ಸಂವೇದನಾಶೀಲರನ್ನು ಕಾಡುವ 

‘ಕಾಳ ಮಾವನ ಕಡೆ ದಿನಗಳು



ಇದು ಮೊನ್ನೆಯಷ್ಟೇ ಬಿಡುಗಡೆಯಾದ ಕೃತಿ. ‘ಕಾಳ ಮಾವನ ಕಡೆ ದಿನಗಳು’ ಇದು ಲಂಕೇಶ ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದ ಬಿ. ಚಂದ್ರೇಗೌಡ ಅವರ ಕೃತಿ. ‘ಕಟ್ಟೆ ಪುರಾಣ’ ಅಂಕಣದ ಮೂಲಕ ಹೆಸರಾಗಿದ್ದ ಚಂದ್ರೇಗೌಡರು ವಿವಿಧ ಪಾತ್ರಗಳ ಮೂಲಕ ಪ್ರಜಾಪ್ರಭುತ್ವದ ಆತ್ಮವೇ ಆಗಿರುವ ಸಂವಾದದ ಸುಂದರ ಜೀವಂತಿಕೆಯು ಇದರಲ್ಲಿದೆ. ಕಾಳಮಾವನ ಸುದೀರ್ಘ ಬದುಕು ಒಂದು ನೈತಿಕ ರಾಜಕಾರಣದ ಪ್ರತಿಮೆಯಾಗಿದೆ. ಉಳಿದವರ ಮಾತು, ಒಳನೋಟ, ಸತ್ಯ ರಾಜಕಾರಣದ ಸಾಂಸ್ಕೃತಿಕ ಮುಖದಂತೆ ಕಾಣುತ್ತದೆ. ನಮ್ಮ ನೆಲದ ನಾಲಿಗೆಯ ನಿಷ್ಠೆ ಬದಲಾಗಿ ಕೀಳು ರಾಜಕೀಯ ಮುನ್ನೆಲೆಗೆ ಬಂದಿರುವ ಆತಂಕದಲ್ಲಿ ಕಾಳಮಾಮನ ಅಂತ್ಯ ಕಂಡುಬರುತ್ತದೆ. 

ಕಟ್ಟೆ ಪುರಾಣದ ಸದಸ್ಯರು ರಾಜಕೀಯ ಚರ್ಚೆಯಲ್ಲಿ ಮುಳುಗಿರುತ್ತಾರೆ. ನಮ್ಮ ಕ್ಷುದ್ರ ರಾಜಕಾರಣದ ಒಂದು ನೋಟ ಇದರಲ್ಲಿದೆ. ಧರ್ಮರಾಜಕಾರಣದ ನಿಜವಾದ ಮುಖವಿದೆ. ಸಾಂಸ್ಕೃತಿಕ ಕಾಳಜಿ ಇದೆ. ಅದರ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಹಲವಾರು ಘಟನೆಗಳು ಬಂದು ಹೋಗುತ್ತವೆ.

   ನಾಶವಾಗುತ್ತಿರುವ ಹಳ್ಳಿಗಳ ಬದುಕು, ಸಂಸ್ಕೃತಿ, ಹಳ್ಳಿಯನ್ನು ಬಿಟ್ಟು ಪೇಟೆಯತ್ತ ಸಾಗಿರುವ ಮಹಿಳೆಯರು, ಯುವ ಜನಾಂಗ,  ಪೇಟೆಯಲ್ಲಿ ಮನೆ ಕೆಲಸ ಮಾಡಿಕೊಂಡು ಹಳ್ಳಿಯ ಹೊಲ,ಗದ್ದೆ, ಕುಂಟೆಗಳನ್ನು ಮರೆತಿರುವವರು, ಡಿಜಿಟಲ್ ಯುಗದಲ್ಲಿ ಮನುಷ್ಯನ ನಡುವೆ ಸಂವಾದವು ಸತ್ತು ಹೋಗಿ ಗಾಢವಾದ ವಿಷಾದವನ್ನು ಹುಟ್ಟು ಹಾಕಿರುವುದು, ರಾಜಕೀಯ ಸಂಸ್ಕೃತಿಯು ವಿಚಿತ್ರ ಮತ್ತು ವಿಕೃತ ರೂಪ ಪಡೆಯುತ್ತಿರುವುದು, ಜಾತಿ, ಧರ್ಮ, ರಾಜಕೀಯ, ಸಿನಿಮಾ ಹೀಗೆ ಯಾವುದರಲ್ಲೂ ನೆಮ್ಮದಿ ಕಾಣದೆ, ಭರವಸೆ ಹುಟ್ಟಿಸದೆ ಇಡೀ ಸಮಾಜದ ಅಂತಃಶಕ್ತಿಯೇ ಕುಸಿದು ಹೋಗುವಂತಹ ನಿರಾಶೆಯಿಂದ ಇಂದಿನ ಜನಾಂಗ ಇರುವುದನ್ನು ಇದರಲ್ಲಿ ಚಿತ್ರಿಸಲಾಗಿದೆ.

