ಆತ್ಮದ ಸ್ವರೂಪದಲ್ಲಿರುವ ವಿದ್ವಾಂಸರೊಬ್ಬರ ಚರಿತೆಯ
‘ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ’
ಇದು ಮೇಧಾವಿ ವಿದ್ವಾಂಸರೊಬ್ಬರ ಜೀವನ ದರ್ಶನ ಮಾಡಿಸುತ್ತಾ, ಅವರು ದೇಹಾತೀತವಾಗಿ ಆತ್ಮದ ಸ್ವರೂಪದಲ್ಲಿ ಇದ್ದಾರೆ ಎನ್ನುವುದನ್ನು ಬಿಂಬಿಸುವ ಕಥೆಯನ್ನು ಹೊಂದಿರುವ ಕಾದಂಬರಿ. ಸಾಧಕನೊಬ್ಬನ ಜೀವನ ಚರಿತ್ರೆ , ಬದುಕಿನ ನಡೆ, ಸಾಧನೆ, ಜೊತೆಗೆ ಐತಿಹಾಸಿಕ, ಸಾಂಸ್ಕೃತಿಕ ಘಟನೆಗಳು, ಪಾರಂಪರಿಕ ನಂಬಿಕೆ, ಆಧ್ಯಾತ್ಮಿಕ ಸಾಧನೆಗಳ ಉಲ್ಲೇಖ ಇದರಲ್ಲಿದೆ. ಉಡುಪಿ ಸಮೀಪದ ಬೆಳಂಜಾಲು ಗ್ರಾಮದ ಡಾ. ಅನಂತರಾಮ್ ಉಡುಪ ಅವರ ಕುರಿತಾದ ನೈಜ ಘಟನೆಗಳ ಕಾದಂಬರಿ ಇದು. ಇದರ ರಚನೆಕಾರರು ನಿವೃತ್ತ ಪ್ರಾಚಾರ್ಯ ಬಿ. ಜನಾರ್ಧನ್ ಭಟ್ಟರು.
ಸ್ವಾತಂತ್ರ್ಯಪೂರ್ವ ಭಾರತದಲ್ಲಿದ್ದ ಶಿಕ್ಷಣ ವ್ಯವಸ್ಥೆ, ಮತಾಂತರ, ಪ್ರತಿಭಾ ಪಲಾಯನ, ಅನಾಥ ಪ್ರಜ್ಞೆ, ಮಹಾಯುದ್ಧ, ಸ್ವಾತಂತ್ರ್ಯ ಹೋರಾಟದ ಘಟ್ಟಗಳು, ಸಾಧಕನೊಬ್ಬನ ಬದುಕಿನ ಕ್ರಮ, ಅವರ ಉದಾತ್ತ ದೌರ್ಬಲ್ಯ, ನಡೆವಳಿಕೆ ಮೊದಲಾದವನ್ನು ಇಲ್ಲಿ ಗಮನಿಸಬಹುದು. ಉಡುಪರು ಬೆಳಂಜಾಲು ಗ್ರಾಮದಲ್ಲಿ ಹುಟ್ಟಿ ಎಲಿಮೆಂಟರಿ ಶಿಕ್ಷಣವನ್ನು ಮುಗಿಸಿ, ಸಂಸ್ಕೃತ ಶಾಲೆಗೆ ಸೇರಿ ಅಲ್ಲಿಂದ ಕ್ರಿಶ್ಚಿಯನ್ ಸ್ಕೂಲ್‌ನಲ್ಲಿ ಮೆಟ್ರಿಕ್ಯುಲೇಶನ್ ಪಾಸಾಗುತ್ತಾರೆ. ನಂತರ ಇಂಗ್ಲಿಷ್ ಕಲಿಕೆಯ ಜೊತೆಗೆ ಮೈಸೂರಿನ ಸಂಸ್ಕೃತ ವಿದ್ಯಾಲಯಕ್ಕೆ ಸೇರಿ ಅಲ್ಲಿಂದ ತಿರುಪತಿ ಸಂಸ್ಕೃತ ವಿದ್ಯಾಲಯಕ್ಕೆ ಹೋಗಿ ಶಿಕ್ಷಣವನ್ನು ಪಡೆಯುತ್ತಾರೆ. ಇದು ಸ್ವಾತಂತ್ರ್ಯ ಪೂರ್ವದ ಕಾಲವಾದ್ದರಿಂದ ಹೆಚ್ಚಿನ ವಿದ್ಯಾಭ್ಯಾಸ ಇಲ್ಲಿ ಸಾಧ್ಯವಿರದ ಕಾರಣ ಕೊಲಂಬೋದಲ್ಲಿ, ಲಂಡನ್‌ನಲ್ಲಿ, ಜರ್ಮನಿಯಲ್ಲಿ ಸಂಸ್ಕೃತ ಕಲಿತು ಪಿಎಚ್‌ಡಿ ಮುಗಿಸಿ ಬರ್ಲಿನ್ ವಿಶವಿದ್ಯಾಲಯದಲ್ಲಿ ಇಂಡಾಲಜಿ (ಭಾರತೀಯ ಸಂಸ್ಕೃತಿ, ಸಾಹಿತ್ಯ, ಇತಿಹಾಸಗಳ ಕುರಿತಾದ ವಿಷಯ) ಪ್ರಾಧ್ಯಾಪಕರಾಗಿ, ಬರಹಗಾರರಾಗಿ, ವಿದ್ವಾಂಸರಾಗಿ, ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ದ್ವಿಭಾಷೀಯ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಾರೆ. ಜರ್ಮನಿ ಭಷೆಯ ಜೊತೆಗೆ ಪಾಲಿ ಮತ್ತು ಟಿಬೇಟಿಯನ್ ಭಾಷೆಯನ್ನೂ ಕಲಿಯುತ್ತಾರೆ. ಅನೇಕ ಪಂಡಿತರು ಇವರ ಪಾಂಡಿತ್ಯಕ್ಕೆ ಮಾರುಹೋಗುತ್ತಾರೆ.
ಎರಡನೇ ವಿಶ್ವದ ಯುದ್ಧದ ಸಂದರ್ಭದಲ್ಲಿ ಜರ್ಮನಿಯಿಂದ ಪಾರಾಗಿ ಪಕ್ಕದ ಬವೇರಿಯಾ ದೇಶಕ್ಕೆ ತೆರಳಿ ಅಲ್ಲಿಂದ ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗಿ ಅಧಿಕಾರಿಗಳ ನೆರವಿನಿಂದ ಭಾರತ ಪ್ರವೇಶಿಸುತ್ತಾರೆ. ಆ ವೇಳೆಗೆ ಭಾರತ ಸ್ವಾತಂತ್ರ್ಯವನ್ನು ಪಡೆದಿರುತ್ತದೆ. ಆದರೆ ಭಾರತಕ್ಕೆ ಬಂದ ಅವರಿಗೆ ಅವರ ವಿದ್ವತ್ತಿಗೆ ತಕ್ಕ ಕೆಲಸ ಸಿಗುವುದಿಲ್ಲ. ವಿಧಿ ಅಲೆಸಿದ ಬಗೆಯನ್ನು ಮತ್ತು ನಮ್ಮ ಸ್ವಾತಂತ್ರೋತ್ತರ ದೇಶಕ್ಕೆ ಅವರ ಯೋಗ್ಯತೆಯ ಅರಿವೇ ಇಲ್ಲದನ್ನು ಕಾದಂಬರಿಯಲ್ಲಿ ಕೇಂದ್ರವಾಗಿರಿಸಿಕೊಂಡು ಲೇಖಕರು ಚಿತ್ರಣ ನೀಡಿದ್ದಾರೆ.
