ಮನುಷ್ಯ ಪ್ರೇಮ, ಕರುಣೆ ಸಾರುವ
“ಮಹಾಮಾಯಿ”
‘ಮಹಾಮಾಯಿ’ ಇದು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಅವರ ಹೆಸರಾಂತ ನಾಟಕ. ಸುಮಾರು ೫ಕ್ಕೂ ಹೆಚ್ಚು ಬಾರಿ ಮುದ್ರಣ ಕಂಡಿದೆ. ಕಂಬಾರರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯವರು. ಬೆಂಗಳೂರು ವಿಶ್ವ್ವವಿದ್ಯಾಲಯದಲ್ಲಿ ಎರಡು ದಶಕಗಳ ಕಾಲ ಕನ್ನಡ ಪ್ರಾಧ್ಯಾಕರಾದವರು. ಇದಕ್ಕೂ ಮೊದಲು ಕರ್ನಾಟಕ ವಿಶ್ವವ್ವಿದ್ಯಾಲಯ ಧಾರವಾಡದಲ್ಲಿ ಮತ್ತು ಅಮೆರಿಕದ ಚಿಕಾಗೋ ವಿಶ್ವವ್ವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಬಳಿಕ ಹಂಪಿ ಕನ್ನಡ ವಿವಿಯ ಪ್ರಪ್ರಥಮ ಕುಲಪತಿಯಾದ ಕೀರ್ತಿ ಇವರದ್ದು. ಜಾನದ ವಿಶ್ವಕೋಶ ಎಂಬ ಬಿರುದಾಂಕಿತರು.
ಮನುಷ್ಯ ಪ್ರೇಮದ ಜಯಕ್ಕೆ ಸಾಕ್ಷಿಯಾಗುವ ಈ ಪ್ರೀತಿ, ಕೊನೆಗೆ ಸಾವಿನ ದೇವತೆಯ ಅಹಂಕಾರವನ್ನು ಸೋಲಿಸುತ್ತದೆ. ಸಾವು ಮತ್ತು ವಿಧಿ ಎಂಬುದು ಪ್ರಕೃತಿಯ ಅನಿವಾರ್ಯ ನಿಯಮ. ಆದರೆ ಮನುಷ್ಯನ ಕರುಣೆ ಮತ್ತು ವೈದ್ಯಕೀಯ ಜ್ಞಾನವು ವಿಧಿಯನ್ನೇ ಎದುರಿಸಿ ನಿಲ್ಲಬಲ್ಲದು ಎಂಬುದನ್ನು ನಾಟಕ ತೋರಿಸುತ್ತದೆ. ದ್ವೇಷ, ಸಾವು ಮತ್ತು ಅಹಂಕಾರಕ್ಕಿಂತ "ಮನುಷ್ಯ ಪ್ರೇಮ" ಮತ್ತು "ಕರುಣೆ" ಶ್ರೇಷ್ಠವಾದದ್ದು ಎಂಬುದೇ ಕಂಬಾರರ ಈ ನಾಟಕದ ಮುಖ್ಯ ಆಶಯವಾಗಿದೆ.
ಮೃತ್ಯುದೇವತೆಯ ಮೇಲೆ ಮನುಷ್ಯ ವಿಜಯ ಸಾಧಿಸುವ ಕತೆ ಇದು. ಪೂರ್ವನಿಗದಿತವಾದ ಸಾವು ಮುಟ್ಟದ ಹಾಗೆ ರಾಜಕುಮಾರಿಯನ್ನು ಕಾಪಾಡುವುದು, ವೈದ್ಯನಾದ ಸಂಜೀವನ ಪ್ರೇಮವನ್ನು ಇದು ಚಿತ್ರಿಸುತ್ತದೆ. ನಾಟಕದ ನಿಜವಾದ ಮಹತ್ವವಿರುವುದು ಮನುಷ್ಯ ಸ್ಥಿತಿಯನ್ನು ನವೀನ ರೀತಿಯಲ್ಲಿ ಅನ್ವೇಷಿಸುವುದರಲ್ಲಿ. ಅಂದರೆ ಸ್ವಾತಂತ್ರ್ಯವನ್ನು ನಿರಾಕರಿಸುವ ಬಲಗಳು