ನಿಜಾಮರ ವಂಶದ ನೂರಾರು ರೋಚಕ ವಿವರದ

‘ಏಳು  ರೊಟ್ಟಿಗಳು ’


ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಕೆ. ಎನ್. ಗಣೇಶಯ್ಯ ಅವರ ಕಿರು ಕಾದಂಬರಿ ಏಳು ರೊಟ್ಟಿಗಳು. ಇದರಲ್ಲಿ ಹೈದರಾಬಾದ್ ನಿಜಾಮರ ವಂಶದ ನೂರಾರು ರೋಚಕ ವಿವರಗಳು, ವಂಶ ರಹಸ್ಯಗಳು, ರಾಜಕೀಯ ಸಿದ್ಧಾಂತಗಳು ಅಡಕವಾಗಿವೆ. ಏಳು ರೊಟ್ಟಿಗಳು ಎಂದರೇನು ಎಂಬ ಮಾಹಿತಿ ಇದೆ.  ಹೈದರಾಬಾದನ್ನು ಆಳಿದ ನಿಜಾಮ ಸ್ವಾತಂತ್ರ್ಯಾನಂತರ ಭಾರತದಿಂದ ಲೋಡುಗಟ್ಟಲೆ ಚಿನ್ನಾಭರಣಗಳು ಮತ್ತು ಇತರ ಅಮೂಲ್ಯ ವಸ್ತುಗಳೊಂದಿಗೆ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಆದರೆ ಭಾರತ ಸರ್ಕಾರದ ಬಿಗಿ ನಿಯಂತ್ರಣದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಆಗ ಆಭರಣಗಳನ್ನು ಮತ್ತು ಸಂಪತ್ತುಗಳನ್ನು ಗುಹೆ ಒಂದರಲ್ಲಿ ಅಡಗಿಸಿಟ್ಟಿದ್ದು ನಂತರ ಅದು ಯಾರಿಗೂ ಸಿಗದೆ ಭೂಗತವಾದ ಕಥೆ ಇದರಲ್ಲಿದೆ.

 ಇಲ್ಲಿನ ಕಥೆಗಳಿಗೆ ಸಾಕ್ಷಾಧಾರವಾಗಿ ಚಿತ್ರ, ನಕ್ಷೆ ಇದೆ. ಕುತೂಹಲಕಾರಿ ನಿರೂಪಣೆಯೊಂದಿಗೆ ಸಾಗುವ ಕಾದಂಬರಿಯಲ್ಲಿ ದೀನ್‌ದಾರ್ ಅಂಜುಮನ್ ಎನ್ನುವ ಸಂಘಟನೆಯ ಟೆರರಿಸ್ಟ್‌ಗಳು (ಗಡ್ಡ ಬಿಟ್ಟು, ಮೀಸೆ ಇಲ್ಲದೆ, ಟರ್ಬನ್ ಒಳಗೆ ಕೂದಲು ಸುತ್ತಿದ ಸನ್ಯಾಸಿಗಳು ಮತ್ತು ತ್ರಿಶೂಲ ಉಪಯೋಗಿಸುವವರು) ಬರುತ್ತಾರೆ. ಇವರನ್ನು ಸೆರೆ ಹಿಡಿಯುವುದು ಮತ್ತು ನಿಜಾಮರ ಸಂಪತ್ತನ್ನು ಪತ್ತೆ ಮಾಡಲು ಒಬ್ಬ ಸಂಶೋಧಕಿಯ ಜೊತೆ ಪೊಲೀಸರು ತೆರಳುವುದು ಕಾದಂಬರಿಯಲ್ಲಿ ಅನಾವರಣಗೊಂಡಿದೆ.

 ಕಾದಂಬರಿಗೆ ಮೂಲ ಆಧಾರ ‘ದ ಲಾಸ್ಟ ನಿಜಾಮ್’ ಪುಸ್ತಕ ಒಂದು ಲೇಖಕರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ, ಲೇಖಕರ ಸಂಶೋಧನಾ ಪ್ರವೃತ್ತಿ ಇಲ್ಲಿ ಮೆಚ್ಚುವಂತದ್ದು. ಐತಿಹಾಸಿಕ ಎನಿಸಿದರೂ ಪ್ರವಾಸದ ಸಂದರ್ಭದಲ್ಲಿ ಕಂಡುಕೊಂಡ ಸತ್ಯದ ಮೂಲಕ ಓದುವರನ್ನು ಸೆರೆ ಹಿಡಿಯುವಲ್ಲಿ, ಮತ್ತು ಅದ್ಭುತ ರೋಚಕವನ್ನು ಸೃಷ್ಟಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. 

ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದ ಸರಳಾ ಮತ್ತು ರಾ ಅಧಿಕಾರಿ ವಿನಯ್ ಮತ್ತು ಪೊಲೀಸರ ತಂಡಕ್ಕೆ ಸಿಕ್ಕ ಕೆಲವು ಮಾಹಿತಿ  ಅಥವಾ ಸಾಕ್ಷ್ಯಾಧಾರದ ಮೇಲೆ  ನಿಜಾಮರ ಸಂಪತ್ತನ್ನು ಹುಡುಕಲು ಹೊರಡುತ್ತಾರೆ. ಸಾ ತಂತ್ರ್ಯ ಬಂದ ನಂತರ ನಿಜಾಮರು ಭಾರತದೊಟ್ಟಿಗೆ ಇರಲು ಒಪ್ಪದ ಕಾರಣ ಮತ್ತು ಪತ್ಯೇಕವಾಗಿ ಅಸ್ತಿತ್ವ ಸ್ಥಾಪಿಸಲು ಯತ್ನಿಸಿದ್ದರಿಂದ ೧೯೪೮ರಲ್ಲಿ ಸರ್ದಾರ್ ವಲ್ಲಭಾಯಿ ಪಟೇಲರು ನಿಜಾಮರ ವಿರುದ್ಧ ಪೊಲೀಸ್ ಆಕ್ಷನ್ ಎಂಬ ಅರ್ಥದಲ್ಲಿ ‘ಆಪರೇಷನ್ ಪೋಲೋ’ ಎಂಬ ರಹಸ್ಯ ಕಾರ್ಯಾಚರಣೆಯನ್ನು ಕೈಗೊಂಡು ಭಾರತದ ಸೈನಿಕ ತುಕಡಿಗಳನ್ನು ಮೂರ್ನಾಲ್ಕು ಕಡೆಯಿಂದ ನುಗ್ಗಿಸುತ್ತಾರೆ. ಈ ಸಂದರ್ಭದಲ್ಲಿ ಮೂರೇ ದಿನದಲ್ಲಿ ಹೈದರಾಬಾದ್ ಭಾರತ ಸರ್ಕಾರದ ಕೈವಶವಾಗುತ್ತದೆ.

  ಆಗ ನಿಜಾಮರು ಬೀದರ್‌ನತ್ತ ತಿಜೋರಿಗಳಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು, ನೋಟುಗಳನ್ನು ಲಾರಿಯಲ್ಲಿ ತುಂಬಿಕೊಂಡು ಬೀದರ್‌ನತ್ತ ಹೋಗುತ್ತಾರೆ. ಇದಕ್ಕಾಗಿ ವಿಶೇಷ ಸೈನಿಕರನ್ನು ನೇಮಿಸುತ್ತಾರೆ. ಆಯುಧಗಳ ಜೊತೆ ಬೀದರ್ ಅಭಿಮಾನ ನಿಲ್ದಾಣಕ್ಕೆ ಈ ಲಾರಿಗಳು ಹೋದಾಗ ಅಲ್ಲಿನ ಸಿಬ್ಬಂದಿ ಇದನ್ನು ಪಡೆಯುತ್ತಾರೆ. ಈ ಪೆಟ್ಟಿಗೆಗಳು ಎಲ್ಲಿಗೆ ಸಾಗುತ್ತವೆ ಎಂದು ಕಾಯುತ್ತ ಕುಳಿತಿದ್ದ ಸೈನಿಕರತ್ತ ನಿಜಾಮರ ಅರಬ್ ಸೈನಿಕರು ಮತ್ತೆ ದಾಳಿ ನಡೆಸುತ್ತಾರೆ. ಗುಂಡಿನ ಮಳೆ ಸುರಿಸುತ್ತಾರೆ ಇದರಿಂದ ೨೯ ಸಿದ್ದಿ ಜನಾಂಗದವರು ಹತರಾಗುತ್ತಾರೆ. (ನಿಜಾಮರ ಬಳಿ ಸಿದ್ದಿ ಜನಾಂಗದ ಸೈನಿಕರಿದ್ದರು) ಸತ್ತು ಬಿದ್ದವರನ್ನೆಲ್ಲ ತಮ್ಮ ಉದ್ದನೆಯ ಕತ್ತಿಗಳಿಂದ ಕೊಚ್ಚುತ್ತ ಸಾಗುತ್ತಾರೆ. ಮತ್ತು ಅವರ ರುಂಡಗಳನ್ನು ಎಲ್ಲಿಗೆ ಮತ್ತು ಹೇಗೆ ಸಾಗಿಸಿದರು ಎನ್ನುವುದು ಮಾಹಿತಿ ಈ ಭಾಗದಲ್ಲಿದೆ. 

