‘ಹದ್ದುಗಳು’
‘ಹದ್ದುಗಳು’ ಕಥಾ ಸಂಕಲನ ಇಂದಿನ ದಕ್ಷಿಣ ಕನ್ನಡದ ಗ್ರಾಮೀಣ ಬದುಕಿನ ಸೊಗಸನ್ನು ಚೆಂದವಾಗಿ ನಮಗೆ ನೀಡುತ್ತದೆ. ಗ್ರಾಮೀಣ ಬದುಕಿನ ನಂಬಿಕೆ, ಕೌಟುಂಬಿಕ ಜೀವನ, ನಡೆವಳಿಕೆಗಳು, ಜೀವಪರ ಚಿಂತನೆಗಳು, ಕಾರಣಿಕ ಸ್ಥಳದ ಶ್ರದ್ಧೆ, ಹಿರಿಯರ ಅತಂತ್ರ ಮನಃಸ್ಥಿತಿ, ಹೆಣ್ಣಿನ ನೋವು- ನಲಿವು, ಆತ್ಮಹತ್ಯೆ, ಕೊಲೆ ಮುಂತಾದ ಆಗುಹೋಗುಗಳನ್ನು ಇಲ್ಲಿನ ಕಥೆಗಳು ಮೈತುಂಬಿಕೊಂಡಿವೆ
ಎದುರ್ಕಳ ಸುಬ್ಬಣ್ಣ ಭಟ್ ಇದರ ಲೇಖಕರು. ಕುಶಾಲಿನ ಮಾತು, ಪ್ರೀತಿ -ಪ್ರೇಮದ ನಲ್ನುಡಿ, ವ್ಯಂಗ್ಯದ ಚಾಟಿ ಕತೆಯಲ್ಲಿ ಕಂಡುಬರುತ್ತದೆ. ಮುಖ ತಿರುಗಿಸಿದವರು ಗೆದ್ದು ಬರುವ ಸನ್ನಿವೇಶ, ನಂಬಿಕೆಗೆ ದ್ರೋಹ ಬಗೆದು ಮನದಲ್ಲಿ ಕೊರಗುವವರು, ಪಾಪಪ್ರಜ್ಞೆಯಲ್ಲಿ ನರಳುವವರು, ಬಲಿಪಶುವಾಗುವುದು, ಸಾವಿನಲ್ಲಿ ಅಂತ್ಯ ಕಾಣುವುದು... ಈ ಕೃತಿಯಲ್ಲಿ ಕಂಡುಬರುತ್ತದೆ. ಕಾಡುವ ದುಃಖ ವಿಷಾದವೂ ಇದೆ.
ಬದುಕಿನಲ್ಲಿ ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು ಎಂಬ ಮಾತಿದೆ. ಅದನ್ನು ತೋರಿಸುವ ಪ್ರಯತ್ನವನ್ನು ಇಲ್ಲಿನ ಕೆಲವು ಕಥೆಗಳು ಮಾಡಿವೆ. ಈ ಕಥೆಗಳಲ್ಲಿ ಈಗಿನ ಯಾಂತ್ರಿಕ ಜೀವನ, ಮೊಬೈಲ್, ಕಂಪ್ಯೂಟರ್ ಸಂಸ್ಕೃತಿ, ಆಧುನಿಕ ಯುವ ಜನಾಂಗದ ಮನೋಭಾವ, ಮುಗ್ಧ ಜನರ ಜೀವನ, ಸಮಾಜದ ಸಣ್ಣ ಸಣ್ಣ ಸಂಗತಿಗಳನ್ನು ನಿರೂಪಿಸಿದ್ದಾರೆ. ಕಥೆಗಳು ಸರಳವಾಗಿದ್ದು, ಕಷ್ಟವಿಲ್ಲದೆ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಶೈಲಿ ತಂತ್ರಕ್ಕೆ ಮಹತ್ವ ಕೊಡದೆ ಸರಳವಾಗಿ ಕಥೆ ಹೇಳುವುದೇ ಇಲ್ಲಿನ ಉದ್ದೇಶವಾಗಿದೆ. ಸುಬ್ಬಣ್ಣ ಭಟ್ಟರು ಇದನ್ನು ಯಶಸ್ವಿಯಾಗಿ ಮಾಡಿಕೊಂಡು ಹೋಗಿದ್ದನ್ನು ಈ ಕೃತಿಯಲ್ಲಿ ಕಾಣಬಹುದು. ಇದರಲ್ಲಿ ಒಟ್ಟು ೧೪ ಕತೆಗಳಿವೆ.
