ಜೀವರಶ್ಮಿ ತಾಗಿದಂತಹ ಅನುಭವದ
‘ಸಾಸಿವೆ ತಂದವಳು’
‘ಸಾಸಿವೆ ತಂದವಳು’ ಇದರ ಅಡಿಬರಹವೇ ಹೇಳುವಂತೆ ಇದೊಂದು ಸ್ಫೂರ್ತಿದಾಯಕ ಹೋರಾಟದ ಕೃತಿ. ಇದರ ಲೇಖಕಿ ಬಿ ವಿ ಭಾರತಿ. ನಾವು ಕಂಡಿರದ ಕ್ಯಾನ್ಸರ್ ಜಗತ್ತನ್ನು ನಮ್ಮೆದುರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಎಲ್ಲೋ ದೂರದಿಂದ ನಾವು ದುರ್ಬೀನಿನಿಂದ ನೋಡಿದ. ಕೇಳಿದ ಜಗತ್ತು ಇದಲ್ಲ. ಇದು ನಮ್ಮೊಳಗಿನ ಕತೆ ಎಂಬಂತೆ ತಮ್ಮ ಅಂತರಂಗದ ನೋವು, ನಲಿವು, ಭೀತಿ ಎಲ್ಲಕ್ಕೂ ಆಹ್ವಾನವಿತ್ತು ಹೊರ ಜಗತ್ತನ್ನು ತೆರೆದಿಟ್ಟಿದ್ದಾರೆ.
ಈ ಕೃತಿಯಲ್ಲಿ ಲೇಖಕಿ ತನ್ನಲ್ಲಿ ಕ್ಯಾನ್ಸರ್ ಇದೆ ಎಂದು ಗುರುತಿಸಿದ ಕ್ಷಣದಿಂದ ತನ್ನ ದೇಹಕ್ಕೆ ಕ್ಯಾನ್ಸರ್ ಆಗಿಲ್ಲ ಎಂಬ ಕ್ಷಣದವರೆಗಿನ ದೀರ್ಘ ಪಯಣದ ಅನುಭವಗಾಥೆಯನ್ನು ತೆರೆದಿಟ್ಟಿದ್ದಾರೆ. ಕ್ಯಾನ್ಸರಿನ ನೆಪದಲ್ಲಿ ಲೇಖಕಿಯ ಒಳಗಿದ್ದ ಅಪೂರ್ವ ಪ್ರತಿಭೆ ಹೊರಬಂದಿರುವುದನ್ನು ಕಾಣಬಹುದು. ತಮ್ಮ ಅಂತರಂಗದ ಅಸಹನೀಯವಾದ ಯಾತನೆಯ ಕಥೆಯನ್ನೂ, ಅದರ ಕೊಂಬು ಹಿಡಿದು ಸೆಣೆಸಿ ಗೆದ್ದ್ದು ನಿಲ್ಲುವ ಜೀವನೋತ್ಸಾಹದ ದಿವ್ಯ ಕ್ಷಣಗಳನ್ನೂ ಸೆರೆಹಿಡಿದಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಓದಬೇಕಾದ ಕೃತಿ ಇದು.
ವೈದ್ಯರ ಭರವಸೆಯಲ್ಲಿ ರೋಗಕ್ಕೆ ಅರ್ಧ ಪರಿಹಾರವಿದೆ. ದೇಹದಲ್ಲಿ ಕಾಣುವ ವ್ಯತಾಸಗಳನ್ನು, ರೋಗದ ಪ್ರಾರಂಭಿಕ ಲಕ್ಷಣಗಳನ್ನು ಉದಾಸೀನ ಮಾಡಬಾರದು ಎಂಬ ಕಿವಿಮಾತು ಸಹ ಇದರಲ್ಲಿದೆ. ಇಲ್ಲಿ ಲೇಖಕಿ ತಮ್ಮ ಅಳುಕು, ಆತಂಕಗಳನ್ನು ತೆರೆದಿಡುವ ರೀತಿ ನಮ್ಮೊಳಗಿನ ರೋಗದ ಭೀತಿಗೆ ಕನ್ನಡಿ ಹಿಡಿಯುತ್ತದೆ. ಕ್ಯಾನ್ಸರನ್ನು ಅವರೆದುರಿಸಿದ ರೀತಿ ಅಪೂರ್ವವಾದುದು ಎನ್ನುವುದು ಕೃತಿಯನ್ನೊದಿದಾಗಿ ಗೊತ್ತಾಗುತ್ತದೆ.
