ಸಮೃದ್ಧ ಬಾಲ್ಯದ ಅನುಭವಗಳ


‘ಬದುಕಿನ ಕನ್ನಡಿಯಲ್ಲಿ’


  ಬದುಕಿನಲ್ಲಿ ಸಮೃದ್ಧವಾದ ಬಾಲ್ಯದ ಅನುಭವಗಳ ಜೊತೆಗೆ ಮಾನವೀಯ ಸಂಬಂಧಗಳ ಸೂಕ್ಷ್ಮಗಳು ಇರುವುದನ್ನು ಲೇಖಕಿ, ಸಹಾಯಕ ಪ್ರಾಧ್ಯಾಪಕಿ,  ಮೇದಿನಿ ಕೆಸವಿನಮನೆ ‘ಬದುಕಿನ ಕನ್ನಡಿಯ’ ಮೂಲಕ ಆಪ್ತವಾಗಿ ಚಿತ್ರಿಸಿದ್ದಾರೆ. ಅವರ ಅಪ್ಪನ ಪ್ರತಿಬಿಂಬ, ಮಲೆನಾಡಿನ ಪ್ರತಿಬಿಂಬ ಮತ್ತು ಬಾಲ್ಯದ ಪ್ರತಿಬಿಂಬ ಇವು ಮೂರು ಈ ಬದುಕಿನ ಕನ್ನಡಿಯಲ್ಲಿ ನಮಗೆ ಕಂಡುಬರುತ್ತವೆ. ಅವು ಮನಸ್ಸಿಗೆ ಮುಟ್ಟಿ, ಹೃದಯಕ್ಕೆ ತಲುಪುತ್ತವೆ.

 ಬದುಕಿನ ಪ್ರತಿಕ್ಷಣದಲ್ಲೂ ಅಪ್ಪನ ಬಿಂಬವನ್ನು ಕಾಣುತ್ತಾ, ತಮ್ಮ ಜೀವನ ಅನುಭವದ ಸುಖ, ದುಃಖ, ನೋವು, ನಲಿವುಗಳ ಜೊತೆಗೆ ವ್ಯಕ್ತಿಯ ಬದುಕು, ಸಮಾಜದ ಬದಲಾವಣೆ, ಮೌಲ್ಯಗಳ ಮಹತ್ವ, ಸಂಬಂಧಗಳ ತಂತುವನ್ನು ನವಿರಾಗಿ ಬೆಸೆಯುತ್ತ ಸಾಗುವ ಈ ಕೃತಿ ಮನುಷ್ಯನ ಒಳಜಗತ್ತನ್ನು ಶ್ರೀಮಂತಗೊಳಿಸುವ ನಿಜವಾದ ಬದುಕಿನ ಕನ್ನಡಿ ಆಗಿದೆ. ಈ ಕೃತಿಯಲ್ಲಿ ೩೫ ಬರೆಹಗಳಿವೆ. ಇವು ಒಂದಕ್ಕೊಂದು ಪೂರಕವಾಗಿಲ್ಲ. ಪ್ರತಿ ಲೇಖನದಲ್ಲೂ ಖುಷಿ, ನೋವು, ಬೇಸರ, ಸಮಸ್ಯೆ, ಜಗಳ ಮುಂತಾದ ವಿವಿಧ ಮುಖಗಳಿವೆ. ಈ ಮುಖಗಳನ್ನು ಕನ್ನಡಿಯಲ್ಲಿ ನೋಡಿದಾಗ ಕಾಣುವ ಪ್ರತಿಬಿಂಬ ತನ್ನ ಅಪ್ಪನದು ಎಂದು ಲೇಖಕಿ ಹೇಳುತ್ತಾರೆ.

