ಶತಮಾನಗಳ ಹಿಂದಿನ ವಿದೇಶಿ ಜನಜೀವನ ಕಟ್ಟಿಕೊಡುವ
‘ಸಿಲ್ಕ್ ರೂಟ್’
‘ಸಿಲ್ಕ್ ರೂಟ್’ ಈ ಕೃತಿಯು ಒಂದು ಪ್ರವಾಸ ಕಥನವೂ ಹೌದು, ಚರಿತ್ರೆಯ ಪುಸ್ತಕವೂ ಹೌದು, ಚಿಂತನೆಗಳ ಗುಚ್ಛವೂ ಹೌದು. ಶತಮಾನಗಳ ಹಿಂದೆ ರೇಷ್ಮೆ ರಸ್ತೆಯ ನಗರಗಳಲ್ಲಿ ಜೀವನ ಹೇಗಿತ್ತು ಮತ್ತು ಈಗ ಹೇಗಿದೆ ಎನ್ನುವುದರ ತುಲನಾತ್ಮಕ ನೋಟ ಇದರಲ್ಲಿದೆ. ರೇಷ್ಮೆ ರಸ್ತೆಯ ಬಗ್ಗೆ ವಿವರವಾದ ಯಾವುದೇ ಆಕರ ಗ್ರಂಥಗಳು ಇಲ್ಲಿಯವರೆಗೆ ದೊರೆತಿಲ್ಲ. ಆದರೆ ಆ ಕೊರತೆಯನ್ನು ಈ ಪುಸ್ತಕ ನೀಗಿಸಲು ಪ್ರಯತ್ನಿಸಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಡಾ. ಡಿ ವಿ ಗುರುಪ್ರಸಾದ್ ಇದರ ಲೇಖಕರು. ಇದು ಅವರ ೧೦೦ನೆಯ ಕೃತಿಯೂ ಹೌದು. ಪುರಾತನ ರಮ್ಯ, ರಮಣೀಯ ಹಾಗೂ ಕೌತುಕಮಯವಾದ ರೇಷ್ಮೆ ರಸ್ತೆಯನ್ನು ನೋಡಬೇಕೆಂದು ಆಸೆ ಹಲವು ದಶಕಗಳಿಂದಲೂ ಇತ್ತು. ಬಾಲ್ಯದಿಂದಲೇ ಇದ್ದ ಈ ಕುತೂಹಲವನ್ನು ತಮ್ಮ ಸೇವಾ ನಿವೃತ್ತಿಯ ನಂತರ ನೀಗಿಸಿಕೊಂಡಿದ್ದಾಗಿ ಕೃತಿಯಲ್ಲಿ ಅವರು ಹೇಳಿಕೊಂಡಿದ್ದಾರೆ.
ರೇಷ್ಮೆ ರಸ್ತೆ ಅಥವಾ ಸಿಲ್ಕ್ ರೂಟ್ ಎಂಬ ಹೆಸರು ಈ ರಸ್ತೆಗೆ ಬಂದಿದ್ದೇ ಚೀನಾ ದೇಶದಿಂದ ರೇಷ್ಮೆ ಬಟ್ಟೆಯು ರವಾನೆಯಾಗುತ್ತಿದ್ದ ಕಾರಣದಿಂದ. ಚೀನಿ ಅರಸರು ಮಧ್ಯ ಏಷ್ಯಾ ಕಡೆಯಿಂದ ರಸ್ತೆ ನಿರ್ಮಿಸಿ ಅವುಗಳನ್ನು ವ್ಯಾಪಾರಕ್ಕೆ ಬಳಸಲು ತೀರ್ಮಾನಿಸಿದರು. ತಮ್ಮ ದೇಶದ ರಾಜಧಾನಿಯಾಗಿದ್ದ ಕ್ಸಿಯಾನ್ ನಗರದಿಂದ ಪಶ್ಚಿಮದಲ್ಲಿ ಸುಮಾರು ಒಂದು ಸಾವಿರ ಕಿಲೋಮೀಟರ್ ರಸ್ತೆ ಮಾಡಿದರು. ಈ ರಸ್ತೆಯೇ ಅನಂತರ ರೇಷ್ಮೆ ರಸ್ತೆ ಎಂದು ಹೆಸರುವಾಸಿಯಾಯಿತು.
