ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬೀಜ ಬಿತ್ತುವ 

‘ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’

 

ಮಕ್ಕಳು, ಕಥೆ ಮತ್ತು ಅಜ್ಜಿ ಈ ಮೂರರ ನಡುವೆ ಸದಾ ಒಂದು ತ್ರಿಕೋನ ಸಂಬಂಧವಿದೆ. ಮಕ್ಕಳಿಗೆ ಕಥೆ ಕೇಳಬೇಕು ಎಂದೆನಿಸಿದಾಗ ಅವರು ಓಡುವುದು ಅಜ್ಜಿಯ ಬಳಿಗೆ. ಈ ಅಜ್ಜಿ ಬದುಕಿನಲ್ಲಿ ಅನುಭವ ಗಳಿಸಿದವಳು, ದುಡಿದವಳು, ಬದುಕನ್ನು ಸವೆಸಿದವಳು, ಎದುರಿಸಿದಳು. ಇಂತಹ ಒಂದು  ಊರಿನಲ್ಲಿ ಪುಟ್ಟಜ್ಜಿ ಮಕ್ಕಳಿಗೆ ಹುರುಪನ್ನು ತುಂಬುತ್ತಾ ಮಕ್ಕಳಿಗೆ ಪರಿಸರ, ಪ್ರಾಣಿಗಳ ಪರಿಚಯ ಮಾಡಿಕೊಡುತ್ತಾ, ಮಕ್ಕಳನ್ನು ಆ ಕಥೆಗಳ ಮೂಲಕ ರಂಜಿಸುತ್ತಾಳೆ. ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ಇಂತಹ ೧೫ ಕಥೆಗಳ ಒಂದು ಸುಂದರ ಸಂಗ್ರಹ. ಮಕ್ಕಳಿಗಾಗಿ ಬಹಳಷ್ಟು ಬರೆದಿರುವ ಲೇಖಕ ನಾ. ಡಿಸೋಜಾ ಅವರ ಕೃತಿ ಇದು ಕೃತಿ.

ಪುಟ್ಟಜ್ಜಿ ಮನೆಗೆ ಮಕ್ಕಳೆಲ್ಲ ಸಂಜೆ ವೇಳೆ ಪ್ರತಿದಿನ ತಪ್ಪದೆ ಬರುತ್ತಾರೆ. ಅವಳೆದುರು ಭಕ್ತಿಯಿಂದ ಕೈಕಟ್ಟಿ ಕೂರುತ್ತಾರೆ. ಅಜ್ಜಿ ದಿನಾಲೂ ಒಂದೊಂದು ಕಥೆಯನ್ನು ಹೇಳಲು ಆರಂಭಿಸುತ್ತಾಳೆ. ಹೀಗೆ ಕಥೆ ಹೇಳುವ ಹವ್ಯಾಸ. ಅವಳೆಂದೂ ಕಥೆಯೊಂದನ್ನೇ ಹೇಳುವುದಿಲ್ಲ. ಅದರ ಜೊತೆ ಹಾಡನ್ನು ರಚಿಸಿ ಸೇರಿಸಿ ಹಾಡುತ್ತಾಳೆ. ಇದರಿಂದ ಮಕ್ಕಳಿಗೆ ಮೋಜು, ಮಜಾ. ಕಥೆ ಕೇಳುತ್ತ, ಅಜ್ಜಿಯ ಮುಖ ನೋಡುತ್ತಾ ಕುಳಿತಿರುತ್ತಾರೆ. ತಮ್ಮ ಸುತ್ತಮುತ್ತಲಿನ ಆಗು-ಹೋಗುಗಳನ್ನೇ ಮರೆತುಬಿಡುತ್ತಾರೆ. ನಾವು ಕಲಿತದ್ದನ್ನು ಪರರಿಗೆ ಹಂಚಬೇಕು, ಪ್ರಕೃತಿ ನಮಗೆ ಕೊಟ್ಟಿದ್ದನ್ನು ನಾವು ಮರಳಿ ಕೊಡಬೇಕು ಎನ್ನುವ ಸಂದೇಶವನ್ನು ನಾ. ಡಿಸೋಜಾ ಅವರ ‘ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’ ಸಂಕಲನ ಬಿಂಬಿಸುತ್ತದೆ. ಪ್ರತಿ ಮಕ್ಕಳೂ ಇದನ್ನು ಓದಲೇಬೇಕು ಎನ್ನುವ ಅಪೂರ್ವ ಕಿರುಗಥೆಗಳ ಸಂಕಲನ ಇದು. 

