ಸ್ವಾನುಭವ ಸಂಕಟದ ಕಥನದ

‘ಸುಚೇಷ್ಟೆ’ 



‘ಸುಚೇಷ್ಟೆ’ ಇದು ಪ್ರಾಧ್ಯಾಪಕಿ ಸುಚೇತನಾ ಪೈ ಅವರ ಸ್ವಾನುಭವ ಸಂಕಟಗಳ ಸಂಕಥನ. ಪ್ರಸ್ತುತ ಕೃತಿಯಲ್ಲಿ ಲೇಖಕಿ ತನ್ನ ಜೀವನದಲ್ಲಿ ನಡೆದ ಹಲವು ಅನುಭವಗಳನ್ನು ದಾಖಲಿಸಿದ್ದಾರೆ. ಈ ಜೀವನಾನುಭವಗಳನ್ನು ಸ್ವಲ್ಪ ವಾರೆ ನೋಟದಿಂದ ನೋಡಿದಾಗ ಅದೇ ಆಸಕ್ತಿದಾಯಕ ವಸ್ತುವಾಗಿ ಕಂಡುಬಂದಿದ್ದರಿಂದ ಮತ್ತು ಎಲ್ಲರಿಗೂ ಸಂಭವಿಸುವಂತಹುದಾದ್ದರಿಂದ ಸಾಮಾಜಿಕ ಮನೋಭಾವಕ್ಕೆ ತಕ್ಕಂತೆ ಇಲ್ಲಿ ಚಿತ್ರಿಸಿದ್ದಾರೆ.

 ಒಂದು ಕಾಲಿಗೆ ಆರು ಬೆರಳಿನವರಾಗಿರುವ ಲೇಖಕಿ ಇದನ್ನೇ ಇಟ್ಟುಕೊಂಡು ಅದರಿಂದಾದ ಕಷ್ಟ, ನಷ್ಟ, ಸಂಕಟವನ್ನು ವಿನೋದವಾಗಿ, ತನ್ನ ಬಾಲ್ಯದ, ಓದಿನ ಕಾಲದ ನೆನಪಿನ ಬುತ್ತಿ ಬಿಚ್ಚಿ ಬರೆದಿದ್ದಾರೆ. ಇದಕ್ಕೆ  ತೆಳು ಹಾಸ್ಯವನ್ನು ಲೇಪಿಸಿರುವುದು ಓದನ್ನು ಮುಂದುವರೆಸಿಕೊಂಡು ಹೋಗುವಂತೆ ಮಾಡುತ್ತದೆ ಜೊತೆಗೆ ಒಂದಕ್ಕಿಂತ ಒಂದು ಬರಹಗಳು ಕುತೂಹಲವನ್ನು ಕೆರಳಿಸಿ, ಬರುವ ನಗು ತಡೆದುಕೊಂಡು ಓದಬೇಕಾಗುತ್ತದೆ. ಹಾಸ್ಯಮಯವಾಗಿ ತನ್ನ ಸ್ವಾನುಭವ ಸಂಕಟ ಕಥನವನ್ನು ಲೇಖಕಿ ಎಲ್ಲಾ ಮನಸ್ಸುಗಳಿಗೆ ಹಿತವಾಗುವಂತೆ ನೀಡಿದ್ದಾರೆ. ಎಲ್ಲರಿಗೂ ಸ್ಫೂರ್ತಿ ನೀಡುವಂತಹ ಕೃತಿ ಇದು.

 ತಮ್ಮ ಅನೇಕ ಬೆರಗುಗಳ ಖಜಾನೆಯನ್ನೇ ನಮ್ಮೆದುರು ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ತಮ್ಮನ್ನು ತಾವೇ ಹಾಸ್ಯ ಮಾಡಿಕೊಂಡು ಬರೆದಿರುವುದರಿಂದ ವಿಶಿಷ್ಟವಾಗಿದೆ. ಇಲ್ಲಿರುವ ಅನುಭವಗಳಲ್ಲಿ ಕೆಲವು ಬಹುತೇಕ ಎಲ್ಲರಿಗೂ ಆಗಿರುವಂತಹವು.  ತಾವು ನಕ್ಕು ನಮ್ಮನ್ನು ನಗಿಸುವಷ್ಟು ಆರೋಗ್ಯಕರ ಮನಸಿಗರಾಗಿರುವುದರಿಂದ ಲೇಖಕಿ ಇಲ್ಲಿ ಮೆಚ್ಚುಗೆ ಗಳಿಸುತ್ತಾರೆ.

