ಬೇಹುಗಾರರ ಬದುಕು- ಬವಣೆ ಚಿತ್ರಿಸುವ

‘ಪಾಕ್‌ನಲ್ಲಿ ನಮ್ಮ ಧುರಂಧರರು’  



ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ. ವಿ. ಗುರುಪ್ರಸಾದ್ ಅವರ ಹೊಚ್ಚ ಹೊಸ ಕೃತಿ ಇದು. ‘ಪಾಕ್‌ನಲ್ಲಿ ನಮ್ಮ ಧುರಂಧರರು’ ಇದರಲ್ಲಿ  ಬೇಹುಗಾರರ ಬದುಕು- ಬವಣೆಯನ್ನು ಚಿತ್ರಿಸಿದ್ದಾರೆ.  

ಬೇಹುಗಾರಿಕೆ ಎಂದರೇನು, ಇದಕ್ಕೆ ಯಾರು ಸೇರಬಹುದು, ಸೇರಿದವರು, ಸೇರುವವರು ಹೇಗಿರಬೇಕು, ವಿವಿಧ ದೇಶಗಳು ಬೇಹುಗಾರಿಕೆ ನಡೆಸುವುದೇತಕ್ಕೆ, ಪಾಕಿಸ್ಥಾನದಲ್ಲಿ ಭಾರತೀಯರ ಗೂಢಚಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಕಥೆ ಏನಾಗಿದೆ, ಎಷ್ಟು ಜನ ವಾಪಸ್ ಮರಳಿದ್ದ್ದಾರೆ. ಇನ್ನೆಷ್ಟು ಜನ ಅಲ್ಲಿಯ ಜೈಲಿನಲ್ಲಿ ಕೊಳೆಯುತ್ತಿದ್ದ್ದಾರೆ, ಅಲ್ಲಿ ಸಿಗುವ ಶಿಕ್ಷೆ,  ಹಿಂಸೆ ಎಂತಹುದು, ಭಾರತಕ್ಕೆ ಮರಳಿ ಬಂದರೂ ಇಲ್ಲಿ ಅವರಿಗೆ ಯಾವ ರೀತಿಯ ಜೀವನ ಎದುರಾಗುತ್ತದೆ ಎನ್ನುವುದನ್ನು ಮನಸೆಳೆಯುವಂತೆ ಇಲ್ಲಿ ಚಿತ್ರಿಸಿದ್ದಾರೆ. ಇದೊಂದು  ಅಪಾಯಕಾರಿ ವೃತ್ತಿ. ಇಲ್ಲಿ ಎಲ್ಲರೂ ಸಲ್ಲುವುದಿಲ್ಲ. ಧೈರ್ಯ, ಸ್ಥೈರ್ಯ, ಗಟ್ಟಿ ಗುಂಡಿಗೆ, ಹುಮ್ಮಸ್ಸು, ತಾಳ್ಮೆ ಮತ್ತು ಅಪಾಯವನ್ನೆದುರಿಸುವ ಶಕ್ತಿ, ಮಾತಿನಲ್ಲೇ ಇತರರನ್ನು ಮರುಳು ಮಾಡುವ ಕಲೆ, ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಉಪಾಯ, ಹಿಂಸೆಯ ಸಹಿಷ್ಣುತೆ, ಜೊತೆಗೆ ಸಾವಿನ ಚಿಂತೆಯನ್ನೂ ಬಿಟ್ಟು ಅದನ್ನೆದುರಿಸಲು ತಯಾರಾಗಿರಬೇಕು ಎನ್ನುವ ಮಾಹಿತಿಯನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಬೇಹುಗಾರಿಕೆ ಬಗ್ಗೆ ಎಷ್ಟೋ ಜನರಿಗೆ ಮಾಹಿತಿ ಇಲ್ಲ. ಇದನ್ನು ತಿಳಿದುಕೊಳ್ಳುವುದು ಅವಶ್ಯ. ಬೇಹುಗಾರಿಕೆ ಮಾಡುವವರು ಧುರಂಧರರು. ಮೋಹನ್‌ಲಾಲ್ ಭಾಸ್ಕರ್ ಇಂತಹವರಲ್ಲೊಬ್ಬ. ಮೂಲತಃ ಪಂಜಾಬ್‌ನ ಬ್ರಾಹ್ಮಣ. ಈತನ ಸಂಪೂರ್ಣ ಬೇಹುಗಾರಿಕೆಯ ಚಿತ್ರಣವನ್ನು ಲೇಖಕರು ಇಲ್ಲಿ ಓದುಗರಿಗೆ ನೀಡಿದ್ದಾರೆ. ಮಾತೃಭೂಮಿಗಾಗಿ ನಿಸ್ವಾರ್ಥ ಸೇವೆಯನ್ನು ಹೇಗೆ ಸಲ್ಲಿಸಿದ, ವಿದೇಶದ ಆಮಿಷವನ್ನು ಹೇಗೆ ಮೆಟ್ಟಿನಿಂತ, ಪಾಕ್ ಪೊಲೀಸರ ಕೈಗೆ ಸಿಕ್ಕಿಬಿದ್ದು ೨೬ ವರ್ಷ ಕಠಿಣ ಹಿಂಸೆಯ ಮೂಲಕ ಜೈಲು ಶಿಕ್ಷೆ ಅನುಭವಿಸಿ ಹೇಗೆ ಹೊರಕ್ಕೆ ಬಂದ, ನ್ಯಾಯಾಲಯದಲ್ಲಿ ತನ್ನ ಪರ ತಾನೇ ಹೇಗೆಲ್ಲ ವಾದಿಸಿದ, ನಂತರ ಅವನ ಮುಂದಿನ ಜೀವನ ಹೇಗೆ ಸಾಗಿತು ಎನ್ನುವುದನ್ನು ಈ ಕೃತಿಯಲ್ಲಿ ವಿವರವಾಗಿ ಬರೆದಿದ್ದಾರೆ.

