ಬೆರಗುಗೊಳಿಸುವ ಕವನಗಳ

  ‘ಇಂದ್ರ ಚಾಪ’ 


ತೀರ್ಥಹಳ್ಳಿಯ ಶಿಕ್ಷಕಿ ಸಾಹಿರಾಬಾನು ಅವರ  ‘ಇಂದ್ರ ಚಾಪ’ ಕವನ ಸಂಕಲನದಲ್ಲಿ  ಬೆರಗುಗೊಳಿಸುವ ಕವನಗಳಿವೆ. ಆರ್ತ ಮೊರೆಯೂ ಇದೆ. ಆಧ್ಯಾತ್ಮದ ಅಂಚಿನತ್ತ ಕೈ ಚಾಚುವ ಕವನಗಳು ಇವೆ. ನಮ್ಮಲ್ಲಿ ಆಸೆ ಮತ್ತು ನಿರೀಕ್ಷೆ ಹುಟ್ಟಿಸುವ ಕವಿತೆಗಳು ಇದರಲ್ಲಿವೆ. ಆತ್ಮ ಮತ್ತು ಬಹಿರ್ಲೋಕಗಳನ್ನು ಅತ್ಯಂತ ಸೂಕ್ಷ್ಮವಾಗಿ ಕವಯಿತ್ರಿ ಶೋಧಿಸುತ್ತಾ ಹೊಸ ಪಲುಕುಗಳನ್ನು ಹುಟ್ಟಿಸಿದ್ದಾರೆ. ಅವರ ಆದವಾದ ಕವಿತೆಗಳನ್ನು ಓದುವಾಗ ಎಂತವರು ಕೂಡ ತನ್ಮಯರಾಗುತ್ತಾರೆ.

 ಧ್ವನಿ ಪೂರ್ಣವಾದ ಚಿತ್ರವತ್ತಾದ ಕಲ್ಪನೆಗಳನ್ನು ಕಡೆದಿದ್ದಾರೆ. ಕಲ್ಪಕತೆ ಮತ್ತು ಭಾಷೆಯ ಆರ್ದ್ರ ಗುಣಗಳನ್ನು ಬಳಸಿಕೊಂಡು ಅಖಂಡವಾದ ಇಡೀ ಕವಿತೆಯನ್ನು ಹೇಗೆ ಕಟ್ಟುವಲ್ಲಿ ಸಾರ್ಥಕ ಪಡೆಯಬಹುದು ಎನ್ನುವುದಕ್ಕೆ ಇಲ್ಲಿನ ಕವಿತೆಗಳು ಸಾಕ್ಷಿಯಾಗಿವೆ. ಒಟ್ಟು ೬೬ ಕವಿತೆಗಳ ಸಂಕಲನ ಇದು. ಇಲ್ಲಿ  ಅಮ್ಮ, ಮುಂಜಾವು, ದೇವರು, ಪ್ರಕೃತಿ, ಬೆಳಕು, ರಾತ್ರಿ, ಕನಸು, ರೋಮಾಂಚನ, ಹೂವು, ನಂಬಿಕೆ, ಬದುಕು, ಭ್ರಮೆ, ಏಕಾಂತ, ತವಕ... ಹೀಗೆ ವಿವಿಧ ವಿಷಯಗಳ ಕುರಿತಾದ ಕವಿತೆಗಳಿವೆ. ಕೆಲವು ಕವಿತೆಗಳ ಕುರಿತು ಗಮನಿಸುವುದಾರೆ- 

