ಸುಳ್ಳನ್ನು ಯಶಸ್ವಿಯಾಗಿಸುತ್ತಲೇ ಹೋಗುವ
‘ನನ್ ಮದ್ವೆ ಫಿಕ್ಸಾಯ್ತು’
‘ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು’ ಎನ್ನುವ ಗಾದೆ ಮಾತು ಇದೆ. ಈ ಗಾದೆ ಮಾತನ್ನು ನೆನಪಿಗೆ ತರುವ ಕೃತಿಯೇ ‘ನನ್ ಮದ್ವೆ ಫಿಕ್ಸಾಯ್ತು’ ಇಂಜಿನೀಯರ್ ಆಗಿರುವ ಚಿಕ್ಕಮಗಳೂರಿನ ರಾಘವ್ ವಿಶ್ವಾಸಿ ಅವರ ಎರಡನೆಯ ಕೃತಿ ಇದು. ಹಾಸ್ಯಮಯ ನೀಳ್ಗತೆಯಾದ ಇದರಲ್ಲಿ ಸುಳ್ಳಿನಿಂದಲೇ ಹೇಗೆ ಜೀವನವನ್ನು ಕಟ್ಟಿಕೊಳ್ಳಬಹುದು, ಎಷ್ಟು ಜನರನ್ನು ಯಾವ್ಯಾವ ರೀತಿಯಲ್ಲಿ ಯಾಮಾರಿಸಹುದು, ಈ ಮೂಲಕ ಮದುವೆಯನ್ನು ಹೇಗೆ ಮಾಡಿಕೊಳ್ಳಬಹುದು, ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಹೇಗೆ ಯಶಸ್ವಿಯಾಗಿ ಜೋಡಿಸುತ್ತಾ ನಮ್ಮ ಕಾರ್ಯವನ್ನು ಸಾಧಿಸಬಹುದು ಎನ್ನುವುದನ್ನು ಬಹುಸುಂದರವಾಗಿ ಚಿತ್ರಿಸಿದ್ದಾರೆ.
ಕೃತಿ ಓದುವಾಗ ನಗು ತಡೆಯಲು ಸಾಧ್ಯವೇ ಇಲ್ಲ. ಎಂತೆಂತಹ ಮಾತುಗಳು, ಕಿಲಾಡಿತನದ ಜೋಕುಗಳು, ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಳ್ಳುವುದು, ಒಂದೇ ಸ್ವಭಾವದ ಮಿತ್ರರಿಬ್ಬರ ಮಧ್ಯೆ ಇರುವ ಅನುಬಂಧ, ಸಾಲ ಕೊಟ್ಟವರನ್ನು ಹೇಗೆ ಖೆಡ್ಡಾಕ್ಕೆ ಕೆಡವಬಹುದು... ಮುಂತಾದದ ರೋಚಕ, ಅಷ್ಟೇ ಕುತೂಹಕರ ಕಥೆ ಇದು.
ಇದರಲ್ಲಿ ಪ್ರಮುಖವಾಗಿ ನಾಲ್ಕು ಪಾತ್ರ ಮಾತ್ರ ಇದೆ. ಕಥಾ ನಾಯಕ ಗೋಪಿ, ಆತನ ಮಿತ್ರ ಕುಬೇರ, ಆತನ ತಂದೆ-ತಾಯಿ ಆಗಿ ನಟಿಸುವ ಲಾಯರ್ ಲಂಕಾಪತಿ ಮತ್ತು ರೋಹಿಣಿ. ಇವರೊಟ್ಟಿಗೆ ಸಣ್ಣಪುಟ್ಟ ಪಾತ್ರದಲಿ ಇನ್ನೂ ನಾಲ್ಕಾರು ಜನರು ಬರುತ್ತಾರೆ.
