ಬದುಕಿಗೆ ಹತ್ತಿರವಾಗುವ


‘ಮುಷ್ಟಿ ಗ್ರಾಹ್ಯ’

 

‘ಮುಷ್ಟಿ ಗ್ರಾಹ್ಯ’ ಪ್ರತಿಯೊಂದು ಮನದ ಭಾವನೆ, ಕಲ್ಪನೆಗಳ ಜೊತೆಗೆ ಸಮಷ್ಟಿ ಬದುಕಿನ ಹಲವಾರು ಮಜಲುಗಳನ್ನು ಕೆಲವೇ ಪಾತ್ರಗಳ ಮೂಲಕ ಮತ್ತು ಸನ್ನಿವೇಶಗಳ ಮೂಲಕ ಓದುಗರೆದುರು ತೆರೆದಿಡುವ ಕಥಾಹಂದರವಾಗಿದೆ. ಅತ್ಯಂತ ಸಲೀಸಾಗಿ ಕಥೆಗಳನ್ನು ಸುಂದರವಾಗಿ ಲೇಖಕ ವಿದ್ಯಾಧರ ಮುತಾಲಿಕ್ ದೇಸಾಯಿ ಇಲ್ಲಿ ನೇಯ್ದಿದ್ದನ್ನು ಕಾಣಬಹುದು.

 ಇಲ್ಲಿನ ಕಥೆಗಳೆಲ್ಲವೂ ನಮ್ಮ ಸುತ್ತಮುತ್ತ ನಡೆಯುವ ವಿಚಾರಕ್ಕೆ ಸಂಬಂಧಪಟ್ಟವು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನಜೀವನದ ಮೇಲೆ ಬೆಳಕು ಚೆಲ್ಲುವಂತಹ ವಿಷಯವನ್ನು ಹೊಂದಿವೆ. ಇದರಿಂದ ಇದು ನಮ್ಮನ್ನು ಆಕರ್ಷಿಸುತ್ತದೆ. ಒಟ್ಟು ೧೨ ಕತೆಗಳ ಗುಚ್ಛ ಇದಾಗಿದ್ದು,  ಸೃಜನಶೀಲವಾಗಿ ಕಥೆಗಳು ತೆರೆದುಕೊಂಡಿವೆ. ಬದುಕಿಗೆ ಹತ್ತಿರವಾಗುವಂತಹ ಇಲ್ಲಿನ ಕಥೆಗಳು ಓದುಗರಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ


 ಕಥೆ ಹೇಳುವೆ

   ಮದುವೆಯ ವಯಸ್ಸು ಹೆಚ್ಚುತ್ತಿದ್ದರೂ ಅವಿವಾಹಿತೆಯಾಗಿದ್ದ ವಸು ಹೊಸ ಕನಸು ಕಾಣುವ ಕಥೆ ಇದು. ಕಿಟ್ಟಿ ಎನ್ನುವವ ವಸುಗಿಂತ ಮೂರು ವರ್ಷ ದೊಡ್ಡವ. ತಮ್ಮ ಮಗನಂತೆ ವಸು ಪಾಲಕರು ಬೆಳೆಸಿದ್ದರು. ಬಾಲ್ಯ ಸಹಜ ಸಲುಗೆ ಇಬ್ಬರಲ್ಲಿಯೂ ಇತ್ತು. ವಸುನನ್ನು ಸೋದರ ಮಾವನ ಮಗ ರಾಮನ ಜೊತೆ ಮದುವೆ ನಡೆಸುವ ಪ್ರಸ್ತಾಪ ನಡೆದಿತ್ತು. ಕಿಟ್ಟಿ ಈ ಮಧ್ಯೆ ಹೈಸ್ಕೂಲ್ ಶಿಕ್ಷಕನಾಗುವುದು, ಆತನಿಗೆ ವಸು ಆಗಾಗ ಪತ್ರ ಬರೆಯುತ್ತಾ  ‘ನೀನು ಬರುವ ದಾರಿ ಕಾಯುತ್ತಿರುವೆ’ ಎನ್ನುವುದು, ವಸುನ ತಂದೆ ತೀರಿದಾಗ ದೊಡ್ಡ ನಗರದಲ್ಲಿದ್ದ ಆಕೆಗೆ ಮಾಹಿತಿ ನೀಡಿ, ಸಾಕುಮಗನಂತೆ ತಲೆಗೆ ಕಿಚ್ಚು ಹಚ್ಚಿ. ಅಂತಿಮ ಕಾರ್ಯಗಳನ್ನು ಮಾಡುವುದು, ಮತ್ತೆ ಕೆಲಸಕ್ಕೆ ಹಾಜರಾದಾಗ ಅವ್ಯಕ್ತ ಬಯಕೆ ಆತನಿಗೆ ಕಾಡತೊಡಗುತ್ತದೆ. ಮುಂದೆ ಇಬ್ಬರೂ ಒಂದಾದರೆ? ಮನೆಯಲ್ಲಿ ಒಪ್ಪಿಗೆ ಸಿಕ್ಕಿತೇ? ಎನ್ನುವುದಕ್ಕೆ ಈ ಕಥೆಯಲ್ಲಿ ಉತ್ತರವಿದೆ.    