ಇಲ್ಲಿ  ರಾಗಗಳನ್ನು ಹಾಕಿ ಹಾಡುಗಳನ್ನು ಕಲಿಸಿದರೆ ಇವು ಮಕ್ಕಳಿಗೆ ಹೆಚ್ಚು ಅರ್ಥಪೂರ್ಣವಾಗಿ ಹಿಡಿಸಬಹುದು. ಪೋಷಕರು ಇಂತಹ ಹಾಡ್ಗತೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸಬಹುದು. ಮಕ್ಕಳ ಕಥೆಗಳು ಮಕ್ಕಳಿಗೆ ಮೀಸಲು ಎನ್ನುವ ಅಭಿಪ್ರಾಯ ನಮ್ಮಲ್ಲಿರುವುದರಿಂದ, ನಾವು ದೊಡ್ಡವರು ಎನ್ನುವ ಅಹಂ ಭಾವ ಹಿರಿಯರಲ್ಲಿ ಮೂಡಿರುವುದರಿಂದ ಮಕ್ಕಳ ಸಾಹಿತ್ಯದ ಪರೀಧಿ ಕಿರಿದಾಗುತ್ತಾ ಬಂದಿದೆ. ಆದರೆ ಮಕ್ಕಳ ಕಥೆಗಳಲ್ಲಿ ಹಿರಿಯರು ಕೂಡ ಕೇಳಿ ನಲಿಯುವಂತಹ ಅಂಶಗಳು ಸಾಕಷ್ಟು ಇವೆ ಎನ್ನುವುದನ್ನು ಈ ಕಥಾ ಸಂಕಲನ ಓದಿದಾಗ ಅರ್ಥವಾಗುತ್ತದೆ. ಹಿರಿಯರಿಗೆ ಮಕ್ಕಳ ಮುಗ್ಧತೆ, ನಿರ್ಮಲ ಮನಸ್ಸು, ಅದ್ಭುತಗಳನ್ನು ನೋಡಿ ಒಪ್ಪಿಕೊಳ್ಳುವ ಕಣ್ಣು, ಸರಳವಾದ ಮನೋಭಾವ ಇದ್ದರೆ ಮಕ್ಕಳ ಸಾಹಿತ್ಯ ದೊಡ್ಡವರಿಗೂ ಹಿತವಾಗುತ್ತದೆ, ಮೆಚ್ಚುಗೆಯಾಗುತ್ತದೆ.    

 ಕಥೆಗಳ ಕುರಿತು

 ‘ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’ ಎನ್ನುವ ಮೊದಲ ಕತೆಯಲ್ಲಿ ಹುಲಿಯಿಂದ ಹೆದರಿ ಬಂದ ಸಾಕು ಜಿಂಕೆಯನ್ನು ಯುವಕನೊಬ್ಬ ಕಾಪಾಡುವುದು, ಹುಲಿ ಈತನನ್ನು ಹೆದರಿಸುವುದು, ಹುಲಿಯೊಂದಿಗೆ ಕಾದಾಡಿ ಗೆಲ್ಲುವುದು, ಈ ಜಿಂಕೆ ಸಾಕಿದ್ದ ಯುವತಿ ಹುಡುಕುತ್ತಾ ಬರುವುದು, ತಾನು ಸಾಕಿದ್ದ ಜಿಂಕೆ ಎಂದು ಆತನಿಗೆ ಹೇಳಿದಾಗ ಆತ ಕೊಡದಿರುವುದು, ಯುವಕನ ಮನೆಗೆ ಒಳಗೆ ಹೋಗಿ ಜಿಂಕೆ ಅವಿತುಕೊಳ್ಳುವುದು, ಆಕೆ ನಾನು ಬಿಡಲಾರೆ ಎಂದರೆ ಆತ ನಾನು ಕೊಡಲಾರೆ ಎನ್ನುವುದು, ಕೊನೆಯಲ್ಲಿ ತಾನು ಇಲ್ಲಿಯೇ ಇರುವೆ ಎಂದು ಆಕೆ ಹೇಳಿದಾಗ ಹುಡುಗ ಹುಡುಗಿ ಇಬ್ಬರು ಒಂದಾಗುತ್ತಾರೆ. ಮಕ್ಕಳ ಮನಸೆಳೆಯುವಂತೆ ಈ ಕಥೆ ರಚನೆಯಾಗಿದೆ.

