ಜೀವನದ ಏಳುಬೀಳುಗಳ
“ಬದುಕಿನ ಅಲೆ’
‘ಬದುಕಿನ ಅಲೆ’ ಈ ಕಥಾ ಸಂಕಲನವನ್ನು ಬರೆದವರು ಕಲಬುರ್ಗಿಯ ಡಾ. ಶ್ರೀದೇವಿ ಎಲ್. ರಾಠೋಡ್. ಕೃತಿಯಲ್ಲಿ ಒಟ್ಟು ಏಳು ಕಥೆಗಳಿವೆ. ಇವೆಲ್ಲವೂ ನಮ್ಮ ಬದುಕಿಗೆ ಸಂಬಂಧಿಸಿದವು. ಜೀವನ ಹೇಗೆಲ್ಲ ಸಾಗುತ್ತದೆ, ಮನುಷ್ಯ ಏನೇನು ಅನುಭವಿಸಬೇಕಾಗುತ್ತದೆ. ಮನುಷ್ಯನ ಸ್ವಾರ್ಥಕ್ಕೆ ಸಂಬಂಧಿಸಿದ ಕಥೆಗಳಿವೆ. ನಮ್ಮ ಜೀವನದಲ್ಲಿ ನಡೆಯುತ್ತಿರುವ, ನಡೆದ ಅಥವಾ ಸುತ್ತಮುತ್ತಲು ನಾವು ಕಾಣುತ್ತಿರುವ ವಿಷಯಗಳಾದರೂ ಅದನ್ನು ಕೆಲವು ನಿದರ್ಶನಗಳ ಮೂಲಕ ನಿರೂಪಿಸಿ, ಓದುಗರನ್ನು ಸೆಳೆಯುವಂತೆ ಮಾಡಿದ್ದಾರೆ. ಹಾಗಾಗಿ ಇವು ನಮ್ಮ ಕುತೂಹಲವನ್ನು ಕೆರಳಿಸುತ್ತಾ ಹೋಗುತ್ತವೆ.
ಶ್ರೀದೇವಿಯವರ ಚೊಚ್ಚಲ ಕಥಾ ಸಂಕಲನ ಇದಾಗಿದೆ. ಕಥೆಗಳ ಭಾಷೆ ಸರಳವಾಗಿದ್ದು, ಬಯಲುಸೀಮೆಯ ಭಾಷೆ ಹೆಚ್ಚು ಬಳಕೆಯಾಗಿದೆ. ಕಥಾತಂತ್ರ ಬಹಳ ಚಂದವಾಗಿದೆ. ಪ್ರತಿ ಕಥೆಗಳೂ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿವೆ.
‘ಆತ್ಮ’
ಇದು ಜನ್ಮ ಜನ್ಮಾಂತರದ ಕಥೆ ಇದೆ. ಸೃಷ್ಟಿಯಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಸಾವು ತಪ್ಪಿದ್ದಲ್ಲ. ಪ್ರಕೃತಿ ತನ್ನ ಒಡಲಿನಲ್ಲಿ ಅನೇಕ ಜೀವಗಳನ್ನು ಸೃಷ್ಟಿಸಿದರೂ ಅವುಗಳ ಆಹಾರ ಸರಪಳಿ, ರಚನೆ ವಿಶಿಷ್ಟವಾದದ್ದು. ತಮ್ಮ ಬದುಕಿಗಾಗಿ ಹೋರಾಟ ಮಾಡುತ್ತಾ, ತಮ್ಮ ಸಂತತಿ ಮುಂದುವರಿಸುತ್ತವೆ. ಒಂದನ್ನು ಮತ್ತೊಂದು ತಿಂದು ಬದುಕುತ್ತವೆ. ಎಲ್ಲ ಜೀವಿಗಳಿಗೂ ತಮ್ಮದೇ ಆದ ಸ್ಥಾನ ಮತ್ತು ಮಹತ್ವ ಇದೆ. ತಮ್ಮ ಬದುಕಿನ ಸಂಪೂರ್ಣ ಆನಂದವನ್ನು ಅನುಭವಿಸಿ ಜೀವನವನ್ನು ಸಾರ್ಥಕ ಮಾಡಿಕೊಂಡು ಸಂಪೂರ್ಣ ಆನಂದವನ್ನು ಅನುಭವಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆನ್ನುವುದು ಕಥೆಯ ಸಾರಾಂಶ.
