ಬೆರಗು ಮೂಡಿಸುವ ಕಥೆಗಳು
‘ಓಡಿ ಹೋದಾ ಮುಟ್ಟಿ ಬಂದಾ’
ಈ ಕೃತಿ ಯಶವಂತ್ ಚಿತ್ತಾಲರ ಕಥಾ ಸಂಕಲನ. ಇದರಲ್ಲಿ ದಟ್ಟವಾದ ಅನುಭವಗಳ ಜಗತ್ತಿದೆ. ಅವೆಲ್ಲವೂ ನಮ್ಮ ಕಣ್ಣ ಮುಂದೆಯೇ ನಡೆದಂತೆ ಕಾಣುತ್ತವೆ. ಸ್ಪಷ್ಟವಾದ ಆವರಣದಲ್ಲಿ ಸ್ಪಷ್ಟವಾದ ಪಾತ್ರಗಳಿವೆ. ಇವೆಲ್ಲ ಮುಖಾಮುಖಿಯಾಗಿ ಮಾತಿನಲ್ಲಿ ತೊಡಗಿಸಿಕೊಂಡಂತೆ ಕಾಣುತ್ತದೆ. ಇಲ್ಲಿನ ಕಥೆಗಳೆಲ್ಲಾ ಹೊಸ ಆಯಾಮವನ್ನು ಪಡೆದುಕೊಳ್ಳುತ್ತವೆ. ಒಟ್ಟಿನಲ್ಲಿ ಬೆರಗು ಮೂಡಿಸುವಂತಹ ಕಥೆಗಳು ಇದರಲ್ಲಿವೆ. ಒಟ್ಟೂ ೧೦ ಕಥೆಗಳ ಗುಚ್ಛ ಇದು.
ಹೊಸಾ ಗೆಂಡೆ ನಮ್ಮಾಟಾ
ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ನಾಗವೇಣಿಯ ಪ್ರೀತಿಯಲ್ಲಿ ಬಿದ್ದಿದ್ದ ಉಪನ್ಯಾಸಕ ಪ್ರಭಾಕರ ಇದ್ದಕ್ಕಿದ್ದಂತೆ ರಾಜೀನಾಮೆ ಕೊಟ್ಟು ಹೋಗುತ್ತಾನೆ ನಾಗವೇಣಿ ಅಣ್ಣ ನಾಗೇಶ್ ಮತ್ತು ಪ್ರಭಾಕರ್ ಕ್ಲಾಸ್‌ಮೇಟ್‌ಗಳು, ಜೊತೆಗೆ ಆತ್ಮೀಯರು. ಪ್ರಭಾಕರ್ ಬಿಟ್ಟು ಹೋದ ಸುದ್ದಿ ಹರಡಿ ಎಲ್ಲರಿಗೂ ನಾಗವೇಣಿಯ ಮೇಲೆ ಚರ್ಚೆ ನಡೆಯುತ್ತದೆ. ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ನಾಗವೇಣಿ, ನಾನು ಮದುವೆಯಾದರೆ ಆತನನ್ನೇ ಹೊರತು ಬೇರೆಯವನಲ್ಲ. ಆತ ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸುತ್ತಾಳೆ. ರಾಜೀನಾಮೆ ಕೊಟ್ಟು ಹೋದ ಪ್ರಭಾಕರ ಮತ್ತೆ ಮರಳಿ ಕಾಲೇಜಿನಲ್ಲಿ ಕೆಲಸಕ್ಕೆ ಸೇರುತ್ತಾನೆ. ಪಾಠಮಾಡಲು ತರಗತಿಗೆ ಬಂದಾಗ ಇಬ್ಬರ ಕಣ್ಣುಗಳು ಒಂದಾಗುತ್ತವೆ. ಪ್ರೀತಿ ಬಲಿತು ದೊಡ್ಡವರಾಗುವವರೆಗೆ ಕಾಯೋಣ ಹೊಸ ಆಟ ಚೆನ್ನಾಗಿ ಆಡೋಣ ಎಂದು ಇಬ್ಬರು ತಮ್ಮ ನೋಟದಲ್ಲಿಯೇ ಹೇಳಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಇಬ್ಬರನ್ನೂ ಪ್ರೋತ್ಸಾಹಿಸುತ್ತಾರೆ.
