ಜನಸಾಮಾನ್ಯರ ಕಥೆಯ


‘ಬೆಸ್ತರ ಕರಿಯ ’ 



‘ಬೆಸ್ತರ ಕರಿಯ’ ಪ್ರಸ್ತುತ ಕೃತಿ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಅವರ ಕಥಾ ಸಂಕಲನ. ಇದರಲ್ಲಿ  ಸಾಮಾನ್ಯ ಜನರನ್ನು ತಮ್ಮ ಕಥೆಯ ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಅವರಲ್ಲಿಯೂ ಉತ್ತಮ ಗುಣವಿರುವುದನ್ನು ಎತ್ತಿ ತೋರಿಸಿದ್ದಾರೆ. ಅಧಿಕಾರಿಗಳ ಕೆಟ್ಟ ಬುದ್ಧಿ, ಜನರನ್ನು ಸುಲಿಯುವುದು, ಕೂಲಿಕಾರ್ಮಿಕರ ಪರದಾಟ, ಅಧಿಕಾರಿಗಳಿಂದ ಅವರಿಗೆ ಕಿರುಕುಳ, ಊರಿನ ಯಜಮಾನ ಕಾಳಸಂತೆಯಲ್ಲ್ಲಿ ಹಣ ಮಾಡುವುದು, ಲೇವಾದೇವಿ ಮೂಲಕ ಗ್ರಾಮಸ್ಥರನ್ನು ದೋಚುವುದು, ಅಧಿಕಾರಿಗಳನ್ನು ಓಲೈಸಿಕೊಳ್ಳುವುದು, ಹಳ್ಳಿಯ ಮುಗ್ಧರಿಗೆ ಅನ್ಯಾಯ, ಮೋಸ ಮಾಡುವುದು, ಜಪ, ತಪ, ಮಡಿ, ಮೈಲಿಗೆ  ಎನ್ನುತ್ತಾ ಅಸ್ಪೃಶ್ಯತೆ ಆಚರಿಸುತ್ತಿರುವುದು ಮುಂತಾದವು ಇಲ್ಲಿನ ಕಥೆಗಲ್ಲಿ ಕಂಡುಬರುತ್ತದೆ.

ತುಂಬಾ ಸರಳ ಶೈಲಿಯ ಬರೆಹದಲ್ಲಿ ನಮ್ಮ ಸುತ್ತಮುತ್ತಲೇ ನಡೆಯುವ ಘಟನೆಗಳನ್ನು ತೆಳು ಹಾಸ್ಯದ ಮೂಲಕ ಚಿತ್ರಿಸಿದ್ದಾರೆ. ತಮ್ಮ ಗ್ರಾಮದ ಸುತ್ತಮುತ್ತಲು ನಡೆದ ಘಟನೆಗಳಿಗೂ ಇಲ್ಲಿ ಸ್ಥಾನ ಕಲ್ಪಿಸಿದ್ದಾರೆ. ಅತಿ ಸುಲಭದಲ್ಲಿ ಓದುಗರನ್ನು ಆಕರ್ಷಿಸುವ, ಓದಿಸಿಕೊಂಡು ಹೋಗುವ ಗುಣ ಈ ಕಥಾ ಸಂಕಲನದಲ್ಲಿದೆ. ಒಟ್ಟೂ ೧ ಕಥೆಗಳು ಇದರಲ್ಲಿವೆ.

