ಭಾವನಾತ್ಮಕ ಸಂಗತಿಗಳ
‘ಕಾರ್ಮೋಡ ಸರಿದಾಗ’
‘ಕಾರ್ಮೋಡ ಸರಿದಾಗ’ ಈ ಕಾದಂಬರಿಯನ್ನು ನೀವು ಕೌಟುಂಬಿಕ ಎಂದಾದರೂ ಹೇಳಬಹುದು, ಪ್ರೀತಿ- ಪ್ರೇಮಕ್ಕೆ ಸಂಬಂಧಿಸಿದ್ದು ಎಂದಾದರೂ ಹೇಳಬಹುದು. ಏಕೆಂದರೆ ಇವೆರಡೂ ಹಂದರಗಳನ್ನು ಒಳಗೊಂಡಿದೆ. ಇಲ್ಲಿ ಕುಟುಂಬಗಳ ಕಥೆಯಲ್ಲೇ ಪ್ರೀತಿ- ಪ್ರೇಮವೂ ಸೇರಿದೆ. ಹೆಚ್ಚಾಗಿ ಮಹಿಳಾ ಶೋಷಣೆಯ ಕಥೆಗಳೇ ಕಾದಂಬರಿಗಳಲ್ಲಿ ಕಂಡುಬರುತ್ತವೆಯಾದರೂ ಇಲ್ಲಿ ಪುರುಷನ ಶೋಷಣೆಯ ಬಗ್ಗೆ ಇದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ರೂಪಕಲಾ ಕೆ ಎಂ ಇದರ ಲೇಖಕಿ.
ಇದರಲ್ಲಿ ಮೂರು ಕುಟುಂಬಗಳ ಕಥೆ ಇದೆ. ನಾಯಕನ ಮಾನಸಿಕ ತುಮುಲ, ಸಹನಶೀಲತೆಯ ಮಿತಿಯನ್ನು ಚೆನ್ನಾಗಿ ಬಿಂಬಿಸಿದ್ದಾರೆ. ಮಲೆನಾಡಿನ ಕೆಲವು ನೆನೆಪುಗಳನ್ನೂ ಕಟ್ಟಿಕೊಟ್ಟಿದ್ದಾರೆ. ಮುಂಬೈ ಜೀವನದ ಚಿತ್ರಣವೂ ಇದೆ. ಒಟ್ಟಿನಲ್ಲಿ ಭಾವನಾತ್ಮಕ ಸಂಗತಿಗಳಿವೆ. ತೆಳುವಾದ ಹಾಸ್ಯವಿದೆ, ಗಂಭೀರತೆ ಇದೆ. ಮಾನವೀಯತೆ ಇದೆ. ಇದಕ್ಕಿಂತ ಮಿಗಿಲಾಗಿ ಹೆಂಡತಿಯಾದವಳು ಗಂಡನನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ಳಬಹುದು ಎನ್ನುವುದೂ ಸುಂದರವಾಗಿ ಚಿತ್ರಿತವಾಗಿದೆ.
ಜೀವನದಲ್ಲಿ ನೋವು ಅನುಭವಿಸಿದವನ ಪ್ರೇಮ ವೈಫಲ್ಯ ಒಂದೆಡೆಯಾದರೆ, ಇನ್ನೊಂದೆಡೆ ಮದುವೆಯಾದವಳಿಂದ ದಬ್ಬಾಳಿಕೆ, ಶೋಷಣೆ, ಚಿತ್ರಹಿಂಸೆ. ಬಹು ವರ್ಷಗಳ ನಂತರ ತನ್ನ ಹಳೆಯ ಪ್ರೇಮಿಯ ಕಥೆ ಕೇಳಿ ನೊಂದು ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುವುದು, ನಂತರ ಅವಳಿಗೇ ಉಂಗುರ ತೊಡಿಸುವುದು.. ಹೀಗೆ ಕಥೆ ಸಾಗುವಾಗ ನಮಗೆ ಅನ್ನಿಸುವುದೇನೆಂದರೆ, ಪ್ರೀತಿಯ ಉಸಿರು ಶಾಶ್ವತ. ಒಮ್ಮೆ ಪ್ರೀತಿಸಿ ವಿಫಲವಾದವರಲ್ಲಿ ಅದು ಸದಾ ಕಾಡುತ್ತಲೇ ಇರುತ್ತದೆ ಎನ್ನುವುದು.
