುತ್ತಾರೆ ಎಂಬ ಸುದ್ದಿ ಇದೆ. ಶಾಶ್ವತವಾಗಿ ಭಾರತಕ್ಕೆ ಭಾರತದಲ್ಲಿ ಇರಲು ಹೇಳಿ. ಅವರ ಕೈಗೆ ನಮ್ಮ ದೇಶವನ್ನು ಕೊಟ್ಟುಬಿಡೋಣ. ಏಕೆಂದರೆ ನಮಗೆ ಸ್ವಾತಂತ್ರ್ಯ ಬೇಕಾಗಿಲ್ಲ. ಉಪಯೋಗವೇ ಈ ದೇಶದ ಜನರಿಗೆ ಗೊತ್ತಿಲ್ಲ ಎಂದು ಹೇಳಿದ್ದನ್ನು ಸ್ಮರಿಸುತ್ತಾ, ಇಂದು ದೇಶವನ್ನು ಆಳುವ ಜನರನ್ನೆಲ್ಲ ನೋಡಿದರೆ ಇವರಾಡುವ ಮಾತೇ ಸರಿ ಎನಿಸುತ್ತದೆ ಎಂದು ಬರೆಯುತ್ತಾರೆ.

 ‘ನ್ಯಾಯದೇವತೆಯ ತಕ್ಕಡಿ ಇತ್ತ ಬಾಗಲೇಬೇಕು’ ಎಂಬ ಬರೆಹದಲ್ಲಿ ಪಂಜಾಬ್ ಪೊಲೀಸ್ ವರಿಷ್ಠನಾಗಿದ್ದ ಕೆಪಿಎಸ್ ಗಿಲ್ ಎಂಬ ಐಪಿಎಸ್ ಅಧಿಕಾರಿ ಐಎಎಸ್ ಅಧಿಕಾರಿ ರೂಪೇನ್ ಬಜಾಜ್ ಎನ್ನುವವರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಕ್ಕೆ ಶಿಕ್ಷೆ ಅನುಭವಿಸಿದ್ದನ್ನು ವಿವರಿಸುತ್ತಾರೆ. 

‘ಮಲ್ಲೇಶ್ವರ ಎಂಟನೇ ಕ್ರಾಸ್‌ನ ಹುಡುಗಿಯರು’ ಇದರಲ್ಲಿ  ಈ ಕ್ರಾಸ್ ನಮ್ಮದೇ ಆದ ಕನ್ನಡಿಗ ಸಂಸ್ಕೃತಿಯ ಪ್ರತೀಕವಾಗಿ ಉಳಿದುಕೊಂಡಿದೆ. ಮಧ್ಯಮ ವರ್ಗದ ಜನರು ಹೆಚ್ಚು ಇಲ್ಲಿಗೆ ಬರುತ್ತಾರೆ. ಹದಿಹರೆಯದವರ ಪಾಲಿಗೆ ಇದೊಂದು ಜಂಕ್ಷನ್. ಪಡ್ಡೆಹುಡುಗರ ಟೈಮ್‌ಪಾಸ್ ಸೆಂಟರ್. ವಯಸ್ಸಾದವರಿಗೆ ಇಹಪರಗಳೆರಡಕ್ಕೂ ದಕ್ಕುವಂತಹ ಮನೆಯಂಗಳಗಳು ಇವೆ. ಇಂತಹ ಸುಂದರ ತಾಣ ಬೆಂಗಳೂರಿನಲ್ಲಿ ಇಲ್ಲ. ಇಲ್ಲಿ ಇಲ್ಲದ ಅಂಗಡಿಗಳೇ ಇಲ್ಲ. ಮೊದಲಿನಿಂದಲೂ ಇದು ವ್ಯಾಪಾರಿ ಕೇಂದ್ರ. ಸಂಜೆಯಾಯಿತೆಂದರೆ ಎಲ್ಲಾ ವರ್ಗದ ಜನರು ಇಲ್ಲಿ ಸೇರಿ ಹೋಟೆಲ್ ತಿಂಡಿ, ಚಾಟ್ಸ್‌ಗಳನ್ನು ತಿನ್ನುವುದು, ಪಾರ್ಕಿನಲ್ಲಿ ಸುತ್ತಾಡುವುದು, ಶಾಪಿಂಗ್ ನಡೆಸುವುದು, ಹರಟೆ ಹೊಡೆಯುವುದು  ಮುಂತಾದ ರೀತಿಯಲ್ಲಿ ಕಾಲ ಕಳೆಯವುದನ್ನು ವಿವರಿಸಿದ್ದಾರೆ.

