ಗೆಳತಿಯ ಕೊಲೆಗಾರರ ವಿರುದ್ಧದ ಸೇಡಿನ
‘ಸ್ವಪ್ನದ ಬೆನ್ನೇರಿ’
ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ತನ್ನನ್ನು ತೊಡಗಿಸಿಕೊಂಡಿರುವ ಸಕಲೇಶಪುರ ಮೂಲದ ಕೌಶಿಕ್ ಕೂಡುರಸ್ತೆ ಪ್ರಸ್ತುತ ಪತ್ತೆದಾರಿ ಕಾದಂಬರಿ ‘ಸ್ವಪ್ನದ ಬೆನ್ನೇರಿ’ ಇದರ ಲೇಖಕರು. ಇದರಲ್ಲಿನ ಕಥೆಗಳು ಸರಳವಾಗಿ, ಸುಲಲಿತವಾಗಿವೆ. ನಮ್ಮನ್ನು ಒಮ್ಮೆಲೆ ಓದಿಸಿಕೊಂಡು ಹೋಗುವಂತದ್ದು. ಕಾದಂಬರಿ ಓದಿದ್ದೇ ಗೊತ್ತಾಗುವುದಿಲ್ಲ. ಅಷ್ಟೊಂದು ಕುತೂಹಲವನ್ನು ಹುಟ್ಟುಹಾಕುತ್ತದೆ. ಇಲ್ಲಿನ ಪಾತ್ರಗಳೂ ಸಹ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಥೆಯ ನೇಯ್ಗೆ ಸುಂದರವಾಗಿದೆ. ಕಾಲೇಜು ಮತ್ತು ಅಲ್ಲಿನ ವಿದ್ಯಾರ್ಥಿಗಳು, ಉಪನ್ಯಾಸಕಿ, ಆಕೆಯ ಗೆಳತಿ ಮತ್ತು ಗೆಳತಿಯ ತಂದೆ ಇವರ ಸುತ್ತವೇ ತಿರುಗುವ ನಿಗೂಢತೆ. ಇಷ್ಟೆಲ್ಲ ವಿಶೇಷ ಈ ಕೃತಿಯದ್ದಾಗಿದೆ.
ಸ್ವಪ್ನದ ಬೆನ್ನೇರಿ ಹೋದಾಗ ಏನೆಲ್ಲ ನಡೆಯಿತು, ಬೆನ್ನೇರುವ ಸಂದರ್ಭ ಏಕೆ ಎದುರಾಯಿತು, ಎಷ್ಟೆಲ್ಲ ಕೊಲೆ ನಡೆಯಿತು, ಅದನ್ನು ಮಾಡಿದವರಾರು, ಮಾಡಿಸಿದವರಾರು, ಏಕೆ ಮಾಡಿದರು? ಇದಕ್ಕೆಲ್ಲ ಉತ್ತರವೇ ಈ ಕಾದಂಬರಿ.
ಕಥಾ ಸಾರಾಂಶ:
ಅಮೆರಿಕದಲ್ಲಿ ಹಿಪ್ನೊಥೆರಪಿಸ್ಟ್ ಆಗಿ ಟ್ರೈನಿಂಗ್ ಅಕಾಡೆಮಿಯಲ್ಲಿ ಲಕ್ಷಗಟ್ಟಲೆ ಸಂಬಳ ಎಣಿಸುತ್ತಿದ್ದ ಜೆಸ್ಸಿಕಾ ತನ್ನ ಗೆಳತಿಯ ಕೊಲೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಡಿದ್ದ ಪ್ಲಾನಿಂಗ್‌ನ ಕಥೆ ಇದು.
