ಕಾವ್ಯಪ್ರೇಮಿಗಳ ಮನತುಂಬುವ
‘ಆಂತರ್ಯ’
‘ಆಂತರ್ಯ’ ಇದು ಯುವ ಕವಿ ಅಜಿತ್ ಪೂಜಾರಿ ಮುದ್ರಾಡಿ ಇವರ ಪ್ರಥಮ ಕವನ ಸಂಕಲನ. ನಾಳೆಗಳ ಭರವಸೆ ಹೊತ್ತ, ಮನದ ಭಾವಗಳನ್ನು ಅನುವಾದ ಕ್ಷಣವಿದೆ. ಆಂತರ್ಯದ ರಸಧಾರೆಯ, ಮನವನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಬಿತ್ತರಿಸುವ ಕಾವ್ಯಧಾರೆ ಇದೆ. ಸರಳ, ಸುಂದರ, ಚಿಂತನೆಯ ಹೊನಲು, ಅನುಭವದ ಜಲ, ಜೀವನ, ಅನುಭವ ಈ ಕಾವ್ಯದಲ್ಲಿ ಮಿಡಿತವಾಗಿದೆ. ಆದ್ದರಿಂದ ಇಲ್ಲಿನ ಬಹುತೇಕ ಕವನಗಳು ಕಾವ್ಯಪ್ರೇಮಿಗಳ ಮನತುಂಬುವಲ್ಲಿ ಯಶಸ್ವಿಯಾಗುತ್ತವೆ.
ಸಂಕಲನದಲ್ಲಿ ರಾಷ್ಟ್ರಪ್ರೇಮವಿದೆ. ರಾಜಕೀಯ ಪ್ರಜ್ಞೆ ಇದೆ. ಪರಿಸರ ಪ್ರೀತಿ ಇದೆ. ಭಾಷೆಯು ಸರಳತೆಯಿಂದ ಕೂಡಿದೆ. ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆ ಇಲ್ಲಿ ಕಂಡುಬರುತ್ತದೆ. ಇವೆಲ್ಲವುಗಳನ್ನು ಸೇರಿಸಿ ತುಡಿತ- ಮಿಡಿತಗಳನ್ನು ಕವನದ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ. ಒಟ್ಟು ೫೨ ಕವನಗಳಿವೆ. ಮಳೆಯ ಕುರಿತು ಮೂರು ಕವನಗಳು ಇವೆ. ಪರಿಸರ, ಪ್ರಕೃತಿ, ನದಿ, ಹೊಳೆ, ಮಳೆ ಮುಂತಾದವು ಕವಿಗೆ ಹೆಚ್ಚು ಆಪ್ತವಾದಂತೆ ಕಂಡುಬರುತ್ತದೆ.
ಕವನಗಳ ಕುರಿತು:
ಮೊದಲ ಕವನ ‘ತೊಟ್ಟಿಲ ಮಗು’ ಇದರಲ್ಲಿ ತಾ ಕಾವ್ಯಲೋಕದಲ್ಲಿ ತೊಟ್ಟಿಲ ಮಗು ಎನ್ನುವುದನ್ನು ಬರೆದುಕೊಂಡಿದ್ದಾರೆ.
ನಿಮ್ಮೊಡಲ ಅಕ್ಕರೆಗೆ ಬೆಸೆದಿಹುದು ನನ್ನಿ ಜೀವಸೆಲೆ
ಕೈ ಹಿಡಿದು ನಡೆಸಬಲ್ಲಿರಾ, ನಾನಿನ್ನೂ ತೊಟ್ಟಿಲ ಮಗು
ಮನದ ಭಾವನೆಗಳನ್ನು ಹೊರದಬ್ಬಲನುವಾಗಿರುವ ತೊಟ್ಟಿಲ ಮಗು
ಖುಷಿ ಸುಖ ದುಃಖ ಕಲ್ಪನೆಗಳಿಗೆ ನಿಮ್ಮನ್ನೂ ಪಾಲುದಾರರನ್ನಾಗಿಸಿ
ಎಂದು ಮನವಿ ಮಾಡಿದ್ದಾರೆ. ಕವಿಗೆ ಸ್ವಜ್ಞಾನದ ಪ್ರಜ್ಞೆ , ವಿನಯತೆ ಇರುವುದು ಸ್ಪಷ್ಟವಾಗುತ್ತದೆ. ಕವಿತ್ವದ ಮನ ತನ್ನಲ್ಲೇ ಇರುವುದು, ಕ್ರಿಯಾಶೀಲತೆ ನೆಲೆಗೊಂಡಿರುವುದು ಗೊತ್ತಿದೆ. ಅದರಿಂದಲೇ ಓದಿ ಹರಸಿ ಹಾರೈಸಿ ಎಂದು ಮನವಿ ಮಾಡುತ್ತಾರೆ.