ನಿಯಂತ್ರಿಸುವ ಜಗತ್ತಿನಲ್ಲಿ ಬದುಕುವುದೆಂದರೆ ಹೇಗಿರುತ್ತದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ನಾಟಕದ ನಾಯಕನಾದ ಸಂಜೀವ ಒಬ್ಬ ತಬ್ಬಲಿಯಾಗಿ ತನ್ನ ಬದುಕನ್ನು ಆರಂಭಿಸುತ್ತಾನೆ. ದೇವರಿಲ್ಲದ ಜಗತ್ತಿನಲ್ಲಿ ಆರಂಭವಾಗುವ ಸಾಂಕೇತಿಕ ಬದುಕು ಇದು. ಮೃತ್ಯುದೇವತೆಯು ಅವನಿಗೆ ಸಂಕಟ ನಿವಾರಣೆಯ ಶಕ್ತಿಯನ್ನು ನೀಡುತ್ತಾಳೆ. ಆದರೆ ಅವನಿಂದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಾಳೆ. ತನ್ನ ಬದುಕಿನಲ್ಲಿ ಇಲ್ಲವಾಗಿರುವುದು ಏನು ಎಂಬುದನ್ನು ಸಂಜೀವ ಅರ್ಥ ಮಾಡಿಕೊಳ್ಳುವುದು, ಪ್ರೇಮದ ಮಹತ್ವವನ್ನು ಶೋಧಿಸುವುದು ಮತ್ತು ಆಧ್ಯಾತ್ಮಿಕ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಈ ನಾಟಕದ ಪ್ರಮುಖ ಅಂಶವಾಗಿದೆ.
ಪ್ರಮುಖ ಪಾತ್ರಗಳು:
ಮಹಾಮಾಯಿ (ಶೆಟವಿ): ಈಕೆ ಸಾವಿನ ಅಧಿದೇವತೆ ಮತ್ತು ಜಗತ್ತಿನ ಕೇಡಿನ ಪ್ರತೀಕ. ಇವಳಿಗೆ ಕೊಲ್ಲುವುದರಲ್ಲಿಯೇ ಆನಂದ.
ಸಂಜೀವ ಶಿವ: ಮಹಾಮಾಯಿಯ ಸಾಕುಮಗ. ತಾಯಿಯ ಆಶೀರ್ವಾದದಿಂದಲೇ ಆತ ಒಬ್ಬ ಪ್ರಸಿದ್ಧ ಮತ್ತು ಅಂತಃಕರಣವುಳ್ಳ ವೈದ್ಯನಾಗಿ ಜನರಿಗೆ ಮರುಜೀವ ನೀಡುವ ಕಾಯಕ ಮಾಡುತ್ತಾನೆ.
ಇರುವಂತಿ: ಅರಮನೆಯ ರಾಜಕುಮಾರಿ. ಸಂಜೀವ ಶಿವನಿಂದ ಪ್ರಾಣದಾನ ಪಡೆದು, ಅವನನ್ನು ಪ್ರೀತಿಸುವ ಯುವತಿ.
ನಾಟಕದ ಸಾರಾಂಶ:
ನಾಟಕ ಆರಂಭವಾಗುವುದು ಸಂಜೀವ ರಾಜಕುಮಾರಿಯನ್ನು ಭೇಟಿಯಾಗುವ ಮೂಲಕ ಕನಸುಗಳನ್ನು ಹಂಚಿಕೊಳ್ಳುತ್ತಾನೆ. ‘ಮನುಷ್ಯ ತೀಮಾನ ತೆಗೆದುಕೊಳ್ಳುವ ಕೆಲವು ಗಳಿಗೆಗಳು ಬರುತ್ತವೆ ಎನ್ನುವುದು ನನಗೆ ಗೊತ್ತಿತ್ತು. ಆದರೆ ತಾಯಿಯನ್ನು ವಿರೋಧಿಸುವ ತೀರ್ಮಾನ ತೆಗೆದುಕೊಳ್ಳಬೇಕಾಗಬಹುದೆಂದು ಅಂದುಕೊಂಡಿರಲಿಲ್ಲ’ ಎನ್ನುತ್ತಾನೆ.
