ಕೌಟುಂಬಿಕ ಮೌಲ್ಯ ಸಾರುವ 


‘ಮನೆಯೇ ಮಂತ್ರಾಲಯ’


ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ಅವಕಾಶವಂಚಿತ ಪ್ರತಿಭೆಗಳಿಗೆ ಏರ್ಪಡಿಸಿದ್ದ ‘ವಾಣಿ ಕೌಟುಂಬಿಕ ಕಥಾ ಸ್ಪರ್ಧೆ- ೨೦೨೪’ರಲ್ಲಿ ಸ್ಪರ್ಧೆಗೆ ಬಂದ ಆಯ್ದ ಕಥೆಗಳ ಸಂಕಲನ  ‘ಮನೆಯೇ ಮಂತ್ರಾಲಯ’. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತು ಕಥೆಗಳಿವೆ. ಶೈಲಜಾ ಸುರೇಶ ಈ ಕೃತಿಯನ್ನು ಸಂಪಾದಿಸಿದವರು. ಈ ಕಥಾ ಸ್ಪರ್ಧೆಗೆ ‘ಮನೆಯೇ ಮಂತ್ರಾಲಯ’ ಎನ್ನುವ ಶೀರ್ಷಿಕೆಯನ್ನು ಕೊಡುವ ಮೂಲಕ ಕೌಟುಂಬಿಕ  ಕಥೆಗಳನ್ನು ಆಹ್ವಾನಿಸಲಾಗಿತ್ತು. 

ದಾಂಪತ್ಯದ ಮೌಲ್ಯ, ಕೌಟುಂಬಿಕ ಮೌಲ್ಯ, ತಂದೆ-ತಾಯಿಯ ಮೇಲಿನ ಗೌರವ, ಮಕ್ಕಳನ್ನು ಸಲುಹುವ ರೀತಿ, ಮಕ್ಕಳಿಗೆ ಶಿಕ್ಷಣ, ಮಕ್ಕಳ ಮದುವೆ....  ಮುಂತಾದವುಗ ಬಗ್ಗೆ ಸದಭಿರುಚಿಯ ಕಥೆಗಳು ಇದರಲ್ಲಿವೆ. ಇಲ್ಲಿನ ಕಥೆಗಳು ಕೌಟುಂಬಿಕದ ಸುಗಂಧವನ್ನು ಪಸರಿಸುವಂತಿವೆ. ನಿಜವಾದ ರಸಾನಂದವನ್ನು ಕೊಡುವಂತಿವೆ. ಓದುಗರು ಮೆಚ್ಚುವಂತಹ ಅಪೂರ್ವ ಮೌಲ್ಯವನ್ನು ಹೊಂದಿರುವಂತಹ ಕಥೆಗಳು ಇವು.  


ಉದ್ಧರಣ

 ರಾಧಿಕಾ ವಿ. ಗುಜ್ಜರ್, ಬೆಂಗಳೂರು ಅವರು ಬರೆದ, ಮೊದಲ ಬಹುಮಾನ ಪಡೆದ ಕಥೆ ಇದು. ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಮಂಕಾಗಿದ್ದ ಗೆಳತಿ ಲತಾಳನ್ನು ಆಕೆಯ ತಂದೆ- ತಾಯಿ ಮನೆಯಲ್ಲಿ ನಾಯಿ ತರ ಕೂಡಿಹಾಕಿರುತ್ತಾರೆ. ಇವರ ಮನೆಯ ಹತ್ತಿರವೇ ನಾಗು ಎನ್ನುವವರು ಇಸ್ತ್ರಿ ಅಂಗಡಿಯನ್ನು ಇಟ್ಟಿರುತ್ತಾರೆ. ನಾಗು ಮತ್ತು ಲತಾ ಶಾಲೆಯಲ್ಲಿ ಒಟ್ಟಿಗೆ ಕಲಿತವರು. ಒಮ್ಮೆ ಲತಾ ಬೀದಿಗೆ ಬಂದಿದ್ದನ್ನು ಗಮನಿಸಿ ಆಕೆಯನ್ನು ಮನೆಗೆ ವಾಪಸ್ ಕರೆದೊಯ್ದು ತಂದೆ-ತಾಯಿಗೆ ಒಪ್ಪಿಸುತ್ತಾಳೆ. ಆಗ ಸೊಸೆ ಲತಾ ಮಾನಸಿಕವಾಗಿ ತೊಂದರೆಗೀಡಾಗಿದ್ದನ್ನು ವಿವರಿಸುತ್ತಾಳೆ. ನಾಯಿ ಕಟ್ಟುವ ಜಾಗದ ಓಣಿಯಲ್ಲಿ ಆಕೆಯನ್ನು ಇಟ್ಟಿದ್ದಾರೆ ಎಂದು ಹೇಳುತ್ತಾಳೆ. ಇದರಿಂದ ಬೇಸತ್ತ ನಾಗು ಮುಂದೇನು ಮಾಡುತ್ತಾಳೆ. ಲತಾಳ ಪಾಲಕರಿಗೆ ಏನು ಸಲಹೆ ಕೊಡುತ್ತಾಳೆ? ಗೆಳತಿಯ ಬಗೆಗಿನ ಪ್ರೀತಿ, ಅನುಕಂಪವನ್ನು ಈ ಕಥೆ ತೋರಿಸುತ್ತದೆ

