ಕನ್ನಡದ ಕಿನ್ನರ ಮನವರಳಿಸಿದ
‘ಪಳಕಳ ಸೀತಾರಾಮ ಭಟ್ಟ’
ಇಂದು ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರ ಜನ್ಮದಿನ
ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯವೂ ಇದೆ ಎನ್ನುವುದನ್ನು ತೋರಿಸಿಕೊಟ್ಟು, ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸಿದವರು ಪಳಕಳ ಸೀತಾರಾಮ ಭಟ್ಟರು. ಕನ್ನಡದ ಕಿನ್ನರ ಮನವನ್ನು ಅರಳಿಸಿದವರು. ಅಪ್ಪಟ ಕನ್ನಡಿಗರಾಗಿ, ಕನ್ನಡ ಸಾಹಿತ್ಯ ಶಾರದೆಯ ಮುಕುಟಮಣಿಯಾಗಿ ಬೆಳೆದವರು. ಮಕ್ಕಳ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕಾಣಿಕೆ ಅಭೂತಪೂರ್ವವಾದುದು. ಮಕ್ಕಳ ಸಾಹಿತ್ಯ ಎಂದರೆ ಬರಿ ಅಕ್ಷರವಲ್ಲ. ಸಣ್ಣ ಮಕ್ಕಳ ಮುಗ್ಧ ಮನಸ್ಸು, ಬುದ್ಧಿಗಳಿಗೆ ಚೇತನ ಕೊಡುವ ಸೃಷ್ಟಿ. ಮಕ್ಕಳ ಕಲ್ಪನಾ ಶಕ್ತಿಗೆ, ಪ್ರತಿಭೆಗೆ ಚೇತನ ಕೊಡುವ ಚಿತ್ರಶಿಲ್ಪ, ವಾಸ್ತುಶಿಲ್ಪ. ಮಗು ಸಹಜವಾದ ಮುಗ್ಧತೆ ಮನೋರಂಜನೆ ಸಂಸ್ಕೃತಿ ಕಲೆ, ಮನೋವಿಜ್ಞಾನ ಬೆರೆತು ಮಕ್ಕಳ ಸಾಹಿತ್ಯ ಎನ್ನುವುದು ಮಕ್ಕಳಿಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಇಂದು ಪ್ರತ್ಯೇಕವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದರೆ ಅದಕ್ಕೆ ಇಂತಹ ಹಿರಿಯರ ಕೊಡುಗೆ ಅಪಾರವಾದುದು.
ಇವರ ಕವನ ಸಂಕಲನಗಳಲ್ಲಿ ಮಕ್ಕಳ ತುಂಟಾಟಗಳು, ವರ್ತನೆಗಳು, ಪ್ರಾಣಿ -ಪಕ್ಷಿ ರೂಪಕಗಳು ಹೆಚ್ಚಿನದಾಗಿ ಕಂಡುಬರುತ್ತವೆ. ಕಾಲದಿಂದ ಕಾಲಕ್ಕೆ, ಸಾಹಿತಿಯಿಂದ ಸಾಹಿತಿಗೆ, ಕಲ್ಪನೆಯಿಂದ ಕಲ್ಪನೆಗೆ, ಭಾಷೆಯಿಂದ ಭಾಷೆಗೆ, ಭಾವದಿಂದ ಭಾವಕ್ಕೆ, ಅರ್ಥದಿಂದ ಅರ್ಥಕ್ಕೆ ಬದಲಾಗುತ್ತ ಮಕ್ಕಳ ಸಾಹಿತ್ಯ ರೂಪವೇ ಮಕ್ಕಳಿಗೆ ಖುಷಿ ನೀಡುವಂತೆ ಚಂದವಾಗುತ್ತಾ ಸರಳವಾಗುತ್ತಾ ಸಾಗುತ್ತಿದೆ. ಮಕ್ಕಳಲ್ಲಿ ವಿಶೇಷವಾಗಿ ಕಲ್ಪನಾ ಶಕ್ತಿ ತೀವ್ರವಾಗಿರುವುದರಿಂದ ಸಾಹಿತ್ಯ ಬರೆಯುವುದು ತುಂಬಾ ಸೂಕ್ಷ್ಮದ ಕೆಲಸ.