ಇತ್ತ ವಿಮಾನದ ಮೂಲಕ ನಿಧಿ ಸಾಗಿಸಲಿಲ್ಲ. ಆಪತ್ತು ಕಾದಿದೆ ಎಂದು  ವಿಮಾನಗಳಿಂದ ಇಳಿಸಿಕೊಂಡು ಮತ್ತೊಂದು ಕಡೆ ಸಾಗಿಸುತ್ತಾರೆ. ನಂತರ ಖಾಲಿ ವಿಮಾನದ ಮೇಲೆ ಬಾಂಬ್ ದಾಳಿ ನಡೆಸಿ ಎಲ್ಲವೂ ನಾಶವಾದಂತೆ ನಾಟಕವಾಡುತ್ತಾರೆ. ಈ ದಾಳಿಯಲ್ಲಿ ಮುಂಜಾಪ ಎಂಬ ಸಿದ್ದಿ ಬಚಾವಾಗುತ್ತಾನೆ. ಈತ ನಿಜಾಮನ ಮುಖ್ಯ ಭಟನಾಗಿದ್ದ. ಈ ಸಿದ್ದಿಯು ನಿಜಾಮರ ಬಳಿ ಹೋಗಿ ಸಿದ್ದಿಗಳನ್ನು ಕೊಂದವರಾರು ಎಂದು ತಿಳಿಸಿದರೆ ನಿಧಿ ಎಲ್ಲಿಗೆ ಹೋಯಿತೆನ್ನುವುದನ್ನು ತಿಳಿಸುವೆ ಎನ್ನುತ್ತಾನೆ. ಆಗ ನಿಜಾಮರು ಈ ಬಗ್ಗೆ ನನಗೇನೂ ಗೊತ್ತಿಲ್ಲ ಎನ್ನುತ್ತಾರೆ. ಆಮೇಲೆ ಸಮೀರ್ ಎಂಬಾತ ಬರುತ್ತಾನೆ. ಆತ ನನ್ನ ತಂದೆಯನ್ನು ಕೊಂದವನು ಇದೇ ಸಿದ್ದಿ. ಈತನನ್ನು ನಾನು ಬಿಡುವುದಿಲ್ಲ. ಆತನ ಮಾಹಿತಿ ಕೊಡಿ. ಇಲ್ಲದಿದ್ದರೆ ನನ್ನನ್ನು ಸಾಯಿಸಿಕೊಳ್ಳುತ್ತೇನೆ ಎಂದಾಗ ನಿಜಾಮ, ಗೋದಾವರಿ ನದಿಯತನಕ ಹೋಗಿ ಪಾಪಿಕೊಂಡದಲ್ಲಿ ಹುಡುಕು ಎಂದು ಹೇಳುತ್ತಾನೆ.