ಒಂದು ಮದುವೆಯ ಕಥೆ 

ಮೈಸೂರಿನ ಸುಚಿತ್ರಾ ಹೆಗಡೆ ಬರೆದ, ದ್ವಿತಿಯ ಬಹುಮಾನ ಪಡೆದ ಕಥೆ ಇದು. ಉತ್ತರ ಕನ್ನಡ ಮೂಲದ ಭೂದೇವಿ (ಬೂದಕ್ಕ) ಗಂಡ ಸತ್ತ ನಂತರ ಆಸ್ತಿಯನ್ನು ಸಂಬಂಧಿಕರಿಗೆ ವಹಿಸಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ ಮಗನೊಟ್ಟಿಗೆ  ವಾಸಿಸುತ್ತಾಳೆ. ಅಲ್ಲಿ ಮಗ ಹೊಸದಾಗಿ ಮನೆ ಕಟ್ಟಿದ್ದರಿಂದ ಸತ್ಯನಾರಾಯಣ ಪೂಜೆಯನ್ನು ಮಾಡಿಸುವಂತೆ ಸೂಚಿಸುತ್ತಾಳೆ. ಆ ಪೂಜೆ ಮಾಡಲು ಅಮೆರಿಕೆಯಲ್ಲಿರುವ ಉತ್ತರ ಕನ್ನಡ ಮೂಲದ ಅವಿವಾಹಿತ ನಾರಾಯಣ ಜೋಯಿಸ್ ಬರುತ್ತಾನೆ. ಬೂದಕ್ಕನಿಗೆ ಪರಿಚಯವಾಗುತ್ತದೆ. ಬೂದಕ್ಕ ಒಮ್ಮೆ ಬಾತ್ ರೂಮ್ನಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಾಗ ಅವಳಿಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲು ಅವಿವಾಹಿತೆ, ಚೆಲುವೆ, ಮಲಯಾಳಿ ಹುಡುಗಿ ಜಿಶಾ ದಿನವೂ ಬರುತ್ತಿದ್ದಳು. ಒಂದು ದಿನ ನಾರಾಯಣ ಜೋಯಿಸನನ್ನು ಮನೆಗೆ ಬರುವಂತೆ ಬೂದಕ್ಕ ಕರೆದಾಗ ಜಿಶಾ ಚಂದದ ಚಹಾವನ್ನು ಮಾಡಿಕೊಡುತ್ತಾಳೆ. ಜಿಶಾ ಬಳಿ  ‘ಇಬ್ಬರು ಕೂತು ಮಾತನಾಡಿಕೊಳ್ಳಿ. ಸ್ನೇಹ ಬೆಳೆಸಿಕೊಳ್ಳಿ. ಒಟ್ಟಿಗೆ ಇರಿ’ ಎನ್ನುತ್ತಾ ವಿವಾಹಕ್ಕೆ ಸೂಚಿಸುತ್ತಾಳೆ. ಇಬ್ಬರು ಆರಾಮವಾಗಿ ಕೂತು ಮಾತನಾಡುತ್ತಾರೆ. ಚಿಕಿತ್ಸೆ ಮುಗಿದ ನಂತರ ಜಿಶಾ ಬರುವಿಕೆ ನಿಲ್ಲುತ್ತದೆ. ಕೆಲವು ತಿಂಗಳ ನಂತರ ನಾರಾಯಣ ಜೋಯಿಸ್ ಮತ್ತು ಜಿಶಾ ಇಬ್ಬರೂ ಬೂದಕ್ಕನ ಮನೆಗೆ ಬರುತ್ತಾರೆ. ಅವರು ಬಂದಿದ್ದೇಕೆ? ಇಬ್ಬರೂ ವಿವಾಹವಾದರೆ? ಬೂದಕ್ಕ ಮುಂದೇನು ಮಾಡಿದಳು ಎನ್ನುವ ಕುತೂಹಲಕರ ಕಥೆ ಇದು.  

