ಹಾಸ್ಯಕಥಾರೂಪದ
‘ಪಾರಿವಾಳಗಳು’
‘ಪಾರಿವಾಳಗಳು’ ಇದೊಂದು ಲಲಿತ ಪ್ರಬಂಧದ ಕೃತಿ. ವಿಠಲ್ ಶೆಣೈ ಅವರು ಇದರ ಲೇಖಕರು. ಹಾಸ್ಯಪ್ರಜ್ಞೆ ಇಟ್ಟುಕೊಂಡು ಗಂಭೀರವಾಗಿ ಬರೆದ ಪುಸ್ತಕವಿದು. ಇದನ್ನು ಓದಿ ನಕ್ಕುಬಿಡುವುದಷ್ಟೇ ಅಲ್ಲ, ಕೆಲವು ಸಂದರ್ಭಕ್ಕನುಗುಣವಾಗಿ ನೆನೆಪಾದಾಗಲೂ ಮತ್ತೆ ನಮ್ಮನ್ನು ನಗಿಸುತ್ತವೆ. ವಿಷಯಗಳೂ ಸಹ ನಮ್ಮ ಸುತ್ತಮುತ್ತ ನಡೆಯುವಂಥವೇ ಆಗಿದ್ದರೂ, ಅದನ್ನು ಪ್ರಬಂಧ ರೂಪದಲ್ಲಿ ಬಹುಸುಂದರವಾಗಿ ಇಳಿಸಿದ್ದಾರೆ. ಅದರಲ್ಲಿ ಹಾಸ್ಯ ಎಲ್ಲೆಲ್ಲಿ ಅವಶ್ಯವಿದೆಯೋ ಅಲ್ಲೆಲ್ಲ ತುಂಬಿದ್ದಾರೆ. ಏನೇ ಇದ್ದರೂ ನಕ್ಕು ಹಗುರವಾಗಿಸುವ ಕೃತಿ.
ಇಲ್ಲಿರುವ ಅನುಭವಗಳೆಲ್ಲ ತನ್ನ ಜೀವನದಲ್ಲಿ ಕಂಡುಂಡಂಥವು ಎಂದು ಹೇಳಿದ್ದಾರೆ. ಉತ್ತಮ ವಿಷಯದ ಪ್ರಬಂಧದೊಂದಿಗೆ ಹಾಸ್ಯವೂ ಸಾಕಷ್ಟು ಮೇಳೈಸಿದೆ. ಎರಡನ್ನೂ ಸ ಬೆರೆಸಿದ ಜಾಣ್ಮೆ ಮೆಚ್ಚತಕ್ಕದ್ದು. ಈ ಕೃತಿಯಲ್ಲಿ ೧೨ ಕಿರು ಪ್ರಬಂಧಗಳಿವೆ. ಅವು ಒಂದಕ್ಕಿಂತ ಒಂದು ಚೆಂದವಾಗಿವೆ. ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತಹ ಕೃತಿ ಇದು.
ಪ್ರಬಂಧದ ಸಾರಾಂಶ:
ಪಾರಿವಾಳಗಳು
ಅಕ್ಕಪಕ್ಕದ ಮನೆ, ಕಟ್ಟಡದಿಂದ ಹಾರಿ ಬರುವ ಪಾರಿವಾಳಗಳು ಲೇಖಕರ ಮನೆಯ ಬಾಲ್ಕನಿಯಲ್ಲಿ ಕೂತು ಸರಸ -ವಿರಸ ಮಾಡಿ, ಕೊನೆಯಲ್ಲಿ ಗಲೀಜು ಮಾಡಿ ಹೋಗುವುದು, ಇದನ್ನು ಕ್ಲೀನ್ ಮಾಡಲು ಕೆಲಸದಾಕೆ ಹೆಚ್ಚುವರಿ ಹಣ ಕೇಳುವುದು, ಪಾರಿವಾಳಗಳ ಹೊಲಸು ಕೆಳಗಿನ ಮನೆಯ ಬಾಲ್ಕನಿಗೂ ಬೀಳುವುದು, ಅಲ್ಲಿರುವ ಅವಿವಾಹಿತ ಹುಡುಗ ಇದರ ಬಗ್ಗೆ ಆಕ್ಷೇಪ ಎತ್ತುವುದು, ಪಾರಿವಾಳ ಓಡಿಸಲು ಮನೆಗೆ ಔಷಧಿ ಸಿಂಪಡಿಸಿದರೂ ಮತ್ತೆ ಎರಡೇ ದಿನಕ್ಕ್ಕೆ ಹಾರಿ ಬರುವುದು.. ಹೀಗೆ ಪಾರಿವಾಳದಿಂದಾದ ಸಂಕಷ್ಟವನ್ನು ಇಲ್ಲಿ ಚಿತ್ರಿಸಿದ್ದಾರೆ.
