ಕಥಾ ಲೋಕಕ್ಕೆ ಹೊಸ ಬೆಳಕು ಚೆಲ್ಲುವ 

‘ಫಾಸ್ಟ್ ಆಂಡ್ ಫ್ಯೂರಿಯಸ್’




ಇದು ಇಂದಿನ ಪೀಳಿಗೆಯ ೫೦ ಆಸಕ್ತ ಕಥೆಗಾರರಿಂದ ಬರೆಸಿ, ತಿದ್ದಿ, ವಿಸ್ತರಿಸಿದ ಕಥಾ ಸಂಕಲನ ‘ಫಾಸ್ಟ್ ಆಂಡ್ ಫ್ಯೂರಿಯಸ್’. ಅವ್ವ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಕೌಟುಂಬಿಕ, ಪ್ರೀತಿ-ಪ್ರೇಮ, ಸಾಮಾಜಿಕ, ಭಯಾನಕ, ಪ್ರೇರಣಾದಾಯಕ, ಮಕ್ಕಳ, ವೈಜ್ಞಾನಿಕ, ಭಯಾನಕದ ಕಥೆಗಳಿವೆ. ಹತ್ತಾರು ಭಾವನೆಗಳನ್ನು ಹೊತ್ತ ನವಪೀಳಿಗೆಯವರಲ್ಲಿ ಇರುವ ಸೃಜನಶೀಲ ಬರೆವಣಿಗೆ ಇಲ್ಲಿ ಪ್ರಕಟಗೊಂಡಿದೆ. ಬರೆವಣಿಗೆಯನ್ನು ಜಾಗೃತಗೊಳಿಸುವ ಮೂಲಕ ಅವ್ವ ಪ್ರಕಾಶನ ಕಥಾ ಲೋಕದಲ್ಲೊಂದು ಹೊಸ ಬೆಳಕು, ಸಾಧ್ಯತೆ ಮೂಡುವಂತೆ ಮಾಡಿದೆ.

ಇಲ್ಲಿರುವ ಕಥೆಗಳೆಲ್ಲ ನಮ್ಮನ್ನು ಓದಿಸಿಕೊಂಡು ಹೋಗುವ ಸರಳ ಭಾಷೆಯಲ್ಲಿವೆ. ಇದು ಈ ಬರಹಗಾರರಿಗೆ ಹೊಸ ಕಿಟಕಿ ತೆರೆದಿದೆ. ಇದು ಬಾಗಿಲಾಗಲಿ ಎಂದು ಪ್ರಕಾಶಕರು ಬೆನ್ನುಡಿಯಲ್ಲಿ ಹೇಳಿದ್ದಾರೆ. ಆ ಬಾಗಿಲಿನಿಂದ ಬರುವ ಹೊಸ ಬೆಳಕು, ಗಾಳಿಯನ್ನು ಯುವ ಕಥಾಕಾರರು  ಸ್ವೀಕರಿಸಿ ಇನ್ನಷ್ಟು ಚಿಗಿತುಕೊಳ್ಳಲು, ಭರವಸೆಯ ಲೇಖಕರಾಗಲು  ಇದು ಸಹಾಯಕವಾಗಬಹುದು.  

ಕಥೆಗಳ ಕುರಿತು: 

ಇಲ್ಲಿನ ಪ್ರತಿ ಕಥೆಯಲ್ಲೂ ಒಂದು ಸಂದೇಶವಿದೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು, ಬಾಲ್ಯದ ಸವಿನೆನೆಪುಗಳು, ಪ್ರೀತಿ- ಪ್ರೇಮ, ವಿರಹ, ಸಂಶೋಧನೆ, ಕಾಲೇಜು ದಿನಗಳ ಸ್ಮರಣೆ...ಮೊದಲಾದ ವಿಷಯಗಳ ಬಗ್ಗೆ ಕಥೆಗಳಿವೆ. 