 ಮೊದಲ ಕವನ ‘ನೆಲ ಜಲ ವಾಯು’ ಇದರಲ್ಲಿ, ಶತಮಾನಗಳಿಂದ ಪ್ರಕೃತಿಯ ಅಂಗಗಳಾಗಿ ಭೂಮಿ, ನೀರು, ವಾಯುಗಳಿವೆ. ಯುದ್ಧ, ಕ್ರಾಂತಿಯಂತಹ ಘಟನೆಗಳನ್ನು ಈ ಭೂಮಿ ಕಂಡಿದೆ. ಆದರೂ ನಾವೇ ಶ್ರೇಷ್ಠರು, ಅಜರಾಮರರು ಎಂದು ಬೀಗಿಕೊಳ್ಳುವವರಿದ್ದಾರೆ. ಜಗಕ್ಕೆ ಬಂದು ಹೋದವರ ಲೆಕ್ಕ ಇವರಿಗೆಲ್ಲ ಗೊತ್ತಿಲ್ಲ ಎನ್ನುತ್ತಾ ಈ ಅಂಶಗಳಿಗೆ ಮಾತೆನ್ನುವುದಿದ್ದರೆ ಎಲ್ಲವನ್ನೂ ವಿವರಿಸುತ್ತಿದ್ದವೇನೋ ಎಂದು ಹೇಳುತ್ತಾರೆ. ‘ಪ್ರಾಣ ಪಕ್ಷಿ’ ಎಂಬ ಕವಿತೆಯಲ್ಲಿ ಸುದೀರ್ಘ ಜೀವನ ಅನುಭವಿಸಿ ಜೀವಚ್ಛವವಾಗಿ ಸಾವಿನ ಮುಂದೆ ಮಲಗಿ, ಕಡೆಯ ಉಸಿರು ಯಾವುದೆಂದು ತಿಳಿಯದೆ, ಫಟ್ಟನೆ ಹೋಗುವ ಪ್ರಾಣ, ಜೀವನಕ್ಕೆ ಏನೂ ಹೇಳದೆ, ಜೊತೆಗೆ ಬದುಕಿದ್ದವರಿಗೆ ಕೃತಜ್ಞತೆಯನ್ನೂ ನತೋರದೆ, ಹೋಗುವುದೆಂದರೆ ಯಾವ ನ್ಯಾಯ ಎಂದು ಪ್ರಶ್ನಿಸುತ್ತಾರೆ ಕವಯತ್ರಿ.

 ‘ನಿವೇದನೆ’ ಎಂಬ ಕವಿತೆಯಲ್ಲಿ 

ವರವಾಗಿ ಬಾ 

ಮಧುರೆಯಿಂದ ಗೋಕುಲಕ್ಕೆ

 ವರವಾಗಿ ಬಾ

 ಇಂತಿ ನಿನ್ನ ಗೆಳತಿ ರಾಧೆ

 ಇಲ್ಲಿ ವರವಾಗಿ ಬಾಳು ಎನ್ನುವದುನ್ನು ಎರಡು ಅರ್ಥದಲ್ಲಿ ಬಳಸಲಾಗಿದೆ. ಭಾಷೆಯ ಬಹುಳತೆಯತ್ತ ಕವಯತ್ರಿ ಎಷ್ಟೊಂದು ಚೆನ್ನಾಗಿ ಕಣ್ಣಿಟ್ಟಿದ್ದಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಕೊನೆಯ ಸಾಲಿನಲ್ಲಿ  ‘ಇಂತಿ’ ಎಂಬ ಪದವಿರುವುದರಿಂದ ಇಡೀ ಕವಿತೆ ರಾಧೆ ಬರೆದ ಪತ್ರ ಎಂಬ ಹೊಸ ಅರ್ಥವನ್ನು ಧರಿಸಿಬಿಡುತ್ತದೆ. ಪತ್ರ ಎಂದು ಕೂಡಲೇ ಖಾಸಗಿತನ, ಆರ್ದ್ರಗುಣ ಎನ್ನುವ ಅರ್ಥ ತನ್ನಷ್ಟಕ್ಕೆ ಇಲ್ಲಿ ಪ್ರಾಪ್ತವಾಗುತ್ತದೆ. ‘ಮಿಂಚು ಹೂ’ ಎಂಬ ಕವನದಲ್ಲಿ