ನಮ್ಮ ಕಣ್ಣೆದುರಿಗೋ, ನಮ್ಮ ಬದುಕಿನಲ್ಲೋ ಈ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳೇ ಇಲ್ಲಿ ಸೃಷ್ಟಿಯಾಗಿ ಕಾದಂಬರಿ ರೂಪದಲ್ಲಿ ದಾಖಲಾಗಿದೆ. ಈ ಮೂಲಕ ತಿಳಿನೀರಿನಲ್ಲಿ ಪ್ರತಿಬಿಂಬವನ್ನು ಲೇಖಕಿ ತೋರಿಸಿದ್ದಾರೆ. ಸರಳತೆ ಮತ್ತು ನಿರಾಡಂಬರತೆಯ ಮಾತುಗಳಲ್ಲೇ ಒಂದು ವಿಧವಾದ ಸಹಜ ನಿರೂಪಣೆ ಇಲ್ಲಿ ಗಮನ ಸೆಳೆಯುತ್ತದೆ.
ಅನೇಕ ಪಾತ್ರಗಳು ಇದರಲ್ಲಿ ಬಂದು ಹೋಗುತ್ತವೆಯಾದರೂ ಕಣ್ಣೆದುರಿನಲ್ಲಿ ನಿಲ್ಲುವುದು ನಾಲ್ಕಾರು ಪಾತ್ರಗಳು ಮಾತ್ರ. ಇವು ಕಾದಂಬರಿಯ ಹೂರಣದಲ್ಲಿ ಅಡಕಗೊಂಡಿವೆ. ಇಲ್ಲಿ ಲೇಖಕಿ ಕೃತಿಯನ್ನು ಕಟ್ಟಿಕೊಟ್ಟಿರುವ ಕುಶಲತೆ, ಕಥಾಭಿತ್ತಿಯೊಂದನ್ನು ಸಮರ್ಥವಾಗಿ ಕಟೆದುಕೊಟ್ಟಿರುವ ಜಾಣ್ಮೆ, ಸ್ಪಷ್ಟ, ಖಚಿತ ನಿಲುವುಗಳು ಮನಸೆಳೆಯುತ್ತವೆ.
ಕಥ ಸಾರಾಂಶ:
ಮಲೆನಾಡಿನ ಕುಗ್ರಾಮದಲ್ಲಿ ಸುಬ್ಬರಾಯರ ಕುಟುಂಬ. ಅವರ ಮನೆ ಪಕ್ಕದಲ್ಲಿ ಕೇಶವಯ್ಯ ಮತ್ತು ವಸುಧಮ್ಮ ದಂಪತಿ ವಾಸ. ಇವರು ಆ ಊರಿನ ದೇವಸ್ಥಾನದ ಪೂಜೆಗೆಂದು ವಾಸವದವರು. ರಾಯರ ಮೊಮ್ಮಗಳು ಪೂರ್ಣಾ. ಕೇಶವಯ್ಯನವರಿಗೆ ಹೇಮಂತ ಮತ್ತು ಹೇಮಾ ಎಂಬ ಇಬ್ಬರು ಮಕ್ಕಳು. ಅಕ್ಕ ಪಕ್ಕದ ಮನೆಯಲ್ಲಿದ್ದ ಪೂರ್ಣಾ ಮತ್ತು ಹೇಮಾ ಅವರ ಮಧ್ಯೆ ಸಂಬಂಧ ಅಷ್ಟಕಷ್ಟೇ. ಕೇಶವಯ್ಯನವರು ಊರಿನ ದೇವಸ್ಥಾನದ ಪೂಜೆಯನ್ನು ತಮ್ಮನಿಗೆ ವಹಿಸಿ ಬೆಂಗಳೂರಿನಲ್ಲಿ ಪೂಜೆಗೆ ಎಂದು ಹೋಗಿ ವಾಸಿಸುತ್ತಾರೆ. ಮಗ ಇತ್ತ ಊರಿನಲ್ಲಿ ಹೇಮಂತ ಕೃಷಿ ಕೆಲಸ ಮಾಡಿಕೊಂಡು ಇರುವಾಗ ಒಂದು ದಿನ ಪಕ್ಕದ ಮನೆಯ ಪೂರ್ಣಳ ಸೌಂದರ್ಯ ಕಣ್ಣಿಗೆ ಕಟ್ಟುತ್ತದೆ. ಪ್ರೇಮ ಹುಟ್ಟುತ್ತದೆ. ಹಿರಿಯರನ್ನು