ಜೆಸ್ಸಿಕಾಳಿಗೆ ನೇಹಾ ಪರಿಚಯ ಲೆಸ್ಬಿಯನ್ ಡೇಟಿಂಗ್ ವೆಬ್ಸೈಟ್ ಮೂಲಕ ನಡೆದಿತ್ತು. ಇಬ್ಬರ ಅಭಿಪ್ರಾಯಗಳು, ಅಭಿರುಚಿಗಳು ಒಂದೇ ಆಗಿದ್ದರಿಂದ ಸ್ನೇಹ ಗಟ್ಟಿಯಾಗಿ, ಅದು ಪ್ರೀತಿಗೆ ತಿರುಗಿತ್ತು. ಕೆಲವು ವರ್ಷಗಳ ನಂತರ ನೇಹಾಳನ್ನು ನೋಡಲು ಭಾರತಕ್ಕೆ ಬಂದಾಗ ಅವಳ ಮೃತಪಟ್ಟ ಸುದ್ದಿ ತಿಳಿದು ಬರುತ್ತದೆ. ಇದರಿಂದ ನೊಂದು ಅವಳ ಮನೆಗೆ ಹೋದಾಗ ಅವಳ ಸಾವು ಕೇವಲ ಆತ್ಮಹತ್ಯೆ ಅಲ್ಲ, ಒಂದು ಕೊಲೆ ಎನ್ನುವುದು ಗೊತ್ತಾಗುತ್ತದೆ. ಅವಳ ತಂದೆ ಕೊಂದವರ ಬಗ್ಗೆಯೂ ತಿಳಿಸುತ್ತಾರೆ. ಆ ಕ್ಷಣವೇ ತನ್ನ ಪ್ರೇಯಸಿಯನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿ ಅವಳು ಓದುತ್ತಿದ್ದ ಕಾಲೇಜಿಗೆ ಲೆಕ್ಚರರ್ ಆಗಿ ಸೇರಿಕೊಳ್ಳುತ್ತಾಳೆ.
ನೇಹಾಳನ್ನು ಆರ್ಯ ಮತ್ತು ಅವನ ಸ್ನೇಹಿತರು ಸೇರಿಕೊಂಡು ಹಿಡಿದು ಮಹಡಿಯಿಂದ ಕೆಳಗೆ ಎಸೆದಿರುತ್ತಾರೆ. ಇದನ್ನು ರೆಸಾರ್ಟಿನಲ್ಲಿರುವ ಕೆಲಸಗಾರನೊಬ್ಬ ನೋಡಿರುತ್ತಾನೆ. ಆದರೆ ತಾವು ಕೊಲೆ ಮಾಡಿದ್ದನ್ನು ಇತರರು ಗಮನಿಸಿಲ್ಲ ಎಂದು ಅವರು ತಿಳಿದಿದ್ದರು. ಇದರ ಸೇಡು ತೀರಿಸಿಕೊಳ್ಳಲು ಜೆಸ್ಸಿಕಾ ಆ ಕಾಲೇಜಿನ ವಿದ್ಯಾರ್ಥಿ ಸತ್ಯ ಎನ್ನುವವನನ್ನು ದಾಳವಾಗಿ ಬಳಸಿಕೊಳ್ಳುತ್ತಾಳೆ. ಆತ ಜೆಸ್ಸಿಕಾಳ ಮೈಮಾಟಕ್ಕೆ ಸೋತಿರುತ್ತಾನೆ. ತಾನು ಒಬ್ಬಂಟಿ ಇರುವುದರಿಂದ ನಿನ್ನ ಫ್ಲಾಟ್‌ಗೆ ಬಂದುಳಿಯುವೆ ಎಂದಾಗ ಒಪ್ಪಿಕೊಳ್ಳುತ್ತಾನೆ. ಅವನ ಪ್ಲಾಟಿನಲ್ಲಿ ಉಳಿಯುತ್ತಾಳೆ. ಸತ್ಯನ ಬಲಹೀನತೆಯನ್ನು ಈಕೆ ಅರಿತಿರುತ್ತಾಳೆ. ಅದೇನೆಂದರೆ- ಸತ್ಯನಿಗೆ ಅಮಾವಾಸ್ಯೆಯಂದು ಬೀಳುವ ಕನಸುಗಳನ್ನು ನನಸು ಮಾಡುವುದು. ಇದನ್ನು ಆತನ ಮನದಲ್ಲಿ ಬಲವಾಗಿ ಬೇರೂರುವಂತೆ ಮಾಡುವ ಜೆಸ್ಸಿಕಾ ಆತನಿಗೆ ತಿಳಿಯದಂತೆ ಹಿಪ್ನೊಟಿಸಂ ಮಾಡುತ್ತಾಳೆ. ಬೀಳುವ ಕನಸನ್ನೆಲ್ಲಾ ಡೈರಿಯಲ್ಲಿ ಬರೆಯುವಂತೆ ಮಾಡುತ್ತಾಳೆ.