        ಕಥೆಗಳ ಕುರಿತು: 

 ಬೆಸ್ತರ ಕರಿಯ  

ಇದರಲ್ಲಿ ಕರಿಯ ಎನ್ನುವ ಕೂಲಿಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಬೆಸ್ತರ ಕರಿಯನನ್ನು ನಿಜಕ್ಕೂ ಯೋಗಿಯೆಂದು ಲೇಖಕರು ಕರೆಯುತ್ತಾರೆ. ಏಕೆಂದರೆ ಅವನಿಗೆ ಬಾಲ್ಯವಿಲ್ಲ, ಮುಪ್ಪಿಲ, ಶತ್ರು ಇಲ್ಲ, ಇಬ್ಬರು ಹೆಂಡತಿ ಸತ್ತರೂ ದುಃಖವಿಲ್ಲ, ಮೂರನೆಯ ಮದುವೆಯನ್ನು ಆಗಿದ್ದಾನೆ. ಒದೆತ- ಹೊಡೆತ ಎಲ್ಲವನ್ನೂ ಸಹಿಸಿಕೊಂಡು, ಯಾರ ಮೇಲೂ ಅಸಮಾಧಾನ, ಅಸೂಯೆ ಪಡದೆ ಶಾಂತಯುತವಾಗಿ ಬದುಕುತ್ತಿದ್ದಾನೆ. ನಿರುಪದ್ರವಿ ಜೀವಿಯ ಸುಂದರ ಚಿತ್ರಣ ಇದರಲ್ಲಿದೆ.  

ತಿಗಣೆ 

 ತಿಗಣೆ ಸರ್ವಜನ ಮಿತ್ರ.  ಛತ್ರ, ಜೈಲು, ರೈಲು, ಬಸ್ ನಿಲ್ದಾಣ, ನಾಟಕ ಮಂದಿರ, ಹೋಟೆಲ್‌ನವರು ತಿಗಣೆ ಇಲ್ಲದೆ ಬದುಕಲಾರರು. ತಮ್ಮ ಜಯಕ್ಕೆ ತಿಗಣೆಯ ಕಾರಣ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಎಲ್ಲಿ ಜನರಿಗೆ ಕಷ್ಟವಾಗುತ್ತದೆಯೋ ಅಲ್ಲೆಲ್ಲ ಮುಖದೋರಿ ಸ್ವಾಭಾವಿಕವಾಗಿ ಶಾಂತಿ ಸ್ಥಾಪಿಸುತ್ತದೆ ಸಭೆಯಲ್ಲಿ ಅಧ್ಯಕ್ಷರಿಗೆ ಕಚ್ಚುವ ಮೂಲಕ ಸಮಯವನ್ನು ಜ್ಞಾಪಿಸುತ್ತದೆ ಎನ್ನುವ ಮೂಲಕ ಲಘು ಹಾಸ್ಯದಿಂದ ಈ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. 

 ಶಾನುಭಾಗನ ಸಾವು

 ಇದರಲ್ಲಿ ೭೫ ವರ್ಷದ ಶಿಡಿಯಪ್ಪ ಶಾನುಭಾಗ ಹುದ್ದೆಯಲ್ಲಿ ಹಲವು ವರ್ಷ ಕೆಲಸ ಮಾಡಿ, ನಂತರ ಹೊಸ ರೀತಿಯ ಅರ್ಜಿ, ಪದ್ಧತಿಗಳು ಜಾರಿಯಾದಾಗ ಅದಕ್ಕೆ ಹೊಂದಿಕೊಳ್ಳಲಾಗದಾದಾಗ ಅಮಲ್ದಾರರು ‘ನೀನು ನಾಲಾಯಕ್, ಲೆಕ್ಕ ಸರಿ ಇಲ್ಲ’ ಎಂದು ಬಯ್ಯುತ್ತಾರೆ. ಇದರಿಂದ ನೊಂದು ರಜೆ ಹಾಕಿ ಹೋಗಿ, ಮನೆಯಲ್ಲಿ ರೂಮಿನ ಚಿಲಕ ಹಾಕಿಕೊಂಡು ಮಂತ್ರ ಹೇಳುತ್ತ  ಅರ್ಜಿಗಳನ್ನೆಲ್ಲ ಅಗ್ನಿಕುಂಡದಲ್ಲಿ ಸುಟ್ಟುಹಾಕುತ್ತಾನೆ. ಬಳಿಕ ಹುಚ್ಚನಂತಾಗುತ್ತಾನೆ. ಮುಂದೆ ಅದಿಕಾರಿಗಳು ಏನು ಮಾಡಿದರು, ಈತನ ಕೆಲಸ ಏನಾಯಿತು, ಹುಚ್ಚು ಬಿಟ್ಟಿತೇ ಎನ್ನುವ ವಿವರ ಈ ಕಥೆಯಲ್ಲಿದೆ.