‘ಇಂತಿ ನಿನ್ನ...’
ಇದರಲ್ಲಿ ಅಂಗವಿಕಲೆ ಗೌರಿ ಎನ್ನುವ ಯುವತಿ ಲ್ಯಾಪ್ಟಾಪ್ ಮೂಲಕ ಪರಿಚಯವಾದ ಕಾಶ್ಮೀರದ ಮೂಗ ಹುಡುಗ ಶೌಖತ್‌ನನ್ನು ಪ್ರೀತಿಸುತ್ತಾಳೆ. ಆಕೆ ಕಾಮೆಂಟ್ ಮಾಡುತ್ತಾ ಕೊನೆಯಲ್ಲಿ ‘ಇಂತಿ...’ ಎಂದು ಮೇಲ್ ಮಾಡುತ್ತಾಳೆ. ಇಬ್ಬರಲ್ಲಿ ಮೆಸೇಜುಗಳ ಮೂಲಕ ಗೆಳೆತನ ಬೆಳೆಯುತ್ತದೆ. ಆದರೆ ತನ್ನ ಹೆಸರನ್ನು ಈಕೆ ತಿಳಿಸದೆ ‘ಇಂತಿ ನಿನ್ನ...’ ಎಂದಷ್ಟೇ ಪ್ರತಿ ಬಾರಿ ಬರೆಯುತ್ತಾಳೆ. ಒಂದು ರಾತ್ರಿ ಕನಸಲ್ಲಿ ಶೌಖತ್‌ನನ್ನು ಹುಡುಕಿಕೊಂಡು ಕಾಶ್ಮೀರಕ್ಕೆ ಹೋದಂತೆ, ಅಲ್ಲಿ ಬಾಂಬ್ ಸ್ಫೋಟದಲ್ಲಿ ಸಾಯುವಂತಹ ಕನಸು ಬೀಳುತ್ತದೆ. ಈ ಬಗ್ಗೆ ಮೇಲ್ ಕಳಿಸುತ್ತಾಳೆ. ಆತನಿಂದ ಯಾವುದೇ ಉತ್ತರ ಬರುವುದಿಲ್ಲ. ಇದರಿಂದ ಆತನನ್ನು ಕಾಣಲು ಕಾಶ್ಮೀರಕ್ಕೆ ಹೋಗಲು ನಿರ್ಧರಿಸಿದಾಗ ಮನೆಯವರು ಕೋಣೆಯಲ್ಲಿ ಕೂಡಿಹಾಕುತ್ತಾರೆ. ಆಕೆ ಕೊನೆಗೂ ಕಾಶ್ಮೀರಕ್ಕ್ಕೆ ಹೋಗುತ್ತಾಳೆ. ಶೌಖತ್ ಮನೆಗೆ ಹೋದಾಗ ಆತ ಬಂಧನಕ್ಕೊಳಗಾಗಿರುವ ವಿಷಯ ಗೊತ್ತಾಗುತ್ತದೆ. ಆಕೆ ಮುಂದೆ ಯಾವ ಹೆಜ್ಜೆ ಇಡುತ್ತಾಳೆ, ವಾಪಸ್ ತವರಿಗೆ ಮರಳಿದಳೇ? ಇಬ್ಬರ ಪ್ರೀತಿ ಮುಂದೇನಾಯಿತು, ಎನ್ನುವುದಕ್ಕೆ ಉತ್ತರ ಇದರಲ್ಲಿದೆ.
