ಸುಸಂಸ್ಕೃತ ವ್ಯಕ್ತಿಗಳ ನಿರ್ಮಾಣಕ್ಕೆ
‘ಕಿಶೋರ ದೀಪಿಕಾ’
‘ಕಿಶೋರ ದೀಪಿಕಾ’ ಇದು ಹದಿಹರೆಯದ ಮಕ್ಕಳಿಗೆ, ಶಿಕ್ಷಕರಿಗೆ ಮತ್ತು ಅವರ ಪೋಷಕರಿಗೆ ಮಾರ್ಗದರ್ಶಿ ಕೃತಿ. ಶಿವಮೊಗ್ಗದ ಎಚ್. ಎಂ. ರುಕ್ಮಿಣಿ ನಾಯಕ್ ಮತ್ತು ಉಷಾ ನಟೇಶ್ ಕಾಸರವಳ್ಳಿ ಇದನ್ನು ಸಂಪಾದಿಸಿದ್ದಾರೆ. ಇದರಲ್ಲಿ ಹದಿಹರೆಯದವರನ್ನು ಯಾವ ರೀತಿಯಲ್ಲಿ ಬೆಳೆಸಬೇಕು. ಶಾರೀರಿಕವಾಗಿ, ಮಾನಸಿಕವಾಗಿ ಹಾಗೂ ಶೈಕ್ಷಣಿಕವಾಗಿ ಹೇಗೆ ಮಾರ್ಗದರ್ಶನ ಮಾಡಬೇಕು. ಪೋಷಕರು ಮನೆಯಲ್ಲಿ, ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಈ ಮಾರ್ಗದರ್ಶನ ಮಾಡಬಹುದು. ಇದು ಅವರ ಜೀವನದ ಮೇಲೆ ಪರಿಣಾಮಕಾರಿಯಾಗುವುದರಿಂದ ಸುಸಂಸ್ಕೃತ ವ್ಯಕ್ತಿಗಳ ನಿರ್ಮಾಣದ ಕನಸು ನನಸಾಗುತ್ತದೆ ಎನ್ನುವುದನ್ನು ಕೃತಿ ಸಾರುತ್ತದೆ.
೧೨ ರಿಂದ ೧೯ ವಯಸ್ಸಿನೊಳಗಿನ ಹದಿಯರೆಯದ ಮಕ್ಕಳನ್ನು ಸಾಮಾನ್ಯವಾಗಿ ಕಿಶೋರರು ಎನ್ನುತ್ತಾರೆ. ಇದು ಮನುಷ್ಯನ ಬದುಕಿನ ಒಂದು ಪ್ರಮುಖ ಕಾಲಘಟ್ಟ. ಜೀವನದ ಪರೀಕ್ಷಾ ಕಾಲವೂ ಹೌದು. ಈ ವೇಳೆ ಸೂಕ್ತ ಮಾರ್ಗದರ್ಶನ ದೊರೆಯದಿದ್ದಲ್ಲಿ ಅವರು ಸಮಾಜಘಾತುಕ ಶಕ್ತಿಗಳಾಗಿ ಹೊರಹೊಮ್ಮಬಹುದು ಎನ್ನುವ ಆತಂಕವನ್ನೂ ಇದರಲ್ಲಿ ಚಿತ್ರಿಸಲಾಗಿದೆ.
ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗದ ಇಂದಿನ ಇಂದಿನ ಶಿಕ್ಷಣ ಪದ್ಧತಿಗೆ ಪರಿಹಾರವೆಂದರೆ ನೀತಿ ಶಿಕ್ಷಣ. ಕಥೆ, ಹಾಡು, ನಾಟಕ, ಆಟ, ನೃತ್ಯಗಳ ಮೂಲಕ ಇದನ್ನು ಕಲಿಸಬಹುದು. ನೀತಿ ಶಿಕ್ಷಣ ಸರಳವೂ ಹೌದು, ಪರಿಣಾಮಕಾರಿಯೂ ಹೌದು. ಇವುಗಳನ್ನು ಅಳವಡಿಸಿಕೊಳ್ಳುವುದು ಪೋಷಕರಿಗೂ, ಶಿಕ್ಷಕರಿಗೂ ಸುಲಭ ಮತ್ತು ತುರ್ತು ಅವಶ್ಯP. ಇದರಿಂದ ಮಕ್ಕಳ ಹಾಗೂ ಪೋಷಕರ ನಡುವೆ ವಿದ್ಯಾರ್ಥಿ ಹಾಗೂ ಶಿಕ್ಷಕ ನಡುವೆ ಮಧುರ ಬಾಂಧವ್ಯ ಏರ್ಪಡುವುದು ಅನುಭವ ವೇದ್ಯ. ಹದಿಹರೆಯದ ಮಕ್ಕಳಿಗೆ ತಂದೆ ತಾಯಿಗಳು ಶಿಕ್ಷಕರು ಆಗಬೇಕು. ಹಾಗೆಯೇ ಶಿಕ್ಷಕರು ಪೋಷಕರ ಸ್ಥಾನವನ್ನೂ ನಿಭಾಯಿಸಬೇಕು