ಸಿ. ಸು. ಸಂಗಮೇಶ್ವರರ ಸಮಕಾಲೀನರಾದ ಪಳಕಳ ಸೀತಾರಾಮ ಭಟ್ಟರು ಮಕ್ಕಳಿಗಾಗಿ ವಿವಿಧ ಪ್ರಕಾರಗಳಲ್ಲಿ ಸುಮಾರು ೧೩೦ ಮಕ್ಕಳ ಕೃತಿಗಳನ್ನು ಬರೆದಿದ್ದಾರೆ. ‘ಕನ್ನಡದಲ್ಲಿ ಮಕ್ಕಳ ಸಾಹಿತ್ಯ’ ಎಂಬ ವಿಮರ್ಶಾ ಕೃತಿಯು ಮಕ್ಕಳ ಸಾಹಿತ್ಯ ಹಾದಿಯ ಸಿಂಹಾವಲೋಕನ ಮಾಡುವ ಸಂಶೋಧಕರಿಗೆ ಕೈಪಿಡಿಯಾಗಿದೆ. ಭಟ್ಟರು ಬದಲಾಗುತ್ತಿರುವ ಕಾಲದ ಒತ್ತಡಗಳನ್ನು ಅಗತ್ಯಗಳನ್ನು ಗುರುತಿಸಿ ಬರೆದವರು. ಇವರು ತಮ್ಮ ಹೇರಳವಾದ ಮನೋವೈಜ್ಞಾನಿಕ, ಶೈಕ್ಷಣಿಕ ಮತ್ತು ವಾಸ್ತವಿಕ ನೆಲೆಯ ಕೃತಿಗಳಿಂದ ವಿಶಿಷ್ಟರೆನಿಸುತ್ತಾರೆ. ಎಳೆಯ ಮುದ್ದು ಕಂದಮ್ಮಗಳಿಂದ ಹಿಡಿದು ಪೂರ್ಣ ವಿಕಾಸಗೊಳ್ಳದ ಹದಿಹರೆಯದ ಚೆಲುವಿನ ಮಕ್ಕಳವರೆಗೂ ಅವರ ಮನವರಿತು ಕೃತಿಯನ್ನು ರಚಿಸಿದವರು.
ಭಟ್ಟರು ೧೯೩೧ರ ಆಗಸ್ಟ್ ೧೪ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಸಮೀಪದ ಪಳಕಳದಲ್ಲಿ ಜನಿಸಿದರು. ಸಂಪೂರ್ಣ ಕೃಷಿ ಕುಟುಂಬದ ಇವರದು ದೊಡ್ಡ ಕುಟುಂಬ. ಇದನ್ನು ಬಿಟ್ಟರೆ ಬೇರೆ ಯಾವ ಆದಾಯ ಮೂಲವೂ ಇರಲಿಲ್ಲ. ಕಂಬಳದ ಕೋಣಗಳನ್ನು ಚೆಂದವಾಗಿ ಸಾಕುವುದರಲ್ಲಿ ಮತ್ತು ಜಾನುವಾರು ಸಾಕಣೆಯಲ್ಲಿ ಇವರ ಕುಟುಂಬ ಹೆಸರಾಗಿತ್ತು. ‘ಕೃಷಿಕರಿಗೆ ಅನ್ನದ ಬಡತನವಿಲ್ಲದಿದ್ದರೂ ದುಡ್ಡಿನ ಬಡತನ ಎಂದೂ ತಪ್ಪಿದ್ದಲ್ಲ’ ಎನ್ನುವ ಮಾತಿದೆ. ಇದು ಭಟ್ಟರ ಮನೆತನಕ್ಕೆ ಹೇಳಿ ಮಾಡಿಸಿದಂತಿತ್ತು. ಅವರು ಇದು ಕೇವಲ ಎರಡನೇ ತರಗತಿಯವರೆಗೆ ಓದಿ ನಂತರ ಕೃಷಿಗೆ ಇಳಿದರು. ಆದರೂ ಅವರ ಅಮ್ಮ ಶಿಕ್ಷಣ ತರಬೇತಿಗೆ ಅವರನ್ನು ಕಳಿಸಿದರು. ಮಗುವಿನಂತೆ ಮುಗ್ಧತೆಯಿಂದ ಬಾಳನ್ನು ಕಳಚಿಕೊಳ್ಳದೆ ಓದಿ ಖಾಸಗಿ ಶಾಲೆ ಒಂದರಲ್ಲಿ ಶಿಕ್ಷಕರಾಗಿ ನೇಮಕಗೊಳ್ಳುತ್ತಾರೆ. ವಿಶೇಷವೆಂದರೆ ಇದೇ ಶಾಲೆಯಲ್ಲಿ ಭಟ್ಟರು ವಿದ್ಯಾರ್ಥಿಯಾಗಿ ಕಲಿತಿರುತ್ತಾರೆ.
