ಮದಕರಿ ನಾಯಕನ ದುರಂತ ಕಥೆಯ 

 ದುರ್ಗಾಸ್ತಮಾನ 



‘ದುರ್ಗಸ್ತಮಾನ’  ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು. ತ. ರಾ. ಸು. ಎಂದೇ ಹೆಸರಾದ ತಳುಕಿನ ಸುಬ್ಬರಾವ್ ಅವರ ಐತಿಹಾಸಿಕ ಕಾದಂಬರಿಗಲ್ಲಿ ಇದು ಒಂದು.  ಈ ಕಾದಂಬರಿ ಚಿತ್ರದುರ್ಗ ಕೋಟೆಯನ್ನು ಆಳಿದ ವೀರ ಅರಸು ಮದಕರಿ ನಾಯಕನ ಕುರಿತಾಗಿ ಇದೆ.

ತಮ್ಮ ಅಳಿವು-ಉಳಿವುಗಳನ್ನು ಕರ್ನಾಟಕದ ಎಲ್ಲ ಪಾಳೆಯಗಾರರು ನಿರ್ಧರಿಸುತ್ತಿದ್ದ ಪರ್ವಕಾಲ ಅದಾಗಿತ್ತು. ಹೈದರಾಲಿಯ ಬಿರುಗಾಳಿಯ ದಾಳಿಯನ್ನು ಎದುರಿಸಲಾಗದೆ, ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುತ್ತಿದ್ದರು ಪಾಳೆಯಗಾರರು. ತನ್ನ ಅಪ್ರತಿಮ ಶೌರ್ಯ-ಸಾಹಸಗಳಿಂದ, ಜನತೆಯ ಅಭಿಮಾನಕೋಟೆಯ ರಕ್ಷಾಬಲದಿಂದ ಎಂದೂ ಸೋತು, ಶರಣಾಗದೆ ಸುಮಾರು ಎರಡು ವರ್ಷಗಳ ಕಾಲ ಹೈದರಾಲಿಗೆ ಸವಾಲಾಗಿ ನಿಂತು ಸೆಣೆಸಿದ ಏಕೈಕ ಗಂಡು ಪಾಳೆಯಗಾರ ಚಿತ್ರದುರ್ಗದ ಮದಕರಿನಾಯಕ.

ಮದಕರಿನಾಯಕನ ದುರಂತ ಒಂದು ನಾಡಿನ ದುರಂತ. ಆ ಕಥೆಯನ್ನೇ ಹೇಳುವ ಈ ’ದುರ್ಗಾಸ್ತಮಾನ’-ಆ ಕಾಲದ ಮೌಲ್ಯಗಳ ಅಸಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ. ಎಂದೋ, ತಮಾನಗಳ ಹಿಂದೆ ನಡೆದುಹೋಗಿರಬಹುದಾದ ಇತಿಹಾಸವನ್ನು, ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ, ಕಣ್ಣಿಗೆ ಕಟ್ಟುವಂತೆ ಪುನರ್ ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲವನ್ನು ತ. ರಾ. ಸು. ಇದರಲ್ಲಿ ತೋರಿಸಿದ್ದಾರೆ.

ಮುನ್ನುಡಿಯಲ್ಲಿ  ಸ್ವತಃ ತರಾಸು ಅವರೇ ಹೇಳುತ್ತಾರೆ- ಚಿತ್ರದುರ್ಗ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಹೊಂದಿಕೊಂಡು  ಬೆಳೆದ ಜೀವಂತ ವಸ್ತು. ಮದಕರಿ ನಾಯಕನೆಂದರೂ ಅಷ್ಟೇ- ಇತಿಹಾಸದಲ್ಲಿ ಇದ್ದು ಹೋದ ಒಬ್ಬ ಅರಸನಲ್ಲ, ತಮ್ಮ ಜೀವಂತ ಆಪ್ತ ನೆಂಟ. ಈ ಭಾವನೆ ಹೇಗೋ ಹಾಗೆಯೇ  ಚಿತ್ರದುರ್ಗ- ಮದಕರಿ. ದುರ್ಗ ಎಂದರೆ ಮದಕರಿ. ಮದಕರಿ ಎಂದರೆ ದುರ್ಗ. ತಮ್ಮ ಊರು, ತಮ್ಮ ಸ್ಥಳವನ್ನಾಳಿದ ದೊರೆಯ ಬಗ್ಗೆ  ಈ ಭಾವನೆ ಇದೆ ಎನ್ನುತ್ತಾರೆ. 