ಆಗಸ್ಟ್ ೪೨ರ ಒಂದು ಅನುಭವ

 ೧೯೪೨ ರ ಆಗಸ್ಟ್‌ನಲ್ಲಿ ಭಾರತ ತಾನು ಸ್ವಾತಂತ್ರ್ಯವೆಂದು ಸಾರಿತು. ಆದರೆ ಭಾರತೀಯರು ಒಬ್ಬರಿಗೊಬ್ಬರು ಸುಲಭವಾಗಿ ಸೇರಲು ಅವಕಾಶವಿರಲಿಲ್ಲ. ಒಂದೊಂದು ವೇಷವನ್ನು ಹಾಕಿಕೊಂಡು ಬೇರೆಯವರನ್ನು ಕಾಣಬೇಕಿತ್ತು. ಮನೆಯ ಸುತ್ತಮುತ್ತ, ಬೀದಿ, ಮಾರ್ಕೆಟ್, ಕಚೇರಿ, ದೇವಸ್ಥಾನವನ್ನು  ಗುಪ್ತವಾಗಿ ಪೊಲೀಸರು ಕಾಯುತ್ತಿದ್ದರು.. ಆದರೂ ಲೇಖಕರು ಹೊರಹೋಗಿ ಬೇರೆಯವರನ್ನು ಭೇಟಿ ಮಾಡಿದ್ದು, ಪಕ್ಕದ ಹಳ್ಳಿಗೆ ಹೋದಗ ಆ ಊರಿನ ಮಿಲಿಟರಿ ಠಾಣೆಯನ್ನು ಬೆಂಕಿ ಹಚ್ಚಿ ನಾಶಪಡಿಸಿದವರನ್ನು ಹಿಡಿಯಲು ಮಿಲಿಟರಿಯವರು ಬಂದಿದ್ದು, ಇವರನ್ನೂ ಬಂಧಿಸಿದ್ದು, ರೈಲಿನಲ್ಲಿ ಜೈಲಿಗೆ ಕರೆದೊಯ್ಯುವಾಗ  ಏನು ನಡೆಯಿತು? ಪೊಲೀಸರು ಅತಂತ್ರರಾದುದೇಕೆ?  ಹೀಗೆ ಆ ಕಾಲದ ಮಿಲಿಟರಿ ಆಡಳಿತದ ಕಥೆಯನ್ನು ವಿವರಿಸಿದ್ದಾರೆ.

