ಬದುಕಿನ ವಿವಿಧ ಮುಖಗಳ ದರ್ಶನದ 


‘ತಾವರೆದೇಟು’ 



‘ತಾವರೆದೇಟು’ ವಿಷಯ ವೈವಿಧ್ಯಗಳಿಂದ ಕೂಡಿದ, ಪ್ರಸ್ತುತ ಸಮಾಜದ ವಿವಿಧ ಮುಖಗಳನ್ನು ಚಿತ್ರಿಸುವ ಕಥಾ ಸಂಕಲನ. ಬರಹಗಾರ್ತಿ ಉಷಾ ನರಸಿಂಹನ್ ಅವರ ಕೃತಿ ಇದು. ಸಮೃದ್ಧ ಭಾಷಾ ಬಳಕೆ ಮೂಲಕ ಮನುಷ್ಯನ ಬದುಕಿನ ಅದರಲ್ಲೂ ಕೌಟುಂಬಿಕ ಹಾಗೂ ದಾಂಪತ್ಯದಲ್ಲಿ ಎದುರಾಗುವ ಬವಣೆಗಳನ್ನೇ ವಿಷಯವನ್ನಾಗಿಸಿಕೊಂಡು ಅದರ ಮೇಲೆ ಕಥೆಯ ಚಿತ್ರಣವನ್ನು ಸರಾಗವಾಗಿ ಕೆತ್ತಿದ್ದಾರೆ.

 ಲೇಖಕಿಯ ಕಲಾತ್ಮಕ ಮನಸ್ಸು ಕಥೆಯನ್ನು ಒಂದು ಸುಂದರವಾದ ಚೌಕಟ್ಟಿನಲ್ಲಿ ತಂದು ನಿಲ್ಲಿಸಿರುವುದನ್ನು ಇಲ್ಲಿ ಕಾಣಬಹುದು. ಕಥೆಯ ವಸ್ತು ಮಾತ್ರವಲ್ಲ, ಅದನ್ನು ನಿರ್ವಹಿಸಿದ, ನಿಭಾಯಿಸಿದ ರೀತಿ ಬೆರಗುಗೊಳಿಸುವಂತದ್ದು. ಕಥೆಯು ಕೇವಲ ಕಾವ್ಯಮಯವಾಗಿ ಇರದೆ ಇಲ್ಲಿನ ಪಾತ್ರಗಳು ಸಕಾರಾತ್ಮಕತೆಯ ಕಡೆಗೆ ಚಲಿಸುವಂತೆ ಮಾಡಿದ್ದಾರೆ. ಸನ್ನಿವೇಶಗಳನ್ನು ವಿಶ್ಲೇಷಿಸುತ್ತಾ ಕಥೆಗೆ ಒಂದಷ್ಟು ಸೊಗಸನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ ವಿಭಿನ್ನ ರೀತಿಯ ನಿರೂಪಣೆ ಹಾಗೂ ನಾಟಕೀಯ ಸಂಭಾಷಣೆಗಳ ಪ್ರಯೋಗವನ್ನು ಇಲ್ಲಿ ಕಾಣಬಹುದು.

 ಸಂಕಲನದಲ್ಲಿ ಒಟ್ಟೂ ೧೪ ಕಥೆಗಳಿವೆ. 

ಕಥಾ ಸಾರಾಂಶ:

‘ಸೀರೆ’ 