ಇದರ ಜೊತೆಗೆ ಕೆಲವು ಪಾರಂಪರಿಕ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಸಾಧನೆಗಳ ಉಲ್ಲೇಖವಿದೆ. ನಾವು ಈ ಕಾದಂಬರಿಯಲ್ಲಿ ಎರಡು ರೀತಿಯ ಘಟನೆಗಳನ್ನು ಕಾಣಬಹುದು. ಮೊದಲನೆಯದು ಉಡುಪರು ವಿದೇಶಕ್ಕೆ ಹೋಗಿ, ಸಾಧನೆ ಮಾಡಿ, ಅಲ್ಲಿಯೇ ದೇಹಾಂತ್ಯವಾಗಿದ್ದು, ಎರಡನೆಯದು ಅವರು ವಿದೇಶಕ್ಕೆ ತೆರಳಿದ ನಂತರ ಅವರ ಪೂರ್ವಜರ ಮನೆಯ ಕಥೆ. ಇದು ಕೆರೆಮಠ ಮನೆ ಎಂದು ಹೆಸರು. ಉಡುಪರು ದೇಶಾಂತರಿಯಾಗಿ ಹೋಗಲು ಹಣಕಾಸಿನ ಸಮಸ್ಯೆ ಎದುರಾದಾಗ ಊರಿನ ಪಟೇಲರಿಗೆ ಅಡವಿಟ್ಟು ಹೋಗುವುದರಲ್ಲಿಂದ, ನಂತರ ಅದು ಹಲವರ ಕೈವಶವಾಗಿ ಕೊನೆಯಲ್ಲಿ ಉಡುಪರ ಮೊಮ್ಮಗ ಮೊಮ್ಮಗ ಇಂಜಿನಿಯರ್ ಅಶ್ವಿನ್ ಬೆಳಂಜಾಲು ಖರೀದಿ ಮಾಡುವುದು, ಮನೆಯನ್ನು ತಮ್ಮ ತಾತನ ಹೆಸರಿನಲ್ಲಿ ಟ್ರಸ್ಟ್ ರಚಿಸುವ ಮೂಲಕ ಅವರ ಸ್ಮಾರಕವನ್ನಾಗಿ ಮಾಡುವುದು, ಅಲ್ಲಿ ಅವರ ಹಲವು ವಸ್ತುಗಳನ್ನು ಮತ್ತು ದೊಡ್ಡದಾದ ತೈಲ ಚಿತ್ರವನ್ನು ಇಡುವುದು. ಹೀಗೆ ಅವರ ಮನೆಯ ಅಂದರೆ ಬೆಳಂಜಾರಿನಲ್ಲಿರುವ ಕೆರೆಮಠ ಮನೆಯ ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಅನಂತರಾಮ ಉಡುಪರು ಬದುಕಿದ್ದು ಕೇವಲ ೬೦ ವರ್ಷಗಳು ಮಾತ್ರ. ಭಾರತಕ್ಕೆ ಬಂದ ನಂತರ ಅವರ ವಿದ್ವತ್ತಿಗೆ ತಕ್ಕ ಕೆಲಸಗಳು ಸಿಗುವುದಿಲ್ಲ. ಇದರಿಂದಾಗಿ ಅವರು ವಿವಿಧ ಸಂಸ್ಕೃತ ವಾಚನಾಲಯಗಳಲ್ಲಿ ಕೆಲಸ ಮಾಡಿ ನಂತರ ಹಿಂದಿ ಪಾರಿಭಾಷಿಕ ಶಬ್ದಕೋಶವನ್ನು ರಚಿಸುವ ಕೆಲಸದಲ್ಲಿ ತೊಡಗುತ್ತಾರೆ. ಹೀಗೆ ಉತ್ತರ ಭಾರತದ ವಿವಿಧೆಡೆ ವಿದ್ವತ್ತು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಆಗ ಅವರಿಗೆ ಹಲವು ವಿದ್ವಾಂಸರು ಜೊತೆಗೂಡುತ್ತಾರೆ. ಅವರಲ್ಲಿ ಶ್ರೀವಾಸ್ತವ ಎನ್ನುವವರೊಬ್ಬರು. ಉಡುಪರ ಬಗ್ಗೆ ಅವರು ಹೇಳಿದ ವಿವರ ಮತ್ತು ಕನ್ನಡ ನಾಡಿಗೆ ಮತ್ತ್ತೆ ಬರಲೇಕೆ ಹಿಂಜರಿದರು ಎನ್ನುವುದರ ವಿವರ ಇದರಲ್ಲಿದೆ.
