ಅಭಿವೃದ್ಧಿಯ ಹೆಸರಿನಲ್ಲಿ ಹಳ್ಳಿಗಳ ವಿನಾಶದ ಕಥೆಯ
‘ಶಿವನ ಡಂಗುರ’
“ಶಿವನ ಡಂಗುರ’ ಜ್ಞಾನಪೀಠ ಪುರಸ್ಕೃತ ಪ್ರೊ. ಚಂದ್ರಶೇಖರ ಕಂಬಾರರ ಕಾದಂಬರಿ. ಸಮಕಾಲೀನ ಬದುಕಿನ ಪಲ್ಲಟಗಳನ್ನು ಮುಖಾಮುಖಿಯಾಗಿಸಿದ ಇದು ವಿಶಿಷ್ಟ ಕೃತಿ ಮಾತ್ರವಲ್ಲ, ಹೊಸ ದರ್ಶನ ನೀಡುವ ಮಹತ್ವದ ಕಾದಂಬರಿಯೂ ಹೌದು. ಹಳ್ಳಿಯೊಂದರ ಬದುಕನ್ನು ಚಿಂತಿಸುತ್ತ, ಜಾಗತೀಕರಣದ ಅಪಾಯ, ನಗರ ಕೇಂದ್ರಿತ ಪ್ರಗತಿಯ ಪರಿಕಲ್ಪನೆ, ಜನಪದರ ಅತ್ಮನಾಶ, ನಮ್ಮ ಸೃಜನಶೀಲತೆಯನ್ನು ಕೊಲ್ಲುತ್ತಿರುವ ಅನ್ಯಾಕ್ರಮಣದ ದುರಂತ, ಅಭಿವೃದ್ಧಿ ಹೆಸರಿನಲ್ಲಿ ಈ ನೆಲದ ಅಂತ:ಸತವ್ವನ್ನು ಹೀರುತ್ತಿರುವ ವಿವಿಧ ಯೋಜನೆಗಳ ದುಷ್ಪರಿಣಾಮ -ಹೀಗೆ ಅನೇಕ ಸಂಗತಿಗಳನ್ನು ಕೃತಿ ಚಿತ್ರಿಸುತ್ತದೆ.
ಒಂದು ಕಾಲದ ಶಿವಾಪುರ ಎಂಬ ಗ್ರಾಮದ ಬದುಕಿನಲ್ಲಿ ಭೂಮಿ ಜನರ ತಾಯಿಯಾಗಿತ್ತು. ಎಂಥ ಅಪಾಯದ ಸ್ಥಿತಿಯಲ್ಲೂ ಕಾಪಾಡುವ ಜೀವನ ಮೌಲ್ಯಗಳಿದ್ದವು. ಅವನ್ನು ಉಳಿಸಿಕೊಳ್ಳಬಲ್ಲ ಜನರಿದ್ದರು. ಇಂತಹ ಶಿವಾಪುರದ ಬದುಕಿನಲ್ಲಿ ಯಾಕೆ ಹೀಗಾಯಿತು ಎನ್ನುವುದರ ಹುಡುಕಾಟವೇ ಈ ಕಾದಂಬರಿಯ ವಸ್ತು.
ಶಿವಪುರದ ಕೇಂದ್ರ ವ್ಯಕ್ತಿ ಬರಮೇಗೌಡ. ಈತನದು ಗೌಡಾಳಿಕೆಯ ಮನೆತನ. ಯಾವುದೇ ಸಂದರ್ಭದಲ್ಲೂ ಜನರು ಆತನನ್ನು ಬಿಟ್ಟು ಯೋಚಿಸಿದವರಲ್ಲ. ಆದರೆ ಹೆಂಗಸರ ವಿಚಾರದಲ್ಲಿ ಬಹಳ ಕೆಟ್ಟವನಾಗಿದ್ದ. ಜೋಗತಿ ತುಂಗವ್ವನನ್ನು ಮದುವೆಯಾಗಿದ್ದ. ಶಿವಾಪುರದಲ್ಲಿ ಇಂಗ್ಲೀಷ್ ಶಾಲೆ, ಆಸ್ಪತ್ರೆಗಳನ್ನು ಆರಂಭಿಸಬೇಕೆಂದು ಬರಮೇಗೌಡ ಸರಕಾರಕ್ಕೆ ಅರ್ಜಿ ಸಲ್ಲಿಸುತ್ತಾನೆ. ಅವನ ಕೋರಿಕೆ ಮನ್ನಿಸಿ ಡಿಸಿ ಅಮೆರಿಕದ ಚಾರಿಟಿ ಸಂಸ್ಥೆಯಿಂದ ನೆರವು ಕೊಡಿಸುವುದಾಗಿ ಹೇಳುತ್ತಾರೆ. ಸ್ಥಳ ಪರಿಶೀಲಿಸಿ ಮಲ್ಲಿಮಡು ಎಂಬಲ್ಲಿ ಶಾಲೆ ಆರಂಭಿಸಲು ನಿರ್ಧರಿಸುತ್ತಾರೆ.