ಕೃತಿಯ ಕೊನೆಯ ಅಧ್ಯಾಯ ‘ರೋದನ, ಗಾಯನ, ಸನ್ಮಾನ ಯಾವುದೂ ಇಲ್ಲದೆ ಮರೆಯಾದ ಧುರಂಧರರು’ ಎಂಬಲ್ಲಿ  ಪ್ರತಿ ದೇಶವೂ ತನಗೆ ಆಸಕ್ತಿಯಿರುವ ದೇಶಗಳಲ್ಲಿ ಬೇಹುಗಾರಿಕೆಯನ್ನು ಗುಟ್ಟಾಗಿ ನಡೆಸುತ್ತದೆ. ಅದನ್ನು ನಡೆಸಬೇಕಾದ ಅನಿವಾರ್ಯತೆಯೂ ಇದೆ. ಗೂಢಚಾರಿಕೆಯನ್ನು ಮಾಡಬಾರದು ಎಂದು ಎಲ್ಲ ದೇಶಗಳೂ ಒಪ್ಪುವುದರಿಂದ ಯಾವ ದೇಶವೂ ತಾನು ಇನ್ನೊಂದು ದೇಶದ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಬೇಹುಗಾರಿಕೆ ಮಾಡಿ ಸಿಕ್ಕಿ ಬಿದ್ದರೆ ‘ನಮಗೂ ಅವನಿಗೂ ಸಂಬಂಧವಿಲ್ಲ’ ಎಂದು ಸರ್ಕಾರ ಹೇಳುತದೆ ಎನ್ನುತಾರೆ. ಕುಲಭೂಷಣ್ ಜಾಧವ್ ಇನ್ನೂ ಪಾಕ್ ಜೈಲಿನಲ್ಲಿ ಕೊಳೆಯುತ್ತಿರುವುದನ್ನು ಇದಕ್ಕೆ ಉದಾಹರಿಸುತ್ತಾರೆ. ಸ್ವದೇಶಕ್ಕೆ ಮರಳಿದ ಬೇಹುಗಾರರಿಗೆ ಯಾವ ಪ್ರಶಸ್ತಿ, ಪುರಸ್ಕಾರವೂ ದೊರೆಯುವುದಿಲ್ಲ. ಇವರ ಸಾಹಸದ ಕತೆಗಳೆಲ್ಲ ಕಡತಗಳಲ್ಲಿಯೇ ಕಳೆದುಹೋಗುತ್ತವೆ. ಭಾರತ ಮಾತೆಯ ಇಂತಹ ಪುತ್ರರ ಸಾಹಸಗಳು ನೇಪಥ್ಯಕ್ಕ್ಕೆ ಸರಿದುಹೋಗುತ್ತವೆ ಎಂದು ವಿಷಾದಿಸುತ್ತಾರೆ. 