ಉಡುಪರು ಪ್ರಯಾಗದಲ್ಲಿದ್ದಾಗ ಅಲ್ಲಿ ಗರ್ವಾಲ್ ಬಾಬಾ ಎನ್ನುವ ಸ್ವಾಮೀಜಿಯೊಬ್ಬರ ಪರಿಚಯವಾಗುತ್ತದೆ. ಅವರು ಹಿಮಾಲಯದ ತಪಸ್ವಿ. ಅವರೊಟ್ಟಿಗೆ ತಪಸ್ಸಿಗೆ ಹೋಗುತ್ತಾರೆ. ತಪಸ್ಸಿಗೆ ಹೋದ ನಂತರ ಉಡುಪರು ಏನಾದರು, ಮರಳಿ ಬಂದರೇ ಎನ್ನುವುದರ ಉಲ್ಲೇಖ ಈ ಕಾದಂಬರಿ ಓದಿದಾಗ ಗೊತ್ತಾಗುತ್ತದೆ.
ಅನಂತರಾಮ್ ಉಡುಪ ಅವರ ಮಗ ಪದ್ಮನಾಭ ಉಡುಪ ಮತ್ತು ಮೊಮ್ಮಗ ಅಶ್ವಿನ್ ಬೆಳಂಜಾಲು ತಮ್ಮ ಆಪ್ತರಾದ ಪತ್ರಕರ್ತ ಕೊ. ವೆಂ. ಉಪಾಧ್ಯಾಯರ, ಮೂರ್ತಿಯವರ ಮೂಲಕ ಉಡುಪರನ್ನು ಹುಡುಕಿಕೊಂಡು ಪ್ರಯಾಗಕ್ಕೆ ಹೋಗುತ್ತಾರೆ. ಆಗ ಬಾಬಾ ಅವರು ಹೇಳುವ ಪ್ರಕಾರ ಉಡುಪರು ದೇಹಾತೀತ ಪ್ರಯಾಣ ನಿರ್ಮಿಸಿಕೊಂಡಿದ್ದರು. ಅಂದರೆ ಯಾವುದಾದರೂ ಒಂದು ಸ್ಥಳದ ಬಗ್ಗೆ ಯೋಚಿಸಿದಾಗ ಅಲ್ಲಿಗೆ ಸುಲಭವಾಗಿ ಈ ಮೂಲಕ ಹೋಗಲು ಸಾಧ್ಯವಿತ್ತು. ಭಗವತಿ ಆಶ್ರಮ, ಪ್ರಯಾಗ ಮಠ ಮತ್ತು ಬೆಳಂಜಾಲಿನ ಕೆರೆಮಠ, ಹುಬ್ಬಳ್ಳಿ ಇಲ್ಲೆಲ್ಲ ಅವರು ಖಾಯಂ ಆಗಿ ದೇಹಾತೀತವಾಗಿ ಇರುತ್ತಿದ್ದರು. ದೇಹವನ್ನು ಬಿಟ್ಟು ಆತ್ಮವನ್ನು ಎಲ್ಲಿಗಾದರೂ ಕಳಿಸಿ ನೋಡಿಕೊಂಡು ಬರುವ ವಿದ್ಯೆಯೇ ದೇಹಾತೀತ ವಿದ್ಯೆ. ಇದನ್ನು ಕಲಿಸಲು ಬಾಬಾ ಕೆಲವು ಶಿಷ್ಯರನ್ನು ಬಿಟ್ಟಿದ್ದರು. ಇದು ಯೋಗಿಗಳ ಸಾಧನೆ ಆಗಿರುತ್ತದೆ.