 ದಾರಿ ಹೋಕನ ಲಾಂದ್ರವೇ

 ಕತ್ತಲ ಹುಡುಕಲು 

ಮಿನುಗುತ ಹೊರಟೆ ಎಲ್ಲಿಗೆ

 ಎಂದು ಆರ್ತವಾಗಿ ಪ್ರಶ್ನಿಸುತ್ತಾರೆ. ಕವಿಗೆ ದೀಪ ಕತ್ತಲೆಯ ಕಣ್ಣಿನಂತೆ ಕಾಣುತ್ತದೆ. ಎಂತಹ ನವನವೀನ ಕಲ್ಪನೆ ಇದು. 

‘ಕಾಯಲೇ ನಿನ್ನ’ ಎನ್ನುವ ಕವನದಲ್ಲಿ ಪ್ರಿಯತಮೆಯು ಪ್ರಿಯಕರನ ಆಗಮನಕ್ಕಾಗಿ ಕಾಯುತ್ತಾ ಪುಳಕಿತಳಾಗುತ್ತಾ, ರೋಮಾಂಚಕಕ್ಷಣ ಅನುಭವಿಸುವ ಸಂದರ್ಭವನ್ನು ಕಟ್ಟಿಕೊಟ್ಟಿದ್ದಾರೆ. ತನ್ನ ಪ್ರಿಯಕರ ಬರುತ್ತಾನೆ ಎಂದು ನೆನೆದು ಆ ಕ್ಷಣಕ್ಕಾಗಿ ಕಾತರಳಾಗುತ್ತಿದ್ದಾಳೆ.

 ಗುನುಗುನಿಸುತಿರುವೆ 

ನೀ ಬರುವುದ ಕಾಯುತ 

ನಿರೀಕ್ಷೆಯ ಕಣ್ಣು 

ದಾರಿಗೆ ನೆಟ್ಟು

ಕಿಟಕಿ ಬಲೆಯ ಹಿಂದೆ 

ಕಾಯುತಲಿರುವೆ ಕಾಯುತಲೇ ಇರುವೆ 

ಎನ್ನುತ್ತಾರೆ. ನೀನು ಬಂದಾಗ ತೋಳಿಗೆ ಬಂಧಿಯಾಗಿ, ದೇಹದ ಪರಿಮಳವನ್ನು ಆಘ್ರ್ರಾಣಿಸುತ್ತ ನನ್ನನ್ನೇ ಮರೆಯುತ್ತೇನೆ. ಆ ಕ್ಷಣದಲ್ಲಿ ಕಾಯದೆ ಎಷ್ಟು ಮುತ್ತಿಟ್ಟರೂ ಸಾಲದು, ನೀ ಕೊಡುತ್ತಿರುವೆ, ನಾ ಪಡೆಯುತ್ತಿರುವೆ ನಿನ್ನ ತೋಳಿನಲ್ಲಿ ಸಾಂತ್ವನದ ಮಹಾಪೂರವೇ ಇದೆ ಎಂದು ವಿವರಿಸುತ್ತಾರೆ. ಇದೇ ರೀತಿಯ ಇನ್ನೊಂದು ಕವನ ‘ಕಾಯಿಸದಿರು’ ಇಲ್ಲಿ ನಲ್ಲ ತನ್ನ ನಲ್ಲೆಗೆ  ರಾತ್ರಿಯಲ್ಲಿ ತನ್ನ ಕಾಯಿಸಬೇಡ, ಮುಸಿನಿದ್ದರೂ, ಕೆಲಸವಿದ್ದರೂ, ಕಂದನ ಅಳುವಿದ್ದರೂ ಯಾವುದೇ ನೆಪ ಹೇಳದೆ ತನ್ನೊಂದಿಗೆ ರಮಿಸು, ಹೊಚ್ಚ ಹೊಸ ಹೂವಾಗಿ ಬಾ, ಕಿವಿಯಲಿ ಪಿಸುಗುಡುತ್ತ ಮಧುವ ಹೀರೋಣ, ನಾನು ಕಾದು ಕಬ್ಬಿಣವಾಗಿದ್ದೇನೆ, ಕಾಯಿಸವೇಡ ಎಂದು ಹೇಳುವುದನ್ನು ಬಹು ಸುಂದರವಾಗಿ ಕಟ್ಟಿಕೊಟ್ದಿದ್ದಾರೆ. 