‘ ಅಂಬುಗ ಎಂಬ ಹಕ್ಕಿ’ ಕಥೆಯಲ್ಲಿ ಅಂಬುಗ ಎಂಬ ಜಾತಿಯ ಹಕ್ಕಿ ಹೂವಿನ ರಸ ಹೀರಲು ಬಂದಾಗ ಪುಟ್ಟಿಯ ಗೆಳೆತನವಾಗುವುದು, ಅಂಗಳದಲ್ಲಿ ಹೂವಿನ ಸೀಸನ್ ಮುಗಿದಾಗ ಹಕ್ಕಿ ಬರುವುದನ್ನು ನಿಲ್ಲಿಸುವುದು, ಪುಟ್ಟಿಗಾಗಿ ತನ್ನ ನುಣುಪಾದ, ಚೆಂದವಾದ ಗರಿ ಒಂದನ್ನು ಬಿಟ್ಟು ಹೋಗುವ ಮೂಲಕ ಗೆಳೆತನವನ್ನು ಹಕ್ಕಿ ಸಾರುತ್ತದೆ. ಹಳ್ಳಿಯೊಂದಕ್ಕೆ  ಮೂರು ದೋಣಿಯಲ್ಲಿ ಮೂವರು ಚೆಲುವೆಯರು ಅಲ್ಲಿ ತಮಗೆ ಬೇಕಾದ ಮೂವರು ಹುಡುಗರನ್ನು ಹಾಡು, ನೃತ್ಯದ ಮೂಲಕ ಮನಸೆಳೆದು ಊರವರ ಸಮ್ಮುಖದಲ್ಲಿ ಮದುವೆಯಾಗಿ ಅದೇ ಊರಿನಲ್ಲಿ ನೆಲೆನಿಲ್ಲುವುದು ‘ಮೂರು ಹಾಯಿ ದೋಣಿಗಳು’ ಕಥೆಯಲ್ಲಿದೆ.