ಕಥೆಗಳ ಕುರಿತು:
ಮೊದಲ ಕಥೆ ‘ಹದ್ದುಗಳು’ ಕೃತಿಯ ಹೆಸರಿನದೇ ಕಥೆ. ಇದರಲ್ಲಿ ಮಕ್ಕಳಾಗದ ಕೂಲಿಯ ಮುಗ್ಧ ಹೆಣ್ಣುಮಗಳೊಬ್ಬಳು ಅತ್ಯಾಚಾರಕ್ಕೊಳಗಾದ ಕಥೆ. ಮಕ್ಕಳಿಗಾಗಿ ಪರಿತಪಿಸುವಾಗ ಮಂತ್ರದ ನೀರು ಕೊಡುವ ಋಷಿಯ ಹತ್ತಿರ ಹೋದರೂ ಅವರ ದರ್ಶನ ಭಾಗ್ಯ ಸಿಗದ ಕಾರಣ ಬೇಸರದಿಂದ ವಾಪಸಾದಾಗ ಬ್ಯಾರಿಯೊಬ್ಬ ಹಾಸನದ ಬಳಿ ಇರುವ ಮಂತ್ರವಾದಿಯೊಬ್ಬರ ಬಳಿ ಹೋಗು ಎನ್ನುವುದು, ಆಕೆ ದಾರಿ, ಭಾಷೆ ಗೊತ್ತಿಲ್ಲದೆ ಏಕಾಂಗಿಯಾಗಿ ಹೋದಾಗ ಮುವರು ಯುವಕರು ನಂಬಿಸಿ ಶಾಲೆಯೊಂದರಲ್ಲಿ ಕೂಡಿ ಹಾಕಿ ಹದ್ದಿನಂತೆ ಕುಕ್ಕಿ ತಿನ್ನುವುದು, ಮೊದಲಿನಿಂದಲೂ ಹದ್ದು ಕಂಡರೆ ಭಯಪಡುತ್ತಿದ್ದ ಈಕೆ ಕೊನೆಗೂ ಹದ್ದುಗಳಿಗೇ ಆಹಾರವಾಗುತ್ತಾಳೆ. ಮಂತ್ರವಾದಿ ಸಿಕ್ಕನೇ? ಆಕೆಗೆ ಮಕ್ಕಳಾದರೇ? ಮುಂದಿನ ಭಾಗದಲ್ಲಿದೆ.