ಬಂದು ಹೋದವನು
ಕುಮಟೆ ಪೇಟೆಗೆ ಬಂದ ಅನಾಮಿಕ ಜಡೆ ಕಟ್ಟುವಷ್ಟು ಉದ್ದದ ಕೂದಲು, ಶುಭ್ರ ಉದ್ದ ತೋಳಿನ ಅಂಗಿ, ದಾಡಿ, ಮೀಸೆ ಹೊಂದಿರುತ್ತಾನೆ. ಜನರು ಈತನನ್ನು ಬಾವಾಜಿ ಎಂದು ನಂಬುತ್ತಾರೆ. ಈತ ವಾಸಸ್ಥಾನವನ್ನು ಬದಲಿಸುತ್ತಿರುತ್ತಾನೆ. ಈತನ ಆಗಮನದ ಹಿಂದೆ ಹೆಣ್ಣೊಬ್ಬಳು ಇರಬೇಕೆಂಬ ಚರ್ಚೆ ಊರಿನಲ್ಲಿ ನಡೆಯುತ್ತದೆ. ಒಂದು ದಿನ ದೊಡ್ಡಮನೆಯ ಅಂಗಳಕ್ಕೆ ಮಾರಮ್ಮನ ಪೆಟ್ಟಿಗೆ ಹೊತ್ತು ಗೆಜ್ಜೆ ಕಟ್ಟಿ ಸದ್ದು ಮಾಡುತ್ತಾ, ಡೋಲು ಬಾರಿಸುತ್ತಾ ಇಬ್ಬರು ಆಗಮಿಸುತ್ತಾರೆ. ಈ ವೇಷ ಹಾಕಿಕೊಂಡು ಅನಾಮಿಕರು ಬಂದಿದ್ದಾರೆ ಎಂದರಿತು ಇವರನ್ನು ಊರವರು ಸುತ್ತುವರಿಯುತ್ತಾರೆ. ಜೊತೆಗೆ ಎಳೆದಾಟ ನಡೆದು ಗಲಾಟೆ ನಡೆಯುತ್ತದೆ. ಈ ವೇಳೆ ಆ ದೇವರು ಹೊತ್ತವನು ಚಾಟಿಯಿಂದ ತನಗೆ ಹೊಡೆದುಕೊಳ್ಳುತ್ತಾನೆ. ಇದರಿಂದ ಹಲವರು ಪೆಟ್ಟು ತಿನ್ನುತ್ತಾರೆ. ಆದರೆ ಆತ ತನ್ನ ವೇಷದೊಂದಿಗೆ ಬಸ್ಟ್ಯಾಂಡಿಗೆ ತೆರಳಿ ಬಸ್ ಹತ್ತಿ ಹೋಗುತ್ತಾನೆ. ಇತ್ತ ಅವರ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ಕೊಡುತ್ತಾರೆ. ಆಗ ಊರವರು ‘ಮದುವೆಯಾಗದ, ಬುದ್ಧಿ ಇಲ್ಲದ ಹುಂಬ ಹುಡುಗರ ಕೆಲಸ ಇದು’ಎಂದು ತಮ್ಮಲ್ಲಿ ಹೇಳಿಕೊಳ್ಳುತ್ತಾರೆ ಹುಡುಗರಿಗೆ ಬುದ್ಧಿ ಕಲಿಸಲು ಊರಿನ ಮೂವರು ಹೆಂಗಸರು ಮಾಡಿದ ಕೆಲಸ ಇದು ಎಂಬ ಸುದ್ದಿ ಹರಿದಾಡಿತು.