 ಇಲ್ಲಿನ ಇನ್ನೊಂದು ಆಕರ್ಷಕ ಕಥೆ ‘ಪುಟ್ಟಜ್ಜಿಯ ಹಲೋ ಹಲೋ’.  ಮುಂಬೈನಿಂದ ಬಂದ ಪುಟ್ಟಜ್ಜಿ ಮಗಳು ಹೊಸ ಮೊಬೈಲನ್ನು ಅಜ್ಜಿಗೆ ಕೊಡಿಸುತ್ತಾಳೆ ಇದರಿಂದ ಪುಟ್ಟಜ್ಜಿ ಮನೆಗೆಲಸವನ್ನೆಲ್ಲ ಬದಿಗಿಟ್ಟು ಬೆಳಿಗ್ಗೆಯಿಂದ ಸಂಜೆಯವರೆಗೆ ಮನೆಯಿಂದ ಹೊರಗೆ ಬರುವುದಿಲ್ಲ. ಇಡೀ ದಿನ ಮೊಬೈಲ್ ಗುಂಡಿ ಒತ್ತುವುದರಲ್ಲಿಯೇ ತಲ್ಲೀನಳಾಗುತ್ತಾಳೆ. ಮಾರನೆ ದಿನ ಬೆಳಗ್ಗೆ ಎದ್ದು ನೋಡಿದಾಗ ಅಜ್ಜಿಯ ಮೊಬೈಲ್ ಕಾಣೆಯಾಗಿತ್ತು. ಆದರೆ ಮೊಬೈಲ್ ರಿಂಗ್ ಧ್ವನಿ ಬರುತ್ತಿತ್ತು. ಎಲ್ಲಿ ಹುಡುಕಾಡಿದರೂ ಸಿಗದಿದ್ದಾಗ ಪಕ್ಕದ ಮನೆಯ ಹುಡುಗನನ್ನು ಕರೆದು ಹುಲ್ಲಿನ ಅಟ್ಟ ಹತ್ತಿಸಿದಾಗ ಹುಲ್ಲಿನಡಿ ಮೊಬೈಲ್ ಸಿಗುತ್ತದೆ. ಇಲಿ ಮೊಬೈನ್ನು ಅಲ್ಲಿಗೆ ಕೊಂಡೊಯ್ದು ಇಟ್ಟಿತ್ತು. ಮಗಳು ತಾನು ಕರೆ ಮಾಡಿದರೂ ಸ್ವೀಕರಿಸದ ಬಗ್ಗೆ ಕೋಪ ಮಾಡುತ್ತಾಳೆ. ಅಲ್ಲಿಂದ ಈ ಮೊಬೈಲ್ ಸಹವಾಸ ಸಾಕು ಎನ್ನುತ್ತಾ ಪುಟ್ಟಜ್ಜಿ ಅದನ್ನು ಬಿಟ್ಟು ಮಕ್ಕಳಿಗೆ ಕಥೆ ಹೇಳುತ್ತಾಳೆ. ಮೊಬೈಲ್ ಇಡೀ ದಿನ ನಮ್ಮ ಕೆಲಸ, ಸಮಯವನ್ನು ಕೊಲ್ಲುತ್ತದೆ ಎನ್ನುವ ನೀತಿ ಇದರಲ್ಲಿದೆ.

 ಊರಿಗೆ ಬಂದು ಪ್ರತಿದಿನ ಆಡುತ್ತಿದ್ದ ಕೋಗಿಲೆ ಮಾವಿನ ಮರಗಳ ಮಾರಣಹೋಮವಾಗಿದ್ದಕ್ಕೆ ಬರುವುದನ್ನು ನಿಲ್ಲಿಸುವುದು, ಊರಿನ ಯಜಮಾನನ್ನು ಅಲ್ಲಿನ ಮಕ್ಕಳು ಭೇಟಿಯಾಗಿ ಮರ ಕಡಿದಿದ್ದು ಏಕೆ ಎಂದು ಕೇಳಿದಾಗ ತನ್ನ ತಪ್ಪನ್ನು ಒಪ್ಪಿಕೊಂಡು ಆತ ಅನೇಕ ಮಾವಿನ ಗಿಡಗಳನ್ನು ನಡೆಸುವುದು, ಮಾರನೇ ವರ್ಷವೇ ಸೀಸನ್‌ನಲ್ಲಿ ಬಂದ ಕೋಗಿಲೆ ಮತ್ತೆ ಹಾಡಲು ಆರಂಭಿಸುವುದು, ಇದು ಹಕ್ಕಿ ಮತ್ತು ಮರಗಿಡಗಳ ಸಂಬಂಧ ಚಿತ್ರಿಸುವ ‘ಕೋಗಿಲೆ ಕೋಗಿಲೆ’ ಎಂಬ ಕಥೆಯದ್ದಾಗಿದೆ. 