ಶಾಲೆಗೆ ರೆಡಿ
ಈ ಪ್ರಬಂಧದಲ್ಲಿ ತಾವು ಶಾಲೆಗೆ ಹೋಗುವ ಸಂದರ್ಭವನ್ನು ನೆನಪಿಸಿಕೊಳ್ಳುವ ಲೇಖಕರು ಈಗ ತಮ್ಮ ಮಗನ ಶಾಲೆಗೆ ಹೋಗುವ ಸಂದರ್ಭಕ್ಕೆ ಹೋಲಿಸುತ್ತಾರೆ. ಮಕ್ಕಳ ನ್ನು ಬೆಳಗ್ಗೆ ಎಬ್ಬಿಸುವುದು, ಹೋಂ ವರ್ಕ್, ಪ್ರಾಜೆಕ್ಟ್ ಮಾಡಿಕೊಡುವುದು, ತಿಂಡಿ-ಊಟವನ್ನು ಡಬ್ಬಕ್ಕೆ ತುಂಬಿಕೊಡುವುದು, ಯೂನಿಫಾರಂ, ಶೂ ರೆಡಿಮಾಡಿಕೊಡುವುದು, ಬಸ್ಸಿಗೆ ಕಾಯುವುದು, ಬಸ್ ಬೇಗ ಬಂದರೆ ಹಾರನ್ ಬಾರಿಸಿ ಕರೆಯುವುದು, ಏನಾದರೂ ಬಿಟ್ಟುಹೋದರೆ ಮತ್ತೆ ಕಾರಿನಲ್ಲಿ ತಲುಪಿಸುವುದು... ಹೀಗೆ ಇಂದಿನ ಮಕ್ಕಳನ್ನು ಶಾಲೆಗೆ ಕಳಿಸುವುದೇ ದೊಡ್ಡ ಕೆಲಸ ಆಗಿರುವುದನ್ನು ವಿವರಿಸಿದ್ದಾರೆ.
ಪತ್ರ ಬರೆಯಲಾ?
ಬೆಂಗಳೂರಿನ ಟ್ರಾಫಿಕ್ ಜಾಮ್‌ನಲ್ಲಿ ಕಾಯುವ ಕೆಲಸ. ಅದಕ್ಕೆ ಲೇಖಕರು ಹಾಡಿನ ಸಿ.ಡಿ. ಗಳನ್ನು ಇಟ್ಟುಕೊಂಡು ಅದನ್ನು ಕೇಳುತ್ತಾರೆ ‘ಪತ್ರ ಬರೆಯಲಾ ಚಿತ್ರ್ರ ಬಿಡಿಸಲಾ’ ಎಂಬ ಕನ್ನಡ ಹಾಡು ಅದರಲ್ಲಿ ಬರುತ್ತಿತ್ತು. ಆಗ ಬಾಲ್ಯದಲ್ಲಿನ ಪತ್ರ ಬರೆಯುವ ಚಟ, ಪೋಸ್ಟ್ ಮ್ಯಾನ್‌ನನ್ನು ನಿರೀಕ್ಷಿಸುತ್ತಿದ್ದುದು, ಪತ್ರ ಬಂತೆಂದರೆ ಖುಷಿಪಡುವುದು ನೆನಪಿಗೆ ಬರುತ್ತದೆ. ಟ್ರಾಫಿಕ್ ಜಾಮ್ ಮುಗಿಯುವ ಹೊತ್ತಿಗೆ ಹಾಡು ಮುಗಿಯುತ್ತದೆ. ಈಗಿನ ಕಾಲಕ್ಕೆ ಇದನ್ನು ‘ಕಾಲ್ ಮಾಡಲಾ, ಈ ಮೈಲ್ ಹಾಕಲಾ’ ಎಂದು ಬದಲಿಸಿದ್ದರೆ ಚೆನ್ನಾಗಿತ್ತು ಎಂದು ಯೋಚಿಸುತ್ತಾರೆ.