 ದೇಶದ ಆತ್ಮವೇ ಸೊರಗಿದ ವಿಷಾದದ ಛಾಯೆಯು ಸಾವಿನ ಹಾಸಿಗೆಯಲ್ಲಿರುವ ಕಾಳಮಾವನ ಸಾವಿನಲ್ಲಿ ಗೋಚರಿಸುತ್ತದೆ. ಕಾರ್ಪೊರೇಟ್ ಕುಳಗಳ ಕಾಸಿನಲ್ಲಿ ಕಾರಬಾರು ನಡೆಸುತ್ತಿರುವ, ಆತ್ಮಹತ್ಯೆ ಹಾದಿ ಹಿಡಿದಿರುವ ರೈತರು, ಹಿಂದಿನವರ ಆದರ್ಶ ದಾಂಪತ್ಯ ಮರೆಯಾಗಿರುವುದು, ಹಳ್ಳಿಯ ಚಹರೆ ಬದಲಾಗಿ ಹೊಸಬಗೆಯ ಜೀತಗಾರಿಕೆಯಲ್ಲಿ ನರಳುತ್ತಿರುವುದು ಕೃತಿಯಲ್ಲಿ ಬಹು ಸುಂದರವಾಗಿ, ಮಾರ್ಮಿಕವಾಗಿ ನೇಯಲ್ಪಟ್ಟಿದೆ.  ಕೃತಿಯಲ್ಲಿ ಮುಖ್ಯ ಪಾತ್ರಧಾರಿಗಳೆಂದರೆ ಕಾಳ ಮಾವ, ಆತನ ಹೆಂಡತಿ, ಸೀರ, ಉಗ್ರಿ, ವಾಟಿಸ್ಸೆ, ಜುಮ್ಮಿ ಮತ್ತು ಹೋಟೆಲ್ ಚಿಕ್ಕಣ್ಣ ಇವರೆಲ್ಲರೂ ಒಟ್ಟಾಗಿ ಸೇರಿ ಪ್ರಸ್ತುತ ವಿಚಾರಗಳನ್ನು ಅವರವರ ಭಾವಕ್ಕೆ ತಕ್ಕಂತೆ ಮತ್ತು ಹಿಂದಿನ ರಾಜಕಾರಣವನ್ನು ಚರ್ಚಿಸುವುದನ್ನು ಇಲ್ಲಿ ತೋರಿಸಲಾಗಿದೆ.