ಸಾಹಿತ್ಯ ರಚಿಸುತ್ತಿದ್ದ ಭಟ್ಟರು ಮೂಡಬಿದ್ರೆ ಜೈನ್ ಹೈಸ್ಕೂಲಿನಲ್ಲಿ ೨೩ ವರ್ಷ ಶಿಕ್ಷಕರಾಗಿ ಮಕ್ಕಳ ಪ್ರೀತಿ ಗಳಿಸಿದವರು. ಬಾಲ್ಯದಲ್ಲಿ ಇವರ ಪ್ರೀತಿ ಪಾತ್ರರಾಗಿದ್ದ ಸೋದರತ್ತೆ ಚಿನ್ನಕ್ಕ ಭಟ್ಟರಲ್ಲಿ ಸಾಹಿತ್ಯದ ಸಂಸ್ಕಾರವನ್ನು ಮೂಡಿಸಿದವರು. ಮಕ್ಕಳ ಕಥೆಗಳನ್ನು ಹೇಳುತ್ತಲೇ ಭಟ್ಟರನ್ನು ಬೆಳೆಸಿದಳು. ಮಕ್ಕಳಿಲ್ಲದ ಚಿನ್ನಕ್ಕನಿಗೆ ಭಟ್ಟರೆಂದರೆ ಪಂಚಪ್ರಾಣ. ಹೀಗಾಗಿ ಈ ಎಲ್ಲಾ ಮೂಲ ದ್ರವ್ಯಗಳಿಂದ ಕಥೆ ರಚಿಸಲು ಅಗತ್ಯವಾದ ಕನಸು, ಕಲ್ಪನೆ, ಪ್ರತಿಭೆ ಇಲ್ಲಿಯೇ ಬೆಳೆಯಿತು. ಕಥೆಗಳ ಕಣಜ ಆಗಿದ್ದರು ಚಿನ್ನಕ್ಕ. ಭಟ್ಟರು ಪಂಜೆ ಮಂಗೇಶರಾಯರನ್ನು ಆದರ್ಶವಾಗಿ ಇಟ್ಟುಕೊಂಡು ಸಾಹಿತ್ಯ ಸಾಧನೆಯನ್ನು ಆರಂಭಿಸಿದವರು.
ಗಾಂಧೀಜಿಯವರ ಗ್ರಾಮ ಜೀವನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಭಟ್ಟರು ಇದನ್ನು ಅಳವಡಿಸಿಕೊಂಡಿದ್ದರು. ಇದರಿಂದ ಆಶ್ರಮದ ಬದುಕು ಅವರಿಗೆ ಆಪ್ತವಾಗುತ್ತದೆ. ವೃತ್ತಿಯಿಂದ ನಿವೃತ್ತಿಯ ನಂತರ ‘ಪಳಕಳ ಪ್ರತಿಷ್ಠಾನ’ ಎಂಬ ಟ್ರಸ್ಟ್ ಅನ್ನು ಸ್ಥಾಪಿಸಿ ಇದರಲ್ಲಿ ಶಾಶ್ವತ ನಿಧಿಯನ್ನು ಇಟ್ಟು ಇದರಿಂದ ಬರುವ ಬಡ್ಡಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ಇಂದಿಗೂ ವಿತರಿಸಲಾಗುತ್ತಿದೆ. ತಾವು ಬಯಸಿದಂತೆ ಸರಳವಾಗಿ ಬಾಳಿದ ಚಿಕ್ಕಂದಿನಿಂದಲೇ ಕಂಡ ಕನಸಿನಂತೆ ಶಿಕ್ಷಕರಾಗಿ ವಿವಿಧ ಕೆಲಸ ಮಾಡಿದ ಭಟ್ಟರು ಹಲವು ಶಿಕ್ಷಕರಿಗೆ ಸಾಹಿತ್ಯದ ಬಾಗಿಲನ್ನು ತೆರೆದು ದಾರಿ ತೋರಿದರು.