ಕೃತಿಯ ಸಾರಾಂಶದ ಬಗ್ಗೆ ಗಮನನಿಸುವುದಾದರೆ, ಗೋಪಿ ನೂರು ಜನರ ಹತ್ತಿರ ಸಾಲ ಪಡೆದುಕೊಂಡು ಬಿಸಿನೆಸ್ ಮಾಡುತ್ತಾನೆ. ಅವನ ಕಚೇರಿಗೆ ಸಾಲಗಾರರು ಸಾಲಮರುಪಾವ್ತಿಸಲು ಒತ್ತಾಯಿಸಿ ಬರುತ್ತಾರೆ. ಆ ವ್ಯಕ್ತಿಗಳಿಗೆ ಚಿತ್ರವಿಚಿತ್ರ ನೆಪಗಳನ್ನು ಹೇಳಿ ಸಾಗಹಾಕುವುದು ಅವನ ಅದ್ಭುತ ಕಲೆ. ಈ ಮಧ್ಯೆ ಆತನ ಮದುವೆ ಫಿಕ್ಸ್ ಆಗುತ್ತದೆ.
ಈ ಮದುವೆಗೆ ಆಮಂತ್ರಣ ಪತ್ರಿಕೆ ಮಾಡಿಸಲು ಗೋಪಿ ಪ್ರಿಂಟಿಂಗ್ ಪ್ರೆಸ್‌ಗೆ ಹೋಗಿ ವಿಸಿಟಿಂಗ್ ಕಾರ್ಡ್ ತರಹದ ಆಮಂತ್ರಣ ಮಾಡಿಸುತ್ತಾನೆ. ಅದರಲ್ಲಿ ಒಂದೆಡೆ ಫರ್ನಿಚರ್ ಅಂಗಡಿ ಜಾಹಿರಾತು, ಮತ್ತೊಂದು ಕಡೆ ಪ್ರಿಂಟಿಂಗ್ ಪ್ರೆಸ್ ಜಾಹೀರಾತು, ಅದರಲ್ಲಿ ಕೆಳಗಡೆ ಸಣ್ಣದಾಗಿ ಮದುವೆಯ ಆಮಂತ್ರಣ ಮಾಡಿಸುತ್ತಾನೆ. ಈ ಮೂಲಕ ಆಮಂತ್ರಣ ಪತ್ರಿಕೆಯ ಖರ್ಚನ್ನು ಜಾಹೀರಾತಿನ ಮೂಲಕವೇ ಉಳಿಸುತ್ತಾನೆ. ಇದು ಆತನ ಮೊದಲ ಬುದ್ಧಿವಂತಿಕೆ. ಜೊತೆಗೆ ತನ್ನ ಜಾಹೀರಾತನ್ನು ಹಾಕಿದ್ದಕ್ಕೆ ಪ್ರಿಂಟಿಂಗ್ ಪ್ರೆಸ್ ಮಾಲಕ ನೂರು ಕಾರ್ಡ್ ಅನ್ನು ಉಚಿತವಾಗಿ ಮಾಡಿಕೊಡುತ್ತಾನೆ. ಸಾಲ ವಸೂಲಿಗೆ ಬರುವವರಿಗೆಲ್ಲ ಆಮಂತ್ರಣ ಪತ್ರಿಕೆ ಕೊಟ್ಟು ಮದುವೆಗೆ ಕರೆಯುತ್ತಾನೆ. ಅದರಲ್ಲಿ ‘ಮುಯ್ಯಿ ಫಸ್ಟ್, ಊಟ ನೆಕ್ಸ್ಟ್’ ಎಂದು ಬರೆದಿರುತ್ತಾನೆ. ಆಮಂತ್ರಣ ಪತ್ರಿಕೆ ಪಡೆದವರ ಹೆಸರನ್ನು ಗುರುತು ಹಾಕಿಕೊಂಡು, ಮದುವೆಗೆ ಬಂದು ಮುಯ್ಯಿ ಹಾಕಿ ಹಣ ಪಡೆದುಕೊಂಡು ಹೋಗಿ ಎನ್ನುತ್ತಾನೆ.
