ವೈವಿಧ್ಯಮಯ ಹಾಸ್ಯದ

‘ಟಿ. ಸುನಂದಮ್ಮ ಸಾಹಿತ್ಯ ವಾಚಿಕೆ’ 



ಟಿ. ಸುನಂದಮ್ಮ ನಾಡಿನ ಹಾಸ್ಯ ಸಾಹಿತಿಗಳಲ್ಲಿ ಅಗ್ರಮಾನ್ಯ ಲೇಖಕಿ.  ಸುನಂದಮ್ಮ ಕನ್ನಡದ ಮೊಟ್ಟಮೊದಲ ಮಹಿಳಾ ಹಾಸ್ಯ ಸಾಹಿತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.  ಇವರು ಆರು ದಶಕಗಳಿಗೂ ಮಿಕ್ಕಿ ಕನ್ನಡ ಹಾಸ್ಯ ಸಾಹಿತ್ಯ ಲೋಕದ ಸಿರಿ ಹೆಚ್ಚಿಸಿದವರು. ‘ನಾನು ಕುಡಿಯುವುದು ಕಾಫಿ. ಆದರೂ ಎಲ್ಲರೂ ಟಿ. ಸುನಂದಮ್ಮ ಎನ್ನುತ್ತಾರೆ’ ಎಂದು ಹಾಸ್ಯ ಮಾಡುತ್ತಿದ್ದರು. ಮೊನಚಾದ ಹಾಸ್ಯದ ಮೂಲಕವೇ ಸಮಾಜಕ್ಕೆ ಚಿಕಿತ್ಸೆ ನೀಡುವ ವೈದ್ಯರಾಗಿದ್ದರು. 

ಪ್ರಸ್ತುತ ‘ಟಿ. ಸುನಂದಮ್ಮ ಸಾಹಿತ್ಯ ವಾಚಿಕೆ’ ಕೃತಿಯನ್ನು  ಅವರ ಉತ್ತರಾಧಿಕಾರಿ ಎಂದೇ ಹೆಸರಾದ ಪ್ರೊ. ಭುವನೇಶ್ವರಿ ಹೆಗಡೆ ಅವರ ಹಾಸ್ಯಗಳನ್ನು ಇಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ ಪ್ರಸ್ತುತ ಕೃತಿಯಲ್ಲಿ ಹಾಸ್ಯ ಲೇಖನಗಳು ಸುಮಾರು ೪೮ ರಷ್ಟಿವೆ. ನಂತರ ಹಾಸ್ಯ ಕವನಗಳು, ಲೇಖನಗಳು, ನಾಟಕಗಳು ಇವೆ.ಈ  ಕೃತಿಯಲ್ಲಿ ಅವರ ಹಾಸ್ಯವನ್ನು ಸಮಗ್ರ ಕೃತಿಯ ಮೂಲಕ ಸ್ಮರಿಸಲಾಗಿದೆ. 

ಮೊಗೆದಷ್ಟು ಸಂತೋಷ ನೀಡುವ ಸಾಗರವೆಂದರೆ ನಗೆ ಸಾಗರ ಒಂದೇ, ‘ಕೊರವಂಜಿ’ಯ ಖಾಯಂ ಲೇಖಕರಾಗಿ ಮೆರೆದ ಸುನಂದಮ್ಮ ಅವರ ಹಾಸ್ಯ ಪ್ರಜ್ಞೆ, ನೋಟದ ಹರವು ವಿಶಾಲವಾದವು. ಸರಸು ಮತ್ತು ಮೈಲಾರಯ್ಯ ದಂಪತಿಗಳ ಮೂಲಕ ಸಮಾಜದ ಅನೇಕ ಸಂಗತಿಗಳಿಗೆ ಹಾಸ್ಯದ ನೀರೆರೆದು ಪೋಷಿಸಿ ಜನತೆಗೆ ನಗೆ ಫಲಗಳನ್ನು ಉಣಬಡಿಸುವುದರಲ್ಲಿ ಸುನಂದಮ್ಮ ಸಿದ್ಧ ಹಸ್ತರಾಗಿದ್ದರು. ಮಧ್ಯಮ ವರ್ಗದ ಬವಣೆಗಳೇ ಬಹುತೇಕ ಅವರ ಕಥಾ ವಸ್ತು. 

ಅವರ ಕೆಲವು ಹಾಸ್ಯಗಳನ್ನು ಗಮನಿಸಬಹುದು. 

