ಮರಳಿ ಬಾಲ್ಯಕ್ಕೆ ಹೋದ ಅನುಭವದ


‘ಸವಿನೆನಪುಗಳ ಹಂದರ’



 ಜೀವನದಲ್ಲಿ ನಡೆಯುವ ಎಷ್ಟೋ ಅನುಭವಗಳನ್ನು ಸರಳವಾದ ಶಬ್ದಗಳಲ್ಲಿ ಸ್ವಾರಸ್ಯಕರ ವರ್ಣನೆಯ ಮೂಲಕ ಲೇಖಕಿ ವಾಣಿ ರಾಜ್ ‘ಸವಿನೆನಪುಗಳ ಹಂದರ’ದಲ್ಲಿ ಕಟ್ಟಿಕೊಟ್ಟಿದ್ದಾರೆ. 

ಹೆಸರಿಗೆ ತಕ್ಕಂತೆ ಕೃತಿಯು ಹಲವಾರು ಸವಿನೆನಪುಗಳನ್ನು ಹೊತ್ತಿರುವ ಒಂದು ಕಥಾ ಸಂಕಲನ. ದೊಡ್ಡವರಾಗುತ್ತಿದ್ದಂತೆ ಜವಾಬ್ದಾರಿಗಳ ನಡುವೆ ಬದುಕು ಸಾಗುವಾಗ ನಮ್ಮ ಬಾಲ್ಯ ಎಷ್ಟು ಚೆನ್ನಾಗಿತ್ತು, ಬಾಲ್ಯ ಮರಳಿ ಬಂದರೆ ಎಷ್ಟು ಚೆನ್ನಾಗಿರುತ್ತದೆ ಎಂಬ ಆಸೆ ಪ್ರತಿಯೊಬ್ಬರಿಗೂ ಕಾಡುತ್ತದೆ. ಆದರೆ ಅದು ಅಸಾಧ್ಯವಾಗಿರುತ್ತದೆ. ಆಗ ಸವಿ ನೆನಪುಗಳ ಮರುಕಳಿಸುತ್ತವೆ. ಮರಳಿ ಬಾಲ್ಯಕ್ಕೆ ಹೋದ ಅನುಭವವನ್ನು ಅವು ಕಟ್ಟಿ ಕೊಡುತ್ತವೆ. ಇಂತಹ ಸುಮಾರು ೩೨ ಕಿರುಬರಹಗಳನ್ನು ಲೇಖಕಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ

ಇಲ್ಲಿನ ಬರೆಹಗಳಲ್ಲಿ ಕೆಲವು ಲಘು ಹಾಸ್ಯದ ದಾಟಿಯಲ್ಲಿ ಸಾಗುತ್ತವೆ. ಮತ್ತೆ ಕೆಲವು  ಜೊತೆ ನವಿರಾದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಈಗಿನ ಮತ್ತು ಅಂದಿನ ಜೀವನದಲ್ಲಿ ಆದ ಬದಲಾವಣೆಗಳನ್ನು ಕಣ್ಮುಂದೆ ಕಾಣುವಂತೆ ಚಿತ್ರಿಸಿದ್ದಾರೆ. ಇವೆಲ್ಲ ನಮ್ಮ ನಿಮ್ಮ ಜೀವನದಲ್ಲಿ ನಡೆದಂತಹ ಬಹುತೇಕ ಘಟನೆಗಳೇ ಆಗಿರುವುದರಿಂದ ಕೃತಿಯನ್ನು ಓದುವಾಗ ಮತ್ತೊಮ್ಮೆ ನಮ್ಮ ಕಣ್ಮುಂದೆ ಇವು ಹಾದು ಹೋಗುತ್ತವೆ. ಬದಲಾವಣೆ ಪರ್ವದಲ್ಲಿ ಅಂದಿನ ಮುಗ್ಧiನಗಳ ಆನಂದ ಈಗಿನ ಜನಾಂಗಕ್ಕೆ ಮರೀಚಿಕೆಯಂತೆ ಕಾಣಬಹುದು. ಆದರೆ ಈ ತರದ ಅದ್ಭುತ ನೆನಪುಗಳು ನಮ್ಮ ನೆನಪಿನ ಬುತ್ತಿಯಿಂದ ಹೊರಬರುವಂತೆ ಲೇಖಕಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಕೃತಿಯಲ್ಲಿ ಬರುವ ಕೆಲವು ಸವಿನೆನಪುಗಳು:

