ಮಹಿಳಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ 


‘ಮಹಿಳೆಯರ ಬದುಕು ಮತ್ತು ಬವಣೆ’


ಕಲಬುರ್ಗಿಯ ಡಾ. ಶ್ರೀದೇವಿ ರಾಥೋಡ್ ಅವರ ಈ ಕೃತಿ ‘ಮಹಿಳೆಯರ ಬದುಕು ಮತ್ತು ಬವಣೆ’ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮೌಢ್ಯದಿಂದ ಆಕೆಯನ್ನು ಹಿಂಸಿಸುವುದು, ಅತ್ಯಾಚಾರ, ಮಹಿಳಾ ಕಾರ್ಮಿಕರ ಮೇಲಾಗುತ್ತಿರುವ ಶೋಷಣೆ, ಮಾನವ ಕಳ್ಳಸಾಗಣೆ, ಹೆಣ್ಣು ಮಕ್ಕಳನ್ನು ಒಂದು ಚೌಕಟ್ಟಿನಲ್ಲಿ ಬಂಧಿಸುವಂತಹ ವ್ಯವಸ್ಥೆ...  ಮೊದಲಾದ ಅನೇಕ ಕ್ರೌರ್ಯಗಳ ಕುರಿತಾಗಿ ಹಾಗೂ ಅದಕ್ಕೆ ಪ್ರಜ್ಞಾವಂತ ಸಮಾಜ ಸ್ಪಂದಿಸದಿರುವುದು, ಇದರಿಂದ ಇಂತಹ  ಘಟನೆಗಳು ದಿನೇ ದಿನೇ ಹೆಚ್ಚುತ್ತಿರುವುದನ್ನು ಅಂಕೆ- ಅಂಶಗಳ ಸಹಿತ  ನಮ್ಮೆದುರು ತೆರೆದಿಟ್ಟಿದೆ.

  ಇಂತಹ ಮಹಿಳಾ ಸಮಸ್ಯೆಗಳ ವಿಷಯವನ್ನು ಇಟ್ಟುಕೊಂಡು ೧೦ ಅತ್ಯುತ್ತಮ ಲೇಖನಗಳನ್ನು ಲೇಖಕಿ  ಈ ಕೃತಿಯಲ್ಲಿ ಬರೆದಿದ್ದಾರೆ. ಸಾಮಾಜಿಕ ಸುಧಾರಣೆಗಾಗಿ ಹೋರಾಟಗಾರರು, ಚಿಂತಕರು, ಸಾಹಿತಿಗಳು ಮತ್ತು ಬರಹಗಾರರು, ಕಲಾವಿದರು ಎಷ್ಟೊಂದು ಶ್ರಮಿಸಿದರೂ ಅದು ಇನ್ನೂ ಯಶಸ್ವಿಯಾಗಿಲ್ಲ. ತಾಂತ್ರಿಕವಾಗಿ  ಜಗತ್ತು ಮುಂದುವರೆದಿದ್ದರೂ ಭಾರತದಲ್ಲಿ ಹೆಣ್ಣಿನ ಕುರಿತ ಕೀಳರಿಮೆ ನಾಶವಾಗದಿರುವುದು ನಿಜಕ್ಕೂ ಶೋಚನೀಯ. ಮಹಿಳೆಯ ಗರ್ಭ ಧರಿಸುತ್ತಲೇ ಗರ್ಭದಲ್ಲಿರುವ ಹೆಣ್ಣೋ, ಗಂಡೋ ಎಂದು ತಿಳಿಯುವಂತಹ ಅನಾಗರಿಕತೆ ಇನ್ನೂ ಮುಂದುವರೆದಿರುವುದನ್ನು ವಿಷಾದದಿಂದ ಬರೆಯುತ್ತಾರೆ. 

