ಎಲ್ಲಾ ಕಾಲಕ್ಕೂ ಪ್ರಸ್ತುತವಾದ 

‘ಸರ್ವಜ್ಞ ವಚನ  ಸಂಪದ’ 



‘ಸರ್ವಜ್ಞ  ವಚನ ಸಂಪದ’ ಈ ಕೃತಿಯನ್ನು ಸಂಗ್ರಹಿಸಿದವರು  ಮಾಗಡಿ ರಂಗನರಸಿಂಹಯ್ಯ ಅವರು. ಇದರಲ್ಲಿ ಸುಮಾರು ೮೦೦ ವಚನಗಳನ್ನು ಅರ್ಥ ಸಹಿತ ವಿವರಿಸಲಾಗಿದೆ. ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎನ್ನಲಾಗಿದೆ. ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರು ೧೬ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.

 ಈತನ ವಚನಗಳಲ್ಲಿ ಬಾರದ ವಿಷಯಗಳೇ ಇಲ್ಲ.  ಇದರಲ್ಲಿ ಯಾರನ್ನೂ, ಯಾವುದನ್ನೂ ಬಿಟ್ಟಿಲ್ಲ. ತನ್ನ ಹುಟ್ಟಿನಿಂದ ಹಿಡಿದು  ವಿವರಣೆ ಕೊಟ್ಟಿದ್ದಾನೆ. ಜಾತಿ ಪದ್ಧತಿ, ದೌರ್ಜನ್ಯ, ಶೋಷಣೆ ಹಾಗೂ ಮೌಢ್ಯಗಳೆಂಬ ಅನಿಷ್ಠ ಪದ್ಧತಿಗಳು, ಸಂಪ್ರದಾಯವಾದಿಗಳ ನಡೆ ಸಹಿತ ಎಲ್ಲವನ್ನೂ  ಸರ್ವಜ್ಞ ಕವಿ ಕಟುವಾಗಿ ಟೀಕಿಸಿ ತನ್ನ ತ್ರಿಪದಿಗಳಿಂದ ಝಾಡಿಸುತ್ತಾನೆ. ಆತನೇ ಹೇಳುವಂತೆ ‘ಈ ಲೋಕದಲ್ಲಿ ಕಂಡುದನ್ನು ಖಂಡಿತವಾಗಿ ಹೇಳುತ್ತೇನೆ’ ಎನ್ನುವುದನ್ನು ಈಡೇರಿಸಿದ್ದಾನೆ. ಈ ವಚನ ಅಥವಾ ತ್ರಿಪದಿಗಳು ಸರ್ವರಿಗೂ ಮಾರ್ಗದರ್ಶಕ. ಹಾಗೂ ನೆನೆಪಿಡಲು ತುಂಬಾ ಸುಲಭವಾಗಿವೆ. 

 ಪ್ರಸ್ತುತ ಕೃತಿಯಲ್ಲಿ  ಸುಮಾರು ೨೧ ವಿಷಯಗಳ ಬಗ್ಗೆ ಸರ್ವಜ್ಞ ಹೇಳಿರುವ ವಚನಗಳನ್ನು ಲೇಖಕರು ವಿವರಿಸಿದ್ದಾರೆ. ಸರ್ವಜ್ಞನ ಹುಟ್ಟು, ಜಾತಿ, ಗುರುವಿನ ಮಹಿಮೆ, ಲಿಂಗ ತಾರತಮ್ಯ,  ಜ್ಞಾನ, ಮುಕ್ತಿ ಮಾರ್ಗ, ದಾನ, ಧರ್ಮದ ಮಹತ್ವ, ಅಧಿಕಾರ, ರಕ್ಷಣೆ, ಸ್ತ್ರೀಯ ಗುಣಗಳು, ಜ್ಯೋತಿಷ್ಯ, ರಾಜನೀತಿ, ಆರೋಗ್ಯ, ಉದ್ಯೋಗ, ಕಲೆ, ಸಾಹಿತ್ಯ, ಸಂಗೀತ ಮೊದಲಾದ ವಿಭಾಗಗಳು ಇದರಲ್ಲಿವೆ.