ಪಳಕಳರ ಬರಹ
ಭಟ್ಟರು ಮೊದಲು ಬರೆದದ್ದು ‘ಹೊಟ್ಟೆನೋವಿನ ಭೂತ’ ಎಂಬ ಮಕ್ಕಳ ಕಥೆಯನ್ನು ಹದಿಮೂರನೆಯ ವಯಸ್ಸಿನಲ್ಲಿ. ಇದು ಅಪಾರ ಪ್ರಚಾರವನ್ನು ಪಡೆದುಕೊಂಡಿತು. ಬಾಲ್ಯದ ಒಂದು ಅನುಭವದ ಕುರಿತಾದ ಕಥೆ ಇದಾಗಿತ್ತು. ‘ಚಿನ್ನರ ಹಾಡು’ ಅವರ ಮೊದಲ ಕವನ ಸಂಕಲನವನ್ನು ೧೯೫೪ ರಲ್ಲಿ ಪ್ರಕಟ ಮಾಡಿದರು. ಮರುವರ್ಷವೇ ‘ಮಕ್ಕಳ ಮುದು’ ಮತ್ತು ‘ಕಿರಿಯರ ಕಿನ್ನರಿ’ ಎಂಬ ಮತ್ತೆರಡು ಕೃತಿಗಳು ಪ್ರಕಟವಾದವು. ಇದಕ್ಕೆ ಮದ್ರಾಸ್ ಸರ್ಕಾರದ ಸಾಹಿತ್ಯ ಬಹುಮಾನ ಲಭಿಸಿತು. ಇವರ ಪ್ರಕಟಿತ ಮಕ್ಕಳ ಕೃತಿಗಳ ಸಂಖ್ಯೆ ಒಟ್ಟು ೧೩೦. ಅವುಗಳಲ್ಲಿ ೩೬ ಮಕ್ಕಳ ಕವನ ಸಂಕಲನಗಳು, ೬೧ ಮಕ್ಕಳ ಕಥಾ ಸಂಕಲನಗಳು, ೨೬ ಮಕ್ಕಳ ನಾಟಕಗಳು ಮತ್ತು ೭ ಮಕ್ಕಳ ಇತರ ಕೃತಿಗಳು. ಇವುಗಳನ್ನು ಚಪ್ಪರಿಸಿ ಆಸ್ವಾದಿಸುವಾಗ ಮಕ್ಕಳಿಗೆ ಸಿಗುವ ರಸಾನಂದ ಅಪೂರ್ವವಾದುದು.
ಇವರ ಕವನಗಳಲ್ಲಿ ಮಕ್ಕಳ ಮನೋಲೋಕವು ಪಾರದರ್ಶಕ, ಸ್ಫಟಿಕ ದೃಶ್ಯ ಜಲದಂತೆ ಸ್ಪಷ್ಟವಾಗಿ ಪ್ರತಿಬಿಂಬಿಸಿವೆ. ಕವನಗಳಲ್ಲಿ ಮಕ್ಕಳೇ ಮಾತನಾಡುತ್ತಾರೆ ಪರಿಣಾಮಗಳನ್ನು ವ್ಯಕ್ತಪಡಿಸುವ ಮುಗ್ಧ ಧ್ವನಿಗಳಾಗುತ್ತಾರೆ. ತಮ್ಮನ್ನು ತಾವೇ ನೋಡಿಕೊಳ್ಳುವಂತೆ ಮಾಡುವ ಕೈಗನ್ನಡಿಗಳಾಗಿವೆ.
ಮುದ್ದು ಪುಟ್ಟ ಎದ್ದ
ನಾಯಿಗೊಂದು ಒದ್ದ
ತೆರೆದು ಬಾಯಿ
ಬರಲು ನಾಯಿ
ಓಡಿ ಧೊಪ್ಪ ಬಿದ್ದ
.......
ಇನ್ನೊಂದು ಕವನ
ನಿನಗೆ ತಮ್ಮ ಬರುವನಮ್ಮ
ಎಂದೆ ನೀನು ಆ ದಿನ
ಹೇಳೆ ಅಮ್ಮ ನನ್ನ ತಮ್ಮ
ಬಂದನೇನು ಈ ದಿನ?
.........