ರಸ್ತೆಯ ಆರಂಭದ ಸ್ಥಳವಾದ ಚೀನಾದ ರಾಜಧಾನಿ ಕ್ಸಿಯಾನ್ ನಗರದಿಂದಲೇ ರೇಷ್ಮೆ ರಸ್ತೆಯ ಕಥನಕವು ಆರಂಭವಾಗುತ್ತದೆ. ಪ್ರಸ್ತುತ ಕೃತಿಯಲ್ಲಿ ಲೇಖಕರು ರೇಷ್ಮೆ ರಸ್ತೆಯ ಆರಂಭದ ಸ್ಥಳದಿಂದ ಹಿಡಿದು ಅಂತ್ಯದವರೆಗಿನ ದೇಶಗಳ ಪ್ರವಾಸವನ್ನು ಮಾಡಿ ಅಲ್ಲಿನ ಐತಿಹಾಸಿಕ, ವ್ಯಾಪಾರ, ವಾಣಿಜ್ಯ, ಸಂಸ್ಕೃತಿ, ಆಚಾರ- ವಿಚಾರ, ಭಾಷೆ, ಜನಪದ, ಜನಪದ ಕಥೆ, ಸಾಂಸ್ಕೃತಿಕ ಕ್ಷೇತ್ರ, ಕಲೆ, ಪ್ರವಾಸಿ ಸ್ಥಳಗಳ ಕುರಿತು ಅಪೂರ್ವದ ಮಾಹಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದಾಗಿ ಈ ಕೃತಿಯನ್ನು ಓದಿದಾಗ ನಾವು ಆ ದೇಶಗಳಿಗೆ ಪ್ರವಾಸ ಮಾಡಿ ಬಂದ ಸುಂದರ ಅನುಭವವಾಗುತ್ತದೆ.
ರೇಷ್ಮೆ ರಸ್ತೆ ರೋಮಾಂಚನ, ಸಾಹಸ, ಕೌತುಕ ಮತ್ತು ಕುತೂಹಲದ ಭಾವನೆಗಳನ್ನು ಮೂಡಿಸುತ್ತದೆ. ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ ಹಲವು ಹತ್ತು ಸಾಮ್ರಾಜ್ಯಗಳ ಏಳು- ಬೀಳುಗಳಿಗೆ ಕಾರಣವಾಗಿದೆ. ನಾಲ್ಕು ದಿಕ್ಕುಗಳಿಗೂ ಇದು ಸಂಪರ್ಕವನ್ನು ಕಲ್ಪಿಸುತ್ತಿತ್ತು. ಮುಖ್ಯ ರಸ್ತೆಯು ಪೂರ್ವ ದಿಕ್ಕಿನ ಚೀನಾ ದೇಶದ ಕ್ಸಿಯಾನ್‌ನಿಂದ ಆರಂಭವಾಗಿ ಮಧ್ಯ ಏಷ್ಯಾದ ತುರ್ಕಮೆನಿಸ್ಥಾನ್ ಹಾಗೂ ಅಫ್ಘಾನಿಸ್ಥಾನ್, ಇರಾನ್, ಇರಾಕ್ ದೇಶಗಳ ಮೂಲಕ ಟರ್ಕಿಯನ್ನು ತಲುಪಿ ಅಲ್ಲಿಂದ ಇಸ್ತಾಂಬುಲ್ ನಗರದಲ್ಲಿ ಅಂತ್ಯಗೊಳ್ಳುತ್ತಿತು. ಈ ರಸ್ತೆಗೆ ಹಲವು ಉಪ ರಸ್ತೆಗಳು ಹತ್ತಾರು ಜಾಗಗಳಲ್ಲಿ ಸಂಧಿಸುತ್ತಿದವು. ಈ ರಸ್ತೆಯ ಜಾಲಕ್ಕೆ ಸಮುದ್ರ ಮಾರ್ಗವು ನಂತರ ಸೇರ್ಪಡೆಯಾಯಿತು. ಬೇರೆ ದೇಶಗಳಿಗೆ ಸರಕುಗಳನ್ನು ಇದರ ಮೂಲಕ ರವಾನಿಸಲಾಗುತ್ತಿತು. ಹೀಗಾಗಿ ಭೂಮಿ ಹಾಗೂ ಸಮುದ್ರದ ಮೇಲಿನ ಇಡೀ ಸಂಪರ್ಕ ಜಾಲವನ್ನು ರೇಷ್ಮೆ ರಸ್ತೆ ಎಂದೇ ಪರಿಗಣಿಸಲಾಗುತ್ತಿದೆ.