ಒಪ್ಪಿಸಿ ಮದುವೆಯಾಗುವ ಆಸೆ ಹೊತ್ತಿದ್ದರೂ ಇದನ್ನು ಅರಿತ ಮನೆಯವರು ಅವರನ್ನು ಬೇರೆ ಮಾಡುತ್ತಾರೆ. ಹೇಮಂತನ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತಾರೆ. ಪೂರ್ಣಾಳನ್ನು ಮನೆಯಲ್ಲಿ ಕೂಡಿ ಹಾಕುತ್ತಾರೆ. ಇದರಿಂದ ಇಬ್ಬರ ಮಧ್ಯೆ ಸಂಬಂಧ ತುಂಡಾಗುತ್ತದೆ. ಪೂರ್ಣಾಳನ್ನು ಯಾರಿಗೆ ಮದುವೆ ಮಾಡಿಕೊಡುತ್ತಾರೆ. ಆದರೆ ಆಕೆಯ ಮೊಲದ ಮದುವೆಯ ಭವಿಷ್ಯ ಏನಾಗುತ್ತದೆ? ಎನ್ನುವುದಕ್ಕೆ ಉತ್ತರ ಇದರಲ್ಲಿದೆ.
ಹೇಮಂತನಿಗೆ ತಂಗಿ ಹೇಮಾಳ ಮದುವೆ ಮಾಡುವ ಜವಾಬ್ದಾರಿ ಇತ್ತು. ಅದಕ್ಕಾಗಿ ತನ್ನ ಹೊಲವನ್ನು ಮಾರಿ ಮುಂಬೈನ ಶ್ರೀಮಂತ ಜವಳಿ ಉದ್ಯಮಿ ಅರವಿಂದ್ ಎನ್ನುವವರಿಗೆ ಮದುವೆ ಮಾಡಿಕೊಡುತ್ತಾನೆ. ನಂತರ ಹೇಮಂತ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರುತ್ತಾನೆ. ಆಗರ್ಭ ಶ್ರೀಮಂತ ಶ್ರೀಪಾದ ಪಟವರ್ಧನ್ ಮಗಳು ಶ್ರೀಜಾ ಜೊತೆ ಮದುವೆ ಮಾಡುತ್ತಾರೆ. ಶ್ರೀಪಾದ್ ಅವರು ತನ್ನ ಮಗಳ ಒರಟುತನವನ್ನು ಮುಚ್ಚಿಟ್ಟು ಹೇಮಂತನಿಗೆ ಮದುವೆ ಮಾಡುತ್ತಾರೆ. ಅವಳ ಒರಟುತನಕ್ಕೆ ಶ್ರೀಮಂತಿಕೆ, ಅಹಂಕಾರ, ಧಿಮಾಕು ಸೇರಿ ಹೇಮಂತನನ್ನು ಕೀಳಾಗಿ ಕಾಣಲು ಆರಂಭಿಸುತ್ತಾಳೆ. ಆಫೀಸಲ್ಲಿರುವ ಕೆಲಸಗಾರರ ಮೇಲೂ ದರ್ಪ ತೋರಿಸುತ್ತಾಳೆ. ಮನೆಯಲ್ಲಿ ಹೇಮಂತ ಕೆಲಸಗಾರರಂತೆ ದುಡಿಯಬೇಕಾಗುತ್ತದೆ. ತನ್ನ ತಾಯಿಯ ಮನೆಗೆ ಹೋಗಲು ಅವನಿಗೆ ಅವಕಾಶ ಕೊಡುವುದಿಲ್ಲ. ಹೆಂಡತಿ ಮನೆ ಜೈಲಿನಂತಾಗುತ್ತದೆ. ಮಾತೆತ್ತಿದರೆ ಬೈಗುಳ, ನಿಂದನೆ. ರೋಸಿಹೋದ ಆತ ಹೇಳಕೇಳದೆ ಮನೆ ಬಿಟ್ಟು ಮುಂಬೈಗೆ ತೆರಳುತ್ತಾನೆ. ಅಲ್ಲಿ ತಂಗಿಯ ಮನೆಯಲ್ಲಿ ಉಳಿಯುತ್ತಾನೆ.