 ಪ್ರಸ್ತುತ ಕಾದಂಬರಿಯಲ್ಲಿ ಒಟ್ಟೂ ೬ ಅಧ್ಯಾಯಗಳಿವೆ. 

  ಮೊದಲನೆಯ ಅಧ್ಯಾಯ ‘ಪಟ್ಟಾಭಿಷೇಕದ ಪಂಜರ’ ದಲ್ಲಿ ಕಸ್ತೂರಿರಂಗಪ್ಪನಾಯಕನ ನಿಧನದ ನಂತರ ಜಂಪಣ್ಣನಾಯಕನ ಮಗ ಮದಕರಿ ನಾಯಕ ದುರ್ಗದ ಅಧಿನಾಯಕನಾಗಿ ಆಯ್ಕೆಯಾಗಿ ಪಟ್ಟಾಭಿಷೇಕವಾಗುವ ಬಗ್ಗೆ, ‘ಗರಿ ಬಿಚ್ಚಿದ ಗರುಡ’ ಎಂಬ ಎರಡನೇ ಅಧ್ಯಾಯದಲ್ಲಿ ಚಿತ್ರದುರ್ಗಕ್ಕೆ ಹೈದರಾಲಿಯು ದಾಳಿ ನಡೆಸಲು ಸನ್ನದ್ಧನಾಗುವುದು, ಮದಕರಿ ನಾಯಕ ಮಾತುಕತೆಗಾಗಿ ಮಂತ್ರಿಯನ್ನು ನಿಯೋಜಿಸುವುದು, ಇದರಲ್ಲಿ ಮದಕರಿನಾಯಕ  ರಾಜಕೀಯ ಸಾಧಿಸಿಕೊಂಡು ಬರುವುದರ ಬಗ್ಗೆ ಇದೆ. ಮೂರನೇ ಅಧ್ಯಾಯ ‘ಸಿಡಿಲು ಮಿಂಚುಗಳು ಸರಸ’ ದಲ್ಲಿ  ನಿಜಗಲ್‌ನಲ್ಲಿ  ಪೇಶ್ವೆ - ಹೈದರಾಲಿಯ ಹೋರಾಟದಲ್ಲಿ ಹೈದರಾಲಿಯ ಸೈನ್ಯ  ಸೋಲುತ್ತದೆ. ಕೋಟೆಯ ಮೇಲೆ ಬಿಳಿ ಬಾವುಟವನ್ನು ಹಾರಿಸಿ ಎಂದು ಮದಕರಿ ನಾಯಕ ಅಪ್ಪಣೆ ಮಾಡುತ್ತಾನೆ.