ರೇಷ್ಮೆ ರಸ್ತೆಯಲ್ಲಿ ದೊಡ್ಡ ಸಮಸ್ಯೆ ಎಂದರೆ ಕಳ್ಳಕಾಕರದ್ದಾಗಿತ್ತು. ಇದರಿಂದಾಗಿ ತಮ್ಮದೇ ರಕ್ಷಣಾ ಪಡೆಗಳನ್ನು ಕೆಲವು ದೇಶಗಳು ನೇಮಿಸಿಕೊಳ್ಳುತ್ತಿದ್ದವು. ರೇಷ್ಮೆ ರಸ್ತೆಯ ಹಲವು ಮಾರ್ಗಗಳಲ್ಲಿ ತನ್ನ ಸೈನಿಕರ ತಂಡವನ್ನು ಚೀನಾ ನೇಮಿಸಿತ್ತು. ಕ್ರಿಸ್ತಪೂರ್ವ ಎರಡನೇ ಶತಮಾನದಿಂದ ಹಿಡಿದು ೧೫ನೇ ಶತಮಾನದವರೆಗೆ ವ್ಯಾಪಕ ಬಳಕೆಯಲ್ಲಿದ್ದ ೬,೦೦೦ ಕಿ ಮೀ. ಉದ್ದದ ಈ ರಸ್ತೆ ಜಾಲವು ವಿಶ್ವದ ನಾಲ್ಕು ಪುರಾತನ ನಾಗರೀಕತೆಗಳಾದ ರೋಮ್, ಪರ್ಷಿಯಾ, ಭಾರತ ಮತ್ತು ಚೀನಾಗಳ ನಡುವೆ ಸಂಪರ್ಕ ಸೇತುವೆಯಾಗಿತ್ತು. ಒಂದು ಪ್ರಮುಖ ವಾಣಿಜ್ಯ ರಸ್ತೆಯಾಗಿ ಕಾರ್ಯನಿರ್ವಹಿಸಿ ಜೊತೆಗೆ ಹಿಂದೂ, ಇಸ್ಲಾಂ, ಜೋರಾಸ್ಟ್ರೀಯನ್, ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮಗಳ ಪ್ರಸಾರಕ್ಕೆ ಸಹಕಾರಿಯಾಯಿತು. ಸಂಗೀತ, ಸಾಹಿತ್ಯ, ಕಲೆಗಳು ಮತ್ತು ಭಾಷೆಗಳು ವಿನಿಮಯಗೊಂಡವು. ಈ ರಸ್ತೆಯ ಕಾರಣದಿಂದಲೇ ಪ್ಲೇಗ್ ರೋಗವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿತು. ವಿಶ್ವ ಒಂದು ಗ್ಲೋಬಲ್ ವಿಲೇಜ್ ಆಗಲು ಈ ರಸ್ತೆ ಪ್ರಮುಖ ಕಾರಣ ಎನ್ನುವುದನ್ನು ನೆನಪಿಸಿಕೊಳ್ಳಬೇಕು.