ಅಮೆರಿಕದ ಜಾಕ್ಸನ್ ಕಂಪನಿಯ ಜೊತೆ ಈ ಬಗ್ಗೆ ಒಪ್ಪಂದವಾಗುತ್ತದೆ. ಬರಮೇಗೌಡನ ಊರನ್ನು ಉದ್ಧಾರ ಮಾಡುವ ಯೋಜನೆಯು ಊರನ್ನು ಸ್ಮಶಾನ ಮಾಡುವ ಯೋಜನೆಯಾಗಿ ಮತ್ತು ಕಳೆದುಕೊಂಡ ಬೆಳೆಗಳು, ರುಚಿ ಕಳೆದುಕೊಂಡ ಹಣ್ಣುಗಳು, ವಿಕಾರ ರೂಪದ ಶಿಶು, ಕರುಗಳ ಜನನ ಇವೆಲ್ಲ ಎದುರಾಗುತ್ತವೆ. ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಹಳ್ಳಿಗಳ ವಿನಾಶದ ಕಥೆಯನ್ನು ಮನೋಜ್ಞವಾಗಿ ಲೇಖಕರು ಇಲ್ಲಿ ತೆರೆದಿಟ್ಟಿದ್ದಾರೆ. ಇದು ಸಮಕಾಲೀನ ಬದುಕಿನ ತಲ್ಲಣ, ದೇಸಿ ಅಂತ:ಸತ್ವ ದುಡ್ಡಿನ ಬೆಳೆಯ ಬೆನ್ನು ಹತ್ತಿ ರೈತರು ತಮಗೆ ಅಗತ್ಯವಿದ್ದ ಬೆಳೆಗಳನ್ನು ನಿರ್ಲಕ್ಷಿಸಿದ್ದಕ್ಕೆ ಸಾಕ್ಷಿಯಾಗುತ್ತದೆ. ತಾವು ಬೆಳೆದ ಬೆಳೆ, ಧಾನ್ಯ ತರಕಾರಿಯಲ್ಲಿ ರಸಗೊಬ್ಬರದ ವಾಸನೆ ಇದೆ ಎಂದು ಅವರೇ ತಿನ್ನುತ್ತಿರಲಿಲ್ಲ. ಚೆನ್ನಾಗಿಲ್ಲವೆಂದು ತಾವು ನಂಬಿದ್ದನ್ನು ಬೇರೆಯವರಿಗೆ ಮಾರಬಾರ ದೆಂಬ ವಿವೇಕವು ಅವರಲ್ಲಿತ್ತು.
ಊರಿಗೆ ಇಂತಹ ಸ್ಥಿತಿ ಬಂತಲ್ಲ ಎನ್ನುವುದು ತುಂಗವ್ವಳ ಬೇಸರವಾಗಿತ್ತು. ರೈತರ ದುಡಿಮೆಯ ಶ್ರಮಕ್ಕೆ ಬೆಲೆ ಕಟ್ಟುವವರು ಹೊರಗಿನವರು. ಶಿಕ್ಷಣ ಪಡೆದ ವಿದ್ಯಾವಂತರ ದುಡಿಮೆಯನ್ನು ಮಾನದಂಡವಾಗಿಟ್ಟುಕೊಂಡು ಇಂದು ಶ್ರಮದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ವಿದ್ಯಾವಂತರ ಒಂದು ದಿನದ ದುಡಿಮೆಯ ಬೆಲೆ ರೈತರ ಒಂದು ತಿಂಗಳ ದುಡಿಮೆಗೂ ಕೆಲವೊಮ್ಮೆ ಸಮಾನವಾಗದು. ರೈತರ ಆತ್ಮಹತ್ಯೆಗೆ ಮೂಲ ಕಾರಣ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವುದು. ಶಿವಾಪುರದ ಇಂತಹ ಸ್ಥಿತಿಗೆ ಕಾರಣವಾಗಿರುವ ಸಂಗತಿಗಳನ್ನು ಕಾದಂಬರಿಯಲ್ಲಿ ಸುಂದರವಾಗಿ ನೇಯ್ದಿದ್ದಾರೆ.