‘ ಅಖಿಲ ಭಾರತ ಅತ್ತೆಯರ ಪರಿಷತ್ತು’ ಎಂಬ ಹಾಸ್ಯದಲ್ಲಿ  ಗಂಗಮ್ಮ ಎನ್ನುವವರು ಕನಸಲ್ಲಿ ಅಖಿಲ ಭಾರತ ಮಟ್ಟದಲ್ಲಿ ಅತ್ತೆಯರ ಪರಿಷತ್ ಸ್ಥಾಪಿಸಿ ಅದರ ಬೃಹತ್ ಸಮಾವೇಶವನ್ನು ಬೆಂಗಳೂರಿನ ಪುರಭವನದಲ್ಲಿ ಅದ್ದೂರಿಯಾಗಿ ಆಚರಿಸಿ ಕೆಲವು ನಿರ್ಣಯಗಳನ್ನು ಕೈಗೊಂಡಾಗ ಅತ್ತೆಯರು ಅಂದರೆ ಗಂಡಿನ ತಾಯಿ ಮತ್ತು ಹೆಣ್ಣಿನ ತಾಯಿಯರ ಮಧ್ಯೆ ವಾಗ್ವಾದ ನಡೆಯುವುದು, ಗಲಾಟೆ, ಗದ್ದಲ, ನೂಕುನುಗ್ಗಲು ಉಂಟಾಗುವುದು. ತಳ್ಳಾಟದಲ್ಲಿ ವೃದ್ಧರು ಕೆಳಕ್ಕೆ ಬೀಳುವುದು ಕಂಡುಬರುತ್ತದೆ.   

‘ಅಪ್ ಟು ಡೇಟ್  ಅತ್ತೆಮ್ಮ’ ಎಂಬ ಹಾಸ್ಯ ಬರಹದಲ್ಲಿ ಅತ್ತೆಯಂದಿರಿಗೆ ಈಗ ಅತ್ತೆಗಿರಿ ನಡೆಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರು ಅಪ್ ಟು ಡೇಟ್ ಆಗಿದ್ದಾರೆ. ಒಂದೇ ಮನೆಯಲ್ಲಿ ಅತ್ತೆ ಸೊಸೆ ಇದ್ದರೂ ವಾರಕ್ಕೊಮ್ಮೆ ಭೇಟಿಯಾಗುತ್ತಿದ್ದಾರೆ. ಅತ್ತೆ ಸಮಾಜ ಸೇವೆ ಎಂದು ಬೆಳಿಗ್ಗೆ ಹೊರಹೋದರೆ ರಾತ್ರಿ ಉಂಡು ಮನೆಗೆ ಬರುತ್ತಾಳೆ. ಸೊಸೆಯೂ ಸಹ ತನ್ನ ಕೆಲಸವನ್ನು ಮುಗಿಸಿ  ಹೋದರೆ ರಾತ್ರಿ ೧೧ ಅಥವಾ ೧೨ ಗಂಟೆಗೆ ಮನೆಗೆ ಬರುತ್ತಾರೆ. ಆಧುನಿಕತೆಯಿಂದಾಗಿ ಅತ್ತೆ ಮತ್ತು ಸೊಸೆ ಮುಖತಃ ಭೇಟಿ ಮಾಡುವುದೇ ಕಡಿಮೆಯಾಗಿದೆ ಎನ್ನುವ ಸಾರಾಂಶವಿದೆ. 

 ‘ಪರೋಪಕಾರಿ’ ಎಂಬ ಬರಹದಲ್ಲಿ ಅತ್ತೆಯೊಬ್ಬಳು ತನ್ನ ಸೊಸೆ ಮತ್ತು ಪಕ್ಕದ ಮನೆಯ ಸೊಸೆ ಹಾಗೂ ಮೊಮ್ಮಕ್ಕಳನ್ನು ಕರೆದುಕೊಂಡು ಝೂ ಗೆ ತೆರಳುವುದು, ಅಲ್ಲಿ ಅತ್ತೆಯ ಪರ್ಸಿನಿಂದಲೇ ಈ ಸೊಸೆಯರಿಬ್ಬರು ಹಣ ಖರ್ಚು ಮಾಡಿಸುವುದು, ತಮ್ಮ ಪುಟ್ಟ ಮಕ್ಕಳ ಜವಾಬ್ದಾರಿಯನ್ನೂ ಅವಳಿಗೆ ವಹಿಸುವುದು, ತಾವಿಬ್ಬರು ಫ್ರೀಯಾಗಿ ಓಡಾಡುವುದು, ಮಗು ಅತ್ತಾಗ ಅತ್ತೆಗೆ  ಬಾಟಲಿಗೆ ಹಾಲು ಹಾಕಿ ಚೀಪುವ ಪ್ಲಾಸ್ಟಿಕ್ ಮುಚ್ಚಳ ಹಾಕಲು ಬಾರದಿರುವುದು, ಇದನ್ನು ನೋಡುವ ಅಕ್ಕಪಕ್ಕದವರು ‘ಈ ವಯಸ್ಸಿನಲ್ಲಿ ಈ ಅಜ್ಜ್ಜಿಗೆ ಮಗು ಯಾಕೆ ಬೇಕಿತ್ತು’ ಎಂದು ವ್ಯಂಗ್ಯ ಮಾಡುತ್ತಾರೆ.

