ಪ್ರೀತಿ, ಸರಸವೇ ಸ್ಥಾಯಿಯಾದ


‘ನನ್ನ ಪೆದ್ದಿ’ 



ಕೆನರಾ  ಬ್ಯಾಂಕ್‌ನ ನಿವೃತ್ತ  ಅಧಿಕಾರಿ ಎನ್ ಟಿ ಎರಿಸ್ವಾಮಿ ಅವರ ‘ನನ್ನ ಪೆದ್ದಿ’ ಈ ಕೃತಿಯಲ್ಲಿ ಪ್ರೀತಿಯದೇ ಪಾರುಪತ್ಯ. ಪ್ರೀತಿಯೆಂದ ಕ್ಷಣ ಗಂಡು -ಹೆಣ್ಣಿನ ಸಹಜ ಆಕರ್ಷಣೆಯ ಅಭಿವ್ಯಕ್ತಿ ಮಾತ್ರವಾಗಿರದೆ, ಮಗು, ಮಡದಿ, ಮನೆ ಮೊದಲಾದ ಸಾಂಸಾರಿಕ ಭಾವನೆಗಳ ಅಭಿವ್ಯಕ್ತಿಯನ್ನು ಇಲ್ಲಿ ಕವಿ ಚಿತ್ರಿಸಿದ್ದಾರೆ. ಹಾಗಾಗಿ ಇಲ್ಲಿನ ಕವನಗಳು ಎಲ್ಲಾ ಸ್ಥರದವರಿಗೂ ರುಚಿಸುತ್ತವೆ. ವಿಶೇಷವೆಂದರೆ, ಇಲ್ಲಿನ ಕವನಗಳು ಮುಕ್ತ ಛಂದಸ್ಸಿನಲ್ಲಿವೆ.  

  ಸಂಕಲನದಲ್ಲಿ ಒಟ್ಟು ೩೪ ಕವನಗಳು ಇವೆ.  ನವೋದಯ ಕಾವ್ಯದ ಕವಿಗಳು ಪ್ರಣಯ ಗೀತೆ, ದಾಂಪತ್ಯ ಗೀತೆಗಳನ್ನು ರಚಿಸಿದ್ದಾರೆ. ಈ ಕವನ ಸಂಕಲನದಲ್ಲಿಯೂ ಸಹ ಕವಿ ಎರಿಸ್ವಾಮಿಯವರು ಪ್ರೀತಿ ಸರಸವೇ ಸ್ಥಾಯಿಯಾಗಿದೆ. ಗಂಡ- ಹೆಂಡತಿಯ ಅತಿಯಾದ ಪ್ರೀತಿಯೇ ಒಬ್ಬರನ್ನೊಬ್ಬರು ಪೆದ್ದ-ಪೆದ್ದಿ ಎಂದು ಕರೆಯುವ ಸಲಿಗೆಯನ್ನು ತಂದಿದೆ. ಆದ್ದರಿಂದಲೇ 

ಇಂದ್ರಲೋಕವನೊಲ್ಲೆ ಚಂದ್ರಲೋಕವನೊಲ್ಲೆ

ಇಂದಿರೆಯು ನೀನಿರಲು ನಾಕವಿಲ್ಲೆ

ಎಂದು ಅವನು ಹೇಳಿದರೆ ಅದಕ್ಕೆ ಉತ್ತರವಾಗಿ ಆಕೆ 

ಅನ್ಯ ದೇವರಿಗೆಲ್ಲ ಕೈಯ ಮುಗಿವುದು ಬಿಟ್ಟೆ 

ಎದೆಯೊಳಗೆ ನಿನ್ನದೇ  ಜಪವನಿಟ್ಟೆ (ಜೊತೆಗಿರುವೆ ಪೆದ್ದ ಕವನ)

 ಎಂದು ಉತ್ತರಿಸುತ್ತಾಳೆ.

ಪ್ರೀತಿಯಿಂದಲೇ ಬದುಕನ್ನು ನಾಕವಾಗಿಸುವ ಹೆಣ್ಣು ಕವಿಯ ಮನಸ್ಸನ್ನು ಆವರಿಸಿಕೊಂಡಿರುವುದನ್ನು ಇಲ್ಲಿನ ಭೌತಿಕ ಕವನಗಳಲ್ಲಿ ಕಾಣಬಹುದು. ಮಾತುಗಳು ಬಹಳ ಸರಳವಾಗಿದ್ದರೂ ಇಲ್ಲಿನ ಭಾವ ಆರ್ದ್ರವಾಗಿದೆ, ಚಿಂತನೆಗೆ ಹಚ್ಚುತ್ತದೆ. ಮಾತುಗಳು ಓದುಗರ ಮನಸ್ಸಿನಲ್ಲಿ ನಿಲ್ಲುವಂತೆ ಕೃತಿ ಮಾಡಿದೆ.