 ಕಾಳ ಮಾವ ಭೀಷ್ಮನಂತೆ ಬಿಳಿ ಗಡ್ಡ, ಮೀಸೆ, ಕೂದಲು ಬಿಟ್ಟುಕೊಂಡು ಪರಾವಲಂಬಿಯಾಗಿ ಹಾಸಿಗೆಯಲ್ಲಿ ಮಲಗಿರುತ್ತಾನೆ. ಆತನ ಅನಾರೋಗ್ಯದ ಸುದ್ದಿ ಕೇಳಿ ಈ ಮೇಲಿನ ಪಾತ್ರಧಾರಿಗಳು ಒಬ್ಬೊಬ್ಬರೇ ಬಂದು ಸೇರಿಕೊಳ್ಳುತ್ತಾರೆ. ಅಲ್ಲಿಂದ ಚರ್ಚೆಗಳು ಪ್ರಾರಂಭವಾಗುತ್ತವೆ. ರೈತರು ಯಾವುದೇ ಆದಾಯವಿಲ್ಲದೆ ಹಳ್ಳಿಯಲ್ಲಿ ಅನಾಥರಾಗಿರುವುದರಿಂದ ಆರಂಭವಾಗುವ ಚರ್ಚೆ, ಬೇಸಾಯದ ಸಾಮಗ್ರಿಗಳು ಕಾಣೆಯಾಗಿ ಮುಗಿದು ಹೋದ ಯುಗವೊಂದರ ದರ್ಶನವನ್ನು ಮಾಡಿಸುತ್ತದೆ. ಬಹುತೇಕ ರೈತರು ಈಗ ಮುದುಕರಾಗಿದ್ದು ಕಾಲದ ಅಂತ್ಯದಲ್ಲಿ ಏನೇನು ಘಟನೆಗಳನ್ನು ನೋಡಬೇಕೋ ಎಂಬ ಚಿಂತೆಯಲ್ಲಿ ಮುಳುಗಿರುವುದ ನ್ನು  ಅವರು ಚರ್ಚಿಸುತ್ತಾರೆ. ರಾಜಕೀಯದಲ್ಲಿ ಬಡವರ ಹೆಸರುಗಳನ್ನು ಹೇಳಿಕೊಂಡು ಸರಕಾರದ ಯೋಜನೆಗಳ ದುಡ್ಡು ಹೊಡೆಯುವುದು, ಬಿಟ್ಟಿ ಸಿಗುವ ಯಾವುದಕ್ಕೂ ಬೆಲೆ ಇಲ್ಲ ಎನ್ನುವುದನ್ನು ಜನ ತಿಳಿದುಕೊಳ್ಳದೇ ಇರುವುದು, ಕಣ್ಮರೆಯಾಗುತ್ತಿರುವ ಹಳ್ಳಿಗಳ ಪ್ರಸಿದ್ಧ ದನಗಳ ಜಾತ್ರೆ, ಆಕಳು, ಕರು, ಎಮ್ಮೆ ಯಾವುದೂ ಊರಲ್ಲಿಲ್ಲದೆ ಕೊಟ್ಟಿಗೆಗಳು ಹಾಳು ಬಿದ್ದಿರುವುದು, ಮನೆಯಲ್ಲಿ ಗಂಡ -ಹೆಂಡತಿಯ ಮಧ್ಯೆ ವಿವಾಹ ವಿಚ್ಛೇದನಗಳು ಹೆಚ್ಚಾಗಿರುವುದು, ವಿವಿಧ ವಿಚಾರಗಳಿಂದ ಬೇಸತ್ತು ಅಥವಾ ವಿವಾದ ಸೃಷ್ಟಿಸಿಕೊಂಡು ಹಳ್ಳಿಗಳಲ್ಲಿ ಹಲವಾರು ಯುವಕರು ನೇಣು ಹಾಕಿಕೊಳ್ಳುತ್ತಿರುವುದು, ಭತ್ತದ ಹೊಲಗಳೆಲ್ಲ ಬೀಳು ಬಿದ್ದಿರುವುದು, ಸರಕಾರ ಬಡಬಗ್ಗರಿಗೆ ಅಕ್ಕಿ, ರಾಗಿ, ಪಿಂಚಣಿ ಕೊಡಲಿಕ್ಕೆ ಶುರು ಮಾಡಿದ ಮೇಲೆ ಗದ್ದೆಗಳೆಲ್ಲ  ಅವನತಿಯ ಅಂಚಿನಲ್ಲಿರುವುದು, ವ್ಯವಸಾಯ ಮಾಡುವವರಿಗೆ ಹೆಣ್ಣು ಸಿಗದಿರುವುದು, ಅಂತರ್ಜಾತಿಯ ವಿವಾಹಗಳನ್ನು ಪ್ರೋತ್ಸಾಹಿಸುತ್ತಿರುವುದು ಮೊದಲಾದ  ಸಮಸ್ಯೆಗಳನ್ನು ಸದಸ್ಯರು ಇಲ್ಲಿ ಅವರವರ ಧಾಟಿ ಮತ್ತು ಚಿಂತನೆಯಲ್ಲಿ ಬಹು ರಂಜನೀಯವಾಗಿ ಚರ್ಚಿಸುತ್ತಾರೆ.

  ಕಾಳ ಮಾವ ಊರಿಗೆ ಬಹಳ ದೊಡ್ಡವನಾಗಿರುತ್ತಾನೆ. ಈ ಹಿಂದೆ ಅವನ ಯಜಮಾನಿಕೆಯ  ವೇಳೆ ಇಡೀ ಊರೇ ಆತನ ಮಾತನ್ನು ಕೇಳುತ್ತಿತ್ತು. ಎಷ್ಟೋ ಪಂಚಾಯತಿಗಳನ್ನು ನಡೆಸಿ ಯಶಸ್ವಿಯಾಗಿದ್ದನು. ಗಾಂಧೀಜಿಯಂತೆ ಸಾವಿನ ಭಯ ತನಗೆ ಇಲ್ಲ ಎಂದು ಆತ ಸದಸ್ಯರೊಡನೆ ಹೇಳುತ್ತಾನೆ.

