ಸ್ತ್ರೀ- ಪುರುಷ ಸಮಾನತೆಯ ಸಾಕ್ಷಾತ್ಕಾರದ 

‘ಚಿತ್ರಾಂಗದಾ’



 ವಿಶ್ವಕವಿ ರವೀಂದ್ರನಾಥ ಠಾಕೂರರ ಏಕಾಂಕ ನಾಟಕ ’ಚಿತ್ರ’ ದ ಕಥೆಯನ್ನು  ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅತ್ಯಂತ ಸೊಗಸಾಗಿ  ಖಂಡಕಾವ್ಯದ ರೂಪದಲ್ಲಿ ಕನ್ನಡೀಕರಿಸಿದವರು ದಿ.  ಜಿ ಎಸ್.  ಶಾಮಣ್ಣ ಅವರು.

 ಮಣಿಪುರದ ರಾಜಕುಮಾರಿ ಚಿತ್ರಾಂಗದೆ ಮತ್ತು ಅರ್ಜುನನ ಪ್ರೇಮಕಥೆಯೇ ಈ  ಕೃತಿಯ ಹೂರಣ. ಪ್ರಕೃತಿಪ್ರೇಮ ಮತ್ತು ಮಾನವೀಯ ಮೌಲ್ಯಗಳ ಸಮ್ಮಿಲನದ ಅನಾವರಣವಾಗಿ ತೆರೆದುಕೊಳ್ಳುವ ಈ ಖಂಡಕಾವ್ಯ ತನ್ನ ಓಘ ಮತ್ತು ಲಯಬದ್ಧತೆಯಿಂದಾಗಿ ಸಹೃದಯ ಓದುಗರನ್ನು ಮಂತ್ರಮುಗ್ಧಗೊಳಿಸುತ್ತದೆ.  

  ಯಕ್ಷಗಾನ,  ಪೌರಾಣಿಕ ನಾಟಕ ಮತ್ತಿತರ ಕಲಾ ಪ್ರಕಾರಗಳಲ್ಲಿ ಚಿತ್ರಾಂಗದೆ ಮಣಿಪುರದ ರಾಜ  ಚಿತ್ರವಾಹನನ ಮಗಳು.  ಅರ್ಜುನನ ಹೆಂಡತಿಯರಲ್ಲಿ ಒಬ್ಬಳು. ಅತ್ಯಂತ ಧೈರ್ಯಶಾಲಿ,  ಸಮರಕಲಾ ನಿಪುಣೆ, ಯೋಧ ರಾಜಕುಮಾರಿ. ಅರ್ಜುನ ವನವಾಸದ ಸಮಯದಲ್ಲಿ ಮಣಿಪುರಕ್ಕೆ ಆಗಮಿಸುವುದು, ಅವಳ ಸೌಂದರ್ಯಕ್ಕೆ ಮಾರುಹೋಗಿ ವಿವಾಹವಾಗುವುದು, ಅವರೀರ್ವರ ಪ್ರೇಮದ ಕುರುಹಾಗಿ ಬಬ್ರುವಾಹನ ಜನಿಸುವುದು ಇತ್ಯಾದಿ. 

ಆದರೆ ಇಲ್ಲಿಯ ‘ಚಿತ್ರಾಂಗದೆ’ಯ ಸನ್ನಿವೇಶವೇ ಬೇರೆ. ಮಣಿಪುರದ ರಾಜನಿಗೆ ಗಂಡು ಮಕ್ಕಳಿಲ್ಲದ ಕಾರಣ ಮಗಳನ್ನೇ ಮಗನಂತೆ ಬೆಳೆಸುವುದು, ಯುದ್ಧ ಕಲೆಯಲ್ಲಿ ನಿಪುಣೆಯಾದ ಆಕೆ ರಾಜ್ಯ ರಕ್ಷಣೆಯ  ಹೊಣೆ ಹೊತ್ತುನಿಲ್ಲುವುದು, ಗಂಡುಡುಗೆಯಲ್ಲಿಯೇ  ವಿಜೃಂಭಿಸುವುದು! ಅದನ್ನೇ ಬದುಕಿನ ಹೆಚ್ಚುಗಾರಿಕೆ ಎಂದು ಭ್ರಮಿಸುವುದು!