 ಲೇಖಕಿ ಚಿಕ್ಕವಳಿರುವಾಗ ಗುಡ್ಡಕ್ಕೆ ಹೋಗಿ ಗೇರು ಮರ ಹತ್ತಿದಾಗ ೬೦ ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಾಗ ಅವರ ಅಕ್ಕ ಸೊಂಟದ ಮೇಲೆ ಇರಿಸಿಕೊಂಡು ಮನೆಗೆ ಬಂರುತ್ತರೆ. ಮನೆಯವರಾರೂ ಆಕೆಗಾದ ಗಾಬರಿಯನ್ನು ಅರ್ಥೈಸಿಕೊಳ್ಳುವುದಿಲ್ಲ. ಗೋಡೆ ಅಂಚಿನಲ್ಲಿ ಮಲಗುವ ಬಗ್ಗೆ ಅಕ್ಕ ಮತ್ತು ತಂಗಿಯ ನಡುವೆ ಜಗಳ ನಡೆಯುತಿದ್ದಾಗ ಅಪ್ಪ ಇಬ್ಬರನ್ನು ಸಮಾಧಾನ ಮಾಡುವುದು, ಪುಸ್ತಕ, ಪತ್ರಿಕೆ, ಮಕ್ಕಳ ಕಥೆ ಓದುವ ಹವ್ಯಾಸವಿದ್ದುದರಿಂದ, ಮನೆಗೆ ಇವೆಲ್ಲ ಬರುತ್ತಿದ್ದರಿಂದ ಓದುವ ಆಸೆ.  ಆದರೆ ಶಾಲೆಗೆ  ಹೋಗುವ ಸಮಯದಲ್ಲಿ ಹಿರಿಯರು ಅದನ್ನು ಕೊಡದೆ ತೆಗೆದಿಡುತ್ತಿದ್ದರು. ಹಿರಿಯರಿಗೆ ಗೊತ್ತಿಲ್ಲದೆ ಪುಸ್ತಕದೊಳಗೆ ಕಾದಂಬರಿಯನ್ನು ಇಟ್ಟುಕೊಂಡು ಓದುತ್ತಿರುವ ಚಿತ್ರಣವನ್ನು ಲೇಖಕಿ ಇಲ್ಲಿ ಬರೆದಿದ್ದಾರೆ.

ಮಾವಿನಹಣ್ಣಿನ ರಸಾಯನ, ನೀರ್ ದೋಸೆಯ ರುಚಿಯನ್ನು ಬಾಯಲ್ಲಿ ನೀರು ಬರುವಂತೆ ಮೂಡಿಸಿದ್ದಾರೆ. ಸಹೋದರ ಮಾವನ ಜೊತೆಗಿನ ಒಡನಾಟವನ್ನು ಮನದಾಳದಿಂದ ಇಲ್ಲಿ ಬರೆದಿದ್ದಾರೆ. ಅವರ ವ್ಯಕ್ತಿತ್ವ, ಅಚ್ಚುಕಟ್ಟುತನ, ತೋರುತ್ತಿದ್ದ ಪ್ರೀತಿಯು ಇಲ್ಲಿದೆ. ಅಣ್ಣಂದಿರು ತೋರಿಸುವ ಪ್ರೀತಿಮ ಕಾಳಜಿ, ಶಾಲೆಗೆ ಹೋಗುವಾಗ ವಿವಿಧ ಶಾಲಾ ಸ್ಪರ್ಧೆಗಳಲ್ಲಿ, ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಕಾಡುಮಾವಿನ ಹಣ್ಣುಗಳನ್ನು ಹೆಕ್ಕಿ ತಿನ್ನುವುದು, ಮಾವನ ಪ್ರೀತಿ, ಅತ್ತೆಯ ಕಳಕಳಿಯ ನೆನಪು, ಮನೆಯ ಮಕ್ಕಳೊಂದಿಗೆ ಮತ್ತು ಶಾಲೆಯ ಮಕ್ಕಳೊಂದಿಗೆ ವಿವಿಧ ರೀತಿಯ ಆಟವಾಡುತ್ತಿದ್ದುದನ್ನು ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

 ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಿದ ಶಿಕ್ಷಕರು ಅವರು ಕಲಿಸಿದ ಜೀವನ ಮೌಲ್ಯಗಳು ನೆನಪಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಶಾಲೆಗೆ ಹೋಗುವಾಗಿನ ಅನುಭವ, ಪುಸ್ತಕ, ಬ್ಯಾಗುಗಳನ್ನು  ತೋಯಿಸಿಕೊಂಡು, ಬಟ್ಟೆಯನ್ನು ಒದ್ದೆ ಮಾಡಿಕೊಂಡು ಮನೆಗೆ ಮರಳುವುದು, ಚರಂಡಿಯಲ್ಲಿ ಪೇಪರ್ ದೋಣಿ ಆಟ ಆಡುವುದು, ಭಯಾನಕ ಗುಡುಗು, ಮಳೆಗಾಳಿಗಳಿಗೆ ಕೊಡೆ ಉಲ್ಟಾ ಆಗಿ ಮೈಯೆಲ್ಲಾ ಒದ್ದೆಯಾಗುವುದು, ಹಳ್ಳಿಯಲ್ಲಿ ಮಳೆಗಾಲದಲ್ಲಿ ರಾತ್ರಿ ಕಪ್ಪೆ, ಜೀರುಂಡೆಗಳ ಕಲರವ ಮೊದಲಾದವುಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.

 ದೊಡ್ಡಮ್ಮನ ಕೈ ರುಚಿ, ತುಪ್ಪ ಹಾಕಿದ ಪಡ್ಡು, ಬಿಸಿಬಿಸಿ ಕಾಫಿಯ ನೆನಪು, ತ್ಯಾಗಮಯಿ ಅಮ್ಮ, ಜೀವನ ಬದುಕಿಗಾಗಿ ಬಾಳಿದ ಅಮ್ಮನ ಜೀನ, ಅವಳು ಅವಳು ಕಲಿಸಿಕೊಟ್ಟ ಪಾಠದಿಂದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು, ಮದುವೆಯಾಗುವ ಮುಂಚೆ ನಿಶ್ಚಿತವಾಗಿದ್ದ ತನ್ನ ಗಂಡನೊಂದಿಗೆ ಮೊಬೈಲ್ ಇಲ್ಲದ ಕಾಲದಲ್ಲಿ ಪತ್ರ ವ್ಯವಹಾರ, ಒಮ್ಮೆ ಗಂಡನಿಗೆ ೧೩ ಪುಟದ ಪತ್ರ ಬರೆದಿದ್ದು, ವಾಟ್ಸಾಪ್ ಸ್ಟೇಟಸ್‌ನಿಂದ ಆದ ಅವಾಂತರ, ಶಾಲೆಯಲ್ಲಿ ವಿದ್ಯಾರ್ಥಿನಿಯರು ಮೈನೆರಿದಾಗ ಆಗುವ ಗಾಬರಿ, ಪೋಷಕರಿಗೆ ಇದರ ಬಗ್ಗೆ ಅರಿವು ಇಲ್ಲದಿದ್ದುದು, ಶಿಕ್ಷಕಿ ಅವರಿಗೆ ನೆರವಾದುದು ಮುಂತಾದವುಗಳನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.

 ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರೀಷೆಗೆ ಕರೆದುಕೊಂಡು ಹೋಗುವಂತೆ ಮಗಳು ಹಠ ಹಿಡಿದಾಗ ಕರೆದುಕೊಂಡು ಹೋಗಿದ್ದು, ಅಲ್ಲಿ ಮಗಳು ಜಾಯಿಂಟ್ ವ್ಹೀಲ್, ಕೊಲಂಬಸ್ ಮತ್ತು ಟೊರಾಟೊರಾದಲ್ಲಿ ಕುಳಿತುಕೊಳ್ಳಬೇಕೆಂಬ ಆಸೆ ತೋರಿಸಿದ್ದು ಅದರಲ್ಲಿ ಕುಳಿತಾಗ ಹೆದರಿ, ಕೂಗುತ್ತಾ, ನಿಲ್ಲಿಸಲು ಹೇಳು ಎಂದಿದ್ದು,  ಹೊಸ ಮನೆ ಕಟ್ಟುವಾಗ ಪಕ್ಕದ ಮನೆಯವರೊಂದಿಗೆ ಆದ ಅನುಭವ... ಹೀಗೆ ನೂರಾರು ಸವಿನೆನಪುಗಳನ್ನು ಕೃತಿಯಲ್ಲಿ ಸುಂದರವಾಗಿ ನೇಯ್ದಿದ್ದಾರೆ.

ನಾವು ಗತಕಾಲದ ನೆನಪನ್ನು ಮತ್ತೆ ಮಾಡಿಕೊಂಡು  ಓದಬಹುದಾದ ಕೃತಿ ಇದು. ಓದಿದಾಗ ನಮ್ಮ ಬಾಲ್ಯದ ನೆನಪುಗಳೂ ನಮ್ಮದೆ ಕಾಡದೇ ಇರಲಾರವು.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

 .೦೫. ೦೭.೨೦೧೬

,,,,,,,,,,,,,,,,,,,,,


Comments

Popular posts from this blog