‘೬ ವರ್ಷಕ್ಕೆ ಮಕ್ಕಳು ಕಾಲಿಟ್ಟಾಗ ಸ್ನೇಹಿತರ ಹಾಗೆ ಕಾಣಬೇಕು’ಎಂಬ ಹಿರಿಯರ ಮಾತಿದೆ. ಮಕ್ಕಳ ಮುಂದೆ ಸಕಾರಾತ್ಮಕ ಗುರಿ ಇಡಬೇಕು. ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಕಥೆಗಳ ಮೂಲಕ ಪರಿಣಾಮಕಾರಿಯಾಗಿ ಮಂಡಿಸಿದಾಗ ಅವರ ಆಂತರ್ಯದಲ್ಲಿ ಗುರಿಯು ಗರಿಗೆದರುತ್ತದೆ. ಆಗ ಬದುಕಿಗೊಂದು ಅರ್ಥ ದೊರೆಯುತ್ತದೆ. ಹದಿಹರೆಯದ ಮಕ್ಕಳಿಗೆ ಒಂದು ಚೌಕಟ್ಟಿನಲ್ಲಿ ಸ್ವಾತಂತ್ರ್ಯ ನೀಡಿ, ಭಾವನಾತ್ಮಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅವರು ಉತ್ತಮ ಪಟ್ಟ ತಲುಪಲು ಇಂತಹ ಶಿಕ್ಷಣ ಸಹಾಯಕವಾಗುತ್ತದೆ. ಹದಿಹರೆಯ ಎನ್ನುವುದು ಒಂದು ರೀತಿ ಎಡಬಿಡಂಗಿ ಹಂತ. ಬಾಲಿಶವೂ ಅಲ್ಲದ, ಪ್ರೌಢತೆಯೂ ಇಲ್ಲದ ಸಮಯ. ತಾನು ಚಿಕ್ಕವನಲ್ಲ, ತನಗೆ ಎಲ್ಲಾ ಗೊತ್ತಿದೆ, ಎಲ್ಲಾ ಅರ್ಥವಾಗುತ್ತದೆ ಎನ್ನುವ ಧೋರಣೆ ಅವರಲ್ಲಿ ಇರುತ್ತದೆ. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ನಡುವಿನ ವ್ಯತ್ಯಾಸದ ಅರಿವಿರುವುದಿಲ್ಲ. ಬಹು ಸೂಕ್ಷ್ಮವಾಗಿ ಅವರಿಗೆ ಇದನ್ನು ತಿಳಿಸಿಕೊಡಬೇಕು. ಇಲ್ಲದಿದ್ದರೆ ಈ ಹಂತದಲ್ಲಿ ಮಕ್ಕಳು ದುಡುಕಬಹುದು, ಮನೆ ಬಿಟ್ಟು ಹೋಗಬಹುದು, ಆತ್ಮಹತ್ಯೆಯಂತಹ ಅಪಾಯದ ತೀರ್ಮಾನ ತೆಗೆದುಕೊಳ್ಳಬಹುದು. ಅದಕ್ಕಾಗಿ ಸಂಸ್ಕಾರಯುತ ನಡೆವಳಿಕೆಗಳನ್ನು ಕುಟುಂಬ ನೀಡಿದಲ್ಲಿ ಮಕ್ಕಳು ಆರೋಗ್ಯಕರವಾಗಿ ನೈತಿಕ ಹೊಣೆ ಹೊರಲು ಸಿದ್ಧರಾಗುತ್ತಾರೆ.
ವ್ಯಕ್ತಿತ್ವ ವಿಕಸನ ಎಂದರೆ ಶಾರೀರಿಕ, ಮಾನಸಿಕ, ಬೌದ್ಧಿಕ ವಿಕಾಸದೆಡೆಗೆ ಗಮನ ಕೊಡುವುದು. ಈ ಸಂದರ್ಭದಲ್ಲಿ ಅಧ್ಯಯನಶೀಲತೆ, ಒಳ್ಳೆಯ ಗೆಳೆತನ, ಪ್ರವಾಸ ಮತ್ತು ಗುರಿಯನ್ನು ಆತ ಹೊಂದಬೇಕಾಗುತ್ತದೆ. ಇದು ನಮ್ಮನ್ನು ಮನುಷ್ಯತ್ವದೆಡೆ ಕೊಂಡೊಯ್ಯುತ್ತದೆ. ಉತ್ತಮ ಗೆಳೆಯರು ನಮ್ಮೊಡನೆ ಇರುವಂತೆ ಮಾಡುತ್ತದೆ. ಹೃದಯವಂತರನ್ನು ಗೆಳೆಯರನ್ನಾಗಿಸಿಕೊಳ್ಳಬೇಕು. ಬದುಕಿನಲ್ಲಿ ಉತ್ತಮವಾದ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವಂತಾಗಲು ಪೋಷಕರು ಶಿಕ್ಷಕರು ನೆರವಾಗಬೇಕು. ಶತಮಾನದ ನಂತರವೂ ನೆನಪಿಡಬಹುದಾದ ವ್ಯಕ್ತಿತ್ವ ಆಗ ನಮ್ಮ ಮಕ್ಕಳದ್ದಾಗುತ್ತದೆ.