ಅಲ್ಲಿ ಉಡುಪರನ್ನು ಕಾಣದೆ ಅವರ ಮಗ ಮತ್ತು ಮೊಮ್ಮಗ, ಕೇವಲ ಅವರ ಸಾಧನೆಯನ್ನೆಲ್ಲ ಶ್ರೀವಾಸ್ತವ ಮತ್ತು ಬಾಬಾ ಮೂಲಕ ಕೇಳಿ, ಅವರು ಬರೆದಿದ್ದ ಗ್ರಂಥದ ಪ್ರತಿಯನ್ನು ಪಡೆದು ವಾಪಸ್ ಆಗುತ್ತಾರೆ. ಊರಿಗೆ ಬಂದ ನಂತರ ಅವರ ಪೂರ್ವಜರಿದ್ದ ಬೆಳಂಜಾಲಿನ ಕೆರೆ ಮಠ ಮನೆಯನ್ನು ಮತ್ತೆ ತಮ್ಮ ವಶಕ್ಕೆ ಹೇಗೆ ಪಡೆದರು, ಇದಕ್ಕೆ ಸಹಾಯ ಮಾಡಿದವರಾರು, ಮನೆಯ ಕಟ್ಟಡದ ಸ್ಥಿತಿ ಏನಾಗಿತ್ತು, ಪಡೆದ ನಂತರ ಹೇಗೆ ಅದನ್ನು ಹೊಸದಾಗಿ ಕಟ್ಟಿಸಿ ಸ್ಮಾರಕವಾಗಿಸಿದರು ಎನ್ನುವುದರ ವಿವರಣೆಯನ್ನು ಸವಿವರವಾಗಿ ಇಲ್ಲಿ ನೀಡಿದ್ದಾರೆ.
ಹೀಗೆ ಈ ಕಾದಂಬರಿ ಸಂಪೂರ್ಣವಾಗಿ ಅನಂತರಾಮ ಉಡುಪರ ಹೆಜ್ಜೆ ಗುರುತನ್ನು ಕಟ್ಟಿಕೊಡುತ್ತದೆ. ಸುಮಾರು ೧೮ ವರ್ಷಗಳ ಕಾಲ ಜರ್ಮನಿಯಲ್ಲಿದ್ದು, ಸಂಪಾದಿಸಿದ ಜ್ಞಾನದಿಂದ ಗ್ರಂಥಗಳನ್ನು ಬರೆದು ಸಾಕಷ್ಟು ಹಣ ಗಳಿಸಿದ್ದ ಉಡುಪರಿಗೆ ಮರಳಿ ಸಿಕ್ಕಿತೇ ಅವರು ಜರ್ಮನಿಯಿಂದ ಯುದ್ಧ ಕಾಲದಲ್ಲಿ ಪಾರಾಗಲು ಸಹಾಯ ಮಾಡಿದವರಾರು, ಭಾರತಕ್ಕೆ ಹೇಗೆ ಬಂದರು ಎಂಬೆಲ್ಲ ವಿವರಣೆ ಇದರಲ್ಲಿದೆ.
ಆದರೆ ತನಗೆ ತಕ್ಕ ಸ್ಥಾನಮಾನ, ಗೌರವ ಭಾರತದಲ್ಲಿ ದೊರೆಯದ ಕಾರಣ ಅವರು ತುಂಬಾ ನೊಂದುಕೊಂಡಿದ್ದರು. ನೇತಾಜಿಯವರ ಪತ್ರಿಕೆಯಲ್ಲಿ ಅದ್ಭುತವಾಗಿ ಲೇಖನವನ್ನು ಬರೆಯುತ್ತಿದ್ದರು ಎನ್ನುವುದನ್ನು ಲೇಖಕರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗೆ ಅನಂತರಾಮ ಉಡುಪರ ದೇಹ ಬೆಳಂಜಾಲಿನ ಮನೆಯಲ್ಲಿ ಇನ್ನೂ ಇದೆ. ಅವರು ದೇಹಾತೀತರಾಗಿ ಆತ್ಮದ ಸ್ವರೂಪದಲ್ಲಿ ಇದ್ದಾರೆಯೇ ಎನ್ನುವುದನ್ನು ‘ಮನೆಯಲ್ಲಿ ಮನೆಯೊಡೆಯ ಇದ್ದಾನೋ ಇಲ್ಲವೋ’ ಎನ್ನುವ ಬಸವಣ್ಣನವರ ವಚನದ ಸಾಲಿನ ಮೂಲಕ ಶೀರ್ಷಿಕೆಯನ್ನಿತ್ತು ಕಟ್ಟಿಕೊಟ್ಟಿದ್ದಾರೆ. ಕಥೆಯ ಹಂದರವೂ ಇದೇ ಆಗಿದೆ. ಒಟ್ಟಿನಲ್ಲಿ, ಇದೊಂದು ಹೊಸತನದ ಕಾದಂಬರಿಯಾಗಿ ಕಂಡುಬರುತ್ತದೆ.
......................

Comments
Post a Comment