 ಮೊದಲ ತ್ರಿಪದಿಯಲ್ಲೇ  ತನ್ನ ಹಿಂದಿನ ಹೆಸರು ಪುಷ್ಪದತ್ತ ಎಂದು ನಂತರ ಸರ್ವಜ್ಞನಾಗಿ ಹೆಸರು ಮಾರ್ಪಡಿಸಿಕೊಂಡಿರುವುದಾಗಿ ಹೇಳುತ್ತಾನೆ ಅಕ್ಕಮಲ್ಲವ್ವ, ಬಸವರಸ ತನ್ನ ತಂದೆ ತಾಯಿ.  ತಾನು ಮಾಳಿ ಕುಲದವನು. ತಂದೆ ಬ್ರಾಹ್ಮಣನಲ್ಲ, ತಾಯಿ ಕುಂಬಾರಳಲೂ ಅಲ್ಲ.  ಪರಶಿವನ ವರದಿಂದ ಹುಟ್ಟಿದವನು. ನನ್ನ ಕುಲವನ್ನರಸುವುದು ಬುದ್ಧಿಗೇಡಿನ ಎಂದು ಹೇಳುತ್ತಾನೆ.   ಎಂದು ಹೇಳಿಕೊಳ್ಳುತ್ತಾನೆ.

ನೂಕಿದರು ಅವರಾಗ/ ಕುಹಕತನದಲ್ಲಿ ಬೇಗ/ 

ಲೋಕದೊಳಗೆಲ್ಲ ಕಂಡುದನೆ ನುಡಿಯುತ/

ಏಕವಾಗಿಹೆನು, ಸರ್ವಜ್ಞ.

  ನಾನು ಲೋಕವಿರೋಧಿಯಾಗಿದ್ದರಿಂದ  ಜನ್ಮವಿತ್ತವರು ತನ್ನನ್ನು ಮನೆಯಿಂದ ಹೊರಹಾಕಿದರು. ಕಂಡದ್ದನ್ನು ನುಡಿಯುತ್ತ ಒಬ್ಬಂಟಿಯಾಗಿಯೇ ಇರುತ್ತೇನೆ ಎಂದು ತನ್ನ ಬ್ಗಗೆ ವಿವರಿಸಿಕೊಂಡಿದ್ದಾನೆ.  

 ಜಾತಿಯ ಬಗ್ಗೆ ಮಾತನಾಡುವ ಸರ್ವಜ್ಞ 

ಜಾತಿಹೀನನ ಮನೆಯ/ ಜ್ಯೋತಿ ತಾ ಹೀನವೇ/

ಜಾತಿ ವಿಜಾತಿ ಎನಬೇಡ ಆ ದೇವನೊಲಿ/

ದಾತನೇ ಜಾತ, ಸರ್ವಜ್ಞ 

ನಡೆಯುವ ಭೂಮಿ ಒಂದೇ, ಕುಡಿಯುವ ನೀರು ಒಂದೇ, ನಮ್ಮನ್ನು ಸುಡುವ ಬೆಂಕಿ ಒಂದೇ. ಹೀಗಿರುವಾಗ ಕುಲಜಾತಿಗಳ ಬಗ್ಗೆ ಮಾತೇಕೆ ಎಂದು ಪ್ರಶ್ನಿಸುತ್ತಾನೆ. ಜಾತಿ ಭ್ರಮೆಗಳನ್ನು ಬಿಟ್ಟು ಮನದಲ್ಲಿ ಭ್ರಾಂತಿಯನ್ನು ಬಿಟ್ಟು ಆತ್ಮಸ್ವರೂಪವನ್ನು ಅರಿತವರಿಗೆ ಯಾವ ಭಯವೂ ಇಲ್ಲ ಎನ್ನುವ ಮೂಲಕ ಜಾತಿ, ಕುಲದ ಬಗ್ಗೆ ಯಾರೂ ಪ್ರಶ್ನಿಸಬಾರದು ಎನ್ನುತ್ತಾನೆ. ಈ ಲೋಕದ ಸಮಸ್ತವೂ ಸೃಷ್ಟಿಯಾಗಿದ್ದು ಒಳ್ಳೆಯ ಕೂಪದೊಳಗೆ. ನನ್ನನ್ನು ಮುಟ್ಟಬೇಡ ಎಂದು ದೂರ ಹೋಗುವ ಬ್ರಾಹ್ಮಣರು ಹುಟ್ಟಿದ್ದಾದರೂ ಎಲ್ಲಿ? ಜೀವ ಉಳಿಸಿಕೊಳ್ಳುವ ಸಲುವಾಗಿ ಸತ್ತ ಪ್ರಾಣಿಯನ್ನು ತಿನ್ನುವವರು ಹೊಲೆಯರಲ್ಲ. ಪರರ ಜೀವವನ್ನು ಹಿಂಡಿ ಯಾರು ತೊಂದರೆ ಕೊಡುತ್ತಾರೋ ಅವರೇ ಹೊಲೆಯರು. ಅಂದರೆ ಜಾತಿಯಿಂದ ಯಾರೂ ಹೊಲೆಯರೂ ಅಲ್ಲ, ಬ್ರಾಹ್ಮಣರೂ ಅಲ್ಲ. ಅವರವರು ಮಾಡುವ ಕೆಲಸದಿಂದ ಅವರ ಜಾತಿ ನಿರ್ಧಾರವಾಗುತ್ತದೆ ಎನ್ನುವುದನ್ನು ವಿವರಿಸುತ್ತಾನೆ.