ನಾಲ್ಕನೆಯ ಅಧ್ಯಾಯ ‘ಸಂಚುಗಳ ಸುಳಿಯಲ್ಲಿ’ ಗುತ್ತಿಯದುರ್ಗಕ್ಕಾಗಿ ಮರಾಠರು ಮತ್ತು ಹೈದರಾಲಿಯ ಮಧ್ಯೆ ಹೋರಾಟ ನಡೆದಾಗ ಮದಕರಿ ನಾಯಕ ‘ನೀರಿಲ್ಲದಂತೆ ನೆರಳಿಲ್ಲದಂತೆ ಹೈದರಾಲಿಯನ್ನು ಮಾಡಿ’ ಎಂದು ಹೇಳುತ್ತಾನೆ. ನಂತರ ಮಡಕಶಿರ ಪ್ರವೇಶಿಸಿ ಅಲ್ಲಿ ಮರಾಠ ಸೈನ್ಯದ ಮುಖಂಡರನ್ನು ಕಾಪಾಡುತ್ತಾನೆ. ಹೈದರಾಲಿಯಿಂದ ಯುದ್ಧಕ್ಕೆ ಕರೆ ಬರುತ್ತದೆ. ಐದನೇ ಅಧ್ಯಾಯ ‘ಸಮರಾಗಮನ’ದಲ್ಲಿ ದುರ್ಗ  ನೋಡಿದ ಹೈದರಾಲಿಯ ಇದು ದುರ್ಗವಲ್ಲ, ದುರ್ಗಮ ಪ್ರದೇಶ. ಗೆದ್ದರೆ ಮಾತ್ರ ನಾವು ಗಂಡಸರು ಎನ್ನುತ್ತಾ ತನ್ನ ರತ್ನಖಚಿತ  ಕಠಾರಿಯನ್ನು ಹಿಡಿದು ‘ಹಮಾರೇ ಕಿಸ್ಮತ್ ಕಾ ಖೇಲ್ ಶುರು’ ಎನ್ನುತ್ತಾನೆ. ಕಹಳೆ ನಗಾರಿಗಳು ಮೊಳಗುತ್ತವೆ. ‘ರಕ್ತ ರಂಜಿತ ರವಿ’ ಎಂಬ ಕೊನೆಯ ಅಧ್ಯಾಯದಲ್ಲಿ ಹೈದರಾಲಿಯ ಸೈನ್ಯದ ಜೊತೆ ಜೀವದ ಹಂಗು ತೊರೆದು ಹೋರಾಡಿ, ಮದಕರಿ ನಾಯಕನು ವೀರಮರಣವನ್ನಪ್ಪುವುದನ್ನು  ಚಿತ್ರಿಸಲಾಗಿದೆ.

 ಓರ್ವ ಧೀರೋದಾತ್ತ ಆದರ್ಶ ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿದ ತಾನು ಆಳಿದ ದುರ್ಗವನ್ನು ತಾಯಿಯಂತೆ ತಿಳಿದು ಪ್ರೀತಿಸಿದ ಅರಸನ ದುರಂತ ಕಥೆ ಇದರಲ್ಲಿದೆ. ಹೈದರಾಲಿ ಎಂಬ ನವಾಬನ ಸತತ ಕಿರುಕುಳಕ್ಕೊಳಗಾಗಿ ಆತನ ಮೋಸ, ವಂಚನೆ, ಕುಯುಕ್ತಿಗಳಿಂದ ಸೋತ ಅರಸನ ದುರಂತ ಕಥೆ. 