ಭಾನುವಾರದ ಪಟ್ಟಿ
ಫ್ರಿಜ್ ಖಾಲಿಯಾಗಿರುವುದರಿಂದ ವಾರದ ತರಕಾರಿ ಎಲ್ಲಾ ತರಲು ಲೇಖಕರು ಪ್ರತಿ ಭಾನುವಾರ ಮಧ್ಯಾಹ್ನ ಮಾಲ್‌ಗೆ ತೆರಳುವುದು, ಖರೀದಿಸಿದ ನಂತರ ಎಲೆಕ್ಟ್ರಾನಿಕ್ ವಸ್ತುಗಳ ಶಾಪನ್ನು ತಿರುಗಾಡಿ ಬರುವುದು ಲೇಖಕರ ರೂಢಿ. ಆದರೆ ಅಂದು ಮಾಲ್‌ನ ಚೆಕ್‌ಔಟ್ ಕೌಂಟರ್ ಲೈನ್ ನಿಧಾನವಾಗಿ ಸಾಗಿತ್ತು. ಲೇಖಕರ ಚೆಕ್‌ಔಟ್ ವಿಳಂಬವಾಗುತ್ತದೆ. ಇದೇ ವೇಳೆ ಪತ್ನಿ ಕರೆ ಮಾಡಿ ‘ಇನ್ನೂ ಹೊರಟಿಲ್ವಾ’ ಎಂದು ಕೇಳಿದಾಗ ‘ಬರ್ತಾ ಇದ್ದೇನೆ’ ಎಂದು ಹೇಳಿ ಪ್ರೀತಿಯ ಎಲೆಕ್ಟ್ರಾನಿಕ್ ಶಾಪ್‌ಗೆ ಹೋಗದೆ ಹೊರಗಿನಿಂದಲೇ ವೀಕ್ಷಿಸಿ ಖುಷಿಪಟ್ಟು ಮನೆಗೆ ತೆರಳುತ್ತಾರೆ.
ಗ್ಯಾಸ್ ಪ್ರಾಬ್ಲಮ್
ಮಹಾನಗರಗಳಲ್ಲಿ ಮನೆಯನ್ನು ಶಿಫ್ಟ್ ಮಾಡುವಾಗ ಗ್ಯಾಸ್ ಸಂಪರ್ಕ ಪಡೆಯುವುದು ಎಷ್ಟು ಕಷ್ಟ ಎನ್ನುವುದನ್ನು ಸುಂದರವಾಗಿ ತೋರಿಸಿಕೊಟ್ಟಿದ್ದಾರೆ. ಮನೆಯನ್ನು ಶಿಫ್ಟ್ ಮಾಡಿದ ನಂತರ ಗ್ಯಾಸ್ ಏಜೆನ್ಸಿಗೆ ಹೋದಾಗ ಅವರು ಮತ್ತೊಂದು ಏಜೆನ್ಸಿ ಹೆಸರು ಕೊಡುವುದು, ಅವರು ತಮಗೆ ಇದು ಬರುವುದಿಲ್ಲ ಎನ್ನುವುದು, ಲೆಟರ್, ರೆಗ್ಯುಲೇಟರ್, ಕೆವೈಸಿ ಕೇಳುವುದು, ಕೆಲಸವಾಗದಿರುವುದು, ಎರಡು ದಿನದಿಂದ ಆಫೀಸಿಗೆ ವಿಳಂಬ, ಮೂರನೆಯ ದಿನ ತಡವಾಗಿದ್ದಕ್ಕೆ ಬಾಸ್ ಪ್ರಶ್ನಿಸುವುದು, ‘ಗ್ಯಾಸ್ ಪ್ರಾಬ್ಲಮ್’ ಎಂದಾಗ ಅವರೂ ಸಹ ತನಗೂ ಕ್ಯಾಂಟೀನ್ ಚೇಂಜ್ ಆಗಿದ್ದರಿಂದ ದಿನಕ್ಕೆ ನಾಲ್ಕು ಸಲ ಭೇಧಿ ಎನ್ನುವುದು, ಆದರೆ ತನ್ನ ಗ್ಯಾಸ್ ಪ್ರಾಬ್ಲಮ್ ಬೇರೆ ಎಂದು ಲೇಖಕರು ಹೇಳಿದಾಗ ಅವರು ನಗುವುದು...ಹೀಗೆ ಸಮಸ್ಯೆಯನ್ನು ಬಿಚ್ಚಿಟ್ಟು ನಗಿಸುವ ಮೂಲಕ ಕಥೆ ನೇಯ್ದಿದ್ದಾರೆ.