ನಾಯ ಬಾಲ

 ಊರಿನಲ್ಲಿದ್ದ ಹರಿಜನ ವ್ಯಕ್ತಿ ರಂಗ. ಸಣಕಲು ದೇಹದ ಆತನಿಗೆ ಶಕ್ತಿ ಇಲ್ಲ, ತಲೆ ಆ ಕಡೆ ಈ ಕಡೆ ತೂರಾಡುತ್ತಿತ್ತು, ಹಾಗಾಗಿ ಆತನಿಗೆ ತೂರನೆಂದು ಹೆಸರು ಬಂದಿತ್ತು. ಸುಮಾರು ೨೦ನೇ ವಯಸ್ಸಿನವರೆಗೂ ಆತ ಬೆಳೆಯಲೇ ಇಲ್ಲ. ಜನರ ಹೊಗಳಿಕೆ- ತೆಗಳಿಕೆಗೆ ಕಿವಿ ಕೊಡುತ್ತಿರಲಿಲ್ಲ. ಊರಿನ ದನ ಕಾಯುವ ಕೆಲಸ ಈತನದ್ದು. ಒಮ್ಮೆ ಈತನಿಗೆ ಪ್ಲೇಗ್ ಜ್ವರ ತಗುಲಿತ್ತು. ದನ ಕಾಯಲು ಬಂದಿಲ್ಲ ಎಂದು ಬಾಯಿ ತುಂಬಾ ಬಯ್ಯುತ್ತಾರೆ. ದನ ಕಾಯಲು ಬಂದಾಗಲೂ ಜನ ಬಯ್ಯುತ್ತಿದ್ದರು. ಜಾತಿಯ ಹೆಸರಿಡಿದು ಕೆಲವು ಜನರು ಬಯ್ಯುತ್ತಾರೆ. ದಲಿತನನ್ನು ಹೇಗೆ ಹಳ್ಳಿಗಳಲ್ಲಿ ಶೋಷಿಸುತ್ತಾರೆ ಎನ್ನುವುದನ್ನು ವಿವರಿಸುತ್ತಾ ‘ನಾಯ ಬಾಲ ಡೊಂಕು, ಈ ಜನ ಎಂದೂ ಸರಿದಾರಿಗೆ ಬರುವುದಿಲ್ಲ’ ಎಂದು ಲೇಖಕರು ಹೇಳುತ್ತಾರೆ.

ಸೇತುವೆ 

ಈ ಕಥೆಯಲ್ಲಿ ಸೌಲಭ್ಯ ಬಂದಂತೆ ಸಂಬಂಧ ಮರೆಯಾಗುತ್ತಿದೆ ಎನ್ನುವ ಸಾರಾಂಶವಿದೆ. ಊರ ಮುಂದೆ  ಹೇಮಾವತಿ ನದಿ ಹರಿಯುತ್ತಿದೆ. ಈಜಾಡುವುದು, ದೋಣಿಯಲ್ಲಿ ಆ ಕಡೆ ಈ ಕಡೆ ತಿರುಗಾಡಿ ಶಾಲೆಗೆ ಚಕ್ಕರ್ ಹೊಡೆದು ನೀರಿನಲ್ಲಿ ಆಡಿದ ನೆನಪನ್ನೆಲ್ಲಾ ವಿವರಿಸುತ್ತಾ, ‘ಎಲ್ಲವೂ ಈಗ ನನಸಾಗಿ ಉಳಿದಿದೆ. ಏಕೆಂದರೆ ಸೇತುವೆ ಬಂದಿದೆ. ನದಿ ನಮ್ಮಿಂದ ದೂರವಾಗುತ್ತಿದೆ ಎನ್ನುತ್ತಾರೆ. ದೋಣಿ ನಡೆಸಲು ಜನರೇ ಬಾರದ ಕಾರಣ ಬೆಸ್ತರು ಮೀನು ಹಿಡಿಯುವ ವೃತ್ತಿ ಆರಂಭಿಸಿದ್ದಾರೆ. ಸೇತುವೆಯಿಂದ ನದಿ ದಾಟುವುದೇನು ಸುಲಭವಾಗಿದೆ. ಆದರೆ  ನಮಗೂ ನದಿಗೂ ನಡುವೆ ಸೇತುವೆ ಎದ್ದಿದೆ’ ಎಂದು ಹೇಳುತ್ತಾರೆ.