 ‘ಯುಗಾದಿ ಉಡುಗೊರೆ’ ಎಂಬ ಬರಹದಲ್ಲಿ ಉತ್ತರ ಭಾರತದಲ್ಲಿದ್ದ ಮೊಮ್ಮಕ್ಕಳು ಯುಗಾದಿ ಹಬ್ಬಕ್ಕೆ ಊರಿಗೆ ಬಂದಾಗ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಲು ಹೋಗಿ ಅಜ್ಜ-ಅಜ್ಜ್ಜಿ ಎಡವಟ್ಟು ಮಾಡಿಕೊಂಡಿದ್ದರ ಬಗ್ಗೆ ಇದೆ.  ‘ಅಪ್ಪಣ್ಣನ ದೀಪಾವಳಿ’ ಎಂಬ ಬರಹದಲ್ಲಿ ದೀಪಾವಳಿಗೆಂದು ಮಾವನ ಮನೆಗೆ ಬರುವ ಮಗಳು- ಅಳಿಯನಿಗೆ  ಮಹಿಳಾ ಸಮಾಜದ ಕಾರ್ಯಕ್ರಮದಲ್ಲಿ ಎತ್ತಿದ ಚಂದಾ ಹಣದಿಂದ  ಸೂಟಿಂಗ್ ಮತ್ತು ಭರ್ಜರಿ ಸೀರೆಯನ್ನು ಕೊಡಿಸುವ ಮೂಲಕ ಸಮಾಜವನ್ನು ಹೇಗೆ ದುರುಪಯೋಗಿಸಿಕೊಳ್ಳುತ್ತಾರೆ ಎಂಬ ಸಂದೇಶವಿದೆ.

 ‘ಯಾರಿಗಾಗಿ’ ಎಂಬ ಬರಹದಲ್ಲಿ ಇಂದಿನ ಸಭೆ ಸಮಾರಂಭಗಳು ವಿಳಂಬವಾಗಿ ಆರಂಭವಾಗುವುದು, ಜನಪ್ರತಿನಿಧಿಗಳು ವೇಳೆಯ ಮಹತ್ವ ಗೊತ್ತಿಲ್ಲದೆ ಒಂದೆರಡು ತಾಸು ವಿಳಂಬವಾಗಿ ಬರುವುದು, ಭಾಷಣಕಾರರು ನಿಗದಿತ ಸಮಯಕ್ಕೆ ಹಾಜರಿದ್ದರೂ ಕಾದು ಸುಸ್ತಾಗುವುದು, ಸಭಿಕರಿಗೆ ಭಾಷಣ ಕೇಳುವ ಆಸಕ್ತಿ ಇರದೆ ಮುಂದಿನ ಮನರಂಜನೆಗೆ ಕಾದಿರುವುದು, ಭಾಷಣ ಆರಂಭವಾದ ಕೂಡಲೇ ಹೋ ಎಂದು ಕೂಗಿ ಗಲಾಟೆ ಮಾಡುವುದರ ಕುರಿತಾಗಿದೆ. 