   ಮುಟ್ಟಾದ ಹೆಂಗಸರನ್ನು ಮುಟ್ಟಲು ಹೆದರುತ್ತಾರೆ. ಆದರೆ ಇದೇ ಮುಟ್ಟು ನಿಂತು ಹೋಗಿ ಗರ್ಭ ಧರಿಸಿ ಹುಟ್ಟಿದ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಾರೆ. ಇದೇಂತಹ ಜಾತಿ ಪದ್ಧತಿ ಎಂದು ಪ್ರಶ್ನಿಸುತ್ತಾನೆ. ಯಾರು ತನ್ನೊಳಗೆ ತನ್ನನ್ನು ಮತ್ತು ಪರತತ್ವವನ್ನು ಅರಿತಿರುತ್ತಾರೋ ಅವರೇ ಪರಮ ಗುರು. ನಮ್ಮ ಜೀವನದ ವಿವೇಚನೆಯನ್ನು ಮನದೊಳಗೆ ಬಿತ್ತರಿಸುವವನೇ ಗುರು. ಆತನಿಂದಲೇ ದೈವ ಮುಕ್ತಿ ಮತ್ತು ತಿಳುವಳಿಕೆ. ಗುರುವಿನ ಉಪದೇಶ ಇಲ್ಲದವರಿಗೆ ಮುಕ್ತಿಯೇ ಇಲ್ಲ. ಗುರುವನ್ನು ಕೇವಲ ಒಬ್ಬ ಮನುಷ್ಯ ಎಂದು ತಿಳಿಯಬಾರದು ಎನ್ನುತ್ತಾ, 

ಗುರುವ ನಿಂದಿಸಬೇಡ/ ಪರವ ಹಳಿಯಲು ಬೇಡ/ಗುರುವಿನುಪದೇಶ/ ಇಲ್ಲದವಗೆಲ್ಲಿಯ ಮುಕ್ತಿ? ಎಂದು ಪ್ರಶ್ನಿಸುತ್ತಾನೆ.  ಅವನನ್ನು ನಿಂದಿಸಬಾರದು, ಅವಹೇಳನ ಮಾಡಬಾರದು, ಗುರುವಿನ ಮಹಿಮೆ ಅಪಾರವಾದದ್ದು, ಗುರುವೇ ಸಾಕ್ಷಾತ್ ಪರಶಿವ ಎಂದು ನಂಬಿಕೆ ಇಡಬೇಕು. ಗುರುವಿನ ವಚನವೇ ದಿವ್ಯವಾದ ಉಪದೇಶ. ಇದೇ ಭಕ್ತಿ. ಇದೇ ಮೋಕ್ಷ. ಇದರಿಂದಲೇ ಪರಮ ಪದವಿ ಎಂದು ಹೇಳುತ್ತಾನೆ.

ರಾಜಯ ಮತ್ತು  ರಾಜನೀತಿ ಬಗ್ಗೆ ಮಾತನಾಡುವ ಸರ್ವಜ್ಞ  ‘ತಪ್ಪ ಸಾಧಿಪನೃಪನೋ/ಳಿಪ್ಪುವವನ ನೆಗ್ಗ/ ಎನ್ನುತ್ತಾನೆ. ಜೊತೆಗೆ  ಎದುರು ಮಾತಡದರು, ಎದ್ದೆದ್ದು ನಿಲ್ಲದಿರು/ ಇದ್ದ ಮಾನಸರ ಜರಿಯದಿರು ಓಲಗದೊ/ ದ್ದಿನಿದು ಹೊತ್ತು ಎಂದು ಹೇಳುತ್ತಾನೆ.  