ಈ ಕೃತಿಯಲ್ಲಿ  ಒಟ್ಟು ೧೩ ಅಧ್ಯಾಯಗಳ ಮೂಲಕ ತಮ್ಮ ಜೀವನದ ಸ್ವಾನುಭವ ಸಂಕಟ ಸಂಕಟನವನ್ನು ತೆರೆದಿಟ್ಟಿದ್ದಾರೆ. ಅವುಗಳಲ್ಲಿ ಕೆಲವು ರೋಚಕ ಬರೆಹಗಳ ಸಾರಾಂಶ ಇಲ್ಲಿದೆ. 

 ಆರು ಬೆರಳಿನ ಬಾಲೆ 

ಲೇಖಕಿಯ ಕಾಲಿಗೆ ಆರು ಬೆರಳುಗಳಿವೆ. ಅದರಿಂದ ಉಂಟಾದ ಯಾತನೆ, ಈ ಪಾದಕ್ಕೆ ಶೂ, ಚಪ್ಪಲಿ ಹುಡುಕಾಟ, ಇದರಿಂದ ಮನೆಯಲ್ಲಿ ಶೇಖರವಾದ ಶೂ ಗಳ ಜೊತೆ ಆರು ಬೆರಳಿನ ಮಹಾತ್ಮೆಯನ್ನು ವಿವರಿಸಿದ್ದಾರೆ. ಆರು ಬೆರಳಿನವರು ಕಾಲಿಟ್ಟ ಮನೆಗೆ ಲಕ್ಷ್ಮಿ ಬರುತ್ತಾಳೆ, ಅನಾರೋಗ್ಯದವರನ್ನು ಮುಟ್ಟಿದರೆ ಚೇತರಿಸಿಕೊಳ್ಳುವರು, ಇವರಲ್ಲಿ ದೇವಿ ಗುಣವಿದೆ... ಮುಂತಾದ ನಂಬಿಕೆಗಳನ್ನು ಮನೆಯಲ್ಲಿ ಹೇಳುತ್ತಿದ್ದುದನ್ನು ವಿವರಿಸಿದ್ದಾರೆ.

 ಕುತೂಹಲದ ಬೆಕ್ಕು

 ಕುತೂಹಲ ಸಹಜ ಬುದ್ಧಿ ಲೇಖಕಿಗೆ ಇದ್ದುದರಿಂದ ನಡೆದ, ಮಾಡಿದ ವಿವಿಧ ಕುತೂಹಲಗಳನ್ನು ಇದರಲ್ಲಿ ವಿವರಿಸಿದ್ದಾರೆ. ಮನೆಗೆ ತಂದ ಹೊಸ ವಸ್ತುಗಳನ್ನು ಏನೋ ಮಾಡಲು ಹೋಗಿ ಹಾಳು ಮಾಡುವುದು, ಎಲೆಕ್ಟ್ರಿಕ್ ಡಿಪ್ ಡಿಮ್ ಲೈಟಿನ ಸರವನ್ನು ಮುಟ್ಟಲು ಹೋಗಿ ಶಾಕ್ ಹೊಡೆಸಿಕೊಂಡಿದ್ದು, ಡಿಸ್ಟಿಲ್ಡ್ ವಾಟರ್ ಅನ್ನು ಕುಡಿದಿದ್ದು. ಕೆಮ್ಮಿನ ಸಿರಪ್ ಬಾಟಲಿಯನ್ನು ಪೂರ್ತಿಯಾಗಿ ಒಮ್ಮೆಲೆ ಕುಡಿದಿದ್ದು... ಮುಂತಾದ ಕುತೂಹಲಕರ ಘಟನೆಗಳನ್ನು ಇದರಲ್ಲಿ  ಬರೆದಿದ್ದಾರೆ. ಮುಂದಿನ ಜನ್ಮದಲ್ಲಿ ಬೆಕ್ಕಾಗಿ ಹುಟ್ಟಬೇಕು. ಏಕೆಂದರೆ ಬೆಕ್ಕಿನ ಕಣ್ಣಲ್ಲಿ ಸದಾ ಕುತೂಹಲ ಇರುತ್ತದೆ ಎಂದು ಹೇಳುತ್ತಾರೆ.