 ಒಂದು ದಿನ ಪೂರ್ಣಾ ನದಿಯ ಕಾಡಿಗೆ ವನ ವಿಹಾರಕ್ಕೆ ಹೊರಟಿದ್ದ ಚಿತ್ರಾಂಗದೆಯ ದೃಷ್ಟಿಗೆ ಒಣಗಿದೆಲೆಗಳ ಮೇಲೆ ಪವಡಿಸಿರುವ ಪುರುಷನೋರ್ವ ಕಣ್ಣಿಗೆ ಬೀಳುತ್ತಾನೆ.   ತಾನು ನಡೆವ ದಾರಿಗೆ ಅಡ್ಡವಾಗಿ ಮಲಗಿದ್ದ ಆತನಿಗೆ ಬದಿಗೆ ಸರಿಯುವಂತೆ ದರ್ಪದಿಂದ ಹೇಳುತ್ತಾಳೆ. ಅವನು ತುಸುವೂ ಮಿಸುಕುದಿದ್ದಾಗ ಬಿಲ್ಲಿನಿಂದ ತಿವಿದಾಗ, ಬೂದಿಯೊಳಗೆ ಹುದುಗಿರುವ ಬೆಂಕಿಯಂತೆ ಚಿತ್ರಾಂಗದೆಯ ಮುಂದೆ ಆತ ನಿಂತು ಬಿಡುತ್ತಾನೆ. ಪ್ರಾಯಶಃ ಗಂಡುಡುಗೆಯ ಹೆಣ್ಣು ಮಗಳನ್ನು ಕಂಡು ಅವನ ತುಟಿಯಂಚಿನಲ್ಲಿ ಲಾಸ್ಯವಾಡುವುದು. 

 ಅವನಿಗೇನೋ ಚಿತ್ರಾಂಗದೆಯ ವಿಚಿತ್ರ ವೇಷಭೂಷಣ ಕುತೂಹಲ ಹುಟ್ಟಿಸಿರಬಹುದು,  ತಮಾಷೆ ಅನ್ನಿಸಿರಲೂಬಹುದು. ಆದರೆ ಚಿತ್ರಾಂಗದೆಯ ಬದುಕಿನಲ್ಲಿ ಮೊತ್ತ ಮೊದಲನೆಯ ಬಾರಿಗೆ  ತಾನೋರ್ವ  ಹೆಣ್ಣೆಂಬ ಲಜ್ಜೆ, ಮಾರ್ದವತೆ ಹುಟ್ಟಿಕೊಳ್ಳುತ್ತದೆ. ತನ್ನಿದಿರು ನಿಂತವನು ಪುರುಷನೆನ್ನುವುದು ಅರಿವಿಗೆ ಬಂದು ಮನ ಪುಳಕಗೊಳ್ಳುತ್ತದೆ. ಅಸಹಜ ಹೆಣ್ಣಾಗಿದ್ದ ಚಿತ್ರಾಂಗದೆ ಸಹಜದ ಹೆಣ್ಣಾಗಿ ಅನಾವರಣಗೊಳ್ಳುವ  ಪರಿಯಿದು.

 ಎದುರು ನಿಂತ ಪುರುಷ ಮಧ್ಯಮ ಪಾಂಡವ  ಅರ್ಜುನನೆಂದು ಅವನ ಬಾಯಿಯಿಂದಲೇ ಕೇಳಿ  ತಿಳಿದುಕೊಳ್ಳುತ್ತಾಳೆ. ಅರ್ಜುನನಿಗೆ ಸರಿಸಮವಾಗಿ ನಿಂತು ಹೋರಾಡಬೇಕೆಂಬ, ಜೊತೆಯಾಗಿ ನಿಲ್ಲುವ ಯೋಧೆಯೆಂದು ಸಾಬೀತುಪಡಿಸಬೇಕೆಂಬ ಕನಸು ಕಂಡದ್ದನ್ನು ಮೆಲುಕು ಹಾಕುತ್ತಾಳೆ. ಅಷ್ಟರಲ್ಲಿ ಅರ್ಜುನ  ಅವಳ ಕಣ್ಣಿನಿಂದ ಮರೆಯಾಗಿ ಬಿಡುತ್ತಾನೆ. 

  ಇತ್ತ ಚಿತ್ರಾಂಗದೆ ತನ್ನರಮನೆಗೆ ಹಿಂತಿರುಗಿದ್ದೇ ತಡ, ತಾನು ತೊಟ್ಟಿದ್ದ ಗಂಡುಡುಗೆ ಕಿತ್ತು ಬಿಸಾಕಿ, ಸರ್ವಾಲಂಕಾರಭೂಷಿತೆಯಾಗಿ, ಸೀರೆಯುಟ್ಟು ಅಭ್ಯಾಸವಿಲ್ಲದಿದ್ದುದರಿಂದ ತೆರೆಗೂ ಜಾರಿದರೂ ಲೆಕ್ಕಿಸದೆ, ಅರ್ಜುನನನ್ನು ಅರಸಿ ಓಡುತ್ತ ಶಿವದೇಗುಲದಲ್ಲಿ ಆತನನ್ನು ಕಾಣುತ್ತಾಳೆ. ಆತನಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾಳೆ. ಹನ್ನೆರಡು ವರ್ಷಗಳ ಕಾಲ ಬ್ರಹ್ಮಚರ್ಯ ವ್ರತದಲ್ಲಿರುವ ಕಾರಣ ಮದುವೆಯಾಗಲು ಸಾಧ್ಯವಿಲ್ಲವೆನ್ನುವುದು ಖಡಾಖಂಡಿತವಾದ ಮಾತು ಆತನಿಂದ. ವಿರಹಿಣಿಯಾದ ಚಿತ್ರಾಂಗದೆ ಆಗ ಮೊರೆ ಹೋಗುವುದೇ ಕುಸುಮಶರ ಕಾಮದೇವನನ್ನು, ಮತ್ತವನ ಸಖ ಋತುಗಳ ರಾಜ ವಸಂತನನ್ನು.

