ಮಕ್ಕಳ ಮನಸ್ಸನ್ನು ಆಕರ್ಷಿಸುವ 

‘ಚಿನ್ನಿ ದಾಂಡು ಬುಗುರಿ’ 


ಪತ್ರಕರ್ತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಯುವ ಪ್ರತಿಭೆ  ಟಿ ಹೆಚ್ ಸಂತೋಷ್‌ಕುಮಾರ್ ಭದ್ರಾವತಿ  ವಿಶೇಷವಾಗಿ ಪುಟಾಣಿ ಮಕ್ಕಳ ಮನಸನ್ನರಿತು ಬರೆದ ಕವನ ಸಂಕಲನ ಇದಾಗಿದೆ. ಮಕ್ಕಳ ಸ್ಮರಣಶಕ್ತಿ ಮತ್ತು ಗ್ರಹಣ ಶಕ್ತಿಗೆ ಪೂರಕವಾಗುವಂತಹ ತಮ್ಮ ಸುತ್ತಮುತ್ತಲಿನ ಅನೇಕ ವಿಚಾರಗಳಿಗೆ ಕವನದ ರೂಪ ಕೊಟ್ಟು ಮಕ್ಕಳ ಮನಸ್ಸನ್ನು ಆಕರ್ಷಿಸುವ ‘ಚಿನ್ನಿದಾಂಡು ಬುಗುರಿ’  ಎಂಬ ಹೆಸರನ್ನು ಇಟ್ಟಿದ್ದಾರೆ.

 ಇಲ್ಲಿನ ಕವನಗಳು ಒಂದಲ್ಲ ಒಂದು ಕಾರಣದಿಂದಾಗಿ ಮಕ್ಕಳ ಮನಸ್ಸಿಗೆ ಮುದ ನೀಡುವ ಗುಣಗಳನ್ನು ಹೊಂದಿವೆ, ಅಷ್ಟೇ ಚೇತೋಹಾರಿಯಾಗಿವೆ. ಮಕ್ಕಳ ಮನರಂಜಿಸುವುದರ ಜೊತೆಗೆ ಆಧುನಿಕ ಜಗತ್ತಿನಲ್ಲಿ ಎಳೆವಯಸ್ಸಿನಲ್ಲೂ ಒತ್ತಡದ ಬದುಕನ್ನು ನಿರ್ವಹಿಸುತ್ತಿರುವ ಅದೇ ಮಕ್ಕಳು ಭವಿಷ್ಯದಲ್ಲಿ ವ್ಯಕ್ತಿತ್ವ ಮತ್ತು ಗುರಿಯನ್ನು ರೂಪಿಸಿಕೊಳ್ಳಲು ಇರಬೇಕಾದ ಗುಣಗಳ ಬಗ್ಗೆಯೂ ಇಲ್ಲಿನ ಕವನಗಳು ಮಾಹಿತಿ ನೀಡುತ್ತವೆ. ಇಲ್ಲಿ ಕವಿ ಒಂದು ಕಾಲದ ಸಂಸ್ಕೃತಿ, ಪರಂಪರೆಯಲ್ಲಿ ನಂಬಿಕೆ ಹೊಂದಿದವರು. ಆ ನಂಬಿಕೆಯಿಂದಾಗಿ ಕಳೆದುಹೋಗುತ್ತಿರುವ ಸಾಂಪ್ರದಾಯಿಕ ಕಲೆ, ಕ್ರೀಡೆಗಳ ಬಗ್ಗೆ ಸೆಳೆತ ಹೊಂದಿದವರು. ಅದಕ್ಕೆ ಈ ಸಂಕಲನಕ್ಕೆ ಮಕ್ಕಳ ಪ್ರೀತಿಯ ಆಟದ ಹೆಸರಿಟಿದ್ದಾರೆ. ಇದು ಒಂದು ಮಕ್ಕಳ ಕ್ರೀಡೆಯ ಹೆಸರು.

 ಆಧುನಿಕ ಜಗತ್ತಿನಲ್ಲಿ ನಶಿಸಿ ಹೋಗುತ್ತಿರುವ ಹಳ್ಳಿಯ ಸಾಂಪ್ರದಾಯಿಕ ಕ್ರೀಡೆಗಳ ಕುರಿತು ಅರಿವು ಮೂಡಿಸುವುದರೊಂದಿಗೆ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಮಕ್ಕಳು ಇಂತಹ ಕ್ರೀಡೆಗಳಿಂದ ವಿಮುಖರಾಗಿ ಪಾಶ್ಚಿಮಾತ್ಯ ಕ್ರೀಡೆಗಳತ್ತ ಒಲವು ತೋರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ.  ಇಲ್ಲಿನ ಕವನ ಸಂಕಲನದಲ್ಲಿ ಪರಿಸರ, ಹಬ್ಬ, ಶಿಕ್ಷಕರ ದಿನ, ಮಳೆ, ಚಂದ್ರ, ಮರ, ಹಾವು, ಕೋಟೆ, ಕನ್ನಡಿಗರು, ಬಾಂಧವ್ಯ, ಭೂಕಂಪ ಮುಂತಾದ ಹತ್ತು ಹಲವು ವೈವಿಧ್ಯಮಯ ವಿಚಾರಗಳ ಕುರಿತು ಕವನಗಳನ್ನು ಸುಂದರವಾಗಿ ರಚಿಸಿದ್ದಾರೆ.