ಅಪ್ಪ
ತನ್ನ ತಂದೆ ಯಾರೆಂದು ಗೊತ್ತಿಲ್ಲದ ೧೩ರ ಮಗ ತಾಯಿಗೆ ಅಪ್ಪ ಯಾರು ಎಂದು ಕೇಳುವುದು, ಮುಖದ ಮೇಲೆ ಕಪ್ಪು ಮಚ್ಚೆ ಇದ್ದುದರಿಂದ ಅನಿಷ್ಟ ಎಂದು ಮದುವೆಯಾಗದೆ ಹಲವರಿಂದ ತಿರಸ್ಕರಿಸಲ್ಪಟ್ಟಿದ್ದ ತನ್ನ ಜೀವನದಲ್ಲಿ ಮದುವೆಯಾಗದೆ ನಡೆದ ಘಟನೆಗಳನ್ನೆಲ್ಲಾ ಆಕೆ ವಿವರಿಸುವುದು, ಕಾಲೇಜಿನಲ್ಲಿ ವಿಜ್ಞಾನ ಪಾಠ ಮಾಡುವ ವಿಧುರನ ಜೊತೆ ನಡೆದ ದೈಹಿಕ ಸಂಬಂಧ, ನಂತರ ಆತ ಅಮೆರಿಕಾಗೆ ತೆರಳುವುದು, ಮಗಳ ಸಂಬಂಧ ಗೊತ್ತಿದ್ದ ಆಕೆಯ ತಂದೆ-ತಾಯಿ ತೀರ್ಥಯಾತ್ರೆ ನೆಪದಲ್ಲಿ ಮನೆಬಿಟ್ಟು ಹೋಗಿ ತಮ್ಮ ಆಸ್ತಿಯನ್ನೆಲ್ಲಾ ಆಕೆಯ ಹೆಸರಿಗೆ ಬರೆಯುವುದು, ಅಂತ್ಯದಲ್ಲಿ ಮಗನ ಹುಟ್ಟಿಗೆ ಕಾರಣನಾದ ವ್ಯಕ್ತಿ ಆತನ ಶಾಲೆಗೆ ಆಗಮಿಸಿ, ಗುರುತಿಸಿ, ಅಮ್ಮನಿಗೆ ಕೊಡುವಂತೆ ಬಂಗಾರದ ಉಂಗುರ ಕೊಡುವುದು ಈ ಕಥೆಯ ಸಾರಾಂಶ.
ಓಡಿ ಹೋದಾ ಮುಟ್ಟಿ ಬಂದಾ
ಈ ಕಥೆಯಲ್ಲಿ ಸಾಯುವ ಮುನ್ನ ಕಥೆಗಾರ್ತಿ, ಒಗಟು, ಗಾದೆಮಾತುಗಳ ಖನಿ ತುಂಗಕ್ಕ ಎಂಬ ವಿಧವೆ ಅಜ್ಜಿ ಸಾಯುವ ಮುನ್ನ ಹೇಳಿದ ಮಾತಿದು. ಆಕೆ ಸತ್ತ ನಂತರ ಯಾರಿಗಾಗಿ, ಯಾಕಾಗಿ ಈ ಮಾತು ಹೇಳಿದಳು, ಇದರರ್ಥವೇನು ಎಂಬ ಚರ್ಚೆ ಹಿರಿ-ಕಿರಿಯರಲ್ಲಿ ಆರಂಭವಾಗುತ್ತದೆ. ಇನ್ನೊಂದೆಡೆ, ತುಂಗಕ್ಕಳಿಗೆ ಮಕ್ಕಳಿರಲಿಲ್ಲ. ಆಕೆಯ ಗಂಡ ಖೊಜ್ಜಾ (ಷಂಡ) ಆಗಿದ್ದ ಎಂಬ ಮಾತು ಯುವಕರಿಗೆ ಗೊತ್ತಾಗುತ್ತದೆ. ಖೊಜ್ಜಾ ಶಬ್ದದ ಅರ್ಥ ಬಿಡಿಸಲು ಹಳ್ಳಿಯ ಪುಂಡ ಮಕ್ಕಳಿಗೆ ಆಗದೆ ಹಿರಿಯರಿಗೆ ಒಪ್ಪಿಸುತ್ತಾರೆ. ಅವರೂ ಸಹ ಹೇಳುವುದಿಲ್ಲ. ಶಾಲೆಯ ಮುಖ್ಯ ಶಿಕ್ಷಕರಿಗೆ ಹಿರಿಯರು ಈ ವಿಷಯ ಒಪ್ಪಿಸುತ್ತಾರೆ. ಅವರಿಗೆ ಅರ್ಥವಾದರೂ ಹೇಳಲೊಪ್ಪದೆ, ಊರಿನ ಪಂಚಾಯತಿಕೆ ನಿಮಗೆ ಬೇಡ, ಅಭ್ಯಾಸದ ಕಡೆ ಲಕ್ಷ್ಯ ವಹಿಸಿ ಎನ್ನುತ್ತಾರೆ. ಇತ್ತ ಹಿರಿಯರು ಈ ಮಕ್ಕಳಿಗೆ ‘ನೀವೆಲ್ಲ ವಯಸ್ಸಿಗೆ ಬಂದ ಮೇಲೆ ಅರ್ಥವಾಗುತ್ತದೆ’ ಎಂದು ವಿಷಯ ಮುಗಿಸುತ್ತಾರೆ. ಅರ್ಥವಾಗದ ಮಕ್ಕಳು ತಮ್ಮ ಮನೆಗೆ ಹೋಗುತ್ತಾರೆ.
ಹುಳಿ ಮಜ್ಜಿಗೆ ಸಾರು ರಾಜಕಾರಣ
ಕಚೇರಿಯಲ್ಲಿ ಕೆಲಸ ಮಾಡುವ ಶ್ರೀನಿವಾಸ ರಾಮಚಂದ್ರ ಗಡಮ್ ೧೨ ಸಿಬ್ಬಂದಿಗಳಿಗೆ ಬಾಸ್. ಮಧ್ಯಾಹ್ನದ ಊಟ ಮಾಡಿ ಇದೇ ಮೊದಲ ಬಾರಿಗೆ ನಿದ್ದೆ ಮಾಡಿದ್ದ. ಇದನ್ನು ಕಂಡ ಮೇಲಧಿಕಾರಿ ತನ್ನ ಕೋಣೆಗೆ ಕರೆಯಿಸುತ್ತಾರೆ. ಆಗ ತಪ್ಪು ಮಾಡಿದವರಂತೆ ತಲೆ ತಗ್ಗಿಸಿ ಒಳಗೊಳಗೆಯೇ ಇನ್ನು ಹಾಗಾಗಕಾರದೆನ್ನುತ್ತಾನೆ. ಯಾರೂ ಮಾಡದ ತಪ್ಪೆಂಬ ಕಳಂಕವನ್ನು ಕೆಳಸಿಬ್ಬಂದಿ ಈತನಿಗೆ ಅಂಟಿಸುತ್ತಾರೆ, ಅವಮಾನವಾಗುತ್ತದೆ. ಆಗ ಈ ನೌಕರರೆಲ್ಲ ಯೂನಿಯನ್ ಕಟ್ಟಿ ಮೇಲಧಿಕಾರಿಯ ವಜಾಕ್ಕೆ ಆಗ್ರಹಿಸೋಣ ಎಂಬ ಚರ್ಚೆ ನಡೆಸುತ್ತಾರೆ. ಸಂಜೆ ಮನಗೆ ಬಂದಾಗ ಹೆಂಡತಿ ಮೊಸರನ್ನದ ಬದಲಿಗೆ ಹುಳಿಮಜ್ಜಿಗೆ ಸಾರಿನಲ್ಲಿ ಕಲಿಸಿದ ಅನ್ನ ಹಾಕಿದ್ದೆ. ಏನಾದರೂ ತೊಂದರೆ ಆಯಿತೇ ಎಂದು ಪ್ರಶ್ನಿಸುತ್ತಾಳೆ. ಆದರೂ ಆಫೀಸಿನಲ್ಲಾದ ಅನುಭವ ಹೇಳುವುದಿಲ್ಲ. ಆದರೆ ರಾತ್ರಿ ಕನಸಲ್ಲಿ ಏನೋನೋ ಬಡಬಡಿಸುತ್ತಿದ್ದ. ಮಾರನೆ ದಿನ ಹೆಂಡತಿ ಪ್ರಶ್ನಿಸಿದಾಗ ಆಫೀಸಿನಲ್ಲಿ ನಿನ್ನೆ ನಿದ್ದೆ ಹೋದೆ ಎನ್ನುತ್ತಾನೆ. ಕೆಲಸದಿಂದ ತೆಗದುಹಾಕಿಲ್ಲ ತಾನೇ? ಎಂದು ಮರುಪ್ರಶ್ನಿಸುತ್ತಾ, ನಾನೂ ಕೂಡ ಊಟ ಮಾಡಿ ಮಲಗಿದ್ದೆ. ಮಕ್ಕಳು ಮನೆಗೆ ಬಂದರೂ ಎಚ್ಚರವಾಗಲಿಲ್ಲ ಎನ್ನುತ್ತಾ, ಕೆಳಸಿಬ್ಬಂದಿ ಹೇಳಿದಂತೆ ನೀವೇನೂ ಅವರೊಟ್ಟಿಗೆ ರಾಜಕಾರಣಕ್ಕೆ ಸೇರುವುದು ಬೇಡ ಎನ್ನುವ ಸಲಹೆ ಕೊಡುತ್ತಾಳೆ.