ಅನಾಥನಾಗಿದ್ದ ಬಾಲಕ ಸುಬ್ಬ ಅಗಸನಾದ ತನ್ನ ಮಾವನ ಮನೆಗೆ ಬಂದುಳಿದಾಗ ಮಾವನ ವೃತ್ತಿಯಲ್ಲಿಯೇ ಮುಂದುವರೆಯುತ್ತಾನೆ. ಆಸ್ಪತ್ರೆಯ ಬಟ್ಟೆ ಬರೆಗಳನ್ನು ಒಗೆದು ಮಾರನೇ ದಿನ ತೆಗೆದುಕೊಂಡು ಹೋಗಿ ಕೊಡುತ್ತಾನೆ. ಹೆಣದ ಮೇಲೆ ಹೊದಿಸಿದ ಹೊಸ ಬಟ್ಟೆಗಳು ಕಣ್ಣಿಗೆ ಬಿದ್ದಾಗ ಅದರ ಮರಾಟಕ್ಕಿಳಿಯುತ್ತಾನೆ. ಹಳ್ಳಿ ಹೆಂಗಸರಿಗೆ ಬಣ್ಣ ಬಣ್ಣದ ಬಟ್ಟೆಗಳು, ಸೀರೆಗಳನ್ನು ಮಾರುತ್ತಾ ಅವರು ಕೊಡುತ್ತಿದ್ದ ಪಾತ್ರೆ, ಪ್ಲಾಸ್ಟಿಕ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಹೆಂಗಸರು ಈತ ತರುತ್ತಿದ್ದ ಸೀರೆಗಳಿಗಾಗಿ ಕಾಯುತ್ತಿದ್ದರು. ಒಂದು ದಿನ ಆತ ಮಾರಾಟ ಮಾಡಲು ಹೋದಾಗ ಸಿಕ್ಕಿಬೀಳುತ್ತಾನೆ. ಆಗ ಹೆಂಗಸರು ಸೇರಿ ಆತನಿಗೆ ತದುಕುತ್ತಾರೆ. ಇನ್ನೂ ಕೆಲವರು ಆತನ ಪರ ಮಾತನಾಡುತ್ತಾರೆ. ಮುಂದೆ ಆತ ಏನು ಮಾಡಿದ, ಸೀರೆಯನ್ನು ಮಹಿಳೆಯರು ಖರೀದಿಸುವುದನ್ನು ಮುಂದುವರೆಸಿದರೇ ಎನ್ನುವುದಕ್ಕೆಲ್ಲ ಈ ಕಥೆಯಲ್ಲಿದೆ ಉತ್ತರ.   


 ಅಹತ 

  ಒಡತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಹಸಿವೆ ನೀಗಿಸಲು ಹೊಲದಲ್ಲಿ ಅವರೆಕಾಯಿಯನ್ನು ಕದ್ದು, ತಾಯಿಯ ಮಾನ ಮುಚ್ಚಲು ಸೀರೆ ಕದ್ದು ಬೈಸಿಕೊಳ್ಳುತ್ತಲೇ ಬೆಳೆಯುತ್ತಾಳೆ. ಈ ಹುಡುಗಿ ವಿದ್ಯಾವಂತಳಾಗಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿ ತನ್ನ ಒಡತಿಯ ಮಗನಿಗೆ ಕೆಲಸ ಕೊಡುವಷ್ಟು ಎತ್ತರಕ್ಕೇರುತ್ತಾಳೆ. ಆ ಹುಡುಗ ಕಂಪನಿ ಹಣ ದುರುಪಯೋಗ ಮಾಡಿಕೊಂಡು ಕೆಲಸ ಕಳೆದುಕೊಂಡ ಸಂದರ್ಭದಲ್ಲಿ ಒಡತಿ ಕಾಲು ಹಿಡಿಯುವ ಸಂದರ್ಭ ಎದುರಾಗುತ್ತದೆ. ಆಗ ಆ ಹುಡುಗಿ ಹೇಳುವ ಮಾತು-  ಹಸಿವೆಗೆ, ಮಾನಮುಚ್ಚಲಿಕ್ಕೆ ನಿಮ್ಮನೆಯಲ್ಲಿ ಕದಿಯುತ್ತಿದ್ದೆ. ಅದಕ್ಕೆ ಕ್ಷಮೆ ಇದೆ. ಆದರೆ ನಿಮ್ಮ ಮಗ ಕದ್ದಿರೋದು ಹೊಟ್ಟೆಹೊರೆಯೋಕೆ ಅಲ್ಲ.  ಹೀಗೆ ಸನ್ನಿವೇಶದ ತಿರುವುಮುರುವಿನಲ್ಲಿ ವ್ಯಕ್ತಿಗಳು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಗಮನ ಸೆಳೆಯುವಂತೆ ಲೇಖಕಿ ಇದರಲ್ಲಿ ಚಿತ್ರಿಸಿದ್ದಾರೆ.