ಪ್ರೀತಿಯಲಿ ತ್ಯಾಗವಿದೆ, ಪ್ರೀತಿಯಲಿ ಸ್ವಾರ್ಥವಿದೆ,

 ಪ್ರೀತಿಯಲ್ಲಿ ಎಲ್ಲವಿದೆ ಕೇಳು ಜಾಣೆ

 ಜೊತೆಗೂಡಿ ನೀನಿರಲು  ಜಗವ ಜಯಿಸಿದ ಬಿಮ್ಮು

 ಜನುಮ ಜನುಮಕು ಜೋಡಿ  ಪೆದ್ದಿ ನೀನು (ನಿನ್ನ ಪ್ರೀತಿಗಿಂತ ಕವನ)

 ಎಂದು ಕವನದಲ್ಲಿ ಹೇಳುತ್ತಾರೆ.

ಮೊದಲ ಕವನ ‘ಅಂಗಳದ ತುಂಬೆಲ್ಲ’ ಇದರಲ್ಲಿ ಹೆಣ್ಣು ಇಲ್ಲದ ಮನೆಯ ದೇವರಿಲ್ಲದ ಗುಡಿಯಂತೆ ಎಂಬ ಮಾತಿದೆ. ಪದೇ ಪ್ರಕಾರ ಮನೆಯಲ್ಲಿ ಹೆಣ್ಣು ಇಲ್ಲದಿದ್ದಾಗ ಅಂಗಳದ ತುಂಬಾ ಮಲ್ಲಿಗೆ ಅರಳಿದ್ದರೂ ಅದರಿಂದ ಪ್ರಯೋಜನವೇ ಇಲ್ಲ. ಪತಿಯ ಎದೆಯೆಂಬ ಮಲ್ಲಿಗೆ  ಬಳ್ಳಿ ಪತ್ನಿ ಇಲ್ಲದೆ ಬಾಡಿದ್ದರೂ ಅದಕ್ಕೆ ನೀರೆರೆಯುವವರಿಲ್ಲ. ವಿರಹ ವೇದನೆಯಿಂದ ಹಕ್ಕಿಹಾಡುತ್ತಿದ್ದರೂ ಅದನ್ನು ಆಲಿಸುವ ದನಿ ಇಲ್ಲ. ಸೂರ್ಯನ ಪ್ರತಿಭೆ ಪತಿಯ ಎದೆಯಲ್ಲಿ ದಹಿಸುತ್ತಿದ್ದರೂ ಮನೆಗೆ ತಂಪು ಇರುವವಳಿಲ್ಲ.  ಬಿಂಕದ ನಗುವಿಲ್ಲ, ಹೀಗೆ ಮನೆಯೊಡತಿ ಇಲ್ಲದಿದ್ದರೆ ಅದು ದೇವರಿಲ್ಲದ ಗುಡಿಯಂತಾಗುತ್ತದೆ ಎಂದು ವಿವರಿದಿದ್ದಾರೆ.

 ‘ನಿನ್ನ ನಗೆಯು’ ಎನ್ನುವ ಕವನದಲ್ಲಿ, ನಕ್ಕರೆ ಅದು ಜೀವ ಸಂಜೀವಿನಿಯಂತೆ ಆಗಸದ ತುಂಬೆಲ್ಲ ನಕ್ಷತ್ರಗಳಿಂದ ಚಂದಿರನನ್ನು ನಾಚಿಸುತ್ತದೆ. ತುಟಿಯಲ್ಲಿ ಕಂಪು ಸೂಸುತ್ತದೆ. ಸಪ್ತಸ್ವರಗಳ ತಂತಿ ಮೀಟಿದಂತಾಗುತ್ತದೆ. ಮುಖಾರವಿಂದ ಅರಳಿ ತಳಿರು ಮಾವಿನಂತೆ ಅಂದವಾಗಿ ಕಾಣುತ್ತದೆ. ನಿಜಕ್ಕೂ ಸ್ವರ್ಗದ ಬಂದಂತಾಗುತ್ತದೆ ಎಂದು ಹೇಳುವ ಕವಿ, 