ಅಂಕುರಾರ್ಪಣ

 ಹುಬ್ಬಳ್ಳಿಯ ಲತಾ ಹೆಗಡೆ ಬರದ ತೃತೀಯ ಬಹುಮಾನ ಪಡೆದ ಕತೆ ಇದು. ಪಾರ್ಶ್ವವಾಯುಪೀಡಿತ ತಾಯಿಯ ಚಿಕಿತ್ಸೆಗಾಗಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದ ಮಗಳು  ತನ್ನ ಅಂಡಾಣುವನ್ನು ದಾನ ಮಾಡುವ ಮನಕಲಕುವ ಕತೆ ಇದು. ಹಣದ ಅವಶ್ಯಕತೆ ಇದ್ದ ಕಾರಣ ತಾನು ಹೀಗೆ ಮಾಡುತ್ತಿರುವುದಾಗಿ ತನ್ನ ಗ್ರಾಹಕಿ ಮತ್ತು ಪರಿಚಿತ ವೈದ್ಯೆ ರಾಗಿಣಿಯಲ್ಲಿ ಈ ಬಗ್ಗೆ ಮಾಹಿತಿ ಕೊಟ್ಟಾಗ ವೈದ್ಯೆ  ಈ ಬಗ್ಗೆ ಅವಳಿಗೆ ಕಾನೂನಿನಲ್ಲಿರ ಇರುವ ಆಂಶಗಳನ್ನು ವಿವರಿಸಿ  ಅಂಡಾಣು ಕೊಡಬಹುದು ಎನ್ನುತ್ತಾಳೆ. ಹೀಗೆ ದಾನ ಮಾಡುವ ಮೂಲಕ  ಇನ್ನೊಬ್ಬರ ಕೊರತೆ ನೀಗಿಸಿ ಅವರ ಮನೆಯ ಬೆಳಕಾಗಲಿ ಎನ್ನುವುದು ಆಕೆಯ ಆಶಾವಾದ. ಹಾಗಾದರೆ ಈ ಅಂಡಾಣುವನ್ನು ಆಕೆ ವೈದ್ಯೆಯ ಮೂಲಕ ಯಾರಿಗೆ ಕೊಟ್ಟಳು?  ಆ ಕುಟುಂಬದಲ್ಲಿದ್ದ  ತೊಂದರೆ ಏನು? ಅಂಡಾಣು ದಾನ ಮಾಡಿದ ಮಾನಸಿಯ ತಾಯಿ ಈ ಬಗ್ಗೆ ಏನೆಂದಳು? ಮಾನಸಿಗೆ ಹೆಚ್ಚಿನ ಹಣವನ್ನು ವೈದ್ಯೆ ಕೊಟ್ಟರೇ ಎನ್ನುವ ವಿವರ ಈ ಕತೆಯಲ್ಲಿದೆ. 