ರುಜುವಾತು

 ಈ ಕಥೆ ಸೇಡಿಗೆ ಪ್ರತಿ ಸೇಡು ಎಂಬ ಸಾರಾಂಶವನ್ನು ಹೊಂದಿದೆ. ಸುಂದರವಾದ ಮನೆಯನ್ನು ಕಟ್ಟಿಕೊಂಡಾಗ ಆ ಮನೆಯ ಮೇಲೆ ಕಣ್ಣಿಟ್ಟಿದ್ದವನು ಯಜಮಾನನಿಗೆ ಸುಳ್ಳು ಹೇಳಿ ನಂಬಿಸಿ ಆ ಮನೆಯನ್ನು ಖರೀದಿಸುತ್ತಾನೆ. ಮಾವ- ಅತ್ತೆಯ ಗೊತ್ತಿಲ್ಲದಂತೆ  ಮೂರನಯೆ ವ್ಯಕ್ತಿ ಸಹಿ ಮತ್ತು ಹೆಬ್ಬೆಟ್ಟನ್ನು ಒತ್ತಿಸಿಕೊಂಡು ಮನೆ ಖರೀದಿಸಿರುವುದು ಅಳಿಯನ ಗಮನಕ್ಕೆ ಬರುತ್ತದೆ. ಆಗ ಅಳಿಯ ಮಾಡಿದ ಉಪಾಯವೇನು? ಮನೆಯನ್ನು ಹೇಗೆ ಉಳಿಸಿಕೊ

ಂಡ ಎನ್ನುವುದರ ಕುರಿತಾಗಿದೆ. 


ಆ ನನ್ನ ರಮಣನಾದ ಮರಣವೇ

 ಇದೊಂದು ವಿಲಕ್ಷಣ ಕಥೆ. ಜೊತೆಗೆ ಪ್ರೇiದ ಕಥೆಯೂ ಹೌದು. ಬಾಲ್ಯದಲ್ಲಿ ಅಂಟಿಕೊಂಡೇ ಬೆಳೆದವರು, ಕ್ಲಾಸ್‌ಮೇಟ್ ಕೂಡ. ಇವರಿಬ್ಬರ ಪ್ರೇಮದ ಕಥೆಯದರೂ ಆತ ಮಾತ್ರ ಪ್ರೀತಿಸುವ ಮೂಲಕ ಅದು ಒನ್ ವೇ ಲವ್ ಆಗಿತ್ತು. ‘ನೀ ಇಲ್ಲದೆ ನಾ ಏಮೂ ಮಾಡಲಿಕ್ಕಾಗದು ಎಂದು ಅನ್ನಿಸೋಕೆ ಆರಂಭವಾಗಿದೆ. ನನ್ನ ಬದುಕು ಅತಂತ್ರವಾಗಿಸಬೇಡ’ ಎಂದು ಗೋಗರೆಯುತ್ತಾನೆ. ಆದರೆ ಆಕೆಯ ಮದುವೆಯ ಆಮಂತ್ರಣ ಪತ್ರಿಕೆ ಹಂಚಿಯಾಗಿತ್ತು. ಮುಂದೆ ಏನಾಯಿತು ಎನ್ನುವುದು ಕಥೆಯ ಉದ್ದಕ್ಕೂ ಕಾಡುವ ನಿಗೂಢತೆ ಮತ್ತು ಅಂತ್ಯದಲ್ಲಿನ ಅತೀಂದ್ರಿಯ ಅನುಭವದ ಕಾರಣದಿಂದ ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತದೆ. 