ಕನಸನ್ನು ಬರೆಯುವಾಗ ಅದು ಪೂರ್ಣವಾಗಿ ಆತನಿಗೆ ನೆನಪಾಗದಂತೆ ಮಾಡುತ್ತಿದ್ದಳು. ಆದ್ದರಿಂದ ಬೆಳಿಗ್ಗೆ ಎದ್ದು ಡೈರಿ ತೆರೆದಾಗ ತಾನು ಬರೆಸಿದ ಕನಸು ನಿಜಕ್ಕೂ ಕನಸೆಂದು ಆತ ನಂಬುವಂತೆ ಮಾಡುತ್ತಿದ್ದಳು. ತನ್ನ ಕನಸನ್ನು ಬರೆಯಲಾರಂಭಿಸುತ್ತಿದ್ದಂತೆ ಅವನಿಗೆ ಅದು ಮರೆತು ಹೋಗುತ್ತಿತ್ತು. ಸತ್ಯನ ಫ್ಲ್ಯಾಟ್‌ಮೇಟ್ ಆಗಿದ್ದ ರುದ್ರ ಎನ್ನುವವನ್ನೂ ಸಹ ಆಕೆ ಹಿಪ್ನೊಟೈಸ್ ಮಾಡಿ ಆತನ ಜೊತೆ ಸೆಕ್ಸ್ ಮಾಡದೇ ಇದ್ದರೂ ಸೆಕ್ಸ್ ಮಾಡಿರುವುದಾಗಿ ನಂಬಿಸಿದ್ದಳು. ಇದರ ವೀಡಿಯೋವನ್ನು ಚಿತ್ರೀಕರಿಸಿಕೊಂಡು ನೀನು ನನ್ನ ರೇಪ್ ಮಾಡಿದ್ದಾಗಿ ಆತನಿಗೆ ಹೇಳುತ್ತಾಳೆ. ಏಕೆಂದರೆ ಪ್ಲಾಟಿನಿಂದ ಜೆಸ್ಸಿಕಾಳನ್ನು ಹೊರಹಾಕಲು ಆತ ಸತತವಾಗಿ ಪ್ರಯತ್ನ ಮಾಡುತ್ತಿದ್ದನು.