ಲೇಖಕರು ಈ ರಸ್ತೆಯಲ್ಲಿ ಪ್ರವಾಸ ಮಾಡಿದ ೧೦ ದೇಶಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕ್ರಿಸ್ತಪೂರ್ವ ೧೨ನೇ ಶತಮಾನದಲ್ಲಿಯೇ ಜೌ ರಾಜರ ಆಳ್ವಿಕೆಯಲ್ಲಿ ಚೀನಾ ರಾಜಧಾನಿಯಾಗಿದ್ದ ಕ್ಸಿಯಾನ್ ಪ್ರವಾಸಿಗರನ್ನು ಅತ್ಯಂತ ಹೆಚ್ಚು ಸೆಳೆಯುವ ಸ್ಥಳವಾಗಿತ್ತು. ಇಲ್ಲಿನ ಮಾರುಕಟ್ಟೆಯಲ್ಲಿ ಸಿಲ್ಕ್ ರೋಡ್ ಶಾಪಿಂಗ್ ಸ್ಟ್ರೀಟ್ ಇದೆ. ಪುರಾತನ ಕರಕುಶಲ ವಸ್ತುಗಳು ಇಲ್ಲಿ ದೊರೆಯುತ್ತವೆ. ಸಿಲ್ಕ್ ರಸ್ತೆ ಸಾಗುತ್ತಿದ್ದ ೨೨ ದೇಶಗಳಲ್ಲಿನ ಪ್ರಮುಖ ಸ್ಥಳಗಳ ಪ್ರತಿಕೃತಿಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಅವುಗಳಲ್ಲಿ ಮುಖ್ಯವಾದವೆಂದರೆ ತಾಜ್‌ಮಹಲ್, ಇಸ್ತಾಂಬುಲ್‌ನ ಗ್ರೇಟ್ ಮಾರ್ಕೆಟ್, ರೋಮನ್ ಫೋರಂ, ಮುಂತಾದವು. ಇಲ್ಲಿ ಸಿಲ್ಕ್ ರೋಡ್ ಮ್ಯೂಸಿಯಂ ಎನ್ನುವ ವಸ್ತು ಸಂಗ್ರಹಾಲಯವಿದೆ. ಇಲ್ಲಿ ರೇಷ್ಮೆ ರಸ್ತೆಗೆ ಸಂಬಂಧಿಸಿದ ಸಾವಿರಾರು ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಕಜಕಿಸ್ಥಾನ್ ದೇಶದಲ್ಲಿ ಅಲ್ಮಟ್ಟಿ ಪ್ರಮುಖ ನಗರ. ಇದು ರೇಷ್ಮೆ ರಸ್ತೆಯ ಒಂದು ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಉದ್ಯಾನವನಗಳು, ಪರ್ವತ ಶ್ರೇಣಿಗಳು, ರಿಪಬ್ಲಿಕ್ ಚೌಕ, ಕೆಥೆ ಡ್ರಾಲ್, ಜಿಬೆಕ್ ಜೂಲಿ ರಸ್ತೆ ಮುಂತಾದವು ಇಲ್ಲಿ ಪ್ರಮುಖವಾದವು.
ಉಜ್ಬೇಕಿಸ್ತಾನ ದೇಶವನ್ನು ಪರಿಚಯಿಸುವ ಲೇಖಕರು ಅಲ್ಲಿ ತಾಷ್ಕೆಂಟ್ ಅತಿ ದೊಡ್ಡ ನಗರವಾಗಿದೆ. ಇದು ಏಷ್ಯಾದ ಅತಿ ದೊಡ್ಡ ನಗರವೂ ಹೌದು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೆನಪಿನ ಉದ್ಯಾನವನ, ಅವರ ಎತ್ತರದ ನಿಂತಭಂಗಿಯ ಪ್ರತಿಮೆ, ಖಾಸ್ತ್ ಇಮಾಮ ಮಸೀದಿ, ಬೋನ್ ಜೋನ್ ಉದ್ಯಾನವನ, ಮೋಯಿ ಮುಬಾರಕ್, ಮದರಸಾ ಗ್ರಂಥಾಲಯ ಅಲ್ಲಿರುವ ವಿಶ್ವಪ್ರಸಿದ್ಧ ಅತಿ ಪುರಾತನ ಕುರಾನ್ ಗ್ರಂಥ, ಶೋ ಬಜಾರ್, ಅಪೇರಾ ಸಂಗೀತ ಭವನ ಮುಂತಾದವುಗಳನ್ನು ಪರಿಚಯ ಮಾಡಿಕೊಡುತ್ತಾರೆ. ಈ ದೇಶದಲ್ಲಿ ನಾಲ್ಕು ಮಾರುಕಟ್ಟೆ ಕಟ್ಟಡಗಳಿವೆ ಇವು ರೇಷ್ಮೆ ರಸ್ತೆಯ ಕಾಲದಲ್ಲಿ ವ್ಯಾಪಾರಿಗಳು ಉಪಯೋಗಿಸುತ್ತಿದ್ದ ಮಾರುಕಟ್ಟೆಗಳಾಗಿದ್ದವು. ಬುಖಾರ ಪಟ್ಟಣವು ರೇಷ್ಮೆ ರಸ್ತೆಯ ಪ್ರಮುಖ ಮಾರಾಟ ಕೇಂದ್ರವಾಗಿತ್ತು. ಬುಖಾರದಿಂದ ಮುಂದೆ ಸಮರ್‍ಖಂಡಕ್ಕೆ ರೇಷ್ಮೆ ರಸ್ತೆಯಲ್ಲಿ ಲೇಖಕರು ಪ್ರಯಾಣ ಮಾಡಿದ್ದನ್ನು ವಿವರಿಸುತ್ತಾರೆ.