ನೋವು ಮರೆಸುವ ನಿನ್ನ ಹೂನಗೆಯು ಬಲು ಚೆನ್ನ

 ಜನುಮ ಜನುಮಕ್ಕು ನಿನ್ನ ಪ್ರೀತಿ ಚೆನ್ನ 

ಎಂದು ಹೇಳುತ್ತಾರೆ. ‘ಎದೆಯ ಬಣವೆಗೆ ಬೆಂಕಿ’ ಎನ್ನುವ ಕವನದಲ್ಲಿ ಗೆಳತಿಯಲ್ಲಿ ಪ್ರೇಮದ ಕಿಚ್ಚನ್ನು ಹಚ್ಚಿ ತನ್ನನ್ನು ಕೊಲ್ಲದಿರು ಎಂದರೆ, ಇನ್ನೊಂದು ಕವನ ‘ಪ್ರೀತಿಯಲ್ಲಿ ಈ ಬದುಕು’ನಲ್ಲಿ  ಮಡದಿ ಮನೆಯಲ್ಲಿ ಇಲ್ಲದಿದ್ದರೆ ಆ ಮನೆ ನರಕದಂತಾಗುತ್ತದೆ. ಮುದ್ದು ಮಾಡುವ ಹೆಣ್ಣು ಮನೆಯೊಳಗಿದ್ದರೆ ಮನೆಯೊಳಗಿನ ನೋವೆಲ್ಲ ಮಾಯವಾಗುತ್ತದೆ ಎಂದು ವಿವರಿಸುತ್ತಾರೆ.

 ‘ಹೋಗಿ ಬರುವೆನು ರಾಯ’ ಎಂಬ ಕವನದಲ್ಲಿ ತವರು ಮನೆಗೆ ಹೋಗಿ ಬರುತ್ತೇನೆ. ಅಲ್ಲಿ ಅಮ್ಮ ಆಸೆಯಿಮದ ಇರುವರಂತೆ.  ಅಣ್ಣ, ಅತ್ತಿಗೆ ಕಾತರದಿಂದ ಕಾಯುತ್ತಿರುತ್ತಾರೆ. ಗೆಳತಿ ಗೌರಿಯ ಮದುವೆ ಇದೆಯಂತೆ. ಅದನ್ನು ಮುಗಿಸಿ ಬರುವೆ. ಪ್ರೀತಿಯಲ್ಲಿ ಅಪ್ಪ ಕರೆದಿರುವಾಗ  ಮನಸ್ಸು ಮಡಿಲಿನವರಿಗಾಗಿ ಕಾದಿದೆ. ತವರಿಗೆ ತೆರಳಿದರೂ ನಿನ್ನನೆಂದೂ ಮರೆಯುವುದಿಲ್ಲ. ಕೋಪ ಮಾಡಿಕೊಳ್ಳಬೇಡ. ನನ್ನ ಪ್ರೇಮದ ಆಣೆ ಎಂದು ಪ್ರಿಯತಮೆ ಹೇಳುವುದನ್ನು ಸೊಗಸಾಗಿ ವಿವರಿಸಿದ್ದಾರೆ. 

ಹೋಗಿ ಬರುವೆನು ರಾಯ  ತವರು ಮನೆಗೆ 

ನೆನೆದಾಗ ನಾನಿರುವೆ  ನಿನ್ನ ಬಳಿಗೆ 

ಎಂದು ಮೈಸೂರು ಮಲ್ಲಿಗೆ ಕವನ ಸಂಕಲನ ನೆನಪಿಸುವ ಇಲ್ಲಿ ಒಂದು ಕವನವಿದೆ. 

‘ಇಲ್ಲದಿರು ಓ ಗೆಳತಿ’ ಕವನದಲ್ಲಿ ಸಿಡಿಲು ಎರಗಿದರೂ ನನ್ನ ಕೊಲ್ಲಲಾಗದು. ಆದರೆ ಗೆಳತಿಯ ಮಾತು ಬರಸಿಡಿಲಿನಂತೆ ಕೊಲ್ಲುತ್ತಿದೆ ಎನ್ನುತ್ತಾರೆ. ‘ಬಾರಯ್ಯ ಬಾg’ ಎನ್ನುವ ಕವನದಲ್ಲಿ ತನ್ನೊಂದಿಗೆ ಬಂದು ಜೊತೆಯಾಗು, ಮಕರಂದವನ್ನು ಸವಿದು ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸು, ಈ ಜಗದಲ್ಲಿ ಈ ಮನೆಯಲ್ಲಿ ಏಕಭಾವವನ್ನು ತುಂಬು. ನನ್ನ ದೇಹ ನಿನ್ನ ಸಂಗ ಬಯಸುತ್ತಿದೆ. ನೀನು ಬಂದು ಸೇರಿದರೆ ಈ ಮನೆಯ ಸ್ವರ್ಗವಾಗುತ್ತದೆ ಎಂದು ಪ್ರೇಮಿ ಕರೆಯುತ್ತಾಳೆ.