 ಈ ಹಿಂದೆ ಪಾಪಿಕೊಂಡದಲ್ಲಿ ಹುಡುಗನ ಕೊಲೆಯಾದಾಗ ಅಲ್ಲಿ ಸಿಕ್ಕಿದ್ದ  ಲೋಹದ ಬಿಲ್ಲೆಯ ಸೊಂಟದ ಬೆಲ್ಟ್, ಆಂಟಿಕ್‌ನ ಕೆಲವು ವಸ್ತುಗಳ ಅವಶೇಷಗಳನ್ನು ತೋರಿಸುತ್ತಾರೆ. ಅದರಲ್ಲಿ ಉರ್ದು ಭಾಷೆಯ ಲಿಪಿ ಇತ್ತು. ಅದು ನಿಜಾಮರ ಗುರುತಾಗಿತ್ತು. ರಾಜ್ಯಭಾರಕ್ಕೆ ಉಪಯೋಗಿಸಿದ ಲಾಂಛನವಾಗಿತ್ತು. ಇದರ ಅರ್ಥ ರೊಟ್ಟಿ ಅಥವಾ ಕುಲ್ಚ. ಏಳು ರೊಟ್ಟಿಗಳು  ಎಂದು ಅದು ಕರೆಯಲ್ಪಡುತ್ತಿತ್ತು. 

ಈ ಮಧ್ಯೆ ಸಿದ್ದಿಗಳನ್ನು ಕೊಂದವರನ್ನು ಮುಗಿಸಬೇಕೆಂದು ಮುಂಜಾಪ ರಜಾಕ್ ನಾಯಕನ ಮನೆಗೆ ಹೋಗುತ್ತಾನೆ. ತನ್ನ ಜೀವಕ್ಕೂ ಸಂಚಕಾರವಿದೆ ಎಂದು ಗೊತ್ತಿರುತ್ತದೆ. ಹೀಗೆ ಕಾಣೆಯಾಗುತ್ತಾನೆ. ಇತ್ತ ಸಮೀರ ಪಾಪಿಕೊಂಡದಲ್ಲಿ ಹುಡುಕಾಡುತ್ತ ಯಾರಿಗೋ ಹೊಂಚು ಹಾಕುತ್ತಿದ್ದ. ಆತನ್ನು ಕಂಡಕೂಡಲೇ ಕತ್ತಿ ಹಿಡಿದು ಹಾರಿದಾಗ ಆತನ ತಲೆಯ ಆಳಕ್ಕೆ ಇಳಿಯಿತು. ಈತನತ್ತ ಮೂವರು ಓಡಿಬರುತ್ತಾರೆ. ಅವರು ಇರಿಯುತ್ತಾರೆ. ಧೊಪ್ಪೆಂದು ಬಿದ್ದು ಮೂರ್ಛೆ ಹೋದಾಗ ಹುಡುಗಿಯೊಬ್ಬಳು ಶುಶ್ರೂಷೆ ಮಾಡುತ್ತಾಳೆ. ಎಚ್ಚರವಾಗಿ ವಿಷಯ ತಿಳಿದಾಗ ಆತನು ಕೊಂದಿದ್ದು ಆಕೆಯ ತಂದೆ ಮುಂಜಾಪನನ್ನು ಎಂದು ಗೊತ್ತಾಗುತ್ತದೆ. ಆದರೂ ಆಕೆ ಈತನ ಪ್ರ್ರಾಣ ಕಾಪಾಡುತ್ತಾಳೆ. ವಿಷಯ ತಿಳಿದು ಅತೀವ ದುಃಖವಾದರೂ, ಮಾನವ ಸಂಬಂಧ ಮುಖ್ಯ ಎನ್ನುವುದನ್ನು ಅರಿತು ಆಕೆಯನ್ನು ಮದುವೆಯಾಗಿ ಆಶ್ರಯ ಕೊಡಲು ನಿರ್ಧರಿಸುತ್ತಾನೆ. 