 ಬದುಕಿನ ಪ್ರತಿ ಸನ್ನಿವೇಶದಲ್ಲೂ ಅಪ್ಪನೇ ಎದುರಾಗುವುದು, ನನ್ನ ಬದುಕಿನ ಕನ್ನಡಿಯಲ್ಲಿ ಕಾಣುವುದು ಅಪ್ಪನದೇ ಬಿಂಬ, ಅಪ್ಪನೇ ಹೀರೋ, ಗೆಳೆಯನಾಗಿ ಮಾರ್ಗದರ್ಶಿಯಾಗಿ, ತಾಳ್ಮೆಯಿಂದ ಆಲಿಸುವ ಆಪ್ತನಾಗಿದ್ದ. ಅಪ್ಪ ಈಗಿಲ್ಲ. ಆದರೆ ಆ ಜಾಗದಲ್ಲಿ ನೋವು, ವಿಷಾದ ಇದೆ. ಬದುಕನ್ನು ರೂಪಿಸಿ ವ್ಯಾಪಿಸಿದ ಅಪ್ಪ ಈಗ ಕನ್ನಡಿಯ ಪ್ರತಿಬಿಂಬ. ಹಾಗಾಗಿ ಬದುಕಿನ ಕನ್ನಡಿಯಲ್ಲಿ ಅಪ್ಪನದೇ ಪ್ರತಿಬಿಂಬ ಎಂದು ಹೆಸರಿಟ್ಟಿರುವುದಾಗಿ ಲೇಖಕಿ ಹೇಳುತ್ತಾರೆ.

 ಕೃತಿಯ ಕುರಿತು:

 ಸಾಗರ ತಾಲೂಕಿನ ಮುಳುಗಡೆ ಪ್ರದೇಶದವರಾದ ಲೇಖಕಿ ಇದರಲ್ಲಿ ಆ ಪ್ರದೇಶದ, ಕುಗ್ರಾಮಗಳ ಸ್ಥಿತಿಗತಿ, ಇಂದಿಗೂ ಬದಲಾಗದ ವ್ಯವಸ್ಥೆ, ತಾನು ಶಾಲೆ -ಕಾಲೇಜಿಗೆ ಹೋಗುವಾಗ ಇದ್ದ ಸ್ಥಿತಿ, ತನ್ನ ಊರಿನವರ  ಜೊತೆ ಇಂದಿಗೂ ಇರುವ ಬಾಂಧವ್ಯ, ಗುಡ್ಡ- ಬೆಟ್ಟಗಳಲ್ಲಿ ನಡೆದಾಡಿದ್ದು, ಪಪ್ಪಾಯ, ಹಲಸು, ಪೇರಳೆ, ನೇರಳೆ, ಗೇರುಗಳನ್ನು ಗಿಡಮರಗಳಿಂದ ಕಿತ್ತು ತಿಂದಿದ್ದು, ಸಂಪಿಗೆ, ಮುಳ್ಳುಹಣ್ಣಿಗಾಗಿ ರಜಾ ದಿನದಲ್ಲಿ ಗುಡ್ಡ ಹತ್ತಿ ಕಿತ್ತಿದ್ದು, ಭಯಾನಕ ಮಳೆಯಲ್ಲೂ ಗದ್ದೆಯಂಚಿನ ಜಾರುವ ಹಾಳಿ, ಗುಂಡಿ- ಗೊಟರುಗಳಿಂದ ಕೂಡಿದ ಕಾಲುದಾರಿಯಲ್ಲಿ ನೀರಾಡುತ್ತ, ಕೆಸೆರೆರೆಚಿಕೊಳ್ಳುತ್ತ್ತಾ, ಮುರಿದ ಕೊಡೆಯಲ್ಲಿ, ಪ್ಲಾಸ್ಟಿಕ್ ಕೊಪ್ಪೆಯಲ್ಲಿ, ಮೈ ಒದ್ದೆ ಮಾಡಿಕೊಂಡು ಶಾಲೆಗೆ ಹೋದ ದಿನಗಳನ್ನು,  ಬಾಲ್ಯದಲ್ಲಿ ಆದ ಅನುಭವಗಳನ್ನು ಬಹು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ.

