ದ್ರೌಪದಿಯ ವ್ಯಕ್ತಿತ್ವದ ಹೊಸ ರೂಪ ಪರಿಚಯಿಸುವ
‘ದ್ರೌಪದೀ ಸಮೀಕ್ಷೆ’
‘ದ್ರೌಪದೀ ಸಮೀಕ್ಷೆ’ ಕೃತಿಯು ದ್ರೌಪದಿಯ ಪಾತ್ರದ ಸಂಕೀರ್ಣ ಪ್ರಪಂಚದ ಕುರಿತಾಗಿದೆ. ಅವಳು ಅತಿ ಸೂಕ್ಷ್ಮ ನೆಲೆಯಲ್ಲಿ ದಮನಕ್ಕೆ ಒಳಗಾದ ರೀತಿ, ಪಂಚಪಾಂಡವರ ಪತ್ನಿಯಾಗಿ ನಲುಗುತ್ತಲೇ ಇದ್ದ ಅವಳ ಭಾವನೆಗಳು, ಬದುಕಿನುದ್ದಕ್ಕೂ ಒಂಟಿಯಾಗಿಯೇ ಉಳಿದ ಅವಳ ರಿಕ್ತತೆಗಳು, ಅವಳ ವ್ಯಕ್ತಿತ್ವದ ಹೊಸ ರೂಪವನ್ನು ಪರಿಚಯಿಸುವಂಥದ್ದು. ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ಮಣಿಮಾಲಿನಿ ವಿ. ಕೆ. ಈ ಕೃತಿಯನ್ನು ರಚಿಸಿದ್ದಾರೆ.
ಪ್ರಸ್ತುತ ಕೃತಿಯು ಒಂದು ಆಸಕ್ತಿಕರ ವಿಷಯವನ್ನು, ಭಾವನಾತ್ಮಕ ನೆಲೆಯಲ್ಲಿ ಕಟ್ಟಿಕೊಡುತ್ತದೆ. ದ್ರೌಪದಿಯ ಬಗ್ಗೆ ಹಲವು ಕೃತಿಗಳು ಬಂದಿವೆ. ಆದರೆ ಇಲ್ಲಿ ವ್ಯಾಸ ಭಾರತದ ಹಿನ್ನೆಲೆಯೊಂದಿಗೆ ಕನ್ನಡದ ‘ಪರ್ವ’, ಮರಾಠಿಯ ‘ಮೃತ್ಯುಂಜಯ’ ಮತ್ತು ಒರಿಯಾ ಭಾಷೆಯ ‘ಯಾಜ್ಞ ಸೇನಿ’ ಎಂಬ ಕಾದಂಬರಿಗಳಲ್ಲಿ ಮೂಡಿದ ದ್ರೌಪದಿಯ ತೌಲನಿಕ ವಿವೇಚನೆಯನ್ನು ಲೇಖಕಿ ಮಾಡಿದ್ದಾರೆ.
ದ್ರೌಪದಿಯ ವ್ಯಕ್ತಿತ್ವವು ಅವಳ ಸಂಕೀರ್ಣವಾದ ಸ್ವರೂಪದಿಂದಾಗಿ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. ಅವಳ ಲೋಕೋತ್ತರವಾದ ಸೌಂದರ್ಯ ಮತ್ತು ಗುಣ ಸಂಪನ್ನತೆಗಳು, ಹೆಣ್ತನದ ಆದರ್ಶದ ಕಲ್ಪನೆಗಳು ವಿಶಿಷ್ಟವಾದವು ಮತ್ತು ಪಾಂಡವರ ಒಗ್ಗಟ್ಟಿನ ಮೂಲವಾಗಿದ್ದವು. ತನ್ನ ಮಿತಿಗಳನ್ನು ಒಪ್ಪಿಕೊಂಡು ಕೂಡ ಬದುಕಿನ ಉದ್ದಕ್ಕೂ ಪುರುಷರ ಅಹಂಕಾರಕ್ಕೆ ಸವಾಲಾಗಿ ಉಳಿದವಳು. ದ್ರೌಪದಿಯು ಬದುಕಿನಲ್ಲಿ ಏಕಾಂತ ಪ್ರಜ್ಞೆಯಿಂದ ಬಳಲಿದವಳು. ಇದಕ್ಕೆ ಅವಳ ಜೀವನದಲ್ಲಿ ಹಾದುಹೋದ ಇತರರು, ಮುಖ್ಯವಾಗಿ ಪಾಂಡವರು ಹೊಣೆಗಾರರಾಗುತ್ತಾರೆ.