 ಈ ನೆಲದಲ್ಲಿ ಹೆಣ್ಣಿಗೆ ಕೊಟ್ಟಷ್ಟು ಗೌರವ, ಪೂಜನೀಯ ಸ್ಥಾನವನ್ನು ಬೇರೆ ಯಾವ ದೇಶವೂ ನೀಡಿಲ್ಲ. ಆದರೆ ಅಷ್ಟೇ ಅತ್ಯಾಚಾರ, ಅನಾಚಾರಗಳು ಮಹಿಳೆ ಮೇಲೆ ನಡೆಯುತ್ತಿವೆ. ಯಾವುದೇ ಸ್ವಾತಂತ್ರ್ಯವಿಲ್ಲದೆ ದಾಸಿಯಂತೆ ಅವಳನ್ನು ನೋಡಲಾಗುತ್ತಿದೆ. ಈ ಮಧ್ಯೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಪುರುಷನೊಂದಿಗೆ ಹೆಗಲು ಕೊಟ್ಟು ಆತನ ಏಳಿಗೆಗಾಗಿ ನಿರಂತರ ದುಡಿಯುತ್ತಾ ಬಂದಿರುವ ಮಹಿಳೆ ಸಂಪ್ರದಾಯ, ಆಚಾರ, ವಿಚಾರ, ಕಟ್ಟಳೆಗಳನ್ನು ಮೀರಿ ವೀರಾವೇಶವಾಗಿ ಹೋರಾಡಿ ಇತಿಹಾಸದ ಪುಟದಲ್ಲಿ ಇಂದಿಗೂ ಉಳಿದಿರುವುದನ್ನು ತೋರಿಸಿಕೊಡುತ್ತಾರೆ.

ಲೇಖನಗಳಲ್ಲಿ ಸಾರಾಂಶ: 

  ‘ಚಿಂದಿ ಆಯುವ ಮಹಿಳೆ ಮತ್ತು ಮಕ್ಕಳ ಆರೋಗ್ಯದ ಸ್ಥಿತಿ’ ಇದರಲ್ಲಿ ಚಿಂದಿ ಆಯುವ ಸಮುದಾಯದವರಲ್ಲಿ ಶಿಕ್ಷಣವಿಲ್ಲ. ಬದುಕು ನಡೆಸಲು ಬೇರೆ ಉದ್ಯೋಗದ ಮಾಹಿತಿಗಳಿಲ. ಪರಂಪರಾಗತವಾಗಿ ನಂಬಿಕೊಂಡು ಬಂದಿರುವ ಉದ್ಯೋಗವನ್ನು ಮುಂದುವರಿಸುತ್ತಾ ಅನೇಕ ಅನಾರೋಗ್ಯದ ತೊಂದರೆಗಳನ್ನು ಅನುಭವಿಸುತ್ತಾ, ಬೀದಿಬದಿಯಲ್ಲಿ  ಜೀವನ ನಡೆಸುತ್ತಿರುವುದನ್ನು ಚಿತ್ರಿಸಿದ್ದಾರೆ. ಇವರಂತೆಯೇ ಕೊಳಗೇರಿಯಲ್ಲಿನ ನಿವಾಸಿಗಳ ಬದುಕು ದುರಂತವಾಗಿದೆ. ನಮ್ಮ ಸಮಾಜದಲ್ಲಿರುವ ಇಂತಹ ಜನರ ಬಗ್ಗೆ ಸ್ವಲ್ಪವೂ  ಯೋಚಿಸುತ್ತಿಲ .

 ‘ಸ್ತ್ರೀಯರ ದೈಹಿಕ ನಿಯಂತ್ರಣ ಮತ್ತು ಪುರುಷ ಪ್ರಧಾನ ವ್ಯವಸ್ಥೆ’ ಈ ಬರೆಹದಲ್ಲಿ ಮಹಿಳೆ ತಾನು ಸ್ವಲ್ಪ ದಪ್ಪಗಾದರೆ ತನ್ನ ಗಂಡ ಬೇರೆ ಮಹಿಳೆಯರ ಆಕರ್ಷಣೆಗೊಳಗಾಗಬಹುದು ಎಂಬ ಆತಂಕ ಪಡುತ್ತಾರೆ. ಕೆಲವು ಮಹಿಳೆಯರು ದಪ್ಪಗಾದರೆ ತಮ್ಮನ್ನು ‘ಡುಮ್ಮಿ’ ಎಂದು ಹಿಯಾಳಿಸಬಹುದು ಎಂದುಕೊಳ್ಳುತ್ತಾರೆ, ಗಂಡ ವಿಚ್ಛೇದನ ಕೊಡಬಹುದು ಎನ್ನುವ ಆತಂಕಕ್ಕೆ ಒಳಗಾಗುತ್ತಾರೆ.  