ಈ ಕೃತಿ ಅತ್ಯಂತ ಕುತೂಹಲ ಹುಟ್ಟಿಸುವಂತಹುದು, ಅಷ್ಟೇ ರೋಚಕವಾದುದು. ಕೆಲವು ಸಂದರ್ಭಗಳು ಎದೆಯನ್ನು ಝಲ್ ಎನಿಸುತ್ತವೆ. ಅವರು ಅನುಭವಿಸುವ ಶಿಕ್ಷೆ ಎಂತಹವರನ್ನೂ ಬೆಚ್ಚಿಬೀಳಿಸುತ್ತದೆ. ಹೀಗೆ ಓದುಗರನ್ನು ಕೊನೆಯವರೆಗೂ ಸೆರೆಹಿಡಿಯುವಲ್ಲಿ ಕೃತಿ ಯಶಸ್ವೊಯಾಗಿದೆ. ಒಂದು ಅಪೂರ್ವ ಅನುಭವವನ್ನು ಇದು ಕಟ್ಟಿಕೊಡುತ್ತದೆ.   


ಕೃತಿಯ ಸಾರಾಂಶ: 


ಮೋಹನ್‌ಲಾಲ್ ಗೂಢಚಾರನಾದುದು ಹೇಗೆ, ತರಬೇತಿ ಪಡೆದಿದ್ದು, ಂiiಶಸ್ವಿಯಾಗಿ ಪಾಕಿಸ್ತಾನವನ್ನು ತಲುಪಿ ವಿವಿಧ ಪ್ರದೇಶಗಳಿಗೆ ತೆರಳಿದ್ದು, ಮಾಹಿತಿಯನ್ನು ಪಡೆಯಲು ವೇಶ್ಯೆಯ ಮನೆಗೆ ಹೋಗಿ ಪಡೆಯುವುದು, ಆನಂತರ ಸುರಕ್ಷಿತವಾಗಿ ವಾಪಸ್ ಭಾರತಕ್ಕೆ ಬರುವುದು, ಅಮ್ರಿಕ್ ಸಿಂಗ್ ಎನ್ನುವ ಗೂಢಚಾರನ ಪರಿಚಯವಾಗಿ ಆತನೊಂದಿಗೆ ಮತ್ತೆ  ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ನಂಬಿಕೆ ದ್ರೋಹದ ಮೂಲಕ ಅಮ್ರಿಕ್ ಈತನನ್ನು ಪೊಲೀಸರ ವಶಕ್ಕೆ ಒಪ್ಪಿಸುವುದು, ಪಾಕಿಸ್ತಾನದ ಅಧಿಕಾರಿಗಳು ವಿಚಾರಣೆ ಮಾಡುವಾಗ ಏಕೆ ಈ ವೃತ್ತಿ ಆಯ್ಕೆ ಮಾಡಿಕೊಂಡೆ ಎಂದು ಕೇಳಿದಾಗ ದೇಶದ ಮೇಲಿನ ಪ್ರೀತಿಗಾಗಿ ಎನ್ನುತ್ತಾನೆ. ನಂತರ ಜೈಲಿಗೆ ಹಾಕಲ್ಪಡುತ್ತಾನೆ.  

ಜೈಲಿನಲ್ಲಿ ವಿಚಾರಣಾಧಿಕಾರಿ ಸೆಲ್‌ಗೆ ಬಂದು ಯಾವುದೇ ಶಿಕ್ಷೆ ಕೊಡುವುದಿಲ್ಲ, ಎಲ್ಲ ಮಾಹಿತಿಯನ್ನು ಕೊಡು, ಇಲ್ಲವಾದರೆ ಭಯಂಕರ ಶಿಕ್ಷೆಗೆ ಒಳಗಾಗಬೇಕೆಂದು ಎಚ್ಚರಿಸುತ್ತಾನೆ. ಏನು ಮಾಡಿದರೂ, ಯಾವ ಆಮಿಷಕ್ಕೂ ಬಗ್ಗುವುದಿಲ್ಲ. ವಿಚಾರಣೆ ಮುಗಿದ ನಂತರ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸುತ್ತದೆ.  ಲಾಹೋರ್ ಕಾರಾಗೃಹಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಕಟ್ಟಿ ಸರಕಾರದ ವಿರುದ್ಧ ಪ್ರತಿಭಟಿಸಿದ್ದಕ್ಕೆ ೧೯೬೮ರಲ್ಲಿ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ತಂದುಹಾಕಲಾಗುತ್ತದೆ. ಭುಟ್ಟೋ ಇವರಿದ್ದಲ್ಲಿಗೆ ಬಂದು ‘ನನ್ನ ಪಕ್ಷ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ನಿಮ್ಮನ್ನೆಲ್ಲ ಬಿಡುಗಡೆ ಮಾಡಿ ದೇಶಕ್ಕೆ ಕಳುಹಿಸುವೆ’ ಎನ್ನುತ್ತಾರೆ. ಅಮ್ರಿಕ್ ಸಿಂಗನನ್ನು ಸಹ ಅದೇ ಜೈಲಿನಲ್ಲಿಟ್ಟಿರುವ ವಿಚಾರವು ಇನ್ನೊಬ್ಬ ಅಧಿಕಾರಿಯಿಂದ ಗೊತ್ತಾಗುತ್ತದೆ.