ವಿದೇಶ ಯಾನ
ಮೊದಲಬಾರಿಗೆ ಸಾಫ್ಟ್‌ವೇರ್ ಕಂಪನಿಯ ವತಿಯಿಂದ ಅಮೆರಿಕಕ್ಕೆ ಹೋಗುವಾಗ ವಿಮಾನ ನಿಲ್ದಾಣದಲ್ಲಿ ಅನುಭವಿಸಿದ ಸಮಸ್ಯೆಗಳು ಇದರಲ್ಲಿವೆ. ಸೆಕ್ಯೂರಿಟಿ ಚೆಕ್ ಬಳಿಕ ಬ್ಯಾಗಿನಲ್ಲಿ ವೈರ್ ಕಂಡು ಇದೇನು ಓಪನ್ ಮಾಡಿ ಎಂದಾಗ ಎಲ್ಲ ವಸ್ತುಗಳನ್ನು ಹೊರತೆಗೆಯುವುದು, ಮುಂದೆ ಅಪರಿಚಿತ ವ್ಯಕ್ತಿ ಏನಾದರೂ ಕೊಟ್ಟಿದ್ದಾರೆ ಎಂದು ಕೇಳಿದಾಗ ಹೌದು ಎಂದು ಹೇಳಿ ಮತ್ತೆ ಸಮಸ್ಯೆಗೆ ಸಿಲುಕುವುದು, ಮತ್ತೆ ಚೆಕ್ ಮಾಡುವುದು, ಮುಂದೆ ವಿಮಾನ ಏರಲು ಹೋದಾಗ ಬ್ಯಾಟರಿ ಕೊಂಡೊಯ್ಯುವಂತಿಲ್ಲ ಎಂದು ಇನ್ನೊಬ್ಬ ಸೂಚಿಸುವುದು.... ಹೀಗೆ ಎದುರಿಸಿದ ಸಮಸ್ಯೆ ಪ್ರತಿ ಬಾರಿ ವಿಮಾನಯಾನದ ವೇಳೆ ನೆನಪಾಗಿ ಮನಸಲ್ಲಿ ನಗುತ್ತಾರೆ.
ಡೆನ್ವಾರ್ ಪಯಣ
ಅಮೆರಿಕದ ಡಾಲರ್ಸ್‌ನಲ್ಲಿ ಲೇಖಕರು ಇದ್ದಾಗ ರಜಾ ದಿನಗಳಂದು ಪ್ರವಾಸಕ್ಕಾಗಿ ಡೆನ್ವರ್ ಕೋಲರಾಡೊ ಸ್ಪ್ರಿಂಗ್ಸ್ ಎಂಬ ಊರಿಗೆ ಮಿತ್ರರೊಂದಿಗೆ ಹೋಗುವಾಗ ಮಿತ್ರರು ವಾಹನ ಚಾಲನೆಗಾಗಿ ಪೈಪೋಟಿ ನಡೆಸುವುದು, ಪ್ರವಾಸಿ ಸ್ಥಳ ತಲುಪಿದಾಗ ರಾತ್ರಿಯಾದ್ದರಿಂದ ಬುಕ್ ಮಾಡಿದ್ದ ಗೆಸ್ಟ್ ಹೌಸ್ ಬಂದ್ ಆಗಿ ವಾಹನದಲ್ಲಿ ಮಲಗಿದ್ದು, ಮಾರನೇ ದಿನ ಗೆಸ್ಟ್ ಹೌಸ್‌ನವನು ಕೀ ಅಲ್ಲಿಯೇ ಡಬ್ಬದಲ್ಲಿತ್ತು ಎನ್ನುವುದು, ನಂತರ ಪ್ರವಾಸಿ ಸ್ಥಳವನ್ನು ನೋಡಿ ವಾಪಸ್ ಬರುವಾಗ ವೇಗವಾಗಿ ವಾಹನ ಓಡಿಸಿದ್ದಕ್ಕೆ ಪೊಲೀಸರು ಗಾಡಿಯನ್ನು ತಡೆಯುವುದು, ಅವನಿಗೆ ಸುಳ್ಳು ನೆಪ ಹೇಳಿ ಅಲ್ಲಿಂದ ಪಾರಾಗುವುದು... ಹೀಗೆ ಪ್ರವಾಸದ ಅವಿಸ್ಮರಣೀಯ ಘಟನೆಯನ್ನು ತೆರೆದಿಟ್ಟಿದ್ದಾರೆ.