ಮಕ್ಕಳ ಕಥೆಗಳು:
ಇವರ ಕಥೆಗಳಲ್ಲಿ ಸುತ್ತಲಿನ ನಿತ್ಯ ಬದುಕಿನ ಪ್ರಾಕೃತಿಕ, ಜೈವಿಕ, ಯಾಂತ್ರಿಕ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಕಥೆಗಳ ಪಾತ್ರಗಳು, ಸನ್ನಿವೇಶಗಳು, ಕ್ರಿಯೆಗಳು, ಕಾಲ್ಪನಿಕ ವಸ್ತುಗಳು, ವಾಸ್ತವವಾಗಿವೆ. ಇವು ಅನುಭವ ಸತ್ಯವಾಗಿದ್ದರಿಂದ ಚಂದದ ಹೂವಿನ ಮುಗುಳಿನಂತೆ, ಕಥೆಗಾರನ ಕಲ್ಪನೆಯಲ್ಲಿ ಮೃದು, ಮಧುರ ಭಾವ ಪಕಳೆಗಳನ್ನು ತೆರೆದುಕೊಳ್ಳುತ್ತಾ ಅರಳಿ ಮಕ್ಕಳ ಜೀವನವನ್ನು ಕಲಾತ್ಮಕವಾಗಿ ಆಸ್ವಾದಿಸುವ ಸೌಂದರ್ಯ ಪ್ರಜ್ಞೆಯನ್ನು ಪ್ರಚೋದಿಸುತ್ತವೆ. ಜೊತೆಗೆ ಜೀವನ ಪ್ರೀತಿಯನ್ನು ಬೆಳಗಿಸುತ್ತ. ಜೀವನದ ಅರಿವನ್ನು ಬಿತ್ತರಿಸುವ ಸಹಜ ಗುಣ ಕಥೆಗಳಲ್ಲಿದೆ. ಗುಬ್ಬಿ, ಕಪ್ಪೆ, ಮರ ಮುಂತಾದ ಜೀವ ಜಗತ್ತಿನೊಡನೆ ಮಗು ಸಂವಾದ ನಡೆಸುತ್ತದೆ, ಪ್ರಶ್ನಿಸುತ್ತದೆ, ಪರಿಶೀಲಿಸುತ್ತದೆ.
ಇವು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ಅಭಿನಯಿಸುವ ನಾಟಕಗಳಾಗಿವೆ. ನಾಟಕದ ಕಥಾವಸ್ತು ಪುರಾಣ, ಇತಿಹಾಸ ಮತ್ತು ಜಾನಪದ ಮೂಲದ್ದಾಗಿದೆ. ಆದರ್ಶ ಶಿಕ್ಷಕನ ಬದುಕಿನ ಧನಾತ್ಮಕ ಅಂಶದ ಮೂಲಕ ಮಗುವಿನ ಮುಗ್ಧತೆ ಉಳಿಸುವಂತಹ ನಾಟಕಗಳನ್ನು ಹೇಗೆ ಮಕ್ಕಳ ರಂಗಭೂಮಿಯಲ್ಲಿ ಸೃಷ್ಟಿಸಬಹುದು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ನಾಟಕಗಳಲ್ಲಿ ವಿಶೇಷವಾಗಿ ಗಾದೆಮಾತುಗಳು ಕಂಡುಬರುತ್ತವೆ. ಆಧುನಿಕತೆಯ ಲೇಪದೊಂದಿಗೆ ಹಾಸ್ಯ ಮಿಶ್ರಿತ ವ್ಯಂಗ್ಯ ವಿಡಂಬನೆಗಳು ನಾಟಕದಲ್ಲಿ ಕಂಡುಬರುತ್ತವೆ. ಕುತೂಹಲ ಹುಟ್ಟಿಸುವ ಸರಳ ಸಂಭಾಷಣೆಗಳಿವೆ.