ಕೂಸಿನ ಆಸೆ

ಮಂಗಳೂರಿನ ಜ್ಯೋತಿ ರಾಜೇಶ್ ಅವರು ಬರೆದ ಮೆಚ್ಚುಗೆಯ ಬಹುಮಾನ ಪಡೆದ ಕಥೆ ಇದು.  ದೊಂಬರಾಟದ ಮೂಲಕ ಜೀವನ ನಡೆಸುವ ಕುಟುಂಬದ ಮಗುವಿಗೆ ಶಾಲೆಗೆ ಹೋಗಬೇಕೆಂಬ ಹಟವಿದ್ದರೂ ಆಕೆಯ ತಂದೆ ಹೊಟ್ಟೆಪಾಡಿಗಾಗಿ ಆಕೆಯನ್ನು ದೊಂಬರಾಟಕ್ಕೆ ಸೇರಿಸುತ್ತಾನೆ. ತಂತಿಯ ಮೇಲೆ ನಡಿಗೆ, ಸೈಕಲ್‌ನ ಒಂದೇ ಚಕ್ರದ ಮೇಲೆ ನಡಿಗೆ ಮುಂತಾದವುಗಳ ಮೂಲಕ ರಂಜಿಸಿ ಜನರಿಂದ ಹಣ ಸಂಗ್ರಹಿಸಿ ಜೀವನ ಸಾಗಿಸುತ್ತಾರೆ. ನಮಗೆ ಶಾಲೆ ಅಥವಾ ಶಿಕ್ಷಣ ಹೇಳಿ ಮಾಡಿಸಿದ್ದಲ್ಲ ಎಂದು ಅಪ್ಪ ಬೆದರಿಸುತ್ತಾನೆ. ಈ ಮಧ್ಯೆ ಯುವಕನೊಬ್ಬ ಈ ಬಾಲಕಿಯು ಶಾಲೆಗೆ ಸೇರುವಂತೆ ಮಾಡುತ್ತಾನೆ. ಜೊತೆಗೆ ಹಣ ನೀಡುತ್ತಾನೆ. ಇದಕ್ಕಾಗಿ ಆತನು ಮಾಡಿದ ಉಪಾಯವೇನು? ಮುಂದೆ ಆ ಕುಟುಂಬದ ಪಾಲಿಗೆ ಆತ ದೇವರಂತೆ ಹೇಗೆ ಕಂಡುಬಂದ? 

ಪೂರ್ವಿಕಲ್ಯಾಣ

 ಬೆಂಗಳೂರಿನ ಶಂಕರರಾವ್ ಬರೆದ, ಮೆಚ್ಚುಗೆ ಪಡೆದ ಕಥೆ ಇದು. ಈ ಕಥೆಯಲ್ಲಿ ದೂರಾದ ಮನಸ್ಸುಗಳನ್ನು ಸಂಗೀತ ಹೇಗೆ ಒಂದು ಮಾಡುತ್ತದೆ ಎನ್ನುವುದನ್ನು ಚಿತ್ರಿಸಲಾಗಿದೆ. ಪೂರ್ವಿ ಮತ್ತು ಕಲ್ಯಾಣಿ ತಾಯಿ -ಮಗಳು. ಇಬ್ಬರೂ ಸಂಗೀತಗಾರರು. ಪೂರ್ವಿ ಇಂಜಿನಿಯರ್ ಆಗಿದ್ದವನನ್ನು ಮದುವೆ ಆಗಿರುತ್ತಾಳೆ. ಆತ ಯಾರೋ ಹೇಳಿದ ಚಾಡಿ ಮಾತನ್ನು ಕೇಳಿ ಪತ್ನಿಯನ್ನು ದೂರ ಮಾಡುತ್ತಾನೆ. ಈ ಮಧ್ಯೆ ಅವರಲ್ಲಿ ಜನಿಸಿದ ಕಲ್ಯಾಣಿ ತಂದೆಯೊಟ್ಟಿಗೆ  ಬೆಳೆದು ಸಂಗೀತ ಕಲಿತು ಹೆಸರು ಮಾಡುತ್ತಾಳೆ. ಗಂಡ- ಹೆಂಡತಿ ಮತ್ತೆ  ಭೇಟಿಯಾದಾಗ ಕಲ್ಯಾಣಿ ಸಂಗೀತಗಾರ್ತಿ ಎಂದು ಪೂರ್ವಿಗೆ  ಗೊತ್ತಾಗುತ್ತದೆ.  ನಂತರ ಒಟ್ಟಾದ ತಂದೆ-ತಾಯಿ, ಮಗಳ ಜೀವನ ಹೇಗೆ ಸಾಗುತ್ತದೆ. ತಾಯಿ- ಮಗಳ ಸಂಗೀತದ ಸಾಧನೆಯ ದಾರಿಯನ್ನು ಇಲ್ಲಿ ವಿವರಿಸಲಾಗಿದೆ. 

