ನಮ್ಮ ಇಂದಿನ ಸ್ಥಿತಿಗೆ ರೂಪಕವಾಗುವ 


‘ವಿರಹದ ಸಂಕ್ಷಿಪ್ತ ಪದಕೋಶ’ 



ವಿರಹ ಗಾಢವಾಗಿದೆ. ವಿರಹದ ಅತ್ಯುನ್ನತ ಸ್ಥಿತಿ ಜೊತೆಗಿದ್ದರೂ ಜೊತೆಗಿರಲಾರದ, ಸಮೀಪದಲ್ಲಿದ್ದರೂ ದೂರವಿದ್ದಂತೆ ಭಾಸವಾಗುವ ಕಾಲದಲ್ಲಿ ಸಾಂಗತ್ಯವೇ ವಿರಹ. ಇಂದಿನ ದಿನಗಳಲ್ಲಿ ಜೊತೆಗಿದ್ದವನು ಜೊತೆಗಿಲ್ಲ ಎನಿಸುವುದು, ಹತ್ತಿರವಿದ್ದವರು ದೂರದಲ್ಲಿದ್ದಾರೆ ಎಂದು ಭಾಸವಾಗುವುದು, ನಮ್ಮವರು ನಮ್ಮವರಲ್ಲ ಎಂದು ತೋರುವುದು ಇವೆಲ್ಲ ವಿರಹದ ಲಕ್ಷಣ. ಅಂತಹ ವಿರಹವೇ “ವಿರಹದ ಸಂಕ್ಷಿಪ್ತ ಪದಕೋಶ ” ಎಂಬ ಈ ಕಾದಂಬರಿಯ ಕಥಾವಸ್ತು. ಲೇಖಕ ಜೋಗಿ ಇದರ ಕರ್ತೃ. 

  ಇದರಲ್ಲಿ ಕೇವಲ ಮೂರು ಪಾತ್ರಗಳು ಮಾತ್ರ ಇವೆ. ವಿಶ್ವಾಸ್ ಕಾರಂತ್, ವಂದನಾ ಮತ್ತು ರಾಜೀವ್. ವಂದನಾಳನ್ನು ವಿಶ್ವಾಸ್ ಮದುವೆಯಾಗಿರುತ್ತಾನೆ. ರಾಜೀವ್ ಇವರಿಬ್ಬರ ಗೆಳೆಯ.  ವಂದನಾ ಈ ಕಾದಂಬರಿಯ ಶಾಪಗ್ರಸ್ತ ನಾಯಕಿ, ಸದಾ ವಿರಹತಪ್ತ ವಿಶ್ವಾಸ್ ಕಾರಂತ್ ಈ ಕಾದಂಬರಿಯ ನಾಯಕ. ಈತ ವಂದನಾಳ ವಿರಹಕ್ಕೆ ಕಾರಣ ಮತ್ತು ಆಕೆ ವೈರಾಗಿಯಾಗಲು ಕಾರಣ ಪುರುಷ. ರಾಜೀವ್ ಇವರಿಬ್ಬರ ಮಧ್ಯೆ ಬಂದು ಹೋಗುವ ಮಿತ್ರ. ಈ ಮೂರು ಪಾತ್ರಗಳಿಗೆ ಕೊನೆಯೂ ಇಲ್ಲ, ನೆಲೆಯೂ ಇಲ್ಲ. ಮನುಷ್ಯನ ಇಂದಿನ ಸ್ಥಿತಿಗೆ ಈ ಕಾದಂಬರಿ ಒಂದು ಅತ್ಯುತ್ತಮ ನಿದರ್ಶನ ಎಂದು ಹೇಳಬಹುದು. 