‘ನಿನ್ನನ್ನು ಮದುವೆಯಾಗಬೇಕಾದರೆ ನನಗೆ ನನ್ನ ಸ್ವಾತಂತ್ರ್ಯ ದಕ್ಕಬೇಕು. ಸ್ವಾತಂತ್ರ್ಯದ ಬೆಲೆ ಮತ್ತು ಅನಿವಾರ್ಯತೆಗಳನ್ನು ತಿಳಿಸಿಕೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞನಾಗಿದ್ದೇನೆ. ಸ್ವಾತಂತ್ರ್ಯ ಎಂದರೆ ಮನುಷ್ಯ ಮನುಷ್ಯನಾಗೋದೇ. ಅದಾಗದ ಹಾಗೆ ತಾಯಿ ನಮ್ಮ ಸುತ್ತ ಸಾವಿನ ಬಲೆ ಹೆಣೆದಿದ್ದಾಳೆ’ ಎನ್ನುತ್ತಾನೆ.
ಅವನ ಸ್ವಾತಂತ್ರ್ಯಾಪೇಕ್ಷೆಯೇ ತನ್ನ ತಾಯಿಯನ್ನು ಎದುರಿಸುವಂತಹ ಧೈರ್ಯವನ್ನು ಅವನಿಗೆ ನೀಡುತ್ತದೆ. ಇದರ ಪರಿಣಾಮವಾಗಿ ತನ್ನ ತಾಯಿ ಎಷ್ಟೇ ಹಠ ಹಿಡಿದಿದ್ದರೂ ಆತ ರಾಜಕುಮಾರಿಯ ಕೊರಳಿನಿಂದ ಮೂಲಿಕಾ ಬಳ್ಳಿಯನ್ನು ತೆಗೆಯಲು ನಿರಾಕರಿಸುತ್ತಾನೆ. ಮನುಷ್ಯ ಬದುಕಿನ ಪರಿಶುದ್ಧತೆಗೆ ಅವನು ತೋರುವ ಭದ್ರತೆ ಇದು ಸಾಕ್ಷಿಯಾಗುತ್ತದೆ.
ನಾಟಕದ ಪ್ರಧಾನ ಭೂಮಿಕೆಯಲ್ಲಿ ಇರುವವರು ಸಂಜೀವ ಮತ್ತು ರಾಜಕುಮಾರಿ (ಇರುವಂತಿ), ರಾಜ, ಮಂತ್ರಿ ಮತ್ತು ಸೇವಕಿ. ಸಂಜೀವ ಒಂದು ಅರ್ಥದಲ್ಲಿ ಸಂಪೂರ್ಣವಾಗಿ ಈ ಜಗತ್ತಿಗೆ ಸೇರಿದವನಲ್ಲ. ವಿಧಿಯ ಸ್ಥಾನದಲ್ಲಿ ಬರುವ ಶೆಟವಿ ಆರಂಭದಲ್ಲಿ ಇವಳನ್ನು ‘ಮೃತ್ಯುದೇವತೆ’ ಎಂದು ವರ್ಣಿಸಲಾಗಿದೆ. ತಬ್ಬಲಿಯಾದ ಸಂಜೀವನನ್ನು ತನ್ನ ಆಶ್ರಯಕ್ಕೆ ತೆಗೆದುಕೊಂಡು ಅವನಿಗೆ ವೈದ್ಯ ವಿದ್ಯೆಯನ್ನು ಕಲಿಸುತ್ತಾಳೆ. ಆದರೆ ಮೊದಲನೆಯ ದೃಶ್ಯದಲ್ಲೇ ಶ್ರುತಪಡುವಂತೆ ದೇವತೆಯು ಒಲಿದವರಿಗೆ ಮಾತ್ರ ಅವನ ವಿದ್ಯೆ ಅನುಕೂಲವಾಗುವುದು. ಚಿಕಿತ್ಸೆಗಾಗಿ ಅವನಲ್ಲಿಗೆ ವಿದೂಷಕ ಪಾತ್ರದ ಮದನ, ಸಮಾಧಿ ತೋಡುವ ಮಾರ ಮತ್ತು ತಾಯಿ ಜೊತೆ ಬರುವ ದನಕಾಯುವ ಹುಡುಗ ಬರುತ್ತಾರೆ. ಆ ತಾಯಿಯ ದುಃಖ ಕಂಡು ಆತನ ಹೃದಯ ಕಲಕುತ್ತದೆ.