ಈ ಮಧ್ಯೆ ಮದುವೆಗೆ ಆತ ಫಿಕ್ಸ್ ಮಾಡಿಕೊಂಡ ಹುಡುಗಿಯ ಹೆಸರು ಸ್ಫೂರ್ತಿ. ಆಕೆ ಸರಕಾರಿ ಶಾಲೆಯ ಶಿಕ್ಷಕಿ. ಆ ಹುಡುಗಿ ಹೇಗೆ ಈತನ ಬಲೆಗೆ ಬಿದ್ದಳೆನ್ನುವುದನ್ನು ಸೊಗಸಾಗಿ ಕಥೆಯಲ್ಲಿ ವಿವರಿಸಲಾಗಿದೆ.
ಮುಂದಿನ ಹಂತ ಮದುವೆಯ ತಯಾರಿ. ಈ ಮದುವೆಗೆ ಎಷ್ಟೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ. ಅದನ್ನು ಉಪಾಯದಿಂದ ನಿರ್ವಹಿಸುತ್ತಾನೆ. ಇದಕ್ಕೆಲ್ಲ ಆತನ ಶಿಷ್ಯ ಅಥವಾ ಮಿತ್ರ ಕುಬೇರ್‌ನ ಸಾಥ್ ಇದುತ್ತದೆ. ‘ಈತನ ಹೆಸರು ಮಾತ್ರ ಕುಬೇರ, ಜೇಬು ಸದಾ ಖಾಲಿ’ ಎನ್ನುವ ಮಾತು ಬರುತ್ತದೆ. ಜೊತೆಗೆ ಇವರಿಬ್ಬರಿಗೂ ‘ಚೋರ ಗುರು, ಚಾಂಡಾಲ ಶಿಷ್ಯ’ ಎಂಬ ನಾಮಧೇಯವೂ ಅಂಟಿಕೊಳ್ಳುತ್ತದೆ. ಹುಡುಗಿ ಮನೆಗೆ ಹೋಗಿ ಮದುವೆ ನಿಶಯಮಾಡಿಕೊಳ್ಳುವ ದಿನದಂದು ಈತನ ಗುರು ‘ಲಾಯರ್ ಲಂಕಾಪತಿ’ ಎನ್ನುವವನ್ನು ತಂದೆಯನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾನೆ. ಈ ಲಂಕಾಪತಿ ಮಹಾ ಕಿತಾಪತಿ, ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ, ಒಬ್ಬರಿಂದ ಇನ್ನೊಬ್ಬರ ಮೇಲೆ ಕೇಸು ಹಾಕಿಸಿ ಜೀವನ ಸಾಗಿಸುವವನು. ಈತನು ಗೋಪಿಯ ಗುರು ಎಂದ ಮೇಲೆ ನೀವೇ ನಿಶ್ಚಯಿಸಿ, ಎಂತೆಂತಹ ಕಿಲಾಡಿತನ, ಯಾಮಾರಿಸುವಿಕೆ ಮಾಡಿರಬಹುದು ಎನ್ನುವುದನ್ನು.