ಊರಿಗೊಬ್ಬಳೇ ಪದ್ಮಾವತಿ 

ಪದ್ಮಾವತಿಯ ಕೈಹಿಡಿದ ಗಂಡ ಏಕೈಕ ಮಗಳ ಚಿಂತೆಯನ್ನೂ ಮಾಡದೆ ಕೈಕೊಟ್ಟು ಹೋಗಿರುತ್ತಾನೆ. ಮಗಳು ಸುಕನ್ಯಾ ಮನೆ ಬಿಟ್ಟಿದ್ದರೂ ಆಕೆಯ ನೆನಪು ತಾಯಿಗೆ ಬಿಕ್ಕುತ್ತಿತ್ತು.  ಗುಡಿಸಲಿನ ಪಕ್ಕದ ಮಾರುತಿ ಗುಡಿಯಲ್ಲಿ ಒಂದು ದಿನ ಯಾರೋ ಮಗುವನ್ನು ಬಿಟ್ಟು ಹೋಗಿದ್ದರು. ಅದನ್ನು ಪದ್ಮಾವತಿ ತಂದು ಬೆಳೆಸಿ ಶಕುಂತಲಾ ಎಂದು ಹೆಸರಿಡುತ್ತಾಳೆ. ಬೆಳೆದ ಮೇಲೆ ಆಕೆ ಸರಕಾರಿ ಅಧಿಕಾರಿಯಾಗಿದ್ದಾಗ ಆಕ್ಸಿಡೆಂಟ್‌ನಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಪದ್ಮ ಊರಿನಲ್ಲಿ ಹಾವು ಕಡಿದವರಿಗೆ, ಲಕ್ವಾ ಹೊಡೆದವರಿಗೆ ಚಿಕಿತ್ಸೆ ಕೊಡುತ್ತ ಹೆಸರು ಗಳಿಸಿದ್ದಳು. ಯಾರ ಮುಂದೆಯೂ ಕೈಚಾಚಿದವಳಲ್ಲ. ಶಕುಂತಲಾ ಆಸ್ಪತ್ರೆಗೆ ಸೇರಿದಾಗ ಅವಳ ವಾರ್ಡಿನಲ್ಲಿ ಪದ್ಮಾಗೆ ಕಾದಿದ್ದ ಆಶ್ಚರ್ಯ ಯಾವುದು, ಶಕು ಮುಂದೆ ಏನಾದಳು ಎನ್ನುವ ಬಗ್ಗೆ ವಿವರ ಇದರಲ್ಲಿದೆ.