 ಈ ಮಧ್ಯೆ ತನಗೆ ಗಂಡು ಮಗು ಜನನವಾದ ಸುದ್ದಿಯನ್ನು ಲಾಲ್‌ನ ತಂದೆಯೊಟ್ಟಿಗೆ ಕೆಲಸ ಮಾಡಿದ ಅಧಿಕಾರಿಯೊಬ್ಬ ನೀಡುತ್ತಾನೆ. ಇದರಿಂದ ಆತ ಖುಷಿ ಪಡುತ್ತಾನೆ.  ಅಧಿಕಾರಿಯೊಬ್ಬ ಈತನನ್ನು ಬೆತ್ತಲೆ ಮಾಡಿ ತಲೆಯ ಮೇಲೆ ಕಂಬಳಿಯ ಗಂಟನ್ನು ಇಟ್ಟು ಜೈಲಿನ ಸುತ್ತ ಪ್ರದಕ್ಷಿಣೆ ಹಾಕುವಂತೆ ಸೂಚಿಸುತ್ತಾನೆ. ಪ್ರದಕ್ಷಿಣೆ ಹಾಕುವಾಗ ಕುಸಿದುಬೀಳುತ್ತಾನೆ. ಮಾರನೆಯ ದಿನ ವೈದ್ಯನೊಬ್ಬ ಈತನ ವಿಚಾರಣೆಗೆ ಬಂದು ಕಣ್ಣು ಮಂಜಾಗುವಂತಹ ದ್ರವವನ್ನು ಹಾಕುತ್ತಾನೆ. ಕಣ್ಣು ಕಾಣದಂತೆ ಮಾಡುತ್ತಾನೆ. ನಂತರ ಮತ್ತೆ ಇಂಜೆಕ್ಷನ್ ಕೊಟ್ಟು ಮತ್ತು ಯಥಾ ಸ್ಥಿತಿಗೆ ತರುತ್ತಾನೆ. ಹೀಗೆ ಅತ್ಯಂತ ಭೀಕರ ಶಿಕ್ಷೆಯನ್ನು ಅಲ್ಲಿನ ವಿಚಾರಣಾಧಿಕಾರಿಗಳು ಕೊಡುತ್ತಾರೆ.

 ಮತ್ತೊಂದು ದಿನ ನಡೆದ ವಿಚಾರಣೆಯಲ್ಲಿ ಡಿವೈಎಸ್ಪಿ ದುರಾನಿ ಎನ್ನುವನು ‘ನೀನು ಪಾಕ್ ಪರ  ಗೂಢಚಾರಿಕೆ ಮಾಡು, ನಿನ್ನನ್ನು ಭಾರತಕ್ಕೆ ಕಳುಹಿಸುವೆ ಜೊತೆಗೆ ಇಲ್ಲಿನ ಮಾಹಿತಿಯನ್ನು ಭಾರತದ ಅಧಿಕಾರಿಗಳಿಗೆ ಕೊಡು, ಅಲ್ಲಿನ ವಿಚಾರವನ್ನು ನಮಗೆ ಹೇಳು’ ಎಂದು ಆಮಿಷ ಒಡ್ಡುತ್ತಾನೆ. ಲಾಲ್ ಎಂತಹ ಮಾತೃಭೂಮಿ ಪ್ರೇಮಿ ಎನ್ನುವುದು ಇಲ್ಲಿ ಸಾಬೀತಾಗುತ್ತಾದೆ. ‘ನಾನು ಡಬಲ್ ಏಜೆಂಟ್ ಆಗುವುದಿಲ್ಲ. ದೇಶದ್ರೋಹ ಮಾಡುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳುತ್ತಾನೆ. ನಂತರ ಲಾಲ್‌ನನ್ನು ಲಖಪತ್ ಜೈಲಿಗೆ ಹಾಕಲಾಗುತ್ತದೆ. ಇಲ್ಲಿ ಅಮ್ರಿಕ್ ಸಿಂಗ್‌ನನ್ನು ಈತ ಕಾಣುತ್ತಾನೆ. ಆತ ಗಡ್ಡಬಿಟ್ಟು, ದೈಹಿಕವಾಗಿ ಕೃಶನಾಗಿ, ಭಿಕ್ಷುಕನಂತೆ ಕಂಡುಬರುತ್ತಾನೆ. ‘ದೇಶದ್ರೋಹ ಮಾಡಿದವರಿಗೆ ದೇವರು ಕೊಟ್ಟ ಶಿಕ್ಷೆ ಇದು’ ಎಂದು ತನ್ನಲ್ಲೇ ಹೇಳಿಕೊಳ್ಳುತ್ತಾನೆ.