ಒಂದು ರಾಜ್ಯವೆಂದರೆ ಹಕ್ಕಿಯ ಹಾಗೆ. ಅಲ್ಲಿ ರಾಜನೇ ಅದರ ಪ್ರಾಣ. ಆತನು ನಾಶವಾದರೆ ಆ ರಾಜ್ಯ ಹಾಳಾಗುತ್ತದೆ ರಾಜನಾದವನು ಎಂದೂ ಸುಳ್ಳನ್ನು ಆಡಬಾರದು. ಜನರು ಸಹ ಆತನನ್ನು ಇಂದ್ರ, ಚಂದ್ರ ಎಂದು ಹೊಗಳಬಾರದು. ಮಂತ್ರಿಯ ವೈರತ್ವವನ್ನು ರಾಜ  ಕಟ್ಟಿಕೊಳ್ಳಬಾರದು. ಒಂದು ರಾಜ್ಯದಲ್ಲಿ ಮಂತ್ರಿ ಇದ್ದರೆ ಅಲ್ಲಿ ಕ್ಷೇಮವಿರುತ್ತದೆ.  ಮಂತ್ರಿ ಇಲ್ಲದ ರಾಜ್ಯ ಕೀಲು ಇಲ್ಲದ ಗಾಡಿಯಂತೆಯೇ ಸರಿ. ದ್ವೇಷವನ್ನು ಸಾಧಿಸುವ ಅರಸನ ಸಹವಾಸವನ್ನು ಎಂದೂ ಮಾಡಬಾರದು.  ಅವನು ಮುನಿದರೆ ಆ ರಾಜ್ಯದಲ್ಲಿ ಇರಬಾರದು. ಆ ಜಾಗವನ್ನೇ ಬಿಟ್ಟುಬಿಡಬೇಕು. ಪ್ರಜೆಗಳಿಗೆ ಆಹಾರವನ್ನು ನೀಡದೆ ಯಾವಾಗಲೂ ಅಂತಃಪುರದಲ್ಲಿ ಇದ್ದು ಕಾಲ ಕಳೆಯುವ ಅರಸ ಇದ್ದರೂ ಸರಿ, ಸತ್ತರೂ ಸರಿ ಎಂದು ಹೇಳುತ್ತಾನೆ.

ಮನುಷ್ಯನಲ್ಲಿ ಯಾವ ರೀತಿ ಗುಣ ಇರಬೇಕೆನ್ನುವುದನ್ನು ವಿವರಿಸುವ ಸರ್ವಜ್ಞ,  

ಗುಣಗಳ ಬಗ್ಗೆ ಸರ್ವಜ್ಞ ಈ ರೀತಿ ಹೇಳುತ್ತಾನೆ. ಯಾರು ಉದ್ಯೋಗವನ್ನು ಮಾಡದೆ ಊಟ ಮಾಡುವವನು ಅವನು ಹಾಳಾಗುತ್ತಾನೆ. ತಾಯಿ -ತಂದೆಯ ಬಗ್ಗೆ ಗೌರವ ನೀಡುವವರಿಗೆ ಯಾವತ್ತೂ ಗಂಡಾಂತರ ಎದುರಾಗುವುದಿಲ್ಲ. ಸತ್ಯವನ್ನು ಎತ್ತಿಹಿಡಿಯುವವನು ಯಾವತ್ತೂ ಅಪಹಾಸ್ಯಕ್ಕೆ ಒಳಗಾಗುವುದಿಲ್ಲ. ಅಂತಹವರನ್ನು ಯಾವತ್ತೂ ಲೋಕ ಗೌರವಿಸುತ್ತದೆ.  ನಿಜವ ನುಡಿದರೆ ಜನರಿಗೆ ಕೋಪ ಬರುತ್ತದೆ. ಇಂತಹ ಜನರನ್ನು ಯಾವುದಾದರೂ ಒಂದು ರೀತಿಯಲ್ಲಿ ಹೊಗಳುತ್ತಿದ್ದರೆ ಆಗ ಮಾತ್ರ ಇವರಿಗೆ ಸಂತೋಷವಾಗುತ್ತದೆ. ಈ ಲೋಕದಲ್ಲಿ ಹಣಕ್ಕೆ ಹೆಚ್ಚು ಬೆಲೆ. ಹಣ ಇದ್ದಾಗ ತುಂಬಾ ಹುರುಪಿನಿಂದ ಇರುವ ಮಾನವನು ಹಣ ತೀರಿದ ಬಳಿಕ ಹಾಳು ಬಿದ್ದ ಊರಿನನಾಯಿ ಅಂತಾಗುತ್ತಾನೆ ಎನ್ನುವುದನ್ನು,

 ಧನ ಕನಕ ಉಳ್ಳತನಕ/ ದಿನಕರ ನಂತಕ್ಕು/

 ಧನಕನಕ ಹೋದ ಮರುದಿನವೇ  ಹಾಳೂರ/

ಶುನಕನಂತಕ್ಕು, ಸರ್ವಜ್ಞ  ಎಂದು ಹೇಳುತ್ತಾನೆ. 