ಗೆಳೆಯ
ಪುರುಷೋತ್ತಮನೆಂಬ ಬಾಲ್ಯದ ಗೆಳೆಯ ಒಂದು ದಿನ ನಿರೂಪಕರ ಮನೆಗೆ ಬರುತ್ತಾನೆ. ಎಂಟು ದಿನ ಉಳಿಯುವ ಇರಾದೆ ವ್ಯಕ್ತಪಡಿಸುತ್ತಾನೆ. ಬಾಲ್ಯದ ದಿನನಗಳನ್ನು ಕುಮಟಾದಲ್ಲಿ ಕಳೆದಿದ್ದನ್ನು ಇಬ್ಬರೂ ನೆನಪಿಸಿ ಮಾತನಡುತ್ತಾರೆ. ಅವನಿಗೆ ಏನೋ ಸಮಸ್ಯೆ ಇದ್ದಂತೆ ಭಾಸವಾಗುತ್ತದೆ. ಆದರೆ ಆತನು ಅದನ್ನು ಹೇಳುವುದಿಲ್ಲ. ತನ್ನ ಅಳಿಯ ಮತ್ತು ಮಗಳು ನಾಸಿಕ್‌ನಲ್ಲಿದ್ದಾರೆ. ಅಳಿಯ ಇಲ್ಲಿಗೆ ತಂದು ಬಿಟ್ಟಿಹೋದ ಎನ್ನುತ್ತಾನೆ. ಮರಳಿ ಹೋಗುವಾಗ ಕಾಲ್ ಮಾಡು ಎಂದು ಇಬ್ಬರೂ ನಂಬರ್ ಕೊಟ್ಟಿದ್ದಾರೆ. ಅದು ಬ್ಯಾಗಿನಲ್ಲಿದೆ ಎನ್ನುತ್ತಾನೆ. ಹೀಗೆ ನಾಲ್ಕಾರು ದಿನ ಕಳೆದ ಮೇಲೆ ಒಂದು ಬೆಳಗ್ಗೆ ಎದ್ದಾಗ ಪುರುಷೋತ್ತಮ ಇರುವುದಿಲ್ಲ. ಹಾಸಿಗೆಯಲ್ಲಿ ಬಿಟ್ಟುಹೋಗಿದ್ದ ಚೀಟಿ (ಮೊಬೈಲ್ ನಂಬರ್‌ನದ್ದು) ಗಮನಿಸಿ ಅವರ ಮಗಳಿಗೆ ಕರೆ ಮಾಡುತ್ತಾರೆ. ಎಲ್ಲರೂ ಸೇರಿ ಹುಡುಕಾಡುತ್ತಾರೆ. ಈತನಿಗೆ ಕರುಳು ಹುಣ್ಣಿದ್ದು, ಅದನ್ನು ವಾರದೊಳಗೆ ಶಸ್ತ್ರ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದರು. ಅದು ನೆನಪಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ ಆಸ್ಪತ್ರೆಗೆ ದಾಖಲಾಗುತ್ತಾನೆ. ಅಲ್ಲಿ ಎಲ್ಲರಿಗೂ ಆತ ಕಂಡುಬರುತ್ತಾನೆ. ಯಾರಿಗೂ ಹೇಳದೆ, ನಾಪತ್ತೆಯಾದ ಗೆಳೆಯನ ಮನೆಗೆ ಬಂದು, ಸುಳ್ಳು ಹೇಳಿ ನೆಲೆಸಿ, ಅಲ್ಲಿಯೂ ಆತನನ್ನೇ ಕಂಗಾಲು ಮಾಡಿದ ಗಳೆಯನ ಕತೆ ಇದೆ.