 ಸರಳ ಭಾಷೆಯಿಂದ ಮಕ್ಕಳಲ್ಲಿ ಕನ್ನಡತನವನ್ನು ಮೂಡಿಸುವಲ್ಲಿ ಇಂತಹ ಕವಿತೆಗಳು ಸಫಲವಾಗಲಿವೆ. ಈ ಕವಿತೆಗಳು ಕೇವಲ ಮಕ್ಕಳಿಗಾಗಿ ಅಲ್ಲ, ಇವು ತಂದೆ -ತಾಯಿ -ಪಾಲಕರಿಗೂ ಕೂಡ ಇಷ್ಟವಾಗುವಂಥವು. ಮಕ್ಕಳ ಅನನ್ಯ ಗ್ರಹಣ ವಿಧಾನವನ್ನು ಸರಿಯಾಗಿ ಪರಿಭಾವಿಸಿರುವ ಕವಿ ತಮ್ಮ ಕವಿತೆಗಳ ಮೂಲಕ ಸಾಮಾಜಿಕ ಅರಿವನ್ನು ಮತ್ತು ಇಂದಿನ ಓರೆ ಕೋರೆಗಳನ್ನು ಈ ಕವನಗಳಲ್ಲಿ ವಿಶ್ಲೇಷಿಸಿದ್ದಾರೆ.

 ಮೊದಲ ಕವನ  ‘ಚಿನ್ನಿ ದಾಂಡು ಮತ್ತು ಬುಗುರಿ’ಯಲ್ಲಿ ಬಾಲ್ಯದಲ್ಲಿ  ಆಡಿದ ಚಿನ್ನಿ ದಾಂಡು ಬುಗುರಿ ಆಟವನ್ನು ಮರೆಯಲು ಉಂಟೇ? ಎಂದು ಕೇಳುತ್ತಾರೆ. ಆದರೆ ಇಂದು ಕಂಪ್ಯೂಟರ್ ಗೇಮ್‌ಗಳು ಆ ಸ್ಥಾನದಲ್ಲಿ ಬಂದು ಕೂತು ಮಕ್ಕಳು ಒಟ್ಟಾಗಿ ಸೇರುವುದೇ ಮರೆತು ಹೋಗಿವೆ. ಬಯಲುಗಳಲ್ಲಿ ಮಕ್ಕಳ ಗುಂಪು ಕಾಣುತ್ತಿಲ್ಲ. ಹಮ್ಮು ಬಿಮ್ಮು ಬಿಟ್ಟು ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮಿತಿಮೀರಿದ ಆಧುನಿಕ ತಂತ್ರಜ್ಞಾನದಿಂದ ಮೈದಾನಗಳು ಖಾಲಿ ಖಾಲಿ ಆಗುತ್ತಿದೆ. ಟಿವಿಯಿಂದಾಗಿ ದೇಶಿ ಆಟಗಳು ಮರೆಯಾಗುತ್ತಿದೆ. ದೈಹಿಕ ಕಸರತ್ತನ್ನು ಮಕ್ಕಳು ಮಾಡುತ್ತಿಲ್ಲ ಎಂದು ವಿಷಾದಿಸುತ್ತಾರೆ

‘ಪರಿಸರ’ ಕವನದಲ್ಲಿ  ಜಗತ್ತಿನಲ್ಲಿ ವಿಜ್ಞಾನ -ತಂತ್ರಜ್ಞಾನಗಳಿಂದಾಗಿ ರೂಪಗೊಂಡ ಕೈಗಾರಿಕೀಕರಣ ಪ್ರಕ್ರಿಯೆಯಿಂದಾಗಿ ಪರಿಸರದ ನಾಶಕ್ಕೆ ಕಾರಣವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುವ ಕವಿ, ಪರಿಸರ ಕಾಳಜಿಯ ಬಗ್ಗೆಯೂ ಮಕ್ಕಳಲ್ಲಿ ಅರಿವನ್ನು ಮೂಡಿಸುತ್ತಾರೆ. ಪರಿಸರ ಮತ್ತು  ಜೀವಿ ಎರಡೂ ಬದಲಾವಣೆಯಿಂದ ಉಂಟಾದವು. ವಿಜ್ಞಾನ -ತಂತ್ರಜ್ಞಾನಗಳಿಂದು ಸ್ವಾರ್ಥಕ್ಕೆ ಬಳಕೆ ಆಗುತ್ತಿವೆ ಎಂದು ಹೇಳುತ್ತಾರೆ.