ಕೆಲವು ಮಹತ್ವದ ಕೃತಿಗಳು:-
ಚಿಣ್ಣರ ಹಾಡುಗಳು, ಕಿರಿಯರ ಕಿನ್ನರಿ, ಮಕ್ಕಳ ಮುದ್ದು, ತಮ್ಮನ ತಂಬೂರಿ, ಬೊಮ್ಮನ ಡೋಲು, ಬಾಲದ ಬಾವುಟ, ತಿಮ್ಮನ ತುತ್ತೂರಿ, ಕಂದನ ಕೊಳಲು, ಗುಲಾಬಿ ಗೊಂಚಲು, ಎಳೆಯರ ಗೆಳೆಯ ಮುಂತಾದುವು ಕವನಗಳಾದರೆ, ಗಡಿಬಿಡಿ ಗುಂಡ, ಕಪ್ಪೆ ಅಣ್ಣನ ಕುಟುಂಬ, ಹೂದೋಟದ ಹುಡುಗಿಯರು, ರನ್ನದ ಪದಕ, ಪುಟ್ಟ ಬಿಲ್ಲಿ, ಕಿಟ್ಟನ ಕಥೆ, ಮಹಾಸಾಹಸಿ, ಪುಟ್ಟಿಯ ಸಾಹಸ, ಚಿಕ್ಕಣಿ ಚೋಮ, ಬೆಕ್ಕಿನ ಮರಿ ಹಕ್ಕಿಯಾಗಿದೆ, ಕುಣಿ ಕುಣಿದಾಡಿದ ಅಳಿಲಣ್ಣ, ಬಡವಿಯ ಒಡವೆಗಳು, ಹುಲಿಯ ಗುಹೆಗೆ ಪುಟ್ಟಿಯ ಪಯಣ ಮೊದಲಾದವು ಕತೆಗಳು. ನಾಟಕಗಳಲ್ಲಿ ಏಕಲವ್ಯ, ಸತ್ತವರು ಯಾರು, ನಚಿಕೇತ, ಅವಿವೇಕಿ ರಾಜ ಅರೆ ಹುಚ್ಚ ಮಂತ್ರಿ, ಸಂಕಟದಲ್ಲೂ ಸಹವಾಸ, ಮಾದನು ಮತ್ತು ಹುಲಿಯು, ಬೆಳಕಿನ ಹಬ್ಬ, ಕಾಡಿನ ಗೆಳೆಯರು, ಪ್ರೀತಿಯ ಧರ್ಮ, ಕುಳ್ಳ ತಮ್ಮ ಮೊದಲಾದವು ಸೇರಿವೆ.
ಕೆಲವು ಪ್ರಮುಖ ಪ್ರಶಸ್ತಿಗಳು:
೧೯೫೫ರಲ್ಲಿ ಮದ್ರಾಸ್ ಸರಕಾರದ ಮಕ್ಕಳ ಸಾಹಿತ್ಯ ಪ್ರಶಸ್ತಿ, ೯೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೨ರಲ್ಲಿ ಶಿವರಾಮ ಕಾರಂತ ಪ್ರತಿಷ್ಠ್ಠಾನದ ಗೌರವ ಪ್ರಶಸ್ತಿ,
೨೦೦೯ರಲ್ಲಿ ಚಿತ್ರದುರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ೨೦೦೯ರಲ್ಲಿ ಬಾಲವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ, ೨೦೦೪ರಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಸಾಹಿತ್ಯ ಪ್ರಶಸ್ತಿ, ೨೦೦೫ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ, ೨೦೧೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಹಿತ ಸುಮಾರು ೫೦ಕ್ಕೂ ಹೆಚ್ಚು ಪ್ರಶಸ್ತಿಗಳು ಸಂದಿವೆ.
ಹೀಹೆ ಈ ಕೃತಿಯು ಪಳಕಳರ ಸಮಗ್ರ ವ್ಯಕ್ತಿತ್ವ, ಸಾಹಿತ್ಯ ಸಾಧನೆ, ಯಶಸ್ವಿ ಶಿಕ್ಷಕ ಹೇಗಿರಬೇಕೆನ್ನುವುದನ್ನು ಸರಳ, ಸುಂದರ ಭಾಷೆಯಲ್ಲಿ ಕಟ್ಟಿಕೊಟ್ಟಿದೆ. ಇಂದಿನ ಮಕ್ಕಳು ಇಂತಹ ಸಾಹಿತ್ಯವನ್ನು ಓzದಿದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡಲು ಸಹಕಾರಿಯಾಗುತ್ತದೆ. ಲೇಖಕಿ ಶ್ರಮ ಇಲ್ಲಿ ಶ್ಲಾಘನೀಯ.
- ದತ್ತಾತ್ರೇಯ ಹೆಗಡೆ,
ಶಿವಮೊಗ್ಗ
೧೪.೮.೨೦೨೬
............................

Comments
Post a Comment