 ಸಾಹಸದ ಸರಮಾಲೆ

 ಲೇಖಕಿಯು ತಾಯಿಯೊಂದಿಗೆ ಮುಂಬೈಯಲ್ಲಿ ಮಾರುಕಟ್ಟೆಗೆ ತರಕಾರಿ ಖರೀದಿಗೆ ಹೋದಾಗ ಅಲ್ಲಿ ಕಾಣೆಯಾದುದು, ನಂತರ ಮನೆಯ ಅಡ್ರೆಸ್ ತಿಳಿದಿದ್ದರಿಂದ ಗುಂಪೊಂದರ ಬಳಿ ಹೋಗಿ ವಿಷಯ ತಿಳಿಸಿದಾಗ ಅವರು ಮನೆಯನ್ನು ತಲುಪಿಸಿದ್ದು, ಶಾಲೆಗೆ ಅಮ್ಮ ಬಂದು ಕುಳಿತಿದ್ದಾಗ ತಾನು ಮತ್ತು ತಮ್ಮ ಮೇಲಿನ ಮಹಡಿಗೆ ಹೋಗಿದ್ದನ್ನು ಗಮನಿಸಿದೆ ಮನೆಗೆ ಹೋದರೆಂದು ತಿಳಿದು ಅಮ್ಮ ತಮ್ಮನ್ನು ಬಿಟ್ಟು ಹೋಗಿದ್ದು,  ಭದ್ರಾವತಿಯಲ್ಲಿ ಶಾಲೆಗೆ ಹೋಗುವಾಗ ಒಂದು ದಿನ ರಾತ್ರಿ ಮನೆಗೆ ಬಂದಿದ್ದು, ಹೀಗೆ ಹಲವಾರು ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ತಾಯಿಯು ‘ನೀನು ಹುಟ್ಟಿದ್ದೇ ನನ್ನ ಪ್ರಾಣ ತಿನ್ನಲು’ ಎಂದು ಬೈದಿದ್ದನ್ನು ವಿವರಿಸುತ್ತಾರೆ.

 ಊಟದ ಡಬ್ಬಿ 

 ಶಾಲೆಗೆ ಹೋಗುವಾಗ ಒಯ್ದ ಊಟದ ಡಬ್ಬಿಯನ್ನು ಒಂದು ದಿನವೂ ಸರಿಯಾಗಿ ತಿನ್ನದಿರುವುದು, ಇದಕ್ಕಾಗಿ ಮನೆಯಲ್ಲಿ ಬಯ್ಯುವುದು, ಭದ್ರಾವತಿಯಲ್ಲಿದ್ದಾಗ ಸಂಬಂಧಿಕರ ಮನೆ ಇದ್ದು ಅಲ್ಲಿ ಅವರ ಮಕ್ಕಳ ಜೊತೆ ಲೇಖಕಿಗೂ ಊಟದ ಡಬ್ಬಿ ತರುತ್ತಿದ್ದುದು, ಗೆಳತಿ ಒಬ್ಬಳು ಮಾವಿನಕಾಯಿ ಉಪ್ಪಿನಕಾಯಿಯನ್ನು ತರುತ್ತಿದ್ದುದು, ಮನೆಯಲ್ಲಿ ಒಬ್ಬಟ್ಟು ಮಾಡಿಸಿಕೊಂಡು ಊಟದ ಡಬ್ಬಿಯಲ್ಲಿ ಹಾಕಿಕೊಂಡು ಹೋದಾಗ ಶಾಲೆಯಲ್ಲಿ ಅದು ಕಾಣೆಯಾದುದು, ವಿಜಯವಾಡಾದಲ್ಲಿದ್ದಾಗ ರಾಜಸ್ಥಾನಿ ಗೆಳತಿಯೊಬ್ಬಳ ಮನೆಯಲ್ಲಿನ ಊಟ, ಬೆಂಗಳೂರಿನ ಆಯುರ್ವೇದಿಕ್ ಕಾಲೇಜಿನಲ್ಲಿ ಓದುವಾಗ, ನೌಕರಿ ಸಿಕ್ಕಿದ ಮೇಲಿನ ಊಟದ ಡಬ್ಬಿ... ಹೀಗೆ ಹಲವು ಊಟದ ಡಬ್ಬಿಗಳ ಬಗ್ಗೆ ಚಿತ್ರಿಸಿದ್ದಾರೆ.