‘ಮರದ ಮಾತು’ ಕವನದಲ್ಲಿ ಮರ ಮಕ್ಕಳಿಗೆ ಹೇಳುವ ತನ್ನ ಬದುಕಿನ ಮಾತು ಮನಸೆಳೆಯುತ್ತದೆ.

ಎಲೆ, ಪುಷ್ಪಗಳ ಕೊಟ್ಟೆ

ನಿಮ್ಮ ಮನೆಗಳಿಗಾಗಿ ನರನಾಡಿಗಳನ್ನೇ ಕೊಟ್ಟೆ

ಉರುವಲಿಗಾಗಿ ಪದರ ಕೊಟ್ಟೆ

ನಿಮಗಾಗಿ ಜೀವನವನ್ನೆ ಮುಡುಪಾಗಿಟ್ಟೆ

ಆದರೂ ನೀ ನನ್ನ ಬೇರನ್ನು ಕಿತ್ತುಬಿಟ್ಟೆ. 

ಮರಹನನವನ್ನು ಯಾವ ರೀತಿ ನಿಷ್ಕರುಣೆಯಿಂದ ಮಾಡುತ್ತಿದ್ದೇವೆ ಎನ್ನುವುದಕ್ಕೆ ಅರ್ಥವತ್ತಾದ ಸಾಲುಗಳಿವು.

ವರ್ಷಕ್ಕೊಮ್ಮೆ ಬರುವ ಊರಿನ ತೇರಿನ ಸಂಭ್ರಮ ‘ನಮ್ಮೂರ ತೇರು’ ಇದರಲ್ಲಿದೆ. ಅಂದು ಶಾಲೆಗೆ ರಜೆ ಕೊಡುವುದು, ಹೊಸ ಬಟ್ಟೆ ಧರಿಸಿ ತಿರುಗಾಡುವುದು, ಸಿಹಿತಿಂಡಿ, ಮಿಠಾಯಿ ಖರೀದಿಸುವುದು, ಗೆಳೆಯರೆಲ್ಲ ಸೇರಿ ತೇರು ಪೇಟೆ ಸುತ್ತುವುದು, ಸಂತಸದಿಂದ ಕಂಡಲ್ಲೆಲ್ಲ ಕುಣಿದಾಡುವುದು, ಇಂತಹ ಸವಿನೆನೆಪುಗಳು ಮತ್ತೆ ಮತ್ತೆ ಬರಲಿ. ಜಾತ್ರ್ರೆ ಬಹುಬೇಗ ಬರಲಿ ಎಂದು ಮಕ್ಕಳು ಕಾಯುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.

‘ಇರವೆ’ಯಲ್ಲಿ ಶಿಸ್ತು, ಬಾಂಧವ್ಯ, ಶ್ರದ್ಧೆಯನ್ನು ಕಾಣಬಹುದು. ಇಂತಹ ಬಾಳನ್ನು ಮೈಗೂಡಿಸಿಕೊಳ್ಳಬೇಕೆಂದಬ ಸಂದೇಶವಿದೆ.

 ‘ಶಿಕ್ಷಕರ ದಿನಾಚರಣೆ’ಯಲ್ಲಿ  ಸಮಾಜದಲ್ಲಿ ಶಿಕ್ಷಕರ ಸಜ್ಜನಿಕೆ, ಸರಳತೆ ಮತ್ತು ಅವರ ವ್ಯಕ್ತಿತ್ವ್ವ ಮಹತ್ವದ್ದು. ಎಲ್ಲ ಆಚರಣೆಗಳಿಗಿಂತ ಶಿಕ್ಷಕ ದಿನಾಚರಣೆ ಅಮೂಲ್ಯವಾದುದು ಎನ್ನುತ್ತಾರೆ. 