ಅಮೆರಿಕಾದಲ್ಲಿ ಡ್ರೈವಿಂಗ್
ಅಮೆರಿಕದಲ್ಲಿ ವಾಹನ ಚಾಲನೆ ಪಡೆದಿದ್ದು, ನಂತರ ವಾಹನ ಓಡಿಸುವಾಗ ಕಷ್ಟಪಟ್ಟಿದ್ದು ಇದರಲ್ಲಿದೆ. ಲರ್ನರ್ಸ್ ಲೈಸೆನ್ಸ್ ಪಡೆಯಲು ಹೋದಾಗ ಮೊದಲ ಬಾರಿ ಪರೀಕ್ಷೆಯಲ್ಲಿ ಫೇಲಾಗಿದ್ದು, ತಾನು ಮತ್ತು ತನ್ನ ಮಿತ್ರ ನಂತರ ಪಾಸಾಗಿ, ಚಾಲಕನ ನೇಮಕ ಮಾಡಿ ಚಾಲನೆ ಕಲಿತದ್ದು, ಕಲಿತ ಬಳಿಕ ಪ್ಯಾರಲಲ್ ಪಾರ್ಕಿಂಗ್‌ನಲ್ಲಿ ಪಾಸಾಗುವುದು, ಒಳ ರಸ್ತೆಯಿಂದ ಹೈವೇ ಸೇರುವ ಮುನ್ನ ರ್‍ಯಾಂಪ್ ಸೇರಲು ಕಷ್ಟಪಟ್ಟಿದ್ದು ನಂತರ ಕಚೇರಿಯಲ್ಲಿ ಸಹೋದ್ಯೋಗಿಗಳು ಹೇಗೆ ಸೇರುವುದು, ಎಕ್ಸಿಟ್‌ನಲ್ಲಿ ಹೇಗೆ ಇಳಿಯುವುದು ಎಂದು ಮಾಹಿತಿ ಕೊಡುವುದು, ಇಲ್ಲಿಂದ ನಂತರ ಇವರೇ ಮಿತ್ರರು, ಸಹೋದ್ಯೋಗಿಗಳಿಗೆ ಶಿಕ್ಷಕರಾಗುವುದನ್ನು ಮನೋಹರವಾಗಿ ಚಿತ್ರಿಸಿದ್ದಾರೆ
ದಂತ ಕಥೆ
ಹಲ್ಲಿನ ಚಿಕಿತ್ಸೆ ಅನಿವಾರ್ಯವಾದ ವ್ಯಾಪಾರವಾಗಿದೆ. ಒಂದು ವಿಸಿಟ್‌ನಲ್ಲಿ ಪಂಚವಾರ್ಷಿಕ ಯೋಜನೆಯನ್ನು ವೈದ್ಯರು ಸಿದ್ಧಗೊಳಿಸುತ್ತಾರೆ ಎನ್ನುವ ಸಾರಾಂಶವಿದೆ. ಹಲ್ಲಿನಲ್ಲಿ ಉಂಟಾಗಿದ್ದ ಸಣ್ಣ ತೂತನ್ನು ಸಿಮೆಂಟ್‌ನಿಂದ ತುಂಬಿಸಿದ್ದು, ಕೆಲವು ದಿನದ ನಂತರ ಚೂಯಿಂಗ್ ಗಮ್ ಅಗಿಯುವಾಗ ಸಿಮೆಂಟ್ ಕಿತ್ತು ಬಂದು ಹಲ್ಲಿನ ತೂತು ದೊಡ್ಡದಾಗಿ ದಂತವೈದ್ಯೆ (ಸುಮಾರು ೩೦ ರ ಸುಂದರ ತರುಣಿ) ಯಲ್ಲಿ ಹೋದಾಗ ಎಕ್ಸ್‌ರೇ ತೆಗೆದು ಕೆನಾಲ್ ಮಾಡಿ, ತಾತ್ಕಾಲಿಕ ಫಿಲ್ಲಿಂಗ್ ಮಾಡಿ, ಮತ್ತೆ ಕ್ಯಾಪ್ ಹಾಕಬೇಕೆನ್ನುವುದು, ಕೆನಾಲ್ ಮಾಡಿದ ಹಲ್ಲಿನ ಕೆಳಗೆ ಮತ್ತೆ ಹುಳುಕು ಹಿಡಿದಾಗ ಬೇರೆ ವೈದ್ಯರಲ್ಲಿ ಇದನ್ನು ತೋರಿಸಿದಾಗ ಕೆನಾಲ್ ಮಾಡಿದ ಹಲ್ಲಿನ ಒಳಗೆ ಹತ್ತಿಯ ಚೂರೊಂದನ್ನು ಹಿಂದಿನ ವೈದ್ಯರು ಮರೆತುಬಿಟ್ಟಿದ್ದನ್ನು ತೋರಿಸುತ್ತಾರೆ.