ಈ ಕೃತಿಯು ಬದುಕನ್ನು ಇನ್ನಿಲ್ಲದ ಹಾಗೆ ಪ್ರೀತಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಲೇಖಕಿಯು ದುಗುಡವನ್ನು, ಅವರು ನೀಡುವ ಕ್ಷಣದ ಯಾತನೆಗಳನ್ನು ಪಕ್ಕಕ್ಕೆ ಸೇರಿಸಿ ನಮ್ಮನ್ನು ಹುರುಪುಗೊಳಿಸುತ್ತದೆ. ಆ ಮಟ್ಟಿಗೆ ಇದು ಅತ್ಯಂತ ಮುಖ್ಯ ಕೃತಿಯಾಗುತ್ತದೆ. ಓದಿದವರು ಧೈರ್ಯವಾಗಿ ಜೀವಿಸುವಂತೆ ಪ್ರೇರೇಪಿಸುವ ಜೀವಧ್ವನಿಯ ಕೃತಿಯಾಗಿದೆ.
ಕೃತಿಯ ಕುರಿತು:
ಒಂದು ದಿನ ಸಂಜೆ ಕಚೇರಿಯಿಂದ ಬಂದಾಕ್ಷಣ ಸುಸ್ತಾಗಿ ವಿರಮಿಸಿದ್ದ ಲೇಖಕಿಗೆ ಕೈಕಟ್ಟಿ ಎದೆಯ ಮೇಲೆ ಇಟ್ಟುಕೊಂಡಾಗ ಏನೋ ತಗುಲಿದ ಅನುಭವವಾಗುತ್ತದೆ. ಮಲಗಿದಾಗ ಏನೋ ತಗುಲಿದ ಹಾಗಾಗುತ್ತದೆ. ಸ್ಥನದಲ್ಲಿ ಗಡ್ಡೆ ಇದ್ದರೆ ಅದರ ಆಕಾರ ಬದಲಾಗುತ್ತದೆ ಎಂದು ಓದಿನಿಂದ ತಿಳಿದುಕೊಂಡಿದ್ದರು. ಕೂಡಲೇ ಅಂದೇ ಆಸ್ಪತ್ರೆಗೆ ತೆರಳುತ್ತಾರೆ. ಆದರೆ ಅಂದು ಶನಿವಾರವಾಗಿದ್ದರಿಂದ ಯಾವ ವೈದ್ಯರೂ ಸಿಗುವುದಿಲ್ಲ. ಆನಂತರ ಪರಿಚಯದವರ ಸಹಾಯದಿಂದ ಆಸ್ಪತ್ರೆಯೊಂದಕ್ಕೆ ತೆರಳಿದಾಗ ಅಲ್ಲಿನ ಮಹಿಳಾ ವೈದ್ಯೆ ನಿರ್ಭಾವುಕರಾಗಿ ವರ್ತಿಸುತ್ತಾರೆ.
ನಂತರ ಇದು ಕ್ಯಾನ್ಸರ್ ಎಂದು ಹೇಳಿ ಬಯಾಪ್ಸಿಗೆ ಸೂಚಿಸುತ್ತಾರೆ. ಅಲ್ಲಿಂದ ಶಂಕರಪುರದಲ್ಲಿರುವ ರಂಗದೊರೈ ಆಸ್ಪತ್ರೆಯ ಸರ್ಜಿಕಲ್ ಅಂಕಾಲಜಿಸ್ಟ್ ಡಾ|| ಶ್ರೀನಾಥ್ ಅವರಲ್ಲಿ ಮುಂದಿನ ಚಿಕಿತ್ಸೆ ಮಾಡಿಸುತ್ತಾರೆ. ಅವರು ಅತ್ಯಂತ ಪ್ರಸಿದ್ಧ ವೈದ್ಯರಾಗಿರುವುದರಿಂದ ಅವರ ಚಿಕಿತ್ಸೆಗೆ ಸಾಲಿನಲ್ಲಿನ ಜನ ಕಾದಿರುತ್ತಾರೆ . ರೀಕ್ಷೆಯ ನಂತರ ವೈದ್ಯರು ಬಯಾಪ್ಸಿ ತೆಗೆದುಕೊಳ್ಳುತ್ತಾರೆ. ವರದಿ ಬಂದಾಗ ಕ್ಯಾನ್ಸರ್ ಗಡ್ಡೆ ಇರುವುದು ಪತ್ತೆಯಾಗಿದೆ ಎಂದು ಹೇಳುತ್ತಾರೆ.
ಗುಣಮುಖವಾಗುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಮನದಟ್ಟು ಮಾಡುತ್ತಾರೆ. ಚಿಕಿತ್ಸೆಗೆ ತುಂಬಾ ತಾಳ್ಮೆ ಬೇಕು. ಮೊದಲ ಸ್ಥಿತಿಗೆ ಬರಲು ಒಂದು ವರ್ಷವಾದರೂ ಬೇಕು ಎಂದು ಹೇಳಿ, ಕೀಮೋಥೆರಪಿ ರೇಡಿಯೋಥೆರಪಿ ಬಗ್ಗೆ ಮಾಹಿತಿ ಕೊಡುತ್ತಾರೆ. ಈ ಮಧ್ಯೆ ಕೀಮೋ ಶುರುವಾಗಲಿರುವುದರಿಂದ ಮನೆಗೆ ಅಡುಗೆಯವರ ಹುಡುಕಾಟ ನಡೆಯುತ್ತದೆ. ಒಬ್ಬಳು ಸಿಕ್ಕಿದರೂ ಆಕೆಗೆ ತಿಂಡಿ ಸಹ ರುಚಿಕಟ್ಟಾಗಿ ಮಾಡಲು ಬರುತ್ತಿರಲಿಲ್ಲ. ಆದರೆ ಅಂತಃಕರಣದ ಹೆಂಗಸಾದ್ದರಿಂದ ಆಕೆಯನ್ನು ಮನೆಯಲ್ಲಿ ಅಡುಗೆಗೆ ಇಟ್ಟುಕೊಳ್ಳುತ್ತಾರೆ. ಕಿಮೋ ಚಿಕಿತ್ಸೆ ಶುರುವಾದ ನಂತರ ವಿಪರೀತ ಸಂಕಟ, ಉರಿ ಶುರುವಾಗುತ್ತದೆ. ಒಂದು ವಾರ ಅಸಾಧ್ಯವಾದ ಕಷ್ಟವನ್ನು ಎದುರಿಸುತ್ತಾರೆ.
ಏನೂ ಮಾಡಲಾಗದ ಸ್ಥಿತಿ ಎದುರಾಗುತ್ತದೆ. ದುಃಖದ ಗಳಿಗೆಯಲ್ಲಿ ಗೆಳತಿಯರ ಸಂತೈಸುವಿಕೆ ಇಲ್ಲದಿದ್ದರೆ ತನಗೆ ಕಷ್ಟವಾಗುತ್ತಿತ್ತು. ರೋಗಕ್ಕೆ ತುತ್ತಾದವರು ನಿಮ್ಮ ಆಸಕ್ತಿಯೆಡೆಗೆ ಗಮನ ಹರಿಸಿ ಬದಲಾವಣೆ ಆಗುತ್ತದೆ, ಮನಸ್ಸುಗಳು ಗಟ್ಟಿಯಾಗುತ್ತದೆ ಎಂದು ಲೇಖಕಿ ಸಲಹೆ ಕೊಡುತ್ತಾರೆ. ಕೀಮೋದಿಂದಾಗಿ ಕೂದಲು ಉದುರುವಿಕೆ ಜಾಸ್ತಿಯಾಗಿ ವಿಗ್ ಮೊರೆ ಹೋಗುತ್ತಾರೆ. ಕೀಮೋ ಮುಗಿದ ನಂತರ ನಾಟಕ ನೋಡಲು ತೆರಳುವುದು, ಗೆಳತಿಯರ ಜೊತೆ ಸುತ್ತಾಟ ಕ್ಕೆ ಆರಂಭಿಸುತ್ತಾರೆ. ರೇಡಿಯೇಶನ್ ಚಿಕಿತ್ಸೆ ನಂತರ ಪ್ರವಾಸ, ವಿದೇಶಯಾನವನ್ನೂ ಆರಂಭಿಸುತ್ತಾರೆ.
ಕ್ಯಾನ್ಸರ್ ನಂತರದ ದಿನಗಳ ಬಗ್ಗೆ ಲೇಖಕಿ ಕಿವಿಮಾತು ಹೇಳುತ್ತಾರೆ.