 ಆ ರಂಗು 

ದೊಡ್ಡವಳಾಗುವುದೆಂದರೇನು ಎಂದು ಅಮ್ಮನನ್ನು ಕೇಳಿದ್ದು, ಶಾಲೆಯಲ್ಲಿ ಗೆಳತಿಯ ಸ್ಕರ್ಟಿಗೆಲ್ಲ ಏನೋ ಕೆಂಪು ಕಲೆ ಮೆತ್ತಿಕೊಂಡಿದ್ದು, ಶಿಕ್ಷಕಿ ಅವಳನ್ನು ಮನೆಗೆ ಕಳಿಸಿದ್ದು, ಕೆಂಪು ಕಲೆಯ ಗುಟ್ಟು ಏನೆನ್ನುವ ಮಾಹಿತಿ ಬಹಳ ದಿನದವರೆಗೆ ಗೊತ್ತಾಗದಿದ್ದುದು, ತನಗೆ ಅದು ಎದುರಾದಾಗ ಮನೆಯಲ್ಲಿ ಅಮ್ಮ ಮಾಡುವ ಪದ್ಧತಿ, ನಾಲ್ಕು ದಿನ ಪೂಜೆ ಇಲ್ಲದಿರುವುದು, ನಂತರ ಸಾನಿಟರಿ ಪ್ಯಾಡ್‌ಗಳು ಬಂದಿದ್ದು, ಕೆಂಪು ಕಲೆಯಿಂದಾಗಿ ಅತಿ ದೊಡ್ಡ ಅವಮಾನ ಮುಜುಗರ ತನಗೆ ಎದುರಾಗಿದನ್ನು ವಿವರಿಸುತ್ತಾ,  ಹೆಣ್ಣು ಕೂಡ ಒಂದು ವ್ಯಕ್ತಿ. ಆಕೆಯನ್ನು ಕೆಂಪು ಕಲೆಗಳ ಮೇಲೆ ಅಳೆಯಬಾರದು, ಪುಷ್ಪವತಿ, ದೌರ್ಭಾಗ್ಯವತಿ, ಫಲವತಿ ಎನ್ನುತ್ತಾ  ಅಧೋಗತಿಗಿಳಿಸಿ ಬಂಧಿಸುವವರಿಗೆ ಏನು ಹೇಳಬೇಕೆಂದು ಪ್ರಶ್ನಿಸುತ್ತಾರೆ.

 ಕೇಶ ಪಾಠ 

  ತನ್ನ ಜುಟ್ಟು ಕೊತ್ತಂಬರಿ ಕಟ್ಟು ಎಂದು ಹೇಳಿಕೊಂಡು ಬಾಲ್ಯದಲ್ಲಿ ಕುಣಿಯುತ್ತಿದ್ದುದು, ನಂತರ ಬೆಳೆಯುತ್ತ ಸೊಂಪಾಗಿ ಜಡೆಯ ಆಕಾರ ಪಡೆದಿದ್ದು, ಜಡೆ ಹೆಣೆಯುವ ವೇಳೆ ಅಮ್ಮ ಸುಸ್ತಾಗಿದ್ದು, ಉದ್ದ ಕೂದಲಿನ ಕಿರಿಕಿರಿ ಎಂದ ಅಮ್ಮನಿಂದ ಬೈಸಿಕೊಂಡಿದ್ದು, ನೆಂಟರು ಜಡೆ ಮಾತ್ರ ಎಷ್ಟು ಚೆನ್ನಾಗಿದೆ ಎಂದಿದ್ದು, ಕಾಲೇಜಿನಲ್ಲಿ ‘ತ್ರೀ ಫೀಟ್ ಗರ್ಲ್, ಫೋರ್ ಫೀಟ್ ಜಡ’ ಎಂದು ತಮಾಷೆ ಮಾಡುತ್ತಿದ್ದುದು, ‘ನಿನ್ನನ್ನು ಕಟ್ಟಿ ಹಾಕಲು ನಿನ್ನ ಜಡೆ ಸಾಕು, ಮಕ್ಕಳನ್ನು ತೂಗಿಸಲು ತೊಟ್ಟಿಲು ಮಾಡಬಹುದು’ ಎಂದು ಕೆಲವೊಮ್ಮೆ ಸ್ನೇಹಿತರು ಕಿಚಾಯಿಸಿದ್ದು, ನಂತರ ಜಡೆ ಬಿಟ್ಟು ಕೂದಲಿಗೆ ಕತ್ತರಿಗೆ ಪ್ರಯೋಗ ಮಾಡಿ ಭುಜದ ಮಟ್ಟಕ್ಕೆ ತಂದಿಟ್ಟುಕೊಂಡಿದ್ದನ್ನು ರೋಚಕವಾಗಿ ವಿವರಿಸಿದ್ದಾರೆ.