ಅಂತೂ ವಿವಾಹ ನಿಶ್ಚಯವಾಗುತ್ತದೆ. ತಾಯಿಯ ಪಾತ್ರ ವಹಿಸುವಂತೆ ಬರಹಗಾರ್ತಿ ರೋಹಿಣಿ ಎನ್ನುವವರನ್ನು ಯಾಮಾರಿಸಿ ಯಶಸ್ವಿಯಾಗುತ್ತಾನೆ. ಲಂಕಾಪತಿ ರೋಹಿಣಿಯ ಚಿತ್ರ ನೋಡಿದ ಕೂಡಲೇ ತನ್ನ ಕಾಲೇಜು ದಿನ ನೆನಪಾಗುತ್ತದೆ. ಆಗ ಆಕೆಯನ್ನು ಈತ ಪ್ರೀತಿಸುತ್ತಿದ್ದನು. ಅದು ವಿಫಲವಾಗಿತ್ತು. ಕಿಲಾಡಿ, ಚಾಣಾಕ್ಷ, ಖತರ್ನಾಕ್ ಬುದ್ಧಿಯ ಗೋಪಿಯಂತಹವರು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಇಲ್ಲಿ ಬರೇ ಯಾಮಾರಿಸುವಿಕೆ, ಮಾತೇ ಬಂಡವಾಳ. ತನ್ನ ಹೆಂಡತಿಯಾಗುವವಳ ತಂಗಿ ಕೀರ್ತಿ ಎನ್ನುವವಳನ್ನು ಯಾರೋ ಅಪಹರಿಸಿದಂತೆ ನಾಟಕವಾಡಿ ಅಪಹರಣಕಾರರಿಗೆ ೪೦ ಲಕ್ಷ ಕೊಟ್ಟು ಆಕೆಯನ್ನು ರಕ್ಷಿಸಿದ ನಾಟಕವಾಡುತ್ತಾನೆ. ಇನ್ನೊಂದು ದಿನ ಮಾವ ರಾಮಚಂದ್ರ ಖಾಸಗಿ ಕಂಪನಿಯ ನೌಕರನಾಗಿದ್ದು, ಅಲ್ಲಿ ಹಣದ ಅವ್ಯವಹಾರ ಮಾಡಿದ್ದಾನೆಂದು ಹೆಂಡತಿಗೆ ಕಂಪನಿಯಿಂದ ಕರೆ ಬಂದಂತೆ ಮಾಡಿ ಹಣವನ್ನು ತಾನೇ ತುಂಬಿ ಮಾವನ ಮರ್ಯಾದೆ ಕಾಪಾಡಿದ ನಾಟಕವಾಡುತ್ತಾನೆ. ಮಾವನ ಮನೆಯಲ್ಲಿ ವಿಶ್ವಾಸ ಗಳಿಸಿದ ಮಹಾನ್ ಕಿಲಾಡಿ ಈ ಗೋಪಿ.
ಒಂದು ದಿನ ಲಂಕಾಪತಿ ತುರ್ತು ಕೇಸ್ ಮೇಲೆ ಮುಂಬೈ ಹೋಗುವಾಗ ಗೋಪಿಗೆ ಪತ್ರ ಕೊಟ್ಟು ಹೋಗುತ್ತಾನೆ ಅದರಲ್ಲಿ ‘ಮದುವೆಯ ವೇಳೆ ನಾನಿಲ್ಲ’ ಎಂದು ಇರುತ್ತದೆ. ಇದನ್ನು ನೋಡಿದ ಕಂಗಾಲಾದ ಗೋಪಿ ‘ನಾನಿಲ್ಲ’ ಎನ್ನುವುದನ್ನು ‘ಇನ್ನಿಲ್ಲ’ ಎಂದು ಅರ್ಥೈಸಿಕೊಂಡು ಇದರಿಂದ ಪಾರಾಗಲು ಮತ್ತೊಂದು ಉಪಾಯ ಹೂಡುತ್ತಾನೆ. ಆ ವೇಳೆ ‘ನಾನಿಲ್ಲ’ ಎಂದಿದ್ದ ಲಂಕಾಪತಿ ಹಾಜರಾಗುವ ಮೂಲಕ ಗೋಪಿಯ ಉಪಾಯ ವಿಫಲವಾಗುವಂತೆ ಮಡಿದಾಗ, ಅಲ್ಲಿಯೂ ಅದಕ್ಕೊಂದು ಹೊಸ ಕಥೆ ಕಟ್ಟುತ್ತಾನೆ. ಆ ಕಥೆ ಯಾವುದು, ಅದರಿಂದ ಹೇಗೆ ಮಾವನ ಮನೆಯವರನ್ನು ನಂಬಿಸಿ ತಾನು ಪಾರಾದ ಎನ್ನುವುದನ್ನು ಈ ಕೃತಿ ಓದಿಯೇ ತಿಳಿಯಬೇಕು.