ಸಮರ್ಖಂಡ ಕೇವಲ ಒಂದು ವಾಣಿಜ್ಯ ಕೇಂದ್ರವಾಗದೆ ದೊಡ್ಡ ಶೈಕ್ಷಣಿಕ ಕೇಂದ್ರವೂ ಆಗಿತ್ತು. ಅಲ್ಲಿನ ನೀಲಿ ಅರಮನೆ, ರೇಗಿಸ್ತಾನ್ ಚೌಕ, ಬಿಬಿ ಖಾನಿಮ್ ಮಸೀದಿ ಚಿತ್ರಣ ನೀಡಿದ್ದಾರೆ. ಪುರಾತನ ರೇಷ್ಮೆ ರಸ್ತೆ ಇಂದು ಇರದಿದ್ದರೂ ಆ ಕಾಲದಲ್ಲಿ ಬೆಸೆದ ಭಾರತೀಯರು ಮತ್ತು ಉಜ್ಬೇಕ್ ಜನರ ಬಾಂಧವ್ಯ ಇಂದಿಗೂ ಬಲಿಷ್ಠವಾಗಿದೆ ಎಂದು ವಿವರಿಸುತ್ತಾರೆ. ಅಜರ್‌ಬೈಜಾನ್ ದೇಶದ ಉತ್ತಮ ಗುಣಮಟ್ಟದ ರೇಷ್ಮೆ, ಕರಕುಶಲ ವಸ್ತುಗಳು ವಿಶ್ವದೆಲ್ಲೆಡೆ ಪ್ರಸಿದ್ಧವಾಗಿದ್ದವು. ಸಮುದ್ರದ ಎದುರು ಇರುವ ಕೋಟೆಯೊಳಗೆ ಪುರಾತನ ಬಾಕು ನಗರವಿದೆ. ಯಾನಾರ್ ಡಾಗ್ ಬೆಟ್ಟ, ಮಣ್ಣಿನ ಜ್ವಾಲಾಮುಖಿ, ಶೆರ್ವಾನ್ ಶಹಾನ ಅರಮನೆ, ನಿಜಾಮಿ ಸ್ಟ್ರೀಟ್, ಉದ್ಯಾನವನ, ಹೈಲ್ಯಾಂಡ್ ಪಾರ್ಕ್ ಮೊದಲಾದವುಗಳನ್ನು ವಿವರಿಸುತ್ತಾರೆ. ಜಾರ್ಜಿಯಾ ದೇಶದ ಪ್ರವಾಸದಲ್ಲಿ ರಾಜಧಾನಿಯಾಗಿರುವ ತಿಬಿಲಿಸಿ ರೇಷ್ಮೆ ರಸ್ತೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ರೇಷ್ಮೆ ಬಟ್ಟೆಯ ವ್ಯಾಪಾರಕ್ಕೂ ಹೆಸರಾಗಿತ್ತು ಎನ್ನುತ್ತಾರೆ. ಅಲ್ಲಿ ರೇಷ್ಮೆ ವ್ಯಾಪಾರ ವಹಿವಾಟುಗಳು ಹಿಂದೆ ನಡೆಯುತ್ತಿದ್ದವು. ಜಾರ್ಜಿಯಾದಲ್ಲಿ ಹಾದು ಹೋಗುತ್ತಿದ್ದ ರೇಷ್ಮೆ ರಸ್ತೆ ಕಾಕಸಸ್ ಮತ್ತು ರಷ್ಯಾ ನಡುವಿನ ಏಕೈಕ ಸಂಪರ್ಕ ರಸ್ತೆಯಾಗಿದೆ. ಇದನ್ನು ಏಷ್ಯಾ ಹಾಗೂ ಯುರೋಪ್‌ಗಳ ನಡುವಿನ ಸಂಪರ್ಕ ಕಲ್ಪಿಸುವ ರಸ್ತೆ ಎಂದು ಕರೆಯಲಾಗುತ್ತದೆ. ವಿಶ್ವದ ಅತಿ ಸುಂದರ ರಸ್ತೆಗಳಲ್ಲಿ ಇದು ಒಂದು. ರೇಷ್ಮೆ ರಸ್ತೆಯ ಭಾಗವಾಗಿದ್ದಾಗ ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದರು ಎಂದು ಚಿತ್ರಿಸಿದ್ದಾರೆ.