ಕುಟುಂಬ ಪ್ರಿಯ ರಾಣಿಯರನ್ನು ದೇವತೆಗಳನ್ನಾಗಿ ತಾಯಿಯನ್ನು ದುರ್ಗದ ದೇವತೆ ಉತ್ಸವಾಂಬೆಯಾಗಿ ಕಂಡ ಒಡಹುಟ್ಟಿದ ತಮ್ಮನನ್ನು ಮಗನಂತೆ ಕಂಡ, ತಮ್ಮ ಪರಶುರಾಮ ನಾಯಕ ಮತ್ತು ಅಣ್ಣ ಮದಕರಿ ನಾಯಕರ ಸಹೋದರ ಬಾಂಧವ್ಯ ಆತ್ಮೀಯ ಸಂಬಂಧ ಮಾದರಿಯಾಗಿದೆ. ನೆರೆಯ ಪಾಳೆಯಗಾರರಾದ ಹರಪನಹಳ್ಳಿ, ರಾಯದುರ್ಗ ಮುಂತಾದವರ ಕಿರುಕುಳ ಮೋಸ,  ಅವನಿಗೆ ಹೆಣ್ಣು ಕೊಟ್ಟ ಸ್ವಂತ ಮಾವನೆ ಅಳಿಯನಿಗೆ ಮೋಸ ಮಾಡುವುದು ಇದನ್ನೆಲ್ಲ ಸಹಿಸಿಕೊಂಡು ಆಡಳಿತವನ್ನು ಸುಸೂತ್ರವಾಗಿ ಜನಹಿತಕಾರಿಯಾಗಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಕೊಂಡ ನಡೆಸಿದ ಮದಕರಿ ನಾಯಕನ ಜಾಣ್ಮೆ ಮೆಚ್ಚುವಂತಿವೆ. ವೀರರಸ ಪ್ರಧಾನ ಕಾದಂಬರಿಯಾದರೂ ಶೃಂಗಾರ, ಶೋಕ ರಸಗಳೂ ಪ್ರಧಾನ ರಸಗಳಾಗಿ ಬಂದಿವೆ. 

   ಕಾದಂಬರಿಯಲ್ಲಿ ಮದಕರಿ ನಾಯಕನ ದೇಶಕ್ಕಾಗಿ ಮಾಡುವ ತ್ಯಾಗ ಹೋರಾಟ ನಿಜಕ್ಕೂ ಶ್ಲಾಘನೀಯ. ಹಿಂದು - ಮುಸಲ್ಮಾನರ ವಿರಸವೂ ಇಲ್ಲಿದೆ. ಧರ್ಮ ರಾಜಕಾರಣ ಕೂಡ ದುರ್ಗದ ಸೋಲಿಗೆ ಕಾರಣವಾಗುತ್ತದೆ.ಆದರೆ ಮದಕರಿ ನಾಯಕ ಈ ಹಿಂದು ಮುಸಲ್ಮಾನ ರನ್ನು ಏಕದೃಷ್ಟಿಯಿಂದ ಸಮಾನತೆಯಿಂದ ನೋಡಿದರೂ ಕೊನೆಗೆ ದುರ್ಗ ಎಷ್ಟು ಮುಖ್ಯವೋ ಅದಕ್ಕಿಂತ ಧರ್ಮವೇ ಮುಖ್ಯವೆಂದು ಮದಕರಿ ನಾಯಕನ ಮುಸಲ್ಮಾನ ಸೈನಿಕರು ಹೈದರಾಲಿ ಸೈನ್ಯಕ್ಕೆ ಸೇರಿ ಮದಕರಿ ನಾಯಕನಿಗೆ ಬೆನ್ನ ಹಿಂದೆ ಚೂರಿ ಹಾಕುತ್ತಾರೆ.

ಯುದ್ಧದ ಭೀಕರ ಚಿತ್ರಣ, ಅದು ಜನಸಾಮಾನ್ಯರ ಮೇಲೆ ಬೀರುವ ದುಷ್ಪರಿಣಾಮ ರಾಜ್ಯದ ಮೇಲೆ ಆಗುವ ಆರ್ಥಿಕ ಹಾನಿ ಇದರಿಂದ ಪ್ರಜೆಗಳ ಅಗತ್ಯಗಳನ್ನು ಪೂರೈಸಲಾಗದ ಅರಸು ಇವೆಲ್ಲ ತುಂಬ ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ಸರಳ, ಸುಂದರ ಮತ್ತು ಅರ್ಥಗರ್ಭಿತ ಭಾಷೆಯಿಂದಾಗಿ ಕಧಂಬರಿಯ ಸೊಗಸು ಕೂಡ ಹೆಚ್ಚಿದೆ. 

ಈ ಕಾದಂಬರಿಯ ಬಗ್ಗೆ ಹಲವು ಹಿರಿಯ ಬರೆಹಗಾರರು, ಚಿಂತಕರು ಶ್ಲಾಘನೆಯ ಮಾತುಗಳನ್ನಾಡಿದ್ದಾರೆ.