ಇದರ ಜೊತೆಗೆ

ಸಿರಿಯಣ್ಣನುಳ್ಳತನಕ/ ಹಿರಿಯಣ್ಣನಾಗಿಕ್ಕು/

ಸಿರಿಯಣ್ಣ ಹೋದ ಮರುದಿನವೇ  ಹಾಳೂರ/

ನರಿಯಣ್ಣನಕ್ಕು , ಸರ್ವಜ್ಞ/

 ಕೈಯಲ್ಲಿ ಸಿರಿ, ಸಂಪತ್ತು ಇದ್ದರೆ ಅವರನೇ ಹಿರಿಯಣ್ಣ, ಅದೇ ಸಿರಿ ಹೋದ ಮರುದಿನವೇ ಅವನ್ನು ಜನರು ನರಿಯಣ್ಣ ಎನ್ನುತ್ತಾರೆ ಎನ್ನುತ್ತಾನೆ. 

  ಉದ್ಯೋಗದ ಬಗ್ಗೆ ಸರ್ವಜ್ಞ ಹೀಗೆ ಹೇಳುತ್ತಾನೆ ಉದ್ಯೋಗ ಮಾಡುವವನಿಗೆ ಲಕ್ಷ್ಮಿಯ ಅನುಗ್ರಹ ಉಂಟು. ಸೋಮಾರಿಯಾದವನ ಬಾಳು ಉಸಿರಿಲ್ಲದ ದೇಹದಂತೆ. ತುಂಬಾ ಬೆಳೆಯುವವರು ಲೋಕಕ್ಕೆ ಅನ್ನವನ್ನು ನೀಡುವವರು. ಒಕ್ಕಲು ಮಕ್ಕಳನ್ನು ಎಷ್ಟು ಹೊಗಳಿದರೂ ಸಾಲದು. ಪ್ರೀತಿಯಿಂದ ಜಮೀನನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವ ಸರ್ವಜ್ಞ,  ಕಲ್ಲು ಕಳೆಗಳನ್ನು ತೆಗೆಯದಿದ್ದರೆ, ಆ ಜಮೀನಿನಲ್ಲಿ ಹುಲ್ಲು ಮಾತ್ರ ಬೆಳೆಯುತ್ತದೆ. ಸೋಮಾರಿಯಾದವನಿಗೆ ತಿನ್ನಲು ಕೂಳಿಲ್ಲವಾದರೂ ಕೂಲಿ  ಮಾಡಿ ಜೀವಿಸಬೇಕು. ಗಂಡುಗಲಿಯಂತೆ ಬಾಳು, ಕೈಯಲ್ಲಿ ಒಂದು ಉದ್ಯೋಗ ಇದ್ದರೆ ಸಾಕು, ಸರವು ಮಾಣಿಕ್ಯವಾಗುತ್ತದೆ. ಕಾಯಕವೇ ಕೈಲಾಸವು. ಅದನ್ನು ಹೀನಾಯ ಮಾಡಬೇಡ. ಇದೇ ಕಾಯಕದಲ್ಲಿ ಕೈಲಾಸವನ್ನು ಕಾಣು ಎನ್ನುತ್ತಾನೆ.

 ಕಲೆ, ಸಾಹಿತ್ಯ, ಸಂಗೀತದ ಬಗ್ಗೆಯೂ ಸರ್ವಜ್ಞ ಮಾತನಾಡಿದ್ದಾನೆ.