 ತಾವರೆದೇಟು

 ಗಂಡನ ಅನುಮಾನದ ಅಡಿಯಲ್ಲಿಯೇ ಜೀವಮಾನಪರ್ಯಂತ ನರಳಿದ ಮುಗ್ಧ್ದ ಹೆಣ್ಣುಮಗಳ ಹೋರಾಟದ ಕಥೆ ಇದು. ಗಂಡ ಸತ್ತಾಗ ವಿದೇಶದಿಂದ ಬಂದ ಮಗನ ಮುಂದೆ ವ್ಯಥೆಯ ಕಥೆಯನ್ನು ಹೇಳಿಕೊಳ್ಳುವ ಮೂಲಕ ಕಥೆಯ ಸುರುಳಿ ಬಿಚ್ಚಿಕೊಳ್ಳುತ್ತದೆ. ಸ್ವಂತ ಮಗ ವಿದೇಶದಲ್ಲಿನ ಹುಡುಗಿಯನ್ನು ಮದುವೆಯಾದಾಗ ಇಲ್ಲಿ ಆತನ ಶ್ರಾದ್ಧವನ್ನು ತಂದೆ ತರ್ಪಣ ಕೊಟ್ಟು ಮಾಡುತ್ತಾನೆ. ಕೊನೆಗೆ ತಂದೆ ಸತ್ತಾಗ ಊರಿಗೆ ಮಗ ಬಂದಾಗ ಅಪರ ಕರ್ಮವನ್ನು ಮಾಡಬೇಡ ಎಂದು ತಾಯಿ ಹೇಳುತ್ತಾಳೆ. ಹೀಗೆ ವಿಚಿತ್ರ ಸನ್ನಿವೇಶದ ಘಟನೆ ಈ ಕಥೆಯಲ್ಲಿ ಇದೆ 


ಅಪ್ಪ 

ಇದು ವಿಶಿಷ್ಟ ವಸ್ತುವಿನದಾಗಿದೆ. ತಾನು ಇಷ್ಟು ದಿನ ಅಪ್ಪ ಎಂದುಕೊಂಡವರು ತನ್ನ ಸಾಕು ತಂದೆ ಎಂದು ಮಗಳಿಗೆ ಅಜ್ಜಿಯ ಮೂಲಕ ತಿಳಿದಾಗ ಆಗುವ ತಲ್ಲಣ ಇದರಲ್ಲಿದೆ. ಸಾಕು ತಂದೆ ಈ ವಿಚಾರವನ್ನು ಮುಚ್ಚಿಟಿದ್ದರ ಬಗ್ಗೆ ಬೇಸರಗೊಳ್ಳುವ ಮಗಳು ಕೃತಿ, ನಂತರ ಅವಳ ಬೇಸರಕ್ಕೆ ಕಾರಣವನ್ನು ತಿಳಿದುಕೊಂಡ ತಂದೆ, ನಿಜ ವಿಚಾರವನ್ನೆಲ್ಲ ಕಾಲೇಜಿಗೆ ಬಂದ ಅಜ್ಜಿ ಹೇಳುವುದು... ಕೊನಯೆಲ್ಲಿ ‘ಅಪ್ಪ, ಪ್ಲೀಸ್ ಅಳಬೇಡ, ನನಗೆ ಇದೆಲ್ಲ ಗೊತ್ತಿರಲಿಲ್ಲ’ ಎಂದು ಹೇಳುತ್ತಾ ಆತನನ್ನು ಮಗಳು ಪ್ರೀತಿಸುವ ಕಥೆ ಇದು.

 