  ‘ಕ್ಷಮಿಸು ಬೆಳಕೆ’ ಎಂಬ ಕವನದಲ್ಲಿ ಈ ನೆಲದಲ್ಲಿ ನ್ಯಾಯದ ನಾಲಿಗೆಯ ಹಾದಿಯಲ್ಲಿ ಸಾಗುವವರು ಕಡಿಮೆ. ಅನ್ಯಾಯದ ಪ್ರಯಾಣಿಕರೇ ಜಾಸ್ತಿ. ಇಲ್ಲಿ ಬಡವ -ಬಲ್ಲಿದ ಭೇದವಿಲ್ಲ. ಹಿರಿಕಿರಿಯವೂ ಗೊತ್ತಿಲ್ಲ.  ಲೂಟಿ ಮಾಡಿದ ಜನರ ನಡುವೆ ಪ್ರಾಮಾಣಿಕ ನಾಲಗೆ ಇಲ್ಲ. ಪಾಪಗಳ ಮೇಲೆ ಬೆಳಕು ಬೀರದಿರಲಿ. ಪ್ರಾಮಾಣಿಕನಾಗಿ ಬೆಳಕಿಗೆ ಬೆಳಕಾಗಿ ಬದುಕುತ್ತೇನೆ. ಇಂಥವರು ಹುಟ್ಟಿ ಬರಲಿ ಎಂದು ಹಾರೈಸುತ್ತಾರೆ

ಪತಿ-ಪತ್ನಿ ಎಂದರೇನು, ಯೌವ್ವನದ ಮತ್ತು ಮುಪ್ಪಿನಲ್ಲಿನಲ್ಲಿ ಅವರ ಸಾಂಗತ್ಯವೇನು, ಅನುಭವದ ಪರಿ ಎಂತಹುದು, ಕತ್ತಲಲ್ಲಿ ಮಿನುಗುವ ಭೂತಾಯಿಯ ಮೂಗುತಿ, ಧರಿತ್ರಿ ತನ್ನಲ್ಲಿ ಅಡಗಿಸಿಕೊಂಡ ಚರಾಚರಗಳು, ಸೂರ್ಯನ ಬೆಳಕಿನ - ನೆರಳಿನ ಆಟ, 

 ಮೌನ ರಾತ್ರಿಯ ಮಾತಾಗುವುದು, ಹೃದಯ ವಿಧಿಯ ಮುಂದಣ ಕರಗಿ  ಕರ್ಪೂರವಾಗುವುದು, ದೀಪಗಳು ಪತಂಗಗಳ ಪ್ರೀತಿಗೆ ಸೋಲದೆ ಮನೆಯಂಗಳದಲ್ಲಿ ಅರಳುವ ಚಿನ್ನದ ಹೂಗಳಂತೆ ಕಾಣುವುದು ... ಹೀಗೆ ವಿವಿಧ ವಿಷಯಗಳ ಕವನಗಳು ಇಲ್ಲಿ ಮೂಡಿಬಂದಿವೆ. 

ಕಾಣಬಹುದು.

ಒಟ್ಟಿನಲ್ಲಿ, ಬಹುಸುಂದರ ಕವನ ಸಂಕಲನ ಇದಾಗಿದೆ. ಎಲ್ಲ ಕವನಗಳು ಸರಳವಾಗಿದ್ದು, ಆಪ್ತವಾಗುತ್ತ್ತವೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೭. ೬. ೨೦೨೬

,,,,,,,,,,,,,,,,,,,,

 

 


 

Comments

Popular posts from this blog