ಪ್ರೀತಿ-ಪ್ರೇಮದ ಕಥೆಗಳಲ್ಲಿ ನಿಷ್ಕಲ್ಮಶ ಪ್ರೀತಿಗೆ ಬೆಲೆ ಇಲ್ಲದಾಗುವುದು, ಪರಿಶುದ್ಧ ಪ್ರೀತಿಯನ್ನು ದೂರ ಮಾಡಲು ಸಾಧ್ಯವಿಲ್ಲ ಎನ್ನುವುದು, ಕಾಲೇಜಿನಲ್ಲಿ ಆರಂಭವಾದ ಪ್ರೀತಿಯಾದರೂ ಮದುವೆಯೇ ಪ್ರೀತಿಗೆ ಮಾನದಂಡವಲ್ಲ ಎಂದುಕೊಂಡು ಇಬ್ಬರೂ ಅಮರ ಪ್ರೇಮಿಗಳಂತೆ ಇರುವುದು, ಪ್ರೀತಿಯ ಹುಡುಗಿಯನ್ನು ಪಡೆದುಕೊಳ್ಳಲು ನಡೆಸುವ ಕಸರತ್ತು ವಿಫಲವಾಗಿ ಏಕಾಂಗಿಯಾಗುವುದು,  ಪ್ರೀತಿಸಿ ಮದುವೆಯಾಗಿ ಇಬ್ಬರೂ ಸಾಧನೆ ಮಾಡುವುದು, ಆ ಹಣದಿಂದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದು, ಸಣ್ಣ ಪರಿಚಯದಿಂದ ಆರಂಭವಾದ ಪ್ರೀತಿ ವಿವಾಹಕ್ಕೆ ಕಾರಣವಾಗಿ ಇಬ್ಬರೂ ಸುಂದರ ಸಂಸಾರ ಸಾಗಿಸುವುದು, ಸಂಗೀತದ ಮೂಲಕ ಪ್ರೀತಿ ಆರಂಭವಾಗಿ ಇಬ್ಬರೂ ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಭಿನ್ನ ಸಿದ್ಧಾಂತ, ಭಿನ್ನ ಕನಸಿನಿಂದಾಗಿ ಪ್ರೇಮಿಗಳು ದೂರವಾಗುವುದು, ನಕ್ಸಲನಾದ ತನ್ನ ಮಾಜಿ ಪ್ರೇಮಿ ಗುಂಡೇಟಿನಿಂದ ಹತನಾದ ಎಂಬ ಸುದ್ದಿ ಓದಿ ಆಕೆ ಗೊಂದಲಕ್ಕೆ ಸಿಲುಕುವುದು... ಇಂತಹ ಉತ್ತಮ ಕಥಾ ಹಂದರದ ವಿಷಯಗಳು ಇಲ್ಲಿವೆ. ಕಥೆಗಳನ್ನು ಸಂಕ್ಷಿಪ್ತವಾಗಿ ಹೇಳುವ ಜಾಣ್ಮೆಯನ್ನು ಇಲ್ಲಿನ ಬರಹಗಾರರು ತೋರಿದ್ದಾರೆ.

ಮಕ್ಕಳ ಕಥೆಯಲ್ಲಿ ಮಕ್ಕಳ ಮನಟ್ಟುವಂತೆ, ಸರಳ ಭಾಷೆಯಲ್ಲಿ, ಅವರಿಗೆ ಇಷ್ಟವಾಗುವ ವಿಷಯದ ಮೂಲಕ ಕಥೆ ರಚಿಸಬೇಕಾಗುತ್ತದೆ. ಇದರಲ್ಲಿ ಗುಬ್ಬಚ್ಚಿಯ ಕಥೆ, ಸುಳ್ಳು ಹೇಳಿ ಶಾಲೆಗೆ ರಜಾಹಾಕುವ ಬಾಲಕನ ಕಥೆ ಮನಸೆಳೆಯುತ್ತದೆ. ಇಂತಹ ಉತ್ತಮ ವಿಷಯಗಳ ಆಯ್ಕೆ ಮೆಚ್ಚುವಂತದ್ದು.

ಕೌಟುಂಬಿಕ ಕಥೆಯಲ್ಲಿ ಧೃತಿಗೆಡದೆ ದುಡಿದರೆ ಬಡತನ ದೂರೀಕರಿಸಬಹುದು, ಆಸ್ತಿ ಕುಟುಂಬವನ್ನು ಒಡೆಯುತ್ತದೆ, ಆದರೆ ಪ್ರೀತಿಯು ವಿಶ್ವಾಸ, ಸಾಮರಸ್ಯ ಬೆಳೆಸುತ್ತದೆ,  ಶಾಲೆಯ ಕಲಿಕೆ ವೇಳೆ ಲೆಕ್ಕದಲ್ಲಿ ದಡ್ಡನಾದವನು ಸಂಸಾರದ ನೊಗಕ್ಕೆ  ಹೆಗಲು ಕೊಟ್ಟಾಗ ಹೇಗೆ ಯಶಸ್ವಿಯಾದ, ಹೆಣ್ಣು ಹೆತ್ತಿದ್ದಕ್ಕೆ ಹೆಂಡತಿಯಿಂದ ಬೇರ್ಪಟ್ಟವನು ಮತ್ತೆ ಬಂದಾಗ ಮಗಳು, ತಾಯಿ ಆತನನ್ನು ನಿರಾಕರಿಸುವುದು... ಈ ವಿಷಯಗಳು ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ.