ಆದರೆ ಆಕೆ ಉಳಿದಿಬ್ಬರನ್ನು ರಕ್ಷಿಸು ಎಂದು ಕೋರುತ್ತಾಳೆ. ಸಂಜೀವನಿಗೆ ತನ್ನ ತಾಯಿಯ ಬಗ್ಗೆ ಅಪಾರ ಮಮತೆ. ಆದರೆ ತನಗೆ ಸಂಪೂರ್ಣವಾದ ಸ್ವಾತಂತ್ರ್ಯ ಮತ್ತು ಆಯ್ಕೆ ಇಲ್ಲವೆಂದು ಕೊರಗುತ್ತಾನೆ. ಸ್ಥಳಿಯ ರಾಜನ ಮಗಳು ಒಂದು ವಿಚಿತ್ರ ಕಾಯಿಲೆಯಿಂದ ನರಳುತ್ತಿರುತ್ತಾಳೆ. ಆ ಕಾಯಿಲೆ ಬಗ್ಗೆ ಯಾವ ವೈದ್ಯನೂ ಖಚಿತವಾಗಿ ಏನನ್ನೂ ಹೇಳಿರುವುದಿಲ್ಲ. ಆಕಸ್ಮಿಕವಾಗಿ ಸಂಜೀವ ರಾಜಕುಮಾರಿಯನ್ನು ಭೇಟಿಯಾಗುತ್ತಾನೆ. ಆಗ ಆಕೆಯನ್ನು ಸಂಪೂರ್ಣವಾಗಿ ಆರೋಗ್ಯವಂತಳನ್ನಾಗಿ ಮಾಡಬೇಕೆಂದು ತೀರ್ಮಾನಿಸುತ್ತಾನೆ.
ತಾಯಿ ಇದಕ್ಕೆ ಅಪ್ಪಣೆ ಕೊಡುತ್ತಾಳಾದರೂ ರಾಜಕುಮಾರಿ ಸಾಯಲಿ ಎಂಬ ಉದ್ದೇಶ ಆಕೆಗಿರುತ್ತದೆ. ಇದು ಗೊತ್ತಾಗಿ ಅವರಿಬ್ಬರ ಮಧ್ಯೆ ಮಾತುಕತೆ ನಡೆಯುತ್ತದೆ. ಸಂಜೀವನಿಗೆ ಪ್ರೀತಿಪಾತ್ರವಾಗಿದ್ದ ಜಿಂಕೆ (ನೇತ್ರಾವತಿ)ಯ ಸಾವನ್ನು ಸಾಧಿಸುವುದರ ಮೂಲಕ ಆತನ ತಾಯಿ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಾಳೆ. ನಂತರ ಮದನನ ಹೆಂಡತಿ ಮಂಜರಿಯ ಸಾವಿಗೆ ಕಾರಣವಾಗುತ್ತಾಳೆ. ರಾಜಕುಮಾರಿ ಗುಣಮುಖಳಾದ ಸಂಭ್ರಮವನ್ನಾಚರಿಸಲು ಮಂಜರಿ ಶಿವನ ಪಾತ್ರ ಧರಿಸಿ ನಾಟಕದ ಅಭಿನಯದಲ್ಲಿ ತೊಡಗಿದ್ದಾಗಲೇ ಅಸುನೀಗುತ್ತಾಳೆ. ರಾಜಕುಮಾರಿಯ ಪ್ರೇಮಕ್ಕೆ ಮನಸೋಲುತ್ತಾನೆ ಸಂಜೀವ. ಆಕೆಯ ಕೊರಳಿಗೆ ಸುತ್ತಿದ ಗಿಡಮೂಲಿಕಾ ಬಳ್ಳಿಯನ್ನು ತೆಗೆದು ತನಗೆ ಕೊಡು ಎಂದು ತಾಯಿ ಹೇಳಿದರೂ ಆ ಮಾತನ್ನು ಧಿಕ್ಕರಿಸುತ್ತಾನೆ. ತಾಯಿಯ ಕೋಪ ಉಕ್ಕೇರುತ್ತದೆ. ಆಕೆ ಸೋಲುತ್ತಾಳೆ. ಮಗನಿಗೆ ಹೆಚ್ಚಿನ ಆಯಸ್ಸನ್ನು ಕೊಡುತ್ತಾಳೆ. ಅದನ್ನು ಆತ ರಾಜಕುಮಾರಿಗೆ ವರ್ಗಾಯಿಸುತ್ತಾನೆ. ಇದರಿಂದ ನೊಂದ ತಾಯಿ ಸಾಯುತ್ತಾಳೆ. ಆರೋಗ್ಯವನ್ನು ಮರಳಿಪಡೆದ ರಾಜಕುಮಾರಿ ಸಂಜೀವನನ್ನು ಮದುವೆಯಾಗುತ್ತಾಳೆ.