ಕುಡುಕನಾದ ಮತ್ತು ರಾಜಕಾರಣದ ಒಳಹೊರಗುಗಳನ್ನೆಲ್ಲ ಬಲ್ಲ ಬುದ್ಧಿವಂತ ವಾಟಿಸ್ಸೆ ಎನ್ನುವವನು  ಇದೇ ವೇಳೆ ಅಲ್ಲಿಗೆ ಆಗಮಿಸುತ್ತಾನೆ. ‘ತಾನು ಬಿಜಿಯಾಗಿದ್ದೇನೆ. ಪಾಲಿಟಿಕ್ಸ್‌ನಲ್ಲಿ ಇರುವುದರಿಂದ ಊರಲ್ಲಿ ಇರಲಿಕ್ಕಾಗುವುದಿಲ್ಲ. ಊರಲ್ಲಿ ಇದ್ದರೆ ವ್ಯಾಲ್ಯೂ ಕಡಿಮೆ. ಅದಕ್ಕೆ ಹೊರಗಡೆ ಹೋಗ್ತಾ ಇದ್ದೀನಿ’ ಎಂದು ಹೇಳುತ್ತಾನೆ. ‘ನನ್ನ ಮಗಳ ಮದುವೆ ಬೆಂಗಳೂರಿನಲ್ಲಿರುವ ಪೊಲೀಸನೊಂದಿಗೆ ನಿಶ್ಚಯವಾಗಿದ್ದು, ಅಳಿಯನಿಗೆ ರೆಸ್ಪೆಕ್ಟ್ ಕೊಡುವುದಕ್ಕಾಗಿ ಕುಡಿತವನ್ನು ಬಿಟ್ಟಿದ್ದೇನೆ’ ಎನ್ನುತ್ತಾ  ರಾಜಕೀಯದ ಮಾತನ್ನು  ಶುರು ಮಾಡುತ್ತಾನೆ.

 ದೇವೇಗೌಡ್ರು, ಸಿದ್ದರಾಮಯ್ಯ, ಎಸ್ ಎಮ್ ಕೃಷ್ಣ, ಜೆ ಎಚ್ ಪಟೇಲ್, ಯಡಿಯೂರಪ್ಪ, ಎಂ ಪಿ ಪ್ರಕಾಶ್, ರೇವಣ್ಣ, ರೇವಣ್ಣನ ಪತ್ನಿ ಮುಂತಾದವರ ಬಗ್ಗೆ  ಚರ್ಚೆ ನಡೆಯುತ್ತದೆ. ರೇವಣ್ಣನ ಮಗ ಕೆಟ್ಟ ಕೆಲಸ ಮಾಡಿ ಜೈಲಿಗೆ ಹೋದುದನ್ನು ಹೇಳುತ್ತಾನೆ. ಟಿವಿ ಅವರು ಎಲ್ಲರ ಪರ್ಸನಲ್ ವಿಷಯವನ್ನು ಬೀದಿಗೆ ಬೀಳಿಸುತ್ತಿವೆ, ಜನಗಳ ಎದುರಿಗೆ ಏನೂ ಮಾತಾಡಂಗಿಲ್ಲ. ಅದನ್ನು ತಗೊಂಡ್ ಹೋಗಿ ಟಿವಿಯಲ್ಲಿ ಹೇಳುತ್ತಾರೆ ಎಂದು ಹೇಳುವನು. ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಪಾದಯಾತ್ರೆ ಮಾಡುವಾಗ ನಾಗಮಂಗಲದ ದಾರಿಯಲ್ಲಿ ಬರುವಾಗ ತಾನು ಹೋಗಿ ಅವರನ್ನು ಮಾತನಾಡಿಸಿದ್ದನ್ನು ವಿವರಿಸುತ್ತಾನೆ. ಅಲ್ಲದೆ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದನ್ನು ವಿವರಿಸುತ್ತಾನೆ.

 ಕುಟುಂಬ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತಾ ಡೆಮಾಕ್ರಸಿ ಸಿಸ್ಟಮ್ ಆತ್ಮವನ್ನು ಎಸೆಯಲಾಗಿದೆ. ರಾಜಕಾರಣಿಗಳ ಮೊಮ್ಮಕ್ಕಳು, ಮಕ್ಕಳಿಂದಲೇ ಡೆಮಾಕ್ರಸಿಗೆ ಡೇಂಜರ್ ಆಗಿದೆ. ರೈತರ ಮೇಲೆ ಏನೇನೋ ಕಾನೂನು ತಂದಿದ್ದರಿಂದ  ತಿಂಗಳುಗಟ್ಟಲೆ ಡೆಲ್ಲಿಯಲ್ಲಿ ಪ್ರತಿಭಟಿಸಿದರು. ರಸ್ತೆಯ ಮೇಲೆ ಕಬ್ಬಿಣದ ಮುಳ್ಳು ನೆಟ್ಟರು. ಆದರೂ ರೈತರು ಬಗ್ಗಲಿಲ. ಆ ಟೈಮಲ್ಲಿ ೭೫೦ ರೈತರು ಸತ್ತರು ಎಂದು ವಿವರಿಸುತ್ತಾನೆ.