ಮಾರನೇ ದಿನ ತನ್ನ ಗಂಡ ಮನೆಯಲ್ಲಿ ಇಲ್ಲದ್ದನ್ನು ಕಂಡು ತನ್ನ ಆಭರಣವನ್ನೆಲ್ಲ ಗಂಟು ಕಟ್ಟಿ ಅಡಗಿಸಿಟ್ಟು, ಗಂಡ ಆಭರಣದೊಂದಿಗೆ ತನ್ನ ಗಂಡ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ಕೊಡುತ್ತಾಳೆ. ಪೊಲೀಸರ ವಿಚಾರಣೆ ವೇಳೆ ಆಕೆ ಅವರೊಂದಿಗೆ ಎಗರಾಡುತ್ತಾಳೆ. ಪೊಲೀಸರ ವಿಚಾರಣೆ ವೇಳೆ ಸತ್ಯ ಹೊರಬರುತ್ತದೆಯೇ? ಆ ಪ್ರಕರಣ ಏನಾಗುತ್ತದೆ? ಕದ್ದವರು ಯಾರೆಂದು ತೀರ್ಮಾನವಾಗುತ್ತದೆ? ಅಲ್ಲಿಂದ ಮುಂದೆ ಆಕೆಯ ಭವಿಷ್ಯ ಏನಾಯಿತು? ಒಂಟಿಯಾಗಿ ಕಾಲ ಕಳೆದಳೇ? ಸಂಪತ್ತಿನ ಮದದಲ್ಲಿ ಏನು ಅನಾಹುತ ಮಾಡಿಕೊಂಡಳೆನ್ನುವುದು ಇದರ ಮುಂದಿನ ಭಾಗದಲ್ಲಿದೆ.
ವರ್ಷ ಕಳೆಯಲು ಹೇಮಂತ್‌ಗೆ ಆತನ ಊರಿನಲ್ಲಿ ಮನೆ ಕೆಲಸದವನಾಗಿದ್ದ ಮರಿಯಾ ಕರೆ ಮಾಡಿ ಪೂರ್ಣಾಳ ತಂದೆ ಶಂಕರನಾರಾಯಣರು ಹಾಸಿಗೆ ಹಿಡಿದಿರುವುದನ್ನು ವಿವರಿಸಿದಾಗ ಹೇಮಂತ್ ಮುಂಬೈಯಿಂದ ಕಾರಿನಲ್ಲಿ ಹಳ್ಳಿಗೆ ಬಂದು ಶಂಕರನಾರಾಯಣರ ಮನೆಗೆ ಬಂದು ಅರೋಗ್ಯ ವಿಚಾರಿಸುತ್ತಾನೆ. ಇದೇ ವೇಳೆ ಮತ್ತೆ ಪೂರ್ಣಾ ಕಾಣಿಸಿಕೊಳ್ಳುತ್ತಾಳೆ. ಆಕೆಯನ್ನು ನೇರವಾಗಿ ನೋಡಲಾಗದೆ ಬಾಗಿಲಸಂಧಿಯಲ್ಲಿ ನೋಡುತ್ತಾನೆ. ಆತನಲ್ಲಿ ದೃಷ್ಟಿಯನ್ನು ನೆಟ್ಟಿರುತ್ತಾಳೆ. ಆರೋಗ್ಯ ವಿಚಾರಿಸಿ ಪೂರ್ಣಾಳಿಗೆ ಕಣ್ಣಲ್ಲೇ ಸನ್ನೆ ಮಾಡಿ ಅಲ್ಲಿಂದ ಹೊರಟು ವಾಪಸ್ ಮುಂಬೈ ಸೇರುತ್ತಾನೆ. ಇಲ್ಲಿಂದ ಮತ್ತೆ ಅವರಲ್ಲಿ ಪ್ರೀತಿ ಮೊಳಕೆಯೊಡೆಯಲು ಆರಂಭವಾಗುತ್ತದೆ.