ನೇಹಾಳ ಕೊಂದವರನ್ನು ಕೊಲ್ಲುವುದಷ್ಟೇ ಆಕೆಯ ಉದ್ದೇಶವಾಗಿರಲಿಲ್ಲ. ಜೊತೆಗೆ ಎಲ್ಲರೆದುರು ಅವರನ್ನು ಅವಮಾನಿಸಬೇಕೆಂಬ ಉದ್ದೇಶವೂ ಇತ್ತು. ಇದಕ್ಕಾಗಿ ಕನಸನ್ನು ಡೈರಿಯಲ್ಲಿ ಡೈರಿಯಲ್ಲಿ ಬರೆಸುತ್ತಿದ್ದಳು. ಈ ಕನಸನ್ನು ನನಸಾಗಿಸಲು ಪಾತ್ರಧಾರಿಗಳಾಗಿದ್ದ ಕಬೀರ್ ಮತ್ತು ವೇದಾಂತ್ ಅವರು ಕಾಲೇಜಿನಲ್ಲಿ ಒಬ್ಬಂಟಿಗರಾಗಿರುವ ಸಮಯವನ್ನು ನೋಡಿಕೊಂಡು ಕ್ಯಾಂಟೀನ್ ಹೊರಗಿದ್ದ ಮತ್ತೊಂದು ವಿದ್ಯಾರ್ಥಿಯನ್ನು ಕರೆದು ತನ್ನ ಕೈಯಲ್ಲಿರುವ ಗಿಫ್ಟನ್ನು ಅವರಿಬ್ಬರಿಗೆ ತಲುಪುವಂತೆ ಮಾಡುತ್ತಿದ್ದಳು. ಆದ್ದರಿಂದ ಆ ಹುಡುಗರಿಗೆ ತನ್ನ ಕೈಗೆ ಗಿಫ್ಟ್ ಕೊಟ್ಟಿದ್ದು ಯಾರು ಎಂಬುದರ ಅರಿವಿರುವುದಿಲ್ಲ. ಹಿಪ್ನೊಟೈಸ್ ಮಾಡಿ ರುದ್ರನ ಮೂಲಕವೇ ಗಿಫ್ಟ್ ಪ್ಯಾಕ್ ಮೇಲೆ ‘ಥ್ಯಾಂಕ್ಸ್ ಫಾರ್ ಯುವರ್ ಸಪೋರ್ಟ್ ಬೈ ರುದ್ರ’ ಎಂದು ಆತನಿಂದಲೇ ಬರೆಸಿ ಗಿಫ್ಟ್ ಪ್ಯಾಕ್ ಮೇಲೆ ಅಂಟಿಸುತ್ತಿದ್ದಳು.
ಈ ಬಾಕ್ಸ್ ನಲ್ಲಿ ಅಕೋನೈಟ್ ಎಂಬ ವಿಷಮಿಶ್ರಿತ ರೆಡ್ ವೈನಿನ ಬಾಟಲಿ ಇರುತ್ತಿತ್ತು. ಅದನ್ನು ಕುಡಿದ ಮೇಲೆ ವಿಷವು ದೇಹದಲ್ಲಿ ಕರಗಿ ಹೃದಯಾಘಾತವನ್ನು ಉಂಟುಮಾಡುತ್ತಿತು. ದೇಹದಲ್ಲಿ ಬೆರೆತಿರುವ ವಿಷವನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಆದ್ದರಿಂದ ಕಬೀರ್ ಮತ್ತು ವೇದಾಂತ್ ಸಾವು ಸಹಜವೆಂದು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತೆ ಮಾಡಿದ್ದಳು.
ಸತ್ಯನ ಕನಸನ್ನು ನನಸು ಮಾಡುವ ನೇತೃತ್ವ ವಹಿಸಿದ್ದವನು ರುದ್ರ. ಆರ್ಯವರ್ಧನ ಹೆಗಡೆ ಬಗ್ಗೆ ಬಿದ್ದ ಕನಸನ್ನು ನನಸು ಮಾಡುವುದಿಲ್ಲವೆಂದು ರುದ್ರ ನಿರ್ಧಾರ ಮಾಡಿದ. ಕೂಡಲೇ ಆ ಕೋಪದಲ್ಲಿ ಕಬೀರ್ ಮತ್ತು ವೇದಾಂತನ ಸಾವುಗಳು ಸಹಜವಲ್ಲವೆಂದು ಆಕೆ ಪೊಲೀಸರಿಗೆ ಕರೆ ಮಾಡಿ ತಿಳಿಸುತ್ತಾಳೆ. ಪೊಲೀಸರು ಈ ಪ್ರಕರಣದ ತನಿಖೆಗೆ ಆರಂಭಿಸಿದಾಗ ರುದ್ರನನ್ನು ವಿಚಾರಣೆಗೆ ಕರೆಯುತ್ತಾರೆ. ಆದರೆ ರುದ್ರನ ಹೆಸರು ನೇರವಾಗಿ ಎಲ್ಲಿಯೂ ಪ್ರಸ್ತಾಪವಾಗುವುದಿಲ್ಲ. ‘ಈ ಕೇಸಿನಲ್ಲಿ ನಿನ್ನನ್ನು ಮತ್ತು ನನ್ನನ್ನು ತಪ್ಪಿತಸ್ಥರೆಂದು ಸಾಕ್ಷೀಕರಿಸಲು ಬ್ರಹ್ಮನಿಗೂ ಸಾಧ್ಯವಿಲ್ಲ’ ಎನ್ನುತ್ತಾಳೆ.