ತಪರಾಕಿ
ನಿರೂಪಕರ ಮಗನಿಗೆ ಅವರ ಮಗಳು ತಪರಾಕಿ ಹೊಡೆದ ಕಥೆ ಇದು. ಮಗ ಸ್ವಲ್ಪ ಉಡಾಳ ಬುದ್ಧಿಯವನಾಗಿದ್ದು, ತಮ್ಮ ಕಟ್ಟಡದಲ್ಲಿರುವ ಇತರ ಗಂಡಸರ-ಹೆಂಗಸರ, ಕೆಲಸಗಾರರ ಬಗ್ಗೆ ಕಥೆ ಕಟ್ಟಿ ಹೇಳುತ್ತಿದ್ದ. ಒಬ್ಬರಿಗೆ ಮತ್ತೊಬ್ಬರೊಡನೆ ಸಂಬಂಧವಿದೆ ಎಂದೆಲ್ಲ ಸುಳ್ಳು ಹೇಳುತ್ತಿದ್ದ. ಪ್ರತಿದಿನ ರಾತ್ರಿ ಮನೆಯಲ್ಲಿ ತಂದೆಯ ಎದುರು ಈ ಕಥೆ ನಡೆಯುತ್ತಿತ್ತು. ಎಲ್ಲರೂ ನಂಬುವ ಹಾಗೆ ಮಾಡುತ್ತಿದ್ದ. ಈತ ಸಭ್ಯಸ್ಥರ ಬಗ್ಗೆಯ ಕಥೆ ಕಟ್ಟುತ್ತಿದ್ದುದರಿಂದ ಮಗಳು ಒಂದು ದಿನ ತಪರಾಕಿ ಹೊಡೆಯುತ್ತಾಳೆ. ತನ್ನ ಪ್ರೀತಿಯ ತಮ್ಮನಿಗೆ ತಾನೇ ಇಕ್ಕಿದ ತಪರಾಕಿ ಇದು. ಈ ಕಟ್ಟಡದಲ್ಲಿ ಸಿಡಿದ ಏಕಮಾತ್ರ ತಪಾರಕಿಯಾಗಿತ್ತು. ತಮ್ಮ ಈಗ ಅಮೆರಿಕದಲ್ಲಿ ವಿಜ್ಞಾನಿಯಾಗಿದ್ದಾನೆ. ತಾನು ಕೊಲ್ಕೊತ್ತದಲ್ಲಿದ್ದೇನೆ. ಇಬ್ಬರೂ ಮತ್ತೆ ಊರಿಗೆ ಬಂದಾಗ, ಮನೆಯಲ್ಲಿ ಎಲ್ಲರೂ ಒಂದುಗೂಡಿದ ಕ್ಷಣವನ್ನು, ಹಳೆಯ ಘಟನೆ ನೆನಪಾದುದನ್ನು ಈ ಕಥೆಯಲ್ಲಿ ನಿವೇದಿಸಿದ್ದಾರೆ.