‘ಕಡಲು’ ಕವನದಲ್ಲಿ

ಬಂದ ನೀರು ಮರಳುತ್ತದೆ

ಮತ್ತೊಂದು ತೆರೆ ಏಳುತ್ತದೆ

ದಂಡೆಗೆ ಬಂದು ಕಾಣೆಯಾಗುತ್ತದೆ

ಇದುವೇ ದೇಶ- ವಿದೇಶ ಬೆಸೆದಿದೆ

 ಎನ್ನುವ ಅಪೂರ್ವ ಸಂದೇಶವಿದೆ. ಸಮುದ್ರದ ಸೊಬಗನ್ನು ಇಲ್ಲಿ ಕಟ್ಟಿಕೊಡುವ ಕವಿ, ಅಲ್ಲಿನ ತೇಲುವ ಹಡಗು, ನೀಲಮಯ ಆಕಾಶ, ಸೂರ್ಯಾಸ್ತದ ಬೆರಗು, ಮುದ ನೀಡುವ ಗಾಳಿ, ನೋಟ, ಏಡಿ, ಮೀನುಗಳ ಆಟ, ಮರಳುಗಳು ನೀರಿನೊಟ್ಟಿಗೆ ತೆರಳುವುದ ಚಿತ್ರಿಸುತ್ತಾರೆ.

 ‘ಅಣ್ಣ-ತಂಗಿ’ ಕವನ ಭಾವನಾತ್ಮಕ ಸಂಬಂಧ ಹೇಳುತ್ತಲೇ ಬಾಲ್ಯದ ದಿನಗಳನ್ನು ನೆನೆಪಿಸುತ್ತದೆ. 

 ನನ್ನ ಮುದ್ದಿನ ಅಣ್ಣ

ರಜೆಯಲಿ ಊರಿಗೆ ಬಾರಣ್ಣ,

 ಬರುತಲಿ ಮರೆಯದೆ ನೀನು

ಬಣ್ಣದ ಬಳೆಗಳ ತಾರಣ್ಣ

ಎಷ್ಟು ಚೆಂದದ ಸಾಲುಗಳು ಇವು. ಅಣ್ಣ- ತಂಗಿಯ ವಾತ್ಸಲ್ಯ ಇಲ್ಲಿ ಕಾಣಬಹುದು.

ಮಕ್ಕಳಿಗೆ ಚಂದಿರನೆಂದರೆ ಇಷ್ಟ. ಆ ಚಂದಿರ ತಂಪನ್ನು ತರುತ್ತಾನೆ, ಮನಸ್ಸಿಗೆ ಪ್ರಶಾಂತತೆ ಕೊಡುತ್ತಾನೆ. ಯೋಚನೆಗಳನ್ನೆಲ್ಲಾ ಮರೆಸುತ್ತಾನೆ. ಮೊಗದಲ್ಲಿ ನಗುವ ಮೂಡಿಸುತ್ತಾನೆ, ಶಾಂತಿ- ನೆಮ್ಮದಿಯ ಸಾಕಾರಮೂರ್ತಿಯಾದ ಚಂದಿರ ಬಣ್ಣದ ಕನಸನ್ನು ಬಿತ್ತುತ್ತಾನೆ ಎಂದು ‘ನಮ್ಮಯ ಚಂದಿರ’ದಲ್ಲಿ ವರ್ಣಿಸುತ್ತಾರೆ.  

‘ಬಾಂಧವ್ಯ’  ಕವನದಲ್ಲಿ ತಾಯಿಯೊಡನೆಯ ಸಂಬಂಧವನ್ನು ಹೇಳುತ್ತ 

ನಿನ್ನ  ಪ್ರೀತಿಯ ಕೂಸು ನಾನಮ್ಮ,

ಈ ಜೀವವು ಹಾಲಿನಂತೆ ತಿಳಿಯಮ್ಮ

ಹಾಲೆರೆದು ಪೋಷಿಸಿದೆ

ನನ್ನ ಜನುಮದಾತೆಗೆ ನಾನೇನು ನೀಡಲಿ 

ಎಂದು ಮಗು ಪ್ರಶ್ನಿಸುತ್ತದೆ. ತಾಯಿಯ ಋಣ ತೀರಿಸಲಾಗದ್ದು ಎನ್ನುವ ಸಂದೇಶವಿದೆ.  

ಒಟ್ಟಿನಲ್ಲಿ, ಮಕ್ಕಳ ಅನನ್ಯ ಗ್ರಹಣ ವಿಧಾನವನ್ನು ಅರಿತ ಕವಿ ಕವನದ ಮೂಲಕ ಇಂದಿನ ಓರೆಕೋರೆಗಳು, ಸಾಮಾಜಿಕ ಅರಿವು, ಮಕ್ಕಳು ಇಷ್ಪಡುವ ಸಂಗತಿಗಳನ್ನು ಆಯ್ದು ಕವನ ರಚಿಸಿ ಮಕ್ಕಳ ಮನಸೆಳೆಯುವಲ್ಲಿ ಸಫಲರಾಗಿದ್ದಾರೆ.


ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೩.೯.೨೦೨೬

...........................

 


Comments

Popular posts from this blog