‘ ಅಮ್ಮಿ’ ಯಲ್ಲಿ ಕರುಳ ಬಳ್ಳಿ ಎಷ್ಟೇ ದೂರವಿದ್ದರೂ ಹೇಗೆ ಒಬ್ಬರನ್ನೊಬ್ಬರನ್ನು ಒಂದುಗೂಡಿಸುತ್ತದೆ ಎನ್ನುವ ಸುಂದರ ಕಥೆ ಇದು. ಕುಟುಂಬದವರೆಲ್ಲರನ್ನೂ ಪ್ಲೇಗ್ ಎಂಬ ಮಾರಿಯಿಂದ ಕಳೆದುಕೊಂಡ ಹುಡುಗನೊಬ್ಬ ಧರ್ಮಸ್ಥಳ ಸಮೀಪದ ಕೃಷಿಕರ ಮನೆಯಲ್ಲಿ ಮಗನಾಗಿ ಬೆಳೆದು ಚೆನ್ನಾಗಿ ಬದುಕು ಕಟ್ಟಿಕೊಂಡು ಅರಣ್ಯ ಇಲಾಖೆ ಅಧಿಕಾರಿಯಾಗಿ ಬದುಕು ಸಾಗಿಸುತ್ತಾನೆ. ಇಂತಹ ಸಂದರ್ಭದಲ್ಲಿ ಅನೇಕ ಅರಣ್ಯ ಲೂಟಿಕೋರರ, ಕಳ್ಳ ಸಾಗಣಿಕೆದಾರರಿಗೆ ಸಿಂಹಸ್ವಪ್ನವಾಗಿ ಕಾಡುತ್ತಾನೆ. ಇಂತಹವನನ್ನು ಮಟ್ಟ ಹಾಕಲು ದಂಧೆಕೋರರು ಯೋಚಿಸುತ್ತಿರುವಾಗ ಒಂದು ರಾತ್ರಿ ಈತನ ಮನೆಗೆ ಸುಂದರ ಯುವತಿ ಬಂದು ಬಾಗಿಲು ತಟ್ಟುತ್ತಾಳೆ. ಆಕೆ ಆತನ ಸಹೋದರಿಯಾಗಿರುತ್ತಾಳೆ. ಆ ಅಧಿಕಾರಿಯ ಮನೆಗೆ ಏಕೆ ಬಂದಳು, ಯಾರು ಕರೆತಂದರು, ಬಂದ ಉದ್ದೇಶವೇನಿತ್ತು ಎನ್ನುವುದನ್ನು ವಿವರಿಸಲಾಗಿದೆ.
‘ವಾನಪ್ರಸ್ಥ’ ಕಥೆಯಲ್ಲಿ ಜೀವನ ಸಂಧಿಯಲ್ಲಿದ್ದ ೮೪ ವರ್ಷದ ಶಂಕರ ಭಟ್ಟರು ಸಂಸಾರ ಬಂಧನ ಸಾಕು, ವಾನಪ್ರಸ್ಥಕ್ಕೆ ಸಂತೋಷದಿಂದ ಹೋಗಬೇಕೆಂದು ನಿರ್ಧರಿಸುತ್ತಾರೆ. ಮಕ್ಕಳು ಬೇಡವೆಂದರೂ ಕೇಳುವುದಿಲ್ಲ. ಕೊನೆಗೆ ಪುರೋಹಿತರ ಬಳಿ ಕೇಳುತ್ತಾರೆ. ಅವರೂ ಸಹ ‘ಕರ್ಮಯೋಗವು ಸನ್ಯಾಸ ಯೋಗಕ್ಕಿಂತಲೂ ಶ್ರೇಷ್ಠ’ ಎಂದು ಗೀತೆಯಲ್ಲಿ ಹೇಳಿದ್ದನ್ನು ಪ್ರಸ್ತಾಪಿಸುತ್ತಾರೆ. ಭಟ್ಟರು ನಿರ್ಧಾರದಿಂದ ಹಿಂದೆ ಸರಿದರೆ? ಇಲ್ಲಿ ಕುಟುಂಬದವರು ಗೆದ್ದರೇ? ಭಟ್ಟರು ಗೆದ್ದರೇ ಎನ್ನುವುದಿದೆ.