ಒಬ್ಬ ಮುದುಕ ಮತ್ತು ಅವನ ಸೇವಕ
ಪಾರಸಿ ಸಮುದಾಯದ ಮಾನೆಕ್ ಜೀ ಎನ್ನುವ ವೃದ್ಧ ಮುಂಬೈನ ಬಾಂದ್ರಾದಲ್ಲಿ ಅತ್ಯಂತ ಸುಂದರ ಮನೆ ಹೊಂದಿದ್ದ. ಆ ಮನೆಯನ್ನು ತಮ್ಮದಾಗಿಸಿಕೊಳ್ಳಲು ಸಂಬಂಧಿಕರು ಕಾದಿದ್ದರು. ಆದರೆ ವೃದ್ಧ ಸೊಲಿಸಿಟರ್ ಬಳಿ ವಿಲ್ ಮಾಡಿಸಿ ಅವರಲ್ಲಿಯೇ ಇಟ್ಟಿದ್ದ. ಆತ ಸತ್ತ ನಂತರ ವಿಲ್ ನೋಡಿದಾಗ ಮನೆ ಅವನ ಮಗನಿಗೆ ದಕ್ಕಬೇಕು. ಇಲ್ಲವಾದರೆ ಪಾರಸಿ ಟ್ರಸ್ಟಿಗೆ ಸಿಗಬೇಕು. ತನ್ನ ಮನೆ ಸೇವಕ ಪಾಂಡುನಿಗೆ ೫೦ ಸಾವಿರ ರೂ. ಕೊಡಬೇಕೆಂದಿತ್ತು. ವೃದ್ಧನ ನಂತರ ಮನೆ ಟ್ರಸ್ಟಿಗೆ ಸೇರುತ್ತದೆ. ಟ್ರಸ್ಟಿನವರು ಅಲ್ಲಿ ಸಮಾಜದ ಹಾಸ್ಟೆಲ್ ತೆರೆಯುತ್ತಾರೆ. ಪಾಂಡುನಿಗೆ ಅಲ್ಲಿಯೇ ಕೆಲಸ ಕೊಟ್ಟು ಮಾನವೀಯತೆ ಮೆರೆಯುತ್ತಾರೆ.
ಸಾವಿತ್ರಿಯ ಮದುವೆ
ಅಪ್ಪನನ್ನೇ ನೋಡಿರದಿದ್ದ ಮಗಳು ಸಾವಿತ್ರಿ. ಆತ ಮುಂಬೈನಲ್ಲಿ ಹೊಟೆಲೊಂದರ ಮಾಲೀಕನಾಗಿದ್ದು, ಹಣಕ್ಕಾಗಿ ಆತನನ್ನು ಅಪಹರಿಸಲಾಗಿತ್ತು ಎಂಬ ವದಂತಿ ಹರಡಿರುತ್ತದೆ. ನಾಪತ್ತೆಯಾಗಿದ್ದ ಅಪ್ಪನ ಬದಲು ಚಿಕ್ಕಪ್ಪನೇ ಮುಂದೆ ನಿಂತು ಸಾವಿತ್ರಿಯ ಮದುವೆ ಮಾಡಿಸುವುದು, ಮದುವೆಗೆ ಬಂದ ಗೆಳೆಯನೊಬ್ಬ ಸಾವಿತ್ರಿಯ ತಂದೆ ಕೊಲ್ಕೊತ್ತದಲ್ಲಿದ್ದಾನೆ, ಆತನಿಗೆ ತಾನು ಹೋಗಿ ಮದುವೆಯ ವಿಷಯವನ್ನೆಲ್ಲಾ ತಿಳಿಸುವುದಾಗಿ ಹೇಳುವುದು, ಆತ ಅಲ್ಲಿ ಭೇಟಿಯಾಗಿದ್ದನೋ ಇಲ್ಲವೋ ಎನ್ನುವುದು ಕೊನೆತನಕ ಗೊತ್ತಾಗದೇ ಇರುವುದು ಕಥೆಯ ತಿರುಳು. ಆದರೆ ಸಾವಿತ್ರಿಯ ಮತ್ತು ಆಕೆಯ ತಾಯಿಯ ಬದುಕಿನಲ್ಲಿ ಕೋಲಾಹಲ ಎನಿಸುವ ಯಾವ ಘಟನೆಯೂ ನಡೆಯುವುದಿಲ್ಲ. ಮದುವೆ ನಂತರ ಲೇಖಕರ ಮನೆಗೆ ಸಾವಿತ್ರಿ ಗಂಡನೊಡಗೆ ಬಂದಾಗ ‘ನಿನ್ನ ತಂದೆ ಬಂದೇ ಬರುತ್ತಾನೆ. ಧೈರ್ಯಗೆಡಬೇಡ’ ಎಂದು ಸಂತೈಸುತ್ತಾರೆ.