ಕಾಣೆಯಾದ ಹುಡುಗ
ಲೇಖಕರ ಮನೆಗೆ ದಿನಸಿಗಳನ್ನು ಕೊಡಲು ಬಂದಿದ್ದ ಹುಡುಗನೊಬ್ಬ ಲಿಫ್ಟ್‌ನಲ್ಲಿ ಹೋಗುವಾಗ ಕರೆಂಟ್ ಕೈಕೊಟ್ಟಿದ್ದರಿಂದ ಅದರಲ್ಲೇ ಸಿಕ್ಕಿಬಿದ್ದು, ಕೆಲವು ಕಾಲ ನಾಪತ್ತೆಯಾಗಿ ಅಪಾರ್‍ಟ್‌ಮೆಂಟ್‌ನವರನ್ನು ಸಂಷಕ್ಟಕ್ಕೆ ಸಿಲುಕಿಸಿದ ಘಟನೆಯನ್ನು ಇಲ್ಲಿ ಚಿತ್ರಿಸಿದ್ದಾರೆ. ಎಷ್ಟು ಹುಡುಕಿದರೂ ಹುಡುಗ ಪತ್ತೆಯಾಗದಿದ್ದಾಗ ಪೊಲೀಸರಿಗೆ ಮಾಹಿತಿ ಕೊಡಲಾಗುತ್ತದೆ. ಇದೇ ವೇಳೆ ಕರೆಂಟ್ ಬಂದಿದ್ದರಿಂದ ಹುಡುಗ ಇಳಿದುಬರುತ್ತಾನೆ. ಪೊಲೀಸರು ಬಂದು ಭಾನುವಾರ ತಮಾಷೆ ಮಾಡುತ್ತಿದ್ದೀರಾ ಎಂದು ಅಲ್ಲಿದ್ದವರಿಗೆ ಬೈದು ಮರಳುತ್ತಾರೆ.
ನೋ ಪಾರ್ಕಿಂಗ್
ಪುಸ್ತಕ ಬಿಡುಗಡೆಗೆ ಲೇಖಕರು ತಮ್ಮ ಪತ್ನಿ ಮತ್ತು ಮಗಳನ್ನು ಬಿಟ್ಟು ಕಾರ್ ಪಾರ್ಕ್ ಮಾಡಲು ಸುಮಾರು ಎರಡು ತಾಸು ಅಲೆದಾಡಿದ ಘಟನೆ ಇದೆ. ಪಾರ್ಕಿಂಗ್ಗಾಗಿ ಎರಡು ಕಿಲೋಮೀಟರ್ ದೂರ ಹೋದರೂ ಜಾಗ ಸಿಗುವುದಿಲ. ಒಂದೆಡೆ ಎರಡು ಲಾರಿಗಳು ನಿಂತಿದ್ದರಿಂದ ಅವುಗಳ ಮಧ್ಯದ ಜಾಗದಲ್ಲಿ ಕಾರು ನಿಲ್ಲಿಸಿದಾಗ ಪೊಲೀಸ್ ಬಂದು ಇದು ನೋ ಪಾರ್ಕಿಂಗ್ ಎಂದು ಹೇಳಿ ಮುನ್ನಡೆಯುತ್ತಾನೆ. ಕೆಟ್ಟ ವಾಸನೆ ಬರಲಾರಂಭಿಸಿದಾಗ ಆ ಕಡೆ ಈ ಕಡೆ ನೋಡಿದಾಗ ಅದು ಘನತ್ಯಾಜ್ಯ ಸಂಗ್ರಹಣ ಕೇಂದ್ರವಾಗಿತ್ತು. ಅಷ್ಟು ಹೊತ್ತಿಗೆ ತಮ್ಮನ್ನು ಮರಳಿ ಪಿಕ್ ಮಾಡಲು ಪತ್ನಿ ಕರೆ ಮಾಡುತ್ತಾರೆ.