ಜಲ್ ಪರಿ
ಜಲ್ ಪರಿ ನಿಗೂಢವಾದ ಒಂದು ಸಮುದ್ರ ಜೀವಿ. ಮನುಷ್ಯ ಆಕಾರದಲ್ಲಿರುವ ಒಂದು ಮೀನು ಮೀನು ಹಿಡಿದು ಜೀವನ ಸಾಗಿಸುವ ಬುಡಕಟ್ಟು ಜನಾಂಗದ ಶಂಭು ದಂಪತಿಗಳಿಗೆ ಮಕ್ಕಳಿಲ್ಲದಾಗ ಅವನ ಬಲೆಗೆ ಒಂದು ದಿನ ಮನುಷ್ಯನ ಆಕಾರದಲ್ಲಿರುವ ಮೀನು ಬೀಳುತ್ತದೆ. ಬಲೆಗೆ ಬಿದ್ದುದರಿಂದ ಅದು ವಿಲವಿಲನೆ ಒದ್ದಾಡುತ್ತಿರುತ್ತದೆ. ಏನನ್ನೋ ಮಾತನಾಡಲು ಬಯಸುವಂತೆ ಆತನಿಗೆ ಕಂಡುಬರುತ್ತದೆ. ‘ನನ್ನಿಂದ ಏನು ಸಹಾಯ ಬೇಕು’ ಎಂದು ಕೇಳಿದಾಗ ಮೀನು ‘ನಮ್ಮ ಸಂತತಿ ನಿಗೂಢವಾಗಿದೆ. ಹಾಗೆ ಇರಲು ಬಿಡು’ ಎಂದು ಕೇಳಿಕೊಳ್ಳುತ್ತದೆ. ‘ಸರಿ’ ಎಂದು ಹೇಳಿದಾಗ ‘ನನ್ನಿಂದ ಏನಾದರೂ ಮರು ಸಹಾಯಬೇಕೆಂದರೆ ಕೇಳು’ ಎಂದು ಮೀನು ಹೇಳುತ್ತದೆ ಅದಕ್ಕೆ ‘ನನಗೆ ಒಂದು ಮಗು ಬೇಕು’ ಎಂದು ಕೇಳಿಕೊಳ್ಳುತ್ತಾನೆ ‘ಸರಿ’ ಎಂದು ಹೇಳಿ ಮೀನು ಕಣ್ಮರೆಯಾಗುತ್ತದೆ ಇದಾದ ಕೆಲವು ತಿಂಗಳಲ್ಲಿ ಮೀನು ಶಂಭುವಿನ ಹೆಂಡತಿ ಗರ್ಭಿಣಿಯಾಗುತ್ತಾಳೆ ಹೆಣ್ಣು ಮಗು ಜನನವಾಗುತ್ತದೆ, ಮುಂದೆ ಆ ಮಗು ಹೇಗೆ ಬೆಳೆಯಿತು, ನಿಜಕ್ಕೂ ಅದು ಮನುಷ್ಯನಾಗಿತ್ತೇ ಅಥವ ಮೀನು ಆಗಿತ್ತೇ? ತನ್ನ ಋಣ ಭಾರವನ್ನು ಆ ದಂಪತಿಗೆ ಹೇಗೆ ಮುಗಿಸಿತು, ಮುಂದೇನಾಯಿತು ಎನ್ನುವ ಕುತೂಹಲವನ್ನು ಈ ಕಥೆ ಹೊಂದಿದೆ.