ಈ ಊರಿಗೆ ಹೊರಗಿನಿಂದ ಬಂದ ಕುಂಟಿರಪ ತಾನು ವೈದ್ಯನೆಂದು ಹೇಳಿಕೊಳ್ಳುತ್ತಿದ. ಇವನು ವೀರ್ಯ ವೃದ್ಧಿಯ ಲೇಹ್ಯ ಮಾರಿ ಬದುಕು ಸಾಗಿಸುತ್ತಿದ್ದ. ವೈದ್ಯರ ಹೆಸರಿನಲ್ಲಿ ಜನರ ದೌರ್ಬಲ್ಯ ಬಳಸಿಕೊಂಡು ಈತ ವ್ಯಾಪಾರ ಮಾಡುತ್ತಿದ್ದನು. ವಿಲಾಸೀ ಪ್ರವೃತ್ತಿಯ ಬರಮೇಗೌಡನನ್ನೂ ವಶಪಡಿಕೊಳ್ಳುತ್ತಾನೆ. ಶಿವಾಪುರದ ಗಾಳಿಯಲ್ಲಿ ವಿಷ ಬೆರೆಸುತ್ತಾನೆ. ತಾರಾ, ಬಿಗ್‌ಬಾಸ್, ಜಾಕ್ಸನ್ ಮೊದಲಾದ ವಿದೇಶಿ ಕಂಪನಿ ಶಿವಾಪುರಕ್ಕೆ ಪ್ರವೇಶಿಸುವುದು ಈತನ ಮೂಲಕವೇ. ಅಭಿವೃದ್ಧಿ ಹೆಸರಿನಲ್ಲಿ ಅಲ್ಲಿಯ ಜನರ ಬದುಕನ್ನು ನಾಶ ಮಾಡುತ್ತಾನೆ. ಕುಂಟಿರಪ ಹೆಂಡತಿಯನ್ನೇ ಸೂಳೆಯನ್ನಾಗಿಸ ಹೊರಟ ವ್ಯಕ್ತಿ. ರಸಿಕತನ ಲಂಪಟತನವಾಗಿ ರೂಪಾಂತರವಾಗಿ ಬಿಡುತ್ತದೆ. ರಾಜಕೀಯ ಪ್ರವೇಶವಾಗಿ ಊರು ರಣರಂಗವಾಗುತ್ತದೆ. ಅತ್ಯಾಚಾರ, ಕೊಲೆ ಸಂಚು ನಡೆಯುತ್ತದೆ. ಹೊರಗಿನ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಭಿವೃದ್ಧಿ ಹೆಸರಿನಲ್ಲಿ ಶಿವಾಪುರದ ಆತ್ಮವನ್ನು ನಾಶ ಮಾಡಿಬಿಡುತ್ತವೆ.