ವಿಶ್ವಾಸ ಎಂಬ ಅರ್ಥಶಾಸ್ತ್ರಜ್ಞ, ರಾಜೀವ್ ಎಂಬ ಉದ್ಯಮಿ, ನೃತ್ಯ ಹಾಗೂ ಸಂಗೀತ ಪ್ರವೀಣೆಯಾದ ವಂದನಾ. ವಿಶ್ವಾಸ ವಿಲಕ್ಷಣ ಮನೋಭಾವನೆಯವನು, ರಾಜೀವನ ಆತ್ಮ ವಿಮರ್ಶೆ, ವಂದನಾಳ ವಿಶಿಷ್ಟ ಜೀವನಾನುಭವ ಈ ಕೃತಿಯಲ್ಲಿ ಕಂಡುಬರುತ್ತದೆ. ವಂದನಾಳಿಗೆ ತನ್ನ ಪತಿ ವಿಶ್ವಾಸ ದೂರವಾದುದಕ್ಕೆ ಅತಿಯಾದ ವಿರಹವಿಲ್ಲ, ಪ್ರೇಮವೂ ಇಲ್ಲ. ಈ ಎಲ್ಲzರ ಮಿಶ್ರಣದಲ್ಲಿ ಇರುತ್ತಾಳೆ. ಹಾಗಂತ ಇದು ತ್ರಿಕೋನ ಪ್ರೇಮ ಕಥೆಯಲ್ಲ. ಪ್ರೀತಿ, ಅಗಲಿಕೆ, ಮಾನವನ ಮನಸ್ಸಿನ ಸೂಕ್ಷ್ಮ ಭಾವನೆಗಳನ್ನು ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿರುವ ಕೃತಿ. ಪ್ರೀತಿಯಲ್ಲಿ ಎದುರಾಗುವ ವಿರಹ, ದೂರವಾಗುವಿಕೆಯನ್ನು ಅತ್ಯಂತ ಸರಳ ಹಾಗೂ ತಮ್ಮದೇ ಆದ ಶೈಲಿಯಲ್ಲಿ ಲೇಖಕ ಜೋಗಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

 ಒಂಟಿತನ, ಸಂಬಂಧದ ನಡುವಿನ ನೆನಪು ಮಾತ್ರ ಇಲ್ಲಿ ಢಾಳಾಗಿ ಕಂಡುಬರುತ್ತದೆ. ವಿಶ್ವಾಸ್ ಮತ್ತು ವಂದನಾ ಗಂಡ -ಹೆಂಡತಿಯಾಗಿದ್ದರೂ ಯಾವತ್ತೂ ಒಂಟಿಯಾಗಿದ್ದೇ ಜಾಸ್ತಿ. ಆತ ಅವಳ ಬಗ್ಗೆ ಮಾತನಾಡುತ್ತಿರಲಿಲ್ಲ. ಆದರೂ ಅವರಿಬ್ಬರು ಹೇಗೆ ಭೇಟಿಯಾದರು, ವಂದನಾ ಈತನಿಗೆ ಹೇಗೆ ಸಿಕ್ಕಳು, ಪರಮ ಅಸಡ್ಡೆಯ ವಿಶ್ವಾಸ್ ವಂದನಾ ಮದುವೆಯಾಗಿ ಬಂದಿದ್ದಕ್ಕೆ ಕಾರಣಗಳೇನು ಎಂಬೆಲ್ಲ ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ.