ದುರುಗಾಮುರುಗ್ಯಾ 

ತಲೆ ಮೇಲೆ ದುರ್ಗವ್ವನ ದೇವಿಯ ಪೆಟ್ಟಿಗೆ ಹೊತ್ತು ಮೈಯಿಗೆ ಬಾಸುಂಡೆ ಬರುವಂತೆ ಬಾರಿಸಿಕೊಳ್ಳುತ್ತಾ, ಭಿಕ್ಷೆ ಪಡೆದು ಜೀವನ ಸಾಗಿಸುತ್ತಿದ್ದರು ದುರ್ಗಪ್ಪ ಮತ್ತು ದುರ್ಗವ್ವ. ಇಬ್ಬರು ಅನ್ಯೋನ್ಯ ಜೋಡಿಯಾಗಿ ಇದ್ದಾಗ ಇವರ ಜೋಪಡಿ ಹತ್ತಿರವೇ ಇದ್ದ ಕರೀಂ ಸಾಬಿಗೆ ದುರ್ಗವ್ವನ ಮೈಮಾಟದ ಮೇಲೆ ಕಣ್ಣು ಬೀಳುತ್ತದೆ. ಈ ದಂಧೆ ಬಿಟ್ಟು ಮುಂಬೈಗೆ ಹೋಗೋಣ. ಉತ್ತಮ ದುಡಿಮೆ ಅಲ್ಲಿದೆ ಎಂಬ ಆಸೆಯನ್ನು ತೋರಿಸುತ್ತಾನೆ.  ಒಮ್ಮೆ ದುರ್ಗವ್ವನ ಮಗಳು ಅನಾರೋಗ್ಯಕ್ಕೆ ತುತ್ತಾದಾಗ ಸಾಬಿ ನಗರದ ಆಸ್ಪತ್ರೆಗೆ ಸೇರಿಸುತ್ತಾನೆ. ಆಸ್ಪತ್ರೆಯಲ್ಲಿ ಔಷಧಿ ಇಲ್ಲ, ನಾಳೆ ಮಧ್ಯಾಹ್ನದೊಳಗೆ ತಂದುಕೊಟ್ಟರೆ ಮಗುವನ್ನು ಬದುಕಿಸಬಹುದು ಎಂದಾಗ ರಾತ್ರಿ ದುರ್ಗವ್ವ ದಂಪತಿ ಜೊತೆ ಅಲ್ಲಿಯೇ ಉಳಿಯುತ್ತಾನೆ. ನಂತರದ ಬೆಳವಣಿಗೆ ಏನಾಯಿತು? ಮಗು ಬದುಕಿತೇ? ಸಾಬಿ- ದುರುಗವ್ವ ಒಟ್ಟಾದರೆ? ದುರುಗಪ್ಪ ಅಂತ್ಯದಲ್ಲಿ ಏನು ಮಾಡಿದ ಎನ್ನುವ ನಿರೂಪಣೆಯುಳ್ಳ ಉತ್ತಮ ಕಥೆ ಇದು.   

ದೇವರ ಕಣ್ಣೀರು 

ಕೊರೊನಾ ಕಾಲದಲ್ಲಿನ ಸಾವು ಮಾನವರು ಮಾನವಂತರಾಗಿ ಮಾನವೀಯತೆಯಿಂದ ನಡೆಯಬೇಕೆನ್ನುವುದನ್ನು ಕಲಿಸಿತು ಎನ್ನುವ ಸಾರಂಶದ ಕಥೆ ಇದು. ಕಮಲು ಇಲ್ಲಿ ಕರೋನ ಕಾಲದಲ್ಲಿ ಸತ್ತ್ತ ತನ್ನ ಗಂಡ ಹಾಗೂ ವಿವಿಧ ರೀತಿಯಲ್ಲಿ ಸತ್ತವರ ಅಂತ್ಯಸಂಸ್ಕಾರವನ್ನು ಮಾಡುವವರು. ಅನಾಥ ಶವಗಳ ಸಂಸ್ಕಾರ ಮಾಡುತ್ತಾ ಕೊರೊನಾ ಯೋಧ ಎಂಬ  ಬಿರುದು ಮತ್ತು ಸನ್ಮಾನವನ್ನು  ಪಡೆಯುತ್ತಾಳೆ. ಬದುಕು ಹೀಗೆಯೇ. ದೇವರಿಗೂ ಕಣ್ಣೀರು ತರಿಸುತ್ತದೆ ಎನ್ನುವುದನ್ನು ಸೊಗಸಾಗಿ ಚಿತ್ರಿಸಿರುವ ಕಥೆ ಇದು.  