ಕನ್ನಡದೊಡನೆ ನಾನು

   ಕನ್ನಡ, ಹಿಂದಿ ಎರಡು ಪ್ರೀತಿ. ಬಿಎ ಓದುವಾಗ ಇಂಗ್ಲೀಷ್ ಸಾಹಿತ್ಯವನ್ನು ಐಚ್ಛಿಕವಾಗಿ ಆರಿಸಿಕೊಂಡಿದ್ದರೂ ಸಹಪಾಠಿಗಳ ಕನ್ನಡ ಪುಸ್ತಕವನ್ನು  ಓದುತ್ತಿದ್ದುದು, ‘ಬದುಕು ಬಳಗ’ ಎನ್ನುವ ಆನ್ಲೈನ್ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿ ಕನ್ನಡ ಸಾಹಿತ್ಯವನ್ನು ಬರೆಯಲಾರಂಭಿಸಿದ್ದು,  ಅಧ್ಯಾಪನ ವೃತ್ತಿಯ ಜೊತೆಗೆ ಬರವಣಿಗೆ ಆರಂಭವಾದವನ್ನು ವಿವರಿಸುತ್ತಾರೆ.

 ಬಸ್ ಮಹಾಭಾರತ

 ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಸಂಚರಿಸುವಾಗ ಪಕ್ಕದಲ್ಲಿ ಕೂತವರ ಬಳಿ ಮಾತನಾಡುತ್ತಿದ್ದುದನ್ನು ನೆನೆಪಿಸುವ ಲೇಖಕಿ, ವಿದ್ಯಾರ್ಥಿಗಳಂತೆ ಕಾಣುವವರನ್ನು ಹೆಚ್ಚು ಮಾತನಾಡಿಸುತ್ತೇ. ಈಗ ಬೆಂಗಳೂರಿಗೆ ಹೋದಾಗಲೆಲ್ಲ ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ಮಾತನಾಡಲು ಸಿಗುವ ಅವಕಾಶ ಕಡಿಮೆ. ಏಕೆಂದರೆ ಎಲ್ಲರೂ ಮೊಬೈಲ್ ಅನ್ನು ಕಿವಿಯಲ್ಲಿ ಇಟ್ಟುಕೊಂಡಿರುತ್ತಾರೆ. ಕಿವಿಯೊಳಗೆ ಬಚ್ಚಿಟ್ಟುಕೊಂಡಿರುವ ಕರ್ಣಾಸುರನೊಂದಿಗೆ ಮಾತನಾಡುತ್ತಿರುತ್ತಾರೆ. ಈಗೆಲ್ಲ ಮಕ್ಕಳನ್ನು ಮಾತ್ರ ಮಾತನಾಡಿಸು ಎನ್ನುತಾರೆ. 

ಪಾಕ ಪ್ರವೀಣೆ 

 ಅಡುಗೆ ಮಾಡಲು ಬಾರದ ಲೇಖಕಿ ಕುಕ್ಕರ್‌ನಲ್ಲಿ ಅಕ್ಕಿ ಬೆಳೆಯನ್ನು ಇಟ್ಟಾಗ ಅಕ್ಕಿ ಬೆಂದು, ಬೇಳೆ ಬೇಯದೇ ಇದ್ದುದು,  ಗಂಡನ ಮನೆಗೆ ಹೋದಾಗ ಅತ್ತೆ ಫ್ರಿಜ್ಜಿನಲ್ಲಿ ದೋಸೆ ಹಿಟ್ಟು, ಸಾರು, ಸಾಂಬಾರು, ಪಲ್ಯ, ಚಟ್ನಿ ಎಲ್ಲ ಮಾಡಿಟ್ಟು ಹೋಗುವುದು, ದೋಸೆ ಹೊಯ್ಯಲು ಹೋದಾಗ ಅದು ನಿರ್ವಿಕಾರವಾಗಿದ್ದು,  ಕ್ರಮೇಣ ತೊವೆ, ಸಾರು, ಸಾಂಬಾರು, ಪಲ್ಯ, ಉಪ್ಪಿಟ್ಟು ಮುಂತಾದವುಗಳನ್ನು ಮಾಡಲು ಕಲಿತಿದ್ದು, ಒಲೆಯ ಮೇಲೆ ಏನೋ ಇಟ್ಟು ಬರೆಯುತ್ತಾ ಕುಳಿತಿದ್ದು... ಅಮ್ಮನಿಂದ ಕಾಸಿಗೆ ಪ್ರಯೋಜನವಿಲ್ಲದವಳೆಂದು ಬೈಸಿಕೊಂಡಿದ್ದು,... ಹೀಗೆ ಅಡುಗೆ ಮಾಡಲು ಹೋದಾಗ ಅನುಭವಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 