 ‘ನನ್ನವಳು’ ಎನ್ನುವ ಕವನದಲ್ಲಿ  ಪತ್ನಿಯು ಮನೆಯಲ್ಲಿ ನೋವಿರಲಿ, ನಲಿವಿರಲಿ, ಅಳುವಿರಲಿ, ನಗುವಿರಲಿ ಸಮಭಾವದಿಂದ ನಡೆಯುತ್ತಾಳೆ. ಬದುಕು ನೋವುಗಳನ್ನೆಲ್ಲ ನೀಗಿಸಬಲ್ಲ ಚತುರೆ ಅವಳು. ಇಡಿಯ ಸಂಸಾರವನ್ನು ಕೈಯಲ್ಲೇ ಹಿಡಿದುಕೊಂಡು ಸ್ವರ್ಗವನ್ನೇ ತೋರಿಸುತ್ತಾಳೆ ಎಂದು ವಿವರಿಸುತ್ತಾರೆ. ಕವನ ಸಂಕಲನ ಶೀರ್ಷಿಕೆ ಕವನ ‘ನನ್ನ ಪೆದ್ದಿ’ ಇದರಲ್ಲಿ ಪತ್ನಿಯನ್ನು ಪ್ರೀತಿಯಿಂದ ಪೆದ್ದಿ ಎಂದು ಕರೆಯುವ ಕವಿ, ಅವಳು ತನ್ನದೇ ಆದ  ಸಾಮಾಜ್ಞಿ ಆಗಿದ್ದಾಳೆ. ಹೃದಯ ಮಂದಿರದಲ್ಲಿ ನೆಲೆಗೊಂಡು ನಲಿಯುತ್ತಿದ್ದಾಳೆ. ಪ್ರೇಮ ದೇವತೆಯಾಗಿ ನಿತ್ಯವೂ ಪೂಜಿಸುತ್ತಾಳೆ. ದೇಹದ ಜೀವಕಣವೇ ಇವಳಾಗಿ ಚೈತನ್ಯ ನೀಡುತ್ತಿದ್ದಾಳೆ. ಜೀವ ಜಲದ ನಡುವೆ ಪ್ರೇಮ ಜಲವಾಗಿದ್ದಾಳೆ. ದೇಹದ ಪ್ರಾಣ ಪ್ರಾಣವೇ ಆಗಿದ್ದಾಳೆ ಎಂದು ವಿವರಿಸುತ್ತಾರೆ 

ಅದೇ ರೀತಿಯ ‘ಜೊತೆಗಿರುವೆ ಪೆದ್ದ’ ಎಂಬ ಕವನದಲ್ಲಿ ಗಂಡನನ್ನು ಪೆದ್ದ ಎಂದು ಪ್ರೀತಿಯಿಂದ ಸಂಬೋಧಿಸುವ ಗೆಳತಿ 

ಬೆಂಬಿಡದೆ ನಿನ್ನ ಜೊತೆ  ಬಾಳ ಬಯಸುವ ಬಯಕೆ 

ಆಸರೆಯ ನೀಡೆನಗೆ  ಉಸಿರಾಗು ಪೆದ್ದ

 ಎನ್ನುತ್ತಾ ನಿನ್ನ ಹೃದಯ ಮಂದಿರದಲ್ಲಿ ಸದಾ ನೆಲೆಸುತ್ತೇನೆ. ಮೂರು ಲೋಕದಲ್ಲಿ ನೀನೇ ನನಗೆ ಜೋಡಿಯಾಗಲಿ. ಎಷ್ಟೇ ನಿಂದನೆಗಳು ಬರಲಿ, ಅದನ್ನು ನುಂಗಿ ಪ್ರೇಮಪುರವನ್ನೇ ಕಟ್ಟೋಣ. ಜಗತ್ತಿನ ಎಷ್ಟೇ ಸಿರಿ ಸಂಪತ್ತಿಗಿಂತ ನಿನ್ನ ಸಂಗವಿದ್ದರೆ ಸಾಕು. ಅದೇ ನನಗೆ ಸ್ವರ್ಗ ಎಂದು ಹೇಳುತ್ತಾಳೆ.

ಒಟ್ಟಿನಲ್ಲಿ ಗಂಡ- ಹೆಂಡತಿಯ ಅತ್ಯಂತ  ಆಪ್ತ ಪ್ರೀತಿ-ಪ್ರೇಮದ ಹೂರಣವೇ ಈ ಕೃತಿಯಲ್ಲಿದೆ. ಅತ್ಯಂತ ಸುಂದರ ಮತ್ತು ಅಷ್ಟೇ ಸರಳವಾಗಿರುವ ಈ ಕೃತಿ ಮಕ್ಕಳ ಕವನದಂತಿದ್ದರೂ, ಎಲ್ಲರಿಗೂ ಹಿಡಿಸಬಹುದಾದ ಅಪೂರ್ವ ಕವನ ಸಂಕಲನ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೧.೬.೨೦೨೬

........................... 

Comments

Popular posts from this blog