‘ ಮೂಢನಂಬಿಕೆ ಮತ್ತು ಬಂಜಾರ ಮಹಿಳೆಯರು’ ಇದರಲ್ಲಿ ಮೂಢನಂಬಿಕೆಯನ್ನು ನಂಬುತ್ತಾ ಬಂದಿರುವ ಬಂಜಾರ ಸಮುದಾಯದವರು ಯಾವುದೇ ಅನಾಹುತ, ಅಪವಾದ. ಸಮಸ್ಯೆ  ಉಂಟಾದರೆ ಮಹಿಳೆಯರನ್ನು ದೂಷಿಸುವುದು ಹಾಗೂ ದೇವರು ಮತ್ತು ದೆವ್ವ ಮಾಟ ಮತ್ತು ಮಂತ್ರ ಇದರ ಪ್ರಭಾವದಿಂದ ಘಟಿಸಿದೆ ಎಂದು ನಂಬುತ್ತಾರೆ. ಇಂತಹ ನಂಬಿಕೆಗಳು ಬೇರುಬಿಟ್ಟ ಹೆಮ್ಮರದಂತಾಗಿದ್ದು,  ಜನರಲ್ಲಿ ಈ ಕುರಿತು ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ ಎನ್ನುತ್ತಾರೆ. 

  ‘ಅತ್ಯಾಚಾರ ಮತ್ತು ಜಸ್ಟಿಸ್ ವರ್ಮಾ ಕಮಿಟಿಯ ವರದಿ’ ಇದರಲ್ಲಿ ಪುರುಷರು ಅತ್ಯಾಚಾರದ ಸಂದರ್ಭದಲ್ಲಿ ತಮ್ಮ ತಪ್ಪನ್ನು ಮುಚ್ಚಿಹಾಕುವುದಕ್ಕೆ ತುಂಡು ಬಟ್ಟೆಯ ನೆಪವನ್ನು ಹೇಳಿ ಮಹಿಳೆಯರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ತಮ್ಮ ದಾಹ ತೀರಿಸಿಕೊಳ್ಳಲು ಒಂದು ಹೆಣ್ಣು ಬೇಕು ಅಷ್ಟೆ. ಇದಕ್ಕೆ ಯಾರಾದರೂ ಎನ್ನುತ್ತಾ, ಜಸ್ಟೀಸ್ ವರ್ಮಾ ಕಮಿಟಿಯು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು  ವಿವರಿಸಿದ್ದಾರೆ.

ಮಹಿಳೆ ಮತ್ತು ಆರೋಗ್ಯ’ ಇದರಲ್ಲಿ ಮಹಿಳೆಯ ಆರೋಗ್ಯ ಸುಧಾರಣೆಯ ಕುಟುಂಬದ ಆರ್ಥಿಕ ಪರಿಸ್ಥಿತಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅವಳು ಆರೋಗ್ಯವಾಗಿದ್ದರೆ ಹೊರ ದುಡಿಮೆ ಮತ್ತು ಮನೆಯ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಾಳೆ. ಇದರಿಂದ ಮನೆಯ ಆರ್ಥಿಕ ಸುಧಾರಣೆಯಾಗುತ್ತದೆ ಎನ್ನುವ ಅಂಶಗಳಿವೆ.

‘ ಮಹಿಳೆ ಮತ್ತು ಪರಿಸರ’ದಲ್ಲಿ ಪರಿಸರ ಮತ್ತು ಮಹಿಳೆ ಒಂದೇ ನಾಣ್ಯದ ಎರಡು ಮುಖಗಳು. ಮಹಿಳೆ ಪರಿಸರ ಪೂರಕವಾಗಿ ನಡೆಯುತ್ತಾಳೆ. ಮಹಿಳೆ ಪ್ರಕೃತಿಯ ವಿಜ್ಞಾನಿ. ಪ್ರಕೃತಿಗೆ ಪೂರಕವಾಗಿ ಬದುಕನ್ನು ಕಟ್ಟಿಕೊಳ್ಳುವುದು ಅವಳ ಸ್ವಭಾವ. ಹಿಂದಿನ ಕಾಲದ ಜನರು ನೂರಾರು ವರ್ಷ ಬದುಕುತ್ತಿದ್ದರು. ಆದರೆ ಇಂದು ೧೦ ವರ್ಷದ ಮಕ್ಕಳಿಗೆ ಬಿಪಿ, ಶುಗರ್, ಕಣ್ಣಿನ ಸಮಸ್ಯೆ,  ಸಹಿತ ಅನೇಕ ದೈಹಿಕ ತೊಂದರೆಗಳು ಸಾಮಾನ್ಯವಾಗಿದೆ. ಇದಕ್ಕೆಲ್ಲ ಬದಲಾಗುತ್ತಿರುವ ಜೀವನ ಪದ್ಧತಿ ಮತ್ತು  ಆಹಾರ ಕಾರಣ ಎನ್ನುವುದನ್ನು ಪ್ರಸ್ತಾಪಿಸುತ್ತಾರೆ.