ಒಲವೆಂಬ ಗೆಲುವಾಶ್ವ 

ಇದು ಒಂದು ತ್ರಿಕೋನ ಪ್ರೇಮದ ಕಥೆ. ವಿವಾಹಪೂರ್ವ ಸಂಬಂಧವೊಂದು ವಿವಾಹ ನಂತರ ತಲೆಹಾಕಿದಾಗ ಉದ್ಭವಿಸುವ ಸಮಸ್ಯೆಯನ್ನು ಹೇಗೆ ನಾಜೂಕಾಗಿ ಬಿಡಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಕಥೆ ಸಾಕ್ಷಿಯಾಗುತ್ತದೆ. ಜಯಂತ್ , ಗೌತಮ್ ಮತ್ತು ಯುವತಿಯ ಮಧ್ಯೆ ನಡೆಯುವ ಘಟನೆ ಇದು. ವಿದೇಶಕ್ಕೆ ಪ್ರ್ರಾಜೆಕ್ಟ್ ವರ್ಕಿಗೆ ಹೋದ ಯುವತಿ ಅಲ್ಲಿ ಜಯಂತನ ಬಲೆಗೆ ಬೀಳುವುದು, ವಿವಾಹಿತನಾದ ಆತ ಈಕೆಯನ್ನು ಬಳಸಿಕೊಳ್ಳುವುದು, ಊರಿಗೆ ಮರಳಿದ ಯುವತಿಯನ್ನು ಗೌತಮ್ ಎನ್ನುವವನು ಪ್ರೀತಿಸುವುದು, ಆಕೆಯ ಹಳೆಯ ಸಂಬಂಧ ತಿಳಿಯುವುದು, ಜಯಂತ ಮತ್ತೆ ಸಂಬಂಧ ಬೆಸೆಯಲು ಬರುವುದು,,,,,,,, ಹೀಗೆ ಕಥೆ ಸಾಗುತ್ತದೆ.   


ದೊಡ್ಡ ಮೀನು ಸಣ್ಣ ಮೀನು

ಸಣ್ಣವರ ಆಸ್ತಿಯನ್ನು ದೊಡ್ಡವರು ಹೇಗೆ ನುಂಗುತ್ತಾರೆ ಎನ್ನುವ ಸಾರಾಂಶದ ಕಥೆ ಇದು. ಅಬಕಾರಿ ಸಚಿವ ಚಂದ್ರೇಗೌಡರ ಪಟ್ಟ ಶಿಷ್ಯ ಪ್ರಕಾಶ  ಕಟ್ಟಿದ ಮನೆಯ ಪ್ರವೇಶಕ್ಕೆ ಸಚಿವರನ್ನು ಕರೆದಾಗ ಅವರ ಕುಟುಂಬ ಬರುತ್ತದೆ.  ಸಚಿವರ ಅಕ್ಕ ಪುಟ್ಟಕ ಮನೆಯನ್ನು ನೋಡಿ ‘ಅತ್ಯಂತ ಚೆಂದದ ಮ. ತನಗೆ ಈ ಮನೆ ಬೇಕು’ ಎಂದು ನಂತರ ಹಠಹಿಡಿಯುತ್ತಾಳೆ. ಆಗ ಪ್ರಕಾಶ್ ಚಿಂತೆಗೀಡಾಗುತ್ತಾನೆ ಅದೇ ಮನೆ ಬೇಕೆಂದು ಸಚಿವರೂ ಸಹ ಹೇಳಿದಾಗ ಪುಟ್ಟಕ್ಕನ ಹೆಸರಿಗೆ ಮಾಡಿಕೊಡಲು ಮುಂದಾಗುತ್ತಾನೆ. ಆಗ ಪ್ರಕಾಶನ ಹೆಂಡತಿ ಸುಧಾ ಜ್ಯೋತಿಷಿ ಶ್ರೀನಿವಾಸ್ ಅವರಲ್ಲಿ ಹೋಗಿ ಘಟನೆಯನ್ನು ವಿವರಿಸುತ್ತಾಳೆ. ಅದಕ್ಕೆ ಜ್ಯೋತಿಷಿ ಮಾಡಿದ ಉಪಾಯವೇನು? ಮನೆ ಸುಧಾಳ ಹೆಸರಲ್ಲಿ ಉಳಿಯುವಂತೆ ಹೇಗೆ ಸುಳ್ಳು ಹೇಳಿದ? ಆ ಸುಳ್ಳಿನಿಂದ ಲಾಭವಾಯಿತೇ? ಎನ್ನುವುದನ್ನು ಚೆಂದವಾಗಿ ವಿವರಿಸುವ ಕಥೆ ಇದು. 