ಹೀಗೆ ಈ ಕೃತಿಯ ತುಂಬಾ ಒಂದಕ್ಕೊಂದು ಹೊಸ ಕಥೆ ಕಟ್ಟುವಿಕೆ ನಡೆಯುತ್ತದೆ. ಎಲ್ಲಿಯೂ ತಾನು ಸಿಕ್ಕಿಬೀಳದಂತೆ, ತಾನು ಸುಳ್ಳ ಎನ್ನುವುದು ಗೊತ್ತಾಗದಂತೆ ಗೋಪಿ ಕೆಲಸ ಮಾಡಿದರೆ ಅದಕ್ಕೆ ಕುಬೇರನ ಸಾಥ್ ಇರುತ್ತದೆ. ಇಲ್ಲಿಂದ ಮದುವೆಯ ತಯಾರಿ ಆರಂಭವಾಗುತ್ತದೆ.
ಈ ಮಧ್ಯೆ ಗೋಪಿಯಿಂದ ಮತ್ತು ಲಾಯರ್ ಲಂಕಾಪತಿಯಿಂದ ಮೋಸಕ್ಕೊಳಗಾದ ಕರಿಕಾಳ ಮತ್ತು ಮುತ್ತ ಎನ್ನುವವರು ಹೊಟ್ಟೆಪಾಡಿಗಾಗಿ ಕಳ್ಳತನಕ್ಕಿಳಿದಾಗ ಸಿಕ್ಕಿಬಿದ್ದು, ಜೈಲಿಗೆ ಸೇರಿ ೧೦ ವರ್ಷ ಶಿಕ್ಷೆಗೊಳಗಾಗುತ್ತಾರೆ. ಇವರು ಗೋಪಿ ಮತ್ತು ಲಂಕಾಪತಿಯಿಂದ ಹೇಗೆ ವಂಚನೆಗೆ ಒಳಗಾದರೆನ್ನುವುದು ಸಹ ಇಲ್ಲಿನ ಕುತೂಹಲಕರ ಕಥೆ. ಜೈಲಿನಲ್ಲಿದ್ದಾಗ ಕಾಳ ಮತ್ತು ಮುತ್ತ ಪರಿಚಯವಾಗಿ ಒಬ್ಬರ ವಿಷಯ ಇನ್ನೊಬ್ಬರು ಅರಿತ ನಂತರ ಗೋಪಿ ಮತ್ತು ಲಂಕಾಪತಿಯನ್ನು ಮುಗಿಸಬೇಕೆಂದು ನಿರ್ಧರಿಸುತ್ತಾರೆ. ಇದಕ್ಕಾಗಿ ಜೈಲಿನಿಂದ ತಪ್ಪಿಸಿಕೊಳ್ಳುವ ಯೋಜನೆ ಹೆಣೆಯುತ್ತಾರೆ. ಆ ಯೋಜನೆ ಯಾವುದು, ಅದರಲ್ಲಿ ಹೇಗೆ ಯಶಸ್ವಿಯಾದರು, ಜೈಲಿನಲ್ಲಿ ರಕ್ಷಣೆಗೆ ಇದ್ದ ಪೊಲೀಸರಿಬ್ಬರಿಗೆ ಹೇಗೆ ಚಳ್ಳೆಹಣ್ಣು ತಿನ್ನಿಸಿದರೆನ್ನುವುದು ತುಂಬಾ ರೋಚಕವಾಗಿದೆ.