 ಬುಡದಡಿಯ ನೀರು

  ಚನ್ನಗಿರಿಯ ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಕಥೆ ಇದು. ತಂದೆಯನ್ನು ದೊಡ್ಡ ಮಗ ಪಾಲಾಕ್ಷಿ ತನ್ನ ಮನೆಯಲ್ಲಿಟ್ಟುಕೊಂಡಿದ್ದ ವೇಳೆ ಆತ ಅಸ್ವಸ್ಥನಾಗಿ, ಉಸಿರು ಮೇಲೆ ಕೆಳಗೆ ಆಗಿ ಸಾಯುತ್ತಾನೆ. ಆದರೆ ಈ ಸಾವಿನ ಬಗ್ಗೆ ಆತನ ಸಹೋದರಿ ಕೆಂಪಮ್ಮ  ಸಂಶಯ ತಾಳುತ್ತಾರೆ. ತನ್ನ ತಂದೆಯನ್ನು ಕೊಂದಂತೆ ಈತ ತಾಯಿಯನ್ನು ಕೊಲ್ಲಬಹುದೇ ಎಂಬ ಸಂಶಯ ಕಾಡುತ್ತದೆ. ಅದಕ್ಕಾಗಿ ತಾಯಿಯನ್ನು ತನ್ನ ಮನೆಗೆ ಕರೆದೊಯ್ಯುತ್ತಾಳೆ. ಮಗಳ ಮನೆಗೆ ಹೋದ ತಾಯಿ  ಕೆಲವು ದಿನಗಳ ನಂತರ ಅಸ್ವಸ್ಥತೆಯಿಂದ ತಾಯಿ ಸಾಯುತ್ತಾಳೆ. ಆಕೆ ಹೇಗೆ ಸತ್ತಳು, ತಂದೆಯ ಸಾವಿನ ಬಗ್ಗೆ ಅಣ್ಣನಿಗೆ ಹೇಳಿದ ಮಾತು ಮಗಳಿಗೆ ಹೇಗೆ ವಾಪಸ್ಸಾಯಿತು ಎನ್ನುವ ಕುತೂಲಹಕರ ಕಥೆ ಇದು.

ದೇವರಿಗೆ ಬಯ್ಯುವ ತಾತಯ್ಯನೂ ಮತ್ತು ಚಿಕ್ಕಪ್ಪನೂ 

ಬೈಂದೂರಿನ ಸುವೃತಾ ಅಡಿಗ ಮಣೂರು ಬರೆದ ಕಥೆ ಇದು. ಲೇಖಕಿಯ ಚಿಕ್ಕಪ್ಪ ಮನೆ ಬಿಟ್ಟು ಹೋಗಿರುವುದಕ್ಕೆ ತಾತನು ದೇವರನ್ನು ಬಯ್ಯುತ್ತಿರುತ್ತಾನೆ. ತಾತ  ಏಕೆ ದೇವರನ್ನು ಬಯ್ಯುತ್ತಾನೆ ಎನ್ನುವುದು ಲೇಖಕಿಗೆ ಗೊತ್ತಿರುವುದಿಲ್ಲ. ಜೊತೆಗೆ ಚಿಕ್ಕಪ್ಪ ಮನೆ ಬಿಟ್ಟಿದ್ದೇಕೆ ಎಂಬ ಕಾರಣವೂ ಗೊತ್ತಿರುವುದಿಲ್ಲ. ಅಪ್ಪನ ಮದುವೆಯಲ್ಲಿ ಅಮ್ಮನಿಗೆ ಕೊಡಲು ತಂದಿದ್ದ ಸೀರೆಯನ್ನು ಆತ ಮಡಚಿ ಇಟ್ಟಿದ್ದಕ್ಕೆ ಸಿಟ್ಟಿನಿಂದ ಚಿಕ್ಕಪ್ಪನಿಗೆ ಕೆನ್ನೆಗೆ ಹೊಡೆದು ‘ಹೆಣ್ಣಿಗ’ ಎಂದು ಬೈದಿರುತ್ತಾನೆ. ನಂತರ ಇದರ ಬಗ್ಗೆ ತಾತ ಬೇಸರಿಸಿಕೊಳ್ಳುತ್ತಾನೆ. ಚಿಕ್ಕಪ್ಪ ಮನೆ ಬಿಟ್ಟು ಹೋದುದೇಕೆ? ಆತ ಮನೆಗೆ ಮಳಿ ಬಂದನೇ? ಮನೆ ಬಿಡುವಾಗ ಹೇಗಿದ್ದ? ಬರುವಾಗ ಏನಾಗಿದ್ದ? ತಾತಯ್ಯ ದೇವರಿಗೆ ಬಯ್ಯುತ್ತಿದ್ದು ಏಕೆ ಎನ್ನುವುದು ಅವಳಿಗೆ ಅರ್ಥವಾಗುತ್ತದೆಯೇ? ಇದಕ್ಕೆ ಉತ್ತರವೇ ಈ ಕಥೆ.  