 ಸಂಕ್ರಾಂತಿ 

ಕಲ್ಯಾಣಶೆಟ್ಟಿ ೩೦ ಎಕರೆ ನೀರಾವರಿ ಜಮೀನು ಹೊಂದಿದ ಊರಿನ ದೊಡ್ಡ ಸಾಹುಕಾರ. ಸಾಲ ಕೊಡುವುದು, ಬಡ್ಡಿ ವಸೂಲಿ ಮಾಡುವುದು ಈತನ ದಂದೆ. ಬಸಲಿಂಗ ಮತ್ತು ಕರಿಲಿಂಗ ಎನ್ನುವರು ಈತನ ಕಟ್ಟಾಳುಗಳು. ಬಾಟಲಿ, ಕೋಳಿ, ಹೆಣ್ಣು ಇದ್ದ್ದರೆ ಇವರ ಜೀವನ ಮುಗಿಯಿತು. ಗೋಪಾಲ ಶೆಟ್ಟಿ ಎನ್ನುವ ಕೂಲಿಯವನ ಸುಂದರ ಎತ್ತಿನ ಜೋಡಿ ಕಳ್ಳತನ ಮಾಡುವುದು, ಆತನ ಹೆಂಡತಿ ರಾಧಾಳನ್ನು ಒಲಿಸಿಕೊಳ್ಳಲು ಯತ್ನಿಸುವುದು.. ಹೀಗೆ ಮಾಡುತ್ತಾ ಕಾಕಲಳೆಯುವಾಗ ರಾಧಾಳ ತಂಗಿ ರುಕ್ಮಿಣಿ ಅದೇ ಊರಿಗೆ ಇನ್ಸ್ಪೆಕ್ಟರ್ ಆಗಿ ಬರುತ್ತಾಳೆ.  ಒಮ್ಮೆ ರಾಧೆಯ ಮನೆಗೆ ಬಂದಾಗ ಶಕ್ತಿ ಹಾಗೂ ಆತನ ಬಂಟರ ವಿಷಯವನ್ನೆಲ್ಲ ತಿಳಿಯುತ್ತಾಳೆ. ಇವರನ್ನೆಲ್ಲ ಕಟ್ಟಿಹಾಕಲು ಪ್ಲಾನ್ ಮಾಡುತ್ತಾಳೆ. ಇದೇ ವೇಳೆ ಶೆಟ್ಟಿ ಮನೆಯ ಕಪಾಟಿನಲ್ಲಿದ್ದ ಸಂಪತ್ತು ಕಳುವಾಗುತ್ತದೆ. ಕೆಲವೇ ದಿನದಲ್ಲಿ ಆಭರಣ ಪೆಟ್ಟಿಗೆ ಕಳ್ಳತನವಾಗಿತ್ತು ಮಾರನೇ ದಿನ ಬಣವೆಗಳು ಉರಿದು ಹೋಗಿದ್ದವು. ತನಿಖೆಗೆ ಹೋದ ಪೊಲೀಸರಿಗೆ ಗೋಪಾಲನ ಹೋರಿ ಜೋಡಿ ಕಾಣಸಿಗುತ್ತದೆ. ಮುಂದೆ ಇನ್ಸ್ ಪೆಕ್ಟರ್ ಆ ಖದೀಮರನ್ನು ಹೇಗೆ ದಾರಿಗೆ ತಂದಳು, ಶೆಟ್ಟಿಯ ಕಥೆ ಏನಾಯಿತು, ಯಾವ ಪ್ಲಾನ್‌ನ್ನು ಇನ್ಸ್ಪೆಕ್ಟರ್ ಮಾಡಿ ಅವರ ಹೆಡೆಮುರಿ ಕಟ್ಟಿದಳು, ಎನುವುದನ್ನೆಲ್ಲ ಸುಂದರವಾಗಿ ಕಥೆ ಕಟ್ಟಿಕೊಟ್ಟಿದೆ.