ನಾಟಕದಲ್ಲಿ ಬದುಕಿನ ಮೇಲೆ ಸಾವು ಸವಾರಿ ಮಾಡುವುದನ್ನು ಸಂಜೀವ ನಿರಾಕರಿಸುತ್ತಾನೆ. ಆದರೆ ಸಾವು ಎಂಬುದು ಮನುಷ್ಯನ ಸ್ಥಿತಿಯ ತಾರ್ಕಿಕ ಅಂತ್ಯವೆಂಬುದನ್ನು ಅಂಗೀಕರಿಸುತ್ತಾನೆ.
ಮನುಷ್ಯೇತರ ಪ್ರಪಂಚವನ್ನು ಶೆಟವಿ (ಸಾವಿನ ದೇವತೆ) ಮತ್ತು ಪರಿವಾರದವರು ಅಂದರೆ ಗಿರಿಮಲ್ಲಿಗೆ ಮತ್ತು ಇಬ್ಬರು ಸೇಡು ಮಾರಿಯರು ಪ್ರತಿನಿಧಿಸುತ್ತಾರೆ. ಅರಮನೆ ಮನುಷ್ಯ ವ್ಯವಸ್ಥೆಯ ಸಂಕೇತವಾದರೆ ನಗರದಿಂದ ಹೊರಗಿರುವ ಬೆಟ್ಟದ ಗುಹೆ ಮನುಷ್ಯೇತರ ಸ್ಥಳದ ಸಂಕೇತವಾಗಿ ಇಲ್ಲಿ ಚಿತ್ರತವಾಗಿದೆ. ತಾನೇ ಅಂತಿಮ ಸತ್ಯವೆಂದು ತಾಯಿ ತಿಳಿಯುತ್ತಾಳೆ. ‘ಅಂತಿಮ ಸತ್ಯವೆಂಬುದೇನಾದರೂ ಇದ್ದರೆ ಅದು ನಾನೇ. ಬೇರೊಂದಿಲ್ಲ. ನನ್ನನ್ನು ಯಾವ ಹೆಸರಿನಿಂದಲಾದರೂ ಕರೆಯಿರಿ. ಶಿವಲಿಂಗ ಎಂದಾದರೂ ಕರೆಯಿರಿ. ಬೆಳಕಿಗೆ ಮಿತಿ ಇದೆ. ಆದರೆ ಕತ್ತಲೆಗೆ ಇಲ’ ಎನ್ನುತ್ತಾಳೆ.
ನಾಟಕದೊಳಗಿನ ನಾಟಕದಲ್ಲಿ ಶಿವನ ಪಾತ್ರವನ್ನು ಅಭಿನಯಿಸಲು ಮದನನಿಂದ ಪ್ರೇರೇಪಿತಳಾದ ಮಂಜರಿ ಮಾಯೆಯಿಂದ ಹತಳಾಗುತ್ತಾಳೆ. ಪಲಾಯನವಾಗಲು ಸಂಜೀವ ಮತ್ತು ರಾಜಕುಮಾರಿ ಅಡ್ಡಗಟ್ಟಲ್ಪಟ್ಟು ಅಂತಿಮ ತೀರ್ಪಿಗಾಗಿ ಮಾಯಿಯತ್ತ ಸೆಳೆಯಲ್ಪಡುತ್ತಾರೆ.