 ಬೆಳಕು

 ಅಮೆರಿಕೆಯಲ್ಲಿರುವ ಸಾವಿತ್ರಿ ರಾವ್ ಬರೆದ ಕಥೆ ಇದು. ಹುಟ್ಟಿದ ಮಕ್ಕಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿದ್ದರೆ ಹೆತ್ತವರಿಗೆ ಕಷ್ಟ ಮುಖ ಸಹಜ ದಿಕ್ಕು ತೋಚದೆ ತೊಳದಾಡುತ್ತಾರೆ ಪರಿಹಾರಕ್ಕಾಗಿ ಕಂಡವರ ಮೊರೆ ಹೋಗುತ್ತಾರೆ ಮಕ್ಕಳ ಮಾನಸಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಪಾಲಕರು ಪ್ರಯತ್ನಿಸಬೇಕು ಎನ್ನುವ ಸಂದೇಶವನ್ನು ಈ ಕಥೆ ಕಟ್ಟಿಕೊಡುತ್ತದೆ ವೈದ್ಯೆ  ಸುಮತಿ ಅವರಿಗೆ ಒಬ್ಬ ಬುದ್ಧಿಮಾಂದ್ಯ ಮಗ ಇದ್ದ. ಸುಮತಿ ಅಮೆರಿಕೆಯಲ್ಲಿ ದೊಡ್ಡ ನೌಕರಿಯಲ್ಲಿದ್ದವರು. ಮಗ ಬುದ್ಧಿಮಾಂದ್ಯ ಎಂದು ಗೊತ್ತಾದ ನಂತರ ಕೆಲಸವನ್ನು ಬಿಟ್ಟು ಮಗನ ಸಲುವಾಗಿ ಅಮೆರಿಕ ತ್ಯಜಿಸಿ ಬೆಂಗಳೂರಿಗೆ ಬಂದು ಆತನ ಭವಿಷ್ಯ ಕಟ್ಟುತ್ತಾಳೆ. ತಾಯಿ ಸುಮತಿ ಯಾವ ರೀತಿ ಆತನ ಭವಿಷ್ಯ ರೂಪಿಸಿದಳು. ಆತ ದೊಡ್ಡವನಾದ ನಂತರ ಏನು ಕಲಿತ, ಹೇಗೆ ಹೆಸರುವಾಸಿಯಾದ? ಈಗ ಏನೆಲ್ಲ ಕೆಲಸ ಮಾಡುತ್ತಿದ್ಸಾನೆ ಎನುವುದನ್ನು ಈ ಕಥೆ ಚೆಂದವಾಗಿ ಬಿಚ್ಚಿಟ್ಟಿದೆ. 