‘ಕರುಳು’ ಕಥೆಯಲ್ಲಿ ಸೊಸೆಯ ಮಾತಿಗೆ ಸಿಟ್ಟಿಗೆದ್ದು ಭಟ್ಟರು ಮನೆ ಬಿಟ್ಟು ಸಕಲೇಶಪುರ ಸಮೀಪದ ಹಳ್ಳಿಯೊಂದಕ್ಕೆ ಹೋಗಿ ಭಿಕ್ಷೆ ಬೇಡಿ ವಾಸಿಸಲಾರಂಭಿಸುತ್ತಾರೆ. ಭಟ್ಟರು ಎಂದು ಅಲ್ಲಿಯವರಿಗೆ ಗೊತ್ತಾದಾಗ ಅರ್ಚಕ ಕೆಲಸ ಸಿಗುತ್ತದೆ, ಜೊತೆಗೆ ರಸ್ತೆಯಂಚಿನಲ್ಲಿ ಸವತೆಕಾಯಿ ಮಾರುವ ಕೆಲಸವನ್ನು ಉಳಿದ ವೇಳೆ ನಡೆಸುತ್ತಾರೆ. ಕೆಲವು ವರ್ಷಗಳ ನಂತರ ಒಂದು ದಿನ ಭಟ್ಟರ ಮಗನ ಕುಟುಂಬ ಕಾರಿನಲ್ಲಿ ಹೋಗುವಾಗ ಅಲ್ಲಿ ಮೊಮ್ಮಗ ಸವತೆಕಾಯಿ ಖರೀದಿಸುತ್ತಾನೆ. ಅಜ್ಜನ ಪರಿಚಯ ಹಿಡಿಯುತ್ತಾನೆ. ತಂದೆಯ ಹತ್ತಿರ ಹೇಳಿದರೂ ಇದಕ್ಕೆ ಕಿವಿಗೊಡುವುದಿಲ್ಲ. ಮಗ ಹಠ ಬಿಡದಿದ್ದಾಗ ಮರಳಿ ಬಂದು ನೋಡುತ್ತಾರೆ. ಗುರುತುಹಿಡಿಯಲಾಗದ ಸ್ಥಿತಿಯಲ್ಲಿ ತಂದೆ ಕಂಡುಬರುತ್ತಾರೆ. ಈ ಅಜ್ಜನನ್ನು ಕುಟುಂಬದವರು ಕರೆದೊಯ್ದರೇ? ಎಲ್ಲರೂ ಒಂದಾದರೆ ಎನ್ನುವುದು ಈ ಕಥೆಯಲ್ಲಿದೆ.
ಬಲಿ
ಮೋನಪ್ಪ ಎಂಬ ಕೂಲಿಯವನು ಭೂತದ ಗುಡಿಯಲ್ಲಿ ಬಿದ್ದಿದ್ದ ಚಿನ್ನದ ನಾಣ್ಯವನ್ನು ಎತ್ತಿಕೊಂಡಿದ್ದರಿಂದ ಅವನ ಮಗ ಮತ್ತು ಮಗಳು ಇಬ್ಬರೂ ಅನಾರೋಗ್ಯಕ್ಕೆ ತುತ್ತಾಗಿ ಬಲಿಯಾಗುವುದು, ಈ ನಾಣ್ಯದಿಂದಲೇ ತನಗೆ ಕಷ್ಟವಾಯಿತೆಂದು ಅರ್ಥ ಮಾಡಿಕೊಂಡು ಅದನ್ನು ವಾಪಸ್ ತಂದು ಹಾಕುವುದು, ಆದರೂ ಮಕ್ಕಳು ಸತ್ತಿದ್ದಕ್ಕೆ ದುಃಖದಿಂದ ಭೂತದ ಕಲ್ಲನ್ನು ಅಲುಗಾಡಿಸಿ, ತುಳಿದು, ಕೂಗಾಡಿ ತಾನೂ ಕೂಡ ಅಲ್ಲಿಯೇ ಪ್ರಾಣ ಬಿಡುತ್ತಾನೆ
ತಪ್ಪೊಪ್ಪಿಗೆ
ಮಕ್ಕಳೆಲ್ಲ ಸೇರಿ ತಂದೆ ತಾಯಿಯರಿಗೆ ಸಹಸ್ರಚಂದ್ರ ದರ್ಶನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿಸಿದ ನಂತರ ರಸ ನಿಮಿಷ ನೆನೆದು ಪುಳಕಿತನಾದ ತಂದೆ ತನ್ನ ಹೆಂಡತಿಯಲ್ಲಿ ‘ತಾನು ಈ ಹಿಂದೆ ಮನೆ ಕೆಲಸದವಳಲ್ಲಿ ಮೋಹಗೊಂಡಿದ್ದನ್ನು ಹೇಳಿಕೊಂಡು ಕ್ಷಮಿಸು’ ಎಂದಾಗ ಆಕೆ ‘ಅವಳಿಗೆ ಪೊರಕೆ ಸೇವೆ ಮಾಡಿ ಮನೆಯಿಂದ ಹೊರಹಾಕಿದ್ದೇ ತಾನು’ ಎನ್ನುವುದನ್ನು ನೆನಪಿಸುತ್ತಾಳೆ.