ಬನ್ನಂಜೆ ರಾಮಾಚಾರ್ಯರು- ಈ ಕಾದಂಬರಿ ಕನ್ನಡದಲ್ಲೇ ಉತ್ಕೃಷ್ಟ ಕೃತಿ. ಇದರಿಂದ ಕನ್ನಡ ಸಾಹಿತ್ಯ ಶ್ರೀಮಂತವಾಯಿತು ಎಂದಿದ್ದಾರೆ. ಎಸ್ ಎಲ್ ಭೈರಪ್ಪನವರು- ರಾಜಕೀಯ ಮತ್ತು ವ್ಯಕ್ತಿತ್ವದ ವಿಶ್ಲೇಷಣೆಯನ್ನು ಇಷ್ಟು ಖಚಿತವಾಗಿ ಇತಿಹಾಸಕಾರನ ನಿಷ್ಠುರ ನಿಷ್ಠೆಯಿಂದ ಚಿತ್ರಿಸಿರುವುದನ್ನು ತಾನು ಬೇರೆಲ್ಲೂ ನೋಡಿಲ್ಲ ಎಂದಿದ್ದಾರೆ. ಮಲ್ಲೇಪುರಂ ಜಿ ವೆಂಕಟೇಶ್ -  ಐತಿಹಾಸಿಕ ಕಾದಂಬರಿಗಳ ಸಾಲಿನಲ್ಲಿ ಶಾಶ್ವತ ಉಜ್ವಲ ಕಾಣಿಕೆಯಾಗಿ ನಿಲ್ಲುವ ಕಾದಂಬರಿ ಇದು ಎಂದಿದ್ದಾರೆ.   

   ಮೂಲತಃ ಮಾನವೀಯತೆಯ, ಪ್ರಗತಿಶೀಲ ಲೇಖಕರಾದ  ತ. ರಾ. ಸು. ಈ ಕಾದಂಬರಿ ರಚನೆಯಲ್ಲಿ ಮಾನವೀಯತೆಯ ಸರ್ವಶ್ರೇಷ್ಠತೆಯನ್ನೇ ಎತ್ತಿ ಸಾರುವ ಪ್ರವಾದಿಯಾಗಿ ಎದ್ದು ಕಾಣುತ್ತಾರೆ. ಇದು-ಕ್ರಿಯಾಶಾಲಿ ಲೇಖಕನ ಬಹುಕಾಲದ ಪಕ್ವ ಅನುಭವ, ಇತಿಹಾಸಕ್ಕೆ ಚ್ಯುತಿ ಬಾರದ ಕಲ್ಪನೆ, ಆಳ ವ್ಯಾಸಂಗಗಳಿಂದ ಮುಪ್ಪುರಿಗೊಂಡು, ನಮ್ಮ ಕಾಲದ ಹೆಮ್ಮೆಯ ಐತಿಹಾಸಿಕ ಕೃತಿಯಾಗಿ, ಮೈತಳೆದು, ಇದೀಗ ಇತಿಹಾಸವನ್ನೇ ಸೃಷ್ಟಿಸಿ, ತ. ರಾ. ಸು. ಅವರ ನೆನಪನ್ನು ಚಿರಂತನವಾಗಿಸಿದೆ.

ಕಾದಂಬರಿಯ ಪ್ರತಿ ಪುಟವೂ ತ ರಾ ಸು ಅವರ ಭಾವಗೀತಾತ್ಮಕ ಕಾವ್ಯಮಯ ವರ್ಣನೆ ಮೂಲಕ ಮನಸ್ಸನ್ನು ಹಿಡಿದು ನಿಲ್ಲಿಸುತ್ತದೆ.

 -ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೭.೦೭.೨೦೨೬

.....................


 




 


Comments

Popular posts from this blog