ಬಹುಪತಿತ್ವದ ಹಿನ್ನೆಲೆಯಲ್ಲಿ ಗಮನಿಸಿದಾಗ ಆಕೆಯ ಶೋಷಣೆಯು ಹಿಂದೂ ವಿವಾಹದ ಪದ್ಧತಿಗಳನ್ನು ಅಣಕಿಸುತ್ತದೆ. ಸ್ತ್ರೀಯರ ಲೈಂಗಿಕ ಬದುಕಿನಲ್ಲಿ ಅನಾದಿಕಾಲದಿಂದಲೂ ಹಸ್ತಕ್ಷೇಪವನ್ನು ನಡೆಸುತ್ತಲೇ ಬಂದ ಪುರುಷರ ಯಾಜಮಾನ್ಯ ಧೋರಣೆಯನ್ನು ಇಲ್ಲಿ ಲಕ್ಷಿಸಲಾಗಿದೆ. ಸ್ತ್ರೀತ್ವದ ಸಹಜವಾದ ದೌರ್ಬಲ್ಯಗಳನ್ನು ಅವಳ ವ್ಯಕ್ತಿತ್ವ ಒಳಗೊಂಡಿರುವುದನ್ನು ಇಲ್ಲಿ ಲೇಖಕಿ ತೋರಿಸಿಕೊಟ್ಟಿದ್ದಾರೆ. ಇದರೊಟ್ಟಿಗೆ ಅವಳಲ್ಲಿ ಸದಾ ಜಾಗೃತವಾಗಿಯೇ ಇದ್ದ ಆತ್ಮಪ್ರತ್ಯಯಕ್ಕೆ ಅವಳು ತೆರಬೇಕಾಗಿ ಬಂದ ಬೆಲೆಯನ್ನೂ ವಿವೇಚಿಸಿದ್ದಾರೆ. ದ್ರೌಪದಿಯು ಸಮಗ್ರ ಸ್ತ್ರೀತ್ವದ ಪ್ರತಿನಿಧಿಯಾಗಿ, ಸತ್ವಪೂರ್ಣ ವ್ಯಕ್ತಿಯಾಗಿ ಇಲ್ಲಿ ಗುರುತಿಸಲ್ಪಟ್ಟಿದ್ದಾಳೆ.
ಪರ್ವ, ಮೃತ್ಯುಂಜಯ ಮತ್ತು ಯಾಜ್ಞಸೇನಿ ಕೃತಿಯಲ್ಲಿ ದ್ರೌಪದಿಯೊಂದಿಗಿನ ಪಾಂಡವರ ಸಂಬಂಧವೂ ಆ ಸಮಾಜಕ್ಕೆ ಸಹಜವಾದ ಪತಿ ಪತ್ನಿಯರ ಸಂಬಂಧವನ್ನೇ ಸೂಚಿಸುತ್ತದೆ. ದ್ರೌಪದಿ ಅರ್ಜುನನ ಸಂಬಂಧದ ವಿಚಾರದಲ್ಲಿ ಪರ್ವದಲ್ಲಿ ಅದು ಎರಡು ಅಹಂಕಾರಗಳ ಮುಖವಾಗಿ ಗೋಚರಿಸುತ್ತದೆ. ದ್ರೌಪದಿಯ ಭ್ರಮನಿರಸನದಲ್ಲಿ, ಅರ್ಜುನನ ಪಶ್ಚಾತ್ತಾಪದಲ್ಲಿ ಅದು ಪರ್ಯಾವಸಾನವಾಗುತ್ತದೆ. ಕೇವಲ ವ್ಯಾವಹಾರಿಕ ನೆಲೆ ಮಾತ್ರ ಉಳಿಯುತ್ತದೆ. ಯಾಜ್ಞಸೇನಿಯಲ್ಲಿ ಇದೇ ಸಂಬಂಧ ದ್ರೌಪದಿಯ ದೃಷ್ಟಿಯಿಂದ ಹೆಚ್ಚು ಅನಿವಾರ್ಯವಾದುದಾಗಿ ಚಿತ್ರಿವಾಗಿದೆ. ಇಲ್ಲಿ ಆಕೆಗೆ ಅರ್ಜುನ ಹೆಚ್ಚು ಪ್ರಿಯನಾಗಿದ್ದಾನೆ. ಪುರುಷ ಅಹಂಕಾರದ ಪ್ರತಿನಿಧಿಯಾಗಿ ಅರ್ಜುನ ಕಂಡುಬರುತ್ತಾನೆ. ಮೃತ್ಯುಂಜಯದ ಆಶಯಕ್ಕೆ ಈ ಜಿಜ್ಞಾಸೆಯು ಹೊರತಾಗಿದೆ. ಅದು ವಿಶೇಷವಾದುದನ್ನೇನೂ ಹೇಳುವುದಿಲ್ಲ.