ನಿರುತ್ತರ

 ಮೂರು ತಿಂಗಳು ವಿದೇಶದಲ್ಲಿ ಕೆಲಸ ಮಾಡಿ ಬಂದ ಪತ್ನಿ ಮನೆಗೆ ಬಂದ ನಂತರ ಪತಿಯೊಡನೆ ತನ್ನ ವಿರಹವನ್ನು ತೋಡಿಕೊಳ್ಳುವುದರ ಜೊತೆಗೆ ಸಣ್ಣಪುಟ್ಟ ಸಿಟ್ಟು, ದ್ವೇಷವನ್ನು ಕಾರಿಕೊಳ್ಳುತ್ತಾಳೆ. ಈ ವೇಳೆ ಆಕೆಯ ಮೊಬೈಲ್‌ಗೆ ನಂದಕಿಶೋರ್ ಎನ್ನುವವನಿಂದ ಮೆಸೇಜುಗಳು ಬರಲಾರಂಭಿಸುತ್ತವೆ. ಇದನ್ನು ನೋಡಿದ ಆಕೆಯ ಗಂಡ ಪ್ರಶ್ನಿಸಿದಾಗ ಧಾರಾಕಾರವಾಗಿ ಕಂಬನಿಯನ್ನು ಸುರಿಸುತ್ತಾಳಾದರೂ ಯಾವ ಉತ್ತರವನ್ನು ಅವಳು ಹೇಳುವುದಿಲ್ಲ.


 ಟೆಖಿಲಾಶಾಟ್

 ಬ್ಯಾಚುಲರ್ಸ್ ಪಾರ್ಟಿ ಒಂದರಲ್ಲಿ ನಡೆದ ಘಟನೆಗಳ ಕಥೆ ಇದು. ಮದುವೆಯಾಗುವ ಸಂತಸದಲ್ಲಿದ್ದ ಸಂತೋಷ್ ಈ ಪಾರ್ಟಿ ಏರ್ಪಡಿಸಿರುತ್ತಾನೆ. ಆತ ಮದುವೆಯಾಗುವ ಹುಡುಗಿಯ ಬಗ್ಗೆ ಪ್ರದೀಪ್ ‘ಆಕೆ ತುಂಬಾ ಹಾಟೆಸ್ಟ್ ಬೇಬ್’ ಎಂದು ಹೇಳಿದ್ದರಿಂದ ಅಲ್ಲೇ ಇಬ್ಬರೂ ಗಲಾಟೆ ಮಾಡಿಕೊಳ್ಳುವುದು, ನಂತರ ಪ್ರದೀಪ್ ತಾನು ನಂದಿನಿ ಜೊತೆ ಜರ್ಮನಿಗೆ ಪ್ರಾಜೆಕ್ಟ್ ವರ್ಕ್‌ಗೆ ಹೋದಾಗ ಅಲ್ಲಿ ಇಬ್ಬರೂ ರಾತ್ರಿ ಪಾರ್ಟಿ ಮಾಡಿ ಒಂದೇ ಹಾಸಿಗೆಯಲ್ಲಿ ಮಲಗಿದ್ದನ್ನು ಹೇಳಿದಾಗ ಸಂತೋಷನಿಗೆ ರೋಷ ಹೆಡೆಯಾಡುತ್ತದೆ. ನಂತರ ನಂದಿನಿ ಜೊತೆ ಪ್ರದೀಪ್ ಮತ್ತೊಂದು ರೂಮಿನಲ್ಲಿ ಕುಡಿದು ಹೊರಬಂದಾಗ ಉಳಿದವರೆಲ್ಲರೂ ಪ್ರದೀಪನನ್ನು ಸುತ್ತುಗಟ್ಟುತ್ತಾರೆ. ಆಗ ಪ್ರದೀಪನಿಗೆ ಕುಡಿದ ನಶೆ ಇಳಿದು ಹೋಗುತ್ತದೆ.

ಹೀಗೆ ವಿಭಿನ್ನ ವಿಷಯಗಳ ಸನ್ನಿವೇಶಗಳನ್ನು  ವಿಶ್ಲೇಷಿಸಿ ಸೊಗಸಾಗಿ ಲೇಖಕಿ ಕಥೆಗಳನ್ನು ಹೆಣೆದಿದ್ದಾರೆ.  

-ದತ್ತಾತ್ರೇಯ ಹೆಗಡೆ,

ಶಿವಮೊಗ್ಗ

........................

......................


Comments

Popular posts from this blog