  ಭಾರತದ ಸೈನ್ಯದ ದಿಕ್ಕು ತಪ್ಪಿಸುವುದಕ್ಕಾಗಿ ನಿಧಿಯನ್ನು ಬೀದರ್‌ನ ಪೂರ್ವಕ್ಕಿರುವ ಸ್ಮಶಾನದಲಿ  ಬಳಿಯ ನರಸಿಂಹ ದೇವರ ಗುಹೆಗೆ ಸಾಗಿಸುತ್ತಾರೆ. ನಿಧಿಯನ್ನು ತ್ರಿಶೂಲ ಹಿಡಿದ ಅಂಜುಮನ್ ಸಂಘದವರು ಕಾಯುತ್ತಾರೆ.  ಆದರೆ ಅಲ್ಲಿಂದ ಸಂಪತ್ತು ಯಾವ ಕಡೆ ಹೋಯಿತು ಎಂದು ಭಾರತೀಯ ಸೈನ್ಯಕ್ಕೆ  ತಿಳಿಯಲಿಲ್ಲ. ಅಲ್ಲಿಂದ ಒಂದು ಸಂಪತ್ತು ಗೋದಾವರಿ ತೀರದ ಪಾಪಿಕೊಂಡ ಎಂಬಲ್ಲಿ ಸೇರುತ್ತದೆ. ಅಂಜುಮಾನರಿಗೆ ಗುಹೆ ಮತ್ತು ಕಾಡುಗಳೇ ಆಶ್ರಯವಾದ್ದರಿಂದ ಅಲ್ಲಿಯೇ ಅಡಗಿಸಿರುತ್ತಾರೆ. ಆದರೂ ಅವರು ಸಂಪತ್ತನ್ನು ರಕ್ಷಿಸಿಕೊಂಡಿದ್ದು ಹೇಗೇ? ಈ ಸಂದರ್ಭದಲ್ಲಿ ನಿಜಾಮರ ಸ್ಥಿತಿ ಹೇಗಿತ್ತು. ಎನ್ನುವುದರ ಸವಿವರ ಇದರಲ್ಲಿದೆ. 

 ಏಕೆಂದರೆ ಒಂದೆಡೆ ಭಾರತ ಸರ್ಕಾರದ ಒತ್ತಡ, ಮತ್ತೊಂದೆಡೆ ಕೌಟುಂಬಿಕ ಆಂತರಿಕ ಕಲಹ, ಜೊತೆಗೆ ನಿಜಾಮರಿಗೆ ತೀರಾ ವಯಸ್ಸು ಆಗುತ್ತಿತ್ತು. ತಮ್ಮ ಆಸ್ತಿ, ಅಂತಸ್ತು ಉಳಿಸಿಕೊಳ್ಳಲು ಹಲವಾರು ಟ್ರಸ್ಟ್‌ಗಳನ್ನು ಸೊಸೆಯರ, ಕುಟುಂಬದ, ಮೊಮ್ಮಕ್ಕಳ ಹೆಸರಿನಲ್ಲಿ ತೆರೆಯುತ್ತಾರೆ. 

 ವಿನಯ್ ಮತ್ತು ಸರಳಾ ನಿಧಿ  ಹುಡುಕಾಡುತ್ತಾ ಮುಂಜಾಪನ ಗುಹೆಯ ಬಳಿ ಬಂದಾಗ ಆತನ ಕುಟುಂಬದ ಪರಿಚಯವಾಗಿ, ಆಶ್ರಯ ಪಡೆದು ಮಾಹಿತಿ ತಿಳಿದು ಶೋಧಕ್ಕೆ ಮುಂದಾಗುತ್ತಾರೆ. ಅಲ್ಲಿಂದ ಅವರಿಗೆ ಯಾವ್ಯಾವ ಮಾಹಿತಿ ದೊರೆಯಿತು, ಅದರ ಆಧಾರದಲ್ಲಿ ಅವರು ಯಾವ ರೀತಿ ಸಂಶೋಧನೆ ನಡೆಸಿ ಗುಹೆ ಪತ್ತೆ ಮಾಡಿದರು, ಆ ಗುಹೆಯಲ್ಲಿ ನಿಜಾಮರ ಸಂಪತ್ತಿತ್ತೇ?, ಅದನ್ನು ನಂತರ ಹೊರತಗೆಯಲು ನಡೆಸಿದ ಯತ್ನ ಯಾವ ರೀತಿ ಇತ್ತು, ಇದಕ್ಕೆ ಸಹಕರಿಸಿದವರು ಯಾರು? ನಿಧಿ ಹೊರತೆಗೆಯುವಲ್ಲಿ ಸಫಲರಾದರೆ? ಎನ್ನುವುದಕ್ಕೆ ಉತ್ತರ ಇದರಲ್ಲಿದೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ


.........................




Comments

Popular posts from this blog