ಎರಡು ತಲೆಮಾರುಗಳ ಸ್ಥಿತ್ಯಂತರದ
‘ಹರಿವ ನಿಲ್ಲಿಸದಿರು ತಾಯಿ’
ಸರಸ್ವತಿ ನದಿ ಮೂಲದ ಗೌಡ ಸಾರಸ್ವತ ಸಮಾಜವು ೧೨ ವರ್ಷಗಳ ಭೀಕರ ಬರಗಾಲದ ಬಳಿಕ ಸರಸ್ವತಿಯ ಒಡಲು ಖಾಲಿಯಾದಾಗ ದಕ್ಷಿಣದತ್ತ ವಲಸೆ ಬರುವುದು, ಆಗ ಪೋರ್ತುಗೀಸರ ಆಡಳಿತವಿದ್ದುದರಿಂದ ಅವರಿಂದ ದಾಳಿ ತಪ್ಪಿಸಿಕೊಳ್ಳಲು, ಧರ್ಮ ಭ್ರಷ್ಟರಾಗದಿರಲು, ಸಮಾಜದ ಇತಿಹಾಸ ಕಾಪಾಡಲು, ಅವರು ನಡೆಸಿದ ಹೋರಾಟ, ವಲಸೆ ಹೊರಟ ಸಹಸ್ರಾರು ಕುಟುಂಬಗಳು ಪಶ್ಚಿಮ ಕರಾವಳಿಯ ಉದ್ದಕ್ಕೂ ನೆಲೆಸುವುದು, ಹೊಸ ಜೀವನಕ್ಕಾಗಿ ಸಂಘರ್ಷ ಆರಂಭಿಸುವುದು, ಪ್ರಸ್ತುತ ಈ ಸಮಾಜವು ಮರೆಯಾಗುತ್ತಿರುವ ಸಂಪ್ರದಾಯ, ಸಂಸ್ಕೃತಿ ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು ‘ಹರಿವ ನಿಲ್ಲಿಸದಿರು ತಾಯಿ’
ಕಾದಂಬರಿಯ ಸಾರಾಂಶ.
ಲೇಖಕ ಮನೋಹರ್ ಪೈ ಅವರ ಈ ಕೃತಿ ಗೌಡ ಸಾರಸ್ವತ ಸಮಾಜದ ಮೇಲೆ ಕ್ಷಕಿರಣ ಬೀರುವುದಲ್ಲದೆ, ಅವರ ಹಬ್ಬ- ಹರಿದಿನಗಳ ಆಚರಣೆ, ಆಹಾರ ಪದ್ದತಿ, ಸಂಪ್ರದಾಯವನ್ನು ಕಟ್ಟಿಕೊಡುವ ಮೂಲಕ ಒಂದು ರೀತಿಯಲ್ಲಿ ಐತಿಹಾಸಿಕ, ಸಾಂಸ್ಕೃತಿಕ ವಿಷಯವನ್ನೂ ಈ ಕಾದಂಬರಿ ತೆರೆದಿಟ್ಟಿದೆ.
ಪ್ರಸ್ತುತ ದಿನಮಾನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಮತ್ತು ಯುವಜನರ ಮನಃಸ್ಥಿತಿಯನ್ನು ಮನೋಜ್ಞವಾಗಿ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ಇದು ಇಂದು ಬಹುತೇಕ ಎಲ್ಲ ಸಮಾಜಗಳ ಸಮಸ್ಯೆಯೂ ಹೌದು.