ಚಿಕಿತ್ಸೆಗಳೆಲ್ಲ ಮುಗಿದ ಬಳಿಕ ಪೆಟ್ ಸ್ಕ್ಯಾನಿಗೆ ಸೂಚಿಸಿದಾಗ ಅದನ್ನು ಸಹ ಲೇಖಕಿ ಮಾಡಿಸುತ್ತಾರೆ ಆಗ ನೋಡ್ಸ್‌ನಲ್ಲಿ ಸ್ವಲ್ಪ ತೊಂದರೆ ಎಂದು ವರದಿ ಬರುತ್ತದೆ. ಆದರೆ ಡಾ|| ಶ್ರೀನಾಥ್ ಬಳಿ ಹೋದಾಗ ಏನೂ ಸಮಸ್ಯೆ ಇಲ್ಲ, ಇನ್ಫೆಕ್ಷನ್ ಆಗಬಹುದು, ಆಂಟಿ ಬಯೋಟಿಕ್ ತೆಗೆದುಕೊಳ್ಳಿ ಎಂದು ಸೂಚಿಸುತ್ತಾರೆ. ನೀವಿನ್ನು ಕ್ಯಾನ್ಸರ್ ಫ್ರೀ ಎಂದು ಹೇಳುತ್ತಾರೆ.
ಕ್ಯಾನ್ಸರ್ ನಂತರ ಮಾಹಿತಿ ಇಲ್ಲದೆ ಅದರ ಬಗ್ಗೆ ನೋಯಿಸುವವರ ಬಗ್ಗೆ ಲೇಖಕಿ ಏನು ಹೇಳುತ್ತಾರೆನ್ನುವುದ ಇದರಲ್ಲಿದೆ. ಕ್ಯಾನ್ಸರ್‌ನಿಂದ ಜನ ಸಾಯುತ್ತಿದ್ದರು ಎಂದು ಮುಂದೊಂದು ದಿನ ಜಗತ್ತು ಆಶ್ಚರ್ಯಪಡುವಂತಾಗಲಿ ಎಂದು ಪ್ರಾರ್ಥಿಸುತ್ತಾರೆ.
ಒಟ್ಟಿನಲ್ಲಿ, ಈ ಕೃತಿಯಲ್ಲಿ ಲೇಖಕಿ ದೇಹಕ್ಕೆ ನೀಡಿದ ಚಿಕಿತ್ಸೆಯಿಂದ ರೋಗ ವಾಸಿಯಾಗುತ್ತದೆ ಎಂಬ ವೈದ್ಯರ ಮಾತುಗಳಲ್ಲಿ ಅರ್ಧದಷ್ಟು ಪರಿಹಾರವಿರುತ್ತದೆ. ನನ್ನ ಬದುಕನ್ನು ಬದುಕಲು ಬಿಡಿ. ನಾನು ಹೊರಟೆ ಎಂದು ಮೇಲೆದ್ದು ಬದುಕಿನ ಹೋರಾಟ ಎದುರಿಸಿದ ಅಸಾಧಾರಣ ಮಹಿಳೆ ಇವರು. ಅವರು ಕ್ಯಾನ್ಸರನ್ನು ಎದುರಿಸಿದ ಅಸಾಧಾರಣ ರೀತಿಯೇ ಅವರ ಬದುಕನ್ನು ಮತ್ತು ಬರಹವನ್ನು ಅಪೂರ್ವವಾಗಿಸಿದೆ. ಬದುಕಿನ ಏರಿಳಿತಗಳಲ್ಲಿ ನಮ್ಮ ಮನಸ್ಸನ್ನು ಒಲಿಸಿ, ನಗಿಸಿ, ದಂಡಿಸಿ ಬದುಕನ್ನು, ಬದುಕುವ ಕಲೆಯನ್ನು ಕಲಿಸುವ ಮಾರ್ಗವನ್ನು ಲೇಖಕಿ ಇಲ್ಲಿ ತೋರಿಸುತ್ತಾರೆ. ಯಾವ ರೋಗಕ್ಕೆ ಲೇಖಕಿ ಹೆದರಿದ್ದರೋ ಅದನ್ನೇ ಹೆದರಿಸಿ ಗೆದ್ದು ಬಂದ ದಿಟ್ಟೆಯ ಈ ಸಾಹಸ ಕಥೆ ಇದು. ‘ಸಾವು ತನಗೆ ಬದುಕುವುದನ್ನು ಕಲಿಸಿತ್ತು’ ಎನ್ನುವ ಮೂಲಕ ಜೀವನ ಸಾಕ್ಷಾತ್ಕಾರದ ಮಾತುಗಳು ಅನುಭವ ಅನುಭಾವವಾದಾಗ ಹೊಳೆಯುತ್ತದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೨೯.೦೬.೨೦೨೬
.............................

Comments
Post a Comment