ಗಂಡ -ಹೆಂಡತಿ ಯಾವತ್ತೂ ನೇರವಾಗಿ ನೋಡಿದ್ದಾಗಲಿ, ಮಾತನಾಡಿದ್ದಾಗಲಿ ಇರುವುದಿಲ್ಲ. ವಿಶ್ವಾಸ ಮನೆಯಲ್ಲಿದ್ದಾಗ ಒಂಭತ್ತುವರೆ ಗಂಟೆಯ ನಂತರ ರಾತ್ರಿ ಎಂದೂ ಆತ ಕುಳಿತಿದ್ದಿಲ್ಲ. ಇಂತಹ ವಿಶ್ವಾಸ ಮನೆ ಬಿಟ್ಟು ಹೋಗಿ ಮೂರು ತಿಂಗಳಾಗುತ್ತದೆ. ಆತನ ಸಮಸ್ಯೆ ಏನಾಗಿತ್ತು ಎನ್ನುವುದು ವಂದನಾಳಿಗೆ ಗೊತ್ತಿರಲಿಲ್ಲ. ವಂದನಾಳ ಅಂತರಂಗದಲ್ಲಿ ಗಾಢವಾದ ನೋವು ಅಡಗಿರಬಹುದು. ಮದುವೆಯಾಗಿದ್ದಕ್ಕೆ ಆಕೆಗೆ ಪಶ್ಚಾತಾಪ ಆಗಿರಬಹುದು. ವಂದನಾಳ ಬಾಲ್ಯ, ಯೌವ್ವನ, ಆಸೆ, ಅಸಹಾಯಕತೆಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಮನಸ್ಸು ರಾಜೀವಗೆ ಪ್ರವಹಿಸುತ್ತಿತ್ತು.  ವಿಶ್ವಾಸ್ ಕಾಣೆಯಾಗಿ ಮೂರು ತಿಂಗಳಾಗುತ್ತದೆ. ವಂದನಾ ಒಂದು ದಿನ ರಾಜೀವನಿಗೆ ವಾಟ್ಸಪ್ ಮಾಡಿ  ವಿಶ್ವಾಸನ ಬಗ್ಗೆ ಮಾಹಿತಿ ಇದೆಯೇ ಎನ್ನುತ್ತಾಳೆ. ಆದರೆ ರಾಜೀವ್ ಪ್ರತಿ ರಾಜ್ಯದಲ್ಲೂ ಅಲ್ಲಿಯ ವಿಶಿಷ್ಟವಾದ ತಿಂಡಿ ತಿನಿಸುಗಳ ಹೊಟೆಲ್ ತೆರೆಯಬೇಕೆಂಬ ಉದ್ದೇಶದಿಂದ ಬಿಜಿಯಾಗಿರುತ್ತಾನೆ. ಒರಿಸ್ಸಾದ ಅಡುಗೆಗಳನ್ನು, ಏಡಿಯಿಂದ ತಯಾರಿಸುವ ತಿನಿಸುಗಳ ಬಗ್ಗೆ  ತಿಳಿದುಕೊಳ್ಳಲು ಭುವನೇಶ್ವರಕ್ಕೆ ಹೋಗುತ್ತಾನೆ. ಅಲ್ಲಿನ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮೂಲಕ ವಿಶ್ವ್ವಾಸ್ ಕಾರಂತನ ಪರಿಚಯವಾಗುತ್ತದೆ.  

ಈ ಮಧ್ಯೆ ವಿಶ್ವಾಸ ಕಾಣೆಯಾಗಿದ್ದಕ್ಕೆ ಪೊಲೀಸರಿಗೆ ದೂರು ಕೊಡಲಿಲ್ಲ. ಆದರೆ ಒಂದು ದಿನ ಪೊಲೀಸರು ಆಕೆಯ ಮನೆಗೆ ಬರುತ್ತಾರೆ. ವಿಶ್ವಾಸ್ ಕಾರಂತ್ ಕಾಣೆಯಾಗಿದ್ದಾನೆ ಎಂದು ದೂರು ಬಂದಿದೆ ಎನ್ನುತ್ತಾರೆ.  ಆ ದೂರು ಯಾರು ಕೊಟ್ಟಿದ್ದರು, ಅವರೀಗೂ ಈತನಿಗೂ ಸಂಬಂಧವೇನು, ಈ ದೂರು ಮುಂದೇನಾನಾಯಿತು, ವಂದನಾ ಈತನನ್ನು ಮದುವೆ ಆಗಿದ್ದು ನಿಜವೇ   ಎನ್ನುವುದು ಇದರ ಮುಂದಿನ ಭಾಗದಲ್ಲಿದೆ.