ವಿವಾಹ ಬಂಧನದ ಬಗ್ಗೆ ನಿರಾಸಕ್ತಿ, ಅನಾದರ, ಮದುವೆಯ ವಯಸ್ಸಾದರೂ ಮದುವೆಯಾಗುವುದನ್ನು ಮುಂದೂಡುತ್ತಿರುವುದು, ಪಾಲಕರ ಇಚ್ಛೆಯಂತೆ ವಿವಾಹಕ್ಕೆ ಸಿದ್ದರಾಗದಿದ್ದಾಗ ಪಾಲಕರ ಮೇಲೆ ಅದು ಬೀರುತ್ತಿರುವ ಪರಿಣಾಮ, ಒಂದೇ ಓರಗೆಯವರನ್ನು ಕಂಡಾಗ, ಅದರಲ್ಲೂ ಕೆಲವರ ವಿವಾಹವಾದಾಗ ತಮ್ಮ ಮಗ, ಮಗಳು ಇನ್ನೂ ಮದುವೆಯಾಗದಿರುವುದನ್ನು ನೆನೆಸಿಕೊಂಡು ಬೇಸರಪಡುವುದು, ನೌಕರಿಗೆ ಬೆಂಗಳೂರಿಗೋ. ಅಮೆರಿಕಕ್ಕೋ ಹೋದವರು ಅಲ್ಲಿಯೇ ಅನ್ಯಜಾತಿಯವರನ್ನು ಪ್ರೀತಿಸಿ, ಮನೆಯವರ ಸಮ್ಮತಿ ಇಲ್ಲದೆ ವಿವಾಹವಾಗುವುದು.... ಹೀಗೆ ಈ ಎಲ್ಲ ಸಂಪ್ರದಾಯ ನಿಂತು ಹೋಗುತ್ತಿದೆಯೇ, ಹೀಗಾದರೆ ಮುಂದಿನ ತಲೆಮಾರಿಗೆ ಯಾವ ಸಂಸ್ಕಾರ, ಸಂಪ್ರದಾಯ ಉಳಿದೀತು ಎಂದು ಹಿರಿಯರು ಹಳಹಳಿಸುವುದನ್ನು ಅನೇಕ ಉದಾಹರಣೆಗಳ ಮೂಲಕ ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಈ ಎಲ್ಲ ಸಂಪ್ರದಾಯ, ಆಚಾರ- ವಿಚಾರ, ಸಂಸ್ಕೃತಿ ಉಳಿಯಬೇಕು. ಸರಸ್ವತಿಯ ಹರಿವು ನಿಲ್ಲಬಾರದು ಎಂದು ಆಶಿಸುವ ಲೇಖಕರು, ಜೀವನವೊಂದು ನದಿ ಇದ್ದ ಹಾಗೆ. ಅದರ ಕವಲೊಂದು ಟಿಸಿಲೊಡೆದು ಬೇರೆ ದಿಕ್ಕಿನಲ್ಲಿ ಹರಿಯಲು ಆರಂಭಿಸಿದರೆ ನದಿ ತನ್ನ ಹರಿವನ್ನು ಬದಲಾಯಿಸುತ್ತದೆ. ಮಕ್ಕಳು ಏನೇ ಮಾಡಲಿ, ಯಾವುದೇ ದಿಕ್ಕು ಹಿಡಿಯಲಿ, ನಾವು ನಡೆಯುತ್ತಿರುವ ದಿಕ್ಕು ಸರಿ ಇದೆ ಎಂದು ಅನಿಸುವ ತನಕ ನಮ್ಮ ದಾರಿ ಬದಲಾಯಿಸಬಾರದು. ಕೆಲವೊಮ್ಮೆ ತನ್ನದೇ ದಾರಿಯಲ್ಲಿ ಮುಂದುವರೆದರೂ, ಕೆಲವೊಮ್ಮೆ ಸ್ವಲ್ಪ ದೂರ ಕ್ರಮಿಸಿದ ಬಳಿಕ ಮತ್ತೆ ಮುಖ್ಯ ನದಿಗೆ ಬಂದು ಸೇರುತ್ತದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಹರಿವು ನಿಲ್ಲಿಸಬೇಡ ತಾಯೆ ಎಂದು ಕೋರುತ್ತಾರೆ.
ಈ ಕಾದಂಬರಿಯಲ್ಲಿ ಎರಡು ತಲೆಮಾರಿನವರನ್ನು ಚಿತ್ರಿಸುವ ಲೇಖಕರು, ಈ ಎರಡು ತಲೆಮಾರಿನವರಲ್ಲಾದ ಸಂಪ್ರದಾಯದ ಬದಲಾವಣೆಯನ್ನು ಕಟ್ಟಿಕೊಡುತ್ತಾರೆ. ಹಿರಿಯ ತಲೆಮಾರಿನ ಜಗದೀಶ ಶೆಣೈ (ಜಗ್ಗಣ್ಣ), ವಿಶ್ವಭವನ ಹೊಟೆಲ್‌ನ ಸುರೇಶ್ (ಸೂರಿ), ವಸಂತ ಪ್ರಭು, ಕೇಶವ, ಜಗ್ಗಣ್ಣನ ಹೆಂಡತಿ ಅರುಂಧತಿ, ಗೋಪಿ ಭಟ್ಟರು, ಎರಡನೆಯ ತಲೆಮಾರಿನ ಜನಾರ್ದನ (ಜಗ್ಗಣ್ಣನ ಮಗ), ಮಂಗೇಶ್ ಕಾಮತ್, ಮಾನ್ವಿ, ರಾಜೇಶ್, ಅಮೂಲ್ಯ ಇವರ ಮಧ್ಯೆ ನಡೆಯುವ ಸಮಾಜದ ಬೆಳವಣಿಗೆಗಳನ್ನು ಚರ್ಚಿಸುತ್ತಾರೆ.