ಒಪ್ಪಣ್ಣ
ತನ್ನ ಕಣ್ಣೆದುರೇ ೧೨ ವರ್ಷದ ಮುದ್ದು ಮೊಮ್ಮಗ ಒಪ್ಪಣ್ಣ ತೋಡಿಗೆ ಬಿದ್ದು ನೀರು ಪಾಲಾದಾಗ ಪ್ರಜ್ಞೆ ಕಳೆದುಕೊಂಡ ಅಜ್ಜ ರಾಮಪ್ಪನಿಗೆ ನಂತರ ಸ್ಮೃತಿ ಮರಳಿ ಬರುತ್ತದೆ. ಆದರೆ ಯಾರನ್ನೂ ಗುರುತಿಸಲಾಗದ ಸ್ಥಿತಿ ತಲುಪುತ್ತಾನೆ. ಸುಮಾರು ಒಂದು ವರ್ಷ ತನ್ನಿಂದಾಗಿಯೇ ಮೊಮ್ಮಗ ನೀರು ಪಾಲಾದನೆಂಬ ಪಾಪ ಪ್ರಜ್ಞೆಯಲ್ಲಿರುತ್ತಾನೆ. ಒಂದು ಕುಟುಂಬದ ಜವಾಬ್ದಾರಿ, ಮಕ್ಕಳ ವಾತ್ಸಲ್ಯ, ಮೊಮ್ಮಗನ ಪ್ರೀತಿ, ತಾನೇ ಎಲ್ಲವೂ ಆಗುವ ಮೂಲಕ ಓದುಗರು ಅನುಕಂಪದಿಂದ ಮಿಡಿಯುವ ಮಾದರಿ ವ್ಯಕ್ತಿಯಾಗಿ ಇಲ್ಲಿ ರಾಮಪ್ಪಯ್ಯ ಕಾಣಿಸಿಕೊಳ್ಳುತ್ತಾನೆ
ತನ್ನನ್ನು ನೋಡಲು ಬಂದ ಗಂಡುಮಕ್ಕಳನ್ನು ಒಲ್ಲೆ ಎನ್ನುತ್ತಿದ್ದ ಶಾಲಿನಿ ಗಂಡುಗಲಿಯಾಗಿ ಕಂಡ ಸುಮಂತನನ್ನು ಒಪ್ಪುವುದನ್ನು ‘ಒಪ್ಪಿಗೆ’ ಕಥೆಯಲ್ಲಿ ಕಾಣಬಹುದು. ಇದಕ್ಕೆ ವಿರುದ್ಧವಾಗಿ ‘ಉಡುಗೊರೆ’ಯಲ್ಲಿ ತಾನೇ ಮೆಚ್ಚಿ ಮದುವೆಯಾದ ಪತ್ನಿ ವಸು ತನ್ನ ಪ್ರೀತಿಗಿಂತಲೂ ಹೆಚ್ಚಾದ ಹಣ, ಅಂತಸ್ತು, ಶೋಕಿಯನ್ನು ಬಯಸುವ ಹೆಣ್ಣೆಂದು ತಿಳಿದಾಗ ವಿನೋದನಿಗೆ ಆಗುವ ಆಘಾತ ಪ್ರಸ್ತಾಪವಾಗಿದೆ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುವ ಕಥೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೦೧.೦೯.೨೦೨೬
....................

Comments
Post a Comment