  ವಂದನಾ ರಾಜೀವ್‌ನಿಗೆ ಭುವನೇಶ್ವರದಿಂದ ಪ್ರಕಟವಾದ ಪತ್ರಿಕೆಯನ್ನು ತೋರಿಸುತ್ತಾ ಅಲ್ಲಿನ ಕಾಡೊಂದರಲ್ಲಿ ಆದಿವಾಸಿ ಜನಾಂಗಗಳ ನಡುವೆ ವಿಶ್ವಾಸ್ ಕಾರಂತ್ ಕುಳಿತಿದ್ದ ಫೋಟೋವನ್ನು ತೋರಿಸುತ್ತಾಳೆ. ಬಳಿಕ ವಿಶ್ವಾಸನನ್ನು ಕಾಣಲು ಇಬ್ಬರೂ ತೆರಳುತ್ತಾರೆ. ಆದರೆ ವಂದನಾ ಹೊಟೆಲಿನಲ್ಲಿ ಉಳಿದು ರಾಜೀವ್ ಮಾತ್ರ  ಆದಿಮ ಜನಾಂಗದಲ್ಲಿರುವಲ್ಲಿಗೆ ತೆರಳುವನು. ಅಲ್ಲಿ ಆತ ಈತನಿಗೆ ಸಿಕ್ಕಾಗ ಹೇಳಿದ ಮಾತುಗಳೆನು? ಜೀವನದ ಬಗ್ಗೆ ಆತನಿಗೆ ವೈರಾಗ್ಯ ಮೂಡಿತ್ತೇ? ‘ಮನೆ ತುಂಬಾ ಬೆಳಕಿದ್ದಾಗ ನೀನು ಬೆಳಕಿನ ಮೂಲ ಯಾಕೆ ಹುಡುಕುವುದಕ್ಕೆ ಹೋಗುತ್ತೀಯಾ’ ಎಂದು

ಏಕೆ ಕೇಳುತ್ತಾನೆ ಎನ್ನುವುದರ ಚಿತ್ರಣ ಇದರಲ್ಲಿದೆ. ಹೀಗೆ ಕೃತಿ ತುಂಬಾ ವಿರಹವೇ ರಾರಾಜಿಸುತ್ತದೆ. 

ಈ ಸಂದರ್ಭದಲ್ಲಿ ಒಂದು ಸಕಾಲಿಕ ಮತ್ತು ಅಷ್ಟೇ ಅರ್ಥಪೂರ್ಣ ಸಾಲು ಬರುತ್ತದೆ:  

 ತನ್ನನ್ನು  ಕೂಡಿದ

 ನದಿಯ ನೀರಿನ ರುಚಿ 

ಕಡಲಿಗೆ ನೆನಪುಂಟೆ? 

ನೆನಪನ್ನೂ ರುಚಿಯನ್ನೂ

 ಕಡಲಲ್ಲಿ ಕಳೆದುಕೊಂಡಿದ್ದಕ್ಕೆ

 ನದಿಗೆ ಕೊರಗುಂಟೆ?

 ಕೃತಿಯ ಕೊನೆಯಲ್ಲಿ ವಿರಹದ ಬಗ್ಗೆ ಬರೆದ ಮಾತು- ವಿರಹ ಅವಳದ್ದೋ, ಅವನದ್ದೋ ಗೊತ್ತಿಲ್ಲ. ವಿರಹ ವಿಚಾರಗಳಲ್ಲೋ, ಕಾಮನೆಗಳಲ್ಲೋ ಗೊತ್ತಿಲ್ಲ. 

ವಿರಹ ಇರುವುದೋ, ಇಲ್ಲದಿರುವುದೋ ಗೊತ್ತಿಲ್ಲ  ಇದ್ದಾಗ ವಿರಹ ಇರಲಾರದು, ಇಲ್ಲದಿದ್ದಾಗ ವಿರಹ ಗೊತ್ತಾಗದು. ಒಮ್ಮೆ ಬಂದು ಹೋದರೆ ಮಾತ್ರ ಖಾಲಿತನ.


-ದತ್ತಾತ್ರೇಯ ಹೆಗಡೆ, ಶಿವಮೊಗ್ಗ


,,,,,,,,,,,,,,,,,,,,


 


Comments

Popular posts from this blog