 ಇಲ್ಲಿ ಮದನ ಮತ್ತು ವಸಂತ ಎನ್ನುವ ಪ್ರಕೃತಿ ಕಾವ್ಯಕ್ಕೆ ಪೂರಕವಾದ ಸೊಬಗೀಯುವ ಹಿನ್ನೆಲೆಯ ದೃಶ್ಯವಲ್ಲ. ಜೀವಂತ ಪಾತ್ರಗಳಾಗಿ ಬೆರೆತು  ಚಿತ್ರಾಂಗದೆಯ ಭಾವನೆಗಳೊಂದಿಗೆ ಮೇಳೈಸಿರುವುದು ಈ ಕೃತಿಯ ವಿಶೇಷತೆ.

 ಅರ್ಜುನನಲ್ಲಿ ಅನುರಕ್ತಳಾದ ಚಿತ್ರಾಂಗದೆ ಕನಿಷ್ಠ ಒಂದು ದಿನದ ಮಟ್ಟಿಗಾದರೂ ಗಂಡುಡುಗೆಯ ಒರಟುರೂಪದ ಬದಲಾಗಿ ಚೆಲುವಿನ ಖನಿಯಾಗಿ  ಬದಲಾಯಿಸುವಂತೆ ಮದನ ವಸಂತರಲ್ಲಿ  ಬೇಡಿಕೊಳ್ಳುತ್ತಾಳೆ. ಒಂದು ದಿನವೇಕೆ, ಒಂದು ವರ್ಷಪರ್ಯಂತ ಮಧುಮಾಸದ ಪ್ರಕೃತಿಯ ಐಸಿರಿಯಂತೆ ಕಂಗೊಳಿಸುವ ವರ ನೀಡುತ್ತಾರೆ ಮದನ -ವಸಂತ.

 ಅಪ್ರತಿಮ ರೂಪಸಿಯಾದ ಚಿತ್ರಾಂಗದೆ ಅರ್ಜುನನ ಮುಂದೆ ಸುಳಿದಾಡುವುದು, ಅವಳ ರೂಪರಾಶಿಗೆ ಅರ್ಜುನ ಮನ ಸೋಲುವುದು,  ಅವಳ ಮುಂದೆ ಪ್ರೇಮಭಿಕ್ಷೆ ಬೇಡುವುದು. ಇಬ್ಬರೂ ಪ್ರೇಮ ಸುಧೆಯಲ್ಲಿ ಮಿಂದೇಳುವುದು,  ಮುಳುಗಿ ಬಿಡುವುದು ನಡೆಯುತ್ತದೆ.  ಇದ್ದಕ್ಕಿದ್ದಂತೆ ಒಂದು ದಿನ ಚಿತ್ರಾಂಗದೆಗೆ ದೇಹ ಸೌಂದರ್ಯದಿಂದ ಗೆದ್ದ ಪ್ರೀತಿ ಶಾಶ್ವತವಲ್ಲವೆನ್ನುವ  ಅರಿವಾಗುವುದು, ಅರ್ಜುನನಿಗೆ ನಿಜ ಹೇಳಬೇಕೆಂಬ ಮನಸ್ಸಾಗುತ್ತದೆ. ಅದೇ ಹೊತ್ತಿಗೆ ಸರಿಯಾಗಿ ಇತ್ತ ಅರ್ಜುನನಿಗೆ  ಮಣಿಪುರದ ರಾಜ್ಯ ರಕ್ಷಕಿ ಚಿತ್ರಾಳ ಪೌರುಷದ ಗುಣಗಾನ ಕೇಳಿ ಬರುವುದು, ಅಷ್ಟೇನೂ ರೂಪವತಿಯಲ್ಲದ  ಅವಳ ಪೌರುಷದ ಕಥೆ ಕೇಳಿ ಮೆಚ್ಚಿ, ಅವಳನ್ನೊಮ್ಮೆ ಕಾಣಬೇಕೆಂಬ ಕುತೂಹಲ ಹೆಚ್ಚಾಗುತ್ತದೆ.