 ‘ಉನ್ನತ ಶಿಕ್ಷಣ ಮತ್ತು ನಿರುದ್ಯೋಗ’ ಈ ಲೇಖನದಲ್ಲಿ  ಇಂದಿನ ದಿನಮಾನಗಳಲ್ಲಿ ಉನ್ನತ ಶಿಕ್ಷಣ ಪಡೆದವರ  ನಿರುದ್ಯೋಗದ ಚಿತ್ರಣ ನೀಡುತ್ತಾರೆ. ಶಿಕ್ಷಣ ಶಾಪವಾಗಿ ಪರಿಣಮಿಸುತ್ತಿದೆ. ಜೀವನದ ಬಹುಮುಖ್ಯವಾದ ಕಾಲವನ್ನು ವಿದ್ಯಾಭ್ಯಾಸಕ್ಕೆ ಮೀಸಲಿಟ್ಟು ಸಮಯಕ್ಕೆ ಸರಿಯಾಗಿ ಕೆಲಸ ಸಿಗದೆ, ವಯೋಮಾನ ಮೀರಿ ನಿರುದ್ಯೋಗಿಗಳಾಗಿ ಅಲೆದಾಡುವುದು ಸಾಮಾನ್ಯವಾಗಿದೆ.  ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿ ಅಲ್ಲಿ ಪರೀಕ್ಷೆ ಬರೆದರೆ ಅವ್ಯವಹಾರ, ಹಣ ಮತ್ತು ರಾಜಕೀಯದ ಬಲ ಕೆಲಸ ಮಾಡುತ್ತz. ಇದರಿಂದ ಜ್ಞಾನವಂತ ಮತ್ತು ಬಡ ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೊಳ್ಳುವುದು ಕನಸಾಗಿದೆ. ‘ಭಾರತದ ಕಳಪೆ ಶಿಕ್ಷಣವು ಯುವಕರ ಆರ್ಥಿಕ ಭವಿಷ್ಯಕ್ಕೆ ಅಡ್ಡಿಯಾಗಿದೆ’ ಎಂದು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ ರಾಜನ್ ಹೇಳಿದ ಮಾತನ್ನು ಲೇಖಕಿ ಇಲ್ಲಿ  ಉಲ್ಲೇಖಿಸುತ್ತಾರೆ 

‘ನಶಿಸುತ್ತಿರುವ ಬಂಜಾರರ ಕಸೂತಿ ಕಲೆ’ಯಲ್ಲಿ ಇದನ್ನು ಯುವತಿಯರು ಆಸಕ್ತಿ ವಹಿಸಿ ಉಳಿಸಿ ಬೆಳೆಸಬೇಕು ಎನ್ನುತ್ತಾರೆ.

 ಹೀಗೆ ಈ ಸಮಾಜದಲ್ಲಿ ಮಹಿಳೆ ಮತ್ತು ಅತ್ಯಂತ ಕೆಳವರ್ಗದ ಸಮುದಾಯದವರು ಎದುರಿಸುತ್ತಿರುವ ಕಷ್ಟ-ಕೋಟಲೆಗಳನ್ನು ನಮ್ಮ ಕಣ್ಣೆದುರು ಕಡೆದು ನಿಲ್ಲಿಸಿದ್ದಾರೆ. ಸರಕಾರ ಮತ್ತು ಸಮಾಜ  ಇದರ ನಿವಾರಣೆಗ ಕ್ರಮ ಜರುಗಿಸಬೇಕು. ಜೊತೆಗೆ ಜನರೂ ಸಹ ವಿದ್ಯಾವಂತರಾಗಿ, ಜಾಗೃತರಾಗಿ, ತಮಗೆ ಸಿಗುವ ಸೌಲಭ್ಯಗಳನ್ನು ಪಡೆಯುವ ಮೂಲಕ ಹೊಸತನಕ್ಕೆ ತೆರೆದುಕೊಳ್ಳಬೇಕು ಎಂಬ ಸಲಹೆ ಕೊಡುತ್ತಾರೆ. 

ದತ್ತಾತ್ರೇಯ ಹೆಗಡೆ, ಶಿವಮೊಗ್ಗ

 ೧೯.೮. ೨೦೨೬

..........................


Comments

Popular posts from this blog