ಈ ಮಧ್ಯೆ ಮೋಹನ್‌ಲಾಲಾನ ತಲೆ ಬೋಳಿಸಲಾಗಿತ್ತು. ಜುಟ್ಟು ಇತ್ತು, ಕಚ್ಚೆ ಹಾಕುತ್ತಿದ್ದನು, ಅರೆಗ್ನವಾಗಿ ಬಟ್ಟೆ ಧರಿಸುತ್ತಿದ್ದನು. ಇದರಿಂದ ಆತ ಉಳಿದ ಖೈದಿಗಳಗೆ ಪಂಡಿತನಂತೆ ಕಂಡುಬರುತ್ತಿದ್ದನು. ಪಂಡಿತ್ ಜೀ ಎಂದೇ ಕರೆಯುತ್ತಿದ್ದರು. ಆತನಲ್ಲಿ  ಭವಿಷ್ಯ ಕೇಳುತ್ತಿದ್ದರು ಒಬ್ಬನಿಗೆ ಭವಿಷ್ಯ ಹೇಳಿದ್ದು ಸತ್ಯವಾಗಿದ್ದರಿಂದ ಉಳಿದವರು ಇದನ್ನು ನಂಬಿ ಬರುತ್ತಿದ್ದರು. ಅದರೆ ಆತ ಹಸ್ತಸಾಮುದ್ರಿಕೆ ಕಲಿತಿರಲಿಲ್ಲ. ಜೈಲರ್ ಒಬ್ಬ ತನ್ನ ಭವಿಷ್ಯ ಕೇಳಲು ಬಂದಾಗ ಆತನಿಗೆ ಭವಿಷ್ಯ ಹೇಳಿದ. ಆದರೆ ಆತನಿಂದ ಹಣ ಸ್ವೀಕರಿಸದೆ ‘ತಾನು ಪತ್ರ ಬರೆಯುತ್ತೇನೆ. ಅದನ್ನು ಪೋಸ್ಟ್ ಮಾಡು. ಉತ್ತರ ಬಂದ ನಂತರ ವಾಪಸ್ ನನಗೆ ತಂದುಕೊಡು’ ಎಂದು ಹೇಳಿ ಹಾಗೆ ಊರಿಗೆ ಹಲವು ಪತ್ರ ಬರೆಯುತ್ತಾನೆ. 

ಇತ್ತ  ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್‌ನಲ್ಲಿ ಮೋಹನ್ ಲಾಲ್ ವಿಚಾರಣೆ ನಡೆದಾಗ ತನ್ನ ಪರ ಮಾಡಿದ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ಆತ ಸಾಬೀತು ಮಾಡುತ್ತಾರೆ. ತಾನು ನುಸುಳಿ ಬಂದಿದ್ದು ತಪ್ಪೇ ವಿನಾ ಗೂಢಚಾರಿಕೆ ಮಾಡಿಲ್ಲ. ಇದಕ್ಕೆ ಆರು ತಿಂಗಳು ಜೈಲು ಶಿಕ್ಷೆ ಕೊಡಬಹುದು. ಅದಾದ ನಂತರ ತನ್ನನ್ನು ಬಿಡುಗಡೆ ಮಾಡಬಹುದು ಎಂದು ಹೇಳುತ್ತಾನೆ. ಆದರೆ ೧೪ ವರ್ಷ ಕಠಿಣ ಶಿಕ್ಷೆ ಎಂದು ಬರೆಯಲಾಗುತ್ತದೆ. 