ಇದೇ ರೀತಿಯ ಇನ್ನೊಂದು ಕಥೆ ‘ಪಿಕಳಾರದ ಹಕ್ಕಿಗಳು’. ಇದರಲ್ಲಿ ಮರಗಳ ಹನನ, ಅಣೆಕಟ್ಟು ನಿರ್ಮಾಣ ಮತ್ತು ಕಾರ್ಖಾನೆಗಳು ತಲೆ ಎತ್ತುವುದರಿಂದ ಕಾಡುಗಳು ನಾಶವಾಗುತ್ತಿವೆ. ಹಕ್ಕಿಗಳಿಗೆ ಗೂಡು ಕಟ್ಟಲು, ಸಂತಾನ ಮಾಡಲು ಅವಕಾಶ ಇಲ್ಲದಂತಾಗಿದೆ. ಪ್ರತಿವರ್ಷ ಆಯಾಯ ಸೀಸನ್‌ನಲ್ಲಿ ಬರುವ ಹಕ್ಕಿಗಳು ಬರುವುದನ್ನು ನಿಲ್ಲಿಸುತ್ತವೆ. ಅಭಿವೃದ್ಧಿ ಹೆಸರಲ್ಲಿ ಕಾಡು ನಾಶ ನಡೆಯುತ್ತಿರುವುದನ ಇದು ಸಾರುತ್ತದೆ.

  ಈ ಪರಿಸರ ಸಮುದ್ರವನ್ನು ಹೇಗೆ ನಿರ್ಮಾಣ ಮಾಡಿತು, ನದಿಗಳೇಕೆ ಹರಿಯುತ್ತವೆ ಎನ್ನುವ ಅಪೂರ್ವದ ಮಾಹಿತಿಯುಳ್ಳ ಮಕ್ಕಳ ಕಥೆ  ‘ಹರಿವ ನದಿ’ಯಲ್ಲಿ ದೆ. ಹಿರಿಯಜ್ಜನೊಬ್ಬ ಮಕ್ಕಳ ಕಥೆಯಿಂದ ಸಂತೋಷಭರಿತನಾದದ್ದು, ಹೂವುಗಳಿಗೂ ದುಂಬಿಗಳಿಗೂ ಇರುವ ಸಂಬಂಧ, ಅವು ಮಕರಂದ ಹೀರುವುದರಿಂದ ಆಗುವ ಪ್ರಯೋಜನ, ಪ್ರಕೃತಿ ಬೆಳೆಸುವಲ್ಲಿ ಬೀಜ, ಮರ, ಹಣ್ಣು, ಹಕ್ಕಿ-ಪಕ್ಷಿಗಳು, ಪ್ರಾಣಿಗಳ ಮಧ್ಯೆ ಇರುವ ಸರಪಳಿಯ ಸಂಬಂಧ, ನಾವು ನಮ್ಮ ಹೆಸರುಳಿಸಬೇಕೆಂದರೆ ಬಂಡೆಯಂತೆ ಉಳಿಯೇಟು ತಿಂದು ಪ್ರತಿಮೆ ಆಗಬೇಕು. ಹೆದರಿ ಕುಳಿತರೆ ಬಂಡೆಯಾಗಿಯೇ ಉಳಿಯಬೇಕಾಗುತ್ತದೆ ಎಂಬ ಸಂದೇ ಸಾರುವ ಕಥೆ ಇದರಲ್ಲಿದೆ.   

 ಒಟ್ಟಿನಲ್ಲಿ, ಇಲ್ಲಿರುವ ಎಲ್ಲಾ ಕಥೆಗಳು ಪರಿಸರದ ಕುರಿತಾಗಿವೆ. ಮಕ್ಕಳು ಪರಿಸರದ ಕುರಿತು ಹೆಚ್ಚಿನ ಮಾಹಿತಿಯನ್ನು ಹೊಂದಿದಲ್ಲಿ ಪರಿಸರವನ್ನು ಇನ್ನಷ್ಟು ಕಾಪಾಡಬಹುದು. ಮಕ್ಕಳ ತಲೆಯಲ್ಲಿ ಈಗಲೇ ಪರಿಸರದ ಬೀಜವನ್ನು ಬಿತ್ತಿದಲ್ಲಿ ಅದು ಗಿಡವಾಗಿ, ಬೃಹದಾಕಾರವಾಗಿ ಬೆಳೆದು ಉತ್ತಮ ಕಾಡು, ಪರಿಸರ, ಬೆಳೆಸಬಹುದು, ಕಾಪಾಡಬಹುದು ಎನ್ನುವ ಸಂದೇಶದ ಕೃತಿ ಇದಾಗಿದೆ. 

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೯.೦೮.೨೦೨೬

............................


Comments

Popular posts from this blog