ಖೈದಿ
ಬಡ ಕುಟುಂಬವೊಂದರಲ್ಲಿ ಜನಿಸಿದ ಯುವಕನ ಕಥೆ ಇದು. ತನ್ನ ಸಹೋದರಿಯನ್ನು ಸಾಯಿಸಿ ಆತ್ಮಹತ್ಯೆ ಎಂದು ಸುಳ್ಳು ಕಥೆ ಕಟ್ಟಿದ ಆಕೆಯ ಗಂಡನನ್ನು ಸಾಯಿಸಿ ಜೈಲಿಗೆ ಹೋಗುವುದು, ಅಲ್ಲಿ ಆತನಿಗೆ ಶಿಕ್ಷೆಯಾಗುವುದು, ಗೆಳೆಯನಿಗೆ ತನ್ನನ್ನು ವಿದೇಶಕ್ಕೆ ಕಳಿಸಲು ಏರ್ಪಾಡು ಮಾಡು ಎಂದು ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿ ರಾತ್ರಿ ಕಾಡು ಸೇರಿ ೧೫ ದಿನ ಅಲ್ಲಿಯೇ ಸಿಕ್ಕಿದ್ದನ್ನೆಲ್ಲಾ ತಿಂದು ಕಾಲಕಳೆಯುವುದು, ಕೊನೆಗೆ ಪೊಲೀಸರು ಬಂದು ಗುಂಡು ಹೊಡೆಯುತ್ತಾರೆ. ಸಾಯುವ ೫ ನಿಮಿಷ ಮುಂಚೆ ಆತನ ಮಿತ್ರ ಅಲ್ಲಿಗೆ ಬಂದಾಗ ಆತನಿಗೆ ತನ್ನ ಡೈರಿ ಕೊಡುತ್ತಾನೆ. ಆ ಡೈರಿಯಲ್ಲಿ ಏನಿತ್ತು ಎನ್ನುವುದು ಕುತೂಹಲ ಈ ಕಥೆಯಲ್ಲಿದೆ.
‘ವಿಧಿ’
ಇದರಲ್ಲಿ ತಂದೆ ತಾಯಿಗಳ ಪ್ರೀತಿ ಇಲ್ಲದೆ ಒಬ್ಬಂಟಿಗಳಾಗಿ ಬದುಕಿ, ಗೆಳೆಯರೊಂದಿಗೆ ಮೋಜು-ಮಸ್ತಿಯಲ್ಲಿ ಕಾಲ ಕಳೆದ ಯುವತಿ ತನ್ನ ಗೆಳೆಯನ ಬಲೆಗೆ ಬಿದ್ದು ಆತ ಹೇಳಿದಂತೆ ಅಮೆರಿಕದಿಂದ ತೈವಾನ್‌ಗೆ ಹೆರಾಯಿನ್ ಸಾಗಿಸಲು ಹೋಗಿ ಸಿಕ್ಕಿಬಿದ್ದು ೧೩ ವರ್ಷ ಶಿಕ್ಷೆ ಅನುಭವಿಸುವುದು, ಹೊರಬಂದ ನಂತರ ಅನಾಥಭಾವ ಎದುರಿಸುವುದು, ಗೆಳೆಯ ಅಪಘಾತದಲ್ಲಿ ಸಾಯುವುದು, ಕೊನೆಗೆ ಬದುಕು ಬೇಸರವಾಗುವುದು, ನಂತರ ಆಕೆಯ ಮುಂದಿನ ಜೀವನ ಸುಖಮಯವಾಯಿತೇ, ದು:ಖದಲ್ಲಿ ಕಳೆದಳೇ, ಆಕೆಗೆ ಯಾರಾದರೂ ಸಹಾಯ ಮಾಡಿದರೇ, ಜನಸೇವೆ ಮಾಡಿದಳೇ ಎನ್ನುವುದುನ್ನು ಈ ಕಥೆ ಓದಿ ಯೇ ತಿಳಿಯಬೇಕು.