ಸಂತೃಪ್ತ ಭಾವ 

ವಿಜಯೇಂದ್ರ ರಾವ್ ಬೆಂಗಳೂರು ಅವರು ಬರೆದ ಕಥೆ ಇದು. ಸೀನಿಯರ್ ಡಿಸೈನರ್ ಇಂಜಿನಿಯರ್ ಆಗಿದ್ದ ಮಗ ತನಗೆ ಇರುವ ಮಾರಣಾಂತಿಕ ಕಾಯಿಲೆಯ ಬಗ್ಗೆ  ತಾಯಿಗೆ ಹೇಳದೆ ಮುಚ್ಚಿಟ್ಟು ಆಕೆಯನ್ನು ವೃದ್ಧಾಶ್ರಮಕ್ಕೆ ತಂದು ಬಿಟ್ಟು, ತಾನು ಒಂದು ತಿಂಗಳು ಲಂಡನ್ನಿಗೆ ಹೋಗುವುದಾಗಿ ಸುಳ್ಳು ಹೇಳಿ ಆಸ್ಪತ್ರಗೆ ದಾಖಲಾಗುತ್ತಾನೆ. ಆದರೆ ಆತ ಅಲ್ಲಿ ಸಾಯುತ್ತಾನೆ. ಒಂದು ತಿಂಗಳ ನಂತರ ತಾಯಿ ಮಗನಿಗೆ ಕರೆ ಮಾಡಿದಾಗ ಆ ಕಡೆಯಿಂದ ಮಗ ಮಾತನಾಡುತ್ತಾನೆ. ವೃದ್ಧಾಶ್ರಮದ ಮ್ಯಾನೇಜರ್‌ಗೆ ನಿಜ ವಿಚಾರ ಗೊತ್ತಿರುತ್ತದೆ. ಅಲ್ಲಿನ ಮೇಲ್ವಿಚಾರಕ ತಾಯಿಯು ಮಗ ಇಂಗ್ಲೆಂಡಿನಲ್ಲಿ ಇದ್ದಾನೆ ಎಂದು ನಂಬಿದ್ದಾಳೆ. ಮಗ ಸತ್ತಿರುವ ಬಗ್ಗೆ ವರದಿ ಬಂದಿದೆ. ಆದರೆ ಆಕೆ ಯಾರ ಹತ್ತಿರ ಮಾತನಾಡುತ್ತಾಳೆ ಎಂದು ಚಿಂತೆಗೀಡಾದಾಗ ಮ್ಯಾನೇಜರ್ ನಿಜ ವಿಚಾರವನ್ನು ಆಕೆಗೆ ಹೇಳಿದನೇ? ಆ ತಾಯಿಯೊಂದಿಗೆ ನಿಜಕ್ಕೂ ಮಾತನಡುತ್ತಿದ್ದವರು ಯಾರು? ಎನ್ನುವುದು ಕಥೆಯ ಸಾರಾಂಶ. ತಾಯಿಗೆ ನೆಲೆಕೊಟ್ಟು ಮಗ ಸಂತೃಪ್ತ ಮಹಾಭಾವವನ್ನು ಅನುಭವಿಸಿದ್ದಾನೆ ಎಂದು ಲೇಖಕಿ ಹೇಳುತ್ತಾರೆ.

ಎಷ್ಟು ಕಷ್ಟವೋ ಹೊಂದಿಕೆ ಎಂಬುದು 

ಗಿರಿಜಾ ರಾವ್ ಬೆಂಗಳೂರು ಅವರು ಬರೆದ ಕಥೆ ಇದು. ಈ ಕಥೆಯಲ್ಲಿ ಪತ್ರದ ಮೂಲಕ  ಹೃದಯವನ್ನು ಗೆಳೆಯ, ಗೆಳತಿಯರೊಂದಿಗೆ ಈ ಹಿಂದೆ ಹಂಚಲು ಹೇಗೆ ಸಾಧ್ಯವಿತ್ತು ಎನ್ನುವುದನ್ನು ಲೇಖಕಿ ತೋರಿಸಿಕೊಟ್ಟಿದ್ದಾರೆ.  ಮನೆಯ ಕಷ್ಟ-ದುಃಖವನ್ನೆಲ್ಲಾ ಗೆಳತಿಗೆ ಪತ್ರದಲ್ಲಿ ಬರೆಯುತ್ತಾ ವಿಚ್ಛೇದನ ಪಡೆಯುವೆ, ಆಶ್ರಮ ಸೇರುವೆ ಎಂದು ಆಶಾ ತನ್ನ  ಗೆಳತಿ ನಿರ್ಮಲಾಗೆ ಬರೆಯುವ ಪತ್ರ ಇದು. ಗಂಡ ಸೀರೆ ತಂದು ಕೊಟ್ಟರೆ, ಬೇಕಾದ್ದನ್ನು ಕೊಡಿಸಿದರೆ ಸಿಟ್ಟು ಮಾಯವಾಗುತ್ತಿತ್ತು. ಮತ್ತೆ ನಾಲ್ಕು ದಿನದ ನಂತರ ವೈಮನಸ್ಸು ಬಂದಾಗ ಪತ್ರ ಬರೆಯುತ್ತಾಳೆ.  ಇದೇ ವೇಳೆ ಕವಿ ಜಿಎಸ್ ಶಿವರುದ್ರಪ್ಪನವರ ಹಾಡು ‘ಎಷ್ಟು ಕಷ್ಟ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲ್ಲಿ’ ರೇಡಿಯೋದಲ್ಲಿ ಬರುತ್ತಿತ್ತು. ಇದನ್ನು ಕೇಳಿದ ನಂತರ ಆಶಾ ತನ್ನ ಗೆಳತಿಗೆ ಪತ್ರ ಬರೆಯುವುದನ್ನು ನಿಲ್ಲಿಸುತ್ತಾಳೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೪.೦೭.೨೦೨೬

....................



Comments

Popular posts from this blog