ಪರ್ಷಿಯಾ ದೇಶದ ಬಗ್ಗೆ ಬರೆಯುವ ಲೇಖಕರು ಇಲ್ಲಿ ರೇಷ್ಮೆ ರಸ್ತೆಯ ಚಟುವಟಿಕೆಯು ರೇ ಎನ್ನುವ ಪಟ್ಟಣದಲ್ಲಿ ಇತ್ತು ಎನ್ನುತ್ತಾರೆ. ಇರಾನ್ ದೇಶವು ರೇಷ್ಮೆ ರಸ್ತೆಯ ಹಾದಿಯಲ್ಲಿದ್ದ ಕಾರಣದಿಂದ ಸಾವಿರ ವರ್ಷಗಳ ಹಿಂದಿನಿಂದಲೂ ರೇಷ್ಮೆ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಈಗಲೂ ಇಲ್ಲಿನ ಯಜ್ಡ್, ಇಸ್ಫಾಹನ್ ಪ್ರಾಂತಗಳು ರೇಷ್ಮೆ ತಯಾರಿಕೆಯಲ್ಲಿ ಮುಂದಿವೆ. ಇರಾನ್ ವಿಶ್ವದ ಎಂಟನೆಯ ಅತಿ ದೊಡ್ಡ ರೇಷ್ಮೆ ತಯಾರಿಕೆಯ ದೇಶವಾಗಿದೆ. ಈಜಿಪ್ಟ್‌ನಲ್ಲಿ ರೇಷ್ಮೆ ರಸ್ತೆಯ ಎರಡು ಕೊಂಡಿಗಳಿದ್ದವು. ಮೊದಲನೆಯದು ದೇಶದ ಪೂರ್ವ ಭಾಗದಲ್ಲಿದ್ದ ಬೆರೆನಿಕೆ ಎಂಬಲ್ಲಿತ್ತು. ಎರಡನೆಯದು ಅಲೆಕ್ಸಾಂಡ್ರಿಯಾದಲ್ಲಿತ್ತು. ಇಲ್ಲಿಂದ ಚಿನ್ನ ಮುಂತಾದ ವಸ್ತುಗಳು ರೇಷ್ಮೆ ಮಾರ್ಗವಾಗಿ ಭಾರತಕ್ಕೆ ಬರುತ್ತಿದ್ದವು. ಈ ಕಾರಣದಿಂದಲೇ ಅಲೆಕ್ಸಾಂಡ್ರಿಯಾ ರೇಷ್ಮೆ ರಸ್ತೆಯ ಒಂದು ಪ್ರಮುಖ ನಗರವಾಗಿ ಹೊರಹೊಮ್ಮಿತ್ತು ಎನ್ನುತ್ತಾರೆ.