 ಅಷ್ಟರಲ್ಲೇ ವನವಾಸದ ಅವಧಿ ಮುಗಿದು ಹಸ್ತಿನಾವತಿಗೆ ತೆರಳುವ ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಜಯಿಸಿ, ಬಂಧುಹತ್ಯಾ ದೋಷಕ್ಕಾಗಿ ಯಜ್ಞ ನಡೆಸಲು ಮುಂದಾಗಿರುತ್ತಾರೆ. ಯಜ್ಞಾಶ್ವದ ಬೆಂಗಾವಲಾಗಿ ತೆರಳುವ ಅರ್ಜುನ ಮತ್ತೆ ಮಣಿಪುರಕ್ಕೆ ಆಗಮಿಸುವುದು, ಮಣಿಪುರದ ರಾಜ ಬಬ್ರುವಾಹನನೊಡನೆ ಅರ್ಜುನ ಕಾದಾಡುವುದು, ತಂದೆ-ಮಗನ ನಡುವೆ ನಡೆಯುತ್ತಿರುವ  ಯುದ್ಧ ನಿಲ್ಲಿಸಲು ಚಿತ್ರಾಂಗದೆ ಮಧ್ಯೆ ಪ್ರವೇಶಿಸುವುದು, ಅವರೀರ್ವರ ಬಾಣಾಹುತಿಗೆ ಗುರಿಯಾಗಿ ಅಸು ನೀಗುವ ಸಂದರ್ಭದಲ್ಲಿ , ಈ ಹಿಂದಿನ ಘಟನಾವಳಿಗಳನ್ನು  ನೆನಪಿಸಿ ಚಿತ್ರಾಂಗದೆ ಪ್ರಾಣ ಬಿಡುವಲ್ಲಿಗೆ ಈ ಖಂಡಕಾವ್ಯ ಪೂರ್ಣಗೊಳ್ಳುತ್ತದೆ.

 ಒಟ್ಟಿನಲ್ಲಿ, ಹೆಣ್ಣಿಗೆ ಸೌಂದರ್ಯವೇ ಮುಖ್ಯ ಎನ್ನುವ ಮಾತು ಅನಾದಿಕಾಲದಿಂದಲೂ ಒಪ್ಪಿತವಾಗಿರುವ ಉಕ್ತಿಯೇ ಆಗಿದ್ದರೂ, ಅದಕ್ಕಿಂತಲೂ ಮಿಗಿಲಾದುದು ಸತಿಗೆ ಪತಿ,  ಪತಿಗೆ ಸತಿ ಒತ್ತಾಸೆಯಾಗಿ ನಿಲ್ಲುವುದೇ ಆಗಿದೆ ಎನ್ನುವುದನ್ನು, ಚಿತ್ರಾ ತನಗೆ ಸೀಮಿತ ಅವಧಿಗೆ ಬಂದ ಸೌಂದರ್ಯವನ್ನು ಕಳಚುವುದರ ಮೂಲಕ, ಅರ್ಜುನ ಅದನ್ನು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವುದರ ಮೂಲಕ ಇಲ್ಲಿ ಸಾಬೀತಾಗುತ್ತದೆ. ಹೆಣ್ಣೆಂದರೆ  ಕೇವಲ ಸೌಂದರ್ಯದ ಬೊಂಬೆಯಲ್ಲ, ಸ್ವಂತಿಕೆ, ಸ್ವಾಭಿಮಾನ ಶಕ್ತಿ ಸಾಮರ್ಥ್ಯಗಳೇ ನಿಜವಾದ ಸೌಂದರ್ಯ ಎನ್ನುವುದನ್ನು, ಬಹಿರಂಗ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯವೇ ಹಿರಿದಾದದು ಎನ್ನುವುದನ್ನು  ಈ ಖಂಡಕಾವ್ಯ ಅತ್ಯಂತ ಪರಿಣಾಮಕಾರಿಯಾಗಿ ಧ್ವನಿಸುತ್ತದೆ.  

  ’ಚಿತ್ರಾಂಗದಾ’  ಸ್ತ್ರೀ- ಪುರುಷ ಸಮಾನತೆಯ ಸಾಕ್ಷಾತ್ಕಾರದ ಕಥೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಕೃತಿ ದಿ. ಜಿ. ಎಸ್ ಶಾಮಣ್ಣ ಅವರ ಪ್ರಬುದ್ಧ ಪದ ಗಳ, ವೈಭವಯುತ ವರ್ಣನೆಗಳ ಮೆರವಣಿಗೆಯ  ಬರವಣಿಗೆ ಎನ್ನಬಹುದು.

-ದತ್ತಾತ್ರೇಯ ಹೆಗಡೆ

ಶಿವಮೊಗ್ಗ

೨೨.೦೭.,೨೦೨೬

.............................

Comments

Popular posts from this blog