ಕೊಲೆಯ ಮಾತುಗಳನ್ನು ಕೇಳಿದ ಸತ್ಯ ಬಾಗಿಲ ಬಳಿ ಆಘಾತದಿಂದ ಕುಸಿದು ಬೀಳುತ್ತಾನೆ ಹೀಗೆ ಸತ್ಯನನ್ನು ಬಳಸಿಕೊಂಡು ಆತನ ಕನಸನ್ನು ಈಡೇರಿಸುವ ನಾಟಕವಾಡಿ ಜೆಸ್ಸಿಕಾ ತನ್ನ ಗೆಳತಿಯನ್ನು ಸಾವಿನ ಸೇಡನ್ನು ತೀರಿಸಿಕೊಳ್ಳುತ್ತಾಳೆ. ಇವೆಲ್ಲ ಮುಗಿದ ಮೇಲೆ ಬೀಚ್ ಹೋಟೆಲ್ ಒಂದರಲ್ಲಿ ಮಲಗಿದ್ದ ಜೆಸ್ಸಿ ಕಾಳಿಗೆ ಆರ್ಯ ಹೆಗಡೆ ಸಾವಿನ ಸುದ್ದಿ ತಲುಪುತ್ತದೆ. ಮಾರನೇ ದಿನ ಅಮೆರಿಕಕ್ಕೆ ಅವಳು ಹೊರಡಲು ಟಿಕೆಟ್ ಸಿದ್ಧವಾಗಿರುತ್ತದೆ. ಅದೇ ವೇಳೆ ಅವಳ ಖಾತೆಗೆ ೫೦ ಲಕ್ಷ ಜಮಾವಣೆಯಾಗುತ್ತದೆ. ಮತ್ತು ಅಪಾರ್ಟ್ಮೆಂಟ್ ಒಂದರ ಫ್ಲಾಟ್‌ಅನ್ನು ಅವಳ ಹೆಸರಿಗೆ ರಿಜಿಸ್ಟರ್ ಮಾಡಲಾಗುತ್ತದೆ.
ತನ್ನ ಮಗಳನ್ನು ಕೊಂದ ಕೊಲೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ಜೆಸ್ಸಿಕಾಳಿಗೆ ನೇಹಾಳ ತಂದೆ ಪ್ರೇಮ್‌ಚಂದ್ ಹೆಗಡೆ ಬೆಂಬಲ ಸೂಚಿಸಿದ್ದನು. ಅಂದುಕೊಂಡಂತೆ ಫ್ಲ್ಯಾಟ್ ಮತ್ತು ನಗದನ್ನು ಉಡುಗೊರೆಯಾಗಿ ಕೊಡುತ್ತಾನೆ. ಆಕೆಗೆ ತನ್ನವಳನ್ನು ಕಳೆದುಕೊಂಡಿದ್ದರಿಂದ ಉಂಟಾಗಿದ್ದ ಬೇಸರ ನೀಗಿ ನೆಮ್ಮದಿ ಸಿಕ್ಕಂತಾಗುತ್ತದೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೮.೭.೨೦೨೬
............................

Comments
Post a Comment