ಹೀಗೊಂದು ದಂತಕಥೆ
ಸಚಿವಾಲಯದಲ್ಲಿರುವ ಕಾರ್ಯದರ್ಶಿಗಳ ವರ್ತನೆ, ಸಚಿವರು ಮಾಡುವ ಅನ್ಯಾಯ ಮತ್ತು ಅವುಗಳನ್ನು ಸಮರ್ಥಿಸಿಕೊಳ್ಳುವ ಬಗ್ಗೆ ಈ ಕಥೆಯಲ್ಲಿ ವಿವರಿಸಲಾಗಿದೆ. ಶಿಕ್ಷಣ ಸಚಿವರ ಮಗ ಇಂಗ್ಲೆಂಡ್‌ಗೆ ಪಿಎಚ್‌ಡಿ ಮಾಡಲು ತೆರಳುವವನಿದ್ದ. ಇದಕ್ಕಾಗಿ ಆತನ ಪ್ರಾಧ್ಯಾಪಕರು ಇಲ್ಲಿಯೇ ಪಿಎಚ್‌ಡಿ ಮಾಡಿದವನೊಬ್ಬನಿದ್ದಾನೆ. ಆತನ ರಿಸರ್ಚ್ ಪೇಪರ್‌ನ್ನೇ ತಮ್ಮ ಮಗನ ಪಿಎಚ್‌ಡಿಗೆ ಬಳಸಬಹುದೆಂದು ಸಚಿವರಿಗೆ ಸಲಹೆ ಕೊಡುತ್ತ್ತಾರೆ. ಅದಕ್ಕಾಗಿ ಆ ಯುವಕನನ್ನು ಕಂಡು ಮಾತನಾಡುವಂತೆ ಸಚಿವರಿಗೆ ಹೇಳುತ್ತ್ತಾರೆ. ಸಚಿವರು ಆತನಿಗೆ ತನ್ನನ್ನು ಕಾಣಲು ಬರುವಂತೆ ಹೇಳಿದ್ದರೂ ಸಚಿವರೇ ಅಂದು ಇರುವುದಿಲ್ಲ. ನಂತರ ಯುವಕ ಕರೆ ಮಾಡಿ, ಸಚಿವರ ಮಗನಿಂದ ಖಾಲಿಯಾಗುವ ಪ್ರ್ರಾಧ್ಯಾಪಕನ ಹುದ್ದ್ದೆಗೆ ತನ್ನನ್ನು ನೇಮಿಸಿಕೊಳ್ಳುವಂತೆ ಕೇಳುತ್ತಾನಾದರೂ ಆ ಕರೆಯನ್ನು ಸ್ವೀಕರಿಸಿದ ಕಾರ್ಯದರ್ಶಿ ಸಚಿವರ ಜಾತಿಯವನಿಗೇ ಸಿಕ್ಕಿದ ಬಗ್ಗೆ ಹೇಳಿದಾಗ ಜಾತಿಯೇ ಇಲ್ಲದ ತನಗೆ ಕೆಲಸವಾದರೂ ಹೇಗೆ ಸಿಕ್ಕೀತೆಂದು ಯೋಚಿಸುತ್ತಾನೆ.
,,,,,,,,,,,,

Comments
Post a Comment