ಪೆಟ್ರಾ, ಅಮ್ಮಾನ್, ಇಸ್ತಾಂಬುಲ್, ರೋಮ್, ಇಟಲಿ, ವೆನಿಸ್ ಮುಂತಾದ ದೇಶಗಳ ವೈಶಿಷ್ಟ್ಯತೆ, ಐತಿಹಾಸಿಕ, ಪ್ರೇಕ್ಷಣೀಯ ಸ್ಥಳ, ರೇಷ್ಮೆ ರಸ್ತೆಯಲ್ಲಿದ್ದ ವ್ಯಾಪಾರ- ವಹಿವಾಟು, ಸಂಪರ್ಕ ಮೊದಲಾದವುಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಕೊನೆಯಲ್ಲಿ ರೇಷ್ಮೆ ರಸ್ತೆಯಲ್ಲಿ ಭಾರತದ ಪಾತ್ರದ ಕುರಿತು ಚಿತ್ರಣ ನೀಡಿದ್ದಾರೆ. ರೇಷ್ಮೆ ರಸ್ತೆಯನ್ನು ಸೇರಲು ಭಾರತದಿಂದ ಇದ್ದ ಪ್ರಮುಖ ಭೂಮಾರ್ಗವೇ ತಕ್ಷಶಿಲೆಯ ರಸ್ತೆ. ಇದು ಬಂಗಾಳ ಕೊಲ್ಲಿಯ ತೀರದಲ್ಲಿದೆ. ತಕ್ಷಶಿಲೆಯಲ್ಲಿ ಮೂರು ರೇಷ್ಮೆ ರಸ್ತೆಗಳು ಸಂಧಿಸುತ್ತಿದ್ದವು. ಅವೆಂದರೆ, ಪೂರ್ವ ಭಾರತದಿಂದ ಬರುವ ರಸ್ತೆ, ಕಾಶ್ಮೀರ ಮೂಲಕ ಸಾಗುವ ರಸ್ತೆ ಮತ್ತು ಕಾಬೂಲ್ ಮೂಲಕ ಸಾಗುವ ರಸ್ತೆ. ಭೂಮಾರ್ಗದ ರೇಷ್ಮೆ ರಸ್ತೆಗಿಂತ ಜಲಮಾರ್ಗದ ರೇಷ್ಮೆ ರಸ್ತೆ ಹೆಚ್ಚಿನ ಪ್ರ್ರಾಮುಖ್ಯತೆ ಪಡೆದಿತ್ತು.
ರೇಷ್ಮೆ ರಸ್ತೆಯಲ್ಲಿ ವಾಣಿಜ್ಯ ಹಾಗೂ ಸಂಸ್ಕೃತಿಗಳು ಒಂದಕ್ಕೊಂದು ಬೆರೆಯುತ್ತಿದ್ದ ಕಾರಣ ಭಾರತದ ಸಂಸ್ಕೃತಿ ಮತ್ತು ಜ್ಞಾನ ಇತರ ದೇಶಗಳಿಗೆ ಪಸರಿಸಲು ಕಾರಣವಾಯಿತು. ಇದಕ್ಕೆ ರೇಷ್ಮೆ ರಸ್ತೆಯ ಕೊಡುಗೆಯೂ ಕಾರಣ. ಬೌದ್ಧ, ಹಿಂದು ಧರ್ಮವು ಇತರ ದೇಶಗಳಿಗೆ ಪಸರಿಸಲು ಇದೇ ರಸ್ತೆ ಕಾರಣ. ಸಂಸ್ಕೃತ ಭಾಷೆಯೂ ಈ ರಸ್ತೆ ಮೂಲಕವೇ ಇತರ ದೇಶಗಳಿಗೆ ಹರಡಿತು. ರೇಷ್ಮೆ ರಸ್ತೆ ಎಂಬ ಹೆಸರು ಚೀನಾದಿಂದ ರಫ್ತಾಗುತ್ತಿದ್ದ ರೇಷ್ಮೆ ಮೂಲಕ ಬಂದಿದ್ದರೂ ಈ ರಸ್ತೆಯ ಮೂಲಕ ಭಾರತದಿಂದ ಹರಿದ ವಿಜ್ಞಾನ, ಕಲೆ, ಸಂಸ್ಕೃತಿ, ಆಚಾರ- ವಿಚಾರ ಹಲವು ದೇಶಗಳ ಮೇಲೆ ಪ್ರಭಾವ ಬೀರಿದವು. ಹೀಗೆ ರೇಷ್ಮೆ ರಸ್ತೆ ಹಾದು ಹೋದ ಹತ್ತು ರಾಷ್ಟ್ರಗಳು ಮತ್ತು ಹದಿನಾರು ನಗರಗಳಲ್ಲಿ ಲೇಖಕರು ಪ್ರವಾಸ ಮಾಡಿ ಕಂಡುಂಡ ಅನುಭವವನನ್ನು ಈ ಕೃತಿಯಲ್ಲಿ ಉಣಬಡಿಸಿದ್ದಾರೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೩೧.೦೭.೨೦೨೬
...................................

Comments
Post a Comment