ಲೇಖಕಿ ಇಲ್ಲಿನ ಇನ್ನೊಂದು ಅಧ್ಯಾಯದಲ್ಲಿ, ದ್ರೌಪದಿ ಭೀಮರ ಸಂಬಂಧವನ್ನು ಪ್ರಸ್ತಾಪಿಸುತ್ತಾ, ಇಬ್ಬರಲ್ಲೂ ರಾಜಸ ಪ್ರವೃತ್ತಿ ಪ್ರಧಾನವಾಗಿದೆ. ಮಹಾಭಾರತದಲ್ಲಿ ದ್ರೌಪದಿಯು ಭೀಮನನ್ನು ತನ್ನ ರಕ್ಷಕನ ನೆಲೆಯಲ್ಲಿ ಗುರುತಿಸುತ್ತಾಳೆ. ಆದರೆ ಭೀಮನು ಆಕೆಯನ್ನು ತನ್ನ ವಸ್ತುವಾಗಿ ಕಾಣುತ್ತಾನೆ. ಆದುದರಿಂದಲೇ ಅವಳಿಗಾದ ಅಪಮಾನವು ಅವನ ಪುರುಷತ್ವವನ್ನು ಕೆಣಕುತ್ತದೆ.
ಇನ್ನೊಂದು ಅಧ್ಯಾಯದಲ್ಲಿ, ದ್ರೌಪದಿ ಮತ್ತು ಶ್ರೀಕೃಷ್ಣನ ನಡುವೆ ವಿಶೇಷವಾದ ಸಂಬಂಧ ಏನಾದರೂ ಇತ್ತೇ ಎನ್ನುವುದನ್ನು ಲೇಖಕಿ ಹುಡುಕಲು ಹೊರಡುತ್ತಾರೆ. ಎಲ್ಲಾ ಕೃತಿಗಳಲ್ಲಿ ಈ ರೀತಿಯ ವಿಶೇಷ ಸಂಬಂಧವಿತ್ತು ಎನ್ನುವುದು ಕಂಡುಬರುತ್ತದೆ. ಅವರ ನಡುವಿನ ಈ ಆಕರ್ಷಣೆಯಲ್ಲಿ ಭಕ್ತಿ, ಪ್ರಣಯ, ಮತ್ತು ಸಖ್ಯ ಭಾವಗಳು ಪ್ರಧಾನವಾಗಿ ಕಂಡುಬರುತ್ತವೆ. ಮೂರೂ ಕೃತಿಗಳಲ್ಲಿ ಇದೇ ನೆಲೆ ಇದೆ.ಯಾಜ್ಞಸೇನಿಯಲ್ಲಿ ದಏಹಾತೀತವದ ಸಂಬಂಧ ವು ಬಹು ಸೂಕ್ಷ್ಮ ರೀತಿಯಲ್ಲಿ ಔಚಿತ್ಯದ ಎಲ್ಲೆಯನ್ನು ಮೀರುವುದನ್ನು ಕಾಣಬಹುದು.