ಸಾಮಾಜಿಕ ಕಥೆಯಲ್ಲಿ, ಜಿಲ್ಲಾಧಿಕಾರಿಯಾದವನೊಬ್ಬ ಸಮಾಜದ ಹಿತಕ್ಕಾಗಿ ಚಿಂತಿಸಬೇಕೇ ವಿನಾ ಗೆಳೆತನ, ಸಂಬಂಧ ನೋಡಬಾರದೆನ್ನುವ ಸುಂದರ ಸಂದೇಶದ ಕಥೆ ಇದರಲ್ಲಿದೆ. ಅಜಾಗರೂಕತೆ ಬಗ್ಗೆ ಪತ್ನಿಗೆ ಪಾಠ ಮಾಡಿದವನೇ ಅಜಾಗರೂಕತೆಗೆ ಸಿಲುಕುವುದು, ಶಿಕ್ಷಕಿಯೊಬ್ಬಳು ಶಾಲೆಗೆ ಬರುವ ಅನಾಥ ಬಾಲಕನನ್ನು ತನ್ನ ಮಗನಂತೆ ಸಾಕಿ ಸಲುಹುವುದು, ಐಟಿ ಕಂಪನಿಯಲ್ಲಿದ್ದ ಹಳ್ಳಿಯ ಯವಕನಿಗೆ ತನ್ನ ಬಾಲ್ಯದ ಕನಸು ಹಳ್ಳಿಗೆ ಬೆಳಕು ಕೊಡಬೇಕೆನ್ನುವುದು ನೆನಪಾದಾಗ ಕೆಲಸಕ್ಕೆ ರಾಜೀನಾಮೆ ಕೊಟ್ಟು ಗ್ರಾಮೀಣ ಸೋಲಾರ್ ಸಿಸ್ಟಮ್ ಪ್ರಾಜೆಕ್ಟ್ ಮಾಡಲು ಮುಂದಾಗುವುದು, ಸಮಾಜದಲ್ಲಿ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎನ್ನುವ ಸಂದೇಶದ ಕಥೆ...  ಇವೆಲ್ಲವೂ ಉತ್ತಮವಾಗಿದೆ.

ವೈಜ್ಞಾನಿಕ ಕಥೆಗಳಲ್ಲಿ ಪ್ರಕೃತಿಯನ್ನು ಬಳಸಿಕೊಂಡು ಏನೆಲ್ಲ ಸಾಧನೆ ಮಾಡಬಹುದು, ವಿಜ್ಞಾನಿಯೊಬ್ಬ ಅಮರತ್ವ ಸಂಶೋಧನೆಗೆ ಮುಂದಾಗಿ, ಅದಕ್ಕೆ  ತನ್ನನ್ನೇ ಬಳಸಿಕೊಂಡು ಸಾವಿನ ದವಡೆಗೆ ಸಿಲುಕುವುದು ಮೊದಲಾದ ವಿಷಯಗಳಿವೆ.  

ಒಟ್ಟಿನಲ್ಲಿ, ತಂತ್ರಗಾರಿಕೆಯನ್ನರಿತು ನಮ್ಮ ಸುತ್ತಮುತ್ತಲಿನ ವಿಷಯ, ಸಮಸ್ಯೆ, ದಿನನಿತ್ಯದ ಸಂಗತಿಗಳನ್ನೇ ಇನ್ನಷ್ಟು ಆಳವಾಗಿ ತೆಗೆದುಕೊಂಡು ಹೋಗಿ ಕಥೆ ನೇಯುವ ಕೆಲಸ ಈ ಯುವಕರಿಂದ ಆಗಬೇಕಿದೆ. ಕಥೆ ಕಟ್ಟುವ, ಕಥೆ ಹೊಸೆಯುವಲ್ಲಿಯೂ ಇವರೆಲ್ಲ ಯಶಸ್ವಿಯಾಗುವ ಸಾಧ್ಯತೆಗಳನ್ನು ಈ ಸಂಕಲನ ತೋರುತ್ತದೆ. 

.......................

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

 ೨೨.೮.೨೦೧೨೬


Comments

Popular posts from this blog