ಕೆಲವೇ ದಿನಗಳಲ್ಲಿ ಪೂರ್ಣಾ ಮತ್ತೆ ಕರೆ ಮಾಡಿ ಅಪ್ಪನಿಗೆ ಮತ್ತೆ ಹುಷಾರಿಲ್ಲ, ಚಲನೆಯೇ ಇಲ್ಲ ಎಂದಾಗ ಹೇಮಂತ್ ಊರಿಗೆ ಬರುತ್ತಾನೆ. ಅಷ್ಟರೊಳಗೆ ಅವರು ತೀರಿಹೋಗಿರುತ್ತಾರೆ. ಅವರ ಮುಂದಿನ ಕಾರ್ಯ ಮಾಡುವವರಾರೂ ಇಲ್ಲದ ಕಾರಣ ತಾನೇ ಮಾಡಲು ಮುಂದಾದಾಗ ಊರಿನ ಹಲವರು ಆಕ್ಷೇಪಿಸುತ್ತಾರಾದರೂ ಎಲ್ಲವನ್ನೂ ಮುಗಿಸುತ್ತಾನೆ. ಅವರ ಪತ್ನಿ ರತ್ನಮ್ಮ, ಪೂರ್ಣಾ, ಜೊತೆಗೆ ಕೆಲಸದ ಮರಿಂiiನನ್ನು ಕರೆದುಕೊಂಡು ಬರುತ್ತಾನೆ. ಒಂದಷ್ಟು ದಿನ ಮುಂಬೈನಲ್ಲಿ ಅವರೆಲ್ಲ ಕಾಲ ಕಳೆದು, ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ವಾಪಸ್ ಮರಳುತ್ತಾರೆ. ಇತ್ತ ಊರಿನಲ್ಲಿ ರತ್ನಮ್ಮಳ ಆಸ್ತಿಯನ್ನು ಲಪಟಾಯಿಸಲು ಅವರ ಕೊನೆಯ ಸಹೋದರ ರಾಮಯ್ಯ ಹೊಂಚು ಹಾಕಿರುತ್ತಾನೆ. ಅದಕ್ಕಾಗಿ ರತ್ನಮ್ಮ ಮತ್ತು ಪೂರ್ಣಾಳಿಗೆ ಕಿರುಕುಳ ಕೊಡುತ್ತಾನೆ. ರಾಮಯ್ಯನ ಸ್ಥಿತಿ ಮುಂದೇನಾಗುತ್ತದೆ? ಆತ ಜೈಲಿಗೆ ಹೋಗಿದ್ದೇಕೆ? ಹೇಮಂತ್ ಅವರ ಆಸ್ತಿಯನ್ನು ಏನು ಮಾಡುತ್ತಾನೆ? ರತ್ನಮ್ಮ- ಪೂರ್ಣಾ ಕುಟುಂಬ ಮುಂದೆ ಎಲ್ಲಿ ನೆಲೆಯೂರುತ್ತದೆ? ಪೂರ್ಣಾ- ಹೇಮಂತ್‌ನನ್ನು ಮದುವೆಯಾಗುತ್ತಾಳೆಯೇ? ಇದಕ್ಕೆ ಮಧ್ಯಸ್ಥಿಕೆ ವಹಿಸುವವರಾರು? ಮುಂತಾದ ವಿಷಯವನ್ನು ಮನಸೆಳೆಯುವಂತೆ, ಸರಳವಾಗಿ ಈ ಕಾದಂಬರಿ ಮೂಲಕ ಲೇಖಕಿ ಕಟ್ಟಿಕೊಟ್ಟಿದ್ದಾರೆ.
........................

Comments
Post a Comment