ಲೇಖನಗಳು: 

 ‘ಆಧುನಿಕ ಕನ್ನಡ ನಗೆ ಸಾಹಿತ್ಯ’ ಎಂಬ ಲೇಖನದಲ್ಲಿ ಸುನಂದಮ್ಮ ಕನ್ನಡದ ಏಕಮಾತ್ರ ಹಾಸ್ಯ ಲೇಖಕಿಯಾಗಿ ಮೆರೆದವರು. ನಾಲ್ಕು ದಶಕಗಳಿಂದ ನಗೆ ಚಿಮ್ಮಿಸುತ್ತಿದ್ದಾರೆ. ಇವರ ನಂತರ ಇಬ್ಬರು ತಂಗಿಯರು ಅವತರಿಸಿದ್ದಾರೆ. ಅವರೆಂದರೆ-  ರಾಶಿ ಅವರ ಮಗಳು ಲೀಲಾ ಮಿರ್ಲೆ ಮತ್ತು ಭುವನೇಶ್ವರಿ ಹೆಗಡೆ. ಇವರು ತಮ್ಮ ಅಕ್ಕ ಸುನಂದಮ್ಮ ಅವರನ್ನು ದಾಟಿ ಹೆಚ್ಚಾಗಿ ಬರೆಯುತ್ತಿರುವುದನ್ನು ಪ್ರಸ್ತುತ ಕೃತಿಯಲ್ಲಿ ವಿವರಿಸಲಾಗಿದೆ. 

ನಾಟಕಗಳ ವಿಭಾಗದಲ್ಲಿ ಬಲಿ, ಎರಡು ನೋಟ, ಕೂಸು ಹುಟ್ಟುವ ಮುನ್ನ, ಆಧುನಿಕ ಸಂಕಾಂತಿ ಇವು ಕೂಡ ನಮ್ಮನ್ನು ನಗಗೆಡಲಲ್ಲಿ ತೇಲಿಸುತ್ತವೆ. 

 ನಗೆ ಸಾಹಿತ್ಯ ಇಂದು ಗೌರವದ ಸ್ಥಾನದಲ್ಲಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಆದರೆ ಪುಸ್ತಕ ಪ್ರಕಟಿಸಲು ಪ್ರಕಾಶಕರು ಮುಂದೆ ಬರುತ್ತಿಲ್ಲ ಎಂದು ಲೇಖಕಿ ವಿಷಾದ ವ್ಯಕ್ತಪಡಿಸುತ್ತಾರೆ. ತೀರ ಹಗುರವಾಗಿ ಬರೆದಿದ್ದಲ್ಲ ಹಾಸ್ಯ ಸಾಹಿತ್ಯವಾಗುವುದಿಲ್ಲ. ಹಾಸ್ಯ ಮಾಡಬೇಕೆಂಬ ಉದ್ದೇಶದಿಂದ ಸರಳವಾದದ್ದನ್ನೆಲ್ಲ ವಕ್ರ ಮಾಡಿ, ಸೊಟ್ಟ ದೃಷ್ಟ್ಟಿಯಿಂದಲೇ ನೋಡಿದರೆ ಹಾಸ್ಯವಾದೀತು. ಅಗತ್ಯವಾದ ಶೈಲಿ, ಹಾಸ್ಯ ಮನೋಭಾವ ಇರುವವರು ಮಾತ್ರ ಈ ಕ್ಷೇತ್ರಕ್ಕೆ ಕೈಹಾಕಬೇಕು. ನಗೆ ಬರಹವೆಂದರೆ ಸಿಹಿತಿಂಡಿಗೆ ಸೇರಿಸುವ ಎಸೆನ್ಸ್ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ, ಈ ಕೃತಿಯು ಸುನಂದಮ್ಮ ಅವರ ಸಾಹಿತ್ಯ ಲೋಕವನ್ನು ಕಟ್ಟಿಕೊಡುವುದರ ಜೊತೆಗೆ ಹಾಸ್ಯದ ಹೊನಲನ್ನೇ ಹರಿಸಿದೆ. ಉತ್ತಮ ಕಿರುಬರೆಹಗಳು ಇಲ್ಲಿರುವುದರಿಂದ ಓದುವುದು ಸುಲಭ. ವಿಭಿನ್ನ ವಿಷಯಗಳು, ಅದರಲ್ಲೂ ನಮ್ಮ ಸುತ್ತಮುತ್ತ ನಡೆದಿರುವ, ನಡೆಯುತ್ತಿರುವ ವಿಷಯಗಳು, ಕೌಟುಂಬಿಕ ಹಾಸ್ಯಗಳೇ ಇಲ್ಲಿ ಜೀವಂತವಾಗಿ ಮೈದಳೆದಿವೆ. ಹಾಸ್ಯ ಬರೆಹಗಳು ಹೇಗಿರಬೇಕೆನ್ನುವುದಕ್ಕೂ ಸಹ ಈ ಕೃತಿ ಉದಾಹರಣೆಯಾಗಿದೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ


Comments

Popular posts from this blog