ಪರ್ಮಿಟ್ ಪಿಶಾಚಿ

 ಹಿಂದಿನ ಕಾಲದಲ್ಲಿ ಹಳ್ಳಿಯಿಂದ ಅಕ್ಕಿ, ಭತ್ತ  ಸಾಗಿಸಲು ಪರ್ಮಿಟ್ ಪಡೆಯಬೇಕಿತ್ತು. ಅದನ್ನು ಪಡೆಯಲು ಹೋದರೆ ಅಧಿಕಾರಿಗಳು ಪಿಶಾಚಿ ತರ ಕಾಡುತ್ತಿದ್ದರು. ರೈತರು ಪಡುವ ಪಾಡು, ಕೊಡುವ ಲಂಚ, ಅಧಿಕಾರಿಗಳ ಬಳಿ ಹೋಗುವುದು, ಅವರು ಸತಾಯಿಸುವುದು, ಒಬ್ಬರ ಬಳಿ ಹೋದರೆ ಇನ್ನೊಬ್ಬರ ಬಳಿ ಕಳಿಸುವುದು.. ಹೀಗೆ ದಿನವಿಡೀ ಕಾಯಿಸುತ್ತಿದ್ದ ಅನುಭವವನ್ನು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ.  

ನಮ್ಮ ಎಮ್ಮೆಗೆ ಮಾತು ತಿಳಿಯುವುದೇ? 

ಎಮ್ಮೆಯನ್ನು ಪ್ರಕೃತಿಯಂತೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಅನುಸರಿಸಬೇಕು. ನಾವು ಹೇಳುವುದನ್ನು ಅದು ಕೇಳಿಸಿಕೊಳ್ಳುತ್ತದೆ ಎನ್ನುವ ಸಾರಾಂಶವಿದೆ. ನಿಂತುಕೊಂಡು ಕರು  ಹಾಕುವುದನ್ನು ತಪ್ಪಿಸಲು ಗೋಣಿಚೀಲ ಹಿಡಿದು ನಿಲ್ಲಬೇಕೆಂದು ಮನೆಯಾಳು ಮತ್ತು ಲೇಖಕರು ಆಡಿದ ಮಾತನ್ನು ಕೇಳಿಸಿಕೊಂಡು ನಾವು ಗೋಣಿಹಿಡಿದು ನಿಂತಾಗ ಕರು ಹಾಕದೆ ಲೇಖಕರು ಹೊರಹೋದ ವೇಳೆ ಕರು ಹಾಕುವುದು, ಹೆಂಡತಿ ಇಲ್ಲದಾಗ ಹಾಲು ಕರೆಯಲು ಹೋದಾಗ ಒದ್ದಿದ್ದು, ಕಾಲುಬಾಯಿ ಜ್ವರ ಬಂದಾಗ ಔಷಧವನ್ನು ಅಂಬಲಿ ಜೊತೆ ಕೊಡೋಣ ಎಂದು ಆಳು ಹೇಳಿದ್ದನ್ನು ಕೇಳಿಸಿಕೊಂಡು ಅಂಬಲಿ ಸೇವಿಸುವುದನ್ನೇ ಬಿಟ್ಟಿದ್ದು ಮೊದಲಾದ ರೋಚಕ ಘಟನೆಗಳನ್ನು ವಿವರಿಸುತ್ತಾ  ಎಮ್ಮೆಗಳಿಗೆ ಮಾತು ತಿಳಿಯುತ್ತದೆ ಎನ್ನುವುದನ್ನು ತೋರಿಸುತ್ತಾರೆ. 