 ತನ್ನ ಊರು ಕೆಸವಿನಮನೆ ಜೊತೆಗಿನ ಬಾಂಧವ್ಯ, ಬದುಕಿನ ಅಪೂರ್ವವಾದ ಪವಿತ್ರ ಕ್ಷೇತ್ರ. ಅಲ್ಲಿನ ಗುಡ್ಡಗಳಲ್ಲಿ ಅದೆಷ್ಟು ಹಣ್ಣುಗಳು ನನಗಾಗಿ ಕಾಯುತ್ತಿವೆ. ಅದೆಷ್ಟು ಮರಗಳು ನನ್ನನ್ನು ನೆನೆಯುತ್ತಿರಬಹುದು. ಅಪ್ಪ ಬೆಳೆಸಿದ ತೋಟದಲ್ಲಿ ಹಣ್ಣುಗಳು ನನಗಾಗಿ ಕಾಯುತ್ತಿರಬಹುದು. ನಾನ್ಯಾವಾಗ ಹೋಗಲಿ ಅಲ್ಲಿಗೆ ಎಂದು ಅಲ್ಲಿನ ನೆನೆಪನ್ನು ಪ್ರತಿ ಲೇಖನದಲ್ಲೂ ಮಾಡಿಕೊಳ್ಳುವುದನ್ನು ಕಾಣಬಹುದು. ‘ಕೆಸವಿನಮನೆ ಎಂಬ ಧ್ಯಾನ’ ದಲ್ಲಿ ತನ್ನ ಊರಿಗೆ ಕೆಸವಿನಮನೆ ಎಂದು ಹೆಸರು ಬಂದಿದ್ದು ಹೇಗೆ ಎನ್ನುವುದನ್ನು ಇತಿಹಾಸ ಸಮೇತ ಚಿತ್ರಿಸಿದ್ದಾರೆ. ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ಧವಾದ ಗೇರುಸೊಪ್ಪೆಯ ಚೆನ್ನಬೈರಾದೇವಿ ಈ ಪ್ರದೇಶಕ್ಕೆ ಬಂದಾಗ ತಮ್ಮ ಮನೆಯಲ್ಲಿ ಉಳಿದದ್ದು, ದಟ್ಟ ಹಸುರಿನ ಕೆಸುವಿನ ಗೊಜ್ಜು ಉಂಡು ಅದರ ರುಚಿಗೆ ಮಾರುಹೋಗಿ ಒಂದಷ್ಟು ಜಾಗವನ್ನು ಹಿರಿಯರಿಗೆ ಬರೆದು ಕೊಟ್ಟಿದ್ದರ ಹಿನ್ನೆಲೆಯನ್ನು ನೆನೆಪಿಸುತ್ತಾರೆ. ತನಗೆ ಮೇದಿನಿ ಎಂದು ಹೆಸರಿಟ್ಟ ಕಾರಣವನ್ನೂ ಇಲ್ಲಿ ಬರೆದಿದ್ದಾರೆ.

  ಮುಂದಿನ ಬರೆಹಗಳಲ್ಲಿ, ಮನೆಯಲ್ಲಿನ, ಶಾಲೆಯಲ್ಲಿನ ಘಟನೆಗಳನ್ನು ಬಿಚ್ಚಿಡುತ್ತಾರೆ. ಚಳಿಗಾಲದಲ್ಲಿ ಚಳಿ ಕಾಯಿಸುವುದು, ಇಂಥ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಕುಟುಂಬದವರೊಬ್ಬರು ಸಾವನ್ನಪ್ಪಿದ್ದು, ಅವರ  ಚಿತೆಯ ಬೆಂಕಿಯ ಚಿತೆಯಲ್ಲಿ ಚಳಿ ಕಾಯಿಸಿದ್ದನ್ನು ನೆನೆಪಿಸುತ್ತಾ, ‘ಬೆಂಕಿ ಘೋರ, ಮೈಹೇವರಿಸುತ್ತದೆ. ಚಳಿಗಾಲದಲ್ಲಿ ಮಲೆನಾಡಿನಲ್ಲಿ ಮೈ ಕಾಯಿಸಿಕೊಳ್ಳಲು ಬೆಂಕಿ ಹಾಕುವುದು ಸಾಮಾನ್ಯ. ಅದು ಅಪಾಯವಾಗದಂತೆ ಗಮನಿಸಬೇಕು’ ಎನ್ನುತ್ತಾರೆ. ಬಾಲ್ಯದಲ್ಲಿ ಇದ್ದ ಉಂಗುರದ ಹುಚ್ಚು,   ನಾಗರಪಂಚಮಿಯ ಸಂಭ್ರಮ, ಕೆಂಪಾದ ಮದರಂಗಿ ಹಚ್ಚಿ ಸಂಭ್ರಮಿಸಿದ್ದು, ವೈಜಯಂತಿ ಮಾಲೆಗೆ ಮರುಳಾಗಿದ್ದು, ತನ್ನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತನಗೆ ಅದೇ ಮಾಲೆ ದೊರೆತಿದ್ದು, ಮಲೆನಾಡಿನಲ್ಲಿ ಚಪ್ಪರ ಹಾಗೂ ಅಟ್ಟದ ಸಂಭ್ರಮ, ಆಟದ ಕಂಬಗಳನ್ನು ಹಿಡಿದು ಆಟವಾಡಿದ್ದು, ರಂಗೋಲಿ ಬಿಡಿಸಿ ಸಂತೋಷಪಡುತ್ತಿದ್ದುದು,  ಜೋಕಾಲಿಕಟ್ಟಿ ಆಡುವುದು, ಸ್ವಾತಂತ್ರ್ಯ ದಿನ ಉಲ್ಟಾ ಹಾರಿಸಿದ ಧ್ವಜವನ್ನು ತನ್ನ ತಂದೆ ಸರಿ ಮಾಡಿ ಬಂದಿದ್ದು, ಶಾಲೆಯಲ್ಲಿ ದ್ವಜ ಸಿಗದೆ ಮತ್ತೆ ಅದೇ ಮಾದರಿಯಲ್ಲಿ  ಹೊಲಿಸಿದ್ದು, ರಜೆಯ ದಿನಗಳಲ್ಲಿ ತಂದೆಯೊಟ್ಟಿಗೆ ಕಾಡಿಗೆ ಸೊಪ್ಪು ಕಡಿಯಲು ಹೋಗಿ ಬೆರಳು ಕಡಿದುಕೊಂಡಿದ್ದು... ಹೀಗೆ ಹತ್ತು ಹಲವು ನೆನಪುಗಳ ಸರಮಾಲೆಯನ್ನು ಇಲ್ಲಿ ಬಹುಚೆಂದವಾಗಿ ಬಿಚ್ಚಿಟ್ಟಿದ್ದಾರೆ.