ಪರಾರಿಯಾಗಿ ಇಬ್ಬರೂ ಮದುವೆ ಮಂಟಪದಲ್ಲಿ ಗೋಪಿ ಮತ್ತು ಲಂಕಾಪತಿ ಇರುವುದನ್ನು ಅರಿತು ಅಲ್ಲಿಗೆ ಧಾವಿಸಿದಾಗ ಇಬ್ಬರೂ ಕಾಣಸಿಗುತ್ತಾರೆ. ಆದರೆ ಅಪರಿಚಿತರಿಗೆ ಮದುವೆ ಮನೆಯಲ್ಲಿ ಅವಕಾಶವಿಲ್ಲ, ಹೊರಹೋಗಿ ಎನ್ನುತ್ತಾರೆ. ಇದರಿಂದಾಗಿ ದೂರದಲ್ಲೇ ನಿಂತು ತಂತ್ರ ರೂಪಿಸುತ್ತಾರೆ. ಕರಿಕಾಳ ಅಡುಗೆ ಮನೆಗೆ ಹೋಗಿ ಚಾಕು ಕೇಳುತ್ತಾನೆ. ಆದರೆ ಚಾಕು ಸಿಗುವುದಿಲ್ಲ. ಕೊನೆಗೆ ತಾವು ತಂದಿದ್ದ ಬೇಧಿ ಮಾತ್ರೆಯನ್ನು ಶರಬತ್‌ಗೆ ಹಾಕಿ ಇಬ್ಬರಿಗೂ ಕೊಟ್ಟರೂ ಅದನ್ನು ಅವರು ಬಳಸುವುದಿಲ್ಲ. ಸಾಂಬಾರ್ ಪಾತ್ರ್ರೆಗೆ ಚೆಲ್ಲುತ್ತಾರೆ. ಅಡುಗೆ ಮನೆ ಹೊಕ್ಕ ಕಾಳ ಹಸಿವೆಯಿಂದ ಉಣ್ಣಲು ಕೇಳುತ್ತಾನೆ. ಊಟ ಕೊಡಲು ಅವರು ಒಪ್ಪುವುದಿಲ್ಲ. ಕೆಲವು ಐಟಂಗಳ ರುಚಿ ನೋಡುತ್ತಾನೆ. ರಸಂ ರುಚಿ ನೋಡಿ ಚೆನ್ನಾಗಿದೆ ಎನ್ನುತ್ತಾ ಚೆನ್ನಾಗಿ ಕುಡಿದು ಮುತ್ತಾನಿಗೆ ಕೊಡಲು ತರುತ್ತಾನೆ. ರಸಂ ಕುಡಿದ ಕಾಳನಿಗೆ ಬೇಧಿ ಆರಂಭವಾಗುತ್ತದೆ. ಇನ್ನೊಂದೆಡೆ, ಶೌಚಾಲಯಕ್ಕೆ ಹೋದ ಈತ ಬಾರದಿದ್ದಾಗ ಮುತ್ತಾನಿಗೆ ಚಿಂತೆಯಾಗುತ್ತದೆ.
ಮತ್ತೊಂದೆಡೆ, ಮದುವೆಗೆ ಬಂದ ಸಾಲಗಾರರ ಲಿಸ್ಟ್ ಮಾಡುತ್ತಾ ಅವರಿಗೆಲ್ಲ ಕೂಪನ್ ಕೊಡುವ ಕುಬೇರ ತಾನು ಕರೆದ ಹಾಗೆ ಬಂದು ಹಣ ಪಡೆಯಬೇಕೆಂದು ಸೂಚಿಸುತ್ತಾನೆ. ಎಷ್ಟು ಹೊತ್ತಾದರೂ ಹಣ ಕೊಡದಿದ್ದಾಗ ಮಂಟಪದತ್ತ ಎಲ್ಲರೂ ತೆರಳುವರು. ಅಲ್ಲಿಂದ ಅವರನ್ನು ಊಟದ ಹಾಲ್‌ಗೆ ಸಾಗಹಾಕಲಾಗುತ್ತದೆ. ಹಸಿವೆಯಿಂದ ಇದ್ದವರೆಲ್ಲ ಉಟಕ್ಕೆ ಮುಗಿಬೀಳುವರು. ಅಲ್ಲಿ ರಸಂ ಕುಡಿದ ಎಲ್ಲರೂ ಬೇಧಿಗೊಳಗಾಗಿ ಶೌಚಾಲಯದತ್ತ ದೌಡಾಯಿಸುತ್ತಾರೆ. ಇತ್ತ ಗೋಪಿಯ ಮದುವೆ ಯಶಸ್ವಿಯಾಗಿ ನಡೆಯುತ್ತದೆ. ಬಳಿಕ ಊಟದ ಹಾಲ್‌ಗೆ ಬಂದಾಗ ಯಾರೂ ಕಾಣದಿದ್ದಾಗ ಎಲ್ಲರೂ ಮನೆಗೆ ತೆರಳಿದರೆಂದು ಅರಿತು ಕಲ್ಯಾಣಮಂಟಪದಿಂದ ಗೋಪಿ ಆತನ ಪತ್ನಿ, ಲಂಕಾಪತಿ, ರೋಹಿಣಿ, ರಾಮಚಂದ್ರ ಮತ್ತು ಅವರ ಪತ್ನಿ ಸಹಿತ ಎಲ್ಲರೂ ತೆರಳುತ್ತ್ತಾರೆ.