ಯುದ್ಧದಿಂದ ಹಿಂದಿರುಗಿದವರು

  ಬೆಂಗಳೂರಿನ ಮಾರುಕಟ್ಟೆಯಲ್ಲಿ ‘ಸೈನ್ಯಕ್ಕೆ ಜನ ಬೇಕು’ ಎಂದು ಮೈಕ್‌ನಲ್ಲಿ  ಪ್ರಚಾರ ಮಾಡುತ್ತಿದ್ದರು ಯುವಕರಲ್ಲಿ ಈ ಮೂಲಕ ಉತ್ಸಾಹ ಬಿತ್ತುತ್ತಾ ಸೈನ್ಯದಿಂದ ಮರಳಿದ ನಂತರ ಗದ್ದೆ, ಜಮೀನು ತೋಟವನ್ನು ಕೊಡುತ್ತಾರೆ ಎಂದು ನಂಬಿಸುತ್ತಿದ್ದರು. ಹೀಗೆ ಇದನ್ನು ನಂಬಿ ಯುದ್ಧಕ್ಕೆ ಹೋದವರ ಕಥೆ ಇದರಲ್ಲಿದೆ. ಸೈನ್ಯಕ್ಕೆ  ಹೋದವರಿಗೆ ಅಲ್ಲಿ ಕೆಲಸ ಬೂಟ್ ಪಾಲಿಶ್, ಜಾಡ ಮಾಲಿ, ಗಾಯಗೊಂಡವರನ್ನು ಸಾಗಿಸುವುದು, ಲೆಕ್ಕಪತ್ರ ಇಡುವುದು ಮುಂತಾದವು ಆಗಿತ್ತು. ಊರಿಗೆ ಬಂದಾಗ ಸಾವಿರಾರು ರೂಪಾಯಿ ಸಂಬಳ ಇದೆ ಜಂಭದಿಂದ ಹೇಳುತ್ತಿದ್ದರು ಆದರೆ ಅಲ್ಲಿ ಸಿಗುತ್ತಿದ್ದುದು ೨೫ರಿಂದ ೩೦ ರೂಪಾಯಿ ಮಾತ್ರ.  ಇದು ಯುದ್ಧಕ್ಕೆ ಹೋದವರ ಸ್ಥಿತಿ ಎಂದು ಲೇಖಕರು ವಿವರಿಸಿದ್ದಾರೆ.

 ರಂಗಮ್ಮನ ಭೂತ 

ಮಲ್ಲಿಗೆಹಳ್ಳಿಯಲ್ಲಿ ಬರಗಾಲ ಬಂದಿದ್ದರಿಂದ ಸರ್ಕಾರ ಗ್ರಾಮಸ್ಥರಿಂದ ಅಧಿಕಾರಿಗಳ ಮೂಲಕ  ಆಹಾರ ವಸೂಲಿ ಮಾಡಿಸುತ್ತಿತು. ಅಧಿಕಾರಿಗಳು ಮನೆ ಮನೆಗೆ ನುಗ್ಗಿ ವಸೂಲು ಮಾಡುತ್ತಿದ್ದರು. ಬಡಪಾಯಿ ಕೂಲಿ ರಂಗಮ್ಮಳ ಮನೆಯಿಂದಲೂ ಅಕ್ಕಿಯನ್ನು ಅಧಿಕಾರಿಗಳು ಹೆದರಿಸಿ ಹೋಗಿದ್ದರು. ಆಕೆ  ಡಿಸಿ ಮನೆಗೆ ಬಂದು ತನಗೆ ಊಟವಿಲ್ಲದೆ ಒಂದು ವಾರ ಆಯಿತು ಎನ್ನುತ್ತಾಳೆ. ಕೂತಲ್ಲಿಂದ ಮೇಲೇಳಲಾಗುವುದಿಲ್ಲ. ಎದ್ದರೂ ಮತ್ತೆ ಬೀಳುತ್ತಾಳೆ.  ಹಾಗೆಯೇ ಬಳಲಿ ಅಲ್ಲಿ ಸತ್ತು ಹೋಗುತ್ತಾಳೆ. ಅಲ್ಲಿ ಆಕೆ ಭೂತವಾಗಿ ಜಿಲ್ಲಾಧಿಕಾರಿಯನ್ನು, ಅವರ ಮನೆಗೆ ಬಂದು ಉಳಿಯುವ ಮಿತ್ರರನ್ನು  ರಾತ್ರಿ ಕಾಡುತ್ತಾಳೆ. ಈ ಭೂತ ಮುಂದೆ ಏನಾಯಿತು, ಜಿಲ್ಲಾಧಿಕಾರಿ ಮನೆ ಬಿಟ್ಟು ಏಕೆ ಹೋದರು, ಭೂತಕ್ಕೆ ಹೆದರಿ ಏನೆಲ್ಲ ರಾದ್ಧಾಂತ ಮಾಡಿದರು ಎನ್ನುವುದನ್ನು ಮನಮುಟ್ಟುವಂತೆ ಈ ಕಥೆಯಲ್ಲಿ ಚಿತ್ರಿಸಿದ್ದಾರೆ. 