ಬಾಗ್ಲಾ ಉದಯ: 


೧೯೪೭ರಿಂದಲೂ ಪೂರ್ವ ಪಾಕಿಸ್ಥಾನವನ್ನು ಪಾಕಿಸ್ಥಾನ ಅಭಿವೃದ್ಧಿ ಮಾಡದೆ ಅಲ್ಲಿನವರಿಗೆ ಅಧಿಕಾರ ಕೊಡದೆ ನಿರ್ಲಕ್ಷಿಸಿತ್ತು. ೧೯೬೫ರ ಭಾರತದೊಂದಿಗಿನ ಯುದ್ಧದಲ್ಲಿ ಪೂರ್ವ ಪಾಕಿಸ್ಥಾನ ಹೊರಗುಳಿದಿತ್ತು. ಆಗ ಅಲ್ಲಿ ಅವಾಮಿ ಲೀಗ್‌ನ ನಾಯಕನಾಗಿ ಶೇಖ್ ಮುಜಿಬುರ್ ರೆಹ್ಮಾನ್ ಮುಂಚೂಣಿಗೆ ಬರುತ್ತಾರೆ. ಆಗ ಪಾಕಿಸ್ಥಾನದ ಅಧ್ಯಕ್ಷರಾಗಿದ್ದ ಅಯೂಬ್ ಖಾನ್ ಮುಂದೆ ಅವರು ಬೇಡಿಕೆ ಇಟ್ಟಾಗ ತಿರಸ್ಕರಿಸುತ್ತಾರೆ. ಭಾರತದ ಜೊತೆ ಶಾಮೀಲಾಗಿದ್ದಾರೆಂದು ರೆಹ್ಮಾನ್‌ರನ್ನು ಜೈಲಿಗಟ್ಟಲಾಗುತ್ತದೆ. ಎರಡು ವರ್ಷದ ನಂತರ ಬಿಡುಗಡೆಯಾದಾಗ ಅವರ ಜನಪ್ರಿಯತೆ ಹೆಚ್ಚುತ್ತದೆ. ಆಗ ಯಾಹ್ಯಾ ಖಾನ್ ಪಾಕಿಸ್ತಾನದ ಅಧ್ಯಕ್ಷರಾಗಿರುತ್ತಾರೆ. ಅವರು ಚುನಾವಣೆ ಘೋಷಿಸಿದಾಗ ಮುಜಿಬುರ್ ರೆಹಮಾನ್ ಅವರ ಅವಾಮಿ ಲೀಗ್ ಪಕ್ಷ ಪೂರ್ವದಲ್ಲಿ ಮತ್ತು ಪಶ್ಚಿಮದಲ್ಲಿ ಭುಟ್ಟೊ ಅವರ ಪಕ್ಷ ಬಹುಮತ ಸಾಧಿಸುತ್ತದೆ. ಭುಟ್ಟೋ ಅವರು ರೆಹ್ಮಾನ್ ಅಧ್ಯಕ್ಷರಾಗುವುದಕ್ಕೆ ತಕರಾರೆತ್ತುತ್ತಾರೆ. ಇದರಿಂದ ಅರಾಜಕತೆ ಮುಂದುವರೆಯುತ್ತದೆ. ಕೆಲವು ದಿನದ ನಂತರ ಯಾಹ್ಯಾ ಖಾನ್ ರೆಹ್ಮಾನ್ ಅವರೇ ಅಧ್ಯಕ್ಷರೆಂದು ಘೋಷಿಸುತ್ತಾರೆ.   ನಂತರ ಪ್ತರಯೆಏಕದ ಎಸಕ್ಕಾಗಿ ಹೋರಾಟ ನಡೆಯುತ್ತದೆ. ಪಾಕ್‌ನ ಸೈನಿಕರು ಸಿಕ್ಕವರನ್ನೆಲ್ಲಾ ಕೊಲ್ಲುತ್ತಾರೆ. ಗುಡಿಸಲುಗಳನ್ನು ನಿರ್ನಾಮ ಮಾಡುತ್ತಾರೆ. ರೆಹಮಾನ್ ಅವರನ್ನು ಅಜ್ಞಾನ ಸ್ಥಳದಲ್ಲಿಡಲಾಗುತ್ತದೆ. ನಿರಂತರ ದೌರ್ಜನ್ಯದಿಂದ ಭಾರತದತ ವಲಸೆ ಆರಂಭವಾಗುತ್ತದೆ.   