 ಗೀತ ವಾದ್ಯವು ಲೇಸು/ ಮಾತಿನಲ್ಲಿ ಮೃದುಲೇಸು,

 ಓತಪ್ರೋತವಾಗಿ ಹರಿದ ಗಾನವೇ ಲೇಸು/ ಪಾತಾಳವೇ ಲೇಸು ಸರ್ವಜ್ಞ 

ಗೀತ ವಾದ್ಯವು ಬಹಳ ಒಳ್ಳೆಯದು. ಮಾತಿನಲ್ಲಿ ಮೃದುವಾಗಿರಬೇಕು. ಧಾರಾವಾಹಿಯಾಗಿ ಹರಿಯುವ ಗಾನಾಮೃತ ಲೇಸು. ಜಂಪೆ ತಾಳವು ತುಂಬಾ ಆಸಕ್ತಿದಾಯಕ. ಜಾಣೆಯಾದವಳ ಮಾತು ಚೆನ್ನ. ವೀಣೆಯ ನಾದ ಪ್ರಮೋದ. ಕಲ್ಯಾಣ ರಾಘವೇ ಸರಿಯಾದ ರಾಗ. ಬೆಳಕು ಹರಿದಾಗ ಭೈರವೀರಾಗವು, ಹಗಲು ಹೊತ್ತಿನಲ್ಲಿ ಮಲಹರಿ ರಾಗವು, ರಾತ್ರಿ ವೇಳೆಯಲ್ಲಿ ಗೌಳರಾಗವು ಹರಿದು ಬರುತ್ತಿದ್ದರೆ ಲಕ್ಷ್ಮಿ ಸಹ ನಮ್ಮಲ್ಲಿ ಇರುತ್ತಾಳೆ ಎನ್ನುತ್ತಾನೆ.  ಒಳ್ಳೆಯ ನಾದವು ಹರಿಯುತ್ತಿದ್ದರೆ ಅದನ್ನು ಕೇಳುವ ಆತುರ ಋತುಗಳಿಗೆ ಉಂಟಾಗುತ್ತದೆ. ಅದರಿಂದ ಮನಸ್ಸಿಗೆ ಉಂಟಾಗುವ ಸುಖವು ಪರಮಾತ್ಮನಿಗೆ ಗೊತ್ತು, ಮಗು ಅಳುವಾಗ ಜೋ ಎಂಬ ರಾಗ ಕೇಳಿಬರುತ್ತದೆ.  ಇದು  ತಾಯಿಯನ್ನು ಸುಖಾನಂದದಲ್ಲಿ ತೇಲಿಸುತ್ತದೆ. ಶಂಕರಭರಣ ರಾಗದ ಆನಂದವನ್ನು ವರ್ಣಿಸಲು ಸಾಧ್ಯವೇ ಇಲ್ಲ. ಈ ಸಂಗೀತ ಪ್ರಿಯರು ಈ ರಾಗ, ನಾದಕ್ಕೆ ಮನಸೋಲದೆ ಇಲ್ಲ.  ಅವಿಲ್ಲದ ಪದವು ಕೇಳಲು ಇಂಪಾಗಿರುವುದಿಲ್ಲ. ಪ್ರಾಸವನ್ನು ಅಲಕ್ಷ್ಯ ಮಾಡದೆ ಸುಂದರವಾಗಿ ಬರೆದಾಗ ಸಾಹಿತ್ಯ ನಿಜಕ್ಕೂ ಸುಗ್ರ್ರಾಸವೇ ಸರಿ ಎನ್ನುತ್ತಾನೆ. 

 ಪ್ರಾಸವಿಲ್ಲದ ಪದವು/ ಲೇಸೆನಿಸಲಾರದು/

 ಪ್ರಾಸವನು ಸಣ್ಣದೆನ ಬೇಡ /

ಅದುವೇ ಸು/ಗ್ರಾಸವೆನಿಸುವುದು ಸರ್ವಜ್ಞ

ಹೀಗೆ ಜೀವನದ ಎಲ್ಲಾ ರಂಗಗಳ ಬಗ್ಗೆ ಸರ್ವಜ್ಞ ತನ್ನ ಅನುಭವದ ನುಡಿಗಳನ್ನು ಆಡುವ ಮೂಲಕ, ಟೀಕಿಸುವ, ವ್ಯಂಗ್ಯ ಮಾಡುವ ಮೂಲಕ  ಮೇರುಸದೃಶ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾನೆ. ಸರ್ವಜ್ಞನ ವಚನಗಳೇ ಹಾಗೆ. ಅದರಲ್ಲಿನ ಅರ್ಥವಿಶಿಷ್ಟವಾದುದು ಎಲ್ಲಾ ಆಯಾಮಗಳಲ್ಲಿ,. ಎಲ್ಲಾ ಕಾಲಕ್ಕೂ  ಪ್ರಸ್ತುವೆನಿಸುವ  ಮಹಾನ್ ಸಾಹಿತ್ಯ ಸರ್ವಜ್ಞನ ವಚನ. 

- ದತ್ತಾತ್ರೇಯ ಹೆಗಡೆ 

೧೦.೭.೨೦೨೬ 

.........................


Comments

Popular posts from this blog