ಅವಳಿ ಅಲ್ಲದ ಜವಳಿ

 ಕಾಲೇಜು ಓದುವಾಗ ಲೇಖಕಿಯ ಪಕ್ಕದಲ್ಲಿ ಕೂರುವ ಸುಧಾ ಎನ್ನುವರು ಲೇಖಕಿಯಂತೆ ಇದ್ದರು. ಒಂದೇ ರೀತಿ ವಾದಿಸುವುದು, ಒಂದೇ ಬೆಂಚಿನಲ್ಲಿ ಅಕ್ಕಪಕ್ಕ ಕೂಡ್ರುವುದು, ಇಂಗ್ಲಿಷ್ನಲ್ಲಿ ಹೆಚ್ಚು ಮಾತನಾಡುವುದು, ಇಬ್ಬರು ಒಟ್ಟಿಗೆ ಬಂದು ಹೋಗುವುದು. ಒಂದೇ ರೀತಿ  ಕಾಣುತ್ತಿದ್ದುದರಿಂದ ಎಲ್ಲರೂ ಅವರನ್ನು ಅವಳಿಗಳೆಂದೇ ನಿರ್ಧರಿಸಿ ಬಿಟ್ಟಿದ್ದರು. ಉಪನ್ಯಾಸಕರಿಗೆ ಲೇಖಕಿ ಯಾರು, ಸುಧಾ ಯಾರು ಎಂದು ಗುರುತಿಸುವುದು ಕಷ್ಟವಾಗುತ್ತಿತ್ತು  ಎನ್ನುವುದನ್ನು ವಿವರಿಸಿದ್ದಾರೆ 

ಅನಾರೋಗ್ಯ ಭಾಗ್ಯ

 ಕಾಲೇಜು ದಿನಗಳಲ್ಲಿ ಹಾಗೂ ಅಧ್ಯಾಪನ ವೃತ್ತಿಯಲ್ಲಿದ್ದಾಗ ಕಾಯಿಲೆ ಬಿದ್ದಾಗ ಅಥವಾ ಯಾವುದೇ ಅಂಗಕ್ಕೆ ಪೆಟ್ಟು ಬಿದ್ದಾಗ ಕನಿಷ್ಠ ಒಂದು ತಿಂಗಳಾದರೂ ಹಾಸಿಗೆಯ ಮೇಲೆ ಮತ್ತು ನಾಲ್ಕು ಗೋಡೆ ಮಧ್ಯೆ ಇರಬೇಕಾದ ಪ್ರಸಂಗ ಬಂದಿದ್ದನ್ನು ಇದರಲ್ಲಿ ವಿವರಿಸಿದ್ದಾರೆ. ಮೊದಲಿಗೆ ಕಾಲುಮುರಿದಿದ್ದು, ನಂತರ ಜ್ವರದಿಂದ ಹಾಸಿಗೆ ಹಿಡಿದಿದ್ದು, ಬಳಿಕ ದಢಾರ್, ವಾಂತಿ -ಭೇದಿ, ನಿದ್ದೆ ಮಾಡಲಾಗದೆ ವಿಚಿತ್ರ ಸಮಸ್ಯೆ ಎದುರಿಸಿದ್ದು, ಆಮೇಲೆ ಮಲೇರಿಯಾ, ಬಲಗೈ ಮುರಿದಿದ್ದು, ಕೊರೋನಾ ಆಕ್ರಮಿಸಿಕೊಂಡಿದ್ದು... ಹೀಗೆ ಅನಾರೋಗ್ಯಗಳ ಪಟ್ಟಿಯೇ ತುಂಬಾ ಇದೆ. ಅಸ್ತಮಾ ಬಾಳ ಸಂಗಾತಿಯಂತೆ ಕಾಡಿದ್ದನ್ನು ವಿವರಿಸಿದ್ದಾರೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೫.೭.೨೦೨೬

..........................


Comments

Popular posts from this blog