ದ್ರೌಪದಿ ಮತ್ತು ಕರ್ಣನ ಸಂಬಂಧದ ಬಗ್ಗೆ ವಿಶ್ಲೇಷಣೆಯನ್ನು ಮಾಡುವ ಲೇಖಕಿ, ದ್ರೌಪದಿಯ ವ್ಯಕ್ತಿತ್ವದಲ್ಲಿದ್ದ ಅಂತರ್‌ವಿರೋಧಗಳನ್ನು ಅನ್ವೇಷಿಸುತ್ತಾರೆ. ಕರ್ಣನಿಗೆ ದ್ರೌಪದಿಯು ತನಗದ ಅವಮಾನದ ಸಂಕೇತವಾಗಿ ಕಂಡುಬರುತ್ತದೆ. ದ್ರೌಪದಿಗೆ ಪ್ರತೀಕಾರಾತ್ಮಕ ನಿಲುವಿನ ಅಹಂಕಾರಿಯಾಗಿ ಕಂಡುಬರುತ್ತಾನೆ.
ಒಟ್ಟಿನಲ್ಲಿ, ಪಾತ್ರಸೃಷ್ಟಿಯ ದೃಷ್ಟಿಯಿಂದ ಆಧುನಿಕ ಸೃಜನಶೀಲತೆಗೆ ಸವಾಲಾಗಬಲ್ಲ ಅರ್ಹತೆಗಳು ದ್ರೌಪದಿಯ ವ್ಯಕ್ತಿತ್ವದಲ್ಲಿವೆ. ಶೋಧಿಸಿದಷ್ಟು ಅಭಿವ್ಯಕ್ತಿಗಳಿಗೆ ವಿಪುಲ ಅವಕಾಶಗಳನ್ನು ಕಲ್ಪಿಸುತ್ತದೆ. ಈ ಮೂರು ಕೃತಿಗಳ ಮೂಲಕ ಆಕೆಯ ಪಾತ್ರವನ್ನು ತುಲನೆ ಮಾಡುವುದಾದರೆ, ಮೃತ್ಯುಂಜಯವು ಹೊಸದೃಷ್ಟಿಯನ್ನು ತೋರಿಸುವುದಿಲ್ಲ. ಯಾಜ್ಞಸೇನಿಯು ತೀರಾ ಸಾಂಪ್ರದಾಯಿಕವಾದ ಹೆಣ್ಣಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. ಪರ್ವದಲ್ಲಿ ದ್ರೌಪದಿಯು ಹೆಚ್ಚು ಸತ್ವಪೂರ್ಣವಾಗಿ ಕಂಡುಬರುತ್ತಾಳೆ.
ಈ ವಿವಾಹ ಸಮಸ್ಯೆಯನ್ನು ಸಮಾಧಾನಕರವಾಗಿ ಬಿಡಿಸಲು ವಿದ್ವಾಂಸರು ಶ್ರಮಿಸುತ್ತಲೇ ಬಂದಿದ್ದಾರೆ. ಇದನ್ನು ಕೇವಲ ಆ ಕಾಲದ ಸಮಾಜದಲ್ಲಿ ಪ್ರಚಲಿತವಾಗಿದ್ದ ಪದ್ಧತಿ ಎಂದು ಕರೆದು ಪಾರಾಗುವಂತಿಲ್ಲ. ದ್ರೌಪದಿಯನ್ನು ಪಂಚವಲ್ಲಭೆಯಾಗಿ ಚಿತ್ರಿಸುವುದರ ಮೂಲಕ ವ್ಯಾಸರು ಆ ಕಾಲದ ನೈತಿಕ ಸಮಸ್ಯೆಗಳನ್ನು ಬಿಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಒಟ್ಟಿನಲ್ಲಿ, ಈ ಪಂಚಪತಿತ್ವವೇ ಮೂಲವಾಗಿ ಮಹಾಭಾರತದುದ್ದಕ್ಕೂ ದ್ರೌಪದಿಯು ಯಾರವಳೂ ಆಗದೆ ಉಳಿದುಬಿಡುತ್ತಾಳೆ. ತನ್ನ ವೇದನೆಯ ಜಗತ್ತಿನೊಳಗೆ ಒಂಟಿಯಾಗಿ ಇರುವಂತವಳಾಗುತ್ತಾಳೆ.