ಸೌಗಂಧಿಕಾ

ನಮ್ಮಲ್ಲಿರುವ ಪ್ರತಿಭೆ ಬಳಸಿಕೊಂಡರೆ ನಾವೇ ಇತಿಹಾಸ ಸೃಷ್ಟಿಸಬಹುದು ಎನ್ನುವ ಸಾರಾಂಶವನ್ನು ಹೊಂದಿದ ಕಥೆ ಇದು. ಸೌಗಂಧಿಕಾ ಕಾಲೇಜು ಓದುವಾಗ ಕತೆ, ಕವನ ಬರೆದು ಸನ್ಮಾನ, ಪ್ರಶಸ್ತಿ ಪಡೆಯುತ್ತಾಳೆ.  ಸಂಬಂಧಿ ಸುಧೀರ್ ಸಹ ಕತೆ, ಕವನ ಪುಸ್ತಕ ಪ್ರಕಟಿಸಿರುತ್ತಾನೆ. ಒಮ್ಮೆ ಬರೆದ ಕಥೆಯನ್ನು ಸ್ಪರ್ಧೆಗೆ ಕಳಿಸುವ ಮುನ್ನ ಗೆಳತಿಗೆ ತೋರಿಸಲು ತಂದವೇಳೆ ಬಸ್ಸಿನಲ್ಲಿ ಅದರ ಪ್ರತಿ ಕಳೆದುಹೋಗುತ್ತದೆ. ಅದೇ ಬಸ್‌ನಲ್ಲಿ ಸುಧೀರ್ ಹಿಂದೆ ಕುಳಿತಿರುತ್ತಾನೆ. ಅದು ಆತನ ಕೈಗೆ ಸಿಕ್ಕು ಸೌಗಂಧಿಕಾಳಿಗೆ ಗೊತ್ತಿಲ್ಲದಂತೆ ಆತನೇ ಸ್ಪರ್ಧೆಗೆ ಅದನ್ನು ಕಳುಹಿಸುತ್ತಾನೆ. ಅದಕ್ಕೆ ಪ್ರಶಸ್ತಿ ಬಂತೇ? ಸೌಗಂಧಿಕಾಗೆ ಆಶ್ಚರ್ಯ ಉಂಟುಮಾಡಿದ ಸುದ್ದಿ ಯಾವುದು, ಅವಳ ಪ್ರತಿಭೆ ಹೇಗೆ ಪ್ರಖ್ಯಾತವಾಯಿತು ಎನ್ನುವುದು ಇದರಲ್ಲಿದೆ.  