 ಅನ್ನದಾನಿ

ತನ್ನ ಒಂದು ಪೈಸೆಯನ್ನೂ ಬಿಚ್ಚದೆ, ಬರಗಾಲದಲ್ಲಿ ಬೇರೆಯವರ ಧಾನ್ಯವನ್ನು ಸರಕಾರಕೆ ಕೊಡಿಸಿ ಅಧಿಕಾರಿಗಳಿಗೆ ಊಟ ಹಾಕಿಸಿ ‘ಅನ್ನದಾನಿ’ ಎನಿಸಿಕೊಂಡ ಉಗ್ರಯ್ಯನಿಗೆ ಸನ್ಮಾನ ಸಮಾರಂಭದಲ್ಲಿ ಎರಡು ರೀತಿಯ ಅವಮಾನವಾದ ಕಥೆ ಇದು. 

  ಕೇವಲ ಲೇವಾದೇವಿಯಿಂದ ಹಣ ಸಂಪಾದಿಸಿ, ಮೊದಲ ಪತ್ನಿಯ ಮಗ ನಂಜುಂಡನನ್ನೂ ಮನೆಯಿಂದ ಹೊರಹಾಕಿ, ಆತ ಊರಬೀದಿ ಕಸ ಸ್ವಚ್ಛಗೊಳಿಸುವ ಸಫಾಯಿ ಕರ್ಮಚಾರಿಯಾಗುವಂತೆ ಮಾಡಿದ್ದಲ್ಲದೆ, ಮಗನೇ ಊರಿನ ರಾಮಣ್ಣನಿಗೆ ಸೇರಿದ  ಬಂದಿ (ತೋಳಿಗೆ ಹಾಕುವ ಆಭರಣ)ವನ್ನು  ಕದ್ದಿದ್ದಾನೆಂದು ಕೇಸು ಮಾಡಿಸುತ್ತಾನೆ. ಉಗ್ರಯ್ಯನಿಗೆ ಅಧಿಕಾರಿಗಳಿಂದ ಅನ್ನದಾನಿ ಎಂಬ ಬಿರುದು ದಯಪಾಲಿಸಲು ಸನ್ಮಾನ ಕಾರ್ಯಕ್ರಮ ನಿಗದಿಯಾಗುತ್ತದೆ. ಅದೇ ದಿನ ಮಗನ ಕಳ್ಳತನದ ಕೇಸಿನ ವಿಚಾರಣೆ ನಡೆಯುತ್ತದೆ. ವಿಚಾರಣೆ ನಡೆದಾಗ ತೀರ್ಪು ಏನು ಬಂದಿತು, ಮಗನನ್ನು ಸಿಕ್ಕಿಸಿ ಹಾಕುವಲ್ಲಿ, ಬಂಗಾರವನ್ನು ತನ್ನದಾಗಿಸಿಕೊಳ್ಳುವಲ್ಲಿ  ಹೇಗೆ ವಿಫಲನಾದ, ಊರ ಜನರು ಉಗ್ರಯ್ಯನಿಗೆ ಬೈದಿದ್ದೇಕೆ ಎನ್ನುವುದಕ್ಕೆಲ್ಲ ಉತ್ತರ ಈ ಕಥೆಯಲ್ಲಿದೆ.

........................

ದತ್ತಾತ್ರೇಯ ಹೆಗಡೆ, ಶಿವಮೊಗ್ಗ

 ೪. ೭. ೨೦೨೬

...................


Comments

Popular posts from this blog