 ಇದನ್ನು ತಡೆಗಟ್ಟುವುದು ಹೇಗೆಂಬ ಚಿಂತನೆ ನಡೆಯುತ್ತದೆ. ಇದೇ ವೇಳೆ ಕಾಶ್ಮೀರಿ ವಿಮೋಚನಾ ದಳದವರೆಂದು ಹೇಳಿಕೊಂಡ ಹಾಶೀಂ ಖುರೇಶಿ ಮತ್ತು ಅಶ್ರಫ್ ಖುರೇಶಿ ೩೨ ಜನರಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಅಪಹರಣ ಮಾಡುತ್ತಾರೆ. ವಿಮಾನ ಶ್ರೀನಗರದಿಂದ ಜಮ್ಮುವಿಗೆ ಹೋಗಬೇಕಿತ್ತು. ಆದರೆ ಅಪಹರಿಸಿದವರು ಲಾಹೋರ್ ವಿಮಾನ ನಿಲ್ದಾಣಕ್ಕೆ ಒಯ್ಯುತ್ತಾರೆ. ಕಾಶ್ಮೀರಿ ವಿಮೋಚನಾ ದಳದವರನ್ನು ಭಾರತ ಸರ್ಕಾರ ಬಿಡುಗಡೆ ಮಾಡಬೇಕೆನ್ನುವ ಬೇಡಿಕೆ ಇಡುತ್ತಾರೆ. ಆದರೆ ಭಾರತ ಇದನ್ನು ತಿರಸ್ಕರಿಸುತ್ತದೆ. ಲಾಹೋರ್‌ನಲ್ಲೇ ವಿಮಾನವನ್ನು ಅಪಹರಣಕಾರರು ಸುಡುತ್ತಾರೆ. ಅವರಿಬ್ಬರ ಬಂಧನವಾಗುತ್ತದೆ. ಪಾಕಿಸ್ಥಾನವು ಉಗ್ರರ ಮೂಲಕ ವಿಮಾನ ಅಪಹರಿಸಿ ನಷ್ಟ ಉಂಟುಮಾಡಿದೆ ಎಂದು ಹೇಳಿ ಭಾರತವು  ಪಶ್ಚಿಮ ಮತ್ತು ಪೂರ್ವ ಪಾಕ್ ನಡುವಿರುವ ಭಾರತದ ವಾಯುನೆಲೆಯ ಮೇಲೆ ಹಾರಾಡಕೂಡದೆಂಬ ನಿರ್ಬಂಧ ಹೇರುತ್ತದೆ. ಈ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಎಂದರೆ ವಾಯುಮಾರ್ಗ ಮಾತ್ರವಾಗಿತ್ತು. ಜಲಮಾರ್ಗದಲ್ಲಿ ಸಾಗಲು ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಇದನ್ನು ಕೇಳಿದ ಪಾಕಿಸ್ಥಾನ ಬೆಚ್ಚಿತು. ನಂತರ ಈ ವಿಮಾನ ಹೈಜಾಕ್ ಭಾರತದ ಮಾಡಿದ ನಾಟಕ ಎಂದು ಕೆಲವರಿಗೆ ತಿಳಿಯಿತು.  ಜೊತೆಗೆ ಇದೊಂದು ಅತಿ ಹಳೆಯ ವಿಮಾನವಾಗಿತ್ತು. ಭಾರತದ ‘ರಾ’ (ಭಾರತದ ವಿದೇಶಿ ಗೂಢಚಾರ ಸಂಸ್ಥೆ) ನಿರ್ದೇಶಕ ರಾಮನಾಥ್ ಕಾವ್ ಎನ್ನುವವರು ಈ ಉಪಾಯ ಮಾಡಿದ್ದರು. 