ಶಾಲೆಯಲ್ಲಿ ಶಿಕ್ಷಕರು ಪರಿಣಾಮಕಾರಿಯಾಗಿ ಕಥೆ ಹೇಳುವ ಮೂಲಕ ಮಕ್ಕಳ ಮನಸ್ಸನ್ನು ಬದಲಿಸಲು ಸಾಧ್ಯವಿದೆ. ಮನಸ್ಸನ್ನು ಕಥೆಯಿಂದ ಗೆದ್ದು ನಂತರ ಪಾಠ ಕಲಿಸುವುದು ಸುಲಭ ಮಾರ್ಗ. ಮಕ್ಕಳಿಗೆ ಕಥೆ ಹೇಳುವ ಮೊದಲು ಅವರಿಗೆ ನಾವು ನೀಡಬೇಕಾದ ಸಂದೇಶ ಬಹಳ ಮುಖ್ಯ. ಕಥೆ ಹೇಳಿದ ನಂತರ ಮಕ್ಕಳ ಮನಸ್ಸಿನಲ್ಲಿ ಕಥಾನಾಯಕನ ಅಥವಾ ನಾಯಕಿಯ, ವಸ್ತುವಿನ ಒಳ್ಳೆಯ ಗುಣಗಳು, ಅಂಶಗಳು ದೀರ್ಘಕಾಲ ಉಳಿಯುವಂತೆ ಮಾಡಬೇಕು. ಮಗು ಅದನ್ನು ತಾನು ಬೆಳೆಸಿಕೊಳ್ಳಬೇಕೆಂಬ ಪ್ರಚೋದನೆಯನ್ನು ಅದು ಕೊಡುವಂತಿರಬೇಕು. ಅಲ್ಲಿ ಗ್ರಹಣ ಶಕ್ತಿ ಹೆಚ್ಚಿರುವುದರಿಂದ ಅವರಿಗೆ ಕಥೆ ಹೇಳುವಾಗ ಪ್ರೌಢ ಭಾಷೆ ವಿಚಾರವನ್ನು ಹೇಳಬಾರದು. ಆಡು ಭಾಷೆ ಬಳಸುವುದು ಬಹಳ ಉತ್ತಮ. ವಾಕ್ಯಗಳು ಚಿಕ್ಕದಾಗಿರಬೇಕು. ಗಮನ ಸೆಳೆಯುವಂತಿರಬೇಕು. ಶಿಕ್ಷಕರು ಮಗುವಿನ ಮೇಲೆ ನಿಗಾ ಇಟ್ಟು ಕತೆ ಹೇಳಬೇಕು. ಬಾಣದ ಹಾಗೆ ಮಗುವಿನ ಮನಸ್ಸಿಗೆ ಅದು ತಾಗುವಂತಿರಬೇಕು. ಮಕ್ಕಳ ಮನಸ್ಸಿನಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವುದರಿಂದ ಹೆಚ್ಚು ಪರಿಣಾಮಕಾರಿಯಾಗಲಿದೆ.
‘ಕಿಶೋರ ದೀಪಿಕಾ’ ಅನುಭಾವಿಗಳ ಅನುಭವಗಳ ಅಮೂಲ್ಯ ಭಂಡಾರ. ಕಿಶೋರ ವಿಕಾಸ ಯಾತ್ರೆಗೆ ಇದು ಮುನ್ನುಡಿ. ಶಿಕ್ಷಕ ಶಿಕ್ಷಕಿಯರು ಮತ್ತು ಹೆತ್ತವರು, ಪಾಲಕರು, ಪೋಷಕರು ಎಲ್ಲರಿಗೂ ಉಪಯುಕ್ತ. ಮಕ್ಕಳಿಗೆ ಅತಿ ಸುಲಭದಲ್ಲಿ ಗ್ರಾಹ್ಯವಾಗುವಂತೆ ನೀತಿ ಕಥೆ, ನಾಟಕ, ಸಂವಾದ, ಏಕಪಾತ್ರಾಭಿನಯದ ಮೂಲಕ ಹೇಗೆ ಪಾಠ ಮಾಡಬಹುದು, ಅವರ ಮನಸ್ಸಿನೊಳಕ್ಕೆ ಮೌಲ್ಯಯುತ ವಿಚಾರಗಳನ್ನು ಹೇಗೆ ತುಂಬಬಹುದು ಎನ್ನುವುದನ್ನು ಅತ್ಯಂತ ಸರಳವಾಗಿ ನಿವೇದಿಸಲಾಗಿದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೨೦.೧೦.೨೦೨೬
...............................

Comments
Post a Comment