‘ಮರೆಯಾದ ನಿತ್ಯ ನಕ್ಷತ್ರ ಎನ್‌ಟಿಆರ್’ ಎಂಬ ಅಂಕಣದಲ್ಲಿ ಎನ್ಟಿಆರ್ ಎಂಬ ಮೂರಕ್ಷರದ ಹೆಸರಿನ ವ್ಯಕ್ತಿ ಅದ್ಭ್ಬುತ ಪುರುಷನಾಗಿದ್ದನು. ಮನಃಶುದ್ಧಿಯಿಂದ ಅವರ ಸಿನಿಮಾಗಳನ್ನು  ನೋಡುತ್ತಿದ್ದನ್ನು ಸ್ಮರಿಸುತ್ತಾರೆ. ಅವರು ಅಂದು ಎಷ್ಟರಮಟ್ಟಿಗೆ ಪ್ರಸಿದ್ಧಿಯಾಗಿದ್ದರೆಂದರೆ ಅವರ ಕಟೌಟ್ಗೆ ಹಾಲಿನ ಅಭಿಷೇಕ ನಡೆಯುತ್ತಿತ್ತು. ತಮ್ಮ ಜೀವನದ ಕೊನೆಯ ಹಂತದಲ್ಲಿ ಅವರು ಆತ್ಮಚರಿತ್ರೆ ಬರೆಯಲು ಬಂದವಳನ್ನು ವಿವಾಹವಾಗಿ ಕುಟುಂಬ ಕಲಹ, ರಾಜಕಲಹವಾಗಿ ಅಧಿಕಾರ ಕಳೆದುಕೊಂಡರು. ಸುಮಾರು ಏಳು ದಶಕಗಳ ಕಾಲ ಅತ್ಯಂತ ರಂಗುರಂಗಾಗಿ ಬದುಕಿ, ಅಂದುಕೊಂಡಿದ್ದನ್ನು ಸಾಧಿಸಿದ ಶತಮಾನಗಳ ಅಚ್ಚರಿಯಲ್ಲಿ ಎನ್ ಟಿ ಆರ್ ಸೇರುತ್ತಾರೆ ಎಂದು ಬರೆಯುತ್ತಾರೆ.

 ‘ಮುಸ್ಲಿಮರು ಒಬ್ಬರೇ ಏಕೆ ಬಾಂಧವರಾಗುತ್ತಾರೆ’ ಎಂಬ ಬರಹದಲ್ಲಿ  ಬರೆಯುವಾಗ ಮುಸ್ಲಿಂ ಬಾಂಧವರು ಅಂತಲೇ ಬರೆಯುತ್ತಾರೆ. ಅವರನ್ನು ಸಾಬರು, ಮುಸಲರು, ಮುಸ್ಲಿಮರು, ಬ್ಯಾರಿಗಳು, ಸುನ್ನಿಗಳು ಎಂದು ಯಾವತ್ತೂ ಬರೆಯುವುದಿಲ್ಲ. ಇಲ್ಲದ ಬಾಂಧವ್ಯವನ್ನು ಇವರು ಮುಸ್ಲಿಮರೊಂದಿಗೆ ಮಾತ್ರ ಏಕೆ ಗುರುತಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸುತ್ತಾರೆ.  ಪತ್ರಿಕೋದ್ಯಮ ಎನ್ನುವುದು ಟಿಪ್ಪಣಿಯೋ, ಅಪ್ಪಣೆಯು ಈ ಬರಹದಲ್ಲಿ ಪತ್ರಿಕೋದ್ಯಮದ ಬೆಳವಣಿಗೆಗಳನ್ನು ಚಿತ್ರಿಸಿದ್ದಾರೆ. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದ ಪತ್ರಿಕೆಗಳು ಇಂದು ಬೇಕಾಗಿವೆ. ಪತ್ರಿಕೆಗಳದ್ದು ಏನಿದ್ದರೂ ಟಿಪ್ಪಣಿ ಮಾಡುವ ಕೆಲಸ. ಆದರೆ ಅಪ್ಪಣೆ ಮಾಡುವುದಲ್ಲ. ನಮ್ಮಲ್ಲಿ ಅನೇಕ ಪತ್ರಕರ್ತರಿಗೆ ಅಪ್ಪಣೆ ಮಾಡುವುದೇ ರೂಢಿಯಾಗಿ ಬಿಟ್ಟಿದೆ. ಸೂಚಿಸುವುದಕೆ, ಅಪ್ಪಣೆ ಮಾಡುವುದಕ್ಕೆ ಆದೇಶ ನೀಡುವುದಕ್ಕೆ ಪತ್ರಕರ್ತರು ಯಾರು? ಪತ್ರಿಕೋದ್ಯಮಿಗಳು ಅಪ್ಪಣೆ ಕೊಡುವ ಮಟ್ಟಕ್ಕೆ ಹೋಗಬೇಕಿಲ್ಲ. ಗೊತ್ತಿಲ್ಲದಂತೆ ಪತ್ರಕರ್ತರು ದುರಹಂಕಾರಿಗಳಾಗುತ್ತಿದ್ದಾರೆ ಎಂದು ಬರೆಯುತ್ತಾರೆ.

 ಹೀಗೆ ಇಲ್ಲಿನ ಅಂಕಣ ಬರೆಹಗಳೆಲ್ಲಾ ಹಳೆಯದೆನಿಸಿದರೂ ಇಂದಿಗೂ ಮೌಲಿಕವಾಗಿವೆ. ಅನೇಕ ರಾಜಕಾರಣಿಗಳ ಬದುಕಿನ, ರಾಜಕೀಯದ ಆಗು-ಹೋಗುಗಳನ್ನು ಅಂದು ತೆರೆದಿಟ್ಟಿದ್ದರೂ ಇಂದಿನ ರಾಜಕಾರಣಿಗಳಿಗೂ ಅದು ಪಾಠವಾಗಿದೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೭. ೧೦. ೨೦೨೬

  ........................


Comments

Popular posts from this blog