ಮಹಾಭಾರತದ ದ್ರೌಪದಿ ಮತ್ತು ಆಧುನಿಕ ಕೃತಿಗಳಲ್ಲಿ ಬಿಂಬಿತವಾದ ದ್ರೌಪದಿಯನ್ನು ಹೋಲಿಸಿದಾಗ ಪರ್ವದಲ್ಲಿ ದ್ರೌಪದಿಯ ಸ್ವಂತಿಕೆಯನ್ನು ಸ್ಫುಟಗೊಳಿಸುತ್ತದೆ. ದ್ರೌಪದಿಯ ಪಾತ್ರವು ಮುಖ್ಯವಾಗಿ ಮಹಾಭಾರತ ಮತ್ತು ಪರ್ವಗಳ ಸಂದರ್ಭಗಳಲ್ಲಿ ನಿರಂತರವಾಗಿ ಅಸ್ಮಿತೆಯ ಅನ್ವೇಷಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅವಳು ಎಲ್ಲಾ ರೀತಿಯ ಯಾಜಮಾನ್ಯವನ್ನು ಧಿಕ್ಕರಿಸುವ ಪ್ರಯತ್ನವನ್ನು ಮಾಡುತ್ತಾಳೆ. ತನ್ನ ಬೌದ್ಧಿಕ, ಶಾರೀರಿಕ ಅವಶ್ಯಕತೆಗಳನ್ನು ಮುಕ್ತವಾಗಿ ಗುರುತಿಸಿಕೊಳ್ಳುವ ಮೂಲಕ ಸ್ತ್ರೀವಾದಿ ನಿಲುವನ್ನು ಸಮರ್ಥಿಸುತ್ತಾಳೆ. ಪ್ರೀತಿ -ರತಿ, ಭಕ್ತಿ -ಮೈತ್ರಿ, ಸಂಯಮ- ಆಸಕ್ತಿ ಈ ಭಾವನೆಗಳ ಸೂಕ್ಷ್ಮ ತೂಕವು ದ್ರೌಪದಿಯ ವ್ಯಕ್ತಿತ್ವದಲ್ಲಿ ಕಂಡುಬರುವಂತೆ ಇತರ ಯಾವ ಪೌರಾಣಿಕ ವ್ಯಕ್ತಿತ್ವದಲ್ಲೂ ಕಂಡುಬರುವುದಿಲ್ಲ.
ಒಂದು ರೀತಿಯಿಂದ ಅಭಿಶಪ್ತವಾಗಿದ್ದ ಬದುಕಿನ ಉದ್ದಕ್ಕೂ ಸ್ವಂತಿಕೆಗಾಗಿ, ಅಸ್ತಿತ್ವಕ್ಕಾಗಿ ಅವಳು ನಡೆಸಿದ ಹೋರಾಟಗಳು ಅವಳ ಎತ್ತರವನ್ನು ಹೆಚ್ಚಿಸುತ್ತವೆ. ಪಾಂಚಾಲ ರಾಜಪುತ್ರಿಯಾ, ಕುರುವಂಶದ ಸೊಸೆಯಾಗಿ, ಪಂಚವಲ್ಲಭೆಯಾಗಿ, ಕೃಷ್ಣನ ಪ್ರಿಯ ಸಖಿಯಾಗಿದ್ದು ಕೂಡ ಏಕಾಂಗಿಯೇ ಉಳಿದ ಅವಳ ಬದುಕಿನ ದುರಂತ ನಮ್ಮನ್ನು ಗಾಢವಾಗಿ ತಟ್ಟುತ್ತದೆ. ಅವಳು ಕಾಲ, ದೇಶಗಳಿಂದ ಆಚೆ ಸ್ತ್ರೀತ್ವಕ್ಕೆ ಸಮಾನವಾದ ಯಾತನೆಯ ಜಗತ್ತೊಂದನ್ನು ಕಟ್ಟಿಕೊಡುತ್ತಾಳೆ. ಪ್ರತಿಬಾರಿ ತುಳಿತಕ್ಕೆ ಒಳಗಾಗುವ ಮಹಿಳೆಯಾಗಿ, ಬದುಕನ್ನೇ ಮೀರಿ ಬರುತ್ತಾಳೆ.