ಪ್ರೀತಿ, ಕರುಣೆ, ಸ್ವಾತಂತ್ರ್ಯ, ಸತ್ಯ ಮತ್ತು ಸೃಜನಶೀಲತೆಯಂತಹ ಮಾನವೀಯ ಮೌಲ್ಯಗಳು ಈ ನಾಟಕದ ಕೇಂದ್ರದಲ್ಲಿವೆ. ರಾಜಕುಮಾರಿಯ ಅನಾರೋಗ್ಯ ಇಡೀ ರಾಜ್ಯಕ್ಕೆ ದುಃಖ ಮತ್ತು ವ್ಯಾಕುಲದ ಸಂಗತಿಯಾಗಿರುತ್ತದೆ. ಅವಳ ಸಾವಿಗಾಗಿ ಕಾದು ಕುಳಿತಿರುವ ಸೇಡುಮಾರಿ ಕೊಂಚವೂ ವಿಚಲಿತಳಾಗುವುದಿಲ್ಲ. ಆಗ ಆಡುವ ಮಾತು ಈ ರೀತಿ ಇದೆ- ‘ಹೊರಗೆ ಬೆಂಕಿ ಹಾಕಿಲ್ಲ, ಚಟ್ಟ ಕಟ್ಟಿಲ್ಲ, ಒಳಗಡೆ ಯಾರೂ ಅಳುತ್ತಿಲ್ಲ. ರಾಜಕುಮಾರಿ ಇನ್ನೂ ಸತ್ತಿಲ್ಲವೇ? ಆಗಲೇ ಇಲ್ಲಿ ಅಳುವ ಜನಸಂದಣಿ ಸೇರಿರಬಹುದು. ಅಳುಬುರುಕ ಕವಿಗಳು ಚರಮಗೀತೆ ರಚಿಸಿ, ಕಲಾವಿದ ಹೆಂಗಸರು ಹಾಡುತ್ತಿರಬಹುದು ಎಂದುಕೊಂಡೆ. ಆದರೆ ಇಲ್ಲಿ ಏನೂ ನಡೆದಿಲ್ಲ’
ಸಂಜೀವನು ರಾಜಕುಮಾರಿ ಬದುಕಬೇಕೆಂದು ಚಿಂತಿಸುವುದು, ಹಾಗೆಯೇ ದೇವತೆ ಅವಳು ಅಸುನೀಗಬೇಕೆಂದು ತುದಿಗಾಲಲ್ಲಿ ನಿಂತಿರುವುದು ವಿಚಿತ್ರ ಎನಿಸುತ್ತದೆ. ಆಗ ಸಂಜೀವ ತಾಯಿಗೆ ಮೊರೆ ಇಡುತ್ತಾನೆ-“ನಿನ್ನ ಕೈಲಿದೆ ರಾಜಕುಮಾರಿಯ ಭವಿಷ್ಯ. ಅವಳ ಕೈಯಲ್ಲಿದೆ ನನ್ನ ಭವಿಷ್ಯ. ಅವಳ ಕಣ್ಣ ಬೆಳಕನ್ನು ನಂದಿಸಬೇಡ ತಾಯಿ’ ಎಂದು.
ಆದರೆ ಆ ಮೊರೆ ಅವಳ ಮೇಲೆ ಯಾವ ಪರಿಣಾಮ ಉಂಟುಮಾಡುವುದಿಲ್ಲ. ಕಾರಣ ಅವಳೇ ಹೇಳುವಂತೆ -‘ಅವಳು ಕೇವಲ ಜೀವವಿರದ ಕೊರಡು. ಹೃದಯವಿಲ್ಲದ ಅಸ್ಥಿಪಂಜರ. ಮನುಷ್ಯನ ಸಾಧನೆ, ಸತ್ಯದ ಬಗ್ಗೆ ಅವನಿಗೆ ಇರುವ ಅರಿವು, ಪ್ರೇಮ ಮತ್ತು ದೇವರ ಬಗ್ಗೆ ಅವನ ನಂಬಿಕೆ, ಅವನ ಪ್ರೇರಣೆ ಮತ್ತು ತುಡಿತ ಎಲ್ಲವೂ ದೇವತೆಯ ದೃಷ್ಟಿಯಲ್ಲಿ ಕ್ಷುಲ್ಲಕ’ ಎನ್ನುವುದನ್ನು ಇಲ್ಲಿ ನಾಟಕಕಾರ ಚಿತ್ರಿಸಿದ್ದಾರೆ.
ಹೀಗೆ ಈ ನಾಟಕದಲ್ಲಿ ನಿರೂಪಣೆ ಮತ್ತು ಕಾವ್ಯ ಬಹಳ ಅದ್ಭುತವಾಗಿ ಮೂಡಿಬಂದಿದೆ. ಸಂವಾದ ಮತ್ತು ನಾಟಕೀಯ ಸಂಘರ್ಷವನ್ನು ನಾಟಕ ಉಳಿಸಿಕೊಂಡಿದೆ. ವಿದೂಷಕನನ್ನು ಒಳಗೊಂಡಿರುವ ದೃಶ್ಯದಲ್ಲಿ ಅಸದೃಶ ವಿನೋದವಿದ್ದರೆ, ನಾಟಕದ ಕೊನೆಯ ದೃಶ್ಯದಲ್ಲಿ ದುರಂತದ ತುತ್ತತುದಿಯನ್ನು ಕಾಣಬಹುದು.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೦೫. ೦೯ ೨೦೨೬
.......................
Comments
Post a Comment