 ಭಾರತಕ್ಕೆಸ ವಲಸೆ ಬಂದ ಪಾಕ್‌ನ ಬಾಂಗ್ಲಾ ಭಾಷಿಕರನ್ನು ಸೇರಿಸಿ  ಸೈನ್ಯದಳವನ್ನು ಕಟ್ಟುತ್ತಾರೆ. ನಮ್ಮ ಸೈನಿಕರಿಂದ ತರಬೇತಿ ಕೊಡಿಸಲಾಗುತ್ತದೆ ಇವರೆಲ್ಲರೂ ಪಾಕಿಸ್ತಾನದ ಮೇಲೆ ೧೯೭೧ರಲ್ಲಿ ಲಗ್ಗೆ ಇಡುತ್ತಾರೆ. ಪ್ರತಿಯಾಗಿ ಪಾಕ್ ಯುದ್ಧವಿಮಾನ ಮೂಲಕ ದಾಳಿ ನಡೆಸುತ್ತದೆ. ಯುದ್ಧ ಹಲವು ದಿನ ನಡೆಯುತ್ತದೆ. ‘ರಾ’ ದ ಮುನ್ಸೂಚನೆಯಿಂದಾಗಿ ಹೆಚ್ಚಿನ ನಷ್ಟ ಭಾರತಕ್ಕೆ ಆಗುವುದಿಲ್ಲ. ಪಶ್ಚಿಮ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೈನ್ಯಕ್ಕೆ ಸಂಪೂರ್ಣ ಹಿನ್ನಡೆಯಾಗುತ್ತದೆ. ಢಾಕಾ ಭಾರತದ  ವಶಕ್ಕೆ ಬರುತ್ತದೆ. ಈ ಮಧ್ಯೆ ಕದನ ವಿರಾಮಕ್ಕೆ ಪಾಕಿಸ್ತಾನ ಸಹಿ ಹಾಕುತ್ತದೆ. ಪಾಕಿಸ್ತಾನದಲ್ಲಿ ಆಕ್ರೋಶ ಭುಗಿಲೆದ್ದು ಅಧ್ಯಕ್ಷ ಯಾಹ್ಯಾ ಖಾನ್ ಅವರ ರಾಜೀನಾಮೆಗೆ ಜನರು ಆಗ್ರಹ ಮಾಡುತ್ತಾರೆ. ಅವರು ಭುಟ್ಟೋಗೆ ಅಧಿಕಾರ ಹಸ್ತಾಂತರ ಮಾಡುತ್ತಾರೆ.

 ಮುಜಿಬುರ್ ರೆಹಮಾನ್ ಬಿಡುಗಡೆಯಾಗುತ್ತಾರೆ. ಅವರು ಢಾಕಾಗೆ ಪ್ರಯಾಣ ಮಾಡಿ ಹೊಸದಾಗಿ ಉದಯವಾಗಿದ್ದ ಬಾಂಗ್ಲಾದ ಅಧಿಕಾರವನ್ನು ಪಡೆಯುತ್ತಾರೆ. ೧೯೭೨ರಲ್ಲಿ ಖೈದಿಗಳ ಬಿಡುಗಡೆಗಾಗಿ ಇಂದಿರಾಗಾಂಧಿ ಮತ್ತು ಭುಟ್ಟೋ ನಡುವೆ ಶಿಮ್ಲಾದಲ್ಲಿ ಒಪ್ಪಂದವಾಗುತ್ತದೆ. ಈ ಪ್ರಕಾರ ಮೋಹನ್ ಲಾಲ್ ಕೂಡ ತನ್ನ ೨೬ ವರ್ಷದ ವನವಾಸವನ್ನು ಮುಗಿಸಿ ಬಿಡುಗಡೆ ಹೊಂದುತ್ತಾನೆ. ಬಂದ ನಂತರ ತನಗೆ ಪರಿಹಾರ ಕೊಡಬೇಕೆಂದು ವಿನಂತಿಸುತ್ತಾನೆ ಆದರೆ ಅದು ಸಿಗುವುದಿಲ್ಲ. ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ನೌಕರನಾಗಿ ಕೆಲಸಕ್ಕೆ ಸೇರುತ್ತಾನೆ. ಬಳಿಕ ಪಂಜಾಬ್‌ನಲ್ಲಿ ತಾನೇ ಶಾಲೆ ತೆರೆದು ಕೆಲಸ ಮಾಡುತ್ತಾ ೨೦೦೪ರಲ್ಲಿ ಮರಣನಾಗುತ್ತಾನೆ.

ಮೋಹನ್ ಲಾಲ್‌ನಂತೆಯೇ  ಬೇಹುಗಾರರಾಗಿ ಸಿಕ್ಕಿಬಿದ್ದ ನರಕ ಅನುಭವಿಸಿದ ಕಶ್ಮೀರ್ ಸಿಂಗ್, ರವೀಂದ್ರ ಕೌಶಿಕ್, ಕರಾಮತ್ ರಾಹಿ, ಸರಬ್ಜಿತ್ ಸಿಂಗ್, ಕುಲಭೂಷಣ ಜಾಧವ್ ಅವರನ್ನೂ ಕೂಡ ಲೇಖಕರು ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೧.೬.೨೦೨೬

.................................

Comments

Popular posts from this blog