ಇನ್ನೊಂದು ಕವನ ‘ಹೆಣ್ಣು ಮತ್ತು ಭವಿಷ್ಯ. ಇದರಲ್ಲಿ ಹೆಣ್ಣು ತಾಯಿಯ ಗರ್ಭದಲ್ಲಿ ಹುಟ್ಟುವುದರಿಂದ ಆರಂಭಿಸಿ ಮುಂದೆ ತಾನು ಗರ್ಭಿಣಿಯಾಗುವವರೆಗೆ ಅನುಭವಿಸುವ ಸಂಕಟಗಳನ್ನು ಬರೆದಿದ್ದಾರೆ. ಭ್ರೂಣ ಹತ್ಯೆಗೆ ಯತ್ನಿಸುವ ಮೂಲಕ ಭವಿಷ್ಯದ ದಿನವನ್ನು ಹೊಸಕಿ ಹಾಕುತ್ತಾರೆ. ಒಂದು ವೇಳೆ ಹುಟ್ಟಿ ಬಂದರೆ ಸಂಸ್ಕಾರ, ಸಂಪ್ರದಾಯದ ಹೆಸರಿನಲ್ಲಿ ಜುಟ್ಟು ಹಿಡಿಯುತ್ತಾರೆ. ಸಮಾಜವು ಲೋಪಗಳಿಗೆ ಗುರಿ ಮಾಡುತ್ತದೆ. ಯೌವ್ವನವು ಬರಲು ಹತ್ತಾರು ಕಣ್ಣುಗಳು ಹೆಣ್ಣಿನ ಮೇಲೆ ಬೀಳುತ್ತವೆ. ಜಾಗರೂಕತೆಯಿಂದ ಹೆಜ್ಜೆ ಇಡಬೇಕಾದ ಸಂದರ್ಭದಲ್ಲಿ ಮುಟ್ಟಿನ ಹೆಸರಲ್ಲಿ ಬಂಧಿಸುತ್ತಾರೆ. ಇದಾದ ನಂತರ ಸಂಸಾರದ ಬಾಳನೋಕೆಯನ್ನು ಮುನ್ನಡೆಸಬೇಕು. ಇಷ್ಟೆಲ್ಲಾ ನೋವುಗಳನ್ನು ತಿಂದು ಭವಿಷ್ಯವನ್ನು ಸುಟ್ಟುಕೊಂಡು ಅಳುತ್ತಲೇ ಇರಬೇಕು ಎಂದು ಎನ್ನುವ ಕವಿ
ನಿನ್ನೊಡಲ ನೋವ ನುಂಗಿ ಬಾಳಬೇಕು
ನೀ ಬಯಸಿದಂತೆ ಇರದು ನಿನ್ನ ಬಾಳಿನಾರಥವು
ಎಂದು ವಿಷಾದ ವ್ಯಕ್ತಪಡಿಸುತ್ತಾರೆ.
‘ಓ ಚೆಲುವೆ’ ಎಂಬ ಕವನದಲ್ಲಿ
ಉದ್ದದ ದಾರಿಲಿ ಅಡ್ಡಕ್ಕೆ ಸಾಗಿ
ತಪ್ಪಿದ ಚಪ್ಪಲಿ ಹುಡುಕಾಡುವನು
ಮೆಚ್ಚಿದ ಮಡದಿಯ ಜುಟ್ಟನು ಹಿಡಿದು
ಗೂಡಿಗೆ ಹಿಡಿದು ಚಚ್ಚುವನು
ಇದು ಕುಡುಕನನ್ನು ಕವನದಲ್ಲಿ ಕಟ್ಟಿಕೊಟ್ಟ ರೀತಿ. ಇದನ್ನು ಓದಿದಾಗ ಮದ್ಯಪಾನ ದೇಶಕ್ಕೆ ಹೇಗೆ ಅಂಟಿದ ಶಾಪವಾಗಿದೆ. ಇದರಿಂದ ಬದುಕು ಹೇಗೆ ಬೀದಿಗೆ ಬರುತ್ತಿದೆ ಎನ್ನುವುದು ಬಿಂಬಿಸುತ್ತದೆ.