ವಿಶ್ವಭವನ ಸೂರಿಯ ಹೊಟೆಲ್ ಜಗ್ಗಣ್ಣ, ಕೇಶವ, ವಸಂತ ಪ್ರಭು ಬೆಳ್ಳಂಬೆಳಗ್ಗೆ ಚಹಾಕುಡಿಯುವ ಖಾಯಂ ಸ್ಥಳ. ಅಲ್ಲಿ ಸಮಾಜದ ಅನೇಕ ವಿಚಾರಗಳ
ಚರ್ಚೆ ನಡೆಯುತ್ತದೆ. ಹೆಣ್ಣು-ಗಂಡಿನ ವಿವಾಹ, ನೆಪವೊಡ್ಡುತ್ತಾ ಊರಿಗೆ ಬರುವುದನ್ನು ಮುಂದೂಡುವ ಅಮೆರಿಕೆಯಲ್ಲಿರುವ ಜನಾರ್ಧನ, ಆತ ಆಪ್ರಿಕನ್ ಹುಡುಗಿಯನ್ನು ಮದುವೆಯಾಗಿರುವುದು, ಮಗು ಜನಿಸಿರುವುದು, ಸಾನ್ವಿಯು ರಾಜೇಶ್ ಎನ್ನುವವನನ್ನು ಮದುವೆಯಾದರೂ ಕೆಲವೇ ದಿನಗಳಲ್ಲಿ ಗಂಡನ ಮನೆಯವರ ನಡವಳಿಕೆ ಸರಿ ಬಾರದೆ ನೊಂದು ತಾಯಿಯ ಮನೆಯಲ್ಲೇ ಇರುವುದು, ಈ ವೇಳೆ ಅವಳು ಗರ್ಭಿಣಿಯಾದರೂ ವಿಚ್ಛೇದನ ಕೊಡಲು ಮುಂದಾಗುವುದು, ಮಗುವಾದರೂ ತಾನು ಅದನ್ನು ಸಾಕುತ್ತೇನೆ ಎನ್ನುವುದು, ಹೊಟೆಲ್ ಸೂರಿಯ ಕೌಟುಂಬಿಕ ಕಲಹ, ಇದೇ ಮುಖಂಡರು ಅದನ್ನು ಸರಿಪಡಿಸುವುದು, ದುಬೈಯಲ್ಲಿ ಅಕೌಂಟೆಂಟ್ ಕೆಲಸ ಮಾಡುವ ಮಂಗೇಶ್ ಸಹ ಜನಾರ್ಧನನ ಸಹಪಾಠಿಯಾಗಿದ್ದು, ವಿವಾಹ ವೇದಿಕೆ ಕಾರ್ಯ್ಕಕ್ರಮಕ್ಕೆ ಬಂದರೂ ಸರಿಯಾದ ಕನ್ಯೆ ಸಿಗದಿರುವುದು, ಸಾನ್ವಿಯ ಜೊತೆ ಸ್ವಲ್ಪ ಹತ್ತಿರವಾಗುವುದು, ಇದು ಮನೆಯವರ, ಊರವರ ಚರ್ಚೆಗೆ ಕಾರಣವಾಗುವುದು, ಹೊಸ ತಲೆಮಾರಿನವರು ಮದುವೆಯೊಂದರಲ್ಲಿ ಜನಾರ್ದನನ್ನು ವಿಡಿಯೋ ಕಾಲ್ ಮೂಲಕ ಭೇಟಿ ಮಾಡುವುದು, ಗೋಪಿ ಭಟ್ಟರ ಪುತ್ರಿ ಅಮೂಲ್ಯ ಬೆಂಗಳೂರಿನಲ್ಲಿ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಮಹಾಂತೇಶ್ ಎನ್ನುವ ಉತ್ತರ ಕರ್ನಾಕಟದವನ್ನು ಪ್ರೀತಿಸುವುದು, ಆತನನ್ನು ಊರಿನ ಹಬ್ಬವೊಂದಕ್ಕೆ ಕರೆತಂಧಾಗ ಮನೆಯಲ್ಲಿ ಇಬ್ಬರು ಲಿಪ್ ಕಿಸ್ ಮಾಡುವುದು, ಇದನ್ನು ಕಂಡ ಭಟ್ಟರು ಕುಸಿದುಹೋಗುವುದು, ಸಿಟ್ಟು ನೆತ್ತಿಗೇರಿ ಮನೆಯಿಂದ ವಾಪಸ್ ಬೆಂಗಳೂರಿಗೆ ಕಳುಹಿಸುವುದು, ಇಬ್ಬರೂ ಬೆಂಗಳೂರಿಗೆ ತೆರಳುವುದು, ನಂತರ ಇಬ್ಬರು ಮದುವೆಯಾಗುವುದು, ಮದುವೆಗೆ ಆಮಂತ್ರಣವಿದ್ದರೂ ಭಟ್ಟರು ನೆಪಹೇಳಿ ತಪ್ಪಿಸಿಕೊಳ್ಳುವುದು, ಕುಂಭ ಮೇಳಕ್ಕೆ ಎಲ್ಲರೂ ಸೇರಿ ಹೋಗಲು ತೀರ್ಮಾನಿಸುವುದು, ಅಲ್ಲಿಗೆ ಜನಾರ್ದನ ಪತ್ನಿ, ಮಗಳ ಸಹಿತ ಬರುವುದು, ಅಮೂಲ್ಯ- ಮಹಾಂತೇಶ್ ಜೋಡಿಯೂ ಬರುವುದು, ಹಿರಿಯರು, ಕಿರಿಯರು ಸೇರಿ ಕುಂಭಮೇಳದಲ್ಲಿ ಪಾಲ್ಗೊಳ್ಳುವುದು, ಜನಾರ್ದನನ ಪತ್ನಿ, ಮಗನ್ನು ಕಂಡು ಜಗ್ಗಣ್ಣ ಸಂತಸಪಡುವುದು, ಅವರೊಡನೆ ದಿನ ಕಳೆಯುವುದು, ಅವರು ಮರಳಿದೊಡನೆ ಜಗ್ಗಣ್ಣ, ಮಂಗೇಶ್ ಕಾಣೆಯಾಗುವುದು, ಎರಡು ದಿನದಲ್ಲಿ ಗಂಗಾ ನದಿಯಲ್ಲಿ ಜಗ್ಗಣ್ಣನ ಶವ ಪತ್ತೆಯಾಗುವುದು, ಈ ವಿಷಯ ತಿಳಿದರೂ ಜನಾರ್ದನ ಬಾರದಿರುವುದು, ಸೂರಿ ಅಂತ್ಯಕ್ರಿಯೆ ನಡೆಸುವುದು, ಈ ವೇಳೆ ಆತ ಭಟ್ಟರಿಗೆ ಬರೆದಿಟ್ಟಿದ್ದ ಪತ್ರ ಸಿಗುವುದು.... ಹೀಗೆ ಕಾದಂಬರಿ ಸಾಗುತ್ತದೆ.
ಆದರೆ ರೋಚಕ ತಿರುವನ್ನು ಲೇಖಕರು ಅಂತ್ಯದಲ್ಲಿ ನೀಡಿದ್ದಾರೆ. ಮಂಗೇಶ್ ಕಾಮತ್ ಏನಾದ, ಮಾನ್ವಿ ರಾಜೇಶನಿಗೆ ವಿಚ್ಛೇದನ ಕೊಟ್ಟಳೇ? ನಂತರ ಯಾರೊಟ್ಟಿಗೆ ಉಳಿದಳು, ರಾಜೇಶ್ ಮಾನ್ವಿ ಜೊತೆ ಮತ್ತೆ ಸಂಸಾರ ಸಾಗಿಸಿದನೇ? ಎನ್ನುವುದಕ್ಕೆಲ್ಲ ಉತ್ತರ ಅಂತ್ಯದಲ್ಲಿದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೦೨.೦೮.೨೦೨೬
.........................

Comments
Post a Comment