ಮೌನ
ಕಡುಬಡತನದ ಕುಟುಂಬದ ಹುಡುಗಿ ಮೌನ ಜೀವನದಲ್ಲಿ ನೊಂದು, ಬೆಂದ ಕಥೆ ಇದು, ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ನಿತ್ಯ ಕಿರುಕುಳ, ಹಿಂಸೆ, ಊಟ ಕೊಡದೆ ಸತಾಯಿಸುವುದು, ಈ ಮಧ್ಯೆ ಇಬ್ಬರು ಮಕ್ಕಳು ಜನಿಸುವುದು, ಮಕ್ಕಳ ಸಹಿತ ತವರಿಗೆ ಕಳುಹಿಸಿದ ಗಂಡ, ಒಂದು ತಿಂಗಳು ಬಿಟ್ಟು ಮತ್ತೆ ಗಂಡನ ಮನೆಗೆ ವಾಪಸಾದರೂ ಸೇರಿಸದೆ ಹೊರಹಾಕುವುದು, ಅಲ್ಲಿಯೇ ಕೂಲಿ ಕೆಲಸಕ್ಕೆ ಸೇರಿದಾಗ ಪರಿಚಯವಾದ ಯುವಕ ಈಕೆಯನ್ನು ಪುಸಲಾಯಿಸಿ ಬಟ್ಟೆ ಕಾರ್ಖಾನೆಂiಲ್ಲಿ ಕೆಲಸ ಎಂದು ನಂಬಿಸಿ ದೆಹಲಿಗೆ ಕರೆದೊಯ್ದು ಕೊಣೆಯೊಂದರಲ್ಲಿ ವಾರಗಟ್ಟಲೆ ಅತ್ಯಾಚಾರ ಎಸಗಿ ವೇಶ್ಯಾವಾಟಿಕೆಗೆ ಮಾರಾಟಮಾಡುವುದು, ಅಲ್ಲಿ ಆಕೆಯ ಜೀವನ ಏನಾಯಿತು, ತಪ್ಪಿಸಿಕೊಂಡು ಮರಳಿದಳೇ, ಅವಳ ಮಕ್ಕಳ ಭವಿಷ್ಯ ಏನಾಯಿತು ಎನ್ನುವುದಕ್ಕೆ ಉತ್ತರ ಇದರಲ್ಲಿದೆ.
ನಿರುದ್ಯೋಗ
ಕಡುಬಡತನದ ಬಂಜಾರ ಕುಟುಂಬದ ಬಾಲಕನ್ನು ಶಾಲೆಗೆ ಸೇರಿಸಿ, ಆತನಿಗೆ ಉಜ್ವಲ ಭವಿಷ್ಯವಿದೆ ಎಂದು ಊರಿನ ಪೂಜಾರಿ ಹೇಳಿದ ಮಾತನ್ನು ಕೇಳಿ ಆತನ ತಾಯಿ ಗಂಡನ ವಿರೋಧದ ಹೊರತಾಗಿಯೂ ಶಾಲೆಗೆ ಸೇರಿಸಲು ಹೋದಾಗ ಶಿಕ್ಷಕನಿಂದ ಕೆಳಜಾತಿಯವನು, ಬಡವ ಎಂಬ ತಿರಸ್ಕಾರ, ಪೂಜಾರಿಯ ಸೂಚನೆಯಂತೆ ಶಾಲೆಗೆ ಸೇರಿಸಿಕೊಂಡರೂ ಸರಿಯಾಗಿ ಕಲಿಸದೆ ನಿತ್ಯ ಶಿಕ್ಷಕನಿಂದ ಬೈಗುಳ, ಥಳಿತ, ಕಷ್ಟಪಟ್ಟು ಓದಿ ಪಿಯು, ಪದವಿ ಪಾಸಾಗಿ ಪಿಎಚ್ಡಿ ಪಡೆದರೂ ಕೆಲಸ ಸಿಗದೆ, ಕೆಲಸಕ್ಕಾಗಿ ಎಷ್ಟೇ ಯತ್ನಿಸಿದರೂ ಲಂಚವಿಲ್ಲದೆ ಕೆಲಸವಿಲ್ಲ ಎನ್ನುವುದನ್ನು ಅರಿತು ಜಮೀನಿನಲ್ಲೇ ಕೆಲಸ ಮಾಡುವುದು, ಸರಕಾರಿ ಉದ್ಯೋಗಕ್ಕೆ ಬೈ ಹೇಳಿ ಉತ್ತಮ ಕೃಷಿಕ ಎಂದು ಬಹುಮಾನ, ಕೀರ್ತಿ ಪಡೆದ ಕಥೆ ಇದು.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೧೮.೦೬.೨೦೨೬
.......................

Comments
Post a Comment