ಸಂಭವಾಮಿ ಯುಗೇ ಯುಗೇ 

ಸ್ವಾತಂತ್ರ್ಯ ಹೋರಾಟಗಾರ ನಿಂಗಜ್ಜನ ಮನೆಯಲ್ಲಿ ಹೆಣ್ಣು,  ಹೆಂಡದ ಚಟಕ್ಕೆ ಬಲಿಯಾದ ಮಗ ಬಸನಗೌಡ ಸ್ವಾತಂತ್ರ್ಯ  ಮುನ್ನಾದಿನ ರಾತ್ರಿ  ಅಧಿಕಾರಿಗಳಿಗೆ ಪಾರ್ಟಿ ಏರ್ಪಡಿಸಿದ್ದಲ್ಲದೆ ಮನೆಗೆಲಸದ ಹೆಂಗಸರಿಬ್ಬರನ್ನು ಅತ್ಯಾಚಾರಕ್ಕಿಳಿಸಿ, ನಿಂಗಜ್ಜನಿಂದ ಒದೆ ತಿನ್ನುವ ಕಥೆ.   ೮೦ ವರ್ಷವಾದರೂ ೪೦ರ ಹರೆಯದ ಮೈಕಟ್ಟು ಹೊಂದಿದ್ದ ನಿಂಗಜ್ಜ ಸ್ವಾತಂತ್ರ್ಯ ಹೋರಾಟಗಾರ. ಇದಕ್ಕಾಗಿ ಸ್ವಾತಂತ್ರ್ಯದ ಮುನ್ನಾ ದಿನ ಊರಿನ ಶಾಲೆಯಲ್ಲಿ ನಿಂಗಜ್ಜನಿಗೆ ಸನ್ಮಾನ ನಡೆಯುತ್ತದೆ. ಆದರೆ ಅಂದು ರಾತ್ರಿ ಅಜ್ಜನ ನಾಲ್ಕನೆಯ ಮಗ ಬಸವನಗೌಡಮನೆಯ ಪಕ್ಕದ ಗುಡಿಸಲಿನಲ್ಲಿ ಅಧಿಕಾರಿಗಳಿಗೆ ಮತ್ತು ಶ್ರೀಮಂತರಿಗೆಲ್ಲ ಬಾಡೂಟವನ್ನು ಏರ್ಪಡಿಸುತ್ತಾನೆ. ರಾತ್ರಿ ಮನೆಯ ಹೊರಗಡೆ ಏನೋ ಶಬ್ದ ಬರುವುದನ್ನು ಗಮನಿಸಿದಾಗ  ಬಸನಗೌಡ ಮತ್ತು ಇಬ್ರಾಹಿಂಸಾಬ್ ಇಬ್ಬರೇ ಉಳಿದು ಕೆಲಸದ ಯಮುನಕ್ಕ ಮತ್ತು ಸಂಗವ್ವರನ್ನು ರೂಮಿನೊಳಗೆ ಕೂಡಿಹಾಕಿಕೊಂಡು ಅತ್ಯಾಚಾರಕ್ಕೆ ಯತ್ನಿಸುತ್ತಿದ್ದರು. ಇದನ್ನು ನಿಂಗಜ್ಜ ಹೇಗೆ ತಪ್ಪಿಸಿದ, ಆ ಇಬ್ಬರು ಮಹಿಳೆಯರನ್ನು ಹೇಗೆ ಕಾಪಾಡಿ, ಬಸವನಗೌಡ ಮತ್ತು ಸಾಬಿಗೆ ಹೇಗೆ ಒದೆ ಕೊಟ್ಟ ಎನ್ನುವುದು ಇಲ್ಲಿ ಕುತೂಹಲಕರವಾಗಿ ಚಿತ್ರಿಸಲ್ಪಟ್ಟಿದೆ.

ಹೀಗೆ ಇಲ್ಲಿನ ಕಥೆಗಳೆಲ್ಲ ನಮ್ಮ ಸಾಮಾಜಿಕ, ರಾಜಕಿಯ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿವೆ. ಸಮಾಜದಲ್ಲಿ ನಡೆಯುವ ಕ್ರೂರ ಮತ್ತು ಭಂಡತನದ ಕೃತ್ಯಗಳಿಗೆ ಕಡಿವಾಣ ಹಾಕುವವರೂ ಸಹ ಇದ್ದಾರೆ ಎನ್ನುವುದನ್ನು ನಿರೂಪಿಸುತ್ತ ನಾವೂ ಸಹ ಕಥೆಯಲ್ಲಿನ ಒಂದು ಪಾತ್ರ ಎಂಬಂತಹ ಅನುಭವವನ್ನು ಕಟ್ಟಿಕೊಡುತ್ತದೆ. 

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ  

 ......................


Comments

Popular posts from this blog