ದ್ರೌಪದಿಯ ರೂಪವನ್ನು ನೆನೆಯುವಾಗ ನಮ್ಮ ಕಣ್ಣೆದುರಿಗೆ ಬರುವುದು ನ್ಯಾಯವನ್ನು ಬೇಡುವ ಕ್ರುದ್ಧ ಭಾಮಿನಿಯದು. ಅವಳು ರಕ್ತ ಮಾಂಸಗಳ ಶ್ರೀಮಂತ ಸಂವೇದನೆಗಳ ಸೂಕ್ಷ್ಮಜೀವಿಯಾಗಿದ್ದಳು. ತನ್ನ ಹೆಣ್ತನದ ಪೂರ್ಣತ್ವಕ್ಕಾಗಿ ತುಡಿಯುತ್ತಿದ್ದ, ಕನಸುಗಳನ್ನು ಹೊತ್ತಿದ, ಬದುಕನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಆಶಾವಾದಿಯಾಗಿದ್ದಳು. ಅವಳಲ್ಲಿದ್ದ ಭಾವತೀವ್ರತೆಯನ್ನು, ಆಸ್ಫೋಟಕ ಗುಣವನ್ನು ಮೀರಿದ್ದ ವಿಕಸನಶೀಲವಾದ ಹೆಣ್ತನವು ನಮ್ಮ ಸೃಜನಶೀಲ ಬರಹಗಾರರನ್ನು ಕಾಡುತ್ತಲೇ ಬಂದಿದೆ.
ಒಟ್ಟಾರೆಯಾಗಿ, ಈ ಕೃತಿಯು ಅರ್ಜುನ, ಭೀಮ, ಕೃಷ್ಣ ಮತ್ತು ಕರ್ಣರನ್ನು ಪ್ರಮುಖವಾಗಿ ಇಟ್ಟುಕೊಂಡು ಆ ಪಾತ್ರಗಳ ಮತ್ತು ದ್ರೌಪದಿಯ ಸಂಬಂಧ ವಿನ್ಯಾಸವನ್ನು ತಿಳಿಯುವ ಉದ್ದೇಶವನ್ನು ವಿವರಿಸುತ್ತದೆ. ಅವಳ ಮೇಲೆ ನಡೆದ ದಬ್ಬಾಳಿಕೆಯ ಸ್ವರೂಪವೇನು, ಈ ದಮನಕಾರಿ ಪ್ರವೃತ್ತಿಯನ್ನು ಅವಳು ಎದುರಿಸಿದ್ದು ಹೇಗೆ, ಯಾವ ರೀತಿಯ ಆಂತರಿಕ ದ್ವಂದ್ವವನ್ನು ಅವಳು ಬದುಕಿನುದ್ದಕ್ಕೂ ಅನುಭವಿಸಿದಳು, ವಸ್ತ್ರಾಪಹರಣ ಸಂದರ್ಭದಲ್ಲಿ ಆಕೆ ಮಾಡಿದ ಪ್ರತಿಜ್ಞೆ , ಅನ್ಯಾಯದ ವಿರುದ್ಧ ಎತ್ತಿದ ಧ್ವನಿ, ಅವಳಾಡಿದ ಕಟೂಕ್ತಿ, ಅವಳ ಪ್ರತಿಭಟನೆಯ ಮಾತುಗಳೇನು ಎನ್ನುವುದನ್ನು ಈ ಕೃತಿಯಲ್ಲಿ ಲೇಖಕಿ ವಿಶ್ಲೇಷಿಸಿದ್ದಾರೆ.
.........................
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೧೩.೬.೨೦೨೬
.......................

Comments
Post a Comment