   ಧಾರ್ಮಿಕ ದ್ವೇಷ,  ಜನಪರ ಅಧಿಕಾರಿಯೊಬ್ಬರು ಸ್ವಾಮೀಜಿಯಾಗಿದ್ದು,  ರಾಜಕುಮಾರ್ ಕಾಲದ ಸಿನಿಮಾ ಯುಗ, ನಟ ದರ್ಶನ ಜೈಲಿಗೆ ಹೋದದ್ದು,   ವರ್ತಮಾನದ ನೆಮ್ಮದಿ ಕೆಡಿಸುವ ರಾಜಕೀಯ,  ದ್ವೇಷ ಮತ್ತು ಸುಳ್ಳು ಹರಡುತ್ತಿರುವುದು,  ಸಾಂವಿಧಾನಿಕ ಆಶಯಗಳಿಗೆ ಧಕ್ಕೆ ಬರುತ್ತಿರುವುದು ಇಲ್ಲಿ ಪ್ರಸ್ತಾಪವಾಗುತ್ತದ. ಕಾಳಮಾವ ದೇವೇಗೌಡರ  ಮತ್ತು ನಟ ರಾಜಕುಮಾರ್ ಅಭಿಮಾನಿಯಾಗಿರುತ್ತಾನೆ. ಅವರ ಬಗ್ಗೆ ಚರ್ಚೆಗಳು ನಡೆಯುತ್ತವೆ. ಹೀಗೆ ಯಾವುದರಲ್ಲೂ ನೆಮ್ಮದಿ ಕಾಣದೆ, ಭರವಸೆ ಹುಟ್ಟಿಸದೆ ಇರುವುದು ಅವರನ್ನು ಚಿಂತೆಗೀಡು ಮಾಡುತ್ತದೆ. ಇದರಿಂದ ಕಾಳಮಾವನ ಆತ್ಮ ಸೊರಗುತ್ತದೆ. ಅದು ಅವನ ಸಾವಿನಲ್ಲಿ ಗೋಚರಿಸುತ್ತದೆ. ಇಂದಿನ ರಾಜಕೀಯ, ಸಾಂಸ್ಕೃತಿಕ ವಿಚಾರಗಳ ವಿಕಾರಗಳನ್ನು ಇಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಲಾಗಿದೆ. ಈ ಎಲ್ಲಾ ವಿಚಾರಗನ್ನು ಕೇಳುತ್ತಲೇ ಕಾಳಮಾವನ ಉಸಿರಾಟ ನಿಲ್ಲುತ್ತದೆ. 

ಅಂದರೆ  ರಾಜಕೀಯದಲ್ಲಿನ ನೈತಿಕತೆ ನಾಶವಾಗಿ, ದೇಶದ ಆತ್ಮವೇ ಸೊರಗಿರುವುದು, ಹಳ್ಳಿ, ಕುಟುಂಬ, ಕೃಷಿ . ನಮ್ಮ ಸಂಸ್ಕೃತಿ ಎಲ್ಲ ನಾಶವಾಗಿ ಎಲ್ಲರೂ ನಗರದತ್ತ ಹೋಗುತ್ತಿರುವುದನ್ನು ಆತ ಸಹಿಸದಂತಾಗುತ್ತಾನೆ. ಅದು ಆತನಿಗೆ ನೋವು ತರುತ್ತದೆ. ಇಂದಿನ ಈ ಎಲ್ಲ ಪರಿಸ್ಥಿತಿ ಗ್ರಾಮೀಣ ಜನರನ್ನು ಅದರಲ್ಲೂ ವೃದ್ಧ್ದರನ್ನು ಹೇಗೆ ಕಾಡುತ್ತದೆ, ಚಿಂತೆಗೀಡು ಮಾಡುತ್ತದೆ. ರಾಜಕೀಯ ಚಿಂತನೆ ಮಾಡುವವರ ನೈತಿಕ ಸಂಕಟವನ್ನು ಬಿಂಬಿಸುವಲ್ಲಿ ಈ ಕೃತಿ ಯಶಸ್ವಿಯಾಗಿದೆ.   

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

 ೨೪.೬.೨೦೨೬

,,,,,,,,,,,,,,,,,,,,,,

 


Comments

Popular posts from this blog