 ದೀಪಾವಳಿ ಸಮಯದಲ್ಲಿ ಬೂರ್ಗಳವು ಎಂಬ ಪದ್ಧತಿ ಮಲೆನಾಡಿನಲ್ಲಿ ಇರುವುದನ್ನು ಕೃತಿಯಲ್ಲಿ ನೆನೆಪಿಸಿದ್ದಾರೆ. ಬಲೀಂದ್ರನನ್ನು ತಂದು ಕೂಡ್ರಿಸಿದ ರಾತ್ರಿ ಈ ರೀತಿ ಕಳ್ಳತನ ಮಾಡುತ್ತಾರೆ. ಈಗಿನ ಮಕ್ಕಳು  ಬೂರ್ಗಳವು  ಮಾಡುವ ಉತ್ಸಾಹ ಮತ್ತು ಕುತೂಹಲವನ್ನು ಹೊಂದಿಲ್ಲದಿರುವುದನ್ನು ತೋರಿಸಿಕೊಡುತ್ತಾರೆ. ಹಳ್ಳಿಗಳಲ್ಲಿ ನಡೆಯುತ್ತಿದ್ದ ನವರಾತ್ರಿ, ಆಲೆಮನೆಯ ಸವಿನೆನಪು, ಅಲ್ಲಿನ ಬೆಲ್ಲದ ಪರಿಮಳ, ಕಬ್ಬು ತಿಂದಿದ್ದು, ಬೆಲ್ಲದ ಉಂಡೆ ತಿಂದಿದ್ದು, ಮನೆಯಲ್ಲಿ ಗೊತ್ತಿಲ್ಲದೆ ಆಲೆಮನೆಗೆ ಹೋಗಿ ಬರುವುದು, ಶಿವರಾತ್ರಿ ಹಬ್ಬದ ನೆನಪು, ಗೌರಿ ಮತ್ತು ಗಣೇಶ ಹಬ್ಬದ ನೆನಪು, ಗಣೇಶ ವಿಸರ್ಜನೆಯ ಮೆರವಣಿಗೆ ಅನುಭವ, ವಿಸರ್ಜನೆಯಾದ ಗಣಪತಿಯನ್ನು ತಂದು ಮನೆಯಲ್ಲಿ ಕೂಡ್ರಿಸಲು ಮಕ್ಕಳು ಪಡುವ ಪಾಡು... ಇವೆಲ್ಲವನ್ನು ಸ್ಮರಿಸುವ ಮೂಲಕ ಇದನ್ನು ಅನುಭವಿಸಿದವರಿಗೆ ಆ ನೆನೆಪು ಮರುಕಳಿಸುವಂತೆ ಮಾಡಿದ್ದಾರೆ.