‘ಬಾಲ್ಯ’ ಎಂಬ ಕವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬಾಲ್ಯವನ್ನು ನೆನಪಿಸಿಕೊಂಡು ಅದನ್ನು ಸ್ಮರಿಸುವುದನ್ನು ಚಿತ್ರಿಸಿದ್ದಾರೆ. ‘ಎಲ್ಲರೂಡನೆ ಬೆರೆತು ಬಾಲ್ಯ ಕಳೆದ ಜೀವನ ಪಾವನ’ ಎಂದು ವರ್ಣಿಸುತ್ತಾರೆ. ‘ಅಜ್ಜಿ’ ಎಂಬ ಕವನದಲ್ಲಿ ಇಂದಿನ ತರಾತುರಿಯ ಕಾಲದಲ್ಲಿ ಅಜ್ಜ ಅಜ್ಜಿಯನ್ನು ನಾವು ಕಾಣಬೇಕಾದರೆ ವೃದ್ಧಾಶ್ರಮಕ್ಕೆ ಹೋಗಬೇಕಾದ ಸ್ಥಿತಿ ಇದೆ. ಹಿಂದೆ ಮನೆಯಲ್ಲಿ ಅಜ್ಜ, ಅಜ್ಜಿ, ಮತ್ತಜ್ಜ, ಮುತ್ತಜ್ಜಿಯರು ಇರುತ್ತಿದ್ದರು. ಅವರ ಕಥೆಯ ಹೇಳುತ್ತಿರಲು ಮಕ್ಕಳು ಸಾಲಾಗಿ ಕುಳಿತುಕೊಳ್ಳುತ್ತಿದ್ದರು ಎನ್ನುವ ಕವಿ,
ಇರುಳಿನಲ್ಲೆ ಕಂಡೆ ಹಗಲು ಅರಿತುಕೊಂಡೆ ಬದುಕ ತಿರುಳು
ಪಡೆದೆ ನಾನು ನೆಮ್ಮದಿ ಬೊಚ್ಚು ಬಾಯಿಯಲ್ಲಿ
ಹಲವು ಕತೆಯ ನೆನಪುಗಳನ್ನು ಅಗೆದು ಬಿಡದೆ
ಅವಳು ಹೇಳುತಿರಲು ಕೇಳಿ ಕೇಳಿ ತಲೆಯತೂಗಿ
ತಿಳಿಯದೇನೆ ಕಣ್ಣಮುಚ್ಚಿ ಜಾರಿದೆನು ಸುಖ ನಿದ್ದೆಗೆ
ಎಂದು ಬರೆಯುತ್ತಾರೆ. ಭವಿಷ್ಯದ ಕುಡಿಗಳಾದ ಇಂದಿನ ಮಕ್ಕಳು ಇಂತಹ ಭಾಗ್ಯ ವಂಚಿತರಾಗಿದ್ದಾರೆ. ಅವರ ಕಾಣದ ಮಹಿಮೆ ಎಂದು ಹೇಳುತ್ತಾರೆ.
‘ತುಳುನಾಡು’ ಎಂಬ ಕವನದಲ್ಲಿ ತುಳುನಾಡಿನ ಸೊಗಡನ್ನು ಸಂಸ್ಕೃತಿಯನ್ನು ನಮ್ಮೆದುರು ತೆರೆದಿಟ್ಟಿದ್ದಾರೆ. ತುಳುನಾಡಿನ ಕಂಬಳ, ಡೋಲು, ವಾದ್ಯ -ತಾಳಗಳ ಮೇಳ, ಹುಲಿವೇಷದ ರಂಗು, ಗ್ರಾಮದಲ್ಲಿ ನಡೆಯುವ ರಥೋತ್ಸವದ ಸಂಭ್ರಮ, ದೊಂಬರಾಟ, ಕರಡಿ ಕುಣಿತ, ಕೋಳಿ ಅಂಕ... ಹೀಗೆ ಅನಾದಿಕಾಲದಿಂದ ಸಾಗಿಬಂದ ತುಳುವರ ಜನಪದ ಮತ್ತು ಜನಪದವನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳುತ್ತಾರೆ.