ಚಪ್ಪಲಿ ರಕ್ಷೆ
ಚಪ್ಪಲಿಯನ್ನು ಸಾರ್ವಜನಿಕ ಸ್ಥಳದಲ್ಲಿ ರಕ್ಷಿಸಿಕೊಳ್ಳುವುದು ಒಂದೆಡೆಯದರೆ ಮನೆಯಲ್ಲಿ ಹಳೆಯ ಚಪ್ಪಲಿಗಳನ್ನು ಕಟ್ಟಿಡುವುದು. ಈ ರೀತಿ ಚಪ್ಪಲಿ ರಕ್ಷೆ ಕಥೆ ಇದು. ಬಾಲ್ಯದಲ್ಲಿ ಕ್ರಿಕೆಟ್ ಆಡಲು ಹೋದಾಗ ತಮ್ಮ ಚಪ್ಪಲಿ ಗುರುತಿಗೆ ಒಂದು ಚಪ್ಪಲಿಗೆ ಪೆನ್ನಲ್ಲಿ ಗೀಚಿಡುತ್ತಿದ್ದರು. ಒಮ್ಮೆ ಟ್ರೈನಲ್ಲಿ ಹೋಗುವಾಗ ತಲೆಯ ಬಳಿ ಇಟ್ಟರೂ ಶೂ ವನ್ನು ಯಾರೋ ಹಾರಿಸಿಕೊಂಡು ಹೋಗಿದ್ದರು. ಮತ್ತೊಮ್ಮೆ ಒಮ್ಮೆ ದೇವಸ್ಥಾನಕ್ಕೆ ಹೋದಾಗ ಆದ ಘಟನೆಯನ್ನೂ ಚಿತ್ರಿಸಿದ್ದಾರೆ. ಮನೆಯಲ್ಲಿ ಹರಿದ ಚಪ್ಪಲಿಯನ್ನು ಗೋಣಿಚೀಲದಲ್ಲಿ ತುಂಬಿ ಅಟ್ಟದಲ್ಲಿಡುತ್ತಿದ್ದರು. ಮನೆ ಬದಲಿಸುವಾಗ ಅಥವಾ ಪೇಂಟಿಂಗ್ ಮಾಡುವಾಗ ಅದನ್ನು ಹಳೆ ಪೇಪರ್‌ನವರಿಗೆ ಕೊಡುತ್ತಿದ್ದುದನ್ನು ಸ್ಮರಿಸುತ್ತಾರೆ.
ಒಟ್ಟಿನಲ್ಲಿ, ಸುಂದರವಾದ ಪ್ರಬಂಧಗಳನ್ನು, ವಿವಿಧ ಸಂದರ್ಭದಲ್ಲಿ ಎದುರಾದ ಘಟನೆ, ಬಾಲ್ಯದ ನೆನಪುಗಳ ಮೂಲಕ ಇಲ್ಲಿ ಲೇಖಕರು ಚಿತ್ರಿಸಿದ್ದಾರೆ. ನಗುವಿನ ಕಚಗುಳಿ ಇರುವುದರಿಂದ ಕೃತಿಯ ಓದು ಬೇಗ ಮುಗಿದುಹೋಗುತ್ತದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೧೫. ೬. ೨೦೨೦೬
...........................

Comments
Post a Comment