ತುಂಗವ್ವಳಿಗೆ ಚಂಬಸವ ಎನ್ನುವ ಮಗ ಹುಟ್ಟುತ್ತಾನೆ. ಗೌಡಾಳಿಕೆಯ ಮನೆತನದವರನಾದರೂ, ಬಿಎ ಕಲಿತಿದ್ದ ಈತ ಪರಕೀಯತೆಯ ಎಚ್ಚರದಿಂದ ಪಾರಾಗಿ ರೈತಾಪಿ ಜನರ ಜೊತೆ ಬದುಕಲು ಬಯಸುತ್ತಾನೆ. ಇದಕ್ಕಾಗಿ ಊರ ಹೊರಗೆ ಗುಹೆಯೊಂದರಲ್ಲಿದ್ದ ನಮಶ್ಶಿವಾಯ ಎನ್ನುವ ಸ್ವಾಮಿಯ ಆಶೀರ್ವಾದ ಪಡೆಯುತ್ತಾನೆ. ಕುಂಟಿರಪ ಮತ್ತು ಬರಮೆಗೌಡನನ್ನು ಮುಂದಿಟ್ಟುಕೊಂಡು ಎಲ್ಲಾ ಜೀವವಿರೋಧಿ ಚಟುವಟಿಕೆಗಳನ್ನು ವಿರೋಧಿಸುತ್ತಾನೆ. ಈತ ದುಷ್ಟ ಶಕ್ತಿಗಳನ್ನು ಕೊಲ್ಲುವ ಚಿತ್ರ ಕಾದಂಬರಿಯಲ್ಲಿ ಅತ್ಯಂತ ಧ್ವ್ವನಿಪೂರ್ಣವಾಗಿ ಮೂಡಿಬಂದಿದೆ. ಅವನು ಕೇಡನ್ನು ಕೊಲ್ಲಬಯಸುತ್ತಾನೆ. ಇಲ್ಲಿ ಆತ ಕೊಲ್ಲುವುದು ತನ್ನೊಳಗಿನ ಮೃಗೀಯ ಶಕ್ತಿಯನ್ನು, ಸೇಡನ್ನು. ಸೇಡಿನಿಂದ ಹೊಸ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ. ಅದೇನಿದ್ದರೂ ಪ್ರೀತಿಯಿಂದ ಮಾತ್ರ ಸಾಧ್ಯ ಎನ್ನುವುದನ್ನು ಇಲ್ಲಿ ಚಿತ್ರಿಸಲಾಗಿದೆ.
ಕಾದಂಬರಿ ಹೀಗೆ ಹೊರಗಿನ ಸೇಡು ಮತ್ತು ಒಳಗಿನ ಸೇಡು ಎರಡನ್ನೂ ಏಕಕಾಲಕ್ಕೆ ಎದುರಿಸಿ ಹೊಸ ಸಮಾಜದ ಕಡೆಗೆ ತುಳಿಯುತ್ತದೆ. ಹೊಸ ಸಮಾಜದ ಪರಿಕಲ್ಪನೆಯನ್ನು ಕಟ್ಟಿಕೊಡುತ್ತದೆ. ಹೊಸ ಕನಸಿನ ಸಮಾಜವನ್ನು ಕಟ್ಟಿಕೊಡುತ್ತದೆ. ಒಬ್ಬರನ್ನೊಬ್ಬರು ಹಿಂದಿಕ್ಕಿ ಮುನ್ನುಗುವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೀಗೆ ಎಲ್ಲರೂ ಒಟ್ಟಿಗೆ ಬೆಳೆಯುವ ಪರಿಕಲ್ಪನೆ ಸೊಗಸಾಗಿದೆ. ಹೊಸ ಶಿವಾಪುರವನ್ನು ನಾವು ಕಟ್ಟಬೇಕಿದೆ ಎನ್ನುವುದೇ ಶಿವನ ಡಂಗುರವಾಗುತ್ತದೆ. ಕನಸ ಬೆನ್ನ ಹತ್ತಿ ಹೊರಟಿರುವ ಆಧುನಿಕ ಸಮಾಜಕ್ಕೆ ಪರ್ಯಾಯವೆಂಬಂತೆ ಕಂಬಾರರು ಹೊಸ ಶಿವಾಪುರದ ಪರಿಕಲ್ಪನೆಯನ್ನು ಇಲ್ಲಿ ನೀಡುತ್ತಾರೆ.