‘ಮಳೆ ಮೋಡ’ ಎಂಬ ಕವನದಲ್ಲಿ ಮಳೆ ಬರುವ ಮುನ್ನ ಯಾವ ರೀತಿ ಮೋಡ ಕಟ್ಟುತ್ತದೆ, ಗುಡುಗು ಸದ್ದು ಮಾಡುತ್ತದೆ, ಗಾಳಿ ವೇಗ ಪಡೆದು ಬೀಸುತ್ತದೆ, ನಂತರ ಮೋಡ ಹೇಗೆ ಕರಗಿ ವರ್ಷಧಾರೆಯನ್ನು ಸುರಿಸುತ್ತದೆ, ಮಣ್ಣಿನ ವಾಸನೆ ಘಮ್ ಎಂದು ಮೂಗಿಗೆ ಬಡಿಯುವುದು, ಮಳೆಯ ನೀರ ಹನಿಗಳು ನಮಗೆ ಸೋಕಲು ಅದರಿಂದ ಆನಂದ ತುಂದಲಿತರಾಗುವುದು, ಕಣ್ಮನ ಸೆಳೆಯುವ ಕೋಲ್ಮಿಂಚು, ಊರೆಲ್ಲಾ ಮಬ್ಬುಗತ್ತಲಿನಲ್ಲಿ ತೇಲಾಡುವುದನ್ನು ಚಿತ್ರಿಸಿದ್ದಾರೆ.
ಕೆರೆಯೂ ತುಂಬಿದೆ ತೊರೆಯು ಹರಿದಿದೆ ಕೆಸರ ಕೆಂಬಣ್ಣದಿ
ಮನವು ಕುಣಿದಿದೆ ತಾನು ತಣಿದಿದೆ
ನೀರ ಸೊಬಗನು ಕಾಣಲು
ಎಂದು ಬರೆಯುತ್ತಾರೆ. ‘ಮಳೆಗಾಲ’ ಎಂಬ ಕವನದಲ್ಲಿ ಗಾಳಿ, ಗುಡುಗು, ಸಿಡಿಲು, ಆಲಿಕಲ್ಲು, ಎಲ್ಲೆಲ್ಲೂ ಹಸಿರು ಹೊದಿಕೆ, ಎರಗುವ ತಂಪು... ಹೀಗೆ ಮಳೆ ಬಂದ ನಂತರದ ಪರಿವರ್ತನೆಯನ್ನು ತಿಳಿಸುತ್ತಾರೆ. ಮಳೆಗಾಲದಲ್ಲಿ ಹಸಿವೆ ಹೆಚ್ಚು ಆಗ ಏನಾದರೂ ತಿನ್ನಬೇಕೆಂಬ ಸಹಜತೆ ಈ ಜೀವಕ್ಕೆ ಬರುವುದನ್ನು ಕವಿ ಈ ರೀತಿ ಚಿತ್ರಿಸಿದ್ದಾರೆ.
ಚಳಿಯ ದೇಹ ಬಿಸಿಯ ಜೊತೆಗೆ ಚಹದ ಸ್ವದ ಸವಿಯ ಬಯಸಿ
ತಿನ್ನಲೇನು ಇಹುದು ಎಂದು ಸುತ್ತ ಹುಡುಕಲು
ಅಟ್ಟದಲ್ಲಿ ಅಡಗು ಕೂತ ಹಪ್ಪಳದ ಚಿಕ್ಕ ಕಟ್ಟು
ಒಲೆಯ ಕೆಂಡದಲ್ಲಿ ಬೆಂದು ಹೊಟ್ಟೆ ಸೇರಿತು ಎಂದು ವರ್ಣಿಸುತ್ತಾರೆ.
ಹೀಗೆ ಈ ಕವನ ಸಂಕಲನದಲ್ಲಿ ಹಲವು ವಸ್ತು ವೈವಿಧ್ಯಗಳೊಂದಿಗೆ, ತನ್ನ ಒಡಲಾಳದಿಂದ ಪದಗಳನ್ನು ಬಗೆದು ತೆಗೆದು ಅದನ್ನು ಮಾಲೆಯಾಗಿಸಿ ಓದುಗರ ಮುಂದಿಟ್ಟಿದ್ದಾರೆ ಇಲ್ಲಿನ ಎಲ್ಲಾ ಕವನಗಳಲ್ಲೂ ಪ್ರೌಢತೆ ಇದೆ, ಅಲಂಕಾರವಿದೆ, ಅನುಕಂಪವಿದೆ, ಭಾವ ಲಹರಿಯಿದೆ. ಭಾಷಾ ಸರಳತೆ ಇದೆ. ಸಹಜವಾಗಿ ಓದಿಸಿಕೊಂಡು ಹೋಗುವ ಸುಲಭದ ಭಾಷೆ ಇದೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
.........................

Comments
Post a Comment