 ‘ತೆಳ್ಳವ್ವು’ ಎಂಬ ಮಲೆನಾಡಿನ ವಿಶಿಷ್ಟವಾದ ಬೆಳಗಿನ ತಿಂಡಿ ಬಗ್ಗೆ ವಿಶೇಷವಾದ ಬರಹ ಇದೆ. ದೋಸೆ ಅಕ್ಕಿಯೊಂದಿಗೆ ಮೆಂತೆ, ಉದ್ದು ಹಾಕಿ ಮಾಡುವ ಈ ದೋಸೆ ಹವ್ಯಕರ ಕಿರೀಟಪ್ರಾಯವಾಗಿದೆ. ಮನೆಯಲ್ಲಿರುವ ಸರ್ವ ಸದಸ್ಯರಿಗೂ ಇದು ಪ್ರೀತಿಯ ತಿಂಡಿ. ಬಿಸಿಬಿಸಿಯಾದ, ಗರಿಗರಿಯಾದ ತೆಳ್ಳವ್ವಿಗೆ ಬೆಲ್ಲ ತುಪ್ಪ ಉಪ್ಪಿನಕಾಯಿ ಅಥವಾ ಶೇಖರಣೆಯೊಂದಿಗೆ ಸವಿಯಲು ಕೂತರೆ ತೆಳ್ಳವ್ವು ಹೊಟ್ಟೆಗೆ ಇಳಿದಿದೆ ಗೊತ್ತಾಗುವುದಿಲ್ಲ ಎಂದು ಅದರ ರುಚಿಯನ್ನು ವರ್ಣಿಸುವುದರ ಜೊತೆಗೆ ಬಾಯಲ್ಲಿ ನೀರೂರುವಂತೆ ಮಾಡಿದ್ದಾರೆ.

‘ಹೋಗಬಲ್ಲೆನೆ ಅಲ್ಲಿಗೆ’ ಎಂಬ ಲೇಖನದಲ್ಲಿ ಮತ್ತೆ ಮಲೆನಾಡಿನ ಸೌಂದರ್ಯವನ್ನು ಕಟ್ಟಿಕೊಡುತ್ತಾರೆ. ಮಲೆನಾಡು ಸ್ವರ್ಗದ ಬೀಡು, ಇಲ್ಲಿ ಹರಿಯುವ ಜರಿ ತೊರೆಗಳೆಲ್ಲ ಗಂಗೆ. ಹುಟ್ಟಿದ ತರುಲತೆಗಳೆಲ್ಲ ಮಲಯಾಚಲದ ಶ್ರೀಗಂಧ, ಬಿಡುವ ಕಾಡು ಹಣ್ಣುಗಳೆಲ್ಲ ದೇವಲೋಕದ ಅಮೃತಫಲ ಎಂದು ಹೇಳುತ್ತಾ, ಬಾಲ್ಯ ಕಳೆದ ನಂತರ ಬುದ್ಧಿ ಬೆಳೆದಂತೆ ಇವುಗಳ ಮಹತ್ವ ಗೊತ್ತಾಯಿತು. ಬದುಕಿನ ಅಗಾಧ ನೆಮ್ಮದಿ, ಶಾಂತ ಜೀವನ ಅಂದು ಅರಿವಿಗೆ ಬರಲೇ ಇಲ್ಲ. ಈಗ ಎಲ್ಲವೂ ಅರ್ಥವಾಗುತ್ತಿದೆ. ಆ ಬದುಕು ಬೇಕೆನಿಸುತ್ತಿದೆ ಎಂದು ಸ್ಮರಿಸುತ್ತಾರೆ.

ಬಾಲ್ಯ ಕಳೆದ ತವರೂರ ನೆನೆಪನ್ನು ಸದಾ ಅವಿಸ್ಮರಣೀಯವಾಗುವಂತೆ  ಈ ಕೃತಿಯ ಮೂಲಕ ಲೇಖಕಿ ಇಲ್ಲಿ ನೇಯ್ದಿದ್ದಾರೆ. ನಮ್ಮ ಬಾಲ್ಯವೂ ಹೀಗೆಯೇ ಇತ್ತು ಎನ್ನುವುದು ಮಲೆನಾಡಿನಲ್ಲಿ ಹುಟ್ಟಿ ಬೆಳೆದವರಿಗೆಲ್ಲ ಅನಿಸುತ್ತದೆ. ಬದುಕಿನ ಕನ್ನಡಿಯಲ್ಲಿ ನಮ್ಮ ಬಾಲ್ಯವೂ ಕಾಣುವಂತೆ ಮಾಡಿದ್ದಾರೆ.


-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೪.೦೮.೨೦೨೬

 .........................


Comments

Popular posts from this blog