ಹಳ್ಳಿಗಳು ಸ್ಮಾರ್ಟ್‌ಸಿಟಿಗಳಾಗಿ ಕನಸಿನ ಬೆನ್ನು ಹತ್ತಿ ಹೋಗಬೇಕೇ ಎನ್ನುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ಪೊರೆಯುವ ಮಾತೃಸಂಸ್ಕೃತಿಯ, ನಿರ್ವ್ಯಾಜ ಪ್ರೀತಿಯ ಸ್ವಾಮೀಜಿ ನಮಶ್ಶಿವಾಯನ ನೆರವಿನಿಂದ ಲೋಕೋತ್ತರ ಕರುಣೆ ಪಡೆದ, ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಎಲ್ಲ ಮಕ್ಕಳ ತಾಯಿಯಾಗಿ ಅನಾಥಾಶ್ರಮ ನಡೆಸುವ ಮಾಣಿಕ್ಯಮ್ಮ ಎನ್ನುವವರ ಆಸರೆಯಲ್ಲಿ ಬೆಳೆದ ಹೃದಯವಂತಿಕೆಯ ಶಾರವ್ವ ಎನ್ನುವವರನ್ನು ಚಂಬಸವ ಮದುವೆಯಾಗುತ್ತಾನೆ ಇವರಿಗೆ ಮಾದೇವಿ ಎನ್ನುವ ಮಗಳು ಜನಿಸುತ್ತಾಳೆ.
ನಮಃಶ್ಶಿವಾಯನು ಚಂಬಸನಿಗೆ ‘ ನಿನಗಾಗದಂತಹ ಶಿವನ ಡಂಗುರದ ನುಡಿ ಯಾರಿಗೂ ಆಗಿಲ್ಲ ಬಿಡು’ ಎನ್ನುತ್ತಾನೆ.
ನಿನ್ನ ಭಾಗ್ಯದ ಮಗಳು
ಬಾಗಿಲಲಿ ನಿಂತಾಳು
ನಿಂತಲ್ಲಿ ಹೊಸ ಶಿವಾಪುರ ರಚಿಸು
ಶಿವನ ಡಂಗುರದ ಈ ನುಡಿಯ ಕೇಳಿದ ನಂತರ ಗ್ರಾಮದ ಎಲ್ಲರ ಮುಖಗಳು ಸಂತೋಷದಿಂದ ಅರಳುತ್ತವೆ. ಪ್ರಕಾಶಮಾನವೂ ಕೋಮಲವೂ ಆದ ಮಂದಹಾಸ ಅವರ ಮುಖಗಳಲ್ಲಿ ಬೆಳಗುತ್ತದೆ.
ಅಕ್ಕಮಹಾದೇವಿಯಂತಹ ಮಗಳು ನಿನ್ನ ಮನೆಗೆ ಬಂದಿದ್ದಾಳೆ. ಆಕೆಗೊಪ್ಪುವಂಥ, ಕೊಲೆ, ಸುಲಿಗೆ, ಭ್ರಷ್ಟಾಚಾರ ಇಲ್ಲದ ಶಿವಾಪುರ ಕಟ್ಟಿ. ಆಕೆ ಬದುಕಿ ನಿಮ್ಮನ್ನೂ ಬದುಕಿಸುತ್ತಾಳೆ. ಎಲ್ಲಾದರೂ ಎಡವಟ್ಟಾದರೆ ನನ್ನ ಹೆಸರು ತಗೊಳ್ರಿ. ಅಲ್ಲಿ ನನ್ನ ಸನ್ನಿಧಿ ಇರುತ್ತೈತಿ’ ಎಂಬ ಶಿವನ ಡಂಗುರದ ನುಡಿ ಕೇಳಿಬರುತ್ತದೆ. ಮಾದೇವಿ ಶಿವಾಪುರದ ಹಣ್ಣುಗಳಿಗೆ ಮತ್ತೆ ರುಚಿಯನ್ನು ತಂದುಕೊಟ್ಟು, ಬಂಜರು ನೆಲವನ್ನು, ಬದುಕನ್ನು ಸಮೃದ್ಧಗೊಳಿಸುತ್ತಾಳೆ.
ಮಾದೇವಿಗೆ ಹೊಸ ಶಿವಾಪುರ ಕಟ್ಟಬೇಕು ಎನ್ನುವುದು ಶಿವನ ಡಂಗುರವಾಗಿ ಕಾದಂಬರಿ ಅಂತ್ಯದಲ್ಲಿ ಸಾರುತ್ತಾಳೆ
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೨. ೭. ೨೦೨೬
.....................

Comments
Post a Comment