ರಸಂ ಕುಡಿದವರು ಅರ್ಥಾತ್ ಸಾಲಕೊಟ್ಟವರು ಸಹ ಶೌಚಾಲಯ ಸಾಲದೆ ಊರ ಹೊರಗಿನ ರಸ್ತೆಯಂಚಿನ ಕೆರೆಯ ಬಳಿ ಕೂತಿರುವುದನ್ನು ನೋಡುತ್ತಾ ಗೋಪಿ ಸಾಗುತ್ತಾನೆ.
ಹೀಗೆ ಗೋಪಿ ಎಲ್ಲರಿಗೂ ಟೋಪಿ ಹೊಲೆದು ಮದುವೆಯಾಗುವ ಮೂಲಕ ಸಾಲಗಾರರ ಕಾಟದಿಂದ ಪಾರಾಗುತ್ತಾನೆ. ಇದೇ ವೇಳೆ ರೋಹಿಣಿಗೆ ಮರುಳಾಗಿದ್ದ ಲಂಕಾಪತಿಯು ಅವಳ ಮನೆಗೆ ತೆರಳದಂತೆ ಮಾಡಲು ಮತ್ತೊಂದು ಪ್ಲಾನ್ ರೂಪಿಸಿ ಅದರಲ್ಲೂ ಸಕ್ಸಸ್ ಆಗುತ್ತಾನೆ. ಅವಿವಾಹಿತೆಯಾದ ರೋಹಿಣಿ ಕೊನೆಗೆ ಎಲ್ಲಿಗೆ ಹೋದಳೆನ್ನುವ ವಿಚಾರವೂ ಇದರಲ್ಲಿದೆ.
ಕೃತಿಯು ಸಾಮಾನ್ಯ ಯುವಕನೊಬ್ಬ ಮದುವೆಯಾಗದೆ ಪರಿತಪಿಸುವಾಗ ಆಕಸ್ಮಿಕವಾಗಿ ಸಿಕ್ಕ ಶ್ರೀಮಂತ ಹುಡುಗಿಯ ಜೊತೆ ಸಂಬಂಧ ಮುರಿದುಬೀಳದಂತೆ ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಕುರಿತಾಗಿಯು ಇದೆ. ಆದರೆ ಇದಕ್ಕೆ ಎಷ್ಟೋ ತಂತ್ರ ರೂಪಿಸುತ್ತಾನೆ. ತಾನು ಸಾಲಗಾರ ಎನ್ನುವುದು ಗೊತ್ತಾಗದ ಹಾಗೆ ಎಲ್ಲರೊಡನೆ ವ್ಯವಹರಿಸುತ್ತಾ, ಅವರಿಗೆಲ್ಲ ಟೋಪಿ ಹಾಕುತ್ತಾ, ‘ಬಿಸಿನೆಸ್ ಮ್ಯಾನ್’ ಎಂದೇ ಪೋಸು ಕೊಡುವ ಗೋಪಿ ಒಟ್ಟಾರೆಯಾಗಿ ಮಹಾ ಚತುರನಾಗಿ ಕಾಣುತ